

ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.
ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.
ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಗಾಂಧಿಜಯಂತಿಯನ್ನು ಆಚರಿಸಿರುವ ಈ ತಿಂಗಳಿನಲ್ಲಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.
***
… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ.
ಅಹಿಂಸೆಯ ಮೂಲಕ ಆತ ಜೈನರ ಬೆಂಬಲ ಪಡೆದ, ಹಿಂಸೆಯ ಅಭ್ಯಾಸವಿಲ್ಲದ ಮೇಲ್ವರ್ಗದ ಹಿಂದುಗಳ ಬೆಂಬಲವೂ ಗಾಂಧಿಗೆ ಸಿಕ್ಕಿತು. ಕ್ರಿಸ್ತ ಪ್ರತಿಪಾದಿಸಿದ ಅಹಿಂಸೆ ಹಾಗೂ ಶಾಂತಿಯ ಬಗ್ಗೆ ಮಾತಾಡಿದ್ದಕ್ಕಾಗಿ ಕ್ರಿಶ್ಚಿಯನ್ ಮಿಶಿನರಿಗಳನ್ನು ಪ್ರಭಾವಿಸುವಲ್ಲಿ ಆತ ಯಶಸ್ವಿಯಾದ. ಇವೆಲ್ಲವಕ್ಕಿಂತಲೂ ಮುಖ್ಯವಾದ ಸಂಗತಿಯೊಂದಿದೆ. ಭಾರತ ಎರಡು ಸಾವಿರ ವರ್ಷಗಳಿಂದ ಒಂದು ಗುಲಾಮ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಎಂದರೇನು ಎಂಬುದನ್ನೇ ಅದು ಮರೆತುಹೋಗಿತ್ತು. ಈಗಲೂ ಈ ದೇಶ ಸ್ವತಂತ್ರವಾಗಿಲ್ಲ, ಇದರ ಮನಸ್ಸು ಇನ್ನೂ ಗುಲಾಮಗಿರಿಯಲ್ಲೇ ಉಳಿದಿದೆ…
ಭಾರತೀಯರು ಹೋರಾಡಲು ಭಯ ಪಡುತ್ತಾರೆ. ಹಿಂದೆಯೂ ಅವರೆಂದೂ ಹೋರಾಡಿದವರಲ್ಲ. ಸಣ್ಣ ಗುಂಪೊಂದು ಇಡೀ ದೇಶವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಿತ್ತು. ಈ ದೇಶದ ಯಾಜಮಾನ್ಯ ಒಂದು ಗುಂಪಿನಿಂದ ಮತ್ತೊಂದಕ್ಕೆ ವರ್ಗಾವಣೆಯಾಗುತ್ತಾ ಬಂದಿತೇ ವಿನಾ ಭಾರತ ಗುಲಾಮಗಿರಿಯಿಂದ ಹೊರಬರಲಿಲ್ಲ.
ಎರಡನೆಯದಾಗಿ, ಭಾರತೀಯರು ಹೋರಾಡುವುದಕ್ಕೆ ಸಿದ್ಧರಿಲ್ಲ ಹಾಗೂ ಹೋರಾಟಕ್ಕೆ ಅಗತ್ಯವಾದ ಶಸ್ತ್ರಾಸ್ತ್ರ ಭಾರತೀಯರಲ್ಲಿ ಇಲ್ಲ ಎಂಬುದನ್ನು ಬುದ್ಧಿವಂತ ಗಾಂಧಿ ಅರಿತಿದ್ದ.
ಮೂರನೆಯದಾಗಿ, ಬ್ರಿಟನ್ ವಿಶ್ವದ ಶಕ್ತಿಶಾಲಿ ಸಾಮ್ರಾಜ್ಯ ಎಂಬುದರ ಅರಿವು ಗಾಂಧಿಗಿತ್ತು. ಅವರೊಂದಿಗೆ ಶಸ್ತ್ರ ಸಜ್ಜಿತವಾಗಿ ಸೆಣಸಿ ಗೆಲ್ಲುವುದು ಅಸಾಧ್ಯದ ಮಾತಾಗಿತ್ತು. ಭಾರತೀಯರ ಬಳಿ ಶಸ್ತ್ರಾಸ್ತ್ರಗಳಿರಲಿಲ್ಲ, ಯುದ್ಧ ಪರಿಣಿತಿ ಪಡೆದ ಯೋಧರಿರಲಿಲ್ಲ, ಯುದ್ಧದ ಬಗ್ಗೆ ಏನೂ ತಿಳಿದಿರಲಿಲ್ಲ.
ಈ ಸಂದರ್ಭದಲ್ಲಿ ಅಹಿಂಸೆಯೆಂಬುದು ಗಾಂಧಿ ಬಳಸಿದ ಅತ್ಯಂತ ಯಶಸ್ವಿ ರಾಜಕೀಯ ತಂತ್ರಗಾರಿಕೆಯಾಗಿತ್ತು…
ಹೀಗಾಗಿ ಗಾಂಧೀಜಿಯ ಅಹಿಂಸೆ ಆಧ್ಯಾತ್ಮಿಕ ತತ್ವವಲ್ಲ. ಇದು ಅನೇಕ ತಥ್ಯಗಳಿಂದ ಸಾಬೀತೂ ಆಗಿದೆ. ‘ಭಾರತ ಸ್ವತಂತ್ರವಾದ ತಕ್ಷಣ ಸೈನ್ಯವನ್ನು ವಿಸರ್ಜಿಸಲಾಗುವುದು, ಶಸ್ತ್ರಾಸ್ತ್ರಗಳನ್ನೆಲ್ಲಾ ಸಮುದ್ರಕ್ಕೆ ಎಸೆಯಲಾಗುವುದು’ ಎಂದು ಗಾಂಧಿ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಮಾಣ ಮಾಡಿದ್ದರು. ‘ನೀವು ಹೀಗೆ ಮಾಡಿದರೆ ಬೇರೆಯವರು ಆಕ್ರಮಣ ಮಾಡುತ್ತಾರೆ. ಆಗ ಏನು ಮಾಡುವಿರಿ?’ ಎಂದು ಕೇಳಿದಾಗ, “ನಾವು ಅವರನ್ನು ನಮ್ಮ ಅತಿಥಿಗಳೆಂದು ಭಾವಿಸಿ ನಮ್ಮ ದೇಶಕ್ಕೆ ಸ್ವಾಗತಿಸುತ್ತೇವೆ. ‘ನಾವು ಇಲ್ಲಿ ವಾಸವಿದ್ದೇವೆ, ನೀವೂ ನಮ್ಮ ಜೊತೆ ವಾಸಿಸಬಹುದು’ ಎಂದು ಅವರಿಗೆ ಹೇಳುತ್ತೇವೆ” ಎಂದಿದ್ದರು.
ಸ್ವಾತಂತ್ರ್ಯ ಬಂದ ನಂತರ ಇದೆಲ್ಲವೂ ಮರೆತುಹೋಯ್ತು. ಸೈನ್ಯವನ್ನು ವಿಸರ್ಜಿಸಲಿಲ್ಲ, ಶಸ್ತ್ರಾಸ್ತ್ರಗಳನ್ನು ಸಮುದ್ರಕ್ಕೆ ಎಸೆಯಲೂ ಇಲ್ಲ. ವಿಪರ್ಯಾಸವೆಂದರೆ ಸ್ವತಃ ಗಾಂಧಿಯೇ ಪಾಕಿಸ್ತಾನದ ಮೇಲಿನ ಮೊದಲ ಯುದ್ಧವನ್ನು ಆಶೀರ್ವದಿಸಿದ್ದರು. ಭಾರತೀಯ ವಾಯು ಸೇನೆಯ ಮೂರು ಯುದ್ಧ ವಿಮಾನಗಳು ಅವರ ಆಶೀರ್ವಾದ ಪಡೆಯಲು ಧಾವಿಸಿದ್ದವು. ಗಾಂಧೀಜಿ ತಮ್ಮ ಮನೆಯಿಂದ ಹೊರಬಂದು ವಿಮಾನಗಳನ್ನು ಹರಸಿದ್ದರು. ತನ್ನ ಬದುಕಿಡೀ ಮಾತಾಡಿದ ಅಹಿಂಸೆಯನ್ನು ಆತ ಸಂಪೂರ್ಣವಾಗಿ ಮರೆತಿದ್ದ…
***
ಹಿಂದೂ ಮುಸ್ಲೀಮರು ಬೇರೆಯಲ್ಲ. ಇಬ್ಬರೂ ಒಂದೇ, ಇಬ್ಬರ ನಡುವೆ ವ್ಯತ್ಯಾಸವಿಲ್ಲ ಎಂಬ ಗಾಂಧಿಯ ಹಾಡು ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಇದಕ್ಕೆ ಗಾಂಧಿಯ ಮಗ ಹರಿದಾಸ್‌ನ ಉದಾಹರಣೆ ಸಾಕು. ಆತ ಹುಟ್ಟಿನಿಂದಲೇ ಬಂಡಾಯಗಾರನಾಗಿದ್ದ. ಆತನನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ತನ್ನ ತಂದೆಗಿಂತ ಆತ ಎಷ್ಟೋ ಮೇಲು.
ಹರಿದಾಸ್ ಶಾಲೆಗೆ ಹೋಗಬಯಸಿದ್ದ. ಆದರೆ ಗಾಂಧಿ ಆತನಿಗೆ ಅನುಮತಿ ಕೊಡಲಿಲ್ಲ. ಶಾಲೆಯ ಶಿಕ್ಷಣ ಜನರನ್ನು ಕಲುಷಿತಗೊಳಿಸುತ್ತದೆ ಎಂಬುದು ಗಾಂಧಿಯ ನಂಬಿಕೆಯಾಗಿತ್ತು. ಹೀಗಾಗಿ ತನ್ನ ಮಕ್ಕಳಿಗೆ ಶಾಲೆಯ ಶಿಕ್ಷಣ ಬೇಡ ಎಂಬುದು ಆತನ ನಿಲುವಾಗಿತ್ತು. ತನ್ನ ಮಕ್ಕಳು ಧಾರ್ಮಿಕ ಗ್ರಂಥಗಳನ್ನು ಓದಲು ಶಕ್ಯವಾಗುವಂತೆ ತಾನೇ ಅವರಿಗೆ ಬೋಧಿಸುತ್ತೇನೆ ಎಂದು ಗಾಂಧಿ ಹೇಳುತ್ತಿದ್ದ. ಆದರೆ ಹರಿದಾಸ್ ಹಠಮಾರಿಯಾಗಿದ್ದ. ತನ್ನ ಓರಗೆಯ ಹುಡುಗರು ಕಲಿಯುವುದನ್ನು ತಾನೂ ಕಲಿಯಬೇಕು ಎಂದು ಹಠಹಿಡಿದಿದ್ದ. ‘ಒಂದು ವೇಳೆ ನೀನು ಶಾಲೆಗೆ ಹೋದರೆ ನನ್ನ ಮನೆಯಲ್ಲಿ ನಿನಗೆ ಸ್ಥಾನವಿಲ್ಲ’ ಎಂದು ಗಾಂಧಿ ಬೆದರಿಕೆ ಹಾಕಿದ.
ಅಹಿಂಸಾತ್ಮಕ ವ್ಯಕ್ತಿಯ ವರ್ತನೆ ಹೀಗಿರುತ್ತದೆ ಎಂದು ನಿಮಗನ್ನಿಸುತ್ತದೆಯೇ, ಅದರಲ್ಲೂ ಅಬೋಧನಾದ ತನ್ನ ಮಗನ ಬಗೆಗೆ? ಆತನ ಬೇಡಿಕೆಯೇನು ಅಪರಾಧವಾಗಿರಲಿಲ್ಲ. ತಾನು ವೇಶ್ಯೆಯ ಬಳಿಗೆ ಹೋಗಬೇಕು ಎಂದೇನು ಆತ ಕೇಳಿರಲಿಲ್ಲ. ತಾನು ಶಾಲೆಗೆ ಹೋಗಬೇಕು ಹಾಗೂ ಉಳಿದೆಲ್ಲಾ ಹುಡುಗರ ಹಾಗೆ ಕಲಿಯಬೇಕು ಎಂಬುದಷ್ಟೇ ಆತನ ಬೇಡಿಕೆಯಾಗಿತ್ತು. ಹರಿದಾಸನ ವಾದ ಸರಿಯಾಗಿತ್ತು. ಆತ ಹೇಳಿದ, “ನೀವೂ ಶಾಲೆಯ ಶಿಕ್ಷಣವನ್ನು ಪಡೆದಿದ್ದೀರಿ ಆದರೆ ಕಲುಷಿತಗೊಂಡಿಲ್ಲ. ಹೀಗಿರುವಾಗ ನಿಮಗೆ ಭಯ ಏಕೆ? ನಾನು ನಿಮ್ಮ ಮಗ. ನೀವು ಪಾಶ್ಚಾತ್ಯ ಶಿಕ್ಷಣ ಪಡೆಯಬಹುದಾದರೆ, ಬ್ಯಾರಿಸ್ಟರ್ ಪದವಿಯನ್ನು ಪಡೆಯಬಹುದಾದರೆ ನಾನೇಕೆ ಪಡೆಯಕೂಡದು? ನಿಮಗೇಕೆ ಇಷ್ಟು ಅಪನಂಬಿಕೆ?”
ಗಾಂಧಿ ಹೇಳಿದರು, “ನನ್ನ ಕೊನೆಯ ಮಾತನ್ನು ನಾನು ಹೇಳಿದ್ದೇನೆ. ನನ್ನ ಜೊತೆ ಈ ಮನೆಯಲ್ಲಿ ಇರಬೇಕೆಂದರೆ ಶಾಲೆಗೆ ಹೋಗಕೂಡದು. ಒಂದು ವೇಳೆ ಶಾಲೆಗೆ ಹೋಗಬೇಕೆಂಬುದೇ ನಿನ್ನ ನಿರ್ಧಾರವಾದರೆ ಈ ಮನೆಯಲ್ಲಿ ನಿನಗೆ ಜಾಗವಿಲ್ಲ.”
ಆ ಹುಡುಗ ನನಗೆ ಇಷ್ಟವಾಗುತ್ತಾನೆ. ಆತ ಮನೆಯನ್ನು ಬಿಡಲು ನಿರ್ಧರಿಸುತ್ತಾನೆ. ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಗಾಂಧಿ ಆಶಿರ್ವಾದ ನೀಡಲು ಅಶಕ್ತರಾಗಿರುತ್ತಾರೆ.
ನನಗೆ ಗಾಂಧಿಯ ವರ್ತನೆಯಲ್ಲಿ ಅಹಿಂಸೆಯಾಗಲೀ, ಪ್ರೀತಿಯಾಗಲೀ ಕಾಣುವುದಿಲ್ಲ. ಇಂಥ ಸಣ್ಣ ಸಣ್ಣ ಘಟನೆಗಳಲ್ಲಿ ನೀವು ನಿಜವಾದ ಮನುಷ್ಯನನ್ನು ಕಾಣಲು ಸಾಧ್ಯವೇ ಹೊರತು ಭಾಷಣಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಅಲ್ಲ.
ಮನೆ ತೊರೆದ ಹರಿದಾಸ ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಾನೆ. ಎಷ್ಟೋ ವೇಳೆ ತನ್ನ ತಾಯಿಯನ್ನು ನೋಡುವುದಕ್ಕೆ ಪ್ರಯತ್ನಿಸಿ ಮನೆಗೆ ಹೋಗುತ್ತಾನೆ ಆದರೆ ಅವನಿಗೆ ಆಕೆಯನ್ನು ನೋಡಲಾಗುವುದಿಲ್ಲ. ಆತ ಪದವಿಯನ್ನು ಪಡೆದ ನಂತರ ಗಾಂಧಿ ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಎಷ್ಟು ಸತ್ಯ ನಿಷ್ಠರಾಗಿದ್ದಾರೆ ಎಂದು ಪರೀಕ್ಷಿಸಲು ಮಹಮ್ಮದೀಯನಾಗುತ್ತಾನೆ. ಆತ ನಿಜಕ್ಕೂ ವರ್ಣರಂಜಿತ ವ್ಯಕ್ತಿತ್ವದವನು.
ಆತ ಮಹಮ್ಮದೀಯನಾದ ನಂತರ ‘ಹರಿದಾಸ’ ಎಂಬ ಅರ್ಥವನ್ನೇ ಕೊಡುವ ಅರೇಬಿಕ್ ಹೆಸರನ್ನು ಇಟ್ಟುಕೊಳ್ಳುತ್ತಾನೆ. ಅಬ್ದ್ ಎಂದರೆ ಅರೇಬಿಕ್ ಭಾಷೆಯಲ್ಲಿ ದೇವರು. ಅಬ್ದುಲ್ಲಾ ಎಂದರೆ ದೇವರ ಸೇವಕ. ಹೀಗೆ ಹರಿದಾಸ್ ಗಾಂಧಿ ಅಬ್ದುಲ್ಲಾ ಗಾಂಧಿಯಾಗುತ್ತಾನೆ.
ಈ ಸಂಗತಿಯನ್ನು ತಿಳಿದ ಗಾಂಧಿ ತೀವ್ರವಾದ ಆಘಾತಕ್ಕೊಳಗಾಗುತ್ತಾರೆ. ಕುಪಿತರಾಗುತ್ತಾರೆ. ಕಸ್ತೂರ ಬಾ, “ಏಕಿಷ್ಟು ಕೋಪಗೊಳ್ಳುತ್ತೀರಿ? ಪ್ರತಿ ಮುಂಜಾವು, ಪ್ರತಿ ಸಾಯಂಕಾಲಗಳಲ್ಲಿ ನೀವು ಹಿಂದೂ ಮುಸಲ್ಮಾನರು ಇಬ್ಬರೂ ಒಂದೇ ಎಂದು ಹೇಳುತ್ತೀರಿ. ನೀವು ಹೇಳಿದ್ದನ್ನೇ ಆತ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರಬಹುದು. ‘ಹಿಂದೂ ಮುಸಲ್ಮಾನರಿಬ್ಬರೂ ಒಂದೇ ಎನ್ನುವುದಾದರೆ, ಇಷ್ಟು ದಿನ ಹಿಂದೂ ಆಗಿ ಬಾಳಿದ್ದೇನೆ. ಇನ್ನು ಮುಂದೆ ಮುಸಲ್ಮಾನನಾಗಿ ಬದುಕಿ ನೋಡೋಣ’ ಎಂದು ತೀರ್ಮಾನಿಸಿರಬಹುದು” ಎನ್ನುತ್ತಾರೆ ನಗುತ್ತಾ.
ಗಾಂಧೀಜಿ ವ್ಯಗ್ರರಾಗಿ, “ಇದು ನಗುವಂತಹ ಸಂಗತಿಯಲ್ಲ. ಈ ಕ್ಷಣದಿಂದ ಆತನಿಗೆ ನನ್ನ ಆಸ್ತಿಯ ಮೇಲೆ ಯಾವ ಒಡೆತನವೂ ಇಲ್ಲ. ಆತ ನನ್ನ ಮಗನೇ ಅಲ್ಲ. ಇನ್ನೆಂದೂ ಆತನನ್ನು ನಾನು ನೋಡಲು ಇಚ್ಚಿಸುವುದಿಲ್ಲ.” ಎನ್ನುತ್ತಾರೆ. ಭಾರತದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಆತನ ಚಿತೆಗೆ ಬೆಂಕಿ ಕೊಡುವ ಕರ್ತವ್ಯ ಆ ವ್ಯಕ್ತಿಯ ಹಿರಿಯ ಮಗನದ್ದು. ಗಾಂಧೀಜಿ ತಮ್ಮ ವಿಲ್‌ನಲ್ಲಿ ಹೀಗೆ ಬರೆಸುತ್ತಾರೆ: “ಹರಿದಾಸ ನನ್ನ ಮಗನಲ್ಲ. ನಾನು ಸತ್ತ ನಂತರ ಆತ ನನ್ನ ಚಿತೆಗೆ ಬೆಂಕಿ ಇಡಬಾರದು ಎಂಬುದು ನನ್ನ ಇಚ್ಛೆ.”
ಎಂಥಾ ಕೋಪ! ಎಂಥಾ ಹಿಂಸೆ!
ಹರಿದಾಸನನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಆತ ಹೇಳಿದ, “ನನ್ನ ತಂದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯೇ ನಾನು ಮಹಮ್ಮದೀಯನಾದದ್ದು. ನಾನು ಎಣಿಸಿದಂತೆಯೇ ಅವರು ವರ್ತಿಸಿದರು. ಅವರು ಹೇಳಿದ ಧರ್ಮಗಳ ಸಮಾನತೆ – ಹಿಂದು, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಧರ್ಮಗಳೆಲ್ಲಾ ಸಮಾನ- ಎಂಬುದು ಅರ್ಥಹೀನ. ಇದೆಲ್ಲ ಕೇವಲ ರಾಜಕೀಯ. ಅದನ್ನೇ ನಾನು ಸಾಬೀತು ಪಡಿಸಬೇಕಿತ್ತು, ಸಾಬೀತು ಪಡಿಸಿದೆ.”
ಮೂಲ : ಕಲರವ ಪತ್ರಿಕೆ
No comments:
Post a Comment