ಮೇ ೧೫ರ ಮಂಗಳವಾರ ರಾತ್ರಿ ಕಚೇರಿಯಿಂದ ಕಾರಿನಲ್ಲಿ ಮನೆಯತ್ತ ಹೊರಟಿದ್ದ ಕೆ.ಎ.ಎಸ್. ಅಧಿಕಾರಿ ಎಸ್.ಪಿ.ಮಹಾಂತೇಶ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲು ಮಾಡಲಾಯಿತು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಅಂದ ಮೇ ೨೦ ರ ಬೆಳಗಿನ ಜಾವ ೪ಗಂಟೆಯ ಸುಮಾರು ಮಹಾಂತೇಶ್ ಅವರು ಕೊನೆಯುಸಿರೆಳೆದರು. ಈ ಸುದ್ದಿ ನಾಡಿನಾದ್ಯಂತ ಕಾಳ್ಗಿಚ್ಚಿನಂತೆ ಹರಡಿದೆ. ನಾಡಿನೆಲ್ಲೆಡೆ ಈ ವಿಷಯವಾಗಿ ಚರ್ಚೆ ನಡೆದಿದೆ. ಪ್ರಾಮಾಣಿಕ ಅಧಿಕಾರಿ ಮಹಾಂತೇಶ್ ಅವರ ಹತ್ಯೆ ಲ್ಯಾಂಡ್ ಮಾಫಿಯಾದವರಿಂದ ನಡೆದಿದೆ ಎಂಬ ವದಂತಿ ಎಲ್ಲೆಡೆ ಹರಡಿ ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡಿರುವ ಈ ಘಟನೆ ವ್ಯಾಪಕ ಖಂಡನೆಗೆ ಒಳಗಾಗಿದೆ. ಪ್ರಾಮಾಣಿಕ ಅಧಿಕಾರಿಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು. ಆದಾಗ್ಯೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಆಡಳಿತದಲ್ಲಿರುವ ಬೆರಳೆಣಿಕೆಯಷ್ಟು ಪ್ರಾಮಾಣಿಕ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಪ್ರಾಮಾಣಿಕತೆಗೆ ಇಂದು ಬೆಲೆ ಇಲ್ಲ ಎಂಬುದನ್ನು ಈ ಘಟನೆ ನಿರೂಪಿಸುತ್ತಿದೆ. ಜೊತೆಗೆ ಅಂಥ ಅಧಿಕಾರಿಗಳು ಸ್ವರಕ್ಷಣಾ ತಂತ್ರಗಳನ್ನು ಕಲಿತು ವಿಶೇಷ ತರಬೇತಿ ಪಡೆದು ಕರ್ತವ್ಯ ನಿರ್ವಹಿಸುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ. ಆದರೆ ಯಾವುದೇ ಕಾರಣಕ್ಕೂ ಪ್ರಾಮಾಣಿಕ ಅಧಿಕಾರಿಗಳು ನೈತಿಕಸ್ಥೈರ್ಯ ಕಳೆದುಕೊಳ್ಳಬಾರದು.
ಜ್ಞಾನಮುಖಿ
No comments:
Post a Comment