Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Sunday 18 December 2011

F.I.R.ಬಗ್ಗೆ ನಿಮಗೆಷ್ಟು ಗೊತ್ತು?


ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶ್ರೀ ಡಾ|| ಡಿ.ವಿ. ಗುರುಪ್ರಸಾದ್ ಅವರ `ಕ್ರಿಮಿನಲ್ ಕಾನೂನುಗಳು ಮತ್ತು ಪೊಲೀಸ್ ವ್ಯವಸ್ಥೆ' ಎಂಬ ಪುಸ್ತಕದಿಂದ ಆಯ್ದ ಭಾಗ.

          ಎಫ್ ಐ ಆರ್ ಅಂದರೆ ಪ್ರಥಮ ವರ್ತಮಾನ ವರದಿ. ವರ್ತಮಾನ ಎಂದರೆ ಯಾವುದಾದರೂ ಕಾಗ್ನಿಸಬಲ್ ಅಪರಾಧ ನಡೆದ ಬಗೆಗಿನ ಮಾಹಿತಿ. ಈ ಮಾಹಿತಿ ಮೊಟ್ಟಮೊದಲ ಬಾರಿಗೆ ಪೊಲೀಸ್ ಠಾಣೆ ತಲುಪಿದಾಗ ಪೊಲೀಸರು ಅದನ್ನು ದಾಖಲಿಸಿಕೊಳ್ಳಬೇಕು. ದಾಖಲಾದಂತಹ ವರ್ತಮಾನದ ವರದಿಯನ್ನು ಆ ಅಪರಾಧದ ಮೊಕದ್ದಮೆ ನಡೆಸುವಂತಹ ನ್ಯಾಯಾಧೀಶರಿಗೆ ಸಲ್ಲಿಸಬೇಕು. ಅಂದರೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ಜರುಗಿದ ಕಾಗ್ನಿಸಬಲ್ ಅಪರಾಧದ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಕೊಡುವ ವರದಿಯೇ ಎಫ್.ಐ.ಆರ್.


           ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್ ಐ ಆರ್‌ಗೇ ಅಗ್ರಸ್ಥಾನ. ಏಕೆಂದರೆ ಎಫ್.ಐ.ಆರ್. ದರ್ಜೆಯಾಗುವುದರಿಂದಲೇ ತನಿಖೆಯು ಪ್ರಾರಂಭವಾಗುತ್ತದೆ. ಮತ್ತು ಎಫ್.ಐ.ಆರ್.ದರ್ಜೆಯಾದರೆ ಪೊಲೀಸರು ಆ ಪ್ರಕರಣಗಳ ಬಗ್ಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಕೋರ್ಟಿನಲ್ಲಿ ಪ್ರಕರಣ ನಡೆಸುವಾಗಲೂ ಪದೇ ಪದೇ ಎಫ್ ಐ ಆರ್ ನಲ್ಲಿರುವ ಸಂಗತಿಗಳ ಬಗ್ಗೆ ವಾದ ವಿವಾದ ನಡದೇ ನಡೆಯುತ್ತದೆ.
    ಪೊಲೀಸ್ ಠಾಣೆಗೆ ನೀವು ನಿಮ್ಮ ದೂರನ್ನು ಒಯ್ದಾಗ ಹಾಗೂ ಆ ದೂರು ಕಾಗ್ನಿಸಬಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸನ್ನು ದಾಖಲಿಸಬೇಕು. ಈಗಾಗಲೇ ಹೇಳಿದಂತೆ ಕಾಗ್ನಿಸಬಲ್ ಪ್ರಕರಣ ಎಂದರೆ ನ್ಯಾಯಾಲಯದ ವಿಶೇಷ ಆದೇಶವಿಲ್ಲದೇ ಪೊಲೀಸರು ದಾಖಲಿಸಿ ತನಿಖೆ ನಡೆಸಬಹುದಾದ ಪ್ರಕರಣ. ಅದೂ ಅಲ್ಲದೆ ಕಾಗ್ನಿಸಬಲ್ ಪ್ರಕರಣ ಎಂದರೆ ಆ ಪ್ರಕರಣದ ಆರೋಪಿಯನ್ನು ಪೊಲೀಸಲು ವಾರಂಟಿಲ್ಲದೇ ಬಂಧಿಸಲು ಅಧಿಕಾರವಿರುವ ಪ್ರಕರಣ.

    ಒಂದು ಅಪರಾಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮೇರೆಗೆ ಕಾಗ್ನಿಸಬಲ್ ಹೌದೇ ಅಲ್ಲವೇ ಎಂದು ತಿಳಿಯಲು ದಂದ ಪ್ರಕ್ರಿಯೆ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್-ಸಿಆರ್.ಪಿ.ಸಿ.)ಯ ಅನುಚ್ಛೇದ ನೋಡಿದರೆ ಸಾಕು. ಇತರ ಕಾನೂನುಗಳ ವ್ಯಾಪ್ತಿಯಲ್ಲಿ ಒಂದು ಅಪರಾಧ ಕಾಗ್ನಿಸಬಲ್ ಆಗಬೇಕಾದರೆ ಆ ಅಪರಾಧಕ್ಕೆ ಕನಿಷ್ಟ ೩ವರ್ಷ ಕಾರಾಗೃಹವಾಸ ಶಿಕ್ಷೆ ಎಂದು ನಮೂದಿಸಿದ್ದಾಗಿರಬೇಕು ಎನ್ನುವುದು ಇನ್ನೊಂದು ರೀತಿಯಿಂದ್ ಅರಿಯಬಹುದಾದ ವಿಷಯ.

         ಸಾಮಾನ್ಯವಾಗಿ ಕಾಗ್ನಿಸಬಲ್ ಅಪರಾಧಗಳೆಮ್ದರೆ ಅವು ಗುರುತರ ಅಪರಾಧಗಳೆಂದೇ ಪರಿಗಣಿಸಬೇಕು. ಉದಾಹರಣೆಗೆ ಕೊಲೆ, ಕೊಲೆಯ ಯತ್ನ, ಭಾರೀ ಗಾಯ ಮಾಡುವುದು, ಆಯುಧ ಉಪಯೋಗಿಸಿ ಗಾಯ ಮಾಡುವುದು, ಐದು ಅಥವಾ ಅದಕ್ಕಿಂತ ಹೆಚ್ಚು ಜನ ಮಾಡುವ ಅಪರಾಧ, ರೇಪ್, ಕಿಡ್ನಾಪಿಂಗ್, ಮಾನವ ವಧೆ, ವಾಹನ ಅಪಘಾತ ಮಾಡಿ ಸಾವು ನೋವಿನ ಕಾರಣ ಮಾಡುವುದು ಇತ್ಯಾದಿ ದೇಹಕ್ಕೆ ಸಂಬಂಧಿಸಿದ ಅಪರಾಧಗಳು ಕಾಗ್ನಿಸಿಬಲ್ ಅಪರಾಧಗಳು.

        ದರೋಡೆ, ಜಬರಿ ಕಳವು, ಬ್ಲಾಕ್‍ಮೇಲ್, ಮನೆಗಳ್ಳತನ, ಕನ್ನಾ ಕಳ್ಳತನ, ಬೀದಿ ಕಳ್ಳತನ, ಸುಲಿಗೆ, ಪಿಕ್‍ಪಾಕೆಟ್, ವಂಚನೆ, ನಂಬಿಕೆ ದ್ರೋಹ ಇತ್ಯಾದಿ ಅಪರಾಧಗಳು ಆಸ್ತಿಗೆ ಸಂಬಂಧಿಸಿದಂತಹ ಕಾಗ್ನಿಸಬಲ್ ಅಪರಾಧಗಳು ಗಲಭೆ, ದೊಂಬಿ, ಕಲಹ ಇತ್ಯಾದಿಗಳು ಸಾರ್ವಜನಿಕ ಶಾಂತಿ ಭಂಗಕ್ಕೆ ಸಂಬಂಧಿಸಿದ ಕಾಗ್ನಿಸಿಬಲ್ ಅಪರಾಧಗಳಾದರೆ, ಖೋಟಾ ನೋಟ್ ಚಲಾವಣೆ, ಪಿತೂರಿ, ದೇಶದ್ರ್‍ಓಹ, ವಿದ್ರೋಹ ಕೃತ್ಯ ಇಂತಹವೂ ವಾರೆಂಟ್ ಇಲ್ಲದೆ ಬಂಧಿಸಬಹುದಾದಂಥ ಅಪರಾಧಗಳು.

        ಕಾಗ್ನಿಸಬಲ್ ಅಪರಾಧ ಸಂಭವಿಸಿದಾಗ ಈ ಅಪರಾಧದ ಬಗ್ಗೆ ಮೊದಲು ಪೊಲೀಸರಿಗೆ ಸುದ್ಧಿ ಮುಟ್ಟಿಸಬೇಕು. ಸುದ್ದಿಯನ್ನು ಫೋನ್ ಮೂಲಕ ನೀಡಬಹುದು. ಇಲ್ಲವೇ ಪೊಲೀಸ್ ಠಾಣೆಗೆ ಹೋಗಿ ಮುಖತಃ ತಿಳಿಸಬಹುದು. ಅಥವ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರನ್ನು ಸಲ್ಲಿಸಬಹುದು. ಯಾರೂ ಬೇಕಾದರೂ ಸುದ್ದಿ ಮುಟ್ಟಿಸಬಹುದು. ಅಂದರೆ ಅಪರಾಧಕ್ಕೆ ಈಡಾದ ವ್ಯಕ್ತಿಯಾಗಿರಬಹುದ್ ಇಲ್ಲವೇ ಅಪರಾಧ ಆಗುವುದನ್ನು ನೋಡಿದವನಾಗಿರಬಹುದು ಅಥವಾ ಬೇರಾವುದೇ ವ್ಯಕ್ತಿಯಾಗಿರಬಹುದು. ಕಾಗ್ನಿಸಬಲ್ ಗುನ್ನೆ ಸುದ್ದಿ ಮುಟ್ಟಿದ ಕೂಡಲೆ ಪೊಲೀಸರು ಎಫ್ ಐ ಆರ್ ಬರೆಯಬೇಕು. ಅಲ್ಲದೇ ಎಫ್ ಐ ಆರ್‌ನ ಮೇಲೆ ಸುದ್ದಿ ನೀಡಿದವನ ಸಹಿ ಪಡೆಯಬೇಕು. ಅಲ್ಲದೇ ಎಫ್ ಐ ಆರ್‌ನ ಪ್ರತಿಯೊಂದನ್ನು ಶುಲ್ಕವಿಲ್ಲದೆ ಸುದ್ದಿ ತಿಳಿಸಿದವನಿಗೆ ನೀಡಬೇಕು. ನೀವು ಪೊಲೀಸ್ ಠಾಣೆಯಲ್ಲಿ ಕಾಗ್ನಿಸಿಬಲ್ ಅಪರಾಧ ಸುದ್ದಿ ನೀಡಿದರೆ ಆ ಅಪರಾಧ ದಾಖಲಾಗಿದೆ ಹಾಗೂ ತನಿಖೆಯಾಗುತ್ತದೆ ಎಂದು ತಿಳಿಯಬೇಕಾದರೆ ಎಫ್ ಐ ಆರ್‍ ವರದಿ ತಯಾರಾದಾಗ ಮಾತ್ರ ಖಾತರಿಯಾಗುತ್ತದೆ.

        ಒಂದು ವೇಳೆ ಕಾಗ್ನಿಸಬಲ್ ಅಪರಾಧದ ಬಗ್ಗೆ ಸುದ್ದಿ ಮುಟ್ಟಿಸಿದರೂ ಹಲವಾರು ಸಬೂಬು ಹೇಳಿ ಪೊಲೀಸರು ಎಫ್ ಐ ಆರ್ ಬರೆಯದೇ ಇರಬಹುದು. ಸಾಮಾನ್ಯವಾಗಿ ತಮ್ಮ ಠಾಣೆಯಲ್ಲಿ ದಾಖಲಾದ ಅಪರಾಧಗಳ ಸಂಖ್ಯೆ ಏರಿದೆ ಎಂದು ಮೇಲಧಿಕಾರಿಗಲು ತಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಿಸಿಕೊಳ್ಳಬಹುದು ಎನ್ನುವ ಭೀತಿಯಿಂದ ಹಲವಾರು ಪೊಲೀಸ್ ಠಾಣೆಯಲ್ಲಿ ಕಾಗ್ನಿಸಬಲ್ ಅಪರಾಧಗಳ ಬಗ್ಗೆ ಮಾಹಿತಿ ಬಂದರೂ ಕೇಸನ್ನು ದಾಖಲಿಸುವುದಿಲ್ಲ. ಇದಕ್ಕೆ ಪೊಲೀಸ್ ಭಾಷೆಯಲ್ಲಿ ಬರ್ಕಿಂಗ್ ಎನ್ನುತ್ತಾರೆ.

  ಇನ್ನು ಕೆಲವು ಠಾಣೆಗಳಲ್ಲಿ ಕಾಗ್ನಿಸಿಬಲ್ ಅಪರಾಧದ ಬಗ್ಗೆ ಸುದ್ದಿ ಬಂದಾಗ ಅಪರಾಧ ಆದ ಸ್ಥಳ ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವ ಸಬೂಬು ಹೇಳಿ ಫಿರ್ಯಾದಿಗಳನ್ನು ಅಟ್ಟಿಬಿಡುತ್ತಾರೆ. ಕಾನೂನು ರೀತ್ಯಾ ಇದೂ ತಪ್ಪು. ಅಪರಾಧವು ಎಲ್ಲೇ ಜರುಗಿರಲಿ, ಪೊಲೀಸ್ ಠಾಣೆಗೆ ಕಾಗ್ನಿಸಬಲ್ ಅಪರಾಧದ ಸುದ್ದಿ ಬಂದಾಗ ಕೇಸು ದಾಖಲಿಸಬೇಕು. ಅನಂತರ ಅದನ್ನು ಸಂಬಂಧಿಸಿದ ಬೇರೆ ಠಾಣೆಗೆ ವರ್ಗಾಯಿಸಬಹುದು. ಒಂದು ವೇಳೆ ನಾವು ಠಾಣೆಗೆ ಕಾಗ್ನಿಸಬಲ್ ಅಪರಾಧದ ದೂರು ನೀಡಿದಾಗ ಅವರು ಕೇಸು ದಾಖಲಿಸಿ ಎಫ್ ಐ ಆರ್ ಪ್ರತಿ ನಮಗೆ ಕೊಡದೇ ಹೋದರೆ ನಮಗೆ ಎರಡು ರೀತಿಯ ಪರಿಹಾರ ಉಂಟು. ನಾವು ಆ ಠಾಣೆಯ ಮೇಲುಸ್ತುವಾರಿ ಹೊತ್ತಿರುವ ಪೊಲೀಸ್ ಸೂಪರಿಂಟೆಂಡೆಂಟ್ ಇವರಿಗೆ ನಮ್ಮ ದೂರು ಸಲ್ಲಿಸಬಹುದು. ನಗರಗಳಲ್ಲಿ ಸಂಬಂಧಿಸಿದ ಡಿಸಿಪಿ ಇವರಿಗೆ ಲಿಖಿತ ದೂರನ್ನು ಅಂಚೆ ಮೂಲಕವೋ ಅಥವಾ ವೈಯುಕ್ತಿಕವಾಗಿಯೋ ನೀಡಬಹುದು. ಆ ಮೇಲಧಿಕಾರಿ ನಮ್ಮ ದೂರನ್ನು ಖುದ್ದಾಗಿ ತನಿಖೆ ಮಾಡಬಹುದು. ಇಲ್ಲವೆ ತಮ್ಮ ಕೆಳಗಿನ ಯಾವುದೇ ಅಧಿಕಾರಿಯ ಮೂಲಕ ತನಿಖೆ ಮಾಡಿಸಬಹುದು.

               ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುವಾಗ ನಾವು ಏನು ಹೇಳಿದ್ದೆವೋ ಅದನ್ನೇ ಸರಿಯಾಗಿ ದಾಖಲಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ಎಷ್ಟೋ ಬಾರಿ ಠಾಣಾಧಿಕಾರಿಗಳು ನಾವು ಕೊಟ್ಟ ದೂರ್‍ಅನ್ನು ತಿಳಿಯಾಗಿ ಮಾಡಿಬಿಡುವ ನಿದರ್ಶನಗಳಿವೆ. ಉದಾಹರಣೆಗೆ ನಮ್ಮ ಮನೆಗೆ ೫ ಜನ ನುಗ್ಗಿ ನಮಗೆ ಹೊಡೆದು ನಮ್ಮ ಆಸ್ತಿ ಕಸಿದುಕೊಂಡರೆ ಅದು ಡಕಾಯಿತಿ ಅಥವಾ ದರೋಡೆ ಕೇಸ್ ಆಗುತ್ತದೆ. ಆದರೆ ಎಷ್ಟೋ ಜನ ೫ ಜನರ ಸಂಖ್ಯೆಯನ್ನು ೩ ಅಥವಾ ೪ ಎಂದು ನಮೂದಿಸಿ ಆ ಕೇಸನ್ನು ಜಬರಿ ಕಳವು (ರಾಬರಿ) ಎಂದು ತಿಳಿಗೊಳಿಸುತ್ತಾರೆ. ಆದ್ದರಿಂದ ದೂರು ನೀಡಿ ಎಫ್ ಐ ಆರ್‌ಗೆ ಸಹಿ ಹಾಕುವ ಮೊದಲು ನಾವು ಕೊಟ್ಟ ದೂರನ್ನು ಸರಿಯಾಗಿ ದಾಖಲು ಮಾಡಿಕೊಳ್ಳಲಾಗಿದೆಯೇ ಇಲ್ಲವೇ ಎಂದು ಕೂಲಂಕುಷವಾಗಿ ಪರಿಶೀಲಿಸಬೇಕಾದ್ದು ಫಿರ್ಯಾದುದಾರರ ಕರ್ತವ್ಯ.

     ಒಂದು ಕೇಸಿನ ತನಿಖೆಯಲ್ಲಿ ಎಫ್ ಐ ಆರ್ ಅತ್ಯಂತ ಮಹತ್ವದ ದಾಖಲೆ. ಈ ದಾಖಲೆ ಸರಿಯಾಗಿರುವಂತೆ ನಾವು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೇಸು ನ್ಯಾಯಾಲಯದಲ್ಲಿ ಬಿದ್ದು ಹೋಗುವ ಸಾಧ್ಯತೆ ಜಾಸ್ತಿ.

No comments: