Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Tuesday 29 May 2012

ಡಾ|| ಗುರುರಾಜ ಕರಜಗಿಯವರ ವ್ಯಕ್ತಿತ್ವ ಪರಿಚಯ

             ಮೊನ್ನೆ ಬಿಜಾಪುರದ ಎ.ಪಿ.ಎಂ.ಸಿ.ಯಲ್ಲಿ ಮರ್ಚಂಟ್ಸ್ ಅಸೋಶಿಯೇಷನ್ ಮತ್ತು ಭಾರತ ವಿಕಾಸ ಸಂಗಮ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ `ಉದ್ಯೋಗ ಮತ್ತು ಜೀವನದಲ್ಲಿ ಸಂತೋಷ' ಎಂಬ ವಿಷಯವಾಗಿ ಮಾತನಾಡಲು  ನಮ್ಮ ಡಾ||ಗುರುರಾಜ್ ಕರಜಗಿ ಅವರು ಬಂದಿದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಡಾ|| ಗುರುರಾಜ ಕರಜಗಿ ಅವರ ವ್ಯಕ್ತಿತ್ವ ಪರಿಚಯ ಎಂಬ ಜೆರಾಕ್ಸ್ ಪ್ರತಿಯನ್ನು ನೀಡಿದರು. ಅವರ ಅಮೋಘ ವ್ಯಕ್ತಿತ್ವ ಪರಿಚಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತು. ಇಗೋ ಇಲ್ಲಿದೆ ಅವರ ವ್ಯಕ್ತಿತ್ವ ಪರಿಚಯ...


                                    ವ್ಯಕ್ತಿತ್ವ ಪರಿಚಯ

                                                       ಡಾ|| ಗುರುರಾಜ ಕರಜಗಿ

ಆಸಕ್ತಿ : ಸೃಜನಶೀಲತೆ, ಸಂವಹನ ಕೌಶಲ, ಅಭಿಪ್ರೇರಣೆ, ವೃತ್ತಿ ಸಂಹಿತೆ, ಮಾನವೀಯ ಮೌಲ್ಯಗಳು ಮತ್ತು ತತ್ವಶಾಸ್ತ್ರ

ಶೈಕ್ಷಣಿಕ ಸಾಧನೆ :
* ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ಸ್ನಾತಕ ಪದವಿಯಲ್ಲಿ ತೃತೀಯ ರ್‍ಯಾಂಕ್ ಹಾಗೂ Analytical chemistryಯನ್ನು ಅಭ್ಯಸಿಸಿ ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ ರ್‍ಯಾಂಕ್‍ನ ಸಾಧನೆ.

* Inorganic chemistryಯಲ್ಲಿ ಸಂಶೋಧನಾ ಪ್ರಬಂಧವನ್ನು ಎರಡೇ ವರ್ಷಗಳಲ್ಲಿ ಸಂಪೂರ್ಣಗೊಳಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯ ಗಳಿಕೆ.

* ೨೨ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಮಂಡಿಸಿದ ಹೆಗ್ಗಳಿಕೆ


ವೃತ್ತಿ ಜೀವನದ ಯಾತ್ರೆ :

* ಬೆಂಗಳೂರು ವಿ.ವಿ.ಯ ಪ್ರತಿನಿಧಿಗಳ ಮಂಡಳಿ, ಆಡಳಿತ ಮಂಡಳೀ, ಶಿಕ್ಷಣ ಮಂಡಳಿ, ಕಾಲೇಜು ಅಭಿವೃದ್ಧಿ ಮಂಡಳಿ, ರಸಾಯನಶಾಸ್ತ್ರ ವಿಭಾಗದ ಪರೀಕ್ಷಾಂಗದ ಸದಸ್ಯರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಜೀವಮಾನದ ಸಭಾಸದರಾಗಿ Electrochemical society of Indiaಯಲ್ಲಿ ಕಾರ್ಯ ನಿರ್ವಹಣೆ.

* ಬೆಂಗಳೂರಿನ ವಿ.ವಿ.ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸತತ ೧೬ ವರ್ಷಗಳ ಕಾಲ ಸೇವೆ ಸಲ್ಲಿಕೆ.

* ಅನೇಕ ವರ್ಷಗಳ ಕಾಲ Bangalore University cricket selection committe ಯಲ್ಲಿ ಸಕ್ರಿಯ ಸದಸ್ಯರಾಗಿ ಜವಾಬ್ದಾರಿ ನಿರ್ವಹಣೆ

* ರಾಜಾದ್ಯಂತ ಉತ್ಕೃಷ್ಟ ಶಿಕ್ಷಣ ನೀಡಲು ಕಾರ್ಯಯೋಜನೆ ರೂಪಿಸಿರುವ PACER FOUNDATION - PACER (Professionals Action Committee for Educational Reforms) ಸಂಸ್ಥೆಯ ಸಭಾಧ್ಯಕ್ಷರಾಗಿ ಆಯ್ಕೆ. ಉನ್ನತ ಶಿಕ್ಷಣನೀತಿಗಳನ್ನು ರೂಪಿಸುವ ತಂಡದ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಕ.

* ಕರ್ನಾಟಕ ರಾಜ್ಯದ ಪ್ರಥಮದರ್ಜೆ ಕಾಲೇಜುಗಳ ಪ್ರಾಚಾರ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಜ್ಯದ ಉತ್ತಮ ಶಿಕ್ಷಕರನ್ನು ಆಯ್ಕೆಮಾಡುವ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ

* ಭಾರತದ ಶಾಲಾ ಕಾಲೇಜುಗಳಲ್ಲದೇ ಸಿಂಗಾಪುರ, ಬ್ಯಾಂಕಾಕ್, ದುಬೈ ಮತ್ತು ಯು.ಎಸ್.ಎ ದೇಶಗಳ ಶಾಲಾ ಕಾಲೇಜುಗಳಲ್ಲೂ ತರಬೇತಿ ಕಾರ್ಯಕ್ರಮಗಳ ನಿರ್ವಹಣೆ.

* `ಸೃಜನಶೀಲತೆ' ಬಗ್ಗೆ ಭಾರತದಲ್ಲಿ ಪಠ್ಯಕ್ರಮವನ್ನು ರಚಿಸಿದ ಮೊದಲಿಗರು. ಇದುವೇ ಯು.ಕೆ. ದೇಶದ ಸ್ನಾತಕೋತ್ತರ ಪದವಿಯ ಪಠ್ಯಕ್ರಮದ ಒಂದು ಭಾಗವಾಗಿದೆ.

* ಭಾರತದ ಅನೇಕ ಬಹುರಾಷ್ಟ್ರೀಯ ಕಂಪೆನಿಗಳ ಮತ್ತು ಸಾರ್ವಜನಿಕ ಸಂಸ್ಥೆಗಳ ನೌಕರರಿಗೆ ತರಬೇತುಗೊಳಿಸಿದ ಹಿರಿಮೆ.


ಪ್ರಕಾಶನಗಳು :
  `ಪ್ರಜಾವಾಣಿ' ದಿನಪತ್ರಿಕೆಯಲ್ಲಿ ನಿತ್ಯವೂ ಪ್ರಕಟಗೊಳ್ಳುವ `ಕರುಣಾಳು ಬಾ ಬೆಳಕೆ' ಅಂಕಣವು, ವೈಜ್ಞಾನಿಕ ತಳಹದಿಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ೯೦೦ಕ್ಕೂ ಹೆಚ್ಚಿನ ಕಥೆಗಳು ಜನರ ಮನೆ-ಮನ ತುಂಬಿವೆ. ಅವುಗಳಲ್ಲಿ ೩೦೦ ಕಥೆಗಳನ್ನು ಮೂರು ಪುಸ್ತಕಗಳಲ್ಲಿ ಮುದ್ರಿಸಿ ಲೋಕಾರ್ಪಣೆ ಮಾಡಿದ ಖ್ಯಾತಿ ಇವರದ್ದು. `ವಿವೇಕ ಸಂಪದ' ಆಧ್ಯಾತ್ಮ ಪತ್ರಿಕೆಯ ಪ್ರತಿಪ್ರಕಟಣೆಯಲ್ಲೂ ತಮ್ಮ ಲೇಖನಗಳ ಕೊಡುಗೆ ನೀಡಿದ್ದಾರೆ. `ಶ್ರೀ ಶಂಕರ' ಅಧ್ಯಾತ್ಯವಾಹಿನಿಯಲ್ಲಿ ದಾಸಸಾಹಿತ್ಯದ ಕುರಿತಾದ ಇವರ ಉಪನ್ಯಾಸಮಾಲೆ ೧೦೦ ಸಂಚಿಕೆಗಳನ್ನು ಪೂರೈಸಿವೆ. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಜೀವನ ಧರ್ಮಯೋಗ, ಬಾಳಿಗೊಂಡು ನಂಬಿಕೆ, ಜ್ಞಾಪಕ ಚಿತ್ರಶಾಲೆ ಹಾಗೂ ಭಗವದ್ಗೀತೆಯ ಕುರಿತಾದ ಉಪನ್ಯಾಸಗಳು ಸಿ.ಡಿ.ಗಳಲ್ಲಿ ಲಭ್ಯ.

Sunday 27 May 2012

ಕೆ. ಎಸ್. ಅಶ್ವಥ್


       
ನಮ್ಮ ಕೆ. ಎಸ್. ಅಶ್ವಥ್ ಅವರು ಜನಿಸಿದ ದಿನ ಮೇ 25, 1925 ಎಂದು ಹಲವೆಡೆ ಉಲ್ಲೇಖವಿದೆ. ಮೈಸೂರಿನಲ್ಲಿ ಈ ವರ್ಷ ಮಾರ್ಚ್ ತಿಂಗಳಲ್ಲಿ ಅವರ ಹುಟ್ಟಿದ ಹಬ್ಬದ ಸಮಾರಂಭ ನಡೆದಂತಿತ್ತು. ಅದೇನೇ ಇರಲಿ ಕೆ ಎಸ್ ಅಶ್ವಥ್ ಅಂತಹ ಹಿರಿಯರನ್ನು ನೆನೆಯುವುದು ಮನಸ್ಸಿಗೆ ಅವ್ಯಕ್ತವಾದ ಒಂದು ಸಮಾಧಾನ ನೀಡುವಂತಹ ಸಂಗತಿ.

ಚಲನಚಿತ್ರರಂಗವನ್ನು ನೋಡಿದಾಗ ಇವರು ‘ನಮ್ಮಂತೆಯೇ ಇರುವ ನಮ್ಮ ಪ್ರತಿನಿಧಿ’ ಎಂಬ ಭಾವವನ್ನು ಹುಟ್ಟಿಸುವ ಮಂದಿ ಬಲು ಕಡಿಮೆ. ಅದು ಚಿತ್ರರಂಗದ ಜನರ ತಪ್ಪು ಎನ್ನುವುದಕ್ಕಿಂತ, ಬಣ್ಣದ ಲೋಕವನ್ನು ನೋಡಿದಾಗ ಅದು ನಮ್ಮಲ್ಲಿ ಮೂಡಿಸುವ ಭ್ರಮೆ ಅದಕ್ಕೆ ಕಾರಣ ಇರಲೂಬಹುದು. ಹೀಗಿದ್ದೂ ಚಿತ್ರರಂಗದಲ್ಲಿ ಎಲ್ಲ ರೀತಿಯಿಂದಲೂ ಸಂಭಾವಿತರು ಎಂಬ ಹೃದ್ಭಾವ ಹುಟ್ಟಿಸಿದ ವಿರಳರಲ್ಲಿ ವಿರಳರು ಕೆ. ಎಸ್. ಅಶ್ವಥ್. ಬಹುಷಃ ಅವರು ನಿರ್ವಹಿಸಿದ ಸಂಭಾವಿತ ಪಾತ್ರಗಳು, ನಮ್ಮಲ್ಲಿ ಅವರ ಬಗ್ಗೆ ಸಂಭಾವ್ಯತೆ ಹುಟ್ಟಿರುವುದಕ್ಕೆ ಒಂದು ಪ್ರಮುಖ ಕಾರಣ. ಅತೀ ಚೆಲ್ಲು ಚೆಲ್ಲಾದ ಪಾತ್ರಗಳನ್ನಾಗಲಿ, ಕ್ರೂರಿಯಾದ ಪಾತ್ರಗಳನ್ನಾಗಲಿ ನಾವು ಅವರಲ್ಲಿ ಕಂಡದ್ದಿಲ್ಲ. ಹಾಗೆ ಅವರು ಅಂತಹ ಪಾತ್ರ ಮಾಡಿರಬಹುದಾದ ಸಾಧ್ಯತೆ ಇದ್ದರೂ, ಅಂತಹವು ಅವರು ನಟಿಸಿದ ಮುನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾವು ಗಮನಿಸದ ಹಾಗೆ ಎಲ್ಲೆಲ್ಲೆಲ್ಲೋ ಹುದುಗಿಕೊಂಡುಬಿಟ್ಟಿರುತ್ತವೆ. ಹೀಗಾಗಿ ಅವರು ಎಂದಿಗೂ ಆಪ್ತ ವ್ಯಕ್ತಿಯಾಗಿಯೇ ಕನ್ನಡ ಚಿತ್ರಪ್ರೇಕ್ಷಕರಲ್ಲಿ ಮನನದಲ್ಲಿ ಸ್ಥಾಪಿತರು.

ತಾವು ನಡೆಸಿದ ಬದುಕಿನ ರೀತಿಯಲ್ಲಿ ಕೂಡ ಅಶ್ವಥ್ ಅವರು ಸಾಮಾನ್ಯ ಮಧ್ಯಮವರ್ಗದ ಜನರಿಗೆ ಎಲ್ಲ ರೀತಿಯಲ್ಲೂ ಹತ್ತಿರದ ರೀತಿಯವರು. ಅದು ಬದುಕಿನ ಸುಂದರ ಕ್ಷಣಗಳಿಗೆ ಮಾತ್ರ ಅನ್ವಯಿಸದೆ, ಬದುಕಿನ ಏರಿಳಿತಗಳು, ಖಾಳಜಿಗಳು, ಕಾಹಿಲೆಗಳು, ಅನಿಶ್ಚಿತತೆಗಳು, ನೋವುಗಳು, ಭಯ ಭೀತಿಗಳು, ಜವಾಬ್ಧಾರಿಗಳು, ಅಸಹಾಯಕತೆಗಳು ಹೀಗೆ ಪ್ರತಿಯೊಂದರಲ್ಲೂ ಅವರ ಬದುಕು ‘ಮೇಲಕ್ಕೆ ಏರಲಾಗದ, ಕೆಳಕ್ಕೆ ಇಳಿಯಲೂ ಆಗದ ವಿಚಿತ್ರ ಅಸಹಾಯಕ ಸ್ಥಿತಿಯ ಮಧ್ಯಮ ವರ್ಗದ ಬದುಕಿನದು’. ನನಗೆ ಅಶ್ವಥ್ ಅವರ “ನಮ್ಮ ಮಕ್ಕಳು” ಚಿತ್ರ ತುಂಬಾ ತುಂಬಾ ಅತ್ಮೀಯವಾದುದು. ಅದು ಅಶ್ವಥ್ ಅವರ, ಅಂದಿನ ದಿನಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಬೆಳೆಯುತ್ತಿದ್ದ ಮಕ್ಕಳಾಗಿದ್ದ ನಮ್ಮಂತವರ, ನಮ್ಮನ್ನು ಸಾಕುತ್ತಿದ್ದ ನಮ್ಮ ಪೋಷಕರ, ನಮ್ಮ ಸಂಸ್ಕೃತಿಗಳ, ನಮ್ಮ ಬದುಕಿನ ರೀತಿಯ ಯಥಾವತ್ತಾದ ಚಿತ್ರಣ. ನಾನು ಆ ಚಿತ್ರದಲ್ಲಿ ಕಥೆಗಿಂತ ಮಿಗಿಲಾದ ಆ ಕಥೆಯ ಪಾತ್ರಗಳ ಬಗ್ಗೆ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮಗೆ ಬಹಳ ಹತ್ತಿರವಾದವರು ‘ನಮ್ಮ ಮಕ್ಕಳು’ ಚಿತ್ರದ ಅಶ್ವಥ್, ಪಂಡರಿಬಾಯಿ ಮತ್ತು ಆ ಚಿತ್ರದಲ್ಲಿನ ಅವರ ಮೂರು ಮಕ್ಕಳು.

ಅಶ್ವಥ್ ಚಿತ್ರರಂಗದಲ್ಲಿ ಹೆಚ್ಚು ಇದ್ದದ್ದು 1955 ರಿಂದ 1995ರ ಅವಧಿಯಲ್ಲಿ. ಆ ನಂತರ ಜೀವನವನ್ನು ನೆಮ್ಮದಿಯಲ್ಲಿ ಕಳೆಯುತ್ತೇನೆ ಎಂದು ಭಾವಿಸಿಕೊಂಡು ನಿವೃತ್ತರಾದ ಅವರಿಗೆ ಅವರು ಕನಸಿದ್ದ ಜೀವನಕ್ಕಿಂತ ವಿಭಿನ್ನ ವೃದ್ಧಾಪ್ಯದ ಜೀವನ ಸಿಕ್ಕಿದ್ದು ದುರದೃಷ್ಟಕರ. ಆದರೆ ಒಂದು ರೀತಿಯಲ್ಲಿ ಅದೇ ಬದುಕು. ಇಲ್ಲಿ ಅಶ್ವಥ್ ಅವರು ಮೇಲೆ ಹೇಳಿದ ಕೆಲವು ಮಾತುಗಳಂತೆ ಈ ಬದುಕಿನ ಘಟ್ಟದ ಬಹು ಮುಖ್ಯ ಪ್ರಾತಿನಿಧಿಕರು ಕೊಡಾ ಹೌದು. ಅಶ್ವಥ್ ಅವರು ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದ ದಿನಗಳಲ್ಲಿ ಅವರನ್ನು ಅವರ ಮೈಸೂರಿನಲ್ಲಿ ನೋಡುವುದು ಕಷ್ಟವಿರಲಿಲ್ಲ. ಇಂದಿನ ಕಾಲದಲ್ಲಿ ಎಲ್ಲ ಕೆಲಸ ಮಾಡುವವರೂ ಕಾರಿನಲ್ಲಿ ಓಡಾಡುತ್ತಾರೆ. ಅಂದಿನ ದಿನದಲ್ಲಿ ಅಶ್ವಥ್ ಒಂದು ಜಟಕಾ ಗಾಡಿಯನ್ನು ಶಾಶ್ವತವಾಗಿ ಬಾಡಿಗೆಗೆ ಗೊತ್ತು ಮಾಡಿಕೊಂಡಿದ್ದರು. ಅದೊಂದು ಸುಂದರ ಗಾಡಿ. ಅದರಲ್ಲೇ ಅಶ್ವಥ್ ಅವರ ದಿನನಿತ್ಯದ ಪಯಣ. ಹಾಗಾಗಿ ಅವರನ್ನು ಮೈಸೂರಿಗರು ನೋಡಬಹುದಾದದ್ದು ಸರ್ವೇಸಾಮನ್ಯವಾಗಿತ್ತು.

ಅಶ್ವಥ್ ಅವರ ವಿಚಾರದಲ್ಲಿ ಮತ್ತೊಂದು ಗಮನಿಸಿದ್ದ ಅಂಶವೆಂದರೆ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಬಯಲು ಭಾಷಣ ಕಾರ್ಯಕ್ರಮಗಳಲ್ಲಿ, ಅನಾವಶ್ಯಕವಾದ ಜನಗಳ ಆಕರ್ಷಣೆ ತಮ್ಮೆಡೆಗೆ ಬೀರದಿರಲಿ ಎಂದು ಒಂದು ಮಫ್ಲರ್ ಸುತ್ತಿಕೊಂಡು ಒಂದೆಡೆ ಬಂದು ನಿಲ್ಲುತ್ತಿದ್ದರು. ಮೈಸೂರಿನ ಟೌನ್ ಹಾಲಿನ ಮುಂದೆ ಅಂದಿನ ದಿನಗಳಲ್ಲಿ, ಅದರಲ್ಲೂ ತುರ್ತು ಪರಿಸ್ಥಿತಿಯ ಆಸುಪಾಸಿನ ದಿನಗಳಲ್ಲಿ ಎಲ್ಲಾ ಭಾಷಣ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಸರ್ವೇ ಸಾಮಾನ್ಯವಾಗಿತ್ತು. ಹೀಗೆ ಅಶ್ವಥ್ ತಾವು ಬಣ್ಣದ ಲೋಕದಲ್ಲಿದ್ದರೂ ತಮ್ಮನ್ನು ಸಾಮಾನ್ಯನನ್ನಾಗಿರಿಸಿಕೊಂಡಿದ್ದರು.

ನಾವು ಚಿತ್ರ ವಿಮರ್ಶೆಗಳನ್ನು ಓದುವಾಗ ಹಲವು ನಟ ನಟಿಯರ ಅಭಿನಯದ ಬಗ್ಗೆ ಉತ್ತಮವಲ್ಲದ ಮಾತುಗಳನ್ನು ನೋಡುವುದಿದೆ. ಅಂತಹ ಮಾತುಗಳನ್ನು ಅಶ್ವಥ್ ಅವರ ಬಗ್ಗೆ ಕೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ಅಭಿನಯದಲ್ಲಿ ಅಷ್ಟೊಂದು ಸಹಜರು. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅವರು ಒಂದು ಪವಾಡ ಸದೃಶರಾಗಿದ್ದರು. ಅವರ ಪಾತ್ರಾಭಿನಯ ಅಷ್ಟೊಂದು ಪ್ರಭಾವಿ. ಹಾಗಾಗಿ ಅವರು ಚಾಮಯ್ಯ ಮೇಷ್ಟರು ಎಂದು ಅನ್ವರ್ಥವಾಗಿಹೋಗಿದ್ದರು. ಹಾಗೆ ನೋಡಿದರೆ ಅವರ ಅಭಿನಯದಲ್ಲಿ ಅಂತಹ ಪಾತ್ರಗಳು ಅನೇಕವು ಮೂಡಿವೆ. ಆದರೆ ಪುಟ್ಟಣ್ಣ ಕಣಗಾಲ್ ಸೃಷ್ಟಿಸುತ್ತಿದ್ದ ಪಾತ್ರಗಳಲ್ಲಿ ಮಾತ್ರ ಕಲಾವಿದರಲ್ಲಿ ಮಿನುಗುತ್ತಿದ್ದ ಬೆರಗು ವಿಶಿಷ್ಟವಾದದ್ದು. ಆ ವಿಶಿಷ್ಟತೆಯಲ್ಲಿ ಕೆ. ಎಸ್. ಅಶ್ವಥ್ ಅಜರಾಮರರಾಗಿಬಿಟ್ಟರು. ಅಶ್ವಥ್ ಅವರ ಕಸ್ತೂರಿ ನಿವಾಸ, ಮುತ್ತಿನಹಾರ ಪಾತ್ರಗಳು ಸಹಾ ಅದೇ ಮೆರುಗಿನವು.

ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ವಿಭಿನ್ನ ನೆಲೆಗಳಲ್ಲಿ ಅಶ್ವಥ್ ಅವರು ಅವರ ಪಾತ್ರಗಳಿಗೆ ನೀಡಿದ ಬೆಲೆ ಅಸದೃಶವಾದದ್ದು. ಅವರನ್ನು ನಾವು ನೋಡಿದ ಇಷ್ಟಪಟ್ಟ ಒಂದೆರಡು ಪಾತ್ರಗಳ ನೆಲೆಯಲ್ಲಿ ಅವಲೋಕಿಸುವುದಕ್ಕಿಂತ ತಾವು ನಟಿಸಿದ ಪಾತ್ರಗಳಲ್ಲೆಲ್ಲ ಅವರು ತುಂಬಿದ ಸಹಜತೆಯ ಆಳದಲ್ಲಿ ಅವರಿಗೆ ಇದ್ದ ಸಾಮರ್ಥ್ಯ, ಜೀವಂತಿಕೆ, ನಿಷ್ಠೆ ಜೊತೆಗೆ ಇವೆಲ್ಲಕ್ಕೂ ಮಿಗಿಲಾಗಿ ತಮ್ಮನ್ನು ಸಾಮಾನ್ಯನಂತೆ ಕಂಡುಕೊಳ್ಳುವ ವಿಧೇಯತೆ, ಬದುಕಿನ ಜೊತೆ ಹೊಂದಿದ್ದ ಸಾಮೀಪ್ಯತೆ ಇತ್ಯಾದಿಗಳಿಂದ ಅವರನ್ನು ನೋಡುವುದು ಅತ್ಯಂತ ಮಹತ್ವದ್ದೆನಿಸುತ್ತದೆ.

ಅಶ್ವಥ್ ಅವರ ವೈಯಕ್ತಿಕ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಗಹನವಾದ ವಿಚಾರ ವೇಧ್ಯವಾಗುತ್ತದೆ. ಒಬ್ಬ ವೃತ್ತಿಪರ ವ್ಯಕ್ತಿ ತಾನು ತನ್ನ ಕಾರ್ಯಕ್ಷೇತ್ರದಿಂದ ನಿವೃತ್ತಿ ಪಡೆದಾಗ ಆತನ ಬದುಕಿನಲ್ಲಿ ಮೂಡುವ ಅನಿಶ್ಚಿತತೆಗಳು ಅಶ್ವಥ್ ಅಂತಹ ಹಲವು ವರ್ಷಗಳು ನಿರಂತರ ಸೇವೆಯಲ್ಲಿದ್ದ ವ್ಯಕ್ತಿಯನ್ನು ಸಹಾ ಕಾಡಿತ್ತು ಎಂದರೆ ಈ ದೇಶದಲ್ಲಿ ಪಿಂಚಣಿ ಎಂಬ ಭದ್ರತೆ ಇಲ್ಲದ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಈ ದೇಶದ ಸಾಮಾನ್ಯನ ಬದುಕಿನಲ್ಲಿ “ಹಣದುಬ್ಬರ, ಆಡಂಭರದ ಹೈಟೆಕ್ ಎಂಬ ಹೆಸರಿನಲ್ಲಿ ಆರೋಗ್ಯ ಮತ್ತಿತರ ಮೂಲಭೂತ ಅವಶ್ಯಕತೆಗಳಲ್ಲಿ ತುರುಕಿರುವ ಕೈಗೆಟುಕದಂತಿರುವ ಶ್ರೀಮಂತಪರ ಬೆಲೆ ತೆತ್ತುವಿಕೆ” ಮುಂತಾದವು ಮಾಡಿರುವ ಹಾನಿಗಳು ಸಹಿಸಲಾಸಾಧ್ಯವಾದಂತಹವು. ಇದು ಪರಂಪರಾಗತ ಮೌಲ್ಯ ಇತ್ಯಾದಿಗಳ ಬಗ್ಗೆ ಭೋಳೆ ಬಿಟ್ಟು ನಿಜ ಬದುಕನ್ನು ಕಂಗೆಡಿಸಿ ಕುಳಿತಿರುವ ನಮ್ಮ ಸಾರ್ವಜನಿಕ, ರಾಜಕೀಯ, ಆರ್ಥಿಕವಲಯ ಸೃಷ್ಟಿಸಿರುವ ದೊಡ್ಡ ಕಂದರವನ್ನು ತೋರುತ್ತದೆ. ನಮ್ಮ ನಿತ್ಯದ ಬದುಕಿನಲ್ಲಿ ಇಂತಹ ದೊಡ್ಡ ಕಂದರವನ್ನು ಇಟ್ಟುಕೊಂಡು ನೀನು ನಿಶ್ಚಿಂತನಾಗಿ ಯೋಗೀಶ್ವರನಾಗು, ಬದುಕಿನಲ್ಲಿ ಆಸೆ, ಭಯ, ಕ್ರೋಧ ಎಲ್ಲಾ ಬಿಟ್ಟು ಬದುಕು ಎಂದು ಪುರಾಣ ಹೇಳುತ್ತದೆ ನಮ್ಮ ವ್ಯವಸ್ಥೆ. ಇದರ ಬಗ್ಗೆ ವ್ಯವಸ್ಥೆ ಏನು ಮಾಡುತ್ತದೋ ಗೊತ್ತಿಲ್ಲ ವೈಯಕ್ತಿಕವಾಗಿ ನಾವು ಅರಿವನ್ನು ಹೊಂದಿರುವುದು ಅತ್ಯಗತ್ಯ ಎಂಬ ಪಾಠ ಕೂಡ ಅಶ್ವಥ್ ಅವರ ಜೀವನದಲ್ಲಿ ಅಡಗಿದೆ. ಅಶ್ವಥ್ ಅವರು ಜನವರಿ 18, 2010ರಂದು ನಿಧನರಾಗುವ ಮುಂಚೆ ಕಡೇ ಪಕ್ಷ ಒಂದು ದಶಕಕ್ಕೂ ಹೆಚ್ಚು ಕಾಲ ಅಶ್ವಥ್ ಕಷ್ಟದ ಬದುಕನ್ನು ನಡೆಸಿರುವುದು ಸರ್ವವೇದ್ಯ. ಅವರು ದೊಡ್ಡ ಕಲಾವಿದರು, ಅವರಿಗೆ ನಾವು ಬೆಂಬಲವಾಗಿದ್ದೆವು ಎಂದು ತೋರಿಸಿಕೊಳ್ಳಲು ನಮ್ಮ ಸಾಮಾಜಿಕ ವ್ಯವಸ್ಥೆಗೆ ಆಸ್ಥೆ ಮೂಡಿಸಿಕೊಂಡಿದ್ದು ಅವರು ಸಾಯುವ ಕೆಲವು ಮುಂಚಿತ ದಿನಗಳಲ್ಲಿ ಮಾತ್ರ. ಅಶ್ವಥ್ ಅವರಂತೆ ಇನ್ನೂ ಬಹುತೇಕ ಕಲಾವಿದರು, ಸಾಮಾನ್ಯ ಜನ, ಸಾಮಾನ್ಯರಲ್ಲಿ ಸಾಮಾನ್ಯರ ಬಗ್ಗೆ ನಮ್ಮ ಇಂದಿನ ವ್ಯವಸ್ಥೆ ಎಂಬ ಅವ್ಯವಸ್ಥೆ ತೀವ್ರವಾಗಿ ನೋಡುವ ಅಗತ್ಯತೆ ಇದೆ.

ಹೀಗೆ ಕೆ.ಎಸ್. ಅಶ್ವಥ್ ಎಲ್ಲ ರೀತಿಯಲ್ಲೂ ಸಾಮಾನ್ಯರ ಪ್ರತಿನಿಧಿ. ಅಸಾಮಾನ್ಯ ಕಲಾವಿದ. ಅವರು ಎಲ್ಲ ರೀತಿಯಲ್ಲೂ ನಮ್ಮ ಹೃದಯದಲ್ಲಿ ಸ್ಥಾಪಿತರು. ಅವರ ನೆನಪು ಅವರ ಜೀವನ ಕಾಲದಲಿದ್ದ ನಮಗೆ ಎಂದೆಂದೂ ಅಮರ.

Tuesday 22 May 2012

ಪ್ರಾಮಾಣಿಕ ಅಧಿಕಾರಿಗಳ ಜೀವಕ್ಕೆ ಬೆಲೆಯೆ ಇಲ್ಲವೇ..?

           ಮೇ ೧೫ರ ಮಂಗಳವಾರ ರಾತ್ರಿ ಕಚೇರಿಯಿಂದ ಕಾರಿನಲ್ಲಿ ಮನೆಯತ್ತ ಹೊರಟಿದ್ದ ಕೆ.ಎ.ಎಸ್. ಅಧಿಕಾರಿ ಎಸ್.ಪಿ.ಮಹಾಂತೇಶ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲು ಮಾಡಲಾಯಿತು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಅಂದ ಮೇ ೨೦ ರ ಬೆಳಗಿನ ಜಾವ ೪ಗಂಟೆಯ ಸುಮಾರು ಮಹಾಂತೇಶ್ ಅವರು ಕೊನೆಯುಸಿರೆಳೆದರು. ಈ ಸುದ್ದಿ ನಾಡಿನಾದ್ಯಂತ ಕಾಳ್ಗಿಚ್ಚಿನಂತೆ ಹರಡಿದೆ. ನಾಡಿನೆಲ್ಲೆಡೆ ಈ ವಿಷಯವಾಗಿ ಚರ್ಚೆ ನಡೆದಿದೆ. ಪ್ರಾಮಾಣಿಕ ಅಧಿಕಾರಿ ಮಹಾಂತೇಶ್ ಅವರ ಹತ್ಯೆ ಲ್ಯಾಂಡ್ ಮಾಫಿಯಾದವರಿಂದ ನಡೆದಿದೆ ಎಂಬ ವದಂತಿ ಎಲ್ಲೆಡೆ ಹರಡಿ ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡಿರುವ ಈ ಘಟನೆ ವ್ಯಾಪಕ ಖಂಡನೆಗೆ ಒಳಗಾಗಿದೆ. ಪ್ರಾಮಾಣಿಕ ಅಧಿಕಾರಿಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು. ಆದಾಗ್ಯೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಆಡಳಿತದಲ್ಲಿರುವ ಬೆರಳೆಣಿಕೆಯಷ್ಟು ಪ್ರಾಮಾಣಿಕ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಪ್ರಾಮಾಣಿಕತೆಗೆ ಇಂದು ಬೆಲೆ ಇಲ್ಲ ಎಂಬುದನ್ನು ಈ ಘಟನೆ ನಿರೂಪಿಸುತ್ತಿದೆ. ಜೊತೆಗೆ ಅಂಥ ಅಧಿಕಾರಿಗಳು ಸ್ವರಕ್ಷಣಾ ತಂತ್ರಗಳನ್ನು ಕಲಿತು ವಿಶೇಷ ತರಬೇತಿ ಪಡೆದು ಕರ್ತವ್ಯ ನಿರ್ವಹಿಸುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ. ಆದರೆ ಯಾವುದೇ ಕಾರಣಕ್ಕೂ ಪ್ರಾಮಾಣಿಕ ಅಧಿಕಾರಿಗಳು ನೈತಿಕಸ್ಥೈರ್ಯ ಕಳೆದುಕೊಳ್ಳಬಾರದು.

                       ಜ್ಞಾನಮುಖಿ
                                             




ಯು.ಪಿ.ಎಸ್.ಸಿ.ಸಾಧಕರು - 2012

೨೦೧೨ ರ ಮೇ ೫ರಂದು ಎಲ್ಲ ಸುದ್ದಿಪತ್ರಿಕೆಗಳಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಬಗ್ಗೆ ಬಂದ ಮಾಹಿತಿ ಇಲ್ಲಿದೆ.







Saturday 12 May 2012

ಕೆ.ಎ.ಎಸ್. ಆದ ಸ್ಲಂ ಮಹಿಳೆ

        ಕಿತ್ತು ತಿನ್ನುವ ಬಡತನ. ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿ. ಕೂಲಿಯಿಂದಲೇ ಬದುಕು ಸಾಗಬೇಕಿತ್ತು. ಮಗಳು ತಮ್ಮಂತೆಯೇ ಕೂಲಿ ಮಾಡಬಾರದು, ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬುದು ಪೋಷಕರ ನಿಲುವಾಗಿತ್ತು. ಮಗಳನ್ನು ಓದಿಸಿ ಅಧಿಕಾರಿಯನ್ನಾಗಿ ಮಾಡಬೇಕೆನ್ನುವ ಹೆತ್ತವರ ಕನಸು ಕೊನೆಗೂ ಈಡೇರಿತು.

ಕೊಳೆಗೇರಿಯಲ್ಲಿ ಹುಟ್ಟಿದ ಬಾಲೆ ಬೆಳೆದು ದೊಡ್ಡವಳಾಗಿ ಕೆಎಎಸ್ ಪರೀಕ್ಷೆ ಪಾಸು ಮಾಡಿ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅಂದಹಾಗೆ ಇಲ್ಲಿ ಹೇಳಹೊರಟಿರುವುದು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಕಂದಾಯ ಇಲಾಖೆಯಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಮೈಸೂರಿನ ಕೊಳೆಗೇರಿ ಮಂಜುನಾಥಪುರದ ದಲಿತ ಕುಟುಂಬದಲ್ಲಿ ಜನಿಸಿದ ಅನಿತಾ ಲಕ್ಷ್ಮಿ ಅವರ ಸಾಧನೆಯ ಬಗ್ಗೆ. ಕೂಲಿ ಮಾಡಿಕೊಂಡಿದ್ದ ಚಿಕ್ಕಆಂಜನಪ್ಪ, ಮರಿಸಿದ್ದಮ್ಮ ಅವರ ಏಕೈಕ ಪುತ್ರಿ ಅನಿತಾ ಲಕ್ಷ್ಮಿ. ಬಡತನ ಹಾಸಿ ಹೊದ್ದುಕೊಳ್ಳುವಷ್ಟಿದ್ದರೂ ಮಗಳಿಗೆ ಲಕ್ಷ್ಮಿ ಎಂದೇ ಹೆಸರಿಟ್ಟರು.

ಹೆಣ್ಣು ಮಗಳೆಂದು ಹೆತ್ತವರು ಜರೆಯಲಿಲ್ಲ. ಕೀರ್ತಿಗೊಬ್ಬ ಬೇಕೆಂದು ಹಂಬಲಿಸಲಿಲ್ಲ. ಮಗಳು ನಮ್ಮಂತೆಯೇ ಅನಕ್ಷರಸ್ಥಳಾಗಬಾರದು, ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಅಲಂಕರಿಸಿದರೆ ಸಾಕು ಎಂಬುದು ಪೋಷಕರ ಬಯಕೆಯಾಗಿತ್ತು.

ಲಕ್ಷ್ಮಿ ಅವರಿಗೆ ಚಿಕ್ಕಂದಿನಿಂದಲೇ ಓದಿನ ಬಗ್ಗೆ ವಿಶೇಷ ಆಸಕ್ತಿ. ಸುತ್ತಮುತ್ತಲಿನ ಜನ ಬಡತನದ ಬೇಗೆಯಲ್ಲಿ ಬೇಯುತ್ತಿದ್ದುದು ಇವರ ಮನಸ್ಸಿನ ಮೇಲೆ ಪರಿಣಾಮ ಬೀರತೊಡಗಿತು. ಅನಿತಾ ಕೊಳೆಗೇರಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದರು.

ವಿ.ವಿ.ಮೊಹಲ್ಲಾದ ಮಾತೃ ಮಂಡಳಿಯಲ್ಲಿ ಪ್ರೌಢಶಾಲೆ, ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ವೀರಾಜಪೇಟೆಯಲ್ಲಿ ಟಿಸಿಎಚ್ ಮುಗಿಸಿದ ಇವರು ಪ್ರಾಥಮಿಕ ಶಾಲಾ ಶಿಕ್ಷಕಿಯಾದರು. 

ಹೆತ್ತವರ ಹಂಬಲದಂತೆ ಓದಿ ಮುಂದೆ ದೊಡ್ಡ ಹುದ್ದೆ ಅಲಂಕರಿಸಬೇಕೆಂದು ಅನಿತಾ ಅವರ ಕನಸು ಚಿಗರೊಡೆಯತೊಡಗಿತು. ಕೂಲಿ ಮಾಡುತ್ತಿದ್ದ ಹೆತ್ತವರಿಗೆ ನೆರವಾಗಿ ಮನೆಯಲ್ಲಿ ಹಾಸುಹೊಕ್ಕಾಗಿದ್ದ ಬಡತನವನ್ನು ಹೊಡೆದೋಡಿಸಿ ಅಂದುಕೊಂಡ ಗುರಿ ಮುಟ್ಟಬೇಕೆಂದು ಪಣ ತೊಟ್ಟರು.

ಶಿಕ್ಷಕಿಯಾಗಿ ದುಡಿಯುತ್ತಲೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ, ಎಂಎ, ಬಿ.ಇಡಿ ಪದವಿ ಸಹ ಪಡೆದರು. ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ಸಾಧಕರ ಮಾತು ಅನಿತಾ ಅವರ ಕಿವಿಯಲ್ಲಿ ಗುನುಗುಡುತ್ತಿತ್ತು.

2003ನೇ ಸಾಲಿನಲ್ಲೇ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆದ ಸೋದರ ಮಾವ ಎಸ್.ಬಸವರಾಜು ಅವರನ್ನು ಅನಿತಾ ವರಿಸಿದರು. ದಂಪತಿಗೆ ಗಗನ್ ಎಂಬ ಮುದ್ದು ಮಗ ಜನಿಸಿದ. ಕುಟುಂಬ ನಿರ್ವಹಣೆ, ಕೆಲಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದನ್ನು ಆರಂಭಿಸಿದರು. 2008ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು. ಸಂದರ್ಶನಕ್ಕೆ ಸಹ ಹೋಗಿ ಬಂದರು. ಆದರೆ ಪ್ರಯೋಜನವಾಗಲಿಲ್ಲ.

ಹಣಕಾಸಿನ ತೊಂದರೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ 2009ನೇ ಸಾಲಿನಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ (ಎಟಿಐ)ದಲ್ಲಿ ಎಫ್‌ಡಿಎ ಆಗಿ ಸೇವೆ ಆರಂಭಿಸಿದರು.

ಆದರೆ ಕೆಎಎಸ್ ಪರೀಕ್ಷೆಗೆ ಮತ್ತೆ ತಯಾರಿ ನಡೆಸಿದರು. ಮೈಸೂರಿನ `ಜ್ಞಾನಬುತ್ತಿ ಸಂಸೆ`್ಥಯಲ್ಲಿ ತರಬೇತಿ ಸಹ ಪಡೆದರು. 2010ನೇ ಸಾಲಿನಲ್ಲಿ ಎದುರಿಸಿದ ಪರೀಕ್ಷೆ ಅನಿತಾ ಅವರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.

ರಾಜ್ಯದಲ್ಲಿ 23ನೇ ರ‌್ಯಾಂಕ್ ಗಳಿಸಿ ಕಂದಾಯ ಇಲಾಖೆಯಲ್ಲಿ  ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆ ಆಗಿಯೇ ಬಿಟ್ಟರು. ಆದರೆ ಮಗಳು ಕೆಎಎಸ್ ಹುದ್ದೆಗೆ ಆಯ್ಕೆಯಾದ ವಿಷಯ ಕೇಳಿ ಆನಂದಿಸುವ ಭಾಗ್ಯ ತಂದೆ ಚಿಕ್ಕ ಅಂಜನಪ್ಪ ಅವರಿಗೆ ಒದಗಿಬರಲಿಲ್ಲ.

2009ರಲ್ಲಿ ಚಿಕ್ಕ ಅಂಜನಪ್ಪ ಅನಾರೋಗ್ಯದಿಂದ ತೀರಿಕೊಂಡರು. ತಂದೆಯನ್ನು ಕಳೆದುಕೊಂಡ ಕೊರಗು ಅವರನ್ನು ಕಾಡುತ್ತಿದೆ. ಆದರೆ ಅಪ್ಪನ ಆಸೆ ಈಡೇರಿಸಿದ ಸಂತೃಪ್ತಿ ಇದೆ.

ಮಂಜುನಾಥಪುರದಲ್ಲಿ ಬಹುತೇಕ ಮಂದಿ ಪೌರಕಾರ್ಮಿಕರೇ ಹೆಚ್ಚು. ಉಳಿದಂತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸ್ಲಂ ಎಂದ ಮೇಲೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ ಕೇಳಬೇಕಾಗಿಲ್ಲ. ಪದವಿ ಮಾಡಿದವರು ಬೆರಳೆಣಿಕೆಯಷ್ಟು.

ದುರ್ಬೀನು ಹಾಕಿ ಹುಡುಕಿದರೂ ಸರ್ಕಾರಿ ಹುದ್ದೆ ಅಲಂಕರಿಸಿದ ಹೆಣ್ಣುಮಕ್ಕಳು ಸಿಗುವುದಿಲ್ಲ. ಆದರೆ ಮುಳ್ಳಿನ  ಹಾದಿಯಲ್ಲೇ ನಡೆದು ಬಂದ ಅನಿತಾ ಲಕ್ಷ್ಮಿ ತಮ್ಮಲ್ಲಿದ್ದ ಛಲದಿಂದಾಗಿ ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿ ಹುದ್ದೆಗೆ ಆಯ್ಕೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ನಮ್ಮ ನಡುವೆ ಇದ್ದ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿ ಅಧಿಕಾರಿ ಆಗುತ್ತಿರುವುದು ಮಂಜುನಾಥಪುರ ಕೊಳೆಗೇರಿ ಜನರಲ್ಲಿ ಸಂತಸ ತಂದಿದೆ. ತಮಗೆ ಎಷ್ಟೇ ಕಷ್ಟವಿದ್ದರೂ ಅದನ್ನು ಬದಿಗೊತ್ತಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅನಿತಾ ಲಕ್ಷ್ಮಿಯಂತೆ ಅಧಿಕಾರಿಯನ್ನಾಗಿ ಮಾಡಬೇಕೆಂಬ ನಿಲುವು ಈಗ ಬಡಾವಣೆಯ ಜನತೆಯಲ್ಲಿ ಬಂದಿದೆ.

ಸಾಧನೆ ಮಾಡುವಲ್ಲಿ ಸಹಕರಿಸಿದ ಹೆತ್ತ ತಾಯಿ ಮತ್ತು ಕೈ ಹಿಡಿದ ಪತಿ ಮತ್ತು ಕುಟುಂಬದವರನ್ನು ಅನಿತಾ ನೆನೆಯುತ್ತಾರೆ. ನನ್ನಂತೆಯೇ ಬಡಾವಣೆಯ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು.

ಅದಕ್ಕಾಗಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಬಡಾವಣೆಯಲ್ಲಿ ತೆರೆಯಬೇಕೆಂಬ ಹಂಬಲ ಇವರಲ್ಲಿದೆ. ತಮ್ಮ ಕೇರಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವಂತೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ.

ಕಷ್ಟ-ಸುಖವನ್ನು ಬದಿಗೊತ್ತಿ ಹಗಲು-ರಾತ್ರಿ ಅಭ್ಯಾಸ ಮಾಡಿದ್ದರಿಂದಲೇ ಸಾಧನೆ ಮಾಡಲು ಸಾಧ್ಯವಾಯಿತು. ಹೆತ್ತವರ ಕನಸನ್ನು ನನಸು ಮಾಡಿದ್ದೇನೆ. ಮನೆಯಲ್ಲಿ ಬಡತನ ಇತ್ತು.

ಆದರೆ ಅದು ಸಾಧನೆಗೆ ಅಡ್ಡಿಯಾಗಲಿಲ್ಲ. ತಾಯಿ-ಪತಿ ಇಬ್ಬರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ಛಲ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು.

ಹಿಡಿದ ಕೆಲಸವನ್ನು ಕೊನೆ ಮುಟ್ಟುವವರೆಗೂ ಬಿಡಬಾರದು. ರಾಜ್ಯದ ಯಾವುದೇ ಮೂಲೆಗೂ ಅಧಿಕಾರಿಯಾಗಿ ಹೋದರೂ ತಾಯಿ, ಹುಟ್ಟಿದ ಮನೆಯನ್ನು ಮರೆಯಲಾರೆ ಎಂದು ಹೇಳುವಾಗ ಅನಿತಾ ಅವರ ಕಣ್ಣಂಚಿನಲ್ಲಿ ಆನಂದಬಾಷ್ಪ ಇಣುಕಿತು. ಛಲ, ದೃಢ ವಿಶ್ವಾಸ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅನಿತಾ ಲಕ್ಷ್ಮಿ ಅವರೇ ಸಾಕ್ಷಿ.

ಓದಿ ವಿದ್ಯಾವಂತರಾಗಿ ಒಳ್ಳೆಯ ಹುದ್ದೆ ಅಲಂಕರಿಸಲಿ ಎಂದು ಪೋಷಕರು ಮಕ್ಕಳಿಗೆ ಎಲ್ಲ ಸವಲತ್ತುಗಳನ್ನು ಒದಗಿಸುತ್ತಾರೆ. ಆದರೆ ಬಡತನದಲ್ಲಿ ಬೆಂದು ಯಾರ ಸಹಾಯವಿಲ್ಲದೆ ಕಠಿಣ ಅಭ್ಯಾಸ ಮಾಡಿ ಸಾಧನೆ ಮಾಡಿರುವ ಅನಿತಾಲಕ್ಷ್ಮಿ ಎಲ್ಲರಿಗೆ ಮಾದರಿಯಾಗಿದ್ದಾರೆ.

 Thanks to Prajavani Paper.