Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 30 August 2014

ಅಪ್ರತಿಮ ಗಣಿತಜ್ಞ - ಪಾಲ್ ಏರ್ಡಿಶ್



    ಆಂಡ್ರ್ಯೂ ವಸೋನಿ, ತನ್ನ ಹದಿನಾಲ್ಕನೇ ಎಳವೆಯಲ್ಲೇ ದೊಡ್ಡ ದೊಡ್ಡ ಗಣಿತ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಿಡಿಸಿ ಸುತ್ತ ನೆರೆದಿದ್ದ ಗೆಳೆಯರನ್ನು ತಬ್ಬಿಬ್ಬುಗೊಳಿಸುತ್ತಿದ್ದ ಕಾಲ. ಅವನ ತಂದೆಗೂ ತನ್ನ ಮಗ ಮಹಾಮೇಧಾವಿ. ದೊಡ್ಡ ಹೆಸರನ್ನು ಮಾಡುತ್ತಾನೆ ಎಂದು ಪೂರ್ತಿ ನಂಬಿಕೆ ಬಂದು ಬಿಟ್ಟಿತ್ತು. ಆತ ಅದೇ ಊರಲ್ಲಿದ್ದ ಇನ್ನೊಬ್ಬ ಹೆಸರುವಾಸಿ ಹುಡುಗನನ್ನು ತನ್ನ ಮಗನಿಗೆ ಪರಿಚಯ ಮಾಡಿಸಬೇಕೆಂದುಕೊಂಡ. ಪಂಡಿತ ಮೆದುಳಿನ ಇಬ್ಬರು ಹುಡುಗರ ಪರಸ್ಪರ ಕುಶಲೋಪರಿಗೆ ವೇದಿಕೆ ಸಿದ್ಧವಾಯಿತು. ಒಂದು ದಿನ ಆ ಇನ್ನೊಬ್ಬ ಹುಡುಗ, ವಸೋನಿಯ ಅಪ್ಪನ ಚಪ್ಪಲಂಗಡಿಗೆ ಬಂದು ವಸೋನಿಯನ್ನು ಭೇಟಿಯಾದ.
"ಯಾವುದಾದರೂ ನಾಲ್ಕು ಅಂಕಿಗಳಿರುವ ಸಂಖ್ಯೆ ಹೇಳು" - ಬಂದು ಕೂತವನ ಪ್ರಶ್ನೆ.
"೨೫೩೨" - ವಸೋನಿಯ ಉತ್ತರ.
"ಸರಿ, ಅದರ ವರ್ಗ ೬೪೧೧೦೨೪. ಕ್ಷಮಿಸು. ಅದರ ಘನವನ್ನು ಈಗ ಕ್ಷಣಾರ್ಧದಲ್ಲಿ ಹೇಳಲು ಆಗ್ತಾ ಇಲ್ಲ. ವಯಸ್ಸಾಯ್ತಲ್ವೇ! ಇರಲಿ, ಪೈಥಾಗೋರಸನ ಪ್ರಮೇಯಕ್ಕೆ ಇರುವ ಸಾಧನೆಗಳಲ್ಲಿ ಎಷ್ಟು ಗೊತ್ತು ನಿನಗೆ?" ಅತಿಥಿಯ ಮರುಪ್ರಶ್ನೆ.
ವಸೋನಿ "ಒಂದು" ಎಂದು ಹೇಳುವ ಮೊದಲೇ ಆ ಹುಡುಗ, "ನನಗೆ ಮೂವತ್ತೇಳು ಸಾಧನೆಗಳು ಗೊತ್ತು!" ಅಂತ ಹೇಳಿ ಮುಂದಿನ ಪ್ರಶ್ನೆಗೆ ಹಾರಿದ. ಅದಕ್ಕೂ ವಸೋನಿ ಪೆದ್ದುಪೆದ್ದಾಗಿ ಉತ್ತರ ಗೊತ್ತಿಲ್ಲ ಎಂದು ಗೋಣು ಅಲ್ಲಾಡಿಸಿದಾಗ, ಆ ಹುಡುಗ ಉನ್ನತ ಸ್ತರದ ಗಣಿತವನ್ನೊಳಗೊಂಡ ಒಂದು ಪ್ರಮೇಯವನ್ನು ಹಂತಹಂತವಾಗಿ ಬಿಡಿಸಿ ಅದರ ಅರ್ಥ ಹೇಳಿ ವಿವರವಾಗಿ ಕಲಿಸಿದ. "ಸರಿ, ನಾನೀಗ ಓಡ್ಬೇಕು" ಅಂತ ಹೇಳಿ ಮುಂದೆ ಕ್ಷಣಮಾತ್ರವೂ ಅಲ್ಲಿ ನಿಲ್ಲದೆ ಅಂಗಡಿಯಿಂದ ಹೊರಗೋಡಿ ಕಣ್ಮರೆಯಾದ!

          ಇಷ್ಟು ದಿನ, ಜಗತ್ತಿನ ಸರ್ವಶ್ರೇಷ್ಟ ವಿದ್ವಾಂಸನಾಗುತ್ತೇನೆ ಅಂತ ಆಗಾಗ ಕೋಡು ಮೂಡಿತೇ ಎಂದು ಪರೀಕ್ಷಿಸಿಕೊಂಡು ಬೀಗುತ್ತಿದ್ದ ವಸೋನಿಗೆ ಹೊಂಡ ತೋಡಿ ಹೂತುಕೊಳ್ಳುವಷ್ಟು ಆಘಾತವಾಗಿತ್ತು! ಆ  ಹುಡುಗನೆದುರಲ್ಲಿ ತನ್ನ ಪಾಂಡಿತ್ಯ ಗುಲಗಂಜಿಯಷ್ಟು ಇಲ್ಲವಲ್ಲ ಅಂತ ನಾಚಿಕೆ, ಸಿಟ್ಟು ಒತ್ತೊತ್ತಿ ಬಂದವು. ಗಣಿತದ ಮಹಾಪಂಡಿತನಾಗಿ ಜಗತ್ತು ಗೆಲ್ಲುತ್ತೇನೆ ಅಂತ ಶಪಥ ಹಾಕಿದ್ದ ವಸೋನಿಯನ್ನು ಹೆಡೆಮುರಿ ಕಟ್ಟಿ ಕೂರ್‍ಇಸಿದ್ದ `ಆ ಹುಡುಗ' - ನಮ್ಮನಿಮ್ಮಂತಹ ಜನಸಾಮಾನ್ಯರಿಗೆ ಮಾತ್ರವಲ್ಲ ಕಾಲೇಜಿನಲ್ಲಿ ಗಣಿತ-ವಿಜ್ಞಾನಗಳನ್ನು ಕಲಿಯುವ, ಕಲಿಸುವವರಿಗೂ ತಕ್ಕಷ್ಟು ಪರಿಚಯವಿಲ್ಲದ ಅಜ್ಞಾತ ಪಂಡಿತೋತ್ತಮ - ಪಾಲ್ ಏರ್ಡಿಶ್

        ಎಳವೆಯಲ್ಲೇ ಎವರೆಸ್ಟ್ ಶಿಖರ

            ಮೂರು ವರ್ಷದ ಬಾಲಕನಿದ್ದಾಗ ಏರ್ಡಿಶ್‍ಗೆ ದಿನರಾತ್ರಿ ಸಂಖ್ಯೆಗಳದ್ದೇ ಧ್ಯಾನ. ಯಾರಾದರೂ ತುಂಟ ಮರೀ ಎಂದು ಎತ್ತಿಕೊಂಡು ಮುದ್ದುಮಾಡಿದರೆ ಏರ್ಡಿಶ್ ಹೇಳುತ್ತಿದ್ದುದ್ದು - "ನಿಮ್ಮ ವಯಸ್ಸು ಹೇಳಿ, ಇದುವರೆಗೆ ಎಷ್ಟು ಸೆಕೆಂಡುಗಳ ಕಾಲ ಬದುಕಿದ್ದೀರೆಂದು ಹೇಳುತ್ತೇನೆ!" ನಾಲ್ಕು ವರ್ಷದವನಿದ್ದಾಗ ಏರ್ಡಿಶ್‍ಗೆ ಒಂದು ದಿನ ಥಟ್ಟನೇ ಜ್ಞಾನೋದಯವಾಯಿತು. ಕೂಡಲೇ ಅಮ್ಮನ ಬಳಿ ಓಡಿಹೋಗಿ "ನೂರರಿಂದ ಇನ್ನೂರೈವತ್ತು ತೆಗೆದರೆ ಏನು ಉಳಿಯುತ್ತೆ ಗೊತ್ತೆ? ಸೊನ್ನೆಯ ಕೆಳಗೆ ನೂರೈವತ್ತು!" ಎಂದು ಹೇಳಿ ವಿಸ್ಮಯ ಮೂಡಿಸಿದ. ಇಡೀ ಹಂಗೇರಿ ದೇಶದ ಚರಿತ್ರೆಯಲ್ಲೇ ಅತ್ಯಂತ ಚಿಕ್ಕ ವಯಸ್ಸಿಗೆ ಪಿಎಚ್‍ಡಿ ಮುಗಿಸಿದವನು ಎಂಬ ಕೀರ್ತಿಗೆ ಪಾತ್ರನಾದವನು ಈ ಏರ್ಡಿಶ್. ಆ ಯಾದಿಯಲ್ಲಿ ಎರಡನೆಯವನಾಗಿ ಬಂದವನು ಏರ್ಡಿಶ್‍ನ ಗೆಳೆಯ, ಒಂದಾನೊಂದು ಕಾಲದಲ್ಲಿ ಏರ್ಡಿಶ್‍ನ ಬುದ್ಧಿಮತ್ತೆಗೆ ಬೆರಗಾಗಿ ಹೊಟ್ಟೆಕಿಚ್ಚುಪಟ್ಟಿದ್ದ ಅದೇ ಆಂಡ್ರ್ಯೂ ವಸೋನಿ.

             ಏರ್ಡಿಶ್ ಬದುಕಿನಲ್ಲಿ ವೈರುಧ್ಯಗಳು, ವಿರೋಧಾಭಾಸಗಳಿಗೆ ಜಾಗವೇ ಇರಲಿಲ್ಲ. "ನಾನೀಗ ಓಡಬೇಕು" ಅಂತ ಅವನು ಹೇಳಿದನೆಂದರೆ ಮುಂದಿನ ಕ್ಷಣದಲ್ಲೇ ಓಡುತ್ತಿರುವ ಏರ್ಡಿಶ್‍ನನ್ನು ನೋಡಬಹುದಾಗಿತ್ತು. ಮಿಕ್ಕ ಗೆಳೆಯರು ಹುಡುಗಿಯರನ್ನು ನೋಡಲು ಚಾನ್ಸ್ ಸಿಗುತ್ತದೆ ಎಂಬ ಕಳ್ಳಬಯಕೆಗಳನ್ನಿಟ್ಟುಕೊಂಡು ಸ್ಕೇಟಿಂಗ್ ಮಾಡಲು ಹೋಗುತ್ತಿದ್ದರೆ, ಏರ್ಡಿಶ್ ಸ್ಕೇಟಿಂಗ್ ಮಾಡುತ್ತಿದ್ದದ್ದು ಅದು ತನಗೆ ಇಷ್ಟ ಎನ್ನುವ ಕಾರಣಕ್ಕೆ. ಯಾರಾದರೂ ಎದುರು ಸಿಕ್ಕಿ "ಹೇಗಿದ್ದೀಯ ಏರ್ಡಿಶ್?" ಅಂತ ಕುಶಲ ಕೇಳಿದರೆ ಈ ಆಸಾಮಿ, ತಾನು ಹೇಗಿದ್ದೇನೆ ಅಂತ ವಿವರವಾಗಿ ಹೇಳುವುದಕ್ಕೆ ನಿಂತುಬಿಡುತ್ತಿದ್ದ!

         ಅವನಿಗೆ ಗಣಿತ - ಬೇರೆಯವರೆದುರು ಗತ್ತಿನಿಂದ ಬೀಗಲು ಬೇಕಾದ ಸಾಧನವಾಗಿರಲಿಲ್ಲ. ಗಣಿತ ಅವನ ಜೀವನವನ್ನು ನಿಜವಾಗಿಯೂ ಹಬ್ಬಿ ಬೆಳೆದು ಅಪೋಶನ ತೆಗೆದುಕೊಂಡುಬಿಟ್ಟಿತ್ತು. ಮೊದಮೊದಲು ಹೊಟ್ಟೆಕಿಚ್ಚುಪಟ್ಟರೂ ಬಳಿಕ ಏರ್ಡಿಶ್‍ನ ನೆಚ್ಚಿನ ಗೆಳೆಯನಾದ ವಸೋನಿಯ್ಗೆ "ಗಣಿತಜ್ಞನಾಗಿ ಜೀವಮಾನವಿಡೀ ಗಣಿತವನ್ನೇ ಉಸಿರಾಡುತ್ತ ಬದುಕಲೇ ಅಥವಾ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಸೇರಿ ಇಂಜಿನಿಯರಾಗಿ ಚೆನ್ನಾಗಿ ದುಡ್ದು ಮಾಡಲೇ" ಎಂಬ ಜೀವನ್ಮರಣದ ಜಿಜ್ಞಾಸಕ್ಕೆ ಬಂದಾಗ ಏರ್ಡಿಶ್ "ನೀನು ಇಂಜಿನಿಯರಿಂಗ್ ಕಾಲೇಜಿಗೆ ಹೋಗು. ಅಲ್ಲಿ ಗೇಟ್ ಪಕ್ಕದಲ್ಲಿ ಗನ್ ಹಿಡಿದು ಕಾಯುತ್ತೇನೆ. ನೀನು ಬರುತ್ತಲೇ ಶೂಟ್ ಮಾಡಿ ಕತೆ  ಮುಗಿಸುತ್ತೇನೆ." ಎಂದು ಪರಿಹಾರ ಹೇಳಿದ ಮೇಲೆ, ಬೆಟ್ಟದಂತಹ ಸಮಸ್ಯೆ ನೀರಿನಂತೆ ಕರಗಿಹೋಯಿತು!

            ಯುರೋಪಿನ ಭೂಪಟದಲ್ಲಿ ಅಕ್ಕಿಕಾಳಷ್ಟೂ ದೊಡ್ಡದಲ್ಲದ ಹಂಗೇರಿ ಎಂಬ ದೇಶ ಗಣಿತ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತ ಗಜನಡಿಗೆ ಮಾಡುತ್ತಿದ್ದ ಸಮಯ ಅದು. ಜಗತ್ತು ಕಂಡ ಮಹಾಮೇಧಾವಿ ಗಣಿತಜ್ಞರೆಲ್ಲ ಹೊರಬರುತ್ತಿದ್ದದ್ದು ಈ ಪುಟ್ಟ ಕಾರ್ಖಾನೆಯಿಂದಲೇ. ಏರ್ಡಿಶ್ ಹುಟ್ಟಿದ್ದು ೧೯೧೩ರ ಮಾರ್ಚ್ ೨೬ರಂದು, ಹಂಗೆರಿಯ ರಾಜಧಾನಿ ಬುಡಾಪೆಸ್ಟಿನಲ್ಲಿ. ಮೂರು ಮತ್ತು ಐದು ವರ್ಷದ ಅಕ್ಕಂದಿರು ಏರ್ಡಿಶ್ ಹುಟ್ಟುವ ಹೊತ್ತಿಗೆ ಸ್ಕಾರ್ಲೆಟ್ ಜ್ವರ ಬಂದು ತೀರಿಕೊಂಡರು. ಇನ್ನು ಬದುಕುಳಿದ ಒಂದು ಮಗುವನ್ನಾದರೂ ನಿರೋಗಿಯಾಗಿ ಬೆಳೆಸಬೇಕೆಂದು ತಾಯಿ ಅನ್ನಾ ಪಟ್ಟ ಪಡಿಪಾಟಲು ಅಪಾರ. ಅಪ್ಪ ಲಾಜೋ ಏರ್ಡಿಶ್ ಮೊದಲ ಮಹಾಯುದ್ಧದ ಸಮಯದಲ್ಲಿ ಸೈನ್ಯ ಸೇರಿ ದೇಶಕ್ಕಾಗಿ ಹೋರಾಡಲು ಹೋಗಿ ರಷ್ಯನ್ನರ ಕೈಗೆ ಸಿಕ್ಕಿ ಸೈಬೇರಿಯ ಜೈಲಿನಲ್ಲಿ ಚಳಿಗಾಳಿಯಲ್ಲಿ ನಲುಗಿ ಮರಳಿ ಹಂಗೆರಿಗೆ ಬಂದಾಗ ಜೀವಚ್ಚವವಾಗಿಬಿಟ್ಟಿದ್ದ. ಗಣಿತ ಶಿಕ್ಷಕರಾಗಿದ್ದ ತಂದೆ ತಾಯಿಗಳಿಂದ ಏರ್ಡಿಶ್ ಅನುವಂಶಿಯವಾಗಿಯೇ ಗಣಿತಾಸಕ್ತಿ ಪಡೆದನೋ ಏನೋ. ಬಹಳ ಮುತುವರ್ಜಿ ವಹಿಸಿ ಸಾಕು ಸಲುಹಿದ ತಾಯಿಯೇ ಏರ್ಡಿಶ್‍ನ ಮೊದಲ ಗುರು.


ಹರಿಯತೊಡಗಿದ ಗಂಗೆ

     ತನಗಿಂತ ಚಿಕ್ಕದಾದ ಯಾವುದೇ ಸಂಖ್ಯೆಯಿಂದಲೂ (೧ನ್ನು ಹೊರತುಪಡಿಸಿ) ನಿಶ್ಯೇಷವಾಗಿ ಭಾಗವಾಗಿ ಹೋಗದ ಸ್ವಾಭಾವಿಕ ಸಂಖ್ಯೆಯನ್ನು ಪರಮ ಸಂಖ್ಯೆ (ಪ್ರೈಮ್ ನಂಬರ್) ಎಂದು ಕರೆಯುತ್ತಾರೆ. (ಅವಿಭಾಜ್ಯ ಸಂಖ್ಯೆ ಎಂಬ ಪಾರಂಪರಿಕ ನಾಮವನ್ನು ಕೈಬಿಟ್ಟು ಅದರ ಮಹತ್ವವನ್ನು ಧ್ವನಿಸುವ ಹೊಸ ಶಬ್ದ ಇದಾಗಿದೆ) ೧ಕ್ಕಿಂತ ದೊಡ್ಡದಾದ ಯಾವುದೇ ಒಂದು ಸ್ವಾಭಾವಿಕ ಸಂಖ್ಯೆ ಮತ್ತು ಅದರ ಎರಡುಪಟ್ಟು ಇರುವ ಇನ್ನೊಂದು ಸಂಖ್ಯೆಯನ್ನು ತೆಗೆದುಕೊಂಡಾಗ, ಆ ಎರಡು ಸಂಖ್ಯೆಗಳ ನಡುವೆ ಒಂದಾದರೂ ಪರಮಸಂಖ್ಯೆ ಇದ್ದೇ ಇರುತ್ತದೆ ಎನ್ನುವದು ಚೆಬಿಶೆಫ್ ಎಂಬುವನು ವ್ಯಕ್ತಪಡಿಸಿದ ಗಣಿತಾನುಮಾನ. (ಗಣಿತಾನುಮಾನ ಎಂದರೆ ಸಾಧನೆಯ ಸಿದ್ಧಿ ದೊರೆತು `ಪ್ರಮೇಯ'ವೆಂಬ ಮೋಕ್ಷವನ್ನು ಇನ್ನೂ ಪಡೆಯದೆ ಅಲೆಯುವ ಅತೃಪ್ತ ಆತ್ಮ!) ಏರ್ಡಿಶ್ ಬುಡಾಪೆಸ್ಟಿನ ಸಾಯನ್ಸ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಈ ಅನುಮಾನಕ್ಕೆ ಸಾಧನೆಯ ಕಿರೀಟ ತೊಡಿಸಿ, ಹಲವಾರು ವರ್ಷಗಳ ಕಾಲ ಉತ್ತರವಿಲ್ಲದೆ ನಿಂತಿದ್ದ ಸಮಸ್ಯೆಗೆ ಮುಕ್ತಿ ಕರುಣಿಸಿದ. ಏರ್ಡಿಶ್ ಬರೆದ ಸಾಧನೆಯನ್ನು ಅರ್ಥಮಾಡಿಕೊಳ್ಳಲು ವಿಶ್ವವಿದ್ಯಾಲಯದ ಪ್ರೊಫೆಸರುಗಳು ರಜೆ ತೆಗೆದುಕೊಂಡು ದಿನವಿಡೀ ಕೂತು ಓದಿಓದಿ ತಲೆಕೆರೆದುಕೊಳ್ಳಬೇಕಾಯಿತು! ಜಗತ್ತಿನ ದೊಡ್ದದೊಡ್ಡ ಗಣಿತಜ್ಞರಿಗೆ ತಲೆನೋವಾಗಿದ್ದ ಸಮಸ್ಯೆಯನ್ನು ಲೀಲಾಜಾಲವಾಗಿ ಹಲಸಿನಹಣ್ಣು ಬಿಡಿಸಿಟ್ಟಂತೆ ಬಿಡಿಸಿ ಪರಿಹರಿಸಿದ ಹದಿನಾರರ ಹುಡುಗ ಇಪ್ಪತ್ತು ತುಂಬುವ ಮೊದಲೇ ಡಾಕ್ಟರೇಟ್ ಪಡೆದು ಹೊರಗೆ ಬಂದ!
            ಏರ್ಡಿಶ್ ಜೀವನದಲ್ಲಿ ಗಣಿತ ಬಿಟ್ಟರ ಬೇರೆ ಏನೂ ಬೇಕಾಗಿರಲಿಲ್ಲ. ತಾನು ಇಪ್ಪತ್ತೈದೋ ಇಪ್ಪಾತ್ತಾರೋ ಇದ್ದಾಗ ನೋಡಿದ ಒಂದು ಸಿನಿಮಾ ಬಿಟ್ಟರೆ ಏರ್ಡಿಶ್ ಎಂದೂ ಸಿನಿಮಾ ನೋಡಲೇ ಇಲ್ಲ. ನಾಟಕಗಳಿಗೆ ಹೋಗಲಿಲ್ಲ. ಕತೆ, ಕಾದಂಬರಿಗಳನ್ನು ಕಣ್ಣೆತ್ತಿ ಕೂಡ ನೋಡುವ ಆಸಕ್ತಿ ತೋರಿಸಲಿಲ್ಲ. ಅಷ್ಟೆಲ್ಲ ಯಾಕೆ, ಒಂದು ವಾರ ಮನೆಯಲ್ಲೇ ನ್ಮಲಗಿ ರೆಸ್ಟ್ ತೆಗೆದುಕೊಳ್ಲಬೇಕಾಗುತ್ತದೆ ಎಂಬ ಕಾರಣಕ್ಕೆ ಇಳಿವಯಸ್ಸಿನಲ್ಲಿ ಕಣ್ಣಿನ ಕ್ಯಾಟರಾಕ್ಟ್ ಆಪರೇಷನ್ ಕೂಡ ಮಾಡಿಸಿಕೊಳ್ಳದೇ ಮೊಂಡು ಹಟ ಹಿಡಿದುಬಿಟ್ಟಿದ್ದರು. ಕೂತಲ್ಲಿ ನಿಂತಲ್ಲಿ ಗಣಿತವನ್ನೇ ಧೇನಿಸುತ್ತಿದ್ದ ಈ ಪಂಡಿತನಿಗೆ ಜೀವನದಲ್ಲಿ ಒಮ್ಮೆಯೂ ಹೆಂಡತಿಯ ಸಾಂಗತ್ಯ ಬೇಕು ಅಂತ ಕೂಡ ಅನಿಸಲಿಲ್ಲವಲ್ಲ ಅಂತ ಏರ್ಡಿಶ್‍ ಗೆಳೆಯರಿಗೆ ಆಶ್ಚರ್ಯ.

                ೧೯೩೮ರಲ್ಲಿ ಹಂಗೆರಿಯಲ್ಲಿ ಎರಡನೆ ಮಹಾಯುದ್ಧದ ಬಿಸಿ ಏರುತ್ತ ಹೋದ ಹಾಗೆ, ಏರ್ಡಿಶ್ ತನ್ನ ಓರಗೆಯ ಗೆಳೆಯರು ಮಾಡಿದಂತೆಯೇ ಗಂಟುಮೂಟೆ ಕಟ್ಟಿಕೊಂಡು ಪಲಾಯನ ಮಾಡಿ ಬೇರೆ ದೇಶಗಳಲ್ಲಿ ಆಶ್ರಯ ಪಡೆಯಬೇಕಾಗಿತ್ತು. ಈ ಅವಕಾಶ ಕಳೆದುಕೊಳ್ಳಲು ಬಯಸದ ಅಮೆರಿಕದ ಪ್ರಿನ್ಸ್‍ಟನ್ನಿನ ಉನ್ನತ ಅಧ್ಯಯನ ಸಂಸ್ಥೆ ಏರ್ಡಿಶ್‍ಗೆ ಮುಕ್ತ ಆಹ್ವಾನ ನೀಡಿತು. ಅಮೆರಿಕೆಗೆ ಹೋದ ಏರ್ಡಿಶ್ ಅಲ್ಲಿ ಒಂದೂವರೆ ವರ್ಷ ಇದ್ದು ಎಷ್ಟು ಸಾಧ್ಯವೋ ಅಷ್ಟು ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು, ಅಲ್ಲಿ ನಡೆಯುತ್ತಿದ್ದ ಗಣಿತ ವಿಚಾರ ಸಂಕಿರಣಗಳಿಗೆ ಹಾಜರಿ ಹಾಕಿ ಅಲ್ಲಿನ ಉತ್ತಮ ಗಣಿತಜ್ಞರ ಜೊತೆ ಗಹನವಾದ ಚರ್ಚೆ-ಸಂವಾದ ನಡೆಸುತ್ತ ಉನ್ನತ ಸ್ತರದ ಸಂಶೋಧನ ಲೇಖನಗಳನ್ನು ಬರೆಯಲು ತೊಡಗಿದರು.


ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

            ೧೯೫೪ - ಏರ್ಡಿಶ್ ಜೀವನದಲ್ಲಿ ಬಹಳ ಮಹತ್ವದ ವರ್ಷ. ಆ ವರ್ಷ ಅವರಿಗೆ ನೆದರ್‌ಲ್ಯಾಂಡಿನ ಆಮ್‍ಸ್ಟರ್‌ಡ್ಯಾಮಿನಲ್ಲಿ ನಡೆಯಲಿದ್ದ ಒಂದು ಅಂತಾರಾಷ್ಟ್ರೀಯ ಗಣಿತ ಸಮ್ಮೇಳನದಲ್ಲಿ ಭಾಗವಹಿಸಲು ಕರೆ ಬಂದಿತು. ವೀಸಾ-ಪಾಸ್‍ಪೋರ್ಟುಗಳ ಕೆಲಸ ಮುಗಿಸಲು ಪಾಸ್‍ಪೋರ್ಟ್ ಆಫೀಸನ್ನು ಸಂಪರ್ಕಿಸಿದ ಏರ್ಡಿಶ್‍ಗೆ ಆಘಾತ ಕಾದಿತ್ತು. ಅಮೆರಿಕದ ವೀಸಾ ಅವಧಿಯನ್ನು ವಿಸ್ತರಿಸಲು ಒಪ್ಪದ ಇಮಿಗ್ರೇಶನ್ ಅಧಿಕಾರಿಗಳು, ಆಮ್‍ಸ್ಟರ್‌ಡ್ಯಾಮಿಗೆ ಹೋದರೆ ಮತ್ತೆ ಅಮೆರಿಕಕ್ಕೆ ಮರಳಲು ಬಿಡುವುದಿಲ್ಲ ಎಂದು ಹಟ ಹಿಡಿದು ಸುಖಾಸುಮ್ಮನೆ ಸತಾಯಿಸತೊಡಗಿದರು. ಏರ್ಡಿಶ್ ಮುಂದೆ ಇದ್ದ ಆಯ್ಕೆಗಳು ಎರಡೇ - ಅಮೆರಿಕದ ಮಾತಿಗೆ ತಲೆಬಾಗಿ ನಾತ್ರೆ ದಾಮಿನ ತನ್ನ ಕೆಲಸ ಮತ್ತು ಗ್ರೀನಕಾರ್ಡನ್ನು ಉಳಿಸಿಕೊಂಡು ಸುಮ್ಮನಿದ್ದುಬಿಡುವುದು ಅಥವಾ ಅಮೆರಿಕವನ್ನು ಧಿಕ್ಕರಿಸಿ ಆಮ್‍ಸ್ಟರ್‌ಡ್ಯಾಮಿಗೆ ಹೋಗುವುದು. ನನ್ನ ತಿರುಗಾಟದ ಪ್ರವೃತ್ತಿಯನ್ನು ಕಸಿದುಕೊಳ್ಳಲು ಈ ಅಂಕಲ್ ಸ್ಯಾಮ್ (ಅಮೆರಿಕವನ್ನು ಅಂಕಲ್ ಸ್ಯಾಮ್ ಎಂದು ಕರೆಯುತ್ತಾರೆ) ಯಾರು ಎಂದು ಏರ್ಡಿಶ್ ಅಮೆರಿಕದ ಧಿಮಾಕಿಗೆ ತಿರುಗೇಟು ಕೊಡುವಂತೆ ಆ ದೇಶವನ್ನು ಅದು ಕೊಟ್ಟ ಎಲ್ಲ ಪದವಿ-ಸ್ಥಾನಮಾನಗಳ ಜೊತೆ ಬೈರಾಗಿಯಂತೆ ತ್ಯಜಿಸಿ, ಗಣಿತ ಸಮ್ಮೇಳನಕ್ಕೆ ಹೊರಟರು. ಮತ್ತೆ ಅಮೆರಿಕ ಬಂದು ಕಾಲು ಹಿಡಿಯುವವರೆಗೆ ಆ ದೇಶದ ಮರ್ಜಿ ಹಿಡಿದು ಅಡಿಯಾಳಾಗಿ ಬದುಕುವುದಿಲ್ಲ ಎಂದು ಸೆಡ್ಡುಹೊಡೆದು ಹೇಳಿದರು.

                ತಾಯ್ನಾಡು ಹಂಗೆರಿಯಿಂದ ದೂರವಾಗಿ, ಯಾವೊಂದು ದೇಶದಲ್ಲೂ ನೆಲೆನಿಲ್ಲದೆ ಪರಿವ್ರಾಜಕನಂತೆ ದೇಶದಿಂದ ದೇಶಕ್ಕೆ ತಿರುಗುವ ಸಂತನ ಬದುಕು ಅಲ್ಲಿಂದ ಶುರುವಾಯಿತು. ಕುವೆಂಪು ಹೇಳಿದ "ಮನೆಯನೆಂದೂ ಕಟ್ಟದಿರು ಕೊನೆಯನೆಂದೂ ಮುಟ್ಟದಿರು" ಅನ್ನುವ ಅನಿಕೇತನ ತತ್ವಕ್ಕೆ ನೂರಕ್ಕೆ ನೂರು ಹೊಂದಿಕೆಯಾಗುವ ಮನುಷ್ಯ. ಈ ಜಗತ್ತಿನಲ್ಲಿ ಬಾಳಿಹೋಗಿದ್ದರೆ ಅದು ಏರ್ಡಿಶ್. ತನ್ನ ನಲವತ್ತನೆ ವಯಸ್ಸಿನಲ್ಲಿ ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಲೋಕಸಂಚಾರ ಮಾಡಲು ತೊಡಗಿದ ಏರ್ಡಿಶ್ ಅಖಂಡ ನಲವತ್ತೈದು ವರ್ಷ ಎಲ್ಲೂ ನಿಲ್ಲದೆ ತಿರುಗಿದರು. ಒಂದು ವಿಶ್ವವಿದ್ಯಾಲಯದಿಂದ ಇನ್ನೊಂದಕ್ಕೆ, ಒಂದು ಗಣಿತ ಸಂಕಿರಣದಿಂದ ಮತ್ತೊಂದಕ್ಕೆ ಎನ್ನುತ್ತಾ ತಿರುಗಿದ ಈ ಯೋಗಿಗೆ ತನ್ನ ಉಳಿದ ಜೀವನ ಪೂರ್ತಿ ಒಂದು ನಿರ್ದಿಷ್ಟವಾದ ಮನೆಯಾಗಲೀ ಅಡ್ರೆಸ್ ಆಗಲೀ ಇರಲಿಲ್ಲ. "ನಿಮಗೆ ಏರ್ಡಿಶ್ ಅವರನ್ನು  ಭೇಟಿಯಾಗಬೇಕೆ? ನೀವೆಲ್ಲಿದ್ದೀರೋ ಅಲ್ಲೇ ಇದ್ದು ಕಾಯಿರಿ. ಒಂದಲ್ಲ ಒಂದು ದಿನ ಆ ಮನುಷ್ಯ ನೀವಿರುವ ಊರನ್ನು ಹಾದುಹೋಗುತ್ತಾರೆ". ಎಂಬ ಮಾತು ಗಣಿತಪ್ರಪಂಚದಲ್ಲಿ ಪ್ರಸಿದ್ಧವಾಗಿತ್ತು!

        ಏರ್ಡಿಶ್ ತನ್ನ ಜೊತೆ ಒಯ್ಯುತ್ತಿದ್ದು ಎರಡೇ ಎರಡು ಬ್ಯಾಗುಗಳನ್ನು. ಅವೆರಡೂ ಎಂದಿಗೂ ತುಂಬುತ್ತಿರಲಿಲ್ಲ. ಎರಡೂ ಸದಾಕಾಲವೂ ಅರ್ಧ ತುಂಬಿ ಅರ್ಧ ಖಾಲಿ ಇರುತ್ತಿದ್ದವು. ಯಾರಾದರೂ "ಅಲ್ಲಾ ಏರ್ಡಿಶ್ ಅವರೆ, ಹೀಗೆ ಎರಡು ಅರ್ಧ ಬ್ಯಾಗುಗಳನ್ನು ಹೊತ್ತುಕೊಂಡು ತಿರುಗುವುದಕ್ಕಿಂತ ಒಂದು ತುಂಬಿದ ಬ್ಯಾಗು ಇಟ್ಟುಕೋಬಹುದಲ್ಲ!" ಎಂದರೆ, ಕೇಳಿದವರಷ್ಟೇ ಆಶ್ಚರ್ಯಪಡುವ ಸರದಿ ಏರ್ಡಿಶ್‍ರದೂ ಆಗುತ್ತಿತ್ತು. "ಹೌದಲ್ಲ! ಅಂತ ತನಗೆ ತಾನೇ ಹೇಳಿಕೊಂದು ನಗುತ್ತಿದ್ದರು. ಆದರೆ ಮತ್ತೆ ವಿದೇಶ ಪ್ರಯಾಣಕ್ಕೆ ನಿಂತಾಗ ಅವರ ಕೈಯಲ್ಲಿ ಅದು ಹೇಗೋ ಆ ಎರಡು ಬ್ಯಾಗುಗಳೂ ಬಂದು ಕೂರುತ್ತಿದ್ದವು!


ಟಾರ್ಚರರೋ, ಟಾರ್ಚಲೈಟೋ ?

        ತಾನು ಯಾವುದೇ ಊರಿಗೆ ಹೋಗಲಿ, ಅಲ್ಲಿ ಇಳಿದ ಕೂಡಲೇ ಅಲ್ಲಿದ್ದ ಗಣಿತಜ್ಞರ ಮನೆಗೆ ಹೋಗಿ "ನನ್ನ ತಲೆ ತೆರೆದಿದೆ" ಎಂದು ಘಂಟಾಘೋಷವಾಗಿ ಸಾರುತ್ತಿದ್ದರು ಏರ್ಡಿಶ್. ಅದರರ್ಥ - ಇನ್ನೆರಡು ಮೂರು ದಿನ ನಾನಿಲ್ಲೇ ಇರುತ್ತೇನೆ. ಹಗಲೂ ರಾತ್ರಿ ಕೂತುಕೊಂಡು ಗಣಿತ ಸಮಸ್ಯೆಗಳನ್ನು ಬಿಡಿಸೋಣ - ಎಂದು! ಹಗಲುರಾತ್ರಿ ಎಂದರೆ ನಿಜವಾಗಿಯೂ ಹಗಲುರಾತ್ರಿಗಳೇ! ದಿನದ ಇಪ್ಪತ್ತು ತಾಸು ಕೂತು ನಿಂತು ನಡೆದಾಡಿಕೊಂಡು ಗಣಿತದ ಸಮಸ್ಯೆಗಳನ್ನು ಬಿಡಿಸುತ್ತ ಕಾಲಕಳೆಯುವ ಅದ್ಭುತ ಸಾಮರ್ಥ್ಯ ಅದುಹೇಗೋ ಏರ್ಡಿಶ್‍ಗೆ ಬಂದುಬಿಟ್ಟಿತ್ತು. ನಿದ್ದೆಗೆಟ್ಟು ಊದಿಕೊಂಡ ಕಣ್ಣುಗುಡ್ದೆಗಳನ್ನು ಹೊರಹಾಕಿಕೊಂಡು ಏರ್ಡಿಶ್‍ರ ಚಿಂತನೆಯ ವೇಗಕ್ಕೆ ಸಮನಾಗಿ ಹೆಜ್ಜೆ ಹಾಕಲು ಪರದಾಡುತ್ತ ಅವರ ಜೊತೆ ಗಣಿತ ಸಂಶೋಧನೆಗಳಿಗೆ ಕೂರುತ್ತಿದ್ದ ಈ ಗಣಿತಜ್ಞರ ಹೆಂಡತಿಯರು ತಮ್ಮ ಗಂಡಂದಿರ ಅವಸ್ಥೆಯನ್ನು ನೋಡಲಾಗದೆ "ಸ್ವಲ್ಪ ಬಿಡುವು ಮಾಡಿಕೊಳ್ಳಬಾರದೆ? ಮಲಗಿ ವಿಶ್ರಾಂತಿ ತೆಗೆದುಕೊಳ್ಳಬಾರದೆ?" ಎಂದರೆ ಏರ್ಡಿಶ್, "ಸತ್ತ ಮೇಲೆ ಗೋರಿಯಲ್ಲಿ ಮಲಗಿ ಬೇಕಾದಷ್ಟು ವಿಶ್ರಾಂತಿ ಪಡೆದುಕೊಳ್ಳಬಹುದು. ಆದರೆ, ಈ ಸಮಯ ಮತ್ತೆ ಬಂದೀತೇ?" ಎಂದು ಕೇಳುತ್ತಿದ್ದರು. ಅವರಜೊತೆ ನಾಲ್ಕು ದಿನ ನಿದ್ದೆಗೆಟ್ಟು ಲೆಕ್ಕ ಮಾಡುತ್ತ ಕೂತವರು ಏರ್ಡಿಶ್ ಹೊರಟುಹೋಗುತ್ತಲೇ ಒಂದೆರಡು ವಾರ ಸುಸ್ತಾಗಿ ಬಿದ್ದುಕೊಳ್ಳುತ್ತಿದ್ದರು ಇಲ್ಲವೇ ಜ್ವರ ಬಂದು ಮಲಗುತ್ತಿದ್ದರು! ಆದರೆ, ಏರ್ಡಿಶ್ ಮಾತ್ರ ಯಾವ ಶೀತಜ್ವರಬಾಧೆಗಳಿಗೂ ಕ್ಯಾರೇ ಅನ್ನದೆ ಗಣಿತ ಗಣಿತ ಎಂದು ಬಡಬಡಿಸುತ್ತ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಿಬಿಡುತ್ತಿದ್ದರು. ಈ ಕ್ರಮ ಜೀವನಪರ್ಯಂತ ಎಂದೂ ತಪ್ಪಲಿಲ್ಲ.

        ನಗರಕ್ಕೆ ಏರ್ಡಿಶ್ ಬರುತ್ತಿದ್ದಾರೆಂದರೆ ಗಣಿತಜ್ಞರ ಕಿವಿ ಚುರುಕಾಗುತ್ತಿದ್ದವು. ಎಲ್ಲರೂ ನಾಮುಂದು ತಾಮುಂದು ಎಂದು ಏರ್ಡಿಶ್‍ರನ್ನು ಮನೆಗೆ ಕರೆದೊಯ್ಯಲು ಹಾತೊರೆಯುತ್ತಿದ್ದರು. ಇದಕ್ಕೆ ಕಾರಣವೂ ಇತ್ತು. ಏರ್ಡಿಶ್ ಏನಾದರೂ ಮನೆಗೆ ಬಂದು ಉಳಿದುಕೊಂಡರೆ, ಆ ಮೂರ್ನಾಲ್ಕು ದಿನಗಳ ಕಾಲ, ಮುಂದಿನ ಮೂರ್ನಾಲ್ಕು ವರ್ಷಗಳಿಗಾಗುವಷ್ಟು ಗಣಿತ ಸಮಸ್ಯೆಗಳನ್ನು ಕೊಟ್ಟು ಹೋಗುತ್ತಿದ್ದರು. ಇದುವರೆಗೆ ಜೀವನಪೂರ್ತಿ ಕುಳಿತು ತಲೆಕೆಡಿಸಿಕೊಂದರೂ ಪರಿಹರಿಸಲಾಗದ ಸಮಸ್ಯೆಗಳನ್ನು ಏರ್ಡಿಶ್ ಮುಂದೆ ಹಿಡಿದರೆ ಅವುಗಳಲ್ಲಿ ಬಹಳಷ್ಟಕ್ಕೆ ಪರಿಹಾರ ಸಿಗುವುದು ಖಾತ್ರಿಯಿತ್ತು. ಅಲ್ಲದೆ, ಆ ಮೂರ್ನಾಲ್ಕು ದಿನಗಳಲ್ಲಿಯೇ ಏರ್ಡಿಶ್ ತನ್ನ ಅತಿಥೇಯನ ಜೊತೆ ಕೂತು ಒಂದೆರಡು ಅತಿ ಮಹತ್ವದ, ಗಣಿತ ಪ್ರಪಂಚದಲ್ಲಿ ಸಾಕಷ್ಟು ಸಂಚಲನ ಎಬ್ಬಿಸಬಲ್ಲ ವಿಚಾರಪೂರ್ಣ ವಿದ್ವತ್ ಲೇಖನಗಳನ್ನು ಬರೆದುಬಿಡುತ್ತಿದ್ದರು. ಏರ್ಡಿಶ್ ಜೊತೆ ಸಂಶೋಧನ ಪ್ರಬಂಧ ಬರೆದಿದ್ದಾನೆ ಎಂದರೆ, ಆ ಗಣಿತಜ್ಞನ ಗೌರವ-ಮರ್ಯಾದೆಗಳು ನೂರ್ಮಡಿ ಹೆಚ್ಚಾಗಿಬಿಡುತ್ತಿದ್ದವು!

            ಅಲ್ಲದೆ, ಏರ್ಡಿಶ್ ಅವರಿಗೆ ಯಾವ ಗೆಳೆಯನನ್ನು ಭೇಟಿಯಾದರೂ ಆತನನ್ನು ಕಳೆದ ಬಾರಿ ಭೇಟಿಯಾದಾಗ ಏನೇನು ಚರ್ಚಿಸಿದ್ದೆ ಎನ್ನುವುದು ಹತ್ತು ನಿಮಿಷದ ಹಿಂದೆಯಷ್ಟೇ ನಡೆದ ಘಟನೆಗಳಮ್ತೆ ಸ್ಫಟಿಕ ಸದೃಶ್ಯ ಚಿತ್ರಣ ಇರುತ್ತಿತ್ತು. "ಕಳೆದ ಬಾರಿ ನಾವೊಂದು ಸಮಸ್ಯೆಯನ್ನು ಇಷ್ಟು ಭಾಗ ಚರ್ಚಿಸಿ ನಿಲ್ಲಿಸಿದ್ದೆವು. ಅಲ್ಲಿಂದ ಈಗ ಮುಂದುವರಿಸೋಣ" ಎಂದು ಕ್ವಚಿತ್ತಾಗಿ ಖಚಿತವಾಗಿ ಹೇಳಿ ಗೆಳೆಯರನ್ನು ದಿಗ್ಭ್ರಾಂತಗೊಳಿಸುವ ಸ್ಮರಣಶಕ್ತಿ ಏರ್ಡಿಶ್‍ರಿಗಿತ್ತು. ಅಷೇ ಅಲ್ಲ, ಗಣಿತದ ಹೊರತಾಗಿಯೂ ಭರಪೂರ ಬಾಯಿಕಳೆದು ನಗುತ್ತ, ಒಳ್ಳೆಯ ಊಟವನ್ನು ಮನಸ್ಸು ತುಂಬಿ ಹೊಗಳಿ ಉಣ್ಣುತ್ತ, ಮಕ್ಕಳೊಂದಿಗೆ ಮಗುವಾಗಿ ಆಡುತ್ತ, ತನ್ನ ಗೆಳೆಯರ ಹೆಂಡತಿಯರೊಂದಿಗೆ ಜೋಕು ಹೊಡೆದು ನಗಿಸುತ್ತ ಇರುತ್ತಿದ್ದ ಏರ್ಡಿಶ್‍ ಎಲ್ಲರಿಗೂ ಬೇಕಾಗಿದ್ದವರೇ. ಅದ್ಭುತ ಸಂಗತಿ ಎಂದರೆ, ತಾನು ತನ್ನ ಜೀವನದಲ್ಲಿ ಕೆಲಸ ಮಾಡಿದ್ದ ಮೂರು ಸಾವಿರಕ್ಕೂ ಹೆಚ್ಚು ಗೆಳೆಯರ ಮಕ್ಕಳ ಹೆಸರು ಮತ್ತು ಅವರೇನು ಮಾಡುತ್ತಿದ್ದಾರೆ ಎಂಬುದನ್ನು ಸೂಪರ್ ಕಂಪ್ಯೂಟರಿನ ನಿಖರತೆಯಲ್ಲಿ ನೆನಪಿಟ್ಟುಕೊಂಡಿದ್ದರು ಈ ಮಹಾತ್ಮ!


ಎಪ್ಸಿಲಾನ್ ಗ್ಲಾಸಲ್ಲಿ ವಿಷ!
            ಏರ್ಡಿಶ್ ಹುಟ್ಟುಹಾಕಿದ ಹೊಸಶಬ್ದಗಳು ಗಣಿತ ಪ್ರಪಂಚದಲ್ಲಿ ಬಹಳ  ಹೆಸರು ಮಾಡಿದ್ದವು. ತನ್ನ ಹರೆಯದಲ್ಲಿ ನಾಜಿ ಸೈನಿಕರ ನೆರಳಿನಲ್ಲಿ ಬದುಕುತ್ತಿದ್ದಾಗ ಹೀಗೆ ಸಂಕೇತಭಾಷೆ ಬಳಸಿ ಮಾತಾಡಲು ತೊಡಗಿದ ಏರ್ಡಿಶರಿಗೆ ಮುಂದೆ ಅದೊಂದು ಹವ್ಯಾಸವೇ ಆಗಿ ಹೋಯಿತು. ಅವರ ಮಾತಿನಲ್ಲಿ ಎಪ್ಸಿಲಾನ್ ಎಂದರೆ ಮಗು ಎಂದರ್ಥ. (ಗಣಿತದ ಭಾಷೆಯಲ್ಲಿ ಸಣ್ಣಪ್ರಮಾಣವನ್ನು ಸೂಚಿಸಲು ಎಪ್ಸಿಲಾನ್ ಎಂಬ ಗ್ರೀಕ್ ಅಕ್ಷರವನ್ನು ಬಳಸುತ್ತೇವೆ) ಬಾಸ್ ಎಂದರೆ ಹೆಂಡತಿ. ಗುಲಾಮ ಎಂದರೆ ಗಂಡ. ಸತ್ಸಂಗ ಎಂದರೆ ಗಣಿತ ಉಪನ್ಯಾಸ. ವಿಷ ಎಂದರೆ ಮದ್ಯ! ಗೆಳೆಯರ ಮನೆಗಳಲ್ಲಿ ಗಣಿತದಲ್ಲಿ ಮುಳುಗಿ ತಲೆಚಿಟ್ಟು ಹಿಡಿದು "ನನಗೆ ಎಪ್ಸಿಲಾನ್ ಪ್ರಮಾಣದ ವಿಷ ಕೊಡಿ" ಎಂದು ಅವರು ಹೇಳಿದರೆ, ವೈನ್ ತುಂಬಿದ ಸಣ್ಣ ಗ್ಲಾಸು ಅವರೆದುರು ಬರುತ್ತಿತ್ತು! "ಈ ಮೌನ ಸಾಕು, ಸ್ವಲ್ಪ ಗದ್ದಲ ಮಾಡಿ" ಎಂದರೆ ಎರ್ಡಿಶ್ ಗೆಳೆಯರು ಟೇಪ್‍ರೆಕಾರ್ಡಿನಲ್ಲಿ ಶಾಸ್ತ್ರೀಯ ಸಂಗೀತ ಹಾಕುತ್ತಿದ್ದರು!

            ಗಣಿತಜ್ಞ ಎಂದಾಗ ನಮಗೆಲ್ಲ ಬರುವ ಕಲ್ಪನೆಯೆಂದರೆ, ಅವರು ತಮ್ಮ ತಲೆ ಕೆದರಿಕೊಂಡು ದೀರ್ಘವಾಗಿ ಉಸಿರೆಳೆದುಕೊಂಡು ಧ್ಯಾನಸ್ಥರಾದಂತೆ ಯೋಚನೆ ಮಾಡುತ್ತ ಗಂಟೆಗಟ್ಟಲೆ ಬರೆಯುತ್ತಿರುತ್ತಾರೆ ಅನ್ನುವದು. ಏರ್ಡಿಶ್ ಅವರನ್ನು ನೋಡಿದರೆ ಈ ಕಲ್ಪನೆ ತಲೆಕೆಳಗಾಗಲು ಎಲ್ಲ ಸಾಧ್ಯತೆಗಳು ಇದ್ದವು. ಏರ್ಡಿಶ್ ಯಾವಾಗ ಗಣಿತವನ್ನು ಯೋಚಿಸುತ್ತಿದ್ದಾರೆ, ಯಾವಾಗ ಅವರಿಗೆ ಒಂದು ಹೊಸ ಫಲಿತಾಂಶ, ಪ್ರಮೇಯ, ಸಮಸ್ಯೆ, ಸಾಧನೆ ಹೊಳೆಯಿತು ಎಂದು ಹೇಳಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ, ಏರ್ಡಿಶ್ ಪೆನ್ನು ಪೇಪರು ಹಿಡಿದು ಗಂಟೆಗಟ್ಟಲೆ ಗೋಡೆಯನ್ನು ದಿಟ್ಟಿಸುತ್ತ ಕೂತು ಯೋಚಿಸುವ ಹುಳು ಆಗಿರಲಿಲ್ಲ. ಅವರಿಗೆ ರೈಲಿನಲ್ಲಿ ಪ್ರಯಾಣಿಸುವಾಗ, ಊಟ ಮಾಡುವಾಗ, ಬೀಚ್‍ನಲ್ಲಿ ಮರಳ ಮೇಲೆ ನಡೆಯುವಾಗ, ಸಂಗೀತ ಕೇಳುವಾಗ, ಗೆಳೆಯರ ಜೊತೆ ಕೂತು ಜೋಕು ಹೊಡೆಯುತ್ತ ನಗುವಾಗ - ಹೀಗೆ ಎಲ್ಲೆಂದರೆಲ್ಲಿ ಯಾವ ಕ್ಷಣದಲ್ಲಾದರೂ ಹೊಸ ಫಲಿತಾಂಶಗಳು ಹೊಳೆದುಬಿಡುತ್ತಿದ್ದವು! ಏಕಕಾಲಕ್ಕೆ ಅವರು ಐವತ್ತು ಅರವತ್ತು ಸಂಶೋಧನ ಲೇಖನಗಳ ಮೇಲೆ ಕೆಲಸ ಮಾಡುತ್ತಿದ್ದರು. ನಾಲ್ಕೈದು ಜನ ಗಣಿತಜ್ಞ ಗೆಳೆಯರೊಂದಿಗೆ ಕೂತು ಮಾತಾಡುವಾಗ ಆ ಅಷ್ಟೂ ಜನರ ಜೊತೆ ಬೇರೆ ಬೇರೆ ಸಮಸ್ಯೆಗಳನ್ನು ಏಕಕಾಲಕ್ಕೆ ಚರ್ಚಿಸುವ ಪವಾಡವೆಂಬಂಥ ಶಕ್ತಿ ಅವರಿಗಿತ್ತು! ಯಾವುದಾದರೂ ಸಮಸ್ಯೆಯನ್ನು ಬಿಡಿಸಲು ತಾನು ಈಗಾಗಲೇ ಕಂಡುಹಿಡಿದಿದ್ದ ಫಲಿತಾಂಶವೊಂದರ ನೆರವು ಬೇಕಾದರೆ, ಆ ಉತ್ತರವನ್ನು ಎಂದು ಪಡೆದಿದ್ದೆ, ಹೇಗೆ ಪಡೆದಿದ್ದೆ ಎನ್ನುವುದನ್ನೆಲ್ಲ ಪುನರ್‌ರೂಪಿಸುವ ಜಾಣ್ಮೆ, ತಾಳ್ಮೆ ಏರ್ಡಿಶಗಿತ್ತು.

            ಏರ್ಡಿಶ್ ಪ್ರಿನ್ಸ್‍ಟನ್ನಿನ ಉನ್ನತ ಅಧ್ಯಯನ ಸಂಸ್ಥೆಯಲ್ಲಿದ್ದಾಗ, ಈ ಮನುಷ್ಯ ಕೆಲಸವೇ ಮಾಡೋದಿಲ್ಲ ಎಂದು ಡೈರೆಕ್ಟರ್ ಸಾಹೇಬರಿಗೆ ದೂರುಗಳು ಹೋದವಂತೆ. ಯಾಕೆಂದರೆ, ಯಾವಾಗ ನೋಡಿದರೂ ಏರ್ಡಿಶ್, ಗೆಳೆಯರು ಮತ್ತು ಸಹೋದ್ಯೋಗಿಗಳ ಜೊತೆ ಮಾತಾಡುತ್ತಾ ತಿರುಗಾಡುತ್ತಾ ಇದ್ದದ್ದೇ ಕಾಣುತ್ತಿತ್ತು. ಅದಿಲ್ಲವಾದರೆ, ಹಾವು ಏಣಿಯನ್ನು ಹೋಲುವ "ಗೋ" ಎಂಬ ಆಟವನ್ನು ತನ್ನೊಡನೆ ಇದ್ದವರ ಜೊತೆ ಆಡುತ್ತ ಸಮಯ ಕಳೆಯುವ ಹಾಗೆ ತೋರುತ್ತಿತ್ತು. ಪಿಂಗ್‍ಪಾಂಗ್ ಆಡುತ್ತ, ಜೋಕು ಹೇಳುತ್ತ ತಿರುಗುವ ಈ ಮನುಷ್ಯನನ್ನು ಯಾರು ಗಣಿತಜ್ಞ ಅಂತ ಕರೆದವರು ಎಂದು ದೂರದಿಂದ ನೋಡಿ ಪೂರ್ವಗ್ರಹ ಬೆಳೆಸಿಕೊಂಡ ವಿದ್ವಾಂಸರು ನಿರ್ದೇಶಕರ ಕಿವಿ ಊದಿದರು. ಆದರೆ, ನಿರ್ದೇಶಕ, ಆ ವರ್ಷ ಏರ್ಡಿಶ್ ಬರೆದ ಅತ್ಯಂತ ಮೌಲಿಕವಾದ ಗಣಿತದ ಮೇಲಿನ ಸಂಶೋಧನಾ ಬರಹಗಳನ್ನು ಈ ದೂರುದಾರದ ಮುಖಕ್ಕೆ ಹಿಡಿದಾಗ ಅವರೆಲ್ಲರ ಬಾಯಿ ಕಟ್ಟಿಹೋಯಿತು. ಪ್ರಿನ್ಸ್‍ಟನ್ನಿನ ಇತಿಹಾಸದಲ್ಲಿ ಹತ್ತು ವರ್ಷದ ಅವಧಿಯಲ್ಲಿ ಯಾರೊಬ್ಬ ಸಂಶೋಧಕ ಪ್ರಕಟಿಸಿದ ಪ್ರಬಂಧಗಳಿಗಿಂತಲೂ ಹೆಚ್ಚಾ ಬೆಳೆಯನ್ನು ಏರ್ಡಿಶ್ ಒಂದು ವರ್ಷದಲ್ಲಿ ತೆಗೆದು ತೋರಿಸಿದ್ದರು!


ಗಣಿತದ ಗಣಿ, ಮಾನವತೆಯ ಮಣಿ.
            ಇಷ್ಟಕ್ಕೂ ಈ ಮನುಷ್ಯ ಬರೆದಿದ್ದಾದರೂ ಎಷ್ಟು ಎನ್ನುತ್ತೀರಾ? ಬರೋಬ್ಬರಿ ಒಂದೂವರೆ ಸಾವಿರ ಸಂಶೋಧನಾ ಲೇಖನಗಳು! ಇಡೀ ಜಗತ್ತಿನ ಇತಿಹಾಸದಲ್ಲಿ ಇದುವರೆಗೆ ಬದುಕಿದ ಯಾವುದೇ ಗಣಿತಜ್ಞ ಅಥವಾ ವಿಜ್ಞಾನಿ ತನ್ನ ಜೀವಿತದಲ್ಲಿ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳಿಗಿಂತ ಹೆಚ್ಚು ಬರೆದು ಪ್ರಕಟಿಸಿದ ಕೀರ್ತಿಯ ಪತಾಕೆಯನ್ನು ವಿನಯದಿಂದ ಹೊತ್ತವರು ಈ ಏರ್ಡಿಶ್! ತಾನು ಬರೆದದ್ದು ಮಾತ್ರವಲ್ಲ, ಬೇರೆಯವರನ್ನು ಉತ್ತೇಜಿಸಿ ಬರೆಸಿದರು. ಎರ್ಡಿಶ್ ಜೊತೆ ಸೇರಿ ತಮ್ಮ ಸಂಶೋಧನಾ ಬರಹಗಳನ್ನು ಪ್ರಕಟಿಸಿದವಏ ಐನೂರೊಂದು ಮಂದಿ! ಐವತ್ತರ ದಶಕದಲ್ಲಿ ಏರ್ಡಿಶ್ ಬರೆದ ಬರಹಗಳ ಮತ್ತು ಸಹ ಬರಹಗಾರರ ಸಂಖ್ಯಾಬಾಹ್ಯ್ಳ್ಯವನ್ನು ಗುರುತಿಸಿ ಅದರ ಪ್ರಕಾರ, ಏರ್ಡಿಶ್ ಜೊತೆ ನೇರವಾಗಿ ಸಂಶೋಧನೆಯಲ್ಲಿ ತೊಡಗಿಕೊಂಡು ಪ್ರಬಂಧಗಳನ್ನು ಬರೆದು ಪ್ರಕಟಿಸಿದವರ ಏರ್ಡಿಶ್ ಸಂಖ್ಯೆ -೧. ಇನ್ನು ಅಂತಹ ಸಹ ಲೇಖಕರ ಜೊತೆ ಸೇರಿಕೊಂಡು ತಮ್ಮ ಬರಹಗಳನ್ನು ಪ್ರಕಟಿಸಿದವರ ಏರ್ಡಿಶ್ ಸಂಖ್ಯೆ -೨. ಹಾಗೆಯೇ ಏರ್ಡಿಶ್ ಜೊತೆ ಸಂಶೋಧನಾ ಪ್ರಬಂಧ ಬರೆದವರ ಜೊತೆ ಸೇರಿ ಬರೆದವರ ಏರ್ಡಿಶ್ ಸಂಖ್ಯೆ -೩. ಇದು ಹೀಗೇ ಮುಂದುವರಿಯುತ್ತಾ ಹೋಗಿ ಈಗ ಜಗತ್ತಿನಲ್ಲಿ ಏರ್ಡಿಶ್ ಸಂಖ್ಯೆ ೧೫ ಆಗಿರುವರೂ ಇದ್ದಾರೆ! ತನಗೂ ಒಂದು ಏರ್ಡಿಶ್ ಸಂಖ್ಯೆ ಅಂತ ಹೇಳಿಕೊಳ್ಳುವುದು ಗಣಿತಜ್ಞರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದಾಗ ಸಿಗುವ ಸಂಭ್ರಮಕ್ಕಿಂತಲೂ ಮಿಗಿಲಾದದ್ದು! ಅಂದಹಾಗೆ, ಜಗದ್ವಿಖ್ಯಾತ ವಿಜ್ಞಾನಿ ಐನ್‍ಸ್ಟೈನ್ ಅವರ ಏರ್ಡಿಶ್ ಸಂಖ್ಯೆ - ೨.

            ಮನೆಮಠ ಕಟ್ಟಿಕೊಳ್ಳದೆ ಅಲೆಮಾರಿಯಂತೆ ತಿರುಗುತ್ತಿದ್ದ ಏರ್ಡಿಶ್ ದುಡ್ಡಿನ ಅಮಲು ಎಂದೂ ತಲೆಯನ್ನು ಹತ್ತಿ ಕೂರಲು ಬಿಡಲಿಲ್ಲ. ತಾನು ಹೋದ ಎಲ್ಲ ಗಣಿತ ಸಂಕಿರಣಗಳಲ್ಲಿ ಅವರು ಗಣಿತದ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸಿ ಸಭಿಕರ ಮುಂದಿಡುತ್ತಿದ್ದರು. ಅಷ್ಟೇ ಅಲ್ಲ, ಬಹುಮುಖ್ಯವಾದದ್ದು ಎಂದು ಅನ್ನಿಸಿದ ಲೆಕ್ಕಗಳಿಗೆ ತಾನೇ ಕೆಲವು ಸಾವಿರ ಡಾಲರುಗಳ ಬಹುಮಾನವನ್ನು ಘೋಷಿಸಿಬಿಡುತ್ತಿದ್ದರು. ತನ್ನ ಪಂಥಾಹ್ವಾನವನ್ನು ಸ್ವೀಕರಿಸಿ ಸಮಸ್ಯೆ ಪರಿಹಾರ ಮಾಡಿದ ಗೆಳೆಯರಿಗೆ ಬಹುಮಾನದ ಮೊತ್ತವನ್ನು ಉದಾರವಾಗಿ ಕೊಟ್ಟುಬಿಡುತ್ತಿದ್ದರು. ಸಂಶೋಧನಾ ಲೇಖನಗಳನ್ನು ಬರೆದು ಬಂದ ಸಂಭಾವನೆಯ ದುಡ್ಡೆಲ್ಲವೂ ಹೀಗೆ ಹರಡಿ ಹಂಚಿಹೋಗಿತ್ತು. ಹಾರ್ವರ್ಡ್‍ನಲ್ಲಿ ದುಡ್ದಿನ ಮುಗ್ಗಟ್ಟಿನಿಂದ ಒದು ಮುಂದುವರಿಸಲಾಗದೆ ಕಂಗೆಟ್ಟು ಕೂತಿದ್ದ ವಿದ್ಯಾರ್ಥಿಯೊಬ್ಬನಿಗೆ ಒಂದು ಸಾವಿರ ಡಾಲರುಗಳನ್ನು ಕೊಟ್ಟು "ಇದನ್ನು ಇಟ್ಟುಕೋ, ಓದನ್ನು ಮುಂದುವರಿಸು. ಮುಂದೆ ದುಡಿಯುವ ಬಲ ಬಂದ ಮೇಲೆ ಹಿಂದುರುಗಿಸು" ಎಂದು ಬೆನ್ನು ತಟ್ಟಿದರು ಏರ್ಡಿಶ್. ಆ ಹುಡುಗ, ಆ ನೆರವಿನಿಂದ ಪದವಿ ಮುಗಿಸಿ ಕೃತಜ್ಞತೆಯಿಂದ ದುಡ್ಡು ಹಿಂದಿರುಗಿಸಲು ಬಂದಾಗ ಏರ್ಡಿಶ್ ಅದನ್ನು ತೆಗೆದುಕೊಳ್ಳದೆ, "ನಾನು ನಿನಗೆ ಮಾಡಿದ್ದನ್ನೇ ನೀನು ಇನ್ನೊಬ್ಬನಿಗೆ ಮಾಡು" ಎಂದು ಕಳಿಸಿಬಿಟ್ಟರು! ಗಣಿತಲೋಕದ ಅತ್ಯಂತ ಪ್ರತಿಷ್ಟಿತ ವೂಲ್ಫ್ ಪ್ರಶಸ್ತಿಯನ್ನು ಪಡೆದ ನಂತರ ಅದರ ಜೊತೆ ಬಹುಮಾನದ ಮೊತ್ತವಾಗಿ ಬಂದ ಐವತ್ತು ಸಾವಿರ ಡಾಲರುಗಳಲ್ಲಿ ದಾನಧರ್ಮ ಎಲ್ಲ ಕಳೆದು ಏರ್ಡಿಶ್ ತನಗಾಗಿ ಇಟ್ಟುಕೊಂಡದ್ದು ಕೇವಲ ಏಳ್ನೂರ ಇಪ್ಪತ್ತು ಡಾಲರುಗಳನ್ನು ಮಾತ್ರ!

            ದಾರಿಯಲ್ಲಿ ಸಿಗುವ ಯಾವ ಭಿಕ್ಷುಕನನ್ನೂ ಬರಿಗೈಯಲ್ಲಿ ಕಳಿಸಿದ ಉದಾಹರಣೆ ಏರ್ಡಿಶ್ ಜೀವನದಲ್ಲಿ ಇರಲಿಲ್ಲ. ಗಣಿತದ ಹೊರತಾದ ಜಗತ್ತಿನಲ್ಲಿ ಅವರು ತೋರಿಸುತ್ತಿದ್ದ ಅನುಪಮವಾದ ಮಾನವೀಯತೆ ಎಂಥವರ ಹೃದಯವನ್ನೂ ಕರಗಿಸಿಬಿಡುತ್ತಿತ್ತು. ಏರ್ಡಿಶ್ ಹೆಸರಲ್ಲಿದ್ದ ಬ್ಯಾಂಕ್ ಅಕೌಂಟಿಗೆ ಬರುವ ಹೋಗುವ ದುಡ್ಡಿನ ಲೆಕ್ಕಾಚಾರವನ್ನು ನೋಡಿಕೊಳ್ಳುತ್ತಿದ್ದದ್ದು ಅವರ ಜೀವನ ಗೆಳೆಯ, ಗಣಿತಜ್ಞ ರಾನ್ ಗ್ರಹಾಮ್. ಏರ್ಡಿಶ್ ತನ್ನ ಗೆಳೆಯರನ್ನು ಮನಃಪೂರ್ವಕ ನಂಬುತ್ತಿದ್ದರು. ಅವರ ಗೆಳೆಯರೂ ಅಷ್ಟೇ - ಎಂದೆಂದೂ ಏರ್ಡಿಶ್‍ರ ಪ್ರೀತಿ ಮತ್ತು ಗೆಳೆತನಕ್ಕೆ ನಿಷ್ಠರಾಗಿದ್ದರು. ಗಣಿತ ಬಿಟ್ಟರೆ ಹೊರಜಗತ್ತಿನ ವ್ಯವಹಾರಗಳಲ್ಲಿ ಮಗುವಿನಂತೆ ಮುಗ್ಧರಾಗಿದ್ದ ಏರ್ಡಿಶ್‍ರಿಗೆ ಮೋಸ ಮಾಡಿ ಆಗಬೇಕಾದದ್ದು ಏನೂ ಇರಲಿಲ್ಲ! ಎಷ್ಟೋ ಸಲ, ಈ ಮನುಷ್ಯ ನಗರದಿಂದ ಹಲವಾರು ಮೈಲಿ ದೂರದಲ್ಲಿರುವ ವಿಚಾರ ಸಂಕಿರಣದ ಸ್ಥಳಗಳಿಗೆ ಹೋಗಬೇಕಾಗಿ ಬಂದಾಗ, ಆ ದಾರಿಯಲ್ಲಿ ಹೋಗುವ ಯಾವುದೇ ವಾಹನವನ್ನು ನಿಲ್ಲಿಸಿ ಆ ದಾರಿಹೋಕರ ಜೊತೆ ಸ್ನೇಹ ಮಾಡಿಕೊಂಡು ಹೊರಟುಬಿಡುತ್ತಿದ್ದರು!


ಮಗನಿಗೆ ತಕ್ಕ ಅಮ್ಮ

        ಎರ್ಡಿಶ್‍ರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಅವರ ತಾಯಿ ಕೊನೆಗಾಲದಲ್ಲಿ ತನ್ನ ಮಗನ ಜೊತೆ ತಾನೂ ಪ್ರಪಂಚ ಪರ್ಯಟನೆಗೆ ಟೊಂಕ ಕಟ್ಟಿ ನಿಂತುಬಿಟ್ಟಳು! ಆಗ ಆಕೆಗೆ ಕೇವಲ ಎಂಭತ್ನಾಲ್ಕು ವರ್ಷ! ತನ್ನ ಮಗನ ಆರೋಗ್ಯ, ಯೋಗಕ್ಶೇಮ ನೋಡಿಕೊಳ್ಳುವುದು ಮಾತ್ರವಲ್ಲ, ಆತ ಬರೆದ ಅಷ್ಟೂ ಸಾವಿರ ಸಂಶೋಧನ ಲೇಖನಗಳನ್ನು ಭದ್ರವಾಗಿ ಅಚ್ಚುಕಟ್ಟಾಗಿ ತನ್ನ ಮನೆಯಲ್ಲಿ ಜೋಡಿಸಿಡುವ ಕೆಲಸವನ್ನು ಮಾಡುತ್ತಿದ್ದವಳೂ ಅವಳೇ. ತಾನು ಬರೆದ ಯಾವುದರ ಮೇಲೆಯೂ ಹಂಗಿಲ್ಲದೆ ವಿರಾಗಿಯಾಗಿ ಬದುಕುತ್ತಿದ್ದ ಏರ್ಡಿಶ್ ಬಳಿ ಇರುತ್ತಿದ್ದದ್ದು - ಎರಡು ಜೊತೆ ಪ್ಯಾಂಟು ಷರ್ಟು ಮತ್ತು ನಿದ್ದೆ ಬರದಂತೆ ಎಚ್ಚರವಿದ್ದು ಕೂರಲು ಬೆಕಾಗಿದ್ದ ಬೆಂಜಡ್ರೀನ್ ಮಾತ್ರೆಗಳ ಸಣ್ಣ ಡಬ್ಬ ಮಾತ್ರ. ಆ ಮಹಾತಾಯಿ ತನ್ನ ತೊಂಭತ್ತಮೂರನೆ ವಯಸ್ಸಿನಲಿ ಎರ್ಡಿಶ್ ಜೊತೆ ಒಂದು ಗಣಿತದ ವಿಚಾರ ಸಂಕಿರಣಕ್ಕೆ ಹೋಗುತ್ತಿದ್ದಾಗ ತೀರಿಕೊಂಡ ಮೇಲೆ, ಏರ್ಡಿಶ್ ಪೂರ್ತಿ ಇಳಿದು ಹೋದರು. ತನ್ನ ಜೊತೆ ಅರವತ್ತು ವರ್ಷಗಳ ಕಾಲ ಜೊತೆಯಾಗಿ ತನ್ನ ಬದುಕಿನ ಸಮಸ್ತ ಅಗತ್ಯಗಳನ್ನೂ ನೋಡಿಕೊಳ್ಳುತ್ತಿದ್ದ ಪ್ರೀತಿಯ ತಾಯಿಯನ್ನು ಕಳೆದುಕೊಂಡ ಮೇಲೆ ಅವರು ಬಹುಪಾಲು ಖಿನ್ನರಾದರು. ತನ್ನ ಪ್ರೀತಿಯ ಹಂಗೆರಿಯ ಮನೆಗೆ ಅವರು ಮತ್ತೆಂದೂ ಹೋಗಲೇ ಇಲ್ಲ.

ತಲೆಯಿರುವಾಗ ಕಂಪ್ಯೂಟರ್ ಯಾಕೆ!

            ಗೋಮುಖದಿಂದ ಗಂಗೆ ಇಳಿದಂತೆ ಏರ್ಡಿಶ್ ಸಹಸ್ರಾರದಿಂದ ಸಹಸ್ರ ಸಹಸ್ರ ಸಂಖ್ಯೆಯ ಪ್ರಮೇಯಗಳು ಹುಟ್ಟಿಬರುತ್ತಿದ್ದವು. ಇಷ್ಟೆಲ್ಲವನ್ನು ಹೊತ್ತುಕೊಂಡು ತಿರುಗುವ ಈ ಮನುಷ್ಯ ನಿಜವಾದ ಸೂಪರ್ ಕಂಪ್ಯೂಟರ್ ಎಂದು ಜನ ಹೇಳಿದರೆ, ಏರ್ಡಿಶ್‍ಗೆ ಅವೆಲ್ಲ ಅರ್ಥವೇ ಆಗುತ್ತಿರಲಿಲ್ಲ. ಎಕೆಂದರೆ, ಅವರು ತನ್ನ ಜೀವಮಾನದಲಿ ಒಮ್ಮೆಯೂ ಕಂಪ್ಯೂಟರ್ ಬಳಸಲಿಲ್ಲ! ಪ್ರತಿವರ್ಷ ಎರ್ಡಿಶ್ ತನ್ನ ಗೆಳೆಯರಿಗೆ ಬರೆಯುತ್ತಿದ್ದ ಪತ್ರಗಳೇ ಒಂದೂವರೆ ಸಾವಿರ ದಾಟುತ್ತಿದ್ದವು! ತನ್ನ ಜೀವನದ ಅಷ್ಟು ವರ್ಷಗಳ ಕಾಲ ಕೇವಲ ಪತ್ರ, ಫೋನು ಮತ್ತು ಮುಖತಃ ಭೇಟಿಗಳ ಮೂಲಕವೇ ಕಾರ್ಯನಿರ್ವಹಿಸಿದ ಏರ್ಡಿಶ್ ಅದೇಕೋ ಹೊಸ ತಂತ್ರಜ್ಞಾನದಿಂದ ಮೈಲಿಗಟ್ಟಲೆ ಅಂತ ಕಾಯ್ದುಕೊಂಡರು. ಏರ್ಡಿಶ್ ಬರೆದ ಅದೆಷ್ಟೋ ಪ್ರಮೇಯ, ಫಲಿತಾಂಶಗಳು ಇಂದು ಗಣಕ ಕ್ಷೇತ್ರವನ್ನು ನಾಗಾಲೋಟದಲಿ ಮುಂದೋಡಿಸುತ್ತಿರುವ ಚಾಲಕಶಕ್ತಿಗಳು. ಜಗತ್ತಿನ ಬಹುತೇಕ ಎಲ್ಲ ಐಟಿ, ನೆಟವರ್ಕ್, ಫೈನಾನ್ಸ್ ಮತ್ತು ಇನ್ಶೂರೆನ್ಸ್ ಕಂಪೆನಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ಮನುಷ್ಯ ಬರೆದ ಸಿದ್ಧಾಂತಗಳನ್ನು ಬಳಸುತ್ತಲೇ ಇರುತ್ತವೆ. ನಾವು ದಿನನಿತ್ಯ ಬಳಸುವ ಫೇಸಬುಕ್, ಟ್ವಿಟರ್‌ಗಳಂತಹ ಜಾಲತಾಣಗಳ ಪರದೆಯ ಹಿಂದೆ ನಿಂತಿರುವುದು ಕೂಡ ಇದೇ ಐದೂವರೆ ಅಡಿಯ ಏರ್ಡಿಶ್ ಮಹಾತ್ಮರೇ!

            ತಾನು ಹದಿನಾರರ ಹುಡುಗನಾಗಿದ್ದಾಗ ಭೇಟಿಯಾದ ವಸೋನಿಯ ಜೊತೆ ಕೊನೆಯವರೆಗೂ ಜೀವದ ಗೆಳೆತನ ಕಾಯ್ದುಕೊಂಡು ಬಂದರು ಏರ್ಡಿಶ್. ಒಮ್ಮೆ ವಸೋನಿಯ ಮನೆಯಲ್ಲಿ ತಂಗಿದ್ದಾಗ, ತನ್ನ ಇನ್ನೊಬ್ಬ ಗೆಳೆಯನ ಜೊತೆ ಫೋನಿನಲ್ಲಿ ಮಾತಾಡುತ್ತ, "ವಸೋನಿ? ಹೇಗೊ ಇದ್ದಾನೆ. ದಿನ ದೂಡುತ್ತಿದ್ದಾನೆ. ಹಳಬ, ಕಿವಿ ಬೇರೆ ಕೇಳಿಸೋಲ್ಲ!" ಅಂತ (ವಸೋನಿಯ ಎದುರೇ) ಗುಟ್ಟಾಗಿ ಅಂದರಂತೆ! ವಸೋನಿ ಇದನ್ನು ಕೇಳಿಸಿಕೊಂದ ಅನ್ನುವುದು ಗೊತ್ತಾದ ಮೇಲೆ, ಅವನ ಹೆಂಡತಿಯ ಬಳಿಹೋಗಿ, "ನಿನ್ನ ಗಂಡನಿಗೆ ಕಿವಿ ಸರಿಯಾಗೇ ಇದೆ. ಹಾಳಾಗಿರುವುದು ಕಿವಿಗಳ ನಡುವಿನದ್ದು!" ಅಂತ ಹೇಳಿ ಬಂದರಂತೆ! ಗೆಳೆಯರನ್ನು ಸದಾ ಕಾಲೆಳೆಯುತ್ತ ನಗಿಸುವ ಹಾಸ್ಯಪ್ರಜ್ಞೆ. ಇದ್ದದ್ದರಿಂದಲೇ ಅವರಿಗೆ ಜಗತ್ತಿನಾದ್ಯಂತ ಎಲ್ಲೆ ಹೋದರಲ್ಲಿ ಗೆಳೆಯರು, ಬಂಧುಗಳು, ಅಣ್ಣತಮ್ಮಂದಿರು ಹುಟ್ಟಿಕೊಂಡಿದ್ದು.

ರಂಗದಲ್ಲೇ ಕುಸಿದ ನಟ

            ನಿಜವಾದ ನಟ ತನ್ನ ಸಾವು, ಬಣ್ಣ ಹಚ್ಚಿ ರಂಗದ ಮೇಲೆ ನಟಿಸುತ್ತಿರುವಾಗಲೇ ಬರಲಿ ಎಂದು ಆಶಿಸುತ್ತಾನೆ. ಹಾಗೆಯೇ ಎರ್ಡಿಶ್ ತನ್ನ ಎಂಭತ್ತಮೂರನೇ ವಯಸ್ಸಿನಲ್ಲಿ ೧೯೯೬ರ ಸೆಪ್ಟೆಂಬರ್ ೨೦ರಂದು ಪೋಲೆಂಡಿನ ವಾರ್ಸಾದಲ್ಲಿ ಒಂದು ಗಣಿತ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ, ಹೃದಯಾಘಾತವಾಗಿ ತೀರಿಕೊಂಡರು. ಜೀವನಪೂರ್ತಿ ಗಣಿತವನ್ನೇ ಉಂಡು, ಹಾಸಿ ಹೊದ್ದು, ಗಣಿತಕ್ಕಾಗಿಯೇ ಜೀವ-ಜೀವನವನ್ನು ತೇಯ್ದ ಏರ್ಡಿಶ್ ತನ್ನ ಕೊನೆಯುಸಿರೆಳೆಯುವಾಗಲೂ ಯಾವುದೋ ಪ್ರಮೇಯವನ್ನು ಮನಸ್ಸಿನಲ್ಲೇ ಬರೆಯುತ್ತ ಅರ್ಧ ಮುಗಿಸಿದ್ದರೋ ಏನೋ! ದೇಶದೇಶಗಳ ನಡುವಿನ ಗಡಿರೇಖೆಗಳ ಹಂಗಿಲ್ಲದೆ, ಯಾವ ರಾಜಕೀಯದ ಕೊಚ್ಚೆಕೊಳಚೆಗೂ ಸಿಗದೆ, ಹಕ್ಕಿಯಂತೆ ಸ್ವಚ್ಚಂದವಾಗಿ ಜಗತ್ತೆಲ್ಲ ಸುತ್ತುತ್ತಿದ್ದ ಏರ್ಡಿಶ್ ಭಾರತಕ್ಕೂ ಹಲವಾರು ಬಾರಿ ಬಂದಿದ್ದರು. ಕೋಲ್ಕತ್ತ, ಮುಂಬೈ, ಚೆನ್ನೈಗಳಿಗೆ ಬಂದು ಹೋಗುತ್ತಿದ್ದರು. ಹಿಂದಿ ಭಾಷೆಯ ಪದ ಲಾಲಿತ್ಯಕ್ಕೆ ಮಾರುಹೋಗಿ ಹಲವಾರು ಪದಗಳನ್ನು ಕಲಿತಿದ್ದರು! ಹದಿನೈದು ಜನ ಭಾರತೀಯ ಗಣಿತಜ್ಞರ ಜೊತೆ ೨೩ ಸಂಶೋಧನಾ ಲೇಖನಗಳನ್ನು ಬರೆದಿದ್ದರು. ಭಾರತ ಕಂಡ ಅಪ್ರತಿಮ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಮೇಲೆ ಅಪಾರ ಪ್ರೀತಿ ಗೌರವ ಇಟ್ಟುಕೊಂಡಿದ್ದ ಏರ್ಡಿಶ್, `ರಾಮಾನುಜನ್ ಮತ್ತು ನಾನು' ಎಂಬ ಲೇಖನದಲ್ಲಿ ತಾನು ಈ ಭಾರತೀಯ ಗಣಿತ ಪಂಡಿತನಿಂದ ಹೇಗೆಲ್ಲ ಪ್ರಭಾವಿತನಾದೆ ಎಂಬುದನ್ನು ಗಣಿತದ ನೆಲೆಯಲ್ಲಿ ಹೇಳುತ್ತ ಹೋಗಿದ್ದಾರೆ.
            ದುರದೃಷ್ಟವಶಾತ್, ಏರ್ಡಿಶ್ ಹಾರಾಡುತ್ತಿದ್ದ ದಿಗಂತ ಭೂಮಿಗಿಂತ ಬಹಳ ಎತ್ತರದ್ದು. ಜನಸಾಮಾನ್ಯರಿಗೆ ಅರ್ಥವಾಗುವಷ್ಟು, ನಿಲುಕುವಷ್ಟು ಹತ್ತಿರಲ್ಲಿ ತೂಗುವ ಹಣ್ಣುಗಳು ಏರ್ಡಿಶ್ ತೋಟದಲ್ಲಿ ಕಡಿಮೆ. ಬರೆದ ಅಷ್ಟೂ ಪ್ರಬಂಧಗಳು ಚರ್ಚಿಸುವುದು ವಿಶ್ಲೇಷಣ ಸಂಖ್ಯಾಸಿದ್ಧಾಂತ, ಕಾಂಬಿನಟೋರಿಕ್ಸ್, ಸಂಭವನೀಯತಾ ಸಂಖ್ಯಾಸಿದ್ಧಾಂತ, ಗ್ರಾಫ್ ಥಿಯರಿ, ರಾಮ್ಸೀ ಥಿಯರಿಯಂತಹ ಉನ್ನತ ಸ್ತರದ ಗಣಿತವನ್ನೇ. ತಾನು ಬದುಕಿದ ಒಂದೊಂದು ವರ್ಷದಲ್ಲೂ ಒಬ್ಬ  ಮಹಾಮೇಧಾವಿ ತನ್ನ ಜೀವಮಾನವಿಡೀ ಕೂತು ಮಾಡಬಹುದಾಗಿದ್ದ ಸಾಧನೆಯನ್ನು ಸದ್ದಿಲ್ಲದೆ ಮಾಡಿಹೋದ. ಮಾನವಕುಲ ಏಳು ಸಾವಿರ ವರ್ಷ ತಪಸ್ಸು ಮಾಡಿ ಪಡೆಯಬಹುದಾಗಿದ್ದ ಸಿದ್ಧಿಯನ್ನು ಒಂದೇ ಜೀವಿತದಲ್ಲಿ ಪಡೆದು ಅದನ್ನು ನಮಗಾಗಿ ಬಿಟ್ಟುಹೋದ ಈ ಮಹತ್ಮನ ಗಣಿತ ನಮ್ಮ ಕೈಗೆಟುಕದಿದ್ದರೂ ಪರವಾಗಿಲ್ಲ, ಅವರು ಕಲಿಸಿದ ಮಾನವೀಯತೆಯ ಪಾಠ ನಮ್ಮೊಳಗೆ ಸದಾ ಮಿಡಿದರೆ ಅಷ್ಟೇ ಸಾಕು!