Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 5 May 2011

ವಿದ್ಯಾರ್ಥಿಗಳಿಗಾಗಿ ಈ ನುಡಿಗಳು

ವಿದ್ಯಾರ್ಥಿಗಳೇ, ನಿಮ್ಮ ಮಾತೃಭಾಷೆ ಕನ್ನಡವೇ? ಇಂಗ್ಲೀಷ್ ಪಠ್ಯವನ್ನು ಅರ್ಥ ಮಾಡಿಕೊಳ್ಳುವದು ಕಷ್ಟವಾಗುತ್ತಿದೆಯೇ? ಹಾಗಿದ್ದರೆ ನಿಮ್ಮ ಸಮಸ್ಯೆಗೊಂದು ಸರಳ ಪರಿಹಾರ ಇಲ್ಲಿದೆ...

          ಪಾಠವನ್ನು ಮೊದಲೊಮ್ಮೆ ಇಡಿಯಾಗಿ ಓದಿರಿ. ನಿಮಗೆ ಅರ್ಥವಾಗುತ್ತಿಲ್ಲ ಎನಿಸಿದ ಪದಗಳಿಗೆ ನಿಘಂಟಿನಲ್ಲಿ ಅರ್ಥ ಹುಡುಕಿ. ಅವುಗಳ ಅರ್ಥವನ್ನು ಬಾಯಿಪಾಠ ಮಾಡಿರಿ ನಂತರ ಪುನಃ ಎರಡನೇ ಬಾರಿ ಇಡಿಯಾಗಿ ಆ ಪಾಠವನ್ನು ಓದಿ. ಈ ಸಲ ಆ ಪಾಠ ಬಹುಮಟ್ಟಿಗೆ ಅರ್ಥವಾಗಿರುತ್ತದೆ. ಹಾಗೆಂದು ಅಲ್ಲಿಗೆ ಪುಸ್ತಕ ಮುಚ್ಚಿಡಬೇಡಿ. "ಮುಟ್ಟಿದ್ದಕ್ಕೆ ಮೂರು ಸಲ" ಎನ್ನುವಂತೆ ಮೂರನೇ ಬಾರಿಯೂ ಆ ಪಾಠವನ್ನು ಇಡಿಯಾಗಿ ಓದಿ. ಆಗ ಆ ಪಾಠ ನಿಮಗೆ ಸಂಪೂರ್ಣವಾಗಿ ಮನದಟ್ಟಾಗಿರುತ್ತದೆ. ಈ ಪದ್ಧತಿಗೆ "ಸಿಂಪಲ್ ರೀಡಿಂಗ್ ಅಂಡ್ ರಿ ರೀಡಿಂಗ್ ಹ್ಯಾಬಿಟ್" ಎನ್ನುತ್ತಾರೆ.



"ಅಯ್ಯೋ, ನನಗೆ ಏಕಾಗ್ರತೆಯೇ ಇಲ್ಲ, ಓದು ತಲೆಗೆ ಹತ್ತುತ್ತಿಲ್ಲ. ಓದಲಿಕ್ಕೆ ಕುಳಿತರೆ ಮನಸ್ಸು ಚಂಚಲತೆಯಿಂದ ಅತ್ತಿತ್ತ ಹರಿದಾಡುತ್ತದೆ." ಎಂದು ಯೋಚಿಸುತ್ತಿರುವಿರೇನು? ಹಾಗಾದರೆ ಪಟ್ಟಣದಲ್ಲಿ ಚಿತ್ರಮಂದಿರಕ್ಕೆ ಬಂದಿರುವ ಒಂದು ಹೊಸ ಚಿತ್ರವನ್ನು ನೋಡಿಕೊಂಡು ಬನ್ನಿ. ಇದೇನಿದು ಹೀಗೆ ಹೇಳುತ್ತಿದ್ದಾರಲ್ಲ ಎನ್ನುವಿರೇನು? ಸ್ವಲ್ಪ ತಡೆದು ಯೋಚಿಸಿ - ಮೂರು ಘಂಟೆಗಳ ಕಾಲ ಚಲನಚಿತ್ರ ನೋಡುವಾಗ ಅತ್ತಿತ್ತ ಹರಿದಾಡದ ಮನಸ್ಸು, ಭಂಗಗೊಳ್ಳದ ಏಕಾಗ್ರತೆ, ಅಭ್ಯಾಸ ಮಾಡುವಾಗ ಏಕೆ ವ್ಯತಿರಿಕ್ತವಾಗಿ ವರ್ತಿಸುತ್ತವೆ? ಇಲ್ಲಿ ನಮಗೆ ಏಕಾಗ್ರತೆ ಸಿದ್ಧಿಸಬೇಕಾದರೆ, ನಾವು ಯಾವ ವಿಷಯದ ಮೇಲೆ ಏಕಾಗ್ರತೆ ಸಿದ್ಧಿಸಿಕೊಳ್ಳಲು ಬಯಸುತ್ತೇವೆಯೋ ಆ ವಿಷಯದ ಮೇಲೆ ಆಸಕ್ತಿ ಬೆಳೆಸಿಕೊಳ್ಳಬೇಕು. ಅಂದರೆ ಇಲ್ಲಿ ಆಸಕ್ತಿಯೆಂಬುದು ಏಕಾಗ್ರತೆಯ ತಾಯಿಯಾಗಿದೆ. ಏಕಾಗ್ರತೆ ಮೂಡಿಸಿಕೊಳ್ಳಬೇಕಾದರೆ ಮೊದಲು ಆಸಕ್ತಿ ಬೆಳೆಸಿಕೊಳ್ಳಬೇಕು.


ಪ್ರಿಯ ವಿದ್ಯಾರ್ಥಿಗಳೇ, ನಿಮ್ಮಲ್ಲಿ ಕೆಲವರು "ನನಗೆ ಜ್ಞಾಪಕ ಶಕ್ತಿ ಇಲ್ಲ, ಓದಿದ್ದು ನೆನಪಿರುವದಿಲ್ಲ." ಎಂದು ಅಲವತ್ತುಕೊಳ್ಳುತ್ತಿರುತ್ತೀರಿ. ನಿಮಗಿಷ್ಟವಿರುವ ಚಲನಚಿತ್ರದ ಹೆಸರು, ನಾಯಕ, ನಾಯಕಿ ಹೆಸರುಗಳು, ಅಷ್ಟೇ ಏಕೆ;  ಹಾಡುಗಳ ಪ್ರತಿಯೊಂದು ಸಾಲುಗಳು ನಿಮಗೆ ನೆನಪಿರುತ್ತವೆ. ಇವೆಲ್ಲ ನೆನಪಿರುವಷ್ಟು ಚೆನ್ನಾಗಿ ವಿಜ್ಞಾನ, ಗಣಿತದ ಸೂತ್ರಗಳು, ಇಂಗ್ಲೀಷ್ ಪಾಠಗಳು, ಕನ್ನಡ ಪಠ್ಯ ಮುಂತಾದವು ನೆನಪಿರುವದಿಲ್ಲ...!
ಇದಕ್ಕೆ ಕಾರಣ ಇಷ್ಟೇ :-
                 ನಾವು ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡಿರುವದಿಲ್ಲ. ನಾವು ಯಾವುದಾದರೊಂದು ವಿಷಯವನ್ನು ಓದಿದ ಗಂಟೆಯ ನಂತರ ಓದಿದುರಲ್ಲಿ ಅರ್ಧದಷ್ಟನ್ನು ಮರೆತುಬಿಡುವ ಸಾಧ್ಯತೆಯಿದೆ. ಅದರಂತೆ, ನಂತರದ ಎಂಟು ತಾಸುಗಳಲ್ಲಿ ಓದಿದ್ದರಲ್ಲಿ ಶೇ.೬೦ರಷ್ಟು ಮರೆತುಬಿಡುವ ಸಾಧ್ಯತೆಯಿದೆ. ಆದ್ದರಿಂದಲೇ ಶಿಕ್ಷಕರು ಪಾಠ ಹೇಳಿದ ನಂತರ ಪುನರಾವರ್ತನೆ ಮಾಡುವದು ಉತ್ತಮ. ನೆನಪಿರಲಿ, ನೆನಪಿನ ಶಕ್ತಿಯನ್ನು ಅಭಿವೃದ್ಧಿಪಡಿಸುವ ಯಾವುದೇ ಲೇಹ್ಯ, ಔಷಧಿಗಳಿಲ್ಲ. ಜ್ಞಾಪಕ ಶಕ್ತಿ ಎಂಬುದು ಸಂಪೂರ್ಣವಾಗಿ ಆಸಕ್ತಿಗೆ ಸಂಬಂಧಿಸಿದ್ದು. ಆಸಕ್ತಿಯಿದ್ದರೆ, ಯಾವ ವಿಷಯವಾದರೂ ತಲೆಗೆ ಹತ್ತುತ್ತದೆ.


No comments: