Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday, 12 May 2012

ಕೆ.ಎ.ಎಸ್. ಆದ ಸ್ಲಂ ಮಹಿಳೆ

        ಕಿತ್ತು ತಿನ್ನುವ ಬಡತನ. ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿ. ಕೂಲಿಯಿಂದಲೇ ಬದುಕು ಸಾಗಬೇಕಿತ್ತು. ಮಗಳು ತಮ್ಮಂತೆಯೇ ಕೂಲಿ ಮಾಡಬಾರದು, ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬುದು ಪೋಷಕರ ನಿಲುವಾಗಿತ್ತು. ಮಗಳನ್ನು ಓದಿಸಿ ಅಧಿಕಾರಿಯನ್ನಾಗಿ ಮಾಡಬೇಕೆನ್ನುವ ಹೆತ್ತವರ ಕನಸು ಕೊನೆಗೂ ಈಡೇರಿತು.

ಕೊಳೆಗೇರಿಯಲ್ಲಿ ಹುಟ್ಟಿದ ಬಾಲೆ ಬೆಳೆದು ದೊಡ್ಡವಳಾಗಿ ಕೆಎಎಸ್ ಪರೀಕ್ಷೆ ಪಾಸು ಮಾಡಿ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅಂದಹಾಗೆ ಇಲ್ಲಿ ಹೇಳಹೊರಟಿರುವುದು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಕಂದಾಯ ಇಲಾಖೆಯಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಮೈಸೂರಿನ ಕೊಳೆಗೇರಿ ಮಂಜುನಾಥಪುರದ ದಲಿತ ಕುಟುಂಬದಲ್ಲಿ ಜನಿಸಿದ ಅನಿತಾ ಲಕ್ಷ್ಮಿ ಅವರ ಸಾಧನೆಯ ಬಗ್ಗೆ. ಕೂಲಿ ಮಾಡಿಕೊಂಡಿದ್ದ ಚಿಕ್ಕಆಂಜನಪ್ಪ, ಮರಿಸಿದ್ದಮ್ಮ ಅವರ ಏಕೈಕ ಪುತ್ರಿ ಅನಿತಾ ಲಕ್ಷ್ಮಿ. ಬಡತನ ಹಾಸಿ ಹೊದ್ದುಕೊಳ್ಳುವಷ್ಟಿದ್ದರೂ ಮಗಳಿಗೆ ಲಕ್ಷ್ಮಿ ಎಂದೇ ಹೆಸರಿಟ್ಟರು.

ಹೆಣ್ಣು ಮಗಳೆಂದು ಹೆತ್ತವರು ಜರೆಯಲಿಲ್ಲ. ಕೀರ್ತಿಗೊಬ್ಬ ಬೇಕೆಂದು ಹಂಬಲಿಸಲಿಲ್ಲ. ಮಗಳು ನಮ್ಮಂತೆಯೇ ಅನಕ್ಷರಸ್ಥಳಾಗಬಾರದು, ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಅಲಂಕರಿಸಿದರೆ ಸಾಕು ಎಂಬುದು ಪೋಷಕರ ಬಯಕೆಯಾಗಿತ್ತು.

ಲಕ್ಷ್ಮಿ ಅವರಿಗೆ ಚಿಕ್ಕಂದಿನಿಂದಲೇ ಓದಿನ ಬಗ್ಗೆ ವಿಶೇಷ ಆಸಕ್ತಿ. ಸುತ್ತಮುತ್ತಲಿನ ಜನ ಬಡತನದ ಬೇಗೆಯಲ್ಲಿ ಬೇಯುತ್ತಿದ್ದುದು ಇವರ ಮನಸ್ಸಿನ ಮೇಲೆ ಪರಿಣಾಮ ಬೀರತೊಡಗಿತು. ಅನಿತಾ ಕೊಳೆಗೇರಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದರು.

ವಿ.ವಿ.ಮೊಹಲ್ಲಾದ ಮಾತೃ ಮಂಡಳಿಯಲ್ಲಿ ಪ್ರೌಢಶಾಲೆ, ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ವೀರಾಜಪೇಟೆಯಲ್ಲಿ ಟಿಸಿಎಚ್ ಮುಗಿಸಿದ ಇವರು ಪ್ರಾಥಮಿಕ ಶಾಲಾ ಶಿಕ್ಷಕಿಯಾದರು. 

ಹೆತ್ತವರ ಹಂಬಲದಂತೆ ಓದಿ ಮುಂದೆ ದೊಡ್ಡ ಹುದ್ದೆ ಅಲಂಕರಿಸಬೇಕೆಂದು ಅನಿತಾ ಅವರ ಕನಸು ಚಿಗರೊಡೆಯತೊಡಗಿತು. ಕೂಲಿ ಮಾಡುತ್ತಿದ್ದ ಹೆತ್ತವರಿಗೆ ನೆರವಾಗಿ ಮನೆಯಲ್ಲಿ ಹಾಸುಹೊಕ್ಕಾಗಿದ್ದ ಬಡತನವನ್ನು ಹೊಡೆದೋಡಿಸಿ ಅಂದುಕೊಂಡ ಗುರಿ ಮುಟ್ಟಬೇಕೆಂದು ಪಣ ತೊಟ್ಟರು.

ಶಿಕ್ಷಕಿಯಾಗಿ ದುಡಿಯುತ್ತಲೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ, ಎಂಎ, ಬಿ.ಇಡಿ ಪದವಿ ಸಹ ಪಡೆದರು. ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ಸಾಧಕರ ಮಾತು ಅನಿತಾ ಅವರ ಕಿವಿಯಲ್ಲಿ ಗುನುಗುಡುತ್ತಿತ್ತು.

2003ನೇ ಸಾಲಿನಲ್ಲೇ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆದ ಸೋದರ ಮಾವ ಎಸ್.ಬಸವರಾಜು ಅವರನ್ನು ಅನಿತಾ ವರಿಸಿದರು. ದಂಪತಿಗೆ ಗಗನ್ ಎಂಬ ಮುದ್ದು ಮಗ ಜನಿಸಿದ. ಕುಟುಂಬ ನಿರ್ವಹಣೆ, ಕೆಲಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದನ್ನು ಆರಂಭಿಸಿದರು. 2008ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು. ಸಂದರ್ಶನಕ್ಕೆ ಸಹ ಹೋಗಿ ಬಂದರು. ಆದರೆ ಪ್ರಯೋಜನವಾಗಲಿಲ್ಲ.

ಹಣಕಾಸಿನ ತೊಂದರೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ 2009ನೇ ಸಾಲಿನಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ (ಎಟಿಐ)ದಲ್ಲಿ ಎಫ್‌ಡಿಎ ಆಗಿ ಸೇವೆ ಆರಂಭಿಸಿದರು.

ಆದರೆ ಕೆಎಎಸ್ ಪರೀಕ್ಷೆಗೆ ಮತ್ತೆ ತಯಾರಿ ನಡೆಸಿದರು. ಮೈಸೂರಿನ `ಜ್ಞಾನಬುತ್ತಿ ಸಂಸೆ`್ಥಯಲ್ಲಿ ತರಬೇತಿ ಸಹ ಪಡೆದರು. 2010ನೇ ಸಾಲಿನಲ್ಲಿ ಎದುರಿಸಿದ ಪರೀಕ್ಷೆ ಅನಿತಾ ಅವರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.

ರಾಜ್ಯದಲ್ಲಿ 23ನೇ ರ‌್ಯಾಂಕ್ ಗಳಿಸಿ ಕಂದಾಯ ಇಲಾಖೆಯಲ್ಲಿ  ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆ ಆಗಿಯೇ ಬಿಟ್ಟರು. ಆದರೆ ಮಗಳು ಕೆಎಎಸ್ ಹುದ್ದೆಗೆ ಆಯ್ಕೆಯಾದ ವಿಷಯ ಕೇಳಿ ಆನಂದಿಸುವ ಭಾಗ್ಯ ತಂದೆ ಚಿಕ್ಕ ಅಂಜನಪ್ಪ ಅವರಿಗೆ ಒದಗಿಬರಲಿಲ್ಲ.

2009ರಲ್ಲಿ ಚಿಕ್ಕ ಅಂಜನಪ್ಪ ಅನಾರೋಗ್ಯದಿಂದ ತೀರಿಕೊಂಡರು. ತಂದೆಯನ್ನು ಕಳೆದುಕೊಂಡ ಕೊರಗು ಅವರನ್ನು ಕಾಡುತ್ತಿದೆ. ಆದರೆ ಅಪ್ಪನ ಆಸೆ ಈಡೇರಿಸಿದ ಸಂತೃಪ್ತಿ ಇದೆ.

ಮಂಜುನಾಥಪುರದಲ್ಲಿ ಬಹುತೇಕ ಮಂದಿ ಪೌರಕಾರ್ಮಿಕರೇ ಹೆಚ್ಚು. ಉಳಿದಂತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸ್ಲಂ ಎಂದ ಮೇಲೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ ಕೇಳಬೇಕಾಗಿಲ್ಲ. ಪದವಿ ಮಾಡಿದವರು ಬೆರಳೆಣಿಕೆಯಷ್ಟು.

ದುರ್ಬೀನು ಹಾಕಿ ಹುಡುಕಿದರೂ ಸರ್ಕಾರಿ ಹುದ್ದೆ ಅಲಂಕರಿಸಿದ ಹೆಣ್ಣುಮಕ್ಕಳು ಸಿಗುವುದಿಲ್ಲ. ಆದರೆ ಮುಳ್ಳಿನ  ಹಾದಿಯಲ್ಲೇ ನಡೆದು ಬಂದ ಅನಿತಾ ಲಕ್ಷ್ಮಿ ತಮ್ಮಲ್ಲಿದ್ದ ಛಲದಿಂದಾಗಿ ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿ ಹುದ್ದೆಗೆ ಆಯ್ಕೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ನಮ್ಮ ನಡುವೆ ಇದ್ದ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿ ಅಧಿಕಾರಿ ಆಗುತ್ತಿರುವುದು ಮಂಜುನಾಥಪುರ ಕೊಳೆಗೇರಿ ಜನರಲ್ಲಿ ಸಂತಸ ತಂದಿದೆ. ತಮಗೆ ಎಷ್ಟೇ ಕಷ್ಟವಿದ್ದರೂ ಅದನ್ನು ಬದಿಗೊತ್ತಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅನಿತಾ ಲಕ್ಷ್ಮಿಯಂತೆ ಅಧಿಕಾರಿಯನ್ನಾಗಿ ಮಾಡಬೇಕೆಂಬ ನಿಲುವು ಈಗ ಬಡಾವಣೆಯ ಜನತೆಯಲ್ಲಿ ಬಂದಿದೆ.

ಸಾಧನೆ ಮಾಡುವಲ್ಲಿ ಸಹಕರಿಸಿದ ಹೆತ್ತ ತಾಯಿ ಮತ್ತು ಕೈ ಹಿಡಿದ ಪತಿ ಮತ್ತು ಕುಟುಂಬದವರನ್ನು ಅನಿತಾ ನೆನೆಯುತ್ತಾರೆ. ನನ್ನಂತೆಯೇ ಬಡಾವಣೆಯ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು.

ಅದಕ್ಕಾಗಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಬಡಾವಣೆಯಲ್ಲಿ ತೆರೆಯಬೇಕೆಂಬ ಹಂಬಲ ಇವರಲ್ಲಿದೆ. ತಮ್ಮ ಕೇರಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವಂತೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ.

ಕಷ್ಟ-ಸುಖವನ್ನು ಬದಿಗೊತ್ತಿ ಹಗಲು-ರಾತ್ರಿ ಅಭ್ಯಾಸ ಮಾಡಿದ್ದರಿಂದಲೇ ಸಾಧನೆ ಮಾಡಲು ಸಾಧ್ಯವಾಯಿತು. ಹೆತ್ತವರ ಕನಸನ್ನು ನನಸು ಮಾಡಿದ್ದೇನೆ. ಮನೆಯಲ್ಲಿ ಬಡತನ ಇತ್ತು.

ಆದರೆ ಅದು ಸಾಧನೆಗೆ ಅಡ್ಡಿಯಾಗಲಿಲ್ಲ. ತಾಯಿ-ಪತಿ ಇಬ್ಬರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ಛಲ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು.

ಹಿಡಿದ ಕೆಲಸವನ್ನು ಕೊನೆ ಮುಟ್ಟುವವರೆಗೂ ಬಿಡಬಾರದು. ರಾಜ್ಯದ ಯಾವುದೇ ಮೂಲೆಗೂ ಅಧಿಕಾರಿಯಾಗಿ ಹೋದರೂ ತಾಯಿ, ಹುಟ್ಟಿದ ಮನೆಯನ್ನು ಮರೆಯಲಾರೆ ಎಂದು ಹೇಳುವಾಗ ಅನಿತಾ ಅವರ ಕಣ್ಣಂಚಿನಲ್ಲಿ ಆನಂದಬಾಷ್ಪ ಇಣುಕಿತು. ಛಲ, ದೃಢ ವಿಶ್ವಾಸ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅನಿತಾ ಲಕ್ಷ್ಮಿ ಅವರೇ ಸಾಕ್ಷಿ.

ಓದಿ ವಿದ್ಯಾವಂತರಾಗಿ ಒಳ್ಳೆಯ ಹುದ್ದೆ ಅಲಂಕರಿಸಲಿ ಎಂದು ಪೋಷಕರು ಮಕ್ಕಳಿಗೆ ಎಲ್ಲ ಸವಲತ್ತುಗಳನ್ನು ಒದಗಿಸುತ್ತಾರೆ. ಆದರೆ ಬಡತನದಲ್ಲಿ ಬೆಂದು ಯಾರ ಸಹಾಯವಿಲ್ಲದೆ ಕಠಿಣ ಅಭ್ಯಾಸ ಮಾಡಿ ಸಾಧನೆ ಮಾಡಿರುವ ಅನಿತಾಲಕ್ಷ್ಮಿ ಎಲ್ಲರಿಗೆ ಮಾದರಿಯಾಗಿದ್ದಾರೆ.

 Thanks to Prajavani Paper.

No comments: