Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday 4 May 2011

ವೀರ ಸನ್ಯಾಸಿ ವಿವೇಕಾನಂದ


ಸನಾತನ ಧರ್ಮದ ಭಾರತೀಯ ಸಂಸ್ಕೃತಿಯ ಆರಾಧಕರಾಗಿ, ಸಂಪೂರ್ಣ ವಿಶ್ವದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರದ ಸ್ವಾಮಿ ವಿವೇಕಾನಂದರು ಭಾರತ ಮಾತೆಯ ಸತ್ಪುತ್ರರಾಗಿದ್ದರು. ಭಾರತ ದೇಶದಲ್ಲಿ ಶತಶತಮಾನಗಳಿಂದ ನಡೆದು ಬಂದಿರುವ ಜೀವನ ಶೈಲಿಯನ್ನು ಹಿಂದೂ ಧರ್ಮದ ಸಾರವನ್ನು ಜಗತ್ತಿಗೆ ತಿಳಿಸಿ ಕೊಟ್ಟ ಮಹಾನುಭಾವರು ವಿವೇಕಾನಂದರಾಗಿದ್ದಾರೆ.

ಕೌಟುಂಬಿಕ ಹಿನ್ನೆಲೆ:
೧೯ನೇ ಶತಮಾನದಲ್ಲಿ ಕಲ್ಕತ್ತಾದಲ್ಲಿ ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ಎಂಬ ಕ್ಷಾತ್ರವಂಶದ ಸೇರಿದ ದಂಪತಿಗಳು ವಾಸವಾಗಿದ್ದರು. ವಿಶ್ವನಾಥದತ್ತರು ಸುಪ್ರಸಿದ್ಧ ವಕೀಲರಾಗಿದ್ದರು ಅಷ್ಟೇ ಉದಾರ ಮನದವರಾಗಿದ್ದರು. ಬಡವರನ್ನು ನೋಡಿದಾಗ ಮರಗುವ ಹೃದಯ; ಯಾರು ಬಂದು ಸಹಾಯ ಕೇಳಿದರೂ ಇಲ್ಲವೆಂದು ಹೇಳುವ ಸ್ವಭಾವ
ದವರಲ್ಲ. ದೊಡ್ಡ ಮೇಧಾವಿ. ವಿಶಾಲವಾದ ಪ್ರಪಂಚದ ಅನುಭವವಿತ್ತು. ಲಲಿತಕಲೆ, ಸಾಹಿತ್ಯ ಮುಂತಾದವುಗಳಲ್ಲಿ ಅಭಿರುಚಿ ಬೆಳೆಸಿಕೊಂಡಿದ್ದರು. ಬೈಬಲ್ ಮತ್ತು ಪರ್ಶಿಯದ ಮಹಕವಿ ಹಾಫೀಜನ ಕವಿತೆಯನ್ನೋದುವದೆಂದರೆ ಅವರಿಗೆ ತೀರದ ಆಸೆ. ಸುಖವಾದ ಕಂಠವಿದ್ದುದರಿಂದ ಹಾಡಿಕೆಯಲ್ಲಿಯೂ ಅವರಿಗೆ ಅಪಾರ ಪ್ರೀತಿ. ಇವರಿಗೆ ಅನುರೂಪಳಾದ ಸತಿ ಭುವನೇಶ್ವರಿದೇವಿಯರು ಮಹಾನ್ ದೈವಭಕ್ತರು. ಪೂಜೆ, ವ್ರತ ಮುಂತಾದವನ್ನು ಮಾಡುವದೆಂದರೆ ಅವರಿಗೆ ತುಂಬ ಆಸಕ್ತಿ. ಪ್ರತಿನಿತ್ಯ ಓದುವ ಗ್ರಂಥ, ಪುರಾಣಗಳಲ್ಲಿ ಬರುವ ತ್ಯಾಗಿಗಳ ತಪಸ್ವಿಗಳ ವೀರಪುಂಗವರ ಆದರ್ಶ ಅವರಲ್ಲಿ ರಕ್ತಗತವಾಗಿತ್ತು. ಅಪಾರವಾದ ದೈವಭಕ್ತಿ, ಶ್ರದ್ಧೆ, ಶುಚಿಯಾದ ಜೀವನ ದತ್ತವಂಶದ ಹುಟ್ಟುಗುಣಗಳಾಗಿದ್ದವು. ವಿಶ್ವನಾಥದತ್ತರ ತಂದೆ ರಾಮಮೋಹನ ದತ್ತರು ಶ್ರೀಮಂತರೂ, ಉದಾರಿಗಳೂ ಆಗಿದ್ದರು. ಇವರ ಹಿರಿಯ ಮಗ ದುರ್ಗಾಚರಣ ದತ್ತ ಬುದ್ದದೇವನಂತೆ ತನ್ನ ಕುಮಾರನ ಜನನವನ್ನು ಕಂಡು ಸಂಸಾರ ತ್ಯಾಗ ಮಾಡಿ ಸನ್ಯಾಸವನ್ನು ಸ್ವೀಕರಿಸಿ ದೇಶಾಂತರ ಹೋದರು.

ಈ ದಂಪತಿಗಳಿಗೆ ಎರಡು ಹೆಣ್ಣು ಮಕ್ಕಳು. ಒಂದು ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದರು. ಅದಕ್ಕಾಗಿ ಒಂದು ದಿನ ಭುವನೇಶ್ವರಿಯವರು ಕಾಶಿಯ ವಿಶ್ವನಾಥನಲ್ಲಿ ಒಂದು ಗಂಡು ಮಗುವನ್ನು ಕರುಣಿಸೆಂದು ಹರಕೆ ಹೊತ್ತರು. ಸದಾ ವಿಶ್ವನಾಥನ ಪೂಜೆ, ಧ್ಯಾನದಲ್ಲಿ ಕಾಲ ಕಳೆಯತೊಡಗಿದರು. ಒಂದು ದಿನ ಭುವನೇಶ್ವರಿಯವರ ಕನಸಿನಲ್ಲಿ ಶಿವನು ತನ್ನ ಅನಂತ ತಪ್ಪಸ್ಸಿನಿಂದ ಎದ್ದು ಬಂದು, ಮಗುವಿನ ರೂಪತಾಳಿ ತನ್ನಲ್ಲಿ ಸೇರಿದಂತಾಯಿತು. ತಾಯಿಗೆ ಹಿಡಿಸಲಾರದಷ್ಟು ಹಿಗ್ಗು. ಶಿವನೇ ನನ್ನ ಮಗನಾಗಿ ಹುಟ್ಟುತ್ತಾನೆಂಬ ಸಂತೋಷ ಅವಳ ಮನದ ತುಂಬ ತುಂಬಿತು.

ಆ ದಂಪತಿಗಳ ಇಷ್ಟಾರ್ಥ ಸಿದ್ದಿಸಿತು. ೧೮೬೩ ನೇ ಇಸ್ವಿ ಜನವರಿ ೧೨ ನೇ ತಾರೀಖಿನಂದು ಮಕರಸಂಕ್ರಾಂತಿಯ ಶುಭದಿನದಂದು ಸುಂದರ ಗಂಡು ಮಗುವಿಗೆ ಭುವನೇಶ್ವರಿಯವರು ಜನ್ಮವಿತ್ತರು. ಮಗುವಿಗೆ ವಿರೇಶ್ವರ ಎಂದು ನಾಮಕರಣ ಮಾಡಿದರು. ಅನ್ನಪ್ರಾಶನದ ಸಮಯದಲ್ಲಿ ನರೇಂದ್ರನಾಥನೆಂದು ಕರೆದರು. ತಂದೆ ತಾಯಿಗಳು ಪ್ರೀತಿಯಿಂದ "ಬಿಲೆ" ಎಂದು ಕರೆಯುತ್ತಿದ್ದರು.

ನರೇಂದ್ರನು ತುಂಬಾ ತುಂಟ ಹುಡುಗ. ಗದರಿಸಿದರೆ ಸುಮ್ಮನಾಗುವ ಸ್ವಭಾವವೇ ಅಲ್ಲ ಅವನದು. ಅಕ್ಕ ತಂಗಿಯರನ್ನು ಕಾಡುವದು, ಅವರು ಅಟ್ಟಿಸಿಕೊಂಡು ಬಂದರೆ ಓಡಿ ಹೋಗಿ ಕೆಸರಿನ ಗುಂಡಿಯಲ್ಲಿ ಇಳಿದು ಅವರು ಅಲ್ಲಿಗೆ ಬರಲಾರದೆ ನಿಂತಾಗ ಅವರನ್ನು ಅಣಕಿಸಿ ಕೆರಳಿಸುತ್ತಿದ್ದ. ಒಮ್ಮೊಮ್ಮೆ ಅವನ ಉಪಟಳ ಹೆಚ್ಚಾದಾಗ ತಾಯಿಗೆ ಸಹನೆ ಮೀರಿ "ಶಿವನೇ ಮಗನಾಗಿ ಹುಟ್ಟಲೆಂದು ಪ್ರಾರ್ಥಿಸಿದೆ. ಅವನು ತನ್ನ ಭೂತಗಣವೊಂದನ್ನು ಮಗನಾಗಿ ಕಳುಹಿಸಿದ್ದಾನೆ." ಎಂದು ಉದ್ಗಾರ ತೆಗೆಯುತ್ತಿದ್ದರು. ಒಮ್ಮೊಮ್ಮೆ ಇವನನ್ನು ಹಿಡಿದಿಡುವದು ಕಷ್ಟವಾದಾಗ ತಾಯಿ ಭುವನೇಶ್ವರಿಯು ಅವನ ತಲೆಯ ಮೇಲೆ ಒಂದು ಚೊಂಬು ನೀರು ಚಿಮುಕಿಸಿ ಕಿವಿಯಲ್ಲಿ ಶಿವಮಂತ್ರವನ್ನು ಉಸುರಿಸಿದರೆ ಸುಮ್ಮನಾಗಿ ನಕ್ಕು ಶಾಂತನಾಗುತ್ತಿದ್ದ.

ನರೇಂದ್ರನಿಗೆ ಸಾಧುಸಂತರನ್ನು ಕಂಡರೆ ತುಂಬಾ ಪ್ರೀತಿ. ಮನೆಯಲ್ಲಿ ಇದ್ದಿದ್ದೆಲ್ಲವನ್ನೂ ಅವರಿಗೆ ದಾನಮಾಡಿಬಿಡುತ್ತಿದ್ದ. ಪಶು-ಪಕ್ಷಿಗಳೆಂದರೆ ಅವನಿಗೆ ತುಂಬ ಇಷ್ಟ. ಮನೆಯ ಹಸು ಅದರ ಪುಟ್ಟ ಕರು ಇವನ ಆಟದ ಗೆಳೆಯವಾಗಿತ್ತು. ಗಾಡಿ ಹೊಡೆಯುವದೆಂದರೆ ನರೇಂದ್ರನಿಗೆ ಬಲು ಮೋಜಿನದಾಗಿತ್ತು. ಗಾಡಿ ಹೊಡೆಯುವವನು ಅವನ ದೃಷ್ಟಿಯಲ್ಲಿ ದೊಡ್ಡ ಮನುಷ್ಯ. ಮುಂದೊಂದು ದಿನ ತಾನು ಗಾಡಿ ಹೊಡೆಯುವವನಾಗಬೇಕೆಂದು ಬಯಸಿದ್ದನು.

ನರೇಂದ್ರನಿಗೆ ವಿದ್ಯಾಭ್ಯಾಸ ಆರಂಭವಾದಾದ್ದು ತನ್ನ ತಾಯಿಯ ತೊಡೆಯ ಮೇಲೆ. ಭುವನೇಶ್ವರಿ ದೇವಿಯವರು ನರೇಂದ್ರನಿಗೆ ಅಕ್ಷರಾಭ್ಯಾಸದ ಜೊತೆಗೆ ರಾಮಾಯಣ ಮಹಾಭಾರತದಂತಹ ಕಥೆಯನ್ನು ಹೇಳುತ್ತಿದ್ದರು. ಪುರಾಣ ಪುಣ್ಯ ಕಥೆಗಳು ಅವನ ಮನ ನಾಟುವಂತೆ ಹೇಳುತ್ತಿದ್ದರು. ಎಳೆಯ ವಯಸ್ಸಿನಲ್ಲಿ ಕೇಳಿದ ಇಂತಹ ಕಥೆಗಳು ಬಂಡೆಯ ಮೇಲೆ ಕೊರೆದ ಅಕ್ಷರದಂತೆ ಅಚ್ಚಳಿಯದೆ ನಿಂತವು. ತಾನೂ ಮುಂದೆ ಅವರಂತೆ ಆಗಬೇಕೆಂದು ಬಯಸಿದನು.

ಪ್ರತಿದಿನ ರಾತ್ರಿ ನರೇಂದ್ರನಿಗೆ ಒಂದು ವಿಚಿತ್ರ ಅನುಭವವಾಗುತ್ತಿತ್ತು. ಅವನ ಹುಬ್ಬುಗಳ ಮಧ್ಯೆ ಒಂದು ಬೆಳಕು ಕಾಣಿಸಿಕೊಂಡು, ಬೆಳೆದು, ದೇಹಾದ್ಯಂತವನ್ನು ವ್ಯಾಪಿಸಿದಂತಾಗುತ್ತಿತ್ತು. ಇದು ಎಲ್ಲರಿಗೂ ಆಗುವ ಅನುಭವವೆಂದು ಅವನು ಹೆಚ್ಚು ಬೆಲೆ ಕೊಡಲಿಲ್ಲ. ಇತರರು ಏನಾದರೂ ಹೇಳಿದರೆ ಅದನ್ನು ವಿಚಾರ ಮಾದದೆ ಒಪ್ಪಿಕೊಳ್ಳುವ ಸ್ವಭಾವ ಕೆಲವರದು. ಆದರೆ ನರೇಂದ್ರನು ಯಾವುದನ್ನೂ ವಿಮರ್ಶೆ ಮಾಡದೆ ಒಪ್ಪುತ್ತಿರಲಿಲ್ಲ. ಪಕ್ಕದ ಮನೆಯಲ್ಲಿ ಒಂದು ದೊಡ್ದ ಮರವಿತ್ತು. ಅಲ್ಲಿಗೆ ಆಗಾಗ ಹೋಗಿ ಗೆಳೆಯರೊಂದಿಗೆ ಮರಕೋತಿ ಆಡುತ್ತಿದ್ದನು. ಇದರಿಂದ ಬೇಸತ್ತ ಆ ಮನೆಯ ಯಜಮಾನ ಅವರಿಗೆ ಅ ಮರದಲ್ಲಿ ಬ್ರಹ್ಮ ರಾಕ್ಷಸ ವಾಸವಾಗಿದೆಯಂದು ಅದು ಮರ ಏರುವವರನ್ನು ಕೊಲ್ಲುತ್ತದೆ ಎಂದು ಬೆದರಿಕೆ ಹಾಕಿದನು. ಇದರಿಂದ ನರೇಂದ್ರನ ಸ್ನೇಹಿತರೆಲ್ಲ ದೂರ ಸರಿದರು. ಆದರೆ ನರೇಂದ್ರ ಅವರನ್ನೆಲ್ಲ ಹಾಸ್ಯ ಮಾಡುತ್ತಾ, "ಹುಚ್ಚರೆ! ಬ್ರಹ್ಮರಾಕ್ಷಸ ಇದ್ದಿದ್ದರೆ ನನ್ನನ್ನು ಯಾವತ್ತೋ ಹಿಡಿದು ಕೊಂದುಬಿಡುತ್ತಿತ್ತು." ಎಂದು ಮರದ ಮೇಲಿಂದಲೆ ಕೂಗಿ ಹೇಳಿದನು.

ನರೇಂದ್ರನನ್ನು ಅವನ ಆರನೆಯ ವರ್ಷದಲ್ಲಿ ಶಾಲೆಗೆ ಸೇರಿಸಿದರು. ಶಾಲೆ ಸೇರಿದ ಕೆಲವು ದಿವಸಗಳಲ್ಲಿಯೇ ನರೇಂದ್ರ ಕೆಟ್ಟ ಬಯ್ಗಳನ್ನು ಕಲಿತು ಬಂದು, ಅವುಗಳ ಅರ್ಥ ತಿಳಿಯದೆ ಮನೆಯಲ್ಲಿಯೂ ಅವುಗಳನ್ನು ಬಳಸತೊಡಗಿದ. ಮನೆಯವರು ಇವನ ವರ್ತನೆಯನ್ನು ನೋಡಿ ಶಾಲೆ ಬಿಡಿಸಿ, ಮನೆಯಲ್ಲಿಯೇ ಒಬ್ಬ ಉಪಾಧ್ಯಾಯನನ್ನು ಪಾಠಕ್ಕೆ ಗೊತ್ತು ಮಾಡಿದರು. ಇತರ ಬಾಲಕರು ಅಕ್ಷರ ಕಲಿಯುವದರೊಳಗೆ ನರೇಂದ್ರನಿಗೆ ಓದುವದೂ ಬರೆಯುವದೂ ಬಂದುಬಿಟ್ಟಿತ್ತು. ಏಳನೆಯ ವಯಸ್ಸಿಗೆ "ಮುಗ್ಧಬೋಧ" ಎಂಬ ಸಂಸ್ಕೃತ ವ್ಯಾಕರಣ ಅವನಿಗೆ ಕಂಠಪಾಠವಾಗಿತ್ತು. ರಾಮಾಯಣ, ಮಹಾಭಾರತ ಕಥೆಗಳನ್ನು ಚಾಚೂ ತಪ್ಪದಂತೆ ಹೇಳುತ್ತಿದ್ದ. ನರೇಂದ್ರನ ಚೇತನ ವಿದ್ಯುಚ್ಚಕ್ತಿಯಂತೆ ಹರಿಯುತ್ತಿತ್ತು. ಆಟಗಳಲ್ಲಿ ಯಾವುದಾದರೂ ಅವನಿಗೆ ಅಂಜಿಕೆಯೇ ಇಲ್ಲ. ಒಂದು ದಿನ ಗೆಳೆಯರೊಂದಿಗೆ ಪ್ರೇಮ ಕಲಹವಾಡುತ್ತಿದ್ದಾಗ ಮೇಲಿಂದ ಕೆಳಗೆ ಬಿದ್ದು ಹಣೆಗೆ ಗಾಯವಾಗಿ ರಕ್ತ ಸುರಿಯಲಾರಂಭಿಸಿತು. ಆ ಗಾಯದ ಗುರುತು ನರೇಂದ್ರ ಬೆಳೆದು ದೊಡ್ಡವನಾದ ಮೇಲೂ ಅಚ್ಚಳಿಯದಂತೆ ಉಳಿದಿತ್ತು. ಅವನ ಪುಣ್ಯಗುರುವೊಮ್ಮೆ ಅದನ್ನು ಕಂಡು "ನರೇಂದ್ರನಿಗೆ ಈ ಗಾಯವಾಗಿ, ಇದರಿಂದ ಅವನ ಶಕ್ತಿಗೆ ಸ್ವಲ್ಪ ತಡೆಯುಂಟಾಗಿದ್ದರೆ ಅವನು ಜಗತ್ತನ್ನೇ ಚೂರು ಚೂರು ಮಾಡಿಬಿಡುತ್ತಿದ್ದ" ಎಂದು ಉದ್ಗರಿಸಿದ್ದರು.

ಸ್ವಲ್ಪ ಓದುವದು ಬರೆಯುವದು ಬಂದ ಮೇಲೆ ನರೇಂದ್ರನನ್ನು ಮಾಧ್ಯಮಿಕ ಶಾಲೆಗೆ ಹಾಕಿದರು. ಅಲ್ಲಿಯೂ ಅವನ ಚೇಷ್ಟೆಗೆ ಲಗಾಮಿರಲಿಲ್ಲ. ಒಂದು ದಿನ ಮೇಷ್ಟ್ರರು ಪಠಮಾಡುತ್ತಿದ್ದಾಗ ಕೆಲವು ಹುಡುಗರು ಚೇಷ್ಟೆ ಮಾಡುತ್ತಿದ್ದರು. ಮೇಷ್ಟರು ಹುಡುಗರ ಪೈಕಿ ಯಾರೂ ಹೇಳಿರಲಿಲ್ಲ. ನರೇಂದ್ರನಾದರೊ ಸ್ವಲ್ಪವೂ ತಪ್ಪದೇ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಚಾಚೂ ತಪ್ಪದೇ ಹೇಳಿದ. ಉಪಾಧ್ಯಾಯರು ನರೇಂದ್ರನನ್ನು ಹೊರತು ಪಡಿಸಿ ಎಲ್ಲ ಹುಡುಗರನ್ನು ಬೆಂಚಿನ ಮೇಲೆ ನಿಲ್ಲಿಸಿದರು. ನರೇಂದ್ರನು ಬೆಂಚಿನ ಮೇಲೆ ಎದ್ದು ನಿಲ್ಲಲಾಗಿ ಉಪಾಧ್ಯಾಯರು ಕಾರಣ ಕೇಳಿದಾಗ ತಾನು ಚೇಷ್ಟೆ ಮಾಡಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳಿ ಶಿಕ್ಷೆಯನ್ನನುಭವಿಸಿದ.

ನರೇಂದ್ರನದು ವಿಪರೀತ ಚಟುವಟಿಕೆ. ಸದಾ ಏನಾದರೊಂದು ಹೊಸದನ್ನು ಕಂಡು ಹಿಡಿಯುವ ಮನೋಭಾವ. ಯಾವುದಾದರೂ ಆಟದಲ್ಲಿ ತಲ್ಲೀನರಾಗಿರುತ್ತಿದ್ದ. ಸ್ನೇಹಿತರ ಗುಂಪು ಕಟ್ಟಿಕೊಂಡು ನಾಟಕವಾಡುವದು, ಸರ್ಕಸ್ ಮಾಡುವದು, ಗರಡಿ ಮನೆಗೆ ನುಗ್ಗಿ ಕತ್ತಿ ವರಸೆ, ದೊಣ್ಣೆ ತಿರುಗಿಸುವದು, ದೋಣಿ ನಡೆಸುವದು ಇವೆಲ್ಲಾ ಬೇಸರವೆನಿಸಿದರೆ ಸ್ನೇಹಿತರ ಜೊತೆಗೆ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಹೋಗಿ ಬರುತ್ತಿದ್ದ.

ನರೇಂದ್ರ ಸ್ನೇಹಜೀವಿ, ಪರೋಪಕಾರಿ. ಎಲ್ಲರಿಗೂ ಬೇಕಾದವನಾಗಿದ್ದ. ಎಲ್ಲರನ್ನೂ ಅವರ ವಯಸ್ಸಿಗೆ ತಕ್ಕಂತೆ ಅಕ್ಕ, ತಂಗಿ, ಚಿಕ್ಕಮ್ಮ ಎಂದು ಕರೆದು ಪ್ರೀತಿ ಗಳಿಸಿಕೊಂಡಿದ್ದ. ಸ್ನೇಹಿತರ ಸಂಕಷ್ಟಕ್ಕೆ ನೆರವಾಗುತ್ತಿದ್ದ. ಒಂದು ಬಾರಿ ಎಲ್ಲ ಸ್ನೇಹಿತರ ಜೊತೆಗೆ ಹೊರಗಡೆ ಹೋಗಿದ್ದಾಗ ಒಬ್ಬ ಹುಡುಗ ಆಕಸ್ಮಿಕವಾಗಿ ಅಸ್ವಸ್ಥನಾದ. ಅವನನ್ನು ದೋಣಿಯ ಮೇಲೆ ಕರೆದೊಯ್ಯಲು ಅಂಬಿಗರು ನಿರಾಕರಿಸಿದರು. ಬಹಳ ಒತ್ತಾಯದ ನಂತರ ಕರೆದುಕೊಂಡು ಹೋಗಿ ದಂಡೆಯ ಮೇಲೆ ಬಿಟ್ಟು ಮಾತಾಡಿದ್ದಕ್ಕಿಂತ ಎರಡರಷ್ಟು ಹೆಚ್ಚಿಗೆ ಹಣ ಕೊಡುವಂತೆ ಪೀಡಿಸತೊಡಗಿದರು. ತಕ್ಷಣ ನರೇಂದ್ರ ದೂರದಲ್ಲಿ ಹೋಗುತ್ತಿದ್ದ ಇಂಗ್ಲೀಷ್ ಸಿಪಾಯಿಗಳ ಬಳಿ ಓಡಿ ಹೋಗಿ ತನ್ನ ಹರಕು ಮುರುಕು ಇಂಗ್ಲೀಷ್ ಭಾಷೆಯಲ್ಲಿ ಅವರಿಗೆ ನಡೆದ ವಿದ್ಯಮಾನವನ್ನು ವಿವರಿಸಿದ. ಸಿಪಾಯಿಗಳು ಅವನ ಸಹಾಯಕ್ಕೆ ಬರುತ್ತಿರುವದನ್ನು ಕಂಡ ಅಂಬಿಗರು ಅಲ್ಲಿಂದ ಓಟ ಕಿತ್ತರು.

ವಯಸ್ಸಾಗುತ್ತ ನರೇಂದ್ರನಲ್ಲಿ ವಿಶೇಷ ಮಾರ್ಪಾಟುಗಳಾದವು. ಪುಸ್ತಕಗಳನ್ನು, ವೃತ್ತಪತ್ರಿಕೆಗಳನ್ನು ಬಿಡದೆ ಓದುವದು, ಉಪನ್ಯಾಸಗಳಿಗೆ ಹೋಗುವದು, ಹಿರಿಯರೊಂದಿಗೆ ವಿಷಯಗಳನ್ನು ಚರ್ಚಿಸಿ ತನ್ನ ತಿಳುವಳಿಕೆಗಳನ್ನು ಹೆಚ್ಚಿಸಿಕೊಳ್ಳುವದರ ಕಡೆಗೆ ಅವನ ಲಕ್ಷ್ಯ ಹೋಯಿತು. ನರೇಂದ್ರನ ತಂದೆ ವಿಶ್ವನಾಥದತ್ತ ಕಲ್ಕತ್ತೆಯನ್ನು ಬಿಟ್ಟು ರಾಯಪುರಕ್ಕೆ ಹೋಗಬೇಕಾಗಿ ಬಂತು. ರಾಯಪುರಕ್ಕೆ ಹೋದಮೇಲೆ ನರೇಂದ್ರನಿಗೆ ಶಾಲೆ ತಪ್ಪಿ ಹೋಯಿತು. ಊರಿನಲ್ಲಿ ಶಾಲೆಯಿಲ್ಲದಿದ್ದುದು ನರೇಂದ್ರನಿಗೆ ಒಂದು ವಿಷಯದಲ್ಲಿ ಒಳ್ಳೆಯದೇ ಆಯಿತು. ತಂದೆ ವಿಶ್ವನಾಥದತ್ತರ ಸಹವಾಸ ಹೆಚ್ಚು ಹೆಚ್ಚು ದೊರಕುವಂತಾಯಿತು. ಮಗನನ್ನು ಕೂಡಿಸಿಕೊಂಡು ದತ್ತರು ಅನೇಕ ವಿಷಯಗಳನ್ನು ತಿಳಿಸಿ, ಚರ್ಚೆಮಾಡಲು, ಹಲ್ವು ದೃಷ್ಟಿಯಿಂದ ಒಂದು ವಿಷಯವನ್ನು ನೋಡಿ ಸರಿಯಾದ ನಿರ್ಧಾರಕ್ಕೆ ಬರಲು ನೆರವಾಗುತ್ತಿದ್ದರು. ತಂದೆಯ ಸರಳತನ, ಸತ್ಯಪ್ರಿಯತೆ, ಉದಾತ್ತ ಹೃದಯ, ಆಳವಾದ ಪಾಂಡಿತ್ಯ ಮಗನ ಮನಸ್ಸಿನ ಮೇಲೆ ಯೋಗ್ಯ ಪರಿಣಾಮವನ್ನುಂಟು ಮಾಡಿದವು. ಶಿಕ್ಷಣವೆಂದರೆ ವಿಷಯಗಳನ್ನು ಸಂಗ್ರಹಿಸಿ ತಲೆಯನ್ನು ಭಾರಗೊಳಿಸುವದಲ್ಲ, ಬುದ್ಧಿಯನ್ನು ಕೆರಳಿಸಿ ಮನಸ್ಸನ್ನು ಅರಳಿಸುವದು ಎನ್ನುವ ತತ್ವ ನರೇಂದ್ರನಿಗೆ ಚೆನ್ನಾಗಿ ಮನದಟ್ಟಾಯಿತು.

ನರೇಂದ್ರ ಇಂಗ್ಲೀಷ್, ಬಂಗಾಳಿ ಸಾಹಿತ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದ. ಆದರೆ ಜ್ಯಾಮಿತಿ ಅವನಿಗೆ ಮೈಗಂಟಿರಲಿಲ್ಲ. ಪರೀಕ್ಷೆಗೆ ೨-೩ ದಿವಸ ಮುಂಚೆ ಹಟ ಹಿಡಿದು ಕುಳಿತು ಅದನ್ನು ಸಾಧಿಸಿಕೊಂಡ. ಕಲಿಯುವ, ತಿಳಿಯುವ ಶ್ರದ್ಧೆಯಿದರೆ ಯಾವ ಹೊತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ವಿದ್ಯೆಗೆ ಕಾಲದ, ವಯಸ್ಸಿನ ಇತಿಮಿತಿಯಿರಲಿಲ್ಲ ಎಂಬುದು ಅವನ ಅನುಭವಕೆ ಬಂದಿತು. ಓದಿನಲ್ಲಿಯೂ ಅಸಾಧಾರಣ ಮನೋಬಲ ಬೆಳೆಯುತ್ತ ಬಂದಿತು. ಗ್ರಂಥದ ಒಂದು ಪಂಕ್ತಿ ಓದಿದರೆ ಮುಂದೆ ನಾಲ್ಕಾರು ಪುಟಗಳ ವಿಷಯ ಒಮ್ಮೆಲೇ ಮನಸ್ಸಿಗೆ ಹೊಳೆಯುತ್ತಿತ್ತು. ಗ್ರಂಥಕರ್ತನ ವಾದವೈಖರಿ ಸ್ವಲ್ಪ ಅರಿವಾದರೆ ಸಾಕು, ಅವನು ಮುಂದೆ ಹೀಗೇ ಬೆಳೆಸುತ್ತಾನೆಂದು ಊಹಿಸಲು ಸಮರ್ಥನಾದ. ನರೇಂದ್ರನಿಗೆ ಸಂಗೀತವೆಂದರೆ ಪ್ರಾಣ. ಅಹಮದ್ ಖಾನ್ ಮತ್ತು ವೇಣಿಗುಪ್ತ ಎಂಬ ಪ್ರಸಿದ್ಧ ಸಂಗೀತ ವಿದ್ವಾಂಸರಲ್ಲಿ ನಾಲ್ಕೈದು ವರ್ಷ ಬಿಡದೆ ಅಭ್ಯಾಸ ಮಾಡಿದ. ಹಿಂದಿ, ಉರ್ದು, ಬಂಗಾಳಿ, ಪಾರಶಿ ಹಾಡುಗಳನ್ನು ಅವನು ಶಾಸ್ತ್ರೋಕ್ತವಾಗಿ ಮಧುರವಾಗಿ ಹಾಡಲು ಕಲಿತ.

ಪ್ರವೇಶ ಪರೀಕ್ಷೆಯಾದ ಮೇಲೆ ನರೇಂದ್ರ ಕಾಲೇಜು ಸೇರಿದ. ಅದೇ ವರ್ಷ ತನ್ನ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊಫೆಸರ್ ವಿಲಿಯಂ ಹೇಸ್ಟಿಯವರ ಬಾಯಿಂದ ಶ್ರೀ ರಾಮಕೃಷ್ಣರ ಹೆಸರನ್ನು ಕೇಳಿದ. ತರಗತಿಯಲ್ಲಿ ಕವಿ ವರ್ಡ್ಸ್‌ವರ್ತರ "ಎಕ್ಸರ್ಷನ್" ಕವಿತೆಯನ್ನು ಬೋಧಿಸುತ್ತ ಪ್ರಕೃತಿ ಸೌಂದರ್ಯವನ್ನು ಕವಿ ಹೇಗೆ ಅನುಭವಿಸಿದ ಎಂಬುದನ್ನು ಪ್ರೊಫೆಸರು ವರ್ಣಿಸುತ್ತಿದ್ದರು. ವಿಷಯ ಕ್ಲಿಷ್ಟವಾಗಿದ್ದುದರಿಂದ ಯಾರಿಗೂ ಚೆನ್ನಾಗಿ ಅರ್ಥವಾಗುತ್ತಿರಲಿಲ್ಲ. "ಪರವಶತೆ" (ಭಾವ ಸಮಾಧಿ)ಯನ್ನು ವರ್ಣಿಸುತ್ತಾ ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ದಕ್ಷಿಣೇಶ್ವರದಲ್ಲಿರುವ ಶ್ರೀ ರಾಮಕೃಷ್ಣರ ಬಳಿ ಹೋಗಲು ಸಲಹೆ ನೀಡಿದರು. ಅಂದಿನಿಂದ ನರೇಂದ್ರ ಶ್ರೀ ರಾಮಕೃಷ್ಣರ ಬಳಿ ಹೋಗಿ ಬರಲು ವಿಚಾರ ಮಾಡತೊಡಗಿದ. ಮುಖ್ಯೋಪಾಧ್ಯಾಯರಾಗಿದ್ದ ವಿಲಿಯಂ ಹೇಸ್ಟಿಯವರು ನರೇಂದ್ರನ ವ್ಯಕ್ತಿತ್ವ ಕಂಡು, "ನರೇಂದ್ರ ಪ್ರತಿಭಾಶಾಲಿ. ನಾನು ಬಹಳ ಸಂಚರಿಸಿದ್ದೇನೆ. ಬಹಳ ವಿದ್ಯಾರ್ಥಿಗಳನ್ನು ಕಂಡಿದ್ದೇನೆ. ಆದರೆ ಇವನಂತಹವನನ್ನು ಇದುವರೆಗೂ ಕಂಡಿಲ್ಲ. ನರೇಂದ್ರ ಮುಂದೆ ಬಹಳ ಪ್ರಸಿದ್ಧಿಗೆ ಬರುತ್ತಾನೆ." ಎಂದು ಹೇಳುತ್ತಿದ್ದರು.

ನರೇಂದ್ರನ ವಿದ್ಯಾರ್ಥಿಜೀವನ ಏಕಮುಖವಾಗಿರಲಿಲ್ಲ. ತಾನು ತಿನ್ನಬೇಕು, ತಾನು ಆಡಬೇಕು, ತಾನು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂಬುದಷ್ಟೇ ಅವನ ಆಶಯವಾಗಿರಲಿಲ್ಲ. ಯಾವೊಬ್ಬ ವಿದ್ಯಾರ್ಥಿಗೆ ಏನೂ ತೊಂದರೆಯಾದರೂ, ದುಃಖವಾದರೂ ಅವನ ಸಹಾಯಕ್ಕೆ ನಿಲ್ಲುತ್ತಿದ್ದ. ನರೇಂದ್ರ ತಾರುಣ್ಯಾವಸ್ಥೆಗೆ ಬಂದಂತೆಲ್ಲ ಉಳಿದೆಲ್ಲ ಹುಡುಗರಂತೆ ಲೌಕಿಕ ಭೋಗಭಾಗ್ಯಗಳ ಕಡೆಗೆ ಗಮನ ಹರಿಸಲಿಲ್ಲ. ಬದಲಾಗಿ ವೈರಾಗ್ಯ ಜೀವನವನ್ನು ಇಷ್ಟಪಟ್ಟ. ಬ್ರಹ್ಮ ಸಮಾಜಕ್ಕೆ ಹೋಗಿ ಬರಲು ಆರಂಭಿಸಿದ. ನರೇಂದ್ರನನ್ನು ಅನೇಕ ಆಧ್ಯಾತ್ಮಿಕ ಪ್ರಶ್ನೆಗಳು ಕಾಡುತ್ತಿದ್ದವು. "ದೇವರಿದ್ದಾನೆಯೇ? ಇದ್ದರೆ ನಮ್ಮ ಕಣ್ಣಿಗೇಕೆ ಕಾಣಿಸುವದಿಲ್ಲ?" ಎಂದು ಕಂಡ ಕಂಡ ಗುರು-ಹಿರಿಯರು, ಸಾಧು-ಸಂತರನ್ನು, ವಿದ್ವಾಂಸ-ಪಂಡಿತರನ್ನು ಪ್ರಶ್ನಿಸಿ ಸೂಕ್ತ ಉತ್ತರ ಸಿಗದೇ ನಿರಾಶನಾಗುತ್ತಿದ್ದ. ಒಮ್ಮೆ ದೇವರನ್ನು ಕಂಡವರೆಂದು, ಮಹಾನ್ ವಿದ್ವಾಂಸರೆಂಡು ಪ್ರಸಿದ್ಧಿಯಾಗಿದ್ದ ಮಹರ್ಷಿ ದೇವೆಂದ್ರನಾಥ ಟ್ಯಾಗೋರ‍್ರನ್ನು ಸಂಧಿಸಿ ಇದೇ ಪ್ರಶ್ನೆ ಕೇಳಿದ. ದೇವೇಂದ್ರನಾಥರು ತಬ್ಬಿಬ್ಬಾದರು. ಆತನ ಪ್ರಶ್ನೆ ಸಹಜವಾದುದಾಗಿರಲಿಲ್ಲ. ಪ್ರಶ್ನೆಯಲ್ಲಿ ವೀರವಾಣಿಯಿತ್ತು. "ಮಗು, ನಿನಗೆ ಯೋಗಿಯ ಕಣ್ಣುಗಳ್ಳಿವೆ." ಎಂದು ದೇವೇಂದ್ರನಾಥರು ಪ್ರತಿಕ್ರಿಯಿಸಿದರು. ನರೇಂದ್ರ ಅವರಲ್ಲಿ ಹೋಗಿದ್ದುದು ತನ್ನ ಕಣ್ಣುಗಳ ಬಗ್ಗೆ ಪ್ರಶಸ್ತಿಯನ್ನು ಪಡೆದು ಬರುವದಕ್ಕಲ್ಲ. ಮಹರ್ಷಿಗಳ ಉತ್ತರ ಅವನಿಗೆ ಸಮಾಧಾನ ತರಲಿಲ್ಲ. ದುಃಖದಿಂದ "ಇಲ್ಲ, ಅವರು ದೇವರನ್ನು ಕಂಡಿಲ್ಲ." ಎಂದು ನಿರ್ಧರಿಸಿದ. ಇದೇ ವೇಳೆಯಲ್ಲಿ ದಕ್ಷಿಣೇಶ್ವರದ ಶ್ರೀ ರಾಮಕೃಷ್ಣರ ಬಳಿ ಹೋಗಿ ತನ್ನ ಪ್ರಶ್ನೆಯನ್ನು ಮುಂದಿಡಬೇಕೆಂದು ನಿಶ್ಚಯಿಸಿದ.

ದಕ್ಷಿಣೇಶ್ವರದ ಶ್ರೀ ರಾಮಕೃಷ್ಣರ ಜೀವನ ಒಬ್ಬ ಆದರ್ಶ ಜಿಜ್ಞಾಸುವಿನ ಸಾಹಸ ಚರಿತ್ರೆ. ಅವರು ಹುಟ್ಟಿ ಬೆಳೆದದ್ದು ಬ್ರಾಹ್ಮಣರ ಮನೆಯಲ್ಲಿ. ಕಲಿತಿದ್ದು ಬಹಳ ಸ್ವಲ್ಪ ಅದೂ ಪರಂಪರಾಗತವಾದ ವೈದಿಕವಿದ್ಯೆ. ರಾಮಕೃಷ್ಣರಿಗೆ ಮದುವೆ ವಯಸ್ಸಾಗಲು ಹೆಣ್ಣು ಹುಡುಕಲು ಮನೆಯವರು ಪ್ರಾರಂಭಿಸಿದರು. ಆದರೆ ಆಧ್ಯಾತ್ಮ, ಧ್ಯಾನದ ಹಿನ್ನೆಲೆಯುಳ್ಳವನಿಗೆ ಹೆಣ್ಣು ಕೊಡಲು ಯಾರೂ ಒಪ್ಪಲಿಲ್ಲ. ಕೊನೆಗೆ ರಾಮಚಂದ್ರ ಮುಖರ್ಜಿಯವರ ಮಗಳಾದ ಐದು ವರ್ಷದ ಶಾರದಾದೇವಿಯನ್ನು ಕೊಟ್ಟು ವಿವಾಹಮಾಡಲಾಯಿತು. ಚಿಕ್ಕವಳಾಗಿರುವ ಇವಳನ್ನು ೧೬ ವರ್ಷಗಳ ನಂತರ ಗಂಡನಮನೆಗೆ ಕರೆತರಲಾಯಿತು. ಆಗ ರಾಮಕೃಷ್ಣರು "ನಿನಗೆ ಸಾಂಸಾರಿಕ ಸುಖ ಬೇಕೆ? ಅಥವಾ ಭಗವಾನಂದ ಬೇಕೆ?" ಎಂದು ಪತ್ನಿಯನ್ನು ಕೇಳಿದರು. ಮಹಾತಪಸ್ವಿನಿಯಾದ ಶಾರದಾದೇವಿಯವರು ರಾಮಕೃಷ್ಣರಿಗೆ, "ನಿಮ್ಮನ್ನು ಸಂಸಾರದ ಸುಳಿಗೆ ಸೆಳೆಯಲು ನನಗೆ ಮನಸ್ಸಿಲ್ಲ. ನಿಮ್ಮಂತೆಯೇ ನನ್ನನ್ನು ದೈವೀಭಕ್ತಳನ್ನಾಗಿ ಮಾಡಿರಿ." ಎಂದು ಬೇಡಿಕೊಂಡರು. ಪತಿಯ ದೈವೀಭಕ್ತಿಗೆ ಪ್ರೋತ್ಸಾಹ ನೀಡಿದ ಶಾರದಾದೇವಿಯವರು ರಾಮಕೃಷ್ಣರ ಪ್ರಥಮ ಶಿಷ್ಯೆಯಾದರು. ಹೆಂಡತಿಯೇ ದೇವರೆಂದು ಶ್ರೀ ರಾಮಕೃಷ್ಣರು ಭಾವಿಸಿದರು. ಎಲ್ಲ ಧರ್ಮ ತತ್ವಗಳನ್ನು ತಿಳಿಯುತ್ತ, ಆಚರಣೆಯಲ್ಲಿ ತರುತ್ತ ರಾಮಕೃಷ್ಣರು ಅವುಗಳ ಅಭಿನ್ನವಾದ ಒಂದುತನವನ್ನು ಕಂಡುಕೊಂಡರು. ನೀರು ಒಂದೇ- ಆದರೆ ಬೇರೆ ಬೇರೆ ಆಕಾರ ತಳೆಯುತ್ತದೆ; ನಿಜವಾಗಿ ನೋಡಿದರೆ ನೀರಿಗೆ ಆಕಾರವೇ ಇಲ್ಲ. ಹಾಗೆಯೇ ದೇವರೂ ಕೂಡ. ಭಕ್ತರ ನೋಟವಿದ್ದಂತೆ ಕಾಣಿಸಿಕೊಳ್ಳುತ್ತಾನೆ. ಈ ತಿಳುವಳಿಕೆಯೇ ಅವರಿಗೆ ಹಿಂದೂಧರ್ಮ, ಇಸ್ಲಾಂ, ಕ್ರಿಸ್ತಧರ್ಮಗಳೆಲ್ಲದರಲ್ಲಿಯೂ ಒಂದೇ ಸತ್ಯ, ಒಂದೇ ಸತ್ವವಿದೆಯೆಂದರಿಯಲು ಸಹಾಯಕವಾಯಿತು.

ದಕ್ಷಿಣೇಶ್ವರದಲ್ಲಿ ರಾಣಿ ರಾಸಮಣಿಯೆಂಬ ಶ್ರೀಮಂತಿನಿ ಕಟ್ಟಿಸಿದ್ದ ಕಾಳಿದೇವಾಲಯದಲ್ಲಿ ರಾಮಕೃಷ್ಣರು ಅರ್ಚಕರಾಗಿ ನಿಂತರು. ಸದಾ ತಾಯಿಯ ಧ್ಯಾನದಲ್ಲಿರುತ್ತಿದ್ದರು. ತಾಯಿಯನ್ನು ಕಾಣಲೂ ದಿನವೂ ಹಂಬಲಿಸುತ್ತಿದ್ದರು. ಕಾಣದಿದ್ದಾಗ ಕಾಳಿಯ ಕಲ್ಲು ಕಾಲುಗಳ ಮೇಲೆ ರಕ್ತ ಬರುವತನಕ ತಲೆ ಚಚ್ಚಿಕೊಳ್ಳುತ್ತಿದ್ದರು. ಮಕ್ಕಳಂತೆ ಅಳುತ್ತಿದ್ದರು. ಇವರನ್ನು ಕಂಡ ಜನ ಹುಚ್ಚು ಹಿಡಿದಿದೆ ಎಂದರು. ನಿಜ ಅವರಿಗೆ ಹುಚ್ಚು ಹಿಡಿದಿತ್ತು; ಆದರೆ ಲೋಕದ ಹುಚ್ಚಲ್ಲ, ಹಣ, ಅಧಿಕಾರ, ಪದವಿ ಬೇಕು ಎನ್ನುವ ಹುಚ್ಚಲ್ಲ. "ಏನೂ ಬೇಡ, ದೇವರೇ-ನೀನು ಬೇಕು ಎನ್ನುವ ಹುಚ್ಚು ರಾಮಕೃಷ್ಣರಿಗೆ ಹಿಡಿದಿತ್ತು. ಈ ಹುಚ್ಚನ ಬಳಿ ಜನ ತಂಡೋಪತಂಡವಾಗಿ ಬರುತ್ತಿದ್ದರು. ತಮ್ಮ ಸಮಸ್ಯೆ, ದುಃಖಗಳಿಗೆ ಪರಿಹಾರ ಕಂಡುಕೊಂಡು ಹೋಗುತ್ತಿದ್ದರು. ಒಮ್ಮೆ ನರೇಂದ್ರ ಇವರ ಬಳಿ ಬಂದು ಅವರಿದ್ದ ಕೋಣೆಯಲ್ಲಿ ಅನತಿ ದೂರದಲ್ಲಿ ಒಂದು ಮೂಲೆಯಲ್ಲಿ ಕುಳಿತ. ರಾಮಕೃಷ್ಣರು ನರೇಂದ್ರನನ್ನು ಹತ್ತಿರಕ್ಕೆ ಕರೆದು ಅವನನ್ನು ಕಂಡು ಅತ್ಯಾನಂದದಲ್ಲಿ ಮುಳುಗಿದರು. ಒಳಗೆ ಕರೆದೊಯ್ದು, ನರೇಂದ್ರನ ಕೈ ಹಿಡಿದು ಗದ್ಗದ ಕಂಠದಿಂದ, ಕಣ್ಣೀರು ಸುರಿಸುತ್ತಾ "ಏಕಿಷ್ಟು ತಡವಾಗಿ ಬಂದೆ? ಏತಕ್ಕೆ ನಾನು ಕಾಯುವಂತೆ ಮಾಡಿದೆ? ಲೋಕದ ಜನರ ಮಾತುಗಳನ್ನು ಕೇಳಿ ನನ್ನ ಕಿವಿಗಳು ಅಪವಿತ್ರವಾಗಿವೆ. ನನ್ನ ಹೃದಯವನ್ನು ನಿನ್ನ ಮುಂದೆ ಮಾತ್ರ ತೋಡಿಕೊಳ್ಳಬಲ್ಲೆ." ಎಂದು ಹೇಳುತ್ತಾ ಎದ್ದು ನಿಂತು ಕೈ ಜೋಡಿಸಿ, "ನೀನೇ ಆ ಪ್ರಾಚೀನ ಮಹರ್ಷಿ ನರ ನಾರಾಯಣನ ಅವತಾರ. ಲೋಕದ ದುಃಖದ ಹೊರೆಯನ್ನು ನೀಗಲು ಬಂದಿರುವ ಕಾರಣಪುರುಷ" ಎಂದರು. ನರೇಂದ್ರ ಆವಾಕ್ಕಾದ. "ಇದೇನು ಹುಚ್ಚು ನಡವಳಿಕೆ. ನಾನು ವಿಶ್ವನಾಥದತ್ತರ ಮಗ. ಇವರು ನನ್ನನ್ನು ನರ-ನಾರಾಯಣ ಎಂದೆಲ್ಲ ಸಂಬೋಧಿಸುತ್ತಿದ್ದಾರಲ್ಲ" ಎಂದುಕೊಂಡ. ರಾಮಕೃಷ್ಣ ಒಳಗೆದ್ದು ಹೋಗಿ ಮಿಠಾಯಿ, ಬೆಣ್ಣೆ, ಕಲ್ಲು ಸಕ್ಕರೆ ಮೊದಲಾದ ತಿನಿಸುಗಳನ್ನು ತಂದು ನರೇಂದ್ರನಿಗೆ ತಿನ್ನಿಸಲಾರಂಭಿಸಿದರು. ರಾಮಕೃಷ್ಣರ ಈ ನಡುವಳಿಕೆ ನರೇಂದ್ರನಿಗೆ ಆಶ್ಚರ್ಯವನ್ನುಂಟುಮಾಡಿತು. ಜನರು ಹೇಳುವಂತೆ ಈತ ಹುಚ್ಚನೇ ಇರಬಹುದು ಎಂದು ಅಂದುಕೊಂಡ. ಆದರೆ ಅವರ ಬಳಿ ಇದ್ದಾಗ ಇದ್ದಾಗ ಅಪೂರ್ವ ಮನಃಶಾಂತಿ, ಅವ್ಯಕ್ತಾನಂದ ಈಗಿರಲಿಲ್ಲ. ಏನು ಇದು ಸಮಸ್ಯೆ? ನರೇಂದ್ರನ ಬುದ್ಧಿಗೂ ಮನಸ್ಸಿಗೂ ದೊಡ್ಡ ಹೋರಾಟವೇ ಆರಂಭವಾಗಿತ್ತು. ಇದರಿಂದಾಗಿ ನರೇಂದ್ರ ಒಂದು ತಿಂಗಳ ಕಾಲ ದಕ್ಷಿಣೇಶ್ವರದ ಬಳಿ ಸುಳಿಯಲಿಲ್ಲ.

ಆದರೆ ಯಾವುದೋ ಅವ್ಯಕ್ತ ಶಕ್ತಿ ನರೇಂದ್ರನನ್ನು ಮತ್ತೆ ದಕ್ಷಿಣೇಶ್ವರಕ್ಕೆ ಎಳೆದೊಯ್ಯಿತು. ರಾಮಕೃಷ್ಣರು ನರೇಂದ್ರನನ್ನು ಮುಟ್ಟುತ್ತಲೇ ನರೇಂದ್ರ ಸ್ಮೃತಿ ತಪ್ಪಿದ. ಆಗ ರಾಮಕೃಷ್ಣರು ನರೇಂದ್ರನಿಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡು ಲೋಕವನ್ನು ಬೆಳಗಲು ಬಂದಿರುವ ನರೇಂದ್ರ ಮಹಾಪುರಷನೆಂದು ದೃಢವಾಗಿ ನಂಬಿದರು. ಪ್ರತಿ ಸಲ ನರೇಂದ್ರ ಬಂದಾಗಲೂ ರಾಮಕೃಷ್ಣರು ನರೇಂದ್ರನನ್ನು ಬಹಳ ಆಪ್ತವಾಗಿ ಕಾಣುತ್ತಿದ್ದರು. ಪ್ರೀತಿಸುತ್ತಿದ್ದರು. ಅವನ ಮೈದಡವುತ್ತಿದ್ದರು. ಅತಿಮೇಧಾವಿಯಾದ, ಗಟ್ಟಿಮನಸ್ಕನಾದ ನರೇಂದ್ರನನ್ನು ಮೇಣದಂತೆ ಮಾಡಿ ತಮ್ಮ ಬೇಕಾದ ಆಕಾರಕ್ಕೆ ತಿದ್ದುತ್ತಿದ್ದರು. ಇದರಿಂದ ನರೇಂದ್ರನಿಗೆ ಅವರ ಮೇಲೆ ಭಯ, ಭಕ್ತಿ ಗೌರವ ಹೆಚ್ಚಾಯಿತು. ರಾಮಕೃಷ್ಣ ಹುಚ್ಚನೆಂಬ ಭಾವನೆ ಹೊರಟು ಹೋಯಿತು. "ಇವರೇ ನನ್ನ ಗುರು" ಎಂಬ ಸತ್ಯ ಹೊಳೆಯಿತು. ಆದರೆ ನರೇಂದ್ರ ಮೂಢಭಕ್ತಿಯನ್ನು ಬೆಳೆಸಿಕೊಂಡು ರಾಮಕೃಷ್ಣರ ಪೂಜೆಯನ್ನಾರಂಭಿಸಲಿಲ್ಲ. ಚರ್ಚೆ, ವಾದ, ಮತಖಂಡನೆಯನ್ನು ಅವನು ಬಿಡಲಿಲ್ಲ. ತನ್ನ ಪ್ರತಿಯೊಂದು ಸಂಶಯಕ್ಕೂ ಗುರು ಕೊಡುತ್ತಿದ್ದ ಸಮಂಜಸವಾದ ಉತ್ತರ ಅವನ ಭಕ್ತಿಯನ್ನು ಹೆಚ್ಚಿಸುತ್ತ ಬಂತು. ತನ್ನ ವಿದ್ಯೆ, ಪಾಂಡಿತ್ಯ, ವಿಚಾರಶಕ್ತಿಗಳೆಲ್ಲಾ ರಾಮಕೃಷ್ಣರ ಮುಂದೆ ಏನೂ ನಡೆಯದಿರುವದನ್ನು ಕಂಡುಕೊಂಡ. ನರೇಂದ್ರ ಹೊರಟಿದ್ದು ಒಂದು ಮಹತ್ವದ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳಲಿಕ್ಕೆ. ಅದು "ದೇವರನ್ನು ಕಂಡಿದ್ದೀರಾ?" ರಾಮಕೃಷ್ಣರ ಮುಂದೆ ಆ ಪ್ರಶ್ನೆಯೇ ಏಳಲಿಲ್ಲ. ದೇವರನ್ನು ಕಂಡಿರುವ, ಕಾಣಿಸಲು ಸಮರ್ಥನಾಗಿರುವ ವ್ಯಕ್ತಿಯನ್ನು "ದೇವರನ್ನು ಕಂಡಿದ್ದೀರಾ?" ಎಂದು ಕೇಳುವ ಅವಶ್ಯಕತೆಯೇ ನರೇಂದ್ರನಿಗೆ ತೋರಲಿಲ್ಲ.

ನರೇಂದ್ರನನ್ನು ಕಂಡಾಗಲೆಲ್ಲ ರಾಮಕೃಷ್ಣರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಎಲ್ಲರ ಮುಂದೆ ಅವನನ್ನು ಹೊಗಳುತ್ತಿದ್ದರು. ನರೇಂದ್ರನ ಬಗ್ಗೆ ಯಾರೂ ಒಂದು ಕೊಂಕು ಮಾತನ್ನು ಆಡಲು ಅವಕಾಶ ಕೊಡುತ್ತಿರಲಿಲ್ಲ. "ನಿಮಗೆ ಯಾರಿಗೂ ಅವನು ಅರ್ಥವಾಗುವದಿಲ್ಲ. ಅವನು ನಿತ್ಯಸಿದ್ಧ. ಸಾಕ್ಷಾತ್ ಶಿವನ ಸ್ವರೂಪ" ಎಂದು ಹೇಳುತ್ತಿದ್ದರು. ಒಂದು ಸಲ ಸುಪ್ರಸಿದ್ಧ ಬ್ರಹ್ಮಸಮಾಜದ ಮುಖಂಡರಾದ ಕೇಶವಚಂದ್ರಸೇನರೂ, ವಿಜಯಕೃಷ್ಣ ಗೋಸ್ವಾಮಿಗಳೂ ರಾಮಕೃಷ್ಣರ ಕೊಠಡಿಯಲ್ಲಿ ಕುಳಿತಿದ್ದರು. ನರೇಂದ್ರನು ಇದ್ದ. ಆಗ ರಾಮಕೃಷ್ಣರು ನರೇಂದ್ರನ ಕಡೆ ಪ್ರೇಮದಿಂದ ನೋಡಿ, "ಮಹಾಪುರುಷತ್ವದ ಒಂದೇ ಒಂದು ಗುಣ ಕೇಶವಚಂದ್ರರನ್ನು ದೊಡ್ಡವರನ್ನಾಗಿ ಮಾಡಿದೆ. ಅಂತಹ ಎಂಟು ಗುಣಗಳಿವೆ ನರೇಂದ್ರನಲ್ಲಿ. ಕೇಶವ ಮತ್ತು ವಿಜಯರಲ್ಲಿ ಜ್ಞಾನದ ಜ್ಯೋತಿ ಮೊಂಬತ್ತಿ ದೀಪದಂತೆ ಉರಿಯುತ್ತಿದೆ. ನರೇಂದ್ರನಲ್ಲಿ ಅದು ಪ್ರಚಂಡ ಭಾಸ್ಕರನಂತೆ ಉರಿಯುತ್ತಿದೆ." ಎಂದು ಹೇಳಿದರು. ನರೇಂದ್ರನಿಗೆ ತನ್ನನ್ನು ಮಹಾನುಭಾವರೆದುರು ಹೋಲಿಸಿ ಮಾತನಾಡುತ್ತಿರುವರು ರಾಮಕೃಷ್ಣರ ಅಭಿಮಾನರತೀಕವೆನಿಸಿ ಬೇಸರಗೊಂಡನು. "ಮತ್ತೊಮ್ಮೆ ಆ ರೀತಿ ಮಾತಾಡಬೇಡಿ" ಎಂದು ಬೇಡಿಕೊಂಡನು. ಅದಕ್ಕೆ ರಾಮಕೃಷ್ಣರು "ನನ್ನ ಬಾಯಿಯಿಂದ ತಾಯಿಯು ನುಡಿಸಿದಳು, ನಾನೇನು ಮಾಡಲಿ?" ಎಂದರು.

ಗುರು ಶಿಷ್ಯನನ್ನು ಪರೀಕ್ಷೆ ಮಾಡದೆ ಒಪ್ಪಿಕೊಳ್ಳಬಾರದೆಂದು ಹಾಗೆಯೇ ಶಿಷ್ಯನು ಗುರುವನ್ನು ಪರೀಕ್ಷಿಸದೆ ಒಪ್ಪಿಕೊಳ್ಳಬಾರದೆಂದೂ ರಾಮಕೃಷ್ಣರು ಒತ್ತಿ ಹೇಳುತ್ತಿದ್ದರು. ಒಂದು ಸಲ ರಾಮಕೃಷ್ಣರು ಹೊರಗೆ ಹೋದಾಗ ನರೇಂದ್ರನು ಅವರ ಮಂಚದ ಹಾಸಿಗೆಯ ಕೆಳಗೆ ಒಂದು ಬೆಳ್ಳಿ ನಾಣ್ಯವನ್ನು ಇಟ್ಟನು. ರಾಮಕೃಷ್ಣರು ಹಿಂತಿರುಗಿ ಬಂದು ಹಾಸಿಗೆಯ ಮೇಲೆ ಕುಳಿತಾಗ ಅವರ ದೇಹವನ್ನು ಸಾವಿರ ಚೇಳು ಕುಟುಕಿದಂತಾಯಿತು. ಎದ್ದು ಹೊರಗೆ ನಿಂತು ಹಾಸಿಗೆಯನ್ನು ಕೊಡವಿದಾಗ ನಾಣ್ಯ ಹೊರಗೆ ಬಿತ್ತು. ಶಿಷ್ಯ ಪರೀಕ್ಷೆ ಮಾಡಿದನೆಂದು ತಿಳಿದು ರಾಮಕೃಷ್ಣರು ಸಂತೋಷಗೊಂಡರು.

ಇದ್ದಕ್ಕಿದ್ದಂತೆಯೇ ರಾಮಕೃಷ್ಣರು ನರೇಂದ್ರನನ್ನು ಅಸಡ್ದೆಯಿಂದ ನೋಡತೊಡಗಿದರು. ಅವನನ್ನು ಕಂಡು ಕಾಣದಂತೆ ಇರತೊಡಗಿದರು. ಹೀಗೆ ಒಂದು ತಿಂಗಳು ನಡೆಯಿತು. ಒಂದು ದಿನ ರಾಮಕೃಷ್ಣರು ನರೇಂದ್ರನನ್ನು ಕರೆದು, "ನಿನ್ನನ್ನು ಇಷ್ಟು ತಿರಸ್ಕರಿಸಿದರೂ, ಇಲ್ಲಿಗೇತಕ್ಕೆ ಬರುವೆ?" ಎಂದು ಕೇಳಿದರು. "ನಾನಿಲ್ಲಿಗೆ ನಿಮ್ಮ ಮಾತನ್ನು ಕೇಳುವದಕ್ಕೆ ಬರುತ್ತೇನೆಂದು ತಿಳಿದಿರಾ. ನಿಮ್ಮನ್ನು ನಾನು ಪ್ರೀತಿಸುತ್ತೇನೆ. ನಿಮ್ಮನ್ನು ನೋಡಬೇಕೆಂದು ಬಯಕೆಯಾದಾಗ ಬರುತ್ತೇನೆ." ಎಂದು ಉತ್ತರಿಸಿದ. "ಇಲ್ಲ ನರೇನ್ ನಿನ್ನನ್ನು ಪರೀಕ್ಷಿಸುತ್ತಿದ್ದೆ. ಪ್ರೇಮ ಗೌರವಗಳ ಬದಲು ಅಸಡ್ಡೆ, ಅಪಮಾನಗಳನ್ನ ನಿನಗಿತ್ತರೆ ಹೇಗೆ ವರ್ತಿಸುವೆಯೋ ಎಂದು ನೋಡಬೇಕೆಂದು ಹಾಗೆ ಮಾಡಿದೆ. ಇನ್ನೊಬ್ಬರಾದರೆ ಇಲ್ಲಿಗೆ ಬರುವದನ್ನು ಎಂದೋ ನಿಲ್ಲಿಸುತ್ತಿದ್ದರು." ಎಂದು ಹೇಳಿದರು.

ಕೆಲವು ದಿನಗಳ ನಂತರ ನರೇಂದ್ರನ ತಂದೆ ವಿಶ್ವನಾಥದತ್ತರು ಕಾಲವಾದರು. ಮನೆಯ ಸಂಸಾರ ಭಾರವೆಲ್ಲ ನರೇಂದ್ರನ ಮೇಲೆ ಬಿತ್ತು. ದತ್ತರು ಭವಿಷ್ಯತ್ತಿಗಾಗಿ ಹಣ ಕೂಡಿಸಿರಲಿಲ್ಲ. ಸಾಲಗಾರರು ಮನೆಗೆ ಬಂದು ಪೀಡಿಸತೊಡಗಿದರು. ಅಷ್ಟೇ ಅಲ್ಲದೆ ದಾಯಾದಿಗಳು ಆಸ್ತಿ ಪಾಲು ಬೇಕೆಂದು ಕೋರ್ಟ್‌ನಲ್ಲಿ ದಾವೆ ಹೂಡಿದರು. ಸಂಪತ್ತು ನಾಶವಾಗಿ ಮನೆಯಲ್ಲಿ ದಟ್ಟ ದರಿದ್ರಲಕ್ಷ್ಮಿ ಕಾಲಿಟ್ಟಳು. ಮನೆಯವರೆಲ್ಲ ಉಪವಾಸ ಇರುವಂತಾಯಿತು. ನರೇಂದ್ರ ಊರೆಲ್ಲ ಅಲೆದರೂ ಕೆಲಸ ಸಿಗಲಿಲ್ಲ. ತನ್ನ ಬುದ್ಧಿಮತ್ತೆಗೆ, ಮೇಧಾವಿತನಕ್ಕೆ ಒಂದು ಚಿಕ್ಕ ನೌಕರಿಯೂ ಸಿಗುತ್ತಿಲ್ಲವಲ್ಲ ಎಂದು ತನ್ನನ್ನೇ ತಾನು ಹಳಿದುಕೊಂಡ. ಆದರೆ ಅವನಿಗೇನು ಗೊತ್ತು ತಾನು ಮುಂದೊಂದು ದಿನ ಸಹಸ್ರ ಜನರ ಬಾಳಿಗೆ ಬೆಳಕಾಗುತ್ತೇನೆಂದು...

ನರೇಂದ್ರ ರಾಮಕೃಷ್ಣರ ಬಳಿ ಬಂದು "ನಮ್ಮ ಮನೆಯ ಬಡತನ ನೀಗುವಂತೆ ತಾಯಿಯ ಬಳಿ ಬೇಡಿಕೊಳ್ಳಿ. ನೀವು ಬೇಡಿದರೆ ಅವಳು ಇಲ್ಲವೆನ್ನುವದಿಲ್ಲ." ಎಂದ. ಅದಕ್ಕೆ ರಾಮಕೃಷ್ಣರು "ನನ್ನ ಬಾಯಿಯಿಂದ ಎಂದಿಗೂ ಅಂಥ ಪ್ರಾರ್ಥನೆ ಹೊರಡುವದಿಲ್ಲ. ಬೇಕಾದರೆ ನೀನೇ ಬೇಡಿಕೋ." ಎಂದರು. ನರೇಂದ್ರ ವಿಧಿಯಿಲ್ಲದೇ ತಾಯಿಯ ಬಳಿ ಹೋಗಿ, "ತಾಯಿ ನನಗೆ ವಿವೇಕ, ಜ್ಞಾನ ನೀಡು." ಎಂದು ಬೇಡಿದ. ಅವನು ಪ್ರತಿ ಬಾರಿಯೂ ಬೇಡಿಕೊಳ್ಳಲು ಬಂದಾಗ ಅವನ ಬಾಯಿಯಿಂದ ಜ್ಞಾನ, ವಿವೇಕ ಬೇಕೆಂದು ಕೇಳುತ್ತಿದ್ದನೇ ಹೊರತು ಸಂಪತ್ತು ಬೇಕು, ಬಡತನ ನಿವಾರಣೆಯಾಗಬೇಕು ಎಂದು ಬೇಡಿಕೊಳ್ಳಲಾಗಲಿಲ್ಲ. ಕೊನೆಗೆ ರಾಮಕೃಷ್ಣರೇ ಆತನನ್ನು ಸಂತೈಸಿ "ಆಯ್ತು ಹೋಗು, ನಿನ್ನ ಮನೆಯವರು ಹಸಿವಿನಿಂದ ಎಂದಿಗೂ ತೊಂದರೆಗೊಳಪಡುವದಿಲ್ಲ." ಎಂದು ಹೇಳಿ ಕಳಿಸಿದರು.

ನರೇಂದ್ರನ ಜೀವನವನ್ನು ಮೇಲು ಮಟ್ಟಕ್ಕೆ ಒಯ್ದದ್ದು ಅವನ ನಿಷ್ಠೆ, ದಾರ್ಢ್ಯ ಮತ್ತು ಗುರುವಿನ ಅನಂತಕರುಣೆ. ದಕ್ಷಿಣೇಶ್ವರದಲ್ಲಿ ನರೇಂದ್ರನ ಸಾಧನೆ ಆರಂಭವಾಯಿತು. ಮೊದಮೊದಲು ನರೇಂದ್ರನಿಗೆ ಮನಸ್ಸನ್ನು ಒಂದು ಕಡೆ ಹಿಡಿದು ನಿಲ್ಲಿಸುವದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅದು ಕಪಿಯಂತೆ ಸಿಕ್ಕಂತೆ ಹಾರಾಡುತ್ತಿತ್ತು. ಸ್ವಲ್ಪ ಶಬ್ದವಾದರೂ ಚಿತ್ತೈಕಾಗ್ರತೆಗೆ ಭಂಗ ಬರುತ್ತಿತ್ತು. ಹುಬ್ಬಿನ ಮಧ್ಯೆ ನೋಟ ನಿಲ್ಲಿಸಿ ಧ್ಯಾನ ಮಾಡಬೇಕಾಗಿತ್ತು. ನರೇಂದ್ರನಿಗೆ ಹೇಗೆಂದು ಸಮಸ್ಯೆಯಾಯಿತು. ಗುರು ಆ ಸ್ಥಳದಲ್ಲಿ ತಮ್ಮ ಉಗುರಿನಿಂದ ಗಾಯ ಮಾಡಿ "ನೋವಿನ ಮೇಲೆ ಲಕ್ಷ್ಯವಿಡು. ಧ್ಯಾನ ಸಾಧ್ಯವಾಗುತ್ತದೆ." ಎಂದು ಹೇಳಿದರು. ಕಠಿಣವ್ರತವನ್ನು ಗುರು ಶಿಷ್ಯನಿಗೆ ಕರತಲಾಮಲಕವಾಗುವಂತೆ ಮಾಡುತ್ತಿದ್ದರು. ಆರು ವರ್ಷಕಾಲ ನರೇಂದ್ರನಿಗೆ ಗುರು ಸಾನಿಧ್ಯ, ಉಪದೇಶ ಲಭಿಸಿತು. ರಾಮಕೃಷ್ಣರು ನರೇಂದ್ರನಿಗೆ ತಂದೆ, ತಾಯಿ, ಗುರು ಎಲ್ಲಾ ಆಗಿದ್ದರು. ಅವನಲ್ಲಿಯೇ ಅವರು ಐಕ್ಯರಾಗಿದ್ದರೆಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.

ಶಿಷ್ಯರನ್ನು ಅವರ ಕೆಲಸಕ್ಕೆ ಗೊತ್ತು ಮಾಡುವ ಕಾಲ ಸಮೀಪಿಸಿತೆಂದು ಗುರುಗಳರಿತು, ಕಾವಿ, ಕಮಂಡಲ, ಜಪಮಾಲೆಗಳನ್ನು ತರಿಸಿ, ವಿಧಿಯುಕ್ತವಾಗಿ ಅವನಿಗೆ ಸನ್ಯಾಸವನ್ನು ಅನುಗ್ರಹಿಸಿದರು. ಇತ್ತ ಗುರುಗಳ ಗಂಟಲು ಬೇನೆ ಉಲ್ಬಣಾವಸ್ಥೆಗೆ ಬಂತು. ಅವರಿಗೊಂದೇ ಚಿಂತೆ "ಈ ನನ್ನ ಮಕ್ಕಳಿಗಾರು ದಿಕ್ಕು" ನರೇಂದ್ರನಿದ್ದ. ಅವನನ್ನು ಹತ್ತಿರಕ್ಕೆ ಕರೆದು ತಮ್ಮ ಮನೋ ಇಂಗಿತವನ್ನು ತಿಳಿಸಿದರು. ಆದರೆ ನರೇಂದ್ರ ಒಪಲಿಲ್ಲ. ಗುರುಗಳು ಬಿಡಲಿಲ್ಲ. ಕೊನೆಗೂ ನರೇಂದ್ರ ಒಪ್ಪಿದ. "ನನ್ನ ಸಿದ್ಧಿಗಳು ಕ್ಷಿಪ್ರದಲ್ಲಿಯೇ ನಿನ್ನಲ್ಲಿ ಆವಿರ್ಭೂತವಾಗುತ್ತವೆ. ನಾನೇ ನಿನ್ನೊಳಗಿದ್ದು ಕೆಲಸಮಾಡುತ್ತೇನೆ." ಎಂದು ಹೇಳಿ ನರೇಂದ್ರನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ನರೇಂದ್ರನ ದೇಹದೊಳಗೆ ಪ್ರಚಂಡ ವಿದ್ಯುದಾವೇಗ ಪ್ರವೇಶಿಸಿದಂತಾಗಿ ಸ್ಮೃತಿ ತಪ್ಪಿತು. ಎಚ್ಚರಗೊಂಡು ತನಗಾದ ಅನುಭವ ಅವನಲ್ಲಿ ದಿವ್ಯ ಅನುಭೂತಿಯನ್ನುಂಟು ಮಾಡಿತು.

ಕೊನೆಯ ೧-೨ ದಿವಸ ರಾಮಕೃಷ್ಣರು ತುಂಬಾ ಬಾಧೆಪಟ್ಟರು. ಮಧ್ಯರಾತ್ರಿ ಹಸಿವಾಗುತ್ತಿದೆಯೆಂದರು. ಶಿಷ್ಯರು ಸ್ವಲ್ಪ ಪಾಯಸ ಕುಡಿಸಿದರು. ಎದ್ದು ೫-೬ ದಿಂಬುಗಳ ಸಹಾಯದಿಂದ ಕುಳಿತು ತಮ್ಮ "ಕೊನೆಯ ಉಪದೇಶ"ವನ್ನು ನೀಡಿದರು. ಮೂರು ಸಲ "ಕಾಳಿ" ಹೆಸರನ್ನು ಉಚ್ಚರಿಸಿ ಮಲಗಿದರು. ತಲೆಕೂದಲು ನಿಮಿರಿ ನಿಂತವು. ಕಣ್ಣುಗಳೆರಡೂ ಭ್ರೂಮಧ್ಯೆ ನೆಟ್ಟವು. ದಿವ್ಯವಾದ ನಗೆ ಮುಖದಲ್ಲಿ ಬೆಳ್ದಿಂಗಿಳಿನ ಹಾಗೆ ಮೂಡಿತು. ರಾತ್ರಿ ೧ ಗಂಟೆಗೆ (೧೮೮೬) ಗುರುಗಳು ಮಹಾಸಮಾಧಿಯಲ್ಲಿ ಮಂಡಿಸಿದರು. ಶಿಷ್ಯರು ಗೋಳಿಟ್ಟರು. ಜಯಘೋಷ ದಿಗಂತಕ್ಕೆ ಮುಟ್ಟುವಂತೆ ಎದ್ದಿತು. "ಶ್ರೀ ರಾಮಕೃಷ್ಣ ಜಯ್ ಭಗವಾನ್ ಶ್ರೀ ರಾಮಕೃಷ್ಣ....."

ಗುರು ಶ್ರೀ ರಾಮಕೃಷ್ಣರ ಮಹಾಸಮಾಧಿಯಾದ ಮೇಲೆ ಅವರ "ಸಂಸಾರ ಹೊರೆ ವಿವೇಕಾನಂದರ ಹೆಗಲ ಮೇಲೆ ಬಿತ್ತು. ರಾಮಕೃಷ್ಣರ ಅಸ್ಥಿಬೂದಿಯನ್ನು ಈಗ ಬೇಲೂರಿನಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ. ತರುಣ ಜಿಜ್ಞಾಸುಗಳಿಗೆ, ಸಾಧಕರಿಗೆ ವಿವೇಕಾನಂದರು ಗುರುವಾದರು. ಅವರ ಸಿಡಿಲಿನ ನುಡಿಗಳು ಸಾಧಕರ ಅನೇಕ ದೌರ್ಬಲ್ಯಗಳನ್ನು ಗೆಲ್ಲುತ್ತಿತ್ತು. "ಮಾನವನಿರ್ಮಾಣ ನಮ್ಮ ಗುರಿಯಾಗಲಿ. ಇದೊಂದು ನಮ್ಮ ಸಾಧನವಾಗಲಿ. ಶುಷ್ಕ ಪಾಂಡಿತ್ಯ ಸಾಕು. ಜಗತ್ತಿನ ಮರುಳಾಟ ನಮ್ಮ ಚಿತ್ತವನ್ನು ಸೆರೆಹಿಡಿಯದಿರಲಿ. ಭಗವತ್ಸಾಕ್ಷಾರ ನಮ್ಮ ಜೀವನದ ಗುರಿಯಾಗಲಿ. ರಾಮಕೃಷ್ಣರ ಜೀವನ ನಮಗೆ ತೋರಿಸಿದ ಬೆಳಕು ಇದೇ ಆಗಿದೆ. ನಾವು ಪರಮಾತ್ಮನನ್ನು ಕಾಣಬೇಕು." ಎಂದು ಎಲ್ಲರನ್ನೂ ಎಚ್ಚರಿಸುತ್ತಿದ್ದರು.

ಮೈಗೆ ತೊಡಲು ಒಂದು ಕಾವಿಬಟ್ಟೆ, ಒಂದು ಕೌಪೀನ, ಮಲಗಲು ಒಂದು ಚಾಪೆ, ಯಾರಾದರೂ ತಂದಿತ್ತರೆ ಅದೇ ಅಂದಿನ ಆಹಾರ. ಯಾರೂ ತಂದುಕೊಡದಿದ್ದರೆ ಉಪವಾಸ. ಗೋಡೆಯ ಮೇಲೆ ಕೆಲವು ಸಾಧುಸಂತರ ಚಿತ್ರಗಳು. ಭಜನೆಗೆಂದು ಒಂದು ತಂಬೂರಿ. ಇವೇ ಅವರ ಎಲ್ಲಾ ಆಸ್ತಿ. ವ್ಯಾಸಂಗ, ಚರ್ಚೆ, ಸಾಧನೆ, ಧ್ಯಾನ ಅವಿಶ್ರಾಂತವಾಗಿ ಸಾಗುತ್ತಿತ್ತು.
ಸನ್ಯಾಸಿಗಳಿಗೆ ತೀರ್ಥಯಾತ್ರೆಯ ಹಂಬಲ ಹಿಡಿಯಿತು. ಒಬ್ಬೊಬ್ಬರು ಒಂದೊಂದು ಕಡೆ ತೆರಳಿದರು. ವಿವೇಕಾನಂದರೂ ೧೮೮೭ ರಿಂದ ೧೮೯೩ ರವರೆಗೆ ಸಂಚಾರ ನಿರತರಾದರು. ಅವರ ಜತೆಗೆ ಗುರು-ಸೋದರರು ಇರುತ್ತಿದ್ದರು. ಮೊದಲು ಕಾಶಿಗೆ ಭೇಟಿ ನೀಡಿ ಹಲವು ತಪಸ್ವಿಗಳನ್ನು ಕಂಡರು. ದೊಡ್ಡ ವಿದ್ವಾಂಸರ ಬಳಿಗೆ ಹೋಗಿ ವಿನಮ್ರತೆಯಿಂದ ತಮ್ಮ ಸಂಶಯಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು. ಒಂದು ದಿನ ಸ್ವಾಮಿ ವಿವೇಕಾನಂದರು ಗ್ರಂಥಭಂಡಾರದಿಂದ ಕೆಲವು ಪುಸ್ತಕಗಳನ್ನು ತರಿಸಿದರು. ಮಾರನೆಯ ದಿವಸವೇ ಅವುಗಳನ್ನು ಹಿಂದುರಿಗಿಸಲು ಗ್ರಂಥಪಾಲಕ ಆಶ್ಚರ್ಯಚಕಿತನಾಗಿ, "ಓದಿಯಾಯಿತೇ?" ಎಂದು ಕೇಳಿದ. "ಆಯಿತು" ಎಂದುತ್ತರಿಸಿದರು. "ಒಂದೇ ದಿವಸದಲ್ಲಿ ನಾನು ನಂಬಲಾರೆ." ಎಂದ. ಮರುದಿನ ಸ್ವಾಮಿಗಳು ಗ್ರಂಥಭಂಡಾರಕ್ಕೆ ಹೋದಾಗ ಇದೇ ಪ್ರಸ್ತಾಪ ಬರಲು "ನಿಮಗೆ ಅನುಮಾನವಿದ್ದರೆ ಆ ಪುಸ್ತಕಗಳಿಂದಲೇ ಪ್ರಶ್ನೆಗಳನ್ನು ಕೇಳಿ." ಎಂದರು. ಗ್ರಂಥಪಾಲಕ ಪ್ರಶ್ನೆಗಳನ್ನು ಕೇಳಿ ಸ್ವಾಮಿಗಳು ಸುಳ್ಳು ಹೇಳುತ್ತಿಲ್ಲವೆಂದು ಮನದಟ್ಟು ಮಾಡಿಕೊಂಡ. ಆಗ ಸ್ವಾಮೀಜಿಯವರ ಜೊತೆಗೆ ಇದ್ದ ಇನ್ನೊಬ್ಬ ಸ್ವಾಮಿ ಅಖಂಡಾನಂದರು "ಸ್ವಾಮೀಜಿ, ಇದು ಹೇಗೆ ಸಾಧ್ಯ" ಎಂದು ಕುತೂಹಲ ತಡೆಯಲಾರದೆ ಕೇಳಿದರು. "ಅಲ್ಲಿ ಇಲ್ಲಿ ನೋಡಿದೆ ಅಷ್ಟೇ ಪುಸ್ತಕಗಳನ್ನು. ಆದರೆ ಗುರುಕೃಪೆಯಿಂದ ಅವುಗಳ ಸಾರ ತಿಳಿಯಿತು." ಎಂದರು.

ಸ್ವಾಮಿ ವಿವೇಕಾನಂದರು ದೆಹಲಿ, ಆಳ್ವಾರ ಮುಂತಾದ ಶ್ರೀನಗರ, ಡೆಹರಾಡೂನ, ಹೃಷಿಕೇಶ, ಅಲ್ಮೋರಾ, ಘರವಾಲ್, ಕರ್ಣ ಪ್ರಯಾಗ, ಅಜ್ಮೀರ, ಅಹಮದಾಬಾದ, ಮುಂಬೈ, ಪುಣೆ ಹೀಗೆ ಮುಂತಾದ ಪ್ರದೇಶಗಳಿಗೆ ಸಂಚರಿಸಿದರು. ಸ್ವಾಮಿಗಳು ಕೆಲವು ದಿವಸ ಆಳ್ವಾರ ಸಂಸ್ಥಾನದಲ್ಲಿ ನೆಲೆ ನಿಂತಾಗ ಅವರ ಖ್ಯಾತಿ ಸಂಸ್ಥಾನದ ದಿವಾನರಾದ ಮೇಜರ್ ರಾಮಚಂದ್ರಜೀಯವರ ಕಿವಿ ಮುಟ್ಟಿತ್ತು. ಸ್ವಾಮೀಜಿಯವರನ್ನು ಬರಮಾಡಿಕೊಂಡು ಮಾತುಕತೆ ನಡೆಸಿದರು. ಒಮ್ಮೆ ಸಂಸ್ಥಾನದ ಮಹಾರಾಜರು ಸ್ವಾಮಿಗಳೊಂದಿಗೆ ಮಾತನಾಡುತ್ತಾ ತಮಗೆ ಮೂರ್ತಿಪೂಜೆಯಲ್ಲಿ ನಂಬಿಕೆಯಿಲ್ಲವೆಂದರು. ಆಗ ಸ್ವಾಮಿಗಳು "ಪ್ರತಿಯೊಬ್ಬರಿಗೂ ತಮಗೆ ಸೂಕ್ತ ತೋರಿದ ಧರ್ಮ ಮಾರ್ಗವನ್ನು ಅವಲಂಬಿಸಬೇಕು." ಎಂದರು. ಈ ಮಾತು ನೆರೆದಿದ್ದ ಭಕ್ತರಿಗೆ, ದಿವಾನರಿಗೆ ಸರಿಬರಲಿಲ್ಲ. ದಿವಾನರು ಆಕ್ಷೇಪಿಸಿದರು. ಆಗ ಸ್ವಾಮಿಗಳು ಕಣ್ಣು ಹೊರಳಿಸಿ ಎದುರಿಗಿದ್ದ ಮಹಾರಾಜರ ಭಾವಚಿತ್ರವನ್ನು ತರಿಸಿ ಅಧಿಕಾರವಾಣಿಯಿಂದ "ಇದರ ಮೇಲೆ ಉಗಿಯಿರಿ" ಎಂದರು. ಎಲ್ಲರೂ ಆವಾಕ್ಕಾದರು. "ಅದಕ್ಕೇನು. ಇದೊಂದು ಕಾಗದದ ಚೂರು. ಉಗುಳಿದರೇನಾಗುತ್ತದೆ." ದಿವಾನರು ಗಾಬರಿಯಿಂದ, "ಸ್ವಾಮೀಜಿ, ಎಂತಹ ಮಾತನಾಡುತ್ತಿರುವಿರಿ. ಇದು ನಮ್ಮ ಮಹಾರಾಜರ ಚಿತ್ರ." ಎಂದು ಆತಂಕ ವ್ಯಕ್ತಪಡಿಸಿದರು. ಆಗ ಸ್ವಾಮಿಗಳು, "ನಿಜ, ಆದರೆ ನಿಮ್ಮ ಮಹಾರಾಜರೇ ಸಶರೀರಾಗಿ ಇದರಲ್ಲಿ ಕುಳಿತಿಲ್ಲವಲ್ಲ. ಇದೊಂದು ಕಾಗದದ ಚೂರು. ಇದರಲ್ಲಿ ರಕ್ತಮಾಂಸಗಳಿಲ್ಲ. ಇದು ಅಳ್ಳಾಡುವದಿಲ್ಲ. ಮಾತನಾಡುವದಿಲ. ಆದರೂ ಇದರ ಮೇಲೆ ಉಗುಳಲು ನೀವೆಲ್ಲ ಅಂಜುತ್ತಿರಿ. ಏಕೆಂದರೆ ಚಿತ್ರದಲ್ಲಿ ಮಹಾರಾಜರ ಆಕೃತಿಯನ್ನು ಕಾಣುತೀರಿ.ಚಿತ್ರದ ಮೇಲೆ ಉಗುಳಿದರೆ ಮಹಾರಾಜರಿಗೆ ಉಗುಳಿದಂತೆಯೇ ಎಂದು ಭಾವಿಸುತ್ತೀರಿ." ಎಂದು ಹೇಳಿ ಮಹಾರಾಜರ ಕಡೆಗೆ ತಿರುಗಿ, "ನೋಡಿ ಮಹಾರಾಜ್, ಒಂದು ದೃಷ್ಟಿಯಲ್ಲಿ ಇದು ನೀವಲ್ಲ. ಇನ್ನೊಂದು ದೃಷ್ಟಿಯಲ್ಲಿ ಇದು ನೀವೇ. ಅದಕ್ಕೇ ನಿಮ್ಮ ಸೇವಕರು ಇದರ ಮೇಲೆ ಉಗುಳಲು ಅಂಜಿದರು. ಇದರಲ್ಲಿ ನಿಮ್ಮ ನೆರಳು ಮಾತ್ರ ಇದೆ. ಆದರದು ನಿಮ್ಮನ್ನೇ ಅವರ ಮನಸ್ಸಿಗೆ ತಂದು ಕೊಡುತ್ತದೆ. ಆ ನೆನಪೇ ಅವರಲ್ಲಿ ಭಕ್ತಿ, ಗೌರವಗಳನ್ನು ಹುಟ್ಟಿಸುತ್ತದೆ. ಹಾಗೆಯೇ ಮರ, ಮಣ್ಣು, ಲೋಹಗಳನ್ನು ಪೂಜಿಸುವ ಭಕ್ತರೂ ಕೂಡ ಭಾವಿಸುತ್ತಾರೆ. ತಮ್ಮ ಇಷ್ಟದೇವತೆಯ ನೆನಪು ತಂದುಕೊಳ್ಳಲು, ಚಿತ್ತೈಕಾಗ್ರತೆಗೆ ಸಹಾಯವಾಗುವದರಿಂದ ಅವರು ಮೂರ್ತಿಗಳನ್ನು ಪೂಜಿಸುತ್ತಾರೆ. ಅವರು ಮಣ್ಣು, ಲೋಹ, ಮರಗಳನ್ನು ಪೂಜಿಸುವದಿಲ್ಲ. ತಾನು ಸಂಚರಿಸಿದ ಯಾವ ಎಡೆಯಲ್ಲಿಯೂ ಈ ಹೀನಭಾವ ಕಂಡುಬರಲಿಲ್ಲ. ಅವರವರ ಇಷ್ಟ, ನಿಷ್ಠೆ, ದೃಷ್ಟಿಗಳಿಗನುಗುಣವಾಗಿ ದೇವರು ಪ್ರಕಟವಾಗುತ್ತಾನೆ." ಎಂದರು ಶಾಂತರಾಗಿ. ನೆರೆದಿದ್ದವರ ಅಜ್ಞಾನದ ತೆರೆ ಸರಿಯಿತು.

ಸ್ವಾಮಿಗಳು ಎಲ್ಲರ ಮನವನ್ನೂ ಸೂರೆಗೊಂಡರು. ಯಾರಿಗೊಂದು ದುಃಖವಿರಲಿ, ತಾಪವಿರಲಿ, ಸಂಕಟವಿರಲಿ ಸ್ವಾಮಿಗಳ ನೆರವು, ದಯೆ ಸಿದ್ಧ. ಸ್ವಾಮಿಗಳು ಜಯಪುರಕ್ಕೆ ಬಂದರು. ಅಲ್ಲಿದ್ದ ಒಬ್ಬ ಪ್ರಸಿದ್ಧ ವಯ್ಯಾಣಿಕರಣಿಗಳಲ್ಲಿ ಪಾಣಿನಿಯ ಸೂತ್ರಗಳನ್ನು ಅಭ್ಯಸಿಸಲು ನಿಂತರು. ಮೊದಲನೆಯ ಸೂತ್ರ ಪಾಠವೇ ಮೂರದಿವಸ ಹಿಡಿಯಲು ಪಂಡಿತರು, "ಸ್ವಾಮಿಗಳೇ, ನನ್ನ ಪಾಠದಿಂದ ನಿಮಗೆ ಏನೂ ಪ್ರಯೋಜನವಾಗುತ್ತಿಲ್ಲ. ಮೂರು ದಿವಸವಾದರೂ ಮೊದಲನೆಯ ಸೂತ್ರವೇ ಸಾಗಿಲ್ಲ." ಎಂದು ಅವಮಾನಿಸುವಂತೆ ಮಾತನಾಡಿದರು. ಇದರಿಂದ ಸ್ವಾಮಿಗಳು ತೇಜೋಭಂಗರಾಗಿ ಮೂರು ಗಂಟೆಯ ಕಾಲ ಬಿಡದೇ ಸೂತ್ರ, ಸೂತ್ರಭಾಷ್ಯ ಹಿಡಿದು ಕುಳಿತರು. ಅನಂತರ ಪಂಡಿತರಿಗೆ ಪಾಠವನ್ನೊಪ್ಪಿಸಲು ಅವರು ಆಶ್ಚರ್ಯಪಟ್ಟರು. "ಮನದಲ್ಲಿ ಉತ್ಕಟಾಸಕ್ತಿ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಬೆಟ್ಟವನ್ನು ಕಣಕಣವಾಗಿ ಹುಡಿಗಟ್ಟಬಹುದು." ಎಂದು ಸ್ವಾಮಿಗಳು ಹೇಳಿದರು.

ಒಮ್ಮೆ ಅಜ್ಮೀರದ ಮಹಾರಾಜರು "ಜೀವನವೆಂದರೇನು ಸ್ವಾಮೀಜಿ?" ಎಂದು ಕೇಳಿದರು. ಅದಕ್ಕೆ ಸ್ವಾಮಿ ವಿವೇಕಾನಂದರು "ಮಾನವನನ್ನು ಕೆಳಗೆ ತುಳಿಯಲು ಯತ್ನಿಸುವ ಪರಿಸ್ಥಿತಿಯಲ್ಲಿ ಅವನ ವಿಕಾಸವನ್ನು ಸಾಧಿಸುವದೇ ಜೀವನ." ಎಂದರು. ಎಷ್ಟೋ ಸಲ ಸ್ವಾಮಿಗಳಿಗೆ ಹಸಿವಿನಿಂದ, ವಿಪತ್ತುಗಳಿಂದ ಅವರ ಪ್ರಾಣಕ್ಕೆ ವಿಪತ್ತು ಒದಗುತ್ತಿತ್ತು. ಆದರೆ ಯಾವುದೋ ಚೈತನ್ಯ, ಯಾವುದೋ ಅವ್ಯಕ್ತ, ಅದೃಶ್ಯಶಕ್ತಿ ಅವರನ್ನು ರಕ್ಷಿಸುತ್ತಿತ್ತು. ಪರಿವ್ರಾಜಕ ಜೀವನದ ಸಂಚಾರ ಸ್ವಾಮಿಗಳಿಗೆ ಭಾರತದ ಹೃದಯದರಿವನ್ನುಂಟು ಮಾಡಿಕೊಟ್ಟಿತ್ತು. ಹಲವಾರು ಭಾಷೆಗಳನ್ನಾಡುವ ದೇಶ; ಕ್ರಿಸ್ತ, ಮುಸಲ್ಮಾನ, ಫಾರ್ಸಿ, ಯಹೂದಿ, ಹಿಂದೂಗಳಿಂದ ಕೂಡಿದ ದೇಶ. ಅನಂತರ ಆಚಾರ-ವಿಚಾರಗಳಿಂದ ತುಂಬಿದ ದೇಶ. ಆದರೆ ಬುನಾದಿಯಲ್ಲಿ ಒಂದು. ಹಿಂದೂವಾದರೇನು, ಮುಸಲ್ಮಾನಾದರೇನು, ಕ್ರಿಸ್ತನಾದರೇನು ಎಲ್ಲರೂ ಭಾರತದ ಮಕ್ಕಳು. ಎಲ್ಲರ ಹೃದಯದಲ್ಲಿಯೂ ಪ್ರೇಮ, ಕರುಣೆ, ದೈವಭಕ್ತಿ ಅಚ್ಚಳಿಯದಂತಿದೆ. ನನ್ನ ಭಾರತ ಒಂದು. ಅದು ಅಭಿನ್ನ ಎಂದು ಸ್ವಾಮಿಗಳು ಹಿಗ್ಗಿದರು.

ಸ್ವಾಮಿಗಳ ಜೀವನದ ಮಹಾತ್ಕಾರ್ಯದ ಬೀಜಾಂಕುರ ಮದರಾಸಿನಲ್ಲಿ ಆಯಿತು. ಅಮೇರಿಕಾದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಬೇಕೆಂದಿದ್ದ ತಮ್ಮ ಇಚ್ಚೆಯನ್ನು ಸ್ವಾಮಿಗಳು ವ್ಯಕ್ತಪಡಿಸಿದರು. ಭಕ್ತರೆಲ್ಲರೂ ಸಂತಸದಿಂದ ಹಣ ಸಂಗ್ರಹಿಸಿದರು. "ನಾನು ಅಖಿಲ ಭಾರತದ ಪ್ರತಿನಿಧಿಯಾಗಿ ಹೋಗುತ್ತೇನೆ. ನಾಲ್ಕು ಜನರ ಶ್ರೀಮಂತರ ನೆರವಿನಿಂದ ಹೋಗಿವರುವದಕ್ಕಿಂತ ಎಲ್ಲರ ನೆರವಿನಿಂದ ಹೋಗಿಬರುವದೇ ಲೇಸು." ಎಂದು ಅಭಿಪ್ರಾಯಪಟ್ಟರು. ಕನಸಿನಲ್ಲಿ ಶ್ರೀ ರಾಮಕೃಷ್ಣರು ಬಂದು "ಹೋಗಿ ಬಾ" ಎಂದು ಹರಸಿದರು. ಮಾತೆ ಶಾರದಾದೇವಿಯವರ ಅನುಮತಿ ಆಶೀರ್ವಾದದೊಂದಿಗೆ ಹೊರಟು ನಿಂತರು. ಸ್ವಾಮಿಗಳ ಜೊತೆಗೆ ಮಹಾರಾಜರೂ, ಜಗಮೋಹನಲಾಲರೂ ಇದ್ದರು. ಮಧ್ಯೆ ಜಯಪುರದಲ್ಲಿ ತಂಗಿದ್ದಾಗ ಒಂದು ಸ್ವಾರಸ್ಯದ ಸಂಗತಿ ನಡೆಯಿತು. ಖೇತ್ರಿ ಮಹಾರಾಜರ ಗೌರವಾರ್ಥವಾಗಿ ಒಂದು ಸತ್ಕಾರ ಸಮಾರಂಭ ವ್ಯವಸ್ಥಿತವಾಯಿತು. ಹೆಣ್ಣುಮಗಳೊಬ್ಬಳ ಗಾಯನ ನಡೆಯುತ್ತಿತ್ತು. ಪಕ್ಕದ ಡೇರೆಯಲ್ಲಿದ್ದ ಸ್ವಾಮಿಗಳನ್ನು ಬರಹೇಳಿ ಆಹ್ವಾನ ಕಳಿಸಿದರು. "ಸನ್ಯಾಸಿಗೇಕೆ ಸೂಳೆಯ ಸಂಗೀತ" ಎಂದು ಸ್ವಾಮಿಗಳು ಆಹ್ವಾನವನ್ನು ತಿರಸ್ಕರಿಸಿಬಿಟ್ಟರು. ಗಾಯಕಿ ಇದನ್ನು ಕೇಳಿ ಮನನೊಂದಳು. ಹೃದಯವನ್ನು ತೋಡಿಕೊಳ್ಳುವಂತೆ ಆಕೆ ಮಹಾಕವಿ ಸೂರದಾಸರ ಒಂದು ಗೀತೆಯನ್ನು ಹಾಡಿದಳು.
" ಪ್ರಭು, ನನ್ನ ಅವಗುಣಗಳ ಕಡೆಗೆ ನೋಡಬೇಡ.
ನಿನ್ನ ಶುಭನಾಮ ಸಮದರ್ಶಿಯಲ್ಲವೇ?
ದೇವಾಲಯದ ಮೂರ್ತಿಯಲ್ಲಿರುವದು ಒಂದು ಕಬ್ಬಿಣದ ತುಂಡು
ಕಟುಕನ ಕೈಗತ್ತಿಯಲ್ಲಿಯೂ ಒಂದು ಕಬ್ಬಿಣದ ತುಂಡು.
ಸ್ಪರ್ಷಮಣಿ ಮುಟ್ಟಲು ಅವೆರಡೂ ಅಚ್ಚ ಬಂಗಾರ
ಓ ದೇವ! ನೋಡಬೇಡೆನ್ನ ನನ್ನ ಅವಗುಣಗಳ ಕಡೆಗೆ
ಒಂದು ಹನಿ ನೀರು ಪವಿತ್ರ ಯಮುನಾ
ಮತ್ತೊಂದು ಹಾದಿಯ ಮೋರಿಯ ಹೊಲಸು;
ಆದರವು ಗಂಗೆಯನ್ನು ಸೇರಿದಾಗ ಎರಡೂ ತೀರ್ಥ
ಪ್ರಭು ನೋಡಬೇಡೆನ್ನ ಅವಗುಣಗಳ
ನಿನ್ನ ಶುಭನಾಮ ಸಮದರ್ಶಿಯೆಂದಲ್ಲವೇ"
ಈ ಹಾಡು ಸ್ವಾಮಿಗಳ ಮನಸ್ಸು ಮುಟ್ಟಿತು. ತಮ್ಮ ಅಜ್ಞಾನವನ್ನು ಹೋಗಲಾಡಿಸಲು ಹಾಡಿದಂತಿತ್ತು. "ನಾನೆಂತ ಮೂಢ. ಎಲ್ಲವೂ ಬ್ರಹ್ಮ-ಬ್ರಹ್ಮ ಎಂದು ಅರಚುತ್ತೇನೆ. ಈ ಹೆಣ್ಣಿನಲ್ಲಿರುವ ಬ್ರಹ್ಮನನ್ನು ನೋಡದೆ ಕಣ್ಣು ಮುಚ್ಚಿಕೊಂಡೆ." ಎಂದು ವಿಷಾದಗೊಂಡು, ಗಾಯನ ಕೇಳಹೋದರು.

ಅಮೆರಿಕಾಗೆ ಹೋಗಲು ಸ್ವಾಮಿ ವಿವೇಕಾನಂದರು ಮುಂಬಯಿಗೆ ಬಂದಿಳಿದರು. ಖೇತ್ರಿ ಮಹಾರಾಜರ ಕೋರಿಕೆಯಂತೆ ಸ್ವಾಮಿಗಳು "ವಿವೇಕಾನಂದ" ಎಂಬ ಹೆಸರನ್ನು ಪರಿಗ್ರಹಿಸಿದರು. ಸ್ವಾಮಿಗಳು ೧೮೯೩ ನೇ ಇಸ್ವಿ ಮೇ ೩೧ ನೆಯ ತಾರೀಖು ಎಲ್ಲರ ಶುಭಹಾರೈಕೆಯೊಂದಿಗೆ ಪಿ.ಮತ್ತು ಓ ಕಂಪೆನಿಯ "ಪೆನಿನ್‍ಸುಲಾ" ಹಡಗನ್ನು ಹತ್ತಿದರು. ಹಡಗಿನ ಕ್ಯಾಪ್ಟನ್, ಪ್ರಯಾಣಿಕರನ್ನೂ ಸ್ವಾಮೀಗಳ ರಾಜಠೀವಿ, ದೇದೀಪ್ಯಮಾನ ತೇಜಸ್ಸು ಸೆರೆಹಿಡಿದವು. ಹಡಗಿನ ಕ್ಯಾಪ್ಟನ್ ಬಿಡುವಾದಾಗಲೆಲ್ಲ ಸ್ವಾಮಿಗಳ ಬಳಿ ಬಂದು ತತ್ವಜ್ಞಾನವನ್ನು ಅಭ್ಯಾಸಮಾಡತೊಡಗಿದ. ಜುಲೈ ತಿಂಗಳ ಮಧ್ಯಭಾಗದಲ್ಲಿ ಚಿಕಾಗೋ ಪಟ್ಟಣವನ್ನು ಸೇರಿದರು.

ಚಿಕಾಗೋ ಪಟ್ಟಣದ ವಿಸ್ತಾರ, ಜನಸಂದಣಿ, ಗಲಭೆಗೊಂದಲ ನೋಡಿ ಸ್ವಾಮಿಗಳು ಕಕ್ಕಾಬಿಕ್ಕಿಯಾದರು. ಸಮ್ಮೇಳನದ ಬಗ್ಗೆ ವಿಷಯ ಸಂಗ್ರಹಿಸಲು ಬಹು ಪ್ರಯಾಸಪಟ್ಟು ಅದರ ಕಾರ್ಯಾಲಯಕ್ಕೆ ಹೋದರು. ಸಪ್ಟೆಂಬರ್ ಮೊದಲನೆಯ ವಾರದವರೆಗೆ ಸಮ್ಮೇಳನ ಕೂಡುವ ಹಾಗಿಲ್ಲವೆಂಬ ಸುದ್ದಿ ಕೇಳಿ ಸ್ವಾಮಿಗಳು ಭೂಮಿಗೆ ಇಳಿದು ಹೋದರು. ಸರಿಯಾದ ಪ್ರಾತಿನಿಧ್ಯ ಪಡೆದು ಬರದ ಹೊರತು ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ದೊರೆಯುವದಿಲ್ಲವೆಂದು ಕಾರ್ಯದರ್ಶಿ ಹೇಳಿದ. ಸಪ್ಟೆಂಬರ್ ತನಕ ಕಾಯಬೇಕು. ಜತೆಗೆ ಪ್ರಾತಿನಿಧ್ಯ ದೊರಕಿಸಬೇಕು. ಸ್ವಾಮಿಗಳು ಯಾವ ಸಂಸ್ಥೆಯ ಪ್ರತಿನಿಧಿಯಾಗಿಯೂ ಹೋಗಿರಲಿಲ್ಲ. ಅಖಂಡ ಭಾರತದ ಪ್ರತಿನಿಧಿಯಾಗಿ ಹೋಗಿದ್ದರು. ಕೈಯಲ್ಲಿದ್ದ ಅಲ್ಪಸ್ವಲ್ಪ ಹಣ ಕರಗುತ್ತ ಬಂದಿತ್ತು. ಚಿಕ್ಯಾಗೋ ನಗರಕ್ಕಿಂತ ಬೋಸ್ಟನ್ ಅಗ್ಗದ ಸ್ಥಳವೆಂಬುದನ್ನು ಅರಿತು ಅಲ್ಲಿಗೆ ಪ್ರಯಾಣ ಬೆಳೆಸಿದರು. ಆದರೆ ಯಾವುದೋ ಕಾಣದ ಕೈ ಸ್ವಾಮಿಗಳನ್ನು ರಕ್ಷಿಸುತ್ತಿತ್ತು. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಬೋಸ್ಟನ್ ನಗರದ ಮಧ್ಯವಯಸ್ಸಿನ ಶ್ರೀಮಂತ ಮಹಿಳೆ ಸ್ವಾಮಿ ವಿವೇಕಾನಂದರನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿ ಇರಲು ವ್ಯವಸ್ಥೆ ಮಾಡಿದಳು. ಆಗ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ರೈಟ್ ಅವರನ್ನು ಮನೆಗೆ ಕರೆದ ಆ ಮಹಿಳೆ ಸ್ವಾಮಿಗಳಿಗೆ ಪರಿಚಯಿಸಿದಳು. ಸ್ವಾಮಿಗಳು ಅಮೆರಿಕಾಗೆ ಬಂದಿರುವ ಉದ್ದೇಶ ತಿಳಿದು ರೈಟ್‍ರವರು ತುಂಬಾ ಸಂತೋಷಪಟ್ಟರು. ಬಿಡದೇ ಒಂದು ವಾರದ ಕಾಲ ಸ್ವಾಮಿಗಳೊಂದಿಗೆ ರೈಟ್‍ರವರು ವಿವಿಧ ವಿಷಯಗಳನ್ನು ಚರ್ಚಿಸಿ ಸ್ವಾಮಿಗಳ ಜ್ಞಾನಪಾಂಡಿತ್ಯಕ್ಕೆ ಬೆರಗಾಗಿ ಹೋದರು. ಸ್ವಾಮಿಗಳು "ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಾತಿನಿಧ್ಯ ಕೇಳುತ್ತಿದ್ದಾರೆ. ಪ್ರಾತಿನಿಧ್ಯ ಎಲ್ಲಿಂದ ದೊರಕಿಸಲಿ?" ಎಂದು ತಮ್ಮ ಮನದಾಳದ ಚಿಂತೆಯನ್ನು ಹೊರಹಾಕಿದರು. ಅದಕ್ಕೆ ಪ್ರೊಫೆಸರ್ ರೈಟ್‍ರವರು "ಸ್ವಾಮಿ, ನಿಮ್ಮಿಂದ ಪ್ರಾತಿನಿಧ್ಯ, ಯೋಗ್ಯತಾ ಪತ್ರವನ್ನು ನಿರೀಕ್ಷಿಸುವದು ಒಂದೇ, ಸೂರ್ಯನಿಗೆ ಬೆಳಗುವ ಅಧಿಕಾರ ನಿನಗೆ ಯಾರು ಕೊಟ್ಟರು ಎಂದು ಕೇಳುವದು ಒಂದೇ" ಎಂದರು. ತಕ್ಷಣವೇ ರೈಟ್ ಸಮ್ಮೇಳನದ ಅಧಿಕಾರಿಗಳಿಗೆ ಒಂದು ಪತ್ರ ಬರೆದರು. ಅದರ ಒಕ್ಕಣಿಕೆ ಹೀಗಿದೆ : “Here is a monk who have more learned than all our universities professors put together.” ಪತ್ರ ಹಿಡಿದು ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದತ್ತ ನಡೆದರು.

ವಿಶ್ವಧರ್ಮ ಸಮ್ಮೇಳನ: ಚಿಕ್ಯಾಗೋನಲ್ಲಿ ನಡೆಯುವ ವಿಶ್ವಪ್ರದರ್ಶನದ ಜೊತೆಗೆ ಸರ್ವಧರ್ಮ ಸಮ್ಮೇಳನವೊಂದನ್ನು ಕೂಡಿಸಬೇಕೆಂದು ಅಮೇರಿಕೆಯ ಪ್ರಗತಿಗಾಮಿ ಪಾದ್ರಿಗಳು ಯೋಚಿಸಿ ಸೂಕ್ತ ಕಾರ್ಯಕ್ರಮ ಕೈಗೊಂಡಿದ್ದರು. ಅದುವೇ ವಿಶ್ವಧರ್ಮ ಸಮ್ಮೇಳನ. ೧೮೯೩ ರ ಸೆಪ್ಟೆಂಬರ್ ೧೧ ರಂದು ಕ್ರಿಸ್ತಧರ್ಮಾಚಾರ್ಯರಾದ ಕಾರ್ಡಿನಲ್ ಗಿಬ್ಬನ್ಸ್ ಅವರು ಒಂದು ಪ್ರಾರ್ಥನೆಯಿಂದ ಕಾರ್ಯಕ್ರಮವನ್ನಾರಂಭಿಸಿದರು. ಎಲ್ಲ ಪ್ರತಿನಿಧಿಗಳ ಭಾಷಣವಾದ ನಂತರ ಕೊನೆಗೆ ಸ್ವಾಮಿ ವಿವೇಕಾನಂದರಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಯಿತು. ಡಾ|| ಬಾರೋಸ್‍ರವರು ಸ್ವಾಮಿಗಳ ಪರಿಚಯ ಮಾಡಿಕೊಟ್ಟರು. ಅಗ ತಮಗಾದ ಅನುಭವಗಳನ್ನು ಸ್ವಾಮಿಗಳು ಈ ರೀತಿ ವರ್ಣಿಸಿದ್ದಾರೆ : ನನ್ನ ಹಿಂದೆ ಮಾತನಾಡಿದ ವಿದ್ವಾಂಸರು ಉತ್ತಮ ಭಾಷಣಗಳನ್ನು ಸಿದ್ಧಮಾಡಿಕೊಂಡು ಬಂದು ಘನವಾಗಿ ಮಾತನಾಡಿದರು. ನಾನು ಯಾವ ಸಿದ್ಧತೆಗೂ ಹೋಗಿರಲಿಲ್ಲ. ಡಾಕ್ಟರ್ ಬಾರೋಸ್ ಅವರು ನನ್ನ ಪರಿಚಯ ಮುಗಿಸಲು ಎದ್ದುನಿಂತು ತಾಯಿ ಸರಸ್ವತಿಗೆ ನಮಿಸಿ ಸಣ್ಣ ಭಾಷಣ ಮಾಡಿದೆ. ಅದು ಮುಗಿಯುವ ಹೊತ್ತಿಗೆ ಭಾವನಾವೇಶ ಬಂದಂತಾಗಿತ್ತು."

"ಅಮೇರಿಕೆಯ ಸಹೋದರ ಸಹೋದರಿಯರೇ," ಸ್ವಾಮಿ ವಿವೇಕಾನಂದರು ತಮ್ಮ ಭಾಷಣದ ಆರಂಭದಲ್ಲಿ ಅಮೆರಿಕದ ಜನತೆಯನ್ನು ಉದ್ದೇಶಿಸಿ ಈ ರೀತಿಯೇ ಸಾಕಾಗಿತ್ತು. ಅಮೇರಿಕೆಯ ಜನ ಎದ್ದು ನಿಂತು ಮೆಚ್ಚುಗೆ ವ್ಯಕ್ತಪಡಿಸಿ ಪ್ರಚಂಡ ಕರತಾಡನ ಮಾಡಿದರು. ಕೆಲವು ನಿಮಿಷಗಳವರೆಗೆ ಕರತಾಡನ ಮುಂದುವರೆದಿತ್ತು. ಮುಂದುವರೆಸಿದ ಸ್ವಾಮಿ ವಿವೇಕಾನಂದರು, "ನೀವು ಕೊಟ್ಟಿರುವ ಅಭೂತಪೂರ್ವ ಹಾರ್ದಿಕ ಸ್ವಾಗತವನ್ನು ಮನ್ನಿಸಿ ಮಾತನಾಡಲು ನನ್ನ ಹೃದಯ ಅವ್ಯಕ್ತ ಆನಂದದಿಂದ ತುಂಬಿ ತುಳುಕುತ್ತಿದೆ. ಜಗತ್ತಿನ ಅತ್ಯಂತ ಪುರಾತನವಾದ ಸನ್ಯಾಸ ಧರ್ಮದ ಹೆಸರಿನಲ್ಲಿ ನಾನು ನಿಮಗೆ ಕೃತಜ್ಞತೆಯನ್ನರ್ಪಿಸುತ್ತೇನೆ. ಧರ್ಮಗಳ ತಾಯಿಯ ಹೆಸರಿನಲ್ಲಿ ನಾನು ನಿಮಗೆ ಕೃತಜ್ಞೆಯನ್ನರ್ಪಿಸುತ್ತೇನೆ. ಎಲ್ಲ ಜಾತಿ, ಪಂಗಡಗಳಿಗೆ ಸೇರಿದ ಕೋಟ್ಯಾನುಕೋಟಿ ಹಿಂದೂ ಜನಗಳ ಪರವಾಗಿ ನಾನು ನಿಮಗೆ ಕೃತಜ್ಞೆಯನ್ನರ್ಪಿಸುತ್ತೇನೆ."

"ಕೆಲವು ಪ್ರನಿಧಿಗಳು, ಪ್ರಾಚ್ಯರಾಷ್ಟ್ರಗಳಿಂದ ಬಂದಿರುವ ನಮ್ಮನ್ನು ಉದ್ದೇಶಿಸಿ ದೂರದೇಶಗಳಿಂದ ಬಂದಿರುವ ನಾವು ಸಹನೆಯ ದೀವಟಿಗೆಗಾರರೆಂದು ಹೇಳಿದರು. ಅವರಿಗೂ ನನ್ನ ಅಭಿನಂದನೆಗಳು. ಸಹನೆ, ವಿಶ್ವಮೈತ್ರಿಯನ್ನು ಜಗತ್ತಿಗೆ ಬೋಧಿಸಿದ ದರ್ಮಕ್ಕೆ ಸೇರಿದವನೆಂದು ನಾನು ಹೆಮ್ಮೆಪಡುತ್ತೇನೆ. ನಾವು ವಿಶ್ವಸಹನೆಯಲ್ಲಿ ನಂಬಿಕೆಯಿಟ್ಟಿರುವದು ಮಾತ್ರವಲ್ಲದೆ ಎಲ್ಲ ಮತಗಳು ಸತ್ಯವೆಂದು ನಂಬುತ್ತೇವೆ. ಎಲ್ಲಾ ದೇಶಗಳ ವಿವಿಧ ಧರ್ಮ ಮತಗಳೂ ಸತ್ಯವೆಂದು ನಂಬುತ್ತೇವೆ. ಎಲ್ಲಾ ದೇಶಗಳ ವಿವಿಧ ಧರ್ಮ ಪಂಥಕೆ ಸೇರಿದ ಜನ ಧರ್ಮಸಂಹಿತೆಯಿಂದ ತಮ್ಮ ಸ್ವದೇಶಗಳನ್ನು ಬಿಟ್ಟು ಬಂದಾಗ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನೆಂದೂ ನನ್ನ ಹೆಮ್ಮೆ. ರೋಮನ್ನರ ದಬ್ಬಾಳಿಕೆಯಿಂದ ಸ್ವದೇಶವನ್ನು ಪರಿತ್ಯಜಿಸಿ ದಕ್ಷಿಣ ಭಾರತಕ್ಕೆ ಬಂದ ಇಸ್ರಾಯಿಲರಿಗೆ ನಾವು ನಮ್ಮ ಹೃದಯದಲ್ಲಿ ಎಡೆ ಕೊಟ್ಟಿದ್ದೇವೆ. ಜರಾತುಷ್ಟ್ರ ಮತದ ಅಳಿದುಳಿದ ಜನರನ್ನು ರಕ್ಷಿಸಿ ಕಾಪಾಡಿದ ಧರ್ಮಕ್ಕೆ ಸೇರಿದವನೆಂದು ನನ್ನ ಹೆಮ್ಮೆ. ನಾನು ಬಾಲ್ಯದಿಂದಲೂ ಹೇಳಿಕೊಂಡು ಬಂದಿರುವೆ, ಇಂದಿಗೂ ಕೋಟ್ಯಾನುಕೋಟಿ ಭಾರತೀಯರು ಉಚ್ಚರಿಸುತ್ತಿರುವ ಒಂದು ಶ್ಲೋಕದಿಂದ ಕೆಲವು ಚರಣಗಳನ್ನು ಉದ್ಧರಿಸುತ್ತೇನೆ.

"ಹಲವು ಎಡೆಗಳಲ್ಲಿ ತಮ್ಮ ಹುಟ್ಟನ್ನು ಪಡೆದ ಹಲವು ಪ್ರವಾಹಗಳು ತಮ್ಮ ನೀರನ್ನು ಸಮುದ್ರದಲ್ಲಿ ಕೂಡಿಸುವಂತೆ, ಓ ದೇವ, ಬೇರೆ ಬೇರೆ ದೃಷ್ಟಿ, ಆಚಾರ ವಿಚಾರಗಳಿಂದ ಜನ ಅನುಸರಿಸುವ ಬೇರೆ ಬೇರೆ ಹಾದಿಗಳು, ಎಲ್ಲಾ ನಿನಗೆ ಮುಟ್ಟುತ್ತವೆ." "ಇಂದಿನ ಸರ್ವಧರ್ಮದ ಸಮ್ಮೇಳನ ಭಗವದ್ಗೀತೆಯ ಅದ್ಭುತ ಉಪದೇಶದ ದೃಷ್ಟಾಂತವಾಗಿದೆ.
ಯಾರು ಯಾವ ಆಕಾರದಲ್ಲಿ, ಯಾವ ರೂಪ ಹೊತ್ತು ನನ್ನ
ಬಳಿಗೆ ಬಂದರೂ ನಾನು ಅವರನ್ನು ಎತ್ತಿಕೊಳ್ಳುತ್ತೇನೆ. ಎಲ್ಲ
ಮಾನವರೂ ಬೇರೆ ಬೇರೆ ಹಾದಿಗಳಲ್ಲಿ ತೊಳಲಾಡುತ್ತಿದ್ದಾರೆ. ಆದರೆ ಕೊನೆಯಲ್ಲಿ ಅವರೆಲ್ಲರೂ ನನ್ನನ್ನೇ ಸೇರುತ್ತಾರೆ.

"ಈ ಸುಂದರ ಪೃಥ್ವಿಯನ್ನು ಜಾತ್ಯಂಧಕಾರ, ಅಸಹನೆ, ಕಟುಧರ್ಮವಿರೂಪಮಾಡಿವೆ. ಅವು ಜಗತ್ತನ್ನು ಹಿಂಸೆಯಿಂದ ತುಂಬಿ ಮಾನವರಕ್ತವನ್ನು ಪದೇ ಪದೇ ಶೋಷಿಸಿವೆ. ನಾಗರಿಕತೆಯನ್ನು ಧ್ವಂಸಮಾಡಿ ರಾಷ್ಟ್ರಗಳನ್ನು ನಿರ್ವಿಣ್ಣತೆಯ ಮಡುಲಿಗೆ ಹಾಕಿದೆ. ಈ ರಾಕ್ಷಸರಿಲ್ಲದಿದ್ದರೆ ಮಾನವ ಸಮಾಜ ಈ ವೇಳೆಗೆ ಬಹಳ ಮುಂದುವರಿಯುತ್ತಿತ್ತು. ಆದರೆ ಅವುಗಳ ಕಾಲವು ಸಮೀಪಿಸಿದೆ. ಈ ಬೆಳಿಗ್ಗೆ ಈ ಸಮಾರಂಭದ ಗೌರವಾರ್ಥವಾಗಿ ಬಾರಿಸಿದ ಗಂಟೆಯೇ ಅವುಗಳ ಮೃತ್ಯುಸೂಚಕವಾಗಲೆಂದು ನಾನು ಹುತ್ಪೂರ್ವಕವಾಗಿ ಹಾರೈಸುತ್ತೇನೆ. ಒಂದೇ ಗುರಿಯನ್ನು ಮುಟ್ಟಲೆಳೆಸಿ ಹೊರಡುವ ಜನತೆಯನ್ನು ಕ್ರೂರವಾದ ಮಾತು, ಕ್ರೂರವಾದ ಆಚರಣೆಗಳಿಂದ ಹಿಂಸಿಸುವ ಧರ್ಮಾಂಧತೆಯ ಕೊನೆಗಾಲ ಬಂದಿದೆಯೆಂದು ನಾನು ಶ್ರದ್ಧೆಯಿಂದ ನಂಬುತ್ತೇನೆ."

ಸಂಜೆಯ ವೇಳೆಗೆ ಸ್ವಾಮಿ ವಿವೇಕಾನಂದರ ಹೆಸರು ಇಡೀ ಅಮೇರಿಕೆಯಲ್ಲಿ ಮನೆ ಮಾತಾಗಿ ಹೋಗಿತ್ತು. ರಸ್ತೆಗಳಲ್ಲಿ ಸ್ವಾಮಿಗಳ ದೊಡ್ಡ ಭಾವಚಿತ್ರಗಳನ್ನು ತೂಗುಹಾಕಿದರು. ಸಮ್ಮೇಳನದ ಪ್ರತಿದಿನವೂ ಸ್ವಾಮಿಗಳ ಭಾಷಣವಾಗುತ್ತಿತ್ತು. ಒಂದೊಂದು ದಿವಸ ೨-೩ ಸಲ ಸ್ವಾಮಿಗಳು ಮಾತನಾಡಲು ಜನ ಬೇಡುತ್ತಿದ್ದರು. ಹಿಂದೂಸ್ಥಾನದ ಬಡ ಸನ್ಯಾಸಿ ಅಮೇರಿಕೆಯ ಆರಾಧ್ಯ ಮೂರ್ತಿಯಾದ. ಅಮೇರಿಕೆಯ ಪತ್ರಿಕೆಗಳು ಸ್ವಾಮಿಗಳ ಮೇಲೆ ಉದ್ದುದ್ದ ಲೇಖನಗಳನ್ನು ಬರೆದರು. ನ್ಯೂಯಾರ್ಕ್ ಹೆರಾಲ್ಡ್ ಪತ್ರಿಕೆಯೊಂದು "“After hearing him, we feel how foolish it is to send missionaries to this learned nation.” ಎಂದು ಬರೆಯಿತು. ಜನರ ಈ ಎಲ್ಲ ಅಭಿಮಾನ, ಪ್ರೀತಿ. ಅಭಿಮಾನಗಳಿಂದ ಸ್ವಾಮಿಗಳು ನಿಜ ಕರ್ತವ್ಯವನ್ನು ಮರೆತು ಸ್ವಾಮಿಗಳು ವಿಸ್ಮೃತಿ ಹೊಂದಲಿಲ್ಲ. ಹಿಂದೂ ದೇಶಕ್ಕೆ ಬಂದು ಕ್ರೈಸ್ತಪಾದ್ರಿಗಳು ಹಿಂದೂ ಧರ್ಮವನ್ನು ತೆಗಳಿ ಮಾಡುತ್ತಿದ್ದ ಅಪಪ್ರಚಾರವನ್ನು ಖಂಡಿಸಿದರು. ಅಮೇರಿಕೆಯ ಜನರ ಧನಮದಾಂಧತೆಯನ್ನು ನಿರ್ದಾಕ್ಷಿಣ್ಯದಿಂದ ವಿರೋಧಿಸಿದರು. ತಮ್ಮ ತಾಯ್ನಾಡಿನ ದುಸ್ಥಿತಿಯನ್ನು ಕಲ್ಲು ಕರಗುವಂತೆ ವರ್ಣಿಸಿದರು.
ಒಂದು ದಿನ ಸಭೆಯಲ್ಲಿ ಮಾತನಾಡುತ್ತಾ ಸ್ವಾಮಿಗಳು ಶ್ರಾವಕರನ್ನು ಕೇಳಿದರು.
"ನಿಮ್ಮಲ್ಲಿ ಎಷ್ಟು ಜನ ಹಿಂದೂ ಧರ್ಮಗ್ರಂಥಗಳನ್ನು ಓದಿದ್ದೀರಿ?"
ಮೂರು ನಾಲ್ಕು ಜನ ಮಾತ್ರ ಕೈ ಎತ್ತಿದರು. ಸ್ವಾಮಿಗಳು ಗಂಭೀರವಾಗಿ "ಆದರು ನಮ್ಮನ್ನು ಅಳೆಯುವ ಸಾಹಸ ಮಾಡುವಿರಲ್ಲವೇ?" ಎಂದು ನುಡಿದರು.

ಸ್ವಾಮಿಗಳು ತಮ್ಮ ಭಾರತ ಶಿಷ್ಯರಿಗೆ ಸ್ಫೂರ್ತಿದಾಯಕ ಪತ್ರಗಳನ್ನು ಬರೆದು ಎಚ್ಚರಿಸುತ್ತಿದ್ದರು. ಒಂದು ಪತ್ರದಲ್ಲಿ "ಟೊಂಕ ಕಟ್ಟಿ ನಿಲ್ಲಿ ಕೆಲಸಕ್ಕೆ. ನನ್ನ ಪ್ರಿಯ ಬಾಲದರೇ, ನಿಮ್ಮನ್ನೆಚ್ಚರಿಸುವ ಕೆಲಸವನ್ನು ದೇವರು ನನಗೆ ಒಪ್ಪಿಸಿದ್ದಾನೆ. ಭವಿಷ್ಯ ನಿಮ್ಮನ್ನು ಸೇರಿದೆ-ದೀನ, ನಿರಾಡಂಬರ ಶ್ರದ್ಧಾಳುಗಳನ್ನು ದುಃಖಿಗಳನ್ನು ಕಂಡು ಮರುಕಗೊಳ್ಳಿರಿ - ಸಹಾಯ ಬಂದೇ ಬರುತ್ತದೆ. ರಕ್ತ ಸುರಿಯುವ ಹೃದಯವನ್ನು ಹೊತ್ತು ಸಮುದ್ರದಾಚೆ- ಇಲ್ಲಿಗೆ ಸಹಾಯಕೋರಿ ನಾನು ಬಂದಿದ್ದೇನೆ. ನಾನು ಚಳಿಯಿಂದ, ಹಸಿವಿನಿಂದ ಇಲ್ಲಿ ಸಾಯಬಹುದು. ಆದರೆ ನಿಮಗೆ-ತರುಣರಿಗೆ, ಈ ಅಂತಃಕರುಣ, ದಲಿತರಿಗೆ, ದೀನರಿಗೆ, ದರಿದ್ರರಿಗೆ, ಅಜ್ಞಾನಿಗಳಿಗೆ ದುಡಿಯುವ ಹಂಬಲವನ್ನು ಬಳುವಳಿಯಾಗಿ ಬಿಟ್ಟುಹೋಗುತ್ತೇನೆ. ದೀನವದನರಾಗಿ ನಿಮ್ಮ ಸರ್ವಸ್ವವನ್ನು ಮೂವತ್ತುಕೋಟಿ ನಮ್ಮ ಜನರ ಸೇವೆಗೆ ಅರ್ಪಣಮಾಡಿ. ಪರಮಾತ್ಮನಿಗೆ ಜಯವಾಗಲಿ. ನಾವು ವಿಜಯಿಗಳಾಗುತ್ತೇವೆ. ಈ ಸಂಗ್ರಾಮದಲ್ಲಿ ನೂರಾರು ಜನ ಬೀಳಬಹುದು. ಆದರೆ ಅವರ ಸ್ಥಾನವನ್ನು ಮತ್ತೆ ನೂರಾರು ಜನ ಆಕ್ರಮಿಸುತ್ತಾರೆ. ಜೀವನ ನಶ್ವರ, ಸಾವು ನಶ್ವರ. ಮುನ್ನುಗ್ಗಿ - ಪರಮಾತ್ಮನೇ ನಮ್ಮ ದಳಪತಿ ಯಾರು ಬೀಳುತ್ತಾರೆಂದು ಹಿಂದೆ ನೋಡಬೇಡಿ - ಮುಂದಕೆ ಮುಂದಕ್ಕೆ ನಡೆಯಿರಿ."

ಕೆಲವು ಧರ್ಮಾಂಧರು ಸ್ವಾಮಿಗಳ ವಿರುದ್ಧ ಇಲ್ಲಸಲ್ಲದ ಆಕ್ಷೇಪಗಳನ್ನು ಹೊರೆಸಿದರು. ಇಲ್ಲಸಲ್ಲದ ಟೀಕೆ - ಟಿಪ್ಪಣಿಯನ್ನು ಮಾಡಿದರು. ಸ್ವಾಮಿಗಳು ಯಾವುದಕ್ಕೂ ಅಲುಗಾಡಲಿಲ್ಲ. ಉದಾರಮತಿಗಳೂ, ಪ್ರಗತಿಶೀಲರೂ ಆದ ಕ್ರಿಸ್ತ್ ವಿದ್ವಾಂಸರೂ, ಪಾದ್ರಿಗಳೂ, ಮಠಾಧಿಪತಿಗಳೂ ಸ್ವಾಮಿಗಳನ್ನು "ಪ್ರತ್ಯಕ್ಷ ಕ್ರಿಸ್ತ್"ನೆಂದು ಭಾವಿಸಿ ಆರಾಧಿಸಿದರು. ಸ್ವಾಮಿಗಳು ಅಮೆರಿಕೆಯಲ್ಲಿ ದೊರಕಿಸಿದ್ದ ಅಭೂತಪೂರ್ವ ವಿಜಯದ ಸುದ್ದಿ ತಾಯ್ನಾಡಿಗೆ ಮುಟ್ಟಿತು. ಭಾರತೀಯರ ಆನಂದಕ್ಕೆ ಪಾರವೇ ಇರಲಿಲ್ಲ. ಬಾರಾನಗರದಲ್ಲಿದ್ದ ಗುರುಸಹೋದರರು ತಮ್ಮ "ನರೇಂದ್ರ"ನ ಸಾಹಸ ಚರಿತ್ರೆಯನ್ನು ಕೇಳಿ ಕುಣಿದಾಡಿದರು. ಮದರಾಸು, ಬಂಗಾಳಗಳಲ್ಲಿ ಪ್ರಚಂಡ ಸಭೆಗಳು ಸೇರಿ ಸ್ವಾಮಿಗಳಿಗೆ ಅಭಿನಂದನೆಯನ್ನು ಕಳುಹಿಸಿದವು. ಜಗತ್ತಿನ ರಾಷ್ಟ್ರಗಳ ಮುಂದೆ ತಲೆತಗ್ಗಿಸಿ ನಿಂತಿದ್ದ ಭಾರತವರ್ಷ ತಲೆಯೆತ್ತಿ ನಿಲ್ಲುವಂತಾಯಿತು. ವಾರಕ್ಕೆ ೧೨-೧೪ ಉಪನ್ಯಾಸಗಳನ್ನು ಸ್ವಾಮಿಗಳು ಮಾಡುತ್ತಿದ್ದರು. ಸ್ವಲ್ಪವೂ ಬಿಡುವಿಲ್ಲದೆ ವಿಶ್ರಾಂತಿಯಿಲ್ಲದೆ ಯಾರ ಆಮಂತ್ರಣವನ್ನು ನಿರಾಕರಿಸದೇ ಅಮೇರಿಕೆಯ ಸಾಮಾಜಿಕ ಜೀವನದ ಒಳಹೊಕ್ಕು ಜನಗಳ ಹೃದಯದಲ್ಲಿ ವೇದಾಂತವನ್ನು ಬಿತ್ತಲು ಪ್ರಯತ್ನಿಸಿದರು. ಒಮ್ಮೊಮ್ಮೆ "ನಾನು ಹೇಳಬೇಕಾದುದನ್ನೆಲ್ಲಾ ಹೇಳಿಬಿಟ್ಟಿದ್ದೇನೆ. ನಾಳೆ ಏನು ಹೇಳಲಿ?" ಎಂದು ಯೋಚನೆ ಹತ್ತುತ್ತಿತ್ತು. ಆದರೆ ಯಾರೋ ಬಂದು ಕಿವಿಯಲ್ಲಿ ನಾಳಿನ ಭಾಷಣವನ್ನು ಉಸುರಿದಂತಾಗುತ್ತಿತ್ತು. ತಾವು ಮಲಗಿದ್ದಂತೆ ಯಾರೋ ತಮ್ಮ ಸಂಪೂರ್ಣ ಭಾಷಣವನ್ನು ಒಪ್ಪಿಸಿದಂತಾಗುತ್ತಿತ್ತು. ಅತ್ಯುಗ್ರವಾದ ಚಿತ್ತೈಕಾಗ್ರತೆಯಲ್ಲಿ ಮನಸ್ಸೇ ಗುರುವಾಗುತ್ತದೆ ಎಂದು ಸ್ವಾಮಿಗಳು ಹೇಳುತ್ತಿದ್ದರು. ಸ್ವಾಮಿಗಳ ಅಮೇರಿಕೆಯ ಕೆಲಸ ಮುಗಿದಂತಾಗಿತ್ತು. ವೇದಾಂತವನ್ನು ಬಳಸಿ ಬೆಳೆಸಿಕೊಂಡು ಹೋಗುವ ಒಂದು ವೀರ ಶಿಷ್ಯತಂಡವನ್ನೇ ಸ್ವಾಮಿಗಳು ನಿರ್ಮಾಣಮಾಡಿದ್ದರು. ಅಲ್ಲಿಂದ ಇಂಗ್ಲೆಂಡಿಗೆ ಹೋಗುವ ಮುನ್ನ ಅಮೇರಿಕೆಯಲ್ಲಿ ಒಂದು "ವೇದಾಂತ ಸಂಘ"ವನ್ನು ಸ್ಥಾಪಿಸಿ ಅದಕ್ಕೆ ಪ್ರಾನ್ಸಿಸ್ ಲೆಗೆಟರೆಂಬ ಸಮಾಜ ಮುಂದಾಳುಗಳನ್ನು ಅಧ್ಯಕ್ಷರನ್ನಾಗಿ ಮಾಡಿ ತಮ್ಮ ಕಾರ್ಯಕ್ಕೆ ಒಂದು ಚಿರಸ್ಥಾಯಿ ಸ್ವರೂಪವನ್ನಿತ್ತರು.

ಇಂಗ್ಲೆಂಡಿನ ಜನತೆ ಸ್ವಾಮಿಗಳ ಪ್ರಖ್ಯಾತಿಯನ್ನು ಅದಾಗಲೇ ತಿಳಿದುಕೊಂಡು ಅವರ ಬರುವಿಕೆಯನ್ನು ಎದುರು ನೋಡುತ್ತಿತ್ತು. ಅವರ ಆಗಮನದಿಂದ ಇಡೀ ಇಂಗ್ಲೆಂಡ್ ಸಂತೋಷದಿಂದ ತುಂಬಿಹೋಯಿತು. ಭಾರತವನ್ನು ಕಪಿಮುಷ್ಟಿಯಲ್ಲಿ ಹಿಡಿದು ಆಳುತ್ತಿದ್ದ ಇಂಗ್ಲೆಂಡ್ ಅದೀಗ ಸ್ವಾಮಿಗಳ ಪಾದಾರವಿಂದಗಳಲ್ಲಿ ಕುಳಿತು ಅವರ ವೀರವಾಣಿಗಳಿಗಾಗಿ ಕಾತರಗೊಂಡಿತು. ಆ ಉತ್ಸಾಹ ಆರಾಧನೆಗಳಿಂದ ಸ್ವಾಮಿಗಳ ತಲೆ ತಿರುಗಲಿಲ್ಲ. ಆದರೆ ಅವರು ತಮ್ಮವರನ್ನು ಎಚ್ಚರಿಸಲು ಮರೆಯಲಿಲ್ಲ. ಒಂದರೆಕ್ಷಣವೂ ತಮ್ಮ ಗುರಿಯನ್ನು ನಿರ್ಲಕ್ಷಿಸಲಿಲ್ಲ. "ಏಳಿ! ಎದ್ದೇಳಿ! ಗುರಿ ಮುಟ್ಟುವತನಕ ನಿಲ್ಲಬೇಡಿ." ಎಂಬ ವಜ್ರಸಂದೇಶ ಸ್ವಾಮಿಗಳಿಂದ ಹೊರಬಂದಿತು. ಅವರ ಪ್ರತಿಮಾತು ಜ್ವಾಲಾಮುಖಿಯ ಕೆಂಡಗಳನ್ನು ಒಗೆಯುತ್ತಿತ್ತು.

ಬಂಗಾಳ ತನ್ನ ಸುಪುತ್ರನ ಬರುವಿಕೆಗೆ ಹಾತೊರೆಯುತ್ತಿತ್ತು. ಫೆಬ್ರುವರಿ ೧೫ಕ್ಕೆ ಸ್ವಾಮಿಗಳು ಕಲ್ಕತ್ತೆಗೆ ಬಂದರು. ಹಿಂದುಗಳು, ಮುಸಲ್ಮಾನರು, ಕ್ರಿಸ್ತರು ಎಲ್ಲಾ ಜಾತಿ ಮತದವರೂ "ಭಾರತದ ರಾಯಭಾರಿ"ಯನ್ನು ಸ್ವಾಗತಿಸಿದರು. ಭಾರತದಾದ್ಯಂತ ಸಂಚರಿಸಿ ನೊಂದವರ, ದುಃಖಿಗಳ, ರೋಗಿಗಳ ಶೂಶ್ರೂಷೆ ಮಾಡಿದರು. ಪಾಠಪ್ರವಚನಗಳನ್ನು ನಡೆಸಿದರು. ಅಸಂಖ್ಯ ಶಿಷ್ಯರನ್ನು ತಯಾರು ಮಾಡಿ ಎಲ್ಲರನ್ನೂ ಉದ್ದೇಶಿತ ಗುರಿಸಾಧನೆಗಾಗಿ ದೇಶಾದ್ಯಂತ ಹೋಗಲು ವ್ಯವಸ್ಥೆ ಮಾಡಿದರು.

ಜುಲೈ ತಿಂಗಳ ೪, ೧೯೦೨
ಸ್ವಾಮಿಗಳು ಹೊತ್ತಿಗೆ ಮುಂಚೆಯೇ ಎದ್ದರು. ಪ್ರಾತಃಕಾಲದ ಚಹಾಸೇವಿಸಿ ದೇವಮಂದಿರದ ಒಳಗೆ ಪ್ರವೇಶಿಸಿದರು. ಎಂದೂ ಇಲ್ಲದ್ದು ಅಂದು ಮಂದಿರದ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಧ್ಯಾನಾಸಕ್ತರಾದರು. ಸುಮಾರು ಮೂರು ಗಂಟೆಗಳ ಕಾಲ ಅಲ್ಲಿದ್ದು ಹೊರಗೆ ಬಂದರು. ಅವರ ಮುಖದ ಮೇಲೆ ದೇದೀಪ್ಯಮಾನವಾದ ಪ್ರಭೆ ಮೂಡಿತ್ತು. ಆಶ್ರಮದ ಹೊರ ಅಂಗಳದಲ್ಲಿ ಶತಪಥ ತಿರುಗುತ್ತ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದರು. ಮಧ್ಯಾಹ್ನ ೧ ಗಂಟೆಗೆ ಸ್ವಾಮಿಗಳು ಶಿಷ್ಯರನ್ನು ಕೂಡಿಸಿಕೊಂಡು ಸಂಸ್ಕೃತ ವ್ಯಾಕರಣ ಪಾಠ ಹೇಳಿದರು. ಪಾಠ ಮೂರು ಗಂಟೆ ನಡೆದರು ವಿದ್ಯಾರ್ಥಿಗಳಿಗೆ ಬೇಸರವಾಗಲಿಲ್ಲ. ಸಂಜೆಯಾಗುತ್ತ ಬಂದಂತೆ ಸ್ವಾಮಿಗಳ ಮನಸ್ಸು ಒಳಮುಖವಾಗುತ್ತ ಬಂತು. ಸಂಜೆಯ ವೇಳೆ ಏಕಾಂತಮಂದಿರವನ್ನು ಸೇರಿದರು. ಒಂದು ಗಂಟೆಯ ನಂತರ ಸ್ವಾಮಿಗಳು ಗುರುಸಹೋದರರಲ್ಲಿ ಒಬ್ಬರನ್ನು ಕರೆದು ಗಾಳಿ ಬೀಸಲು ಹೇಳಿ ಸ್ತಬ್ಧರಾಗಿ ಮಲಗಿಬಿಟ್ಟರು. ಒಂದೊಂದು ಸಲ ಅವರ ಕೈ ಅಲುಗಾಡುತ್ತಿತ್ತು. ಸ್ವಾಮಿ ಪ್ರೇಮಾನಂದ, ಸ್ವಾಮಿ ನಿಶ್ಚಯಾನಂದರು ಅವರ ಕಿವಿಯಲ್ಲಿ "ಶ್ರೀ ರಾಮಕೃಷ್ಣ"ರ ಪವಿತ್ರ ನಾಮವನ್ನು ಜಪಿಸಿದರು. ಸ್ವಾಮಿ ಅದ್ವೈತಾನಂದರು ಸ್ವಾಮಿ ಬೋಧಾನಂದರಿಗೆ "ನಾಡಿ ನೋಡಿ" ಎಂದು ಹೇಳಲು ಅವರಿಗೆ ನಾಡಿ ಸಿಕ್ಕಲಿಲ್ಲ. ಕಣ್ಣೀರ್ಗರೆಯುತ್ತ ನಿಂತರು. ವೈದ್ಯರು ಬಂದು ಕೃತ್ರಿಮ ಶ್ವಾಸೋಚ್ಛ್ವಾಸ ಮಾರ್ಗದಿಂದ ಅವರಿಗೆ ಸ್ಮೃತಿ ತರಲೆತ್ನಿಸಿದರು. ಎಲ್ಲವೂ ನಿಷ್ಪಲ. ಮಧ್ಯರಾತ್ರಿ ಸ್ವಾಮಿಗಳು ಕಾಲವಾದರೆಂದು ಡಾಕ್ಟರು ತಿಳಿಸಿದರು.

ಸ್ವಾಮಿಗಳ ಮಹಾಸಮಾಧಿ ಸುದ್ದಿ ಬಿರುಗಾಳಿಯಂತೆ ವ್ಯಾಪಿಸಿತು. ಎಲ್ಲ ಕಡೆಗಳಿಂದ ಜನ ತಂಡೋಪತಂಡವಾಗಿ ಬಂದು ನೆರೆದರು. ಸ್ವಾಮಿಗಳನ್ನು ಹೂಗಳಿಂದ ಅಲಂಕರಿಸಿ ಮಲಗಿಸಿದ್ದರು. ಅದೇ ಸಿಂಹ - ಅದೇ ಶಾಂತಿ- ಅದೇ ಸ್ಥೈರ್ಯ- ಅದೇ ಕೆಚ್ಚು. ಮೃತ್ಯುವನ್ನು ಜಯಿಸಲು ಸ್ವಾಮಿಗಳು ದಿಗ್ವಿಜಯ ಹೊರಟಂತಿತ್ತು. ನಿದ್ರೆ ಮಾಡುತ್ತಿದ್ದಂತಿದ್ದ ಮುಖವನ್ನು ನೋಡಿ ಸ್ವಾಮಿಗಳು ಹೋದರೆಂದು ಯಾರು ತಾನೇ ಹೇಳಲು ಸಾಧ್ಯ.? ಗುರುವಿನ ಕಾಯ ಮತ್ತೆ ಅದೇ ರೂಪಿನಲ್ಲಿ ಏಳಲಿಲ್ಲ. ಆದರದು ಕೋಟ್ಯಂತರ ರೂಪತಾಳಿ ಭಾರತದ ಸಹೋದರ ಸಹೋದರಿಯರ ಆತ್ಮದೊಳಗೆ ಲೀನವಾಯಿತು.

ಸ್ವಾಮಿಗಳ ಪಾದಗಳಿಗೆ ಅರಿಶಿಣ ಬಳಿದು, ಅದರ ಮುದ್ರೆಯನ್ನು ತೆಳು ಬಟ್ಟೆಯ ಮೇಲೆ ಆಶ್ರಮವಾಸಿಗಳು ತೆಗೆದಿಟ್ಟುಕೊಂಡರು. ಮಂತ್ರ ಘೋಷ, ಶಂಖಧ್ವಾನ, ದೀಪಾರತಿಯ ಸೇವೆಗಳಾದವು. ನೆರೆದವರೆಲ್ಲ ಸ್ವಾಮಿಗಳ ಪಾದಮುಟ್ಟಿ ನಮಸ್ಕರಿಸಿದರು. ಮೃತ್ಯುಶಯ್ಯೆಯ ಮೇಲೆ ಸ್ವಾಮಿಗಳ ಕಳೇಬರವನ್ನು ಮಲಗಿಸಿದರು. ಗಂಧದ ಚೆಕ್ಕೆ ಚೆಲ್ಲಲಾಯಿತು. ಅದಕ್ಕೆ ಬೆಂಕಿ ಕೊಟ್ಟರು. ಮಾರನೆಯ ಬೆಳಿಗ್ಗೆ ಅವಶೇಷಗಳನ್ನು ಸಂಗ್ರಹಿಸಿದರು. ಸ್ವಾಮಿಗಳನ್ನು ಸಂಸ್ಕಾರಮಾಡಿದ ಸ್ಥಾನದಲ್ಲಿ ಈಗ ಭವ್ಯ ಮಂದಿರವೊಂದು ತಲೆಯೆತ್ತಿದೆ. ಜಗತ್ತಿನ ಶಾಂತಿಯ ತವರಾಗಿ ಅದು ಎಲ್ಲರನ್ನೂ ಬನ್ನಿ ಬನ್ನಿರೆಂದು ಸ್ವಾಗತಿಸುತ್ತಿದೆ. ಅದುವೇ ಈಗಿನ ಕನ್ಯಾಕುಮಾರಿ.

ಸ್ವಾಮಿ ವಿವೇಕಾನಂದರು ಮಹಾಸಮಾಧಿಯನ್ನು ಪಡೆದಾಗ ಅವರ ವಯಸ್ಸು ೩೯. ಅವರೇ ಹೇಳುತ್ತಿದ್ದರು. ೪೦ ತುಂಬುವ ತನಕ ನಾನು ಈ ಲೋಕದಲ್ಲಿರುವದಿಲ್ಲವೆಂದು. ಭಗವಾನ್ ಯೇಸು ಹೇಳಿಲ್ಲವೆ "ಪರಮಾತ್ಮನಿಗೆ ಸಂಪ್ರೀತರಾದವರು ಹೆಚ್ಚು ದಿನ ಈ ಲೋಕದಲ್ಲಿ ಉಳಿಯುವದಿಲ್ಲ."ವೆಂದು. ಸ್ವಾಮಿಗಳು ಹೋಗಿಬಿಟ್ಟರೆಂದು ಕಣ್ಣೀರ್ಗರೆಯೋಣವೇ? ಅವರ ಆತ್ಮ ಅವರ ಸಹಸ್ರಾರು ಕೆಲಸಗಳಲ್ಲಿ, ಅವರ ಸಂದೇಶ ಕೋಟ್ಯಂತರ ಜನರ ಹೃದಯದಲ್ಲಿ ನೆಲೆಸಿರುವಾಗ ಗುರು ಹೋದರೆಂದು ಜನರ ಹೃದಯದಲ್ಲಿ ನೆಲೆಸಿರುವಾಗ ಗುರು ಹೋದರೆಂದು ಹೇಳುವದು ಅವರಿಗೆ ಅಪಚಾರಮಾಡಿದಂತಲ್ಲವೇ...?

No comments: