Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Wednesday, 27 July 2011
ಬಿಸಿರಕ್ತದ ತರುಣ ತರುಣಿಯರಿಗೆ ಡ್ರೈವಿಂಗ್ ಟಿಪ್ಸ್
Driving Tips
ಹರೆಯವೆಂದರೆ ಬಿಸಿರಕ್ತದ ವಯಸ್ಸು. ರಸ್ತೆಯಲ್ಲಂತೂ ಜೀವದ ಹಂಗು ತೊರೆದು ಇವರೆಲ್ಲ ಸವಾರಿ ಮಾಡುವುದನ್ನು ನೋಡಿದಾಗ ಎದೆ ಜುಂ ಎನ್ನುತ್ತದೆ. ಕೆಲವು ಯುವತಿಯರು ಸ್ಕೂಟಿ ಖರೀದಿಸುತ್ತಾರೆ. ಅವರಿಗೆ ಎಕ್ಸಿಲೇಟರ್ ಕೊಡೋಕೆ ಗೊತ್ತು. ಆದರೆ ತುರ್ತು ಸಂದರ್ಭದಲ್ಲಿ ಸ್ಕೂಟಿ ಬ್ಯಾಲೆನ್ಸ್ ಮಾಡಲಾಗದೇ ಅಪಘಾತಕ್ಕೆ ಈಡಾಗುತ್ತಾರೆ. ಯವಕರಂತೂ ಬೈಕ್ ಕಲಿತ ದಿನದಿಂದಲೇ ವೇಗದ ಸವಾರಿ ಸುರು ಮಾಡುತ್ತಾರೆ.
ಹರೆಯದ ಯುವಕ ಯುವತಿಯರ ಕೇರ್ ಲೆಸ್ ವಾಹನ ಸವಾರಿಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಅವರಿಗಿರುವ ಕಡಿಮೆ ವಾಹನ ಚಾಲನಾ ಅನುಭವ ಇದಕ್ಕೆಲ್ಲ ಕಾರಣ. ಇಲ್ಲಿರುವ ಸಲಹೆಗಳು ಪ್ರಮುಖವಾಗಿ ಹರೆಯದ ಯುವಕ/ಯುವತಿಯರಿಗಾಗಿ. ಉಳಿದವರೂ ಅನುಸರಿಸಬಹುದು.
* ಲೋ ಮಗಾ ಬೇಗ ಬಾರೋ ಅಂತ ಒಂದು ಕೈನಲ್ಲಿ ಬೈಕ್ ಹ್ಯಾಂಡಲ್ ಹಿಡಿದು ರೈಡ್ ಮಾಡುತ್ತ ಇನ್ನೊಂದು ಕೈನಲ್ಲಿ ಮೊಬೈಲ್ ನಲ್ಲಿ ಮಾತನಾಡುವುದು ಇಂದು ಸಾಮಾನ್ಯ ದೃಷ್ಯ. ದಯವಿಟ್ಟು ಡ್ರೈವಿಂಗ್ ಮಾಡುವಾಗ ಮೊಬೈಲ್ ಕರೆ ಮಾಡಬೇಡಿ. ಬಂದ ಕರೆಗಳನ್ನು ಸ್ವೀಕರಿಸಬೇಡಿ. ತುರ್ತು ಕರೆ ಬಂದಾಗ ವಾಹನ ಪಕ್ಕಕ್ಕೆ ನಿಲ್ಲಿಸಿ ಗಂಟೆಗಟ್ಟಲೆ ಮಾತನಾಡಿ. ಮಾತನಾಡಿ ಮುಗಿದಮೇಲೆ ಗಾಡಿ ಸ್ಟ್ರಾಟ್ ಮಾಡಿ.
* ಡ್ರೈವಿಂಗ್ ಮಾಡುತ್ತ ಮೊಬೈಲ್ ಸಂದೇಶಗಳನ್ನು ಕಳುಹಿಸಬೇಡಿ. ಇದರಿಂದ ನಿಮ್ಮ ಗಮನ ರಸ್ತೆಯಿಂದ ಬೇರೆ ಕಡೆ ಸರಿಯುತ್ತದೆ. ಅಪಘಾತವಾಗುವ ಸಂಭವ ಹೆಚ್ಚು. ಮ್ಯಾಪ್ ವೀಕ್ಷಣೆ ಕೂಡ ವಾಹನ ನಿಲ್ಲಿಸಿ ಮಾಡಿ.
* ವಾಹನ ಚಲಾಯಿಸುತ್ತಿರುವಾಗ ಪಾನೀಯ ಕುಡಿಯುವುದು ಮತ್ತು ತಿಂಡಿತಿನಿಸು ತಿನ್ನುವುದು ಮಾಡಬೇಡಿ.
* ವೇಗಕ್ಕೆ ಕಡಿವಾಣ ಹಾಕಿ. ವೇಗವಾಗಿ ಹೋಗುತ್ತಿರುವಾಗ ಅನಿರೀಕ್ಷಿತ ಸಂದರ್ಭಗಳಲ್ಲಿ ಬೈಕ್ ಅಥವಾ ಕಾರನ್ನು ನಿಲ್ಲಿಸೋದು ಕಷ್ಟ. ಅರ್ಜೆಂಟಿನಲ್ಲಿ ಯಾಕೆ ಹೋಗುತ್ತೀರಿ. ಮನೆಯಿಂದ ಬೇಗ ಹೊರಟು ಕ್ಲಪ್ತ ಸಮಯಕ್ಕೆ ಗುರಿ ಮುಟ್ಟಿ. ಹರೆಯದ ವಾಹನ ಅಪಘಾತಕ್ಕೆ ವೇಗದ ಪ್ರಯಾಣ ಪ್ರಮುಖ ಕಾರಣ.
* ಸ್ನೇಹಿತರೊಂದಿಗೆ ವಾಹನ ಸವಾರಿ ಮಾಡುತ್ತಿರುವಾಗ ಗಾಸೀಪ್ ಸುದ್ದಿ ಮಾತನಾಡಬೇಡಿ. ಅವಳು ಹಾಗಂತೆ! ಅವನಿಗೆ ಅಫೇರ್ ಇದೆಯಂತೆ ಇತ್ಯಾದಿ ಸುದ್ದಿಗಳಿಂದ ನಿಮ್ಮ ಗಮನ ರಸ್ತೆಯಲ್ಲಿರುವುದು ಕಷ್ಟ.
* ಕೋಪ ಬಂದಿದ್ದಾಗ ಅಥವಾ ಅಪ್ ಸೆಟ್ ಆಗಿರೋ ಸಂದರ್ಭದಲ್ಲಿ ವಾಹನ ಚಲಾಯಿಸದಿರಿ. ಭಾವನಾತ್ಮಕ ಸಮಸ್ಯೆಗಳು ಸುರಕ್ಷಿತ ವಾಹನ ಚಾಲನೆಗೆ ಪ್ರಮುಖ ಶತ್ರು. ಕೂಲಾಗಿ ಡ್ರೈವ್ ಮಾಡಿ.
* ಸುಮ್ಮನೆ ಕೂದಲು ಹಾರಿಸುತ್ತ, ಕೂಲಿಂಗ್ ಗ್ಲಾಸ್ ಸರಿಪಡಿಸುತ್ತ, ಮೇಕಪ್ ಮಾಡುತ್ತ ವಾಹನ ಚಾಲನೆ ಮಾಡಬೇಡಿ. ಸುಮ್ಮನೆ ಸ್ಟೈಲ್ ಮಾಡೋಕೆ ಹೋಗಿ ಸೌಂದರ್ಯ ಅಥವಾ ಜೀವ ಕಳೆದುಕೊಳ್ಳಬೇಡಿ.
* ಕುಡಿಯಬೇಡಿ. ಕುಡಿದು ವಾಹನ ಚಲಾಯಿಸಬೇಡಿ.
* ಹೊರಜಗತ್ತಿನ ಕುರಿತು ಗಮನವಿರಲಿ. ಅಂಬ್ಯುಲೆನ್ಸ್ ಹಾರ್ನ್ ಹಾಕುತ್ತಿದ್ದರೆ ದಾರಿಬಿಡಿ. ಪಾದಚಾರಿಗಳು ಅಡ್ಡಬರುತ್ತಿದ್ದಾರೆಯೇ ಗಮನಿಸಿ
* ವಾಹನ ಚಾಲನೆ ಮಾಡುವ ಮುನ್ನವೇ ಮ್ಯೂಸಿಕ್ ಸಿಸ್ಟಮ್ ಸೆಟ್ ಮಾಡಿ. ಮೆಲ್ಲಗೆ ಕೇಳುತ್ತಿರಲಿ. ಜೋರಾಗಿ ವಾಲ್ಯೂಮ್ ಇಟ್ಟು ಹೆಡ್ ಫೋನ್, ಇಯರ್ ಫೋನ್ ಬಳಸುವುದು ಮಾಡದಿರಿ. ಜೋರಾಗಿ ಮ್ಯೂಸಿಕ್ ಹಾಕಿ ವಾಹನ ಚಾಲನೆ ಮಾಡುವುದು ಕೂಡ ಹರೆಯದ ಯುವಕ ಯುವತಿಯರು ವಾಹನ ಅಪಘಾತ ಮಾಡುವುದಕ್ಕೆ ಪ್ರಮುಖ ಕಾರಣ.
* ವಾಹನದಲ್ಲಿ ಮಕ್ಕಳಿದ್ದರೆ ಅವರಿಗೆ ಸೀಟು ಬೆಲ್ಟ್ ಹಾಕಿರಿ. ಇಲ್ಲದಿದ್ದರೆ ನಿಮ್ಮ ಗಮನ ಹೆಚ್ಚು ಅವರ ಮೇಲೆಯೇ ಇರುತ್ತದೆ.
* ಸಿಗರೇಟು ಸೇದುವುದು ಕೆಟ್ಟದು. ವಾಹನ ಚಲಾಯಿಸುವಾಗ ಸೇದುವುದಂತು ಅಪಾಯಕಾರಿ. ಸಿಗರೇಟ್ ಉರಿಸುವಾಗ ನಿಮ್ಮ ಗಮನ ಎಲ್ಲೆಲ್ಲೂ ಹೋಗುತ್ತದೆ. ಅದರ ಬೂದಿಯನ್ನು ಆಶ್ ಟ್ರೇಗೆ ಹಾಕುವಾಗ ನಿಮ್ಮ ಗಮನ ರಸ್ತೆಯ ಮೇಲಿರೋದಿಲ್ಲ.
* ವಾಹನ ಚಲಾಯಿಸುತ್ತಿರುವಾಗ ಹಿಂದಿನ ಸೀಟಿನತ್ತ ಆಗಾಗ ತಿರುಗುವುದು, ಅಲ್ಲಿಟ್ಟ ಬ್ಯಾಗಿಗೆ ಕೈ ಹಾಕುವುದು ಮಾಡಬೇಡಿ.
* ಡ್ರೈವಿಂಗ್ ಮಾಡುತ್ತಿರುವಾಗ ರಸ್ತೆಯ ಬದಿಯಲ್ಲಿರುವ ಸೀನರಿಗಳು, ಜಾಹೀರಾತು ಬೋರ್ಡ್ ಗಳನ್ನು ನೋಡುತ್ತ ಮೈಮರೆಯಬೇಡಿ.
ಪ್ರಾಣ ಯಾವತ್ತೂ ಅಮೂಲ್ಯ. ಅದು ನಿಮ್ಮದಾಗಿರಬಹುದು. ರಸ್ತೆಯಲ್ಲಿರುವ ಪಾದಚಾರಿಗಳದಾಗಿರಬಹುದು. ಅಥವಾ ಇತರ ವಾಹನ ಚಾಲಕರಾದಗಿರಬಹುದು. ನಿಮ್ಮ ಚಿತ್ತ ಚಾಂಚಲ್ಯದಿಂದ ಅಮೂಲ್ಯ ಜೀವಹಾನಿ, ನಿಮ್ಮ ಪ್ರೀತಿಯ ಅಪ್ಪ ಅಮ್ಮ, ಅಣ್ಣ, ತಂಗಿ, ಅಕ್ಕ, ತಮ್ಮ ಸ್ನೇಹಿತರಿಗೆ ನೀವಿಲ್ಲದೇ ತುಂಬಾ ದುಃಖವಾಗುತ್ತದೆ. ಹೀಗಾಗಿ ನಿಮ್ಮ ಸಂಪೂರ್ಣ ಗಮನ ವಾಹನ ಚಾಲನೆ ಮೇಲಿರಲಿ. ಅಪಘಾತ, ಅನಾಹುತ ತಪ್ಪಿಸಲು ಈ ಅಮೂಲ್ಯ ಸಲಹೆ ಪಾಲಿಸಿರಿ. ಹ್ಯಾಪಿ ಡ್ರೈವಿಂಗ್...
ಕೃಪೆ : ದ್ಯಾಟ್ಸ್ ಕನ್ನಡ
Subscribe to:
Post Comments (Atom)
No comments:
Post a Comment