Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday, 28 December 2011

ನೂತನ ವರ್ಷಾಚರಣೆಯ ಅರ್ಥ, ಐತಿಹ್ಯ


        ಭೂತಕಾಲದ ನೋವು-ನಲಿವುಗಳು, ಭವಿಷ್ಯದ ಸುಂದರ ಕನಸುಗಳನ್ನು ವರ್ತಮಾನದಲ್ಲಿ ಸಮೀಕರಿಸುವ ಸಂಭ್ರಮವೇ ನೂತನ ವರ್ಷಾಚರಣೆ.
        ಕ್ರಿ.ಶ.ಪೂರ್ವ ೨೦೦೦ರಲ್ಲಿ ಬೆಬಲೋನಿಯನ್ನರು ಪ್ರಥಮ ಚಂದ್ರದರ್ಶನದೊಂದಿಗೆ ಚಳಿಗಾಲದಲ್ಲಿ ಈ ಆಚರಣೆ ಜಾರಿಗೆ ತಂದಿದ್ದರೆಂದು ನಂಬಲಾಗಿದೆ. ಆದರೆ, ವಿಶ್ವದ ನಾನಾ ಕಡೆ ಹಲವಾರು ದಿನಗಳಂದು ನೂತನ ವರ್ಷಾಚರಣೆಯನ್ನು ಆಚರಿಸಲಾಗುತ್ತದೆ. ಆದರೂ ವಿಶ್ವದ ಬಹುತೇಕ ದೇಶಗಳು ಜನವರಿ ೧ನ್ನು ನೂತನ ವರ್ಷಾಚರಣೆಯನ್ನಾಗಿ ತುಂಬ ವೈಶಿಷ್ಟ್ಯದಿಂದ ಸಂಭ್ರಮದಿಂದ ಸ್ವಾಗತಿಸುತ್ತವೆ.

              ಪಾಶ್ಚಿಮಾತ್ಯ ದೇಶಗಳಲ್ಲಿ ಜನವರಿ ೧ನ್ನು ನೂತನ ವರ್ಷವಾದರೆ ಭಾರತದಲ್ಲಿ ಚಂದ್ರಮಾನ ಪ್ರಕಾರ ಹಿರಿಯರು ಯುಗಾದಿಯನ್ನು ನೂತನ ವರ್ಷವೆಂದು ಪರಿಗಣಿಸುತ್ತಾರೆ. ಹೊಸ ಸಂವತ್ಸರದ ಪ್ರಾರಂಭವೇ ಯುಗಾದಿ. ಹೊಸ ಸಂವತ್ಸರದಲ್ಲಿ ನಡೆಯುವ ಸಿಹಿ-ಕಹಿ ಘಟನೆಗಳನ್ನು ಬೇವು-ಬೆಲ್ಲದಂತೆ ಸಮವಾಗಿ ಸ್ವೀಕರಿಸಬೇಕೆಂಬುದೇ ಈ ಹಬ್ಬದ ಸಾರ.
                     ಕೆಲವು ದೇಶಗಲಲ್ಲಿ ಹೊಸ ವರ್ಷದ ದಿನದಂದು ಸಂಭವಿಸುವ ಕಹಿ ಘಟನೆಗಳು ವರ್ಷದುದ್ದಕ್ಕೂ ಸಂಭವಿಸುತ್ತದೆ ಎಂಬ ಮೂಢ ನಂಬಿಕೆ (?) ಆಳವಾಗಿ ಬೇರುಬಿಟ್ಟಿದ್ದು ಆ ದಿನದಂದು ಹೊಸ ಕಾರ್ಯ ಮಾಡಲು ಅನೇಕರು ಹಿಂಜರಿಯುತ್ತಾರೆ.

         ಕುಟುಂಬದ ಸ್ನೇಹಿತರು, ಆತ್ಮೀಯರು, ಪರಮಾಪ್ತರು ಈ ನೂತನ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುತ್ತಾರೆ. ಈ ದಿನದಂದು ಪರಸ್ಪರ ಕೈ ಕುಲುಕಿ, ಸಿಹಿ ಹಂಚಿ ಸಂಭ್ರಮದಿಂದ ಹೊಸ ವರ್ಷ ಆಚರಿಸುತ್ತಾರೆ. ಸ್ನೇಹಿತರು ಮನರಂಜನೆ, ಭೋಜನ ಕೂಟ ಏರ್ಪಡಿಸುವ ಮೂಲಕ ಪರಸ್ಪರ ಸ್ನೇಹ-ಪ್ರೀತಿ-ವಿಶ್ವಾಸ ನಿರಂತರವಾಗಿರಲಿ ಎಂದು ಆಶಿಸುತ್ತಾರೆ.

ಜನವರಿ ತಿಂಗಳ ಶಬ್ದದ ಉತ್ಪತ್ತಿ :


             ಜನವರಿ ತಿಂಗಳಲ್ಲಿ ೩೧ ದಿನಗಳಿರುತ್ತವೆ. `ಜನವರಿ ಎಂಬ ಶಬ್ದ ಲ್ಯಾಟಿನ್ ಭಾಷೆಯ `ಜಾನಸ್' ಎಂಬ ಶಬ್ದದಿಂದ ಬಂದಿದೆ. `ಜಾನಸ್' ಎಂದರೆ ಹೆಬ್ಬಾಗಿಲು ಎಂದರ್ಥ. ಈ ತಿಂಗಳು ವರ್ಷದ ಹೆಬ್ಬಾಗಿಲಿನಂತಿರುವುದರಿಂದ ಇದನ್ನು `ಜನವರಿ' ಎಂದು ಕರೆಯಲಾಗುತ್ತದೆ.


 ಹೊಸ ವರ್ಷದಲ್ಲಿ ಕೈಗೊಳ್ಳಬಹುದಾದ ಸಪ್ತ ಸಂಕಲ್ಪಗಳು:

೧. ಈ ವರ್ಷ ಮತ್ತಷ್ಟು ಆರೋಗ್ಯವಾಗಿರುತ್ತೇನೆ ಅಂತ ನಿರ್ಧರಿಸಿ. ಬೆಳಿಗ್ಗೆ ಐದು ಗಂಟೆಗೆ ಎದ್ದು ಜಾಗಿಂಗ್ ಹೋಗುತ್ತೇನೆನ್ನುವ ರೆಸೆಲ್ಯೂಷನ್ ಹಾಕಿಕೊಳ್ಳಿ. ನೆನಪಿರಲಿ : ಪ್ರತಿದಿನದ ಬೆಳಗಿನ ಒಂದು ಜಾಗಿಂಗ್ ನಿಮ್ಮ ಇಡೀ ಬದುಕನ್ನು ಉಲ್ಲಾಸದಿಂದಿರಿಸುತ್ತದೆ.

೨. ಬಹಳ ಜನ ಉದ್ಯೋಗಸ್ಥರು ಉದ್ಯೋಗ, ವ್ಯವಹಾರದಲ್ಲಿ ಮುಳುಗಿ ಮನೆ, ಕುಟುಂಬದ ಕಡೆಗೆ ಗಮನವೇ ನೀಡಿರುವುದಿಲ್ಲ. ಈ ವರ್ಷ ಹಾಗಾಗದಿರಲಿ. ವಾರಕ್ಕೆ ಒಂದು ದಿನವಾದರೂ ಬಿಡುವು ಮಾಡಿಕೊಂಡು ಕುಟುಂಬದ ಸದಸ್ಯರೊಡನೆ ಸಂತೋಷದಿಂದ ಕಾಲ ಕಳೆಯಿರಿ. ಇದರಿಂದ ಪರಸ್ಪರ ಬಾಂಧವ್ಯ ಹೆಚ್ಚುತ್ತದೆ.

೩. ಈ ವರ್ಷದಿಂದ ಕುಡಿತ, ಸಿಗರೇಟ್, ಗುಟಖಾ ಬಿಟ್ಟೆ ಬಿಡುತ್ತೇನೆ ಎಂಬ ದೃಢ ಸಂಕಲ್ಪವಿರಲಿ.

೪. ಮದುವೆ ಆಗಬೇಕೆಂದು ಬಯಸಿರುತ್ತೀರಿ ಅದಕ್ಕಾಗಿ ಹಲವಾರು ಹುಡುಗಿಯರನ್ನು ನೋಡೀ ಬಂದು ಯಾವುದೋ ಕಾರಣಗಳಿಗೆ ಒಪ್ಪದೇ ಮದುವೆ ಮುಂದೂಡಿರುತ್ತೀರಿ. ಈ ವರ್ಷ ಹಾಗಾಗುವುದು ಬೇಡ. ಈ ವರ್ಷ ಮದುವೆ ಆಗಿಯೇ ತೀರುತ್ತೇನೆ ಎಂದು ನಿರ್ಧರಿಸಿ. ನಿಮ್ಮ ಕನಸು, ಮೌಲ್ಯಗಳು, ಅಭಿರುಚಿಗೆ ಹೊಂದುವ ಸಂಗಾತಿಯನ್ನು ಆರಿಸಿಕೊಳ್ಳಿ. ನೆನಪಿರಲಿ. ಇದು ನಿಮ್ಮದೇ ಆಯ್ಕೆ. ನಿಮ್ಮದೇ ಜೀವನ. ಎರಡನ್ನೂ ಈ ವರ್ಷವೇ ಚೆನ್ನಾಗಿ ರೂಪಿಸಿಕೊಳ್ಳಿ.

೫. ಈ ವರ್ಷ ಏನಾದರೊಂದು ಒಳ್ಳೆಯದು ಸಮಾಜಕ್ಕೆ ಉಪಯೋಗವಾಗುವುದನ್ನು ಕಲಿತು ಜೀವನದಲ್ಲಿ ಮುಂದಕ್ಕೆ ಬರುತ್ತೇನೆಂಬ ದೃಢ ನಿರ್ಧಾರ ಕೈಗೊಳ್ಳಿ ಮತ್ತು ಅದರಂತೆ ನಡೆಯಿರಿ.

೬. ಇಷ್ಟು ವರ್ಷ ನೀವು ಖರ್ಚು ಮಾಡಿರುವ ಹಣ ನಿಮಗೆ ಗೊತ್ತಿಲ್ಲದಂತೆಯೇ ಸೋರಿ ಹೋಗಿರುತ್ತದೆ. ಅದಕ್ಕಾಗಿ ಈ ವರ್ಷದಿಂದ ನೀವು ಖರ್ಚು ವೆಚ್ಚದ ಲೆಕ್ಕವನ್ನು ಒಂದು ಡೈರಿಯಲ್ಲಿ ಬರೆದಿಡಿ. ಇದರಿಂದ ನೀವು ಮಾಡುವ ಅನಾವಶ್ಯಕ ಖರ್ಚುಗಳು ನಿಮಗೆ ಗೋಚರಿಸುತ್ತವೆ.

೭. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಅಲ್ಲಿ ಇಲ್ಲಿ ಹಣ ಪೋಲು ಮಾಡುವುದಕ್ಕಿಂತ ಬಡವರು, ನೊಂದವರು, ವೃದ್ಧರಿಗೆ ನೀಡಿ. ಒಂದು ಸಣ್ಣ ಮಟ್ಟದ ಹಣ ಒಂದು ಹಸಿದ ಹೊಟ್ಟೆಗೆ ಅನ್ನ ನೀಡಿತು.  ಈ ಮೂಲಕ ಸಮಾಜದ ಋಣ ತೀರಿಸಲು ಪ್ರಯತ್ನಿಸಿ.


             ಲೇಖನಕ್ಕೆ ಪೂರಕವಾಗಿ ಒಂದು ಕವನ

         ಬಂದಿದೆ ಹೊಸ ವರುಷ
          ತರಲಿ ನಮಗೆ ಹರುಷ
           ಭವಿಷ್ಯದಲ್ಲಿ ಮೂಡಿ ಬರಲಿ
          ಸಂತಸದ ರಸ ನಿಮಿಷ
           ತುಂಬಿರಲಿ ಜೀವನದಲಿ
         ಪರರೊಂದಿಗೆ ಸಮರಸ
          ಹೊಸ ವರ್ಷವನ್ನು ಹೊತ್ತು
          ಮೂಡಿ ಬರುತ್ತಿರುವ 
          ಓ ಹೊಂಬೆಳಕೆ....!
           ನೀಡು ನೀ ಎಲ್ಲರಿಗೂ
          ಸಿಹಿ-ಕಹಿಯ ರಸ
         ಎಲ್ಲೆಡೆ ಚಾಚಿರುವ
         ಭಯೋತ್ಪಾದನೆಯ ಕಬಂಧ
          ಬಾಹುಗಳು ನಿರ್ನಾಮವಾಗಲಿ
        ಭಾರತೀಯರ ಶೌರ್ಯ
         ಎದೆಗಾರಿಕೆ ಇಡೀ ಜಗತ್ತಿಗೆ ತಿಳಿಯಲಿ
         ಅಳಿಯಲಿ ಭ್ರಷ್ಟಾಚಾರ
         ಕೋಮುವಾದದ ಸಂಘರ್ಷ
         ಬೆಳೆಯಲಿ ಎಲ್ಲರಲಿ
          ಸ್ನೇಹ-ಪ್ರೀತಿ ವಿಶ್ವಾಸ



   ಲೇಖನ ಬರೆದವರು :
 ಗುರುಪ್ರಸಾದ್ .ಎಸ್. ಹತ್ತಿಗೌಡರ


 ಇದು ಈ ವರ್ಷದ ಕೊನೆಯ ಲೇಖನ. ಈ ಮೂಲಕ ನಿಮಗೆಲ್ಲ ಹೊಸ ವರ್ಷದ ಶುಭಾಶಯಗಳು. 

No comments: