Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday, 30 July 2011

ಲಾಲ್ ಬಹದ್ದೂರ ಶಾಸ್ತ್ರಿ

Lal Bahaddur Shastri

ಉತ್ತರ ಪ್ರದೇಶದ ಬನಾರಸ್‍ನಿಂದ ಕೇವಲ ೧೧ ಕಿ.ಮೀ. ದೂರದಲ್ಲಿರುವ ಮೊಗಲ್ ಸರಾಯಿ ಎಂಬ ಹಳ್ಳಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ೧೯೦೪ನೇ ಅಕ್ಟೋಬರ್ ೨ರಂದು ಜನಿಸಿದರು.

ಶಾಸ್ತ್ರಿ ಎಂಬುದು ಇವರಹೆಸರಲ್ಲ. ದೊಡ್ದವರಾದ ನಂತರ `ಶಾಸ್ತ್ರಿ' ಎಂಬ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಇವರ ಹೆಸರಿನಲ್ಲಿ ಶಾಸ್ತ್ರಿ ಎಂಬ ಹೆಸರು ಸೇರಿತು.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ತಮ್ಮ ತಾಯಿಯ ಜೊತೆ ತಾಯಿಯ ಅಣ್ಣನ ಮನೆಯಲ್ಲಿ ಬೆಳೆದರು. ಶಾಸ್ತ್ರಿಯವರ ತಂದೆ ಶಾರದಾ ಪ್ರಸಾದ್ ಶಾಲೆಯ ಅಧ್ಯಾಪಕರಾಗಿದ್ದರು. ತಾಯಿ ರಾಮ್ ದುಲಾರಿ. ನಂತರ ೬ನೇ ತರಗತಿಯಲ್ಲಿದ್ದಾಗ ಶಾಸ್ತ್ರಿಯವರು ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಚಿಕ್ಕಪ್ಪ ರಘುನಾಥ ಪ್ರಸಾದ್ ಇವರ ಚಾರಿತ್ರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಾಯಿಯಿಂದ ರಾಮಾಯಣ ಮಹಾಕಾವ್ಯಗಳ ಅಧ್ಯಯನ ಶಾಸ್ತ್ರಿಯವರಿಗೆ ತಾಯಿಯೇ ದೇವರಾಗಿದ್ದರು.
ಬಾಲಕ ಲಾಲ ಬಹದ್ದೂರ್ ಅವರು ತುಂಬಾ ಆತ್ಮಗೌರವಶಾಲಿ. ಒಮ್ಮೆ ಜಾತ್ರೆ ನೋಡಲು ಪಕ್ಕದೂರಿಗೆ ಗೆಳೆಯರೊಂದಿಗೆ ಹೋದರು. ನಡುವೆ ಕಾಲುವೆ ದಾಟಬೇಕಾಗಿತ್ತು. ಜೇಬಲ್ಲಿ ಒಂದು ಕಾಸು ಇತ್ತು. ಕೊಟ್ಟು ದೋಣಿಯ ಮೂಲಕ ಗೆಳೆಯರೊಂದಿಗೆ ದಾಟಿದರು. ಮರಳಿ ಬರುವಾಗ ಜಾತ್ರೆಯಲ್ಲಿ ಏನೂ ಕೊಳ್ಳದೇ ಇದ್ದರೂ ಜೇಬಲ್ಲಿ ಕಾಸಿರಲಿಲ್ಲ. ಸ್ನೇಹಿತರು ಕರೆದರು. ಆದರೆ ಲಾಲ್ ಬಹದ್ದೂರ್‌ರು ಜಾತ್ರೆ ಇನ್ನೂ ನೋಡುವದಿದೆ ಎಂದು ಸುಳ್ಳು ಹೇಳಿದರು. ಕಾಲುವೆ ದಾಟಲು ಸ್ನೇಹಿತರ ಬಳಿ ದುಡ್ಡು ಕೇಳಿದರೆ ಕೊಡುತ್ತಿದ್ದರು. ಆದರೆ ಕೇಳಲು ಶಾಸ್ತ್ರಿಯವರಿಗೆ ಅಭಿಮಾನ ಅಡ್ಡ ಬಂದಿತ್ತು. ಸಂಜೆಯಾದ ನಂತರ ಕಾಲುವೆ ಈಜಿ ದಡ ಸೇರಿದರು. ಬಾಲ್ಯದಿಂದಲೇ ಸ್ವಾಭಿಮಾನದ ರಕ್ಷಣೆಗಾಗಿ ಅವರಲ್ಲಿದ್ದ ಧೈರ್ಯ-ಸ್ಥೈರ್ಯ ಅದ್ಭುತವಾಗಿತ್ತು.

ಹೈಸ್ಕೂಲ್‍ನಲ್ಲಿದ್ದಾಗಲೇ ಇವರಿಗೆ ಓದುವ ಹುಚ್ಚು ಹೆಚ್ಚಾಯಿತು. ಕವಿತೆ, ಮಹಾತ್ಮರ ಜೀವನ ಚರಿತ್ರೆಗಳನ್ನು ಓದಿದರು. ಅವರೆಲ್ಲರ ಸದ್ಗುಣ, ಸದ್ವಿಚಾರಗಳ ಪ್ರಭಾವ ಇವರ ಮೇಲೆ ಬೀರಿತು.

ಲಾಲ್ ಬಹದ್ದೂರ್ ಶಾಸ್ತ್ರಿಯವರ ಪತ್ನಿ: ಲಲಿತಾ ಶಾಸ್ತ್ರಿ

ಬಾಲ್ಯದಿಂದಲೆ ಕಷ್ಟ ಸಹಿಷ್ಣುತೆಯನ್ನು ಬೆಳೆಸಿಕೊಂಡ ಇವರು ನೆಹರೂ ಮಂತ್ರಿಮಂಡಲದಲ್ಲಿ ಕೇಂದ್ರ ಸರ್ಕಾರದ ರೈಲು ಮಂತ್ರಿ ಆಗಿದ್ದರು. ಸಾಮಾನ್ಯ ಪ್ರಯಾಣಿಕರ ಅನುಕೂಲದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದರು. ದುರದೃಷ್ಟವೆಂಬಂತೆ ಒಮ್ಮೆ ಇವರ ಕಾಲದಲ್ಲಿಯೇ `ಅರೆಯಲೂರು ರೈಲು ದುರಂತ' ಸಂಭವಿಸಿತು. ಇವರದೇನು ತಪ್ಪಿಲ್ಲ ಎಂದು ಸರ್ಕಾರ ಹಾಗೂ ಸಾರ್ವಜನಿಕರು ಘೋಷಿಸಿದರೂ ಸಹ ಮನಃಶಾಂತಿ ಇಲ್ಲದೆ ನೂರಾರು ಜನರ ಸಾವು-ನೋವುಗಳು ಸಂಭವಿಸಿದರ ಬಗ್ಗೆ ಜಿಗುಪ್ಸೆಗೊಂಡು ತಮ್ಮ ಮಂತ್ರಿಪದವಿಗೆ ರಾಜೀನಾಮೆ ನೀಡಿದರು.

ಪಂಡಿತ್ ನೆಹರು ಅವರೇ ಸ್ವತಃ ಇವರ ಕರ್ತವ್ಯ ನಿಷ್ಠೆಯ ಬಗ್ಗೆ ಒಮ್ಮೆ ಹೀಗೆ ಹೇಳಿದ್ದರು : -
" ಶಾಸ್ತ್ರೀಜಿ ತತ್ವಸಾಧನೆಗಾಗಿ ತಮ್ಮ ಕರ್ತವ್ಯ ಪಥದಲ್ಲಿ ತ್ಯಾಗಜೀವಿಗಳೂ, ಕಷ್ಟಸಹಿಷ್ಣುಗಳು, ಧೀರೋದಾತ್ತ ಗುಣದವರು. ಇವರ ಕರ್ತವ್ಯದಲ್ಲಿ ಶ್ರದ್ಧೆ ಮತ್ತು ನಿಷ್ಠೆಗೆ ಪ್ರಥಮ ಸ್ಥಾನ. ಇವರ ಬಗ್ಗೆ ನನಗೆ ಅಪಾರ ಗೌರವವಿದೆ. ನಂಬಿಕೆ ಇದೆ. ಕೇವಲ ನಂಬಿಕೆ ಅಲ್ಲ, ಆತ್ಮನಂಬಿಕೆ. ಇವರ ಸೇವೆ, ಸಹಕಾರ ನನಗೆ ಕೊನೆಯವರೆಗೂ ಅಗತ್ಯ."

"ಜೈ ಜವಾನ್ ಜೈ ಕಿಸಾನ್" ಎಂಬ ಘೋಷಣೆ ಹೊರಡಿಸಿದ ಶಾಸ್ತ್ರೀಜಿಯವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಕೆಲವೊಮ್ಮೆ ದಿನವೂ ಹದಿನೆಂಟು ಗಂಟೆಗಳ ಕಾಲ ಕರ್ತವ್ಯವನ್ನು ನಿದ್ದೆಗೆಟ್ಟು ನಿರ್ವಹಿಸುತ್ತಿದ್ದರು.

ಇಂಥ ಸರಳ, ವಿನಯ, ಕುಶಾಗ್ರಮತಿಯಾಗಿದ್ದ ಲಾಲ್ ಬಹದ್ದೂರ ಶಾಸ್ತ್ರಿಯವರು ನಮ್ಮ ದೇಶದ ಪ್ರಧಾನಿಯಾಗಿದ್ದರು ಎನ್ನುವದೇ ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಇವರ ಕುರಿತಾಗಿ ಇನ್ನು ಹಲವಾರು ಸಂಗತಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲು ಪ್ರಯತ್ನಿಸುತ್ತೇನೆ.

No comments: