`ಕಲರವ' ಎಂಬ ಬ್ಲಾಗ್‍ನ್ನು ಓದುತ್ತಿದ್ದೆ. ಅದರಲ್ಲಿ ಕಂಡು ಬಂದ ಲೇಖನ ಒಂದೊಮ್ಮೆ ನನ್ನನ್ನು ಯೋಚನಾಲಹರಿಗೆ ತಳ್ಳಿತು. ಕೆ.ಎಸ್.ಸುಪ್ರೀತ್ ಎಂಬುವವರು ಈ ಒಂದು ಲೇಖನವನ್ನು ಬರೆದಿದ್ದಾರೆ. ಇದು ಕೇವಲ ಅವರ ಅಭಿಪ್ರಾಯವಾ... ಅಥವಾ ಬ್ಲಾಗ್ ನಿರ್ವಹಿಸುವ ನನ್ನಂಥ ಲಕ್ಷಾಂತರ ಬ್ಲಾಗಿಗರ ಮನೋವೇದನೆಯಾ....? ಏನೇ ಆದರೂ ತಾನು ಬರೆಯುವ ಲೇಖನಕ್ಕೆ ಓದುಗರಿಂದ ಪ್ರತಿಕ್ರಿಯೆಗಳನ್ನು ಪ್ರತಿಯೊಬ್ಬ ಬ್ಲಾಗಿಗನು ನಿರೀಕ್ಷಿಸುತ್ತಾನೆ. ಅದು ಸಹಜವೂ ಕೂಡ. ಓದುಗರ ಕಮೆಂಟ್ಸ್ ಬ್ಲಾಗಿಗನ ಬರೆಯುವಿಕೆಗೆ ಮತ್ತಷ್ಟು ಉತ್ಸಾಹ ತುಂಬುತ್ತದೆ. ಇದಕ್ಕೆ ನೀವೇನಂತೀರಿ...?
ಆ ಲೇಖನ ಇಲ್ಲಿದೆ. ಓದಿಕೊಳ್ಳಿ.
========================
- ಸುಪ್ರೀತ್ ಕೆ. ಎಸ್, ಬೆಂಗಳೂರು.
ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ
ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ
ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು
ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ
ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು
ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ
ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು
ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ
ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ
ಹಾನಿಯೇನೂ ಆಗಿಲ್ಲ!
ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ
ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ
ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು
ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ
ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ
ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ,
ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು,
ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ
ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ
ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು
ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.
ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು
ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ
ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು
ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ
ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ?
ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು
ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ
ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ
ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು
ಸೇರಿಕೊಂಡು ಬಿಟ್ಟಿವೆಯೇ?
ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ
ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ,
ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ
ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ
ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ
ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ
ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧ್ಯಾನಿಸುತ್ತಾ ಬದುಕು ಕಳೆದುಬಿಡಲಾ
ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ
ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ
ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಈ
ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ
ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.
ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ
ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ,
ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ
ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು, ನಾನು ಕಂಡುಕೊಂಡ
ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು
ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ
ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ.
ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ
ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ
ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ
ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ
ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ
ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ
ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ
ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ
ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!
ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ
ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ
ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು
ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?
No comments:
Post a Comment