Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Sunday, 27 May 2012
ಕೆ. ಎಸ್. ಅಶ್ವಥ್
ನಮ್ಮ ಕೆ. ಎಸ್. ಅಶ್ವಥ್ ಅವರು ಜನಿಸಿದ ದಿನ ಮೇ 25, 1925 ಎಂದು ಹಲವೆಡೆ ಉಲ್ಲೇಖವಿದೆ. ಮೈಸೂರಿನಲ್ಲಿ ಈ ವರ್ಷ ಮಾರ್ಚ್ ತಿಂಗಳಲ್ಲಿ ಅವರ ಹುಟ್ಟಿದ ಹಬ್ಬದ ಸಮಾರಂಭ ನಡೆದಂತಿತ್ತು. ಅದೇನೇ ಇರಲಿ ಕೆ ಎಸ್ ಅಶ್ವಥ್ ಅಂತಹ ಹಿರಿಯರನ್ನು ನೆನೆಯುವುದು ಮನಸ್ಸಿಗೆ ಅವ್ಯಕ್ತವಾದ ಒಂದು ಸಮಾಧಾನ ನೀಡುವಂತಹ ಸಂಗತಿ.
ಚಲನಚಿತ್ರರಂಗವನ್ನು ನೋಡಿದಾಗ ಇವರು ‘ನಮ್ಮಂತೆಯೇ ಇರುವ ನಮ್ಮ ಪ್ರತಿನಿಧಿ’ ಎಂಬ ಭಾವವನ್ನು ಹುಟ್ಟಿಸುವ ಮಂದಿ ಬಲು ಕಡಿಮೆ. ಅದು ಚಿತ್ರರಂಗದ ಜನರ ತಪ್ಪು ಎನ್ನುವುದಕ್ಕಿಂತ, ಬಣ್ಣದ ಲೋಕವನ್ನು ನೋಡಿದಾಗ ಅದು ನಮ್ಮಲ್ಲಿ ಮೂಡಿಸುವ ಭ್ರಮೆ ಅದಕ್ಕೆ ಕಾರಣ ಇರಲೂಬಹುದು. ಹೀಗಿದ್ದೂ ಚಿತ್ರರಂಗದಲ್ಲಿ ಎಲ್ಲ ರೀತಿಯಿಂದಲೂ ಸಂಭಾವಿತರು ಎಂಬ ಹೃದ್ಭಾವ ಹುಟ್ಟಿಸಿದ ವಿರಳರಲ್ಲಿ ವಿರಳರು ಕೆ. ಎಸ್. ಅಶ್ವಥ್. ಬಹುಷಃ ಅವರು ನಿರ್ವಹಿಸಿದ ಸಂಭಾವಿತ ಪಾತ್ರಗಳು, ನಮ್ಮಲ್ಲಿ ಅವರ ಬಗ್ಗೆ ಸಂಭಾವ್ಯತೆ ಹುಟ್ಟಿರುವುದಕ್ಕೆ ಒಂದು ಪ್ರಮುಖ ಕಾರಣ. ಅತೀ ಚೆಲ್ಲು ಚೆಲ್ಲಾದ ಪಾತ್ರಗಳನ್ನಾಗಲಿ, ಕ್ರೂರಿಯಾದ ಪಾತ್ರಗಳನ್ನಾಗಲಿ ನಾವು ಅವರಲ್ಲಿ ಕಂಡದ್ದಿಲ್ಲ. ಹಾಗೆ ಅವರು ಅಂತಹ ಪಾತ್ರ ಮಾಡಿರಬಹುದಾದ ಸಾಧ್ಯತೆ ಇದ್ದರೂ, ಅಂತಹವು ಅವರು ನಟಿಸಿದ ಮುನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾವು ಗಮನಿಸದ ಹಾಗೆ ಎಲ್ಲೆಲ್ಲೆಲ್ಲೋ ಹುದುಗಿಕೊಂಡುಬಿಟ್ಟಿರುತ್ತವೆ. ಹೀಗಾಗಿ ಅವರು ಎಂದಿಗೂ ಆಪ್ತ ವ್ಯಕ್ತಿಯಾಗಿಯೇ ಕನ್ನಡ ಚಿತ್ರಪ್ರೇಕ್ಷಕರಲ್ಲಿ ಮನನದಲ್ಲಿ ಸ್ಥಾಪಿತರು.
ತಾವು ನಡೆಸಿದ ಬದುಕಿನ ರೀತಿಯಲ್ಲಿ ಕೂಡ ಅಶ್ವಥ್ ಅವರು ಸಾಮಾನ್ಯ ಮಧ್ಯಮವರ್ಗದ ಜನರಿಗೆ ಎಲ್ಲ ರೀತಿಯಲ್ಲೂ ಹತ್ತಿರದ ರೀತಿಯವರು. ಅದು ಬದುಕಿನ ಸುಂದರ ಕ್ಷಣಗಳಿಗೆ ಮಾತ್ರ ಅನ್ವಯಿಸದೆ, ಬದುಕಿನ ಏರಿಳಿತಗಳು, ಖಾಳಜಿಗಳು, ಕಾಹಿಲೆಗಳು, ಅನಿಶ್ಚಿತತೆಗಳು, ನೋವುಗಳು, ಭಯ ಭೀತಿಗಳು, ಜವಾಬ್ಧಾರಿಗಳು, ಅಸಹಾಯಕತೆಗಳು ಹೀಗೆ ಪ್ರತಿಯೊಂದರಲ್ಲೂ ಅವರ ಬದುಕು ‘ಮೇಲಕ್ಕೆ ಏರಲಾಗದ, ಕೆಳಕ್ಕೆ ಇಳಿಯಲೂ ಆಗದ ವಿಚಿತ್ರ ಅಸಹಾಯಕ ಸ್ಥಿತಿಯ ಮಧ್ಯಮ ವರ್ಗದ ಬದುಕಿನದು’. ನನಗೆ ಅಶ್ವಥ್ ಅವರ “ನಮ್ಮ ಮಕ್ಕಳು” ಚಿತ್ರ ತುಂಬಾ ತುಂಬಾ ಅತ್ಮೀಯವಾದುದು. ಅದು ಅಶ್ವಥ್ ಅವರ, ಅಂದಿನ ದಿನಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಬೆಳೆಯುತ್ತಿದ್ದ ಮಕ್ಕಳಾಗಿದ್ದ ನಮ್ಮಂತವರ, ನಮ್ಮನ್ನು ಸಾಕುತ್ತಿದ್ದ ನಮ್ಮ ಪೋಷಕರ, ನಮ್ಮ ಸಂಸ್ಕೃತಿಗಳ, ನಮ್ಮ ಬದುಕಿನ ರೀತಿಯ ಯಥಾವತ್ತಾದ ಚಿತ್ರಣ. ನಾನು ಆ ಚಿತ್ರದಲ್ಲಿ ಕಥೆಗಿಂತ ಮಿಗಿಲಾದ ಆ ಕಥೆಯ ಪಾತ್ರಗಳ ಬಗ್ಗೆ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮಗೆ ಬಹಳ ಹತ್ತಿರವಾದವರು ‘ನಮ್ಮ ಮಕ್ಕಳು’ ಚಿತ್ರದ ಅಶ್ವಥ್, ಪಂಡರಿಬಾಯಿ ಮತ್ತು ಆ ಚಿತ್ರದಲ್ಲಿನ ಅವರ ಮೂರು ಮಕ್ಕಳು.
ಅಶ್ವಥ್ ಚಿತ್ರರಂಗದಲ್ಲಿ ಹೆಚ್ಚು ಇದ್ದದ್ದು 1955 ರಿಂದ 1995ರ ಅವಧಿಯಲ್ಲಿ. ಆ ನಂತರ ಜೀವನವನ್ನು ನೆಮ್ಮದಿಯಲ್ಲಿ ಕಳೆಯುತ್ತೇನೆ ಎಂದು ಭಾವಿಸಿಕೊಂಡು ನಿವೃತ್ತರಾದ ಅವರಿಗೆ ಅವರು ಕನಸಿದ್ದ ಜೀವನಕ್ಕಿಂತ ವಿಭಿನ್ನ ವೃದ್ಧಾಪ್ಯದ ಜೀವನ ಸಿಕ್ಕಿದ್ದು ದುರದೃಷ್ಟಕರ. ಆದರೆ ಒಂದು ರೀತಿಯಲ್ಲಿ ಅದೇ ಬದುಕು. ಇಲ್ಲಿ ಅಶ್ವಥ್ ಅವರು ಮೇಲೆ ಹೇಳಿದ ಕೆಲವು ಮಾತುಗಳಂತೆ ಈ ಬದುಕಿನ ಘಟ್ಟದ ಬಹು ಮುಖ್ಯ ಪ್ರಾತಿನಿಧಿಕರು ಕೊಡಾ ಹೌದು. ಅಶ್ವಥ್ ಅವರು ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದ ದಿನಗಳಲ್ಲಿ ಅವರನ್ನು ಅವರ ಮೈಸೂರಿನಲ್ಲಿ ನೋಡುವುದು ಕಷ್ಟವಿರಲಿಲ್ಲ. ಇಂದಿನ ಕಾಲದಲ್ಲಿ ಎಲ್ಲ ಕೆಲಸ ಮಾಡುವವರೂ ಕಾರಿನಲ್ಲಿ ಓಡಾಡುತ್ತಾರೆ. ಅಂದಿನ ದಿನದಲ್ಲಿ ಅಶ್ವಥ್ ಒಂದು ಜಟಕಾ ಗಾಡಿಯನ್ನು ಶಾಶ್ವತವಾಗಿ ಬಾಡಿಗೆಗೆ ಗೊತ್ತು ಮಾಡಿಕೊಂಡಿದ್ದರು. ಅದೊಂದು ಸುಂದರ ಗಾಡಿ. ಅದರಲ್ಲೇ ಅಶ್ವಥ್ ಅವರ ದಿನನಿತ್ಯದ ಪಯಣ. ಹಾಗಾಗಿ ಅವರನ್ನು ಮೈಸೂರಿಗರು ನೋಡಬಹುದಾದದ್ದು ಸರ್ವೇಸಾಮನ್ಯವಾಗಿತ್ತು.
ಅಶ್ವಥ್ ಅವರ ವಿಚಾರದಲ್ಲಿ ಮತ್ತೊಂದು ಗಮನಿಸಿದ್ದ ಅಂಶವೆಂದರೆ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಬಯಲು ಭಾಷಣ ಕಾರ್ಯಕ್ರಮಗಳಲ್ಲಿ, ಅನಾವಶ್ಯಕವಾದ ಜನಗಳ ಆಕರ್ಷಣೆ ತಮ್ಮೆಡೆಗೆ ಬೀರದಿರಲಿ ಎಂದು ಒಂದು ಮಫ್ಲರ್ ಸುತ್ತಿಕೊಂಡು ಒಂದೆಡೆ ಬಂದು ನಿಲ್ಲುತ್ತಿದ್ದರು. ಮೈಸೂರಿನ ಟೌನ್ ಹಾಲಿನ ಮುಂದೆ ಅಂದಿನ ದಿನಗಳಲ್ಲಿ, ಅದರಲ್ಲೂ ತುರ್ತು ಪರಿಸ್ಥಿತಿಯ ಆಸುಪಾಸಿನ ದಿನಗಳಲ್ಲಿ ಎಲ್ಲಾ ಭಾಷಣ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಸರ್ವೇ ಸಾಮಾನ್ಯವಾಗಿತ್ತು. ಹೀಗೆ ಅಶ್ವಥ್ ತಾವು ಬಣ್ಣದ ಲೋಕದಲ್ಲಿದ್ದರೂ ತಮ್ಮನ್ನು ಸಾಮಾನ್ಯನನ್ನಾಗಿರಿಸಿಕೊಂಡಿದ್ದರು.
ನಾವು ಚಿತ್ರ ವಿಮರ್ಶೆಗಳನ್ನು ಓದುವಾಗ ಹಲವು ನಟ ನಟಿಯರ ಅಭಿನಯದ ಬಗ್ಗೆ ಉತ್ತಮವಲ್ಲದ ಮಾತುಗಳನ್ನು ನೋಡುವುದಿದೆ. ಅಂತಹ ಮಾತುಗಳನ್ನು ಅಶ್ವಥ್ ಅವರ ಬಗ್ಗೆ ಕೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ಅಭಿನಯದಲ್ಲಿ ಅಷ್ಟೊಂದು ಸಹಜರು. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅವರು ಒಂದು ಪವಾಡ ಸದೃಶರಾಗಿದ್ದರು. ಅವರ ಪಾತ್ರಾಭಿನಯ ಅಷ್ಟೊಂದು ಪ್ರಭಾವಿ. ಹಾಗಾಗಿ ಅವರು ಚಾಮಯ್ಯ ಮೇಷ್ಟರು ಎಂದು ಅನ್ವರ್ಥವಾಗಿಹೋಗಿದ್ದರು. ಹಾಗೆ ನೋಡಿದರೆ ಅವರ ಅಭಿನಯದಲ್ಲಿ ಅಂತಹ ಪಾತ್ರಗಳು ಅನೇಕವು ಮೂಡಿವೆ. ಆದರೆ ಪುಟ್ಟಣ್ಣ ಕಣಗಾಲ್ ಸೃಷ್ಟಿಸುತ್ತಿದ್ದ ಪಾತ್ರಗಳಲ್ಲಿ ಮಾತ್ರ ಕಲಾವಿದರಲ್ಲಿ ಮಿನುಗುತ್ತಿದ್ದ ಬೆರಗು ವಿಶಿಷ್ಟವಾದದ್ದು. ಆ ವಿಶಿಷ್ಟತೆಯಲ್ಲಿ ಕೆ. ಎಸ್. ಅಶ್ವಥ್ ಅಜರಾಮರರಾಗಿಬಿಟ್ಟರು. ಅಶ್ವಥ್ ಅವರ ಕಸ್ತೂರಿ ನಿವಾಸ, ಮುತ್ತಿನಹಾರ ಪಾತ್ರಗಳು ಸಹಾ ಅದೇ ಮೆರುಗಿನವು.
ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ವಿಭಿನ್ನ ನೆಲೆಗಳಲ್ಲಿ ಅಶ್ವಥ್ ಅವರು ಅವರ ಪಾತ್ರಗಳಿಗೆ ನೀಡಿದ ಬೆಲೆ ಅಸದೃಶವಾದದ್ದು. ಅವರನ್ನು ನಾವು ನೋಡಿದ ಇಷ್ಟಪಟ್ಟ ಒಂದೆರಡು ಪಾತ್ರಗಳ ನೆಲೆಯಲ್ಲಿ ಅವಲೋಕಿಸುವುದಕ್ಕಿಂತ ತಾವು ನಟಿಸಿದ ಪಾತ್ರಗಳಲ್ಲೆಲ್ಲ ಅವರು ತುಂಬಿದ ಸಹಜತೆಯ ಆಳದಲ್ಲಿ ಅವರಿಗೆ ಇದ್ದ ಸಾಮರ್ಥ್ಯ, ಜೀವಂತಿಕೆ, ನಿಷ್ಠೆ ಜೊತೆಗೆ ಇವೆಲ್ಲಕ್ಕೂ ಮಿಗಿಲಾಗಿ ತಮ್ಮನ್ನು ಸಾಮಾನ್ಯನಂತೆ ಕಂಡುಕೊಳ್ಳುವ ವಿಧೇಯತೆ, ಬದುಕಿನ ಜೊತೆ ಹೊಂದಿದ್ದ ಸಾಮೀಪ್ಯತೆ ಇತ್ಯಾದಿಗಳಿಂದ ಅವರನ್ನು ನೋಡುವುದು ಅತ್ಯಂತ ಮಹತ್ವದ್ದೆನಿಸುತ್ತದೆ.
ಅಶ್ವಥ್ ಅವರ ವೈಯಕ್ತಿಕ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಗಹನವಾದ ವಿಚಾರ ವೇಧ್ಯವಾಗುತ್ತದೆ. ಒಬ್ಬ ವೃತ್ತಿಪರ ವ್ಯಕ್ತಿ ತಾನು ತನ್ನ ಕಾರ್ಯಕ್ಷೇತ್ರದಿಂದ ನಿವೃತ್ತಿ ಪಡೆದಾಗ ಆತನ ಬದುಕಿನಲ್ಲಿ ಮೂಡುವ ಅನಿಶ್ಚಿತತೆಗಳು ಅಶ್ವಥ್ ಅಂತಹ ಹಲವು ವರ್ಷಗಳು ನಿರಂತರ ಸೇವೆಯಲ್ಲಿದ್ದ ವ್ಯಕ್ತಿಯನ್ನು ಸಹಾ ಕಾಡಿತ್ತು ಎಂದರೆ ಈ ದೇಶದಲ್ಲಿ ಪಿಂಚಣಿ ಎಂಬ ಭದ್ರತೆ ಇಲ್ಲದ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಈ ದೇಶದ ಸಾಮಾನ್ಯನ ಬದುಕಿನಲ್ಲಿ “ಹಣದುಬ್ಬರ, ಆಡಂಭರದ ಹೈಟೆಕ್ ಎಂಬ ಹೆಸರಿನಲ್ಲಿ ಆರೋಗ್ಯ ಮತ್ತಿತರ ಮೂಲಭೂತ ಅವಶ್ಯಕತೆಗಳಲ್ಲಿ ತುರುಕಿರುವ ಕೈಗೆಟುಕದಂತಿರುವ ಶ್ರೀಮಂತಪರ ಬೆಲೆ ತೆತ್ತುವಿಕೆ” ಮುಂತಾದವು ಮಾಡಿರುವ ಹಾನಿಗಳು ಸಹಿಸಲಾಸಾಧ್ಯವಾದಂತಹವು. ಇದು ಪರಂಪರಾಗತ ಮೌಲ್ಯ ಇತ್ಯಾದಿಗಳ ಬಗ್ಗೆ ಭೋಳೆ ಬಿಟ್ಟು ನಿಜ ಬದುಕನ್ನು ಕಂಗೆಡಿಸಿ ಕುಳಿತಿರುವ ನಮ್ಮ ಸಾರ್ವಜನಿಕ, ರಾಜಕೀಯ, ಆರ್ಥಿಕವಲಯ ಸೃಷ್ಟಿಸಿರುವ ದೊಡ್ಡ ಕಂದರವನ್ನು ತೋರುತ್ತದೆ. ನಮ್ಮ ನಿತ್ಯದ ಬದುಕಿನಲ್ಲಿ ಇಂತಹ ದೊಡ್ಡ ಕಂದರವನ್ನು ಇಟ್ಟುಕೊಂಡು ನೀನು ನಿಶ್ಚಿಂತನಾಗಿ ಯೋಗೀಶ್ವರನಾಗು, ಬದುಕಿನಲ್ಲಿ ಆಸೆ, ಭಯ, ಕ್ರೋಧ ಎಲ್ಲಾ ಬಿಟ್ಟು ಬದುಕು ಎಂದು ಪುರಾಣ ಹೇಳುತ್ತದೆ ನಮ್ಮ ವ್ಯವಸ್ಥೆ. ಇದರ ಬಗ್ಗೆ ವ್ಯವಸ್ಥೆ ಏನು ಮಾಡುತ್ತದೋ ಗೊತ್ತಿಲ್ಲ ವೈಯಕ್ತಿಕವಾಗಿ ನಾವು ಅರಿವನ್ನು ಹೊಂದಿರುವುದು ಅತ್ಯಗತ್ಯ ಎಂಬ ಪಾಠ ಕೂಡ ಅಶ್ವಥ್ ಅವರ ಜೀವನದಲ್ಲಿ ಅಡಗಿದೆ. ಅಶ್ವಥ್ ಅವರು ಜನವರಿ 18, 2010ರಂದು ನಿಧನರಾಗುವ ಮುಂಚೆ ಕಡೇ ಪಕ್ಷ ಒಂದು ದಶಕಕ್ಕೂ ಹೆಚ್ಚು ಕಾಲ ಅಶ್ವಥ್ ಕಷ್ಟದ ಬದುಕನ್ನು ನಡೆಸಿರುವುದು ಸರ್ವವೇದ್ಯ. ಅವರು ದೊಡ್ಡ ಕಲಾವಿದರು, ಅವರಿಗೆ ನಾವು ಬೆಂಬಲವಾಗಿದ್ದೆವು ಎಂದು ತೋರಿಸಿಕೊಳ್ಳಲು ನಮ್ಮ ಸಾಮಾಜಿಕ ವ್ಯವಸ್ಥೆಗೆ ಆಸ್ಥೆ ಮೂಡಿಸಿಕೊಂಡಿದ್ದು ಅವರು ಸಾಯುವ ಕೆಲವು ಮುಂಚಿತ ದಿನಗಳಲ್ಲಿ ಮಾತ್ರ. ಅಶ್ವಥ್ ಅವರಂತೆ ಇನ್ನೂ ಬಹುತೇಕ ಕಲಾವಿದರು, ಸಾಮಾನ್ಯ ಜನ, ಸಾಮಾನ್ಯರಲ್ಲಿ ಸಾಮಾನ್ಯರ ಬಗ್ಗೆ ನಮ್ಮ ಇಂದಿನ ವ್ಯವಸ್ಥೆ ಎಂಬ ಅವ್ಯವಸ್ಥೆ ತೀವ್ರವಾಗಿ ನೋಡುವ ಅಗತ್ಯತೆ ಇದೆ.
ಹೀಗೆ ಕೆ.ಎಸ್. ಅಶ್ವಥ್ ಎಲ್ಲ ರೀತಿಯಲ್ಲೂ ಸಾಮಾನ್ಯರ ಪ್ರತಿನಿಧಿ. ಅಸಾಮಾನ್ಯ ಕಲಾವಿದ. ಅವರು ಎಲ್ಲ ರೀತಿಯಲ್ಲೂ ನಮ್ಮ ಹೃದಯದಲ್ಲಿ ಸ್ಥಾಪಿತರು. ಅವರ ನೆನಪು ಅವರ ಜೀವನ ಕಾಲದಲಿದ್ದ ನಮಗೆ ಎಂದೆಂದೂ ಅಮರ.
Subscribe to:
Post Comments (Atom)
No comments:
Post a Comment