`ಹಾರ್ಸ್ ಪವರ್' ಎಂಬ ಹೆಸರು ಹೇಗೆ ಬಂದಿತು ಗೊತ್ತೇ?
ಜೇಮ್ಸ್ ವ್ಯಾಟ್ ಎಂಬ  ವಿಜ್ಞಾನಿ ಹಬೆಯಂತ್ರ ಕಂಡು ಹಿಡಿದ ದಿನಗಳ ವಿಷಯ. ಆತ ತನ್ನ ಯಂತ್ರಗಳ ಕೆಲಸದ ವೇಗವನ್ನು  ಕುದುರೆಗಳ ಶಕ್ತಿಗೆ ಹೋಲಿಸುತ್ತಿದ್ದನಂತೆ. ನನ್ನ ಯಂತ್ರ ಇದೋ ಇಷ್ಟು ಕುದುರೆಗಳ  ಶಕ್ತಿಗೆ ಸಮಾನ ಎಂದು ಹೇಳಿ ಮಾರಾಟ ಮಾಡುತ್ತಿದ್ದನಂತೆ. ಹೀಗೆ ಅಂದಿನಿಂದ ಹಾರ್ಸ್ ಪವರ್  ಎಂಬ ಪದ ಬಳಕೆಗೆ ಬಂದಿತು. ಆಗಿನಿಂದ ಹಾರ್ಸ್ ಪವರ್ ಶಕ್ತಿಯ ಪ್ರತಿರೂಪವಾಯಿತು.
ನಮಾಜ್:
ಅರೇಬಿಕ್  ಭಾಷೆಯಲ್ಲಿ `ನಮಾಜ್'ನ್ನು `ಸಲಾತ್' ಎಂದೂ ಕರೆಯುತ್ತಾರೆ. `ಸಲಾತ್' ಎಂಬ ಶಬ್ದ `ಸಿಲಾ'  ಎಂಬ ಮೂಲದಿಂದ ಬಂದಿದ್ದು. ಸಿಲಾ, ಸಲಾತ್, ನಮಾಜ್ ಎಂದರೆ ಕೂಡುವದು, ಒಂದಾಗುವದು,  ಹೊಂದುವದು ಎಂದರ್ಥ. ಇದನ್ನೇ ಸಂಸ್ಕೃತದಲ್ಲಿ `ಯೋಗ' ಎನ್ನುವರು. ಆತ್ಮ-ಪರಮಾತ್ಮಗಳ  ಸಾಮರಸ್ಯವನ್ನೇ `ಯೋಗ' ಅಥವಾ `ನಮಾಜ್' ಎನ್ನುತ್ತಾರೆ.
   ನಮಾಜ್ ಹಜರತ್ ಮಹ್ಮದ್ ಪೈಗಂಬರ್‌ರವರಿಂದ ಮತ್ತು ಯೋಗವು ಮಹರ್ಷಿ ಪತಂಜಲಿಯವರಿಂದ ಹೊಸ ಸ್ವರೂಪ ಪಡೆದುಕೊಂಡವು.
    ನೀರು, ತನ್ನಿ, ವೆಲ್ಲಂ, ನಿಳ್ಳು, ಪಾನಿ, ಜಲ, ವಾಟರ್, ಎಚ್.ಟು.ಓ., ಅಪ್ಪು -  ಹೀಗೆ ಹೆಸರು ಬೇರೆಬೇರೆಯಾದರೂ ವಸ್ತುವೊಂದೇ, ಹಾಗೆಯೇ ನಮಾಜ್, ಸಲಾತ್, ಯೋಗ ಎಲ್ಲವೂ  ಒಂದೇ.
"ಇನ್ನಾಸ್ ಸಲಾತ್ ತನ್ಹಾ ಫಸ್ಯೆಯೇ ವೆಲ್ಮೂಂಕರ್"
                - ಕುರ್-ಆನ್ ೨೯:೪೫ ಅಧ್ಯಾಯ
ಅರ್ಥ:  - ನಮಾಜಿ (ನಮಾಜ್ ಮಾಡುವವ)ಯನ್ನು ಎಂದೆಂದೂ ಅನಾರೋಗ್ಯಕರ ಕಾಯಿಲೆಗಳು ಮತ್ತು  ಅನಾರೋಗ್ಯಕರ ವಿಚಾರಗಳು ದೇಹ, ಮನಸ್ಸು ಮತ್ತು ಆತ್ಮವನ್ನು ತಟ್ಟಲು ಸಾಧ್ಯವಿಲ್ಲ.
ಸರ್.ಎಂ.ವಿ.ವಿಶ್ವೇಶ್ವರಯ್ಯನವರ ಬದುಕಿನ ಪುಟ್ಟ ಘಟನೆಗಳು:
೧.  ೧೯೪೭ರಲ್ಲಿ ದಿಲ್ಲಿಯ ಬಿರ್ಲಾ ಹೌಸ್‍ನಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡ ಬಂದವರೆಲ್ಲ  ನೆಲದ ಮೇಲಿನ ಜಮಖಾನಾಲ್ಲಿ ಕುಳಿತುಕೊಂಡಿದ್ದನ್ನು ಕಂಡ ಎಂ.ವಿ. `ನನಗೇಕೆ ಕುರ್ಚಿ?'  ಎಂದು ಪ್ರಶ್ನಿಸಿದರು. ಬಳಿಕ ನಿಮ್ಮ ಮೇಲೆ ನನಗೆ ಅಸಮಧಾನವಿದೆ. ನಾನು ಬರೆದ ಪತ್ರಗಳಿಗೆ  ತಾವು ಉತ್ತರಿಸಿಲ್ಲ ಎಂದರು. ಹೀಗೆ ಗಾಂಧಿಯವರಿಗೆ ನೇರಾನೇರ ಹೇಳಿ ಬಿಡುತ್ತಿದ್ದರು  ವಿಶ್ವೇಶ್ವರಯ್ಯ.
೨. ನಂದಿ ಬೆಟ್ಟದಲ್ಲೊಮ್ಮೆ ಗಾಂಧೀಜಿ ಮತ್ತು ಸರ್.ಎಂ.ವಿ.  ಭೇಟಿ ನಿಗದಿಯಾಗಿತ್ತು. ಸಮಯಕ್ಕೆ ಅಷ್ಟೇ ಬೆಲೆ ನೀಡುತ್ತಿದ್ದ ಎಂ.ವಿ. ನಿಗದಿತ ಸಮಯಕ್ಕೆ  ಗಾಂಧಿ ಭೇಟಿಗೆ ಬೆಳಿಗ್ಗೆ ೮ಕ್ಕೆ ತೆರಳಿದ್ದರು. ಗಾಂಧೀಜಿ ೫ ನಿಮಿಷ ತಡವಾಗಿ ಬಂದರು.  ಸರ್.ಎಂ.ವಿ. ಅವರು ಹೊರಟು ಹೋಗಿದ್ದರು. ಭೇಟಿ ನಡೆಯಲಿಲ್ಲ. ಮಾರನೆಯ ದಿನ ಗಾಂಧಿ ಮತ್ತೆ  ಭೇಟಿಗೆ ಸಮಯ ನಿಗದಿ ಮಾಡಿ ೫ ನಿಮಿಷ ಮುಂಚಿತವಾಗಿಯೇ ಸರ್.ಎಂ.ವಿ.ಗೆ ಕಾದಿದ್ದರು. ಈ  ಭೇಟಿ ಕೇವಲ ೧೫ ನಿಮಿಷಗಳಲ್ಲೇ ಮುಗಿದಿತ್ತು.
   "ಇದು ಬಹುತೇಕ ನಮ್ಮ ಕೊನೆಯ ಭೇಟಿ  ಆಗಬಹುದು. ನಿಮ್ಮ ಧೋರಣೆಗಳೇ ಬೇರೆ. ನಾವು ಭೇಟಿಯಾಗಿ ಚರ್ಚಿಸುವುದಕ್ಕೆ ಏನೂ ಉಳಿದಿಲ್ಲ"  ಎಂದು ಖಡಕ್ಕಾಗಿ ತಿಳಿಸಿದ್ದರು ಎಂ.ವಿ.
೩. " ನಮ್ಮ ದೃಷ್ಟಿಕೋನ  ಅನೇಕ ರೀತಿಯಲ್ಲಿ ಭಿನ್ನವಾಗಿದೆ. ಗ್ರಾಮೀಣ ಜನಸಮೂಹದ ಬಡತನ ನಿವಾರಿಸಲು ಯಂತ್ರಶಕ್ತಿ  ಉಪಯೋಗಕ್ಕೆ ಬಾರದು. ನನಗೆ ಗ್ರಾಮೀಣ ಬದುಕಿನ ಅನುಭವ ಹೆಚ್ಚು. ಈಗಿರುವ ಜನಸಂಖ್ಯೆಯ  ಶಕ್ತಿಯನ್ನು ಹಾಳಾಗುವಂತೆ ಮಾಡಿದರೆ ಆತ್ಮಹತ್ಯೆಯಾದಂತೆಯೇ ಸರಿ."
                - ಎಂ.ಕೆ. ಗಾಂಧಿ.    ೨೩ ನವೆಂಬರ್ ೧೯೩೪
   " ನೀವು ಹೇಳಿದಂತೆ ನಮ್ಮಿಬ್ಬರ ದೃಷ್ಟಿಕೋನ ಭಿನ್ನ. ನೀವು ಗ್ರಾಮ ಕೈಗಾರಿಕೆಗಳ  ಅಭಿವೃದ್ಧಿಗೆ ಮಾತ್ರ ಗಮನ ಕೊಟ್ಟಿದ್ದೀರಿ. ನಾನು ಗ್ರಾಮ ಮತ್ತು ಬೃಹತ್ ಕೈಗಾರಿಕೆಗಳಿಗೆ  ಬೆಂಬಲ ನೀಡುತ್ತೇನೆ. ನಾನು ಜನರ ಶೋಷಣೆಗೆ ದೇಶವನ್ನು ತಯಾರಿಸುತ್ತಿರುವೆನು ಎಂಬ ತಮ್ಮ  ಭಾವನೆ ಉಚಿತವಾದುದಲ್ಲ. ನೂರು ಮೈಲು ಪ್ರಯಾಣವನ್ನು ಅತಿ ಕಡಿಮೆ ಸಮಯದಲ್ಲಿ ಮಾಡಲು  ಬೇಕಾದಾಗ ನೀವು ಖಂಡಿತವಾಗಿಯೂ ಎತ್ತಿನ ಬಂಡಿಯನ್ನು ಆಯ್ಕೆ ಮಾಡುವದಿಲ್ಲ."
               - ಸರ್.ಎಮ್.ವಿ.
                          ಸಂಗ್ರಹ: ವಿಜಯ ಕರ್ನಾಟಕ `ಲವ ಲವಿಕೆ' ಪುರವಣಿ - ೯ ಸಪ್ಟೆಂಬರ್ ೨೦೧೦
 
No comments:
Post a Comment