Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 1 December 2011

ಸಂತ ಜಗನ್ನಾಥದಾಸರು ಸಂತರಾದದ್ದು ಹೀಗೆ...


             ಕರ್ನಾಟಕದ ಸಂತಶ್ರೇಷ್ಠರಲ್ಲೊಬ್ಬರಾಗಿ ಪರಿವರ್ತಿತರಾದ ಜಗನ್ನಾಥದಾಸರ ಮೊದಲಿನ ಹೆಸರು ಶ್ರೀನಿವಾಸ. ಮಹಾವಿದ್ವಾಂಸರಾದ ಅವರು ವಿನಮ್ರ ಭಕ್ತರಾಗಿ ಪರಿವರ್ತನೆಗೊಂಡ ಕತೆ ರೋಚಕವಾಗಿದೆ. ಅವರು ಜನಿಸಿದ್ದು ಕ್ರಿ.ಶ.೧೬೪೯ರಲ್ಲಿ ಉತ್ತರ ಕರ್ನಾಟಕದ ಹಳ್ಳಿಯಲ್ಲಿ ಸಂಸ್ಕೃತ ಭಾಷೆ ವೇದಾಂತ ಶಾಸ್ತ್ರಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಪಡೆದು ಯೌವನದಲ್ಲೇ ಅವರು ಕೀರ್ತಿಶಾಲಿಗಳಾಗಿದ್ದರು. ಇವರೆಡೆಗೆ ಪಾಠಕ್ಕಾಗಿ ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಪಾಂಡಿತ್ಯದ ಬಲದಿಂದ ಅಹಂಕಾರವು ಹುಲುಸಾಗಿ ಬೆಳೆಯಿತು. ಪರನಿಂದೆ ಆತ್ಮಪ್ರಶಂಸೆಗಳ ಕಾರ್ಯವೂ ಬೆಳೆಯಿತು. ಅದರಿಂದ ವರು ಭಕ್ತರನ್ನು ಶಾಸ್ತ್ರಜ್ಞಾನ ಮತ್ತು ಶಾಸ್ತ್ರೋಕ್ತ ಸಾಧನಾಹೀನರೆಂದು ಹಳಿದು ಹೀಯಾಳಿಸಲು ಹಿಂಜರಿಯುತ್ತಿರಲಿಲ್ಲ. ಆ ಕಾಲದ ಭಗವತಾಗ್ರೇಸರರಾದ ವಿಜಯದಾಸರನ್ನೂ ಅಲ್ಪಭಾವದಿಂದ ಕಂಡು, ಅಲ್ಪಮಾತುಗಳಿಂದ ಅವಹೇಳನ ಮಾಡಿದರು. ಶರಣರನ್ನು ಕೆಣಕುವ ಸಾಹಸ `ಹಾವಿನ ಹೆಡೆಯನ್ನು ಕೊಂಡು ಕೆನ್ನೆಯ ತುರಿಸಿಕೊಂಡಾಂತೆ, ಒಡಲಲ್ಲಿ ಸುಣ್ಣದಕಲು ಕಟ್ಟಿಕೊಂಡು ಮಡುವಿಗೆ ಬಿದ್ದಂತೆ' ಎಂದು ಬಸವಣ್ಣನವರು ಹೇಳಿದ್ದರಲ್ಲವೇ? ಭಾಗವತೋತ್ತಮರೂ, ಮಹಾನುಭಾವರೂ ಆದ ಶ್ರೀ ವಿಜಯದಾಸರನ್ನು ನಿಂದಿಸಿದ ಫಲವು ಶ್ರೀನಿವಾಸಪ್ಪನವರಿಗೆ ಬಹು ಬೇಗನೇ ಲಭಿಸಿತು.ಅವರು ತೀವ್ರ ಕ್ಷಯರೋಗದಿಂದ ನರಳಿದರು. ಅನ್ನಾಹಾರ ಸೇವನೆಯಿಲ್ಲದೆ ಅತ್ಯಂತ ದುರ್ಬಲರಾಗಿ ದೀನ, ಹೀನಸ್ಥಿತಿಯಲ್ಲಿ ಬಿದ್ದರು. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ, ದುರಂತ ಸನ್ನಿವೇಶದಲ್ಲಿ ಸಿಕ್ಕಿಕೊಂಡು ಆರ್ತರಾದರು. ಬೇರಾವ ದಾರಿಕಾಣದೆ ಹತ್ತಿರದ ಗುಡಿಯಲ್ಲಿ ಆಂಜನೇಯ ಸ್ವಾಮಿಗೆ ನಲವತ್ತೆಂಟು ದಿನಗಳ ಕಾಲ ವಿಶೇಷ ರೀತಿಯಿಂದ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುವ ವ್ಯವಸ್ಥೆ ಮಾಡಿದರು. ಪೂಜಾಂತ್ಯದ ಒಂದು ದಿನ ಕನಸಿನಲ್ಲಿ ಮಾರುತಿ ಕಾಣಿಸಿ, `ವಿಜಯದಾಸರನ್ನು ನಿಂದೆ ಮಾಡಿದುದರಿಂದ ನಿನಗೆ ಈ ಭೀಕರ ಕ್ಷಯರೋಗವು ಪ್ರಾಪ್ತವಾಗಿದೆ. ಈಗಲಾದರೂ ಅವರನ್ನು ಮೊರೆಹೊಕ್ಕು ಅವರ ಅನುಗ್ರಹ ಸಂಪಾದಿಸಿದರೆ ನಿನ್ನ ರೋಗ ಪರಿಹಾರವಾಗಿ ಪೂರ್ಣ ಆಯಸ್ಸು ಪ್ರಾಪ್ತವಾಗುವುದು' ಎಂದು ವಚನವಿತ್ತ.

             ಶ್ರೀನಿವಾಸಪ್ಪ ಪಶ್ಚಾತ್ತಾಪದ ಕುಲುಮೆಯಲ್ಲಿ ಕರಗಿದ. ಪಾಂಡಿತ್ಯದ ಸೊಕ್ಕು ಅಡಗಿ ಆತ ಅತ್ಯಂತ ನಮ್ರನಾದ. ಅಶಕ್ತನಾಗಿದ್ದುದರಿಂದ ಪಲ್ಲಕ್ಕಿಯಲ್ಲಿ ಕುಳಿತು ವಿಜಯದಾಸರೆಡೆಗೆ ಹೋಗಿ ಕಂಬನಿದುಂಬಿ, `ಪಾಂಡಿತ್ಯದ ಒಣಹೆಮ್ಮೆಯಿಂದ ಭ್ರಾಂತನಾಗಿ ತಮ್ಮ ಮಹತ್ಮ್ಯವನ್ನು ತಿಳಿಯದೆ ನಿಂದೆ ಮಾಡಿದ ಪಾಪಿ ನಾನು. ಅಪರಾಧ ಕ್ಷಮಿಸಿ ಉದ್ಧರಿಸಬೇಕು' ಎಂದು ಸಾಷ್ಟಾಂಗವೆರಗಿ ಆಂತರ್ಯದ ಅಳಲನ್ನು ತೋಡಿಕೊಂಡ. ದಯಾಳುಗಳಾದ ವಿಜಯದಾಸರು ಅವರನ್ನು ಕ್ಷಮಿಸಿ, ತಮ್ಮ ಶಿಷ್ಯರಾದ ಗೋಪಲದಾಸರಲ್ಲಿಗೆ ಅವರನ್ನು ಕಳುಹಿಸಿ ಅವರಿಂದ ಮಾರ್ಗದರ್ಶನವನ್ನು ಪಡೆಯುವಂತೆ ನಿರ್ದೇಶಿಸಿದರು. ಗೋಪಾಲದಾಸರು ಶ್ರೀನಿವಾಸರಿಂದ ಎಲ್ಲ ವೃತ್ತಾಂತಗಳನ್ನು ತಿಳಿದುಕೊಂದು, ಅವರಿಗೆ ಮಂತ್ರೋಪದೇಶವನ್ನು ಮಾಡಿ ಆಹಾರವನ್ನು ಅಭಿಮಂತ್ರಿಸಿ ಕೊಟ್ಟರು. ಕ್ಷಯರೋಗ ಪೀಡಿತರಾಗಿ ಒಂದಗುಳು ಅನ್ನವನ್ನೂ ತಿನ್ನಲಾರದ ಶ್ರೀನಿವಾಸಪ್ಪನವರು, ಅವರು ಮಂತ್ರಿಸಿ ಕೊಟ್ಟ ಎರಡು ಜೋಳದ ರೊಟ್ಟಿಗಳನ್ನೂ ಭಕ್ಷಿಸಿ ಜೀರ್ಣಿಸಿಕೊಂಡರು. ಮುಂದೆ ಕೆಲವು ದಿನಗಳಲ್ಲೇ ಶ್ರೀನಿವಾಸಪ್ಪನವರ ಕ್ಷಯರೋಗವು ಸಂಪೂರ್ಣ ಪರಿಹಾರವಾಯಿತು. ಶ್ರೀಗುರುವಿನಲ್ಲಿ ಶರಣಾಗತರಾಗಿ, ದಾಸತ್ವಕ್ಕೆ ಅಂಕಿತಪ್ರದಾನ ಮಾಡಬೇಕೆಂದಾಗ ಗೋಪಾಲದಾಸರು, `ನೀನು ಪಂಢರಪುರಕ್ಕೆ ಹೋಗಿ ಶ್ರೀ ಪಾಂಡುರಂಗ ವಿಠಲನ ಸ್ಮರಣೆ ಮಾಡುತ್ತಾ ಚಂದ್ರಭಗಾ ನದಿಯಲ್ಲಿ ಸ್ನಾನಮಾಡುತ್ತಿರುವ ಕಾಲದಲ್ಲಿ, ವಿಠಲನ ಅನುಗ್ರಹದಿಂದ ನಿನ್ನ ಹೆಸರು ಕೆತ್ತಲ್ಪಟ್ಟ ಶಿಲಾಫಲಕವೊಂದು ನಿನ್ನ ತಲೆಯಮೇಲೆ ಬಂದು ಕೂಡುತ್ತದೆ. ಆಗಲೇ ಅದನ್ನು ಸ್ವೀಕರಿಸಿ ಭಗವಂತನನ್ನು ಸ್ತುತಿಸು' ಎಂದರು. ಶ್ರೀ ಗೋಪಾಲದಾಸರ ವಚನದಂತೆ ಅಲ್ಲಿ ಆ ಅದ್ಭುತವು ನಡೆಯಿತು. ಅವರಿಗೆ `ಜಗನ್ನಾಥ ವಿಠಲ' ಎಂಬ ಅಂಕಿತ ದೊರೆಯಿತು. ಶ್ರೀನಿವಾಸಪ್ಪನವರು ಅಂದಿನಿಂದ ಜಗನ್ನಾಥದಾಸರಾದರು. ಭಗವಂತನ ಅನಂತ ಮಹಿಮೆಗಳನ್ನು ಕೀರ್ತಿಸಿ, ಸಕಲ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ, ಮಹ ಭಗವದ್ಭಕ್ತರೆಂದು ವಿಖ್ಯಾತರಾದರು.

`ಬದುಕಲು ಕಲಿಯಿರಿ' ಪುಸ್ತಕದ ಆಯ್ದಭಾಗ

No comments: