
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಛಲವಿದ್ದರೆ, ಕಣ್ಮುಂದೆ ಒಂದು ಗುರಿಯಿದ್ದರೆ, ಕಠಿಣ ಪರಿಶ್ರಮವೂ ಜತೆಗಿದ್ದರೆ ಆಕಾಶದಷ್ಟೇ ಎತ್ತರವಿರುವ ಗೌರಿಶಂಕರವನ್ನೂ ಹತ್ತಬಹುದು, ಚಂದ್ರಲೋಕಕ್ಕೂ ಹೋಗಿಬರಬಹುದು. ಕೊನೆಯೇ ಇಲ್ಲ ಎಂಬಂಥ ಸಾಗರವನ್ನೂ ಈಜಬಹುದು. ಚೀನಾ ಗೋಡೆಯ ಇನ್ನೊಂದು ತುದಿಯನ್ನು ನಡೆದೇ ಕ್ರಮಿಸಬಹುದು. ಹಲವು ಮಂದಿ ಧೀರರು ಅಂಥ ಸಾಹಸಗಳನ್ನು ಆಗಿಂದಾಗ್ಗೆ ಮಾಡಿ ತೋರಿಸುತ್ತಲೇ ಇದ್ದಾರೆ. ಆ ಮೂಲಕ, ಅಸಾಧ್ಯ ಎಂಬ ಪದಕ್ಕೆ ಅರ್ಥವೇ ಇಲ್ಲ ಎಂದು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಈ ಸಾಧನೆಗಳನ್ನು ಮೆಚ್ಚುವ ಮಂದಿ ಅದೇ ಸಂದರ್ಭದಲ್ಲಿ 'ಅಯ್ಯೋ ಬಿಡ್ರೀ. ಹಾಗೆ ಸಾಧನೆ ಮಾಡಿರುವವರೆಲ್ಲ ಲಕ್ಷಾಧಿಪತಿಗಳ ಮಕ್ಳು. ಅವರಿಗೇನು ಕಮ್ಮಿ? ಅಪ್ಪನ ದುಡ್ಡು ರಾಶಿ ರಾಶಿ ಇದೆ. ಹಾಗಾಗಿ ಒಂದೊಂದೇ ಸಾಹಸ ಮಾಡ್ತಾ ಹೋಗ್ತಾರೆ' ಎಂದು ಕೊಂಕು ನುಡಿಯುತ್ತಾರೆ.
ಯಶಸ್ಸು ಎಂಬುದು ಯಾವತ್ತೂ ಶ್ರೀಮಂತಿಕೆಯನ್ನೋ, ಪ್ರಭಾವವನ್ನೋ, ಅಂದವನ್ನೋ, ಮನೆತನವನ್ನೋ ನೋಡಿಕೊಂಡು ಬರುವುದಿಲ್ಲ. ಒಂದು ಕನಸನ್ನು ಎದುರಿಗಿಟ್ಟುಕೊಂಡೇ ಅದನ್ನು ಫೇಸ್ ಮಾಡಲು ಪ್ರಯತ್ನಿಸುತ್ತಾನಲ್ಲ? ಅವನನ್ನು ಯಶಸ್ಸೆಂಬುದು ಬಾಚಿ ತಬ್ಬಿಕೊಳ್ಳುತ್ತದೆ. ಈ ಮಾತಿಗೆ ಒಂದು ಪಸಂದ್ ಉದಾಹರಣೆಯಾಗಿ ನಮ್ಮ ಕಣ್ಮುಂದೆ ಇರುವವನ ಹೆಸರೇ ಗೋವಿಂದ ಜೈಸ್ವಾಲ್. ಈತ ಬೇರೆ ಯಾರೂ ಅಲ್ಲ. 2006ರ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ 48ನೇ ರ್‍ಯಾಂಕು ತೆಗೆದುಕೊಂಡ ಪ್ರತಿಭಾವಂತ. ಅದರಲ್ಲೇನು ವಿಶೇಷ ಅಂದರೆ ಈ ಗೋವಿಂದ ಜೈಸ್ವಾಲ್, ಕಡುಕಡು ಕಡು ಕಡು ಬಡತನದ ಮಧ್ಯೆಯೇ ಬೆಳೆದವನು. ಕೊಳಗೇರಿಯ ಕತ್ತಲಿನಿಂದ ಬಂದವನು. ಇನ್ನೂ ವಿವರಿಸಿ ಹೇಳಬೇಕೆಂದರೆ ಆತ ಒಂದು ಲಡಕಾಸಿ ಸೈಕಲ್ ರಿಕ್ಷಾ ಓಡಿಸುವ ನಾರಾಯಣ ಜೈಸ್ವಾಲ್ ಎಂಬಾತನ ಮಗ. ಅವರಿದ್ದುದು ಕೊಳೆಗೇರಿ ತಾನೆ? ಹಾಗಾಗಿ ಅವರ ಮನೆಗೆ ವಿದ್ಯುತ್ ಸೌಲಭ್ಯವೂ ಇರಲಿಲ್ಲ. ಈ ಗೋವಿಂದ ಜೈಸ್ವಾಲ್‌ನನ್ನು ಬಿಟ್ಟರೆ ಮನೆಯಲ್ಲಿ ಬೇರೆ ಯಾರಿಗೂ ಅಕ್ಷರದ ಗಂಧವೂ ಇರಲಿಲ್ಲ. ಎಲ್ಲ ಸಂಕಟಗಳ ಮಧ್ಯೆಯೇ ಈ ಗೋವಿಂದ ಜೈಸ್ವಾಲ್ ಐಎಎಸ್ ಪಾಸು ಮಾಡಿದ ಸಾಹಸವಿದೆಯಲ್ಲ, ಹೇಳಿದರೆ ಅದೇ ಒಂದು ಚೆಂದದ ಕಥೆ.
***
ನಾರಾಯಣ ಜೈಸ್ವಾಲ್ ಕಾಶಿಯ ಕೊಳೆಗೇರಿಯಲ್ಲಿದ್ದ. ಕಾಶಿಯ ಬೀದಿಗಳಲ್ಲಿ ಬೆಳಗಿಂದ ಸಂಜೆಯತನಕ ಸೈಕಲ್ ರಿಕ್ಷಾ ತುಳಿಯುತ್ತಿದ್ದ. ಒಂದು ಸಂತೋಷವೆಂದರೆ- ಅಂಥ ಕಡುಬಡತನದ ಮಧ್ಯೆಯೂ ಆತ ಯಾವುದೇ ದುರಭ್ಯಾಸ ಅಂಟಿಸಿಕೊಳ್ಳಲಿಲ್ಲ. ಒಂದೊಂದು ಪೈಸೆಯನ್ನೂ ಕೂಡಿಸಿಟ್ಟ. ಆ ಹಣದಿಂದ ಒಂದಿಷ್ಟು ಜಮೀನು ಖರೀದಿಸಿದ. ಈ ಮಧ್ಯೆಯೇ ಅವರಿಗೆ ನಾಲ್ವರು ಮಕ್ಕಳಾದರು. ಮೂರು ಹೆಣ್ಣು, ಒಂದು ಗಂಡು. ತನ್ನ ರಿಕ್ಷಾದಲ್ಲಿ ದಿನವೂ ಅದೆಷ್ಟೋ ಮಂದಿ ಆಫೀಸರ್‌ಗಳನ್ನು ಕೂರಿಸಿಕೊಂಡು ಪೆಡಲ್ ತುಳಿಯುತ್ತಿದ್ದ ನಾರಾಯಣ ಜೈಸ್ವಾಲ್ ಇವತ್ತಲ್ಲ ನಾಳೆ ನನ್ನ ಮಕ್ಕಳೂ ಹೀಗೇ ಆಫೀಸರ್‌ಗಳಾಗಿ ಮೆರೆಯಲಿ ಅಂದುಕೊಳ್ಳುತ್ತಿದ್ದ. ದಣಿದು ಸುಸ್ತಾಗಿ ಮನೆಗೆ ಬಂದ ಮೇಲೆ ಮಕ್ಕಳನ್ನು ಹತ್ತಿರ ಕರೆದು ನೀವೆಲ್ಲ ಚೆನ್ನಾಗಿ ಓದಿ ಆಫೀಸರ್‌ಗಳಾಗಬೇಕು. ಓದದೇ ಹೋದರೆ ಉಪವಾಸವೇ ಗತಿಯಾಗುತ್ತೆ ಎಂದು ಬುದ್ಧಿ ಹೇಳುತ್ತಿದ್ದ.
ಅದೇಕೋ ಏನೋ, ನಾರಾಯಣ ಜೈಸ್ವಾಲ್‌ನ ಹೆಣ್ಣು ಮಕ್ಕಳಿಗೆ ವಿದ್ಯೆ ಒಲಿಯಲಿಲ್ಲ. ಆದರೆ ಕಿರಿಯವನಿದ್ದನಲ್ಲ ಗೋವಿಂದ? ಅವನು ತುಂಬಾ ಚೆನ್ನಾಗಿ ಓದುತ್ತಿದ್ದ. ಅವನು ಏಳನೇ ತರಗತಿಯಲ್ಲಿ ಪಾಸಾದ ತಿಂಗಳಲ್ಲೇ ಆತನ ತಾಯಿ ತೀರಿಹೋದಳು. ಇದು ನಾರಾಯಣ ಜೈಸ್ವಾಲ್‌ನ ಕುಟುಂಬಕ್ಕೆ ಬಿದ್ದ ದೊಡ್ಡ ಪೆಟ್ಟು. ಮೊದಲಿಂದಲೂ ಸಂಕಟದ ಮಧ್ಯೆಯೇ ಬೆಳೆದಿದ್ದ ನಾರಾಯಣ ಜೈಸ್ವಾಲ್, ಹೆಂಡತಿಯ ಅಗಲಿಕೆಯನ್ನು ತುಟಿಕಚ್ಚಿ ಸಹಿಸಿಕೊಂಡ. ಅದೊಂದು ದಿನ ಮಗನನ್ನು ಎದುರು ಕೂರಿಸಿಕೊಂಡು 'ನಿನ್ನ ಅಕ್ಕಂದಿರ ಮದುವೆಯ ಜವಾಬ್ದಾರಿ ನನ್ನ ಮೇಲಿದೆ ಮಗನೇ. ಆ ಹೊಣೇನ ಹೇಗಾದ್ರೂ ನಿಭಾಯಿಸ್ತೀನಿ. ನೀನು ಶ್ರದ್ಧೆಯಿಂದ ಓದು. ಸಂಕಟದ ಬದುಕು ನನಗೆ ಮಾತ್ರ ಇರಲಿ' ಅಂದು ಕಣ್ತುಂಬಿಕೊಂಡ.

ಈ ವೇಳೆಗಾಗಲೇ ಸೀಮೆಎಣ್ಣೆ ದೀಪದ ಬೆಳಕಿನಲ್ಲಿಯೇ ಓದಿದ ಗೋವಿಂದ ಜೈಸ್ವಾಲ್ ಪಿಯುಸಿ ಮುಗಿಸಿದ್ದ. ಪದವಿ ತರಗತಿಯಲ್ಲಿ ಹೆಚ್ಚು ಅಂಕ ಪಡೆಯಬೇಕು ಅಂದುಕೊಂಡರೆ ಓದಲು ಮನೆಯಲ್ಲಿ ಲೈಟೇ ಇರಲಿಲ್ಲ. ಜತೆಗೆ ಮನೆಯ ಅಕ್ಕಪಕ್ಕ ದಿನದ ಇಪ್ಪತ್ನಾಲ್ಕು ಗಂಟೆಯೂ ಹತ್ತಿಗಿರಣಿ ಹಾಗೂ ಪ್ರಿಂಟಿಂಗ್ ಮೆಷಿನ್‌ಗಳು ಗಿರ್ರಗಿರ್ರಗಿರ್ರನೆ ತಿರುಗುತ್ತ ಸದ್ದು ಮಾಡುತ್ತಲೇ ಇದ್ದವು. ಈ ಸದ್ದಿನ ಮಧ್ಯೆಯೇ ಮನೆಯ ಮುಂದಿದ್ದ ಬೀದಿ ದೀಪಗಳ ಕೆಳಗೆ ಕೂತು ಗೋವಿಂದ ಜೈಸ್ವಾಲ್ ಓದಬೇಕಿತ್ತು. ಪ್ರಿಂಟಿಂಗ್ ಮೆಷಿನ್ನಿನ ಸದ್ದು ಕೇಳಿದರೆ ಓದು ತಲೆಗೆ ಹೋಗೋದಿಲ್ಲ ಅನ್ನಿಸಿದಾಗ ಎರಡೂ ಕಿವಿಗೆ ಹತ್ತಿ ತುಂಬಿಕೊಂಡು, ನಂತರ ಅದೇ ಬೀದಿ ದೀಪದ ಕೆಳಗೆ ಕೂತು ಓದಿದ ಗೋವಿಂದ. ಪ್ರತಿಫಲವಾಗಿ ಸೆಕೆಂಡ್ ಕ್ಲಾಸ್‌ನಲ್ಲಿ ಡಿಗ್ರಿ ಪಾಸು ಮಾಡಿದ.
ಈ ಸಂದರ್ಭದಲ್ಲಿಯೇ ಪರಿಚಿತರೆಲ್ಲ ಓದಿದ್ದು ಸಾಕು. ಯಾವುದಾದ್ರೂ ಕೆಲ್ಸ ಹಿಡಿ ಅಂದರು. ಬೇರೆ ಯಾವುದೂ ಸಿಗದೇ ಹೋದ್ರೆ ಅಟೆಂಡರ್ ಕೆಲಸಕ್ಕಾದ್ರೂ ಪ್ರಯತ್ನಿಸು ಅಂದರು. ಅಪ್ಪನಿಗೆ ನೆರವಾಗಬೇಕು, ಮನೆಗೆ ಆಧಾರವಾಗಬೇಕು ಎಂಬ ಆಸೆಯಿತ್ತಲ್ಲ? ಅದೇ ಕಾರಣದಿಂದ ಗೋವಿಂದ ಜೈಸ್ವಾಲ್ ಕ್ಲರ್ಕ್, ಅಟೆಂಡರ್, ಕ್ಯಾಷಿಯರ್, ಮ್ಯಾನೇಜರ್... ಹೀಗೆ ಹತ್ತು ಹಲವು ಕೆಲಸಕ್ಕೆ ಅರ್ಜಿ ಹಾಕಿದ. ಹಲವು ಸ್ಪರ್ಧಾತ್ಮಕ ಪರೀಕ್ಷೆ ಬರೆದ. ಸಂದರ್ಶನಗಳಿಗೆ ಹೋಗಿ ಬಂದ. ಆದರೆ ಎಲ್ಲ ಸಂದರ್ಶನದಲ್ಲೂ ನಿಮಗೆ ಕೆಲ್ಸ ಕೊಡ್ತೀವಿ. ನೀವು ಎಷ್ಟು ಲಂಚ ಕೊಡ್ತೀರಿ ಹೇಳಿ ಎಂದೇ ಕೇಳುತ್ತಿದ್ದರು.
ಮಧ್ಯಮ ವರ್ಗದವರು ಅನ್ನಿಸಿಕೊಳ್ಳಲು ಅಗತ್ಯವಿರುವ ಎಲ್ಲ ಸರಕಾರಿ ನೌಕರಿಗಳೂ 'ಫಿಕ್ಸ್' ಆಗಿಬಿಟ್ಟಿರುತ್ತವೆ ಎಂದು ಗೋವಿಂದ ಜೈಸ್ವಾಲ್‌ಗೆ ತುಂಬ ಬೇಗನೆ ಅರ್ಥವಾಗಿ ಹೋಯಿತು. ಅಂದರೆ, ಲಂಚ ಕೊಡದೆ ಕೆಲಸಕ್ಕೆ ಸೇರಲು ಸಾಧ್ಯವೇ ಇಲ್ಲವೆ ಎಂದು ಆತ ಯೋಚಿಸಿದ. ಆ ಪ್ರಶ್ನೆಯನ್ನೇ ಹತ್ತಾರು ಮಂದಿಗೂ ಕೇಳಿದ. ಲಂಚವನ್ನೇ ಪಡೆಯದೆ, ಕೇವಲ ಪ್ರತಿಭೆಯನ್ನು, ಮೆರಿಟ್ಟನ್ನು ಆಧರಿಸಿ ಕೊಡುವ ನೌಕರಿಯೆಂದರೆ ಜಿಲ್ಲಾಧಿಕಾರಿ ಹುದ್ದೆ. ಅದಕ್ಕೆ ಐಎಎಸ್ ಮಾಡಬೇಕು ಎಂದು ಹತ್ತಾರು ಮಂದಿ ಹೇಳಿದರು. ಅಪ್ಪನ ಬಳಿ ಎಲ್ಲವನ್ನೂ ವಿವರಿಸಿದ ಗೋವಿಂದ, ಸುಮ್ಮನಿದ್ದ. ನಂತರದ ಎರಡೇ ದಿನದಲ್ಲಿ ತನಗಿದ್ದ ಅಷ್ಟೂ ಜಮೀನನ್ನು ಮಗನ ಕೈಗಿಟ್ಟ ನಾರಾಯಣ ಜೈಸ್ವಾಲ್, 'ಕಾಶಿಯಲ್ಲಿ ಚೆನ್ನಾಗಿ ಓದೋಕ್ಕಾಗಲ್ಲ. ಈಗಲೇ ದಿಲ್ಲಿಗೆ ಹೊರಡು. ಎಲ್ಲವನ್ನೂ ಮರೆತು ಓದು. ನನ್ನ ರಟ್ಟೆಯಲ್ಲಿನ್ನೂ ಶಕ್ತಿ ಇದೆ. ದುಡೀತೀನಿ. ತಿಂಗಳು ತಿಂಗಳೂ ನಿಂಗೆ ದುಡ್ಡು ಕಳಿಸ್ತೀನಿ' ಅಂದ.
ಐಎಎಸ್ ಮಾಡಲು ದಿಲ್ಲಿಗೆ ಹೊರಟವನನ್ನು ಕಂಡು ಗೇಲಿ ಮಾಡಿದವರಿಗೆ ಲೆಕ್ಕವಿಲ್ಲ. ಆದರೆ ಅದೇನನ್ನೂ ಗಮನಿಸುವ ಸ್ಥಿತಿಯಲ್ಲಿ ಗೋವಿಂದ ಜೈಸ್ವಾಲ್ ಇರಲಿಲ್ಲ. ಆತ ಹಗಲಿರುಳೆನ್ನದೆ ಒಂದೇ ಸಮನೆ ಓದಿದ. ದಿಲ್ಲಿಯಂಥ ಊರಿನಲ್ಲಿ ಖರ್ಚಿಗೆ ಹಣ ಸಾಲುತ್ತಿಲ್ಲ ಅನ್ನಿಸಿದಾಗ ಟ್ಯೂಷನ್ ಶುರು ಮಾಡಿದ. ಆಗಲೂ ದುಡ್ಡು ಸಾಕಾಗದೇ ಹೋದಾಗ ಬೆಳಗಿನ ತಿಂಡಿಗೆ ಗುಡ್‌ಬೈ ಹೇಳಿದ. ದೇವರ ಮೇಲೆ ಅವನಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ಹರಕೆ, ಪೂಜೆ, ವ್ರತದ ಮೊರೆ ಹೋಗಲಿಲ್ಲ. ಬದಲಿಗೆ, ಏನೇ ಕಷ್ಟ ಬಂದರೂ ನಾನೇ ಒಂದು ಕೈ ನೋಡ್ಕೋತೇನೆ ಎಂದು ನಿರ್ಧರಿಸಿಬಿಟ್ಟ.
ಇಷ್ಟೆಲ್ಲ ಆದ ನಂತರವೂ ಗೋವಿಂದ ಜೈಸ್ವಾಲ್‌ಗೆ ಒಂದು ಕೊರಗಿತ್ತು. ಏನೆಂದರೆ ಅವನಿಗೆ ಬರುತ್ತಿದ್ದುದು ಬಟ್ಲರ್ ಇಂಗ್ಲಿಷ್! ಮಾತೃಭಾಷೆಯ ಬದಲು ಇಂಗ್ಲಿಷಿನಲ್ಲಿ ಪರೀಕ್ಷೆ ಬರೆದರೆ ಒಂದು ಸ್ಕೋಪ್ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಬಾರದ ಇಂಗ್ಲಿಷಿಗಿಂತ ಮಾತೃಭಾಷೆ ಹಿಂದಿಯಲ್ಲಿ ಪರೀಕ್ಷೆ ಬರೆಯುವುದೇ ಸರಿ ಅನ್ನಿಸಿತು. ಹಾಗೇ ಮಾಡಿದ. ಪರೀಕ್ಷೆ ಮುಗಿದ ಮೇಲೆ ಕಾಶಿಗೆ, ಅದೇ ಕೊಳೆಗೇರಿಯ ಮನೆಗೆ ಬಂದುಬಿಟ್ಟ.
ಕಡೆಗೊಂದು ದಿನ ಬಂದೇ ಬಂತು. ಅದು ಗೋವಿಂದ ಜೈಸ್ವಾಲ್‌ನ ಬದುಕಿನ ಅಮೃತಘಳಿಗೆ. ಐಎಎಸ್ ಪರೀಕ್ಷೆಯಲ್ಲಿ ಆತ 48ನೇ ರ್‍ಯಾಂಕ್ ಬಂದಿದ್ದಾನೆ ಎಂಬ ಸುದ್ದಿ ಪ್ರಕಟವಾಯಿತು. ಫಲಿತಾಂಶದ ಒಂದು ರಿಜಿಸ್ಟರ್ಡ್ ಪೋಸ್ಟ್ ಪತ್ರ ಗೋವಿಂದ ಜೈಸ್ವಾಲ್‌ನ ಕೊಳೆಗೇರಿ ಮನೆಯ ವಿಳಾಸಕ್ಕೆ ಬಂದರೆ ಈ ವಿಳಾಸ ಹುಡುಕಿ ಹುಡುಕಿ ಸುಸ್ತಾದ ಅಂಚೆಯವನು 'ವಿಳಾಸದಾರರು ಪತ್ತೆಯಿಲ್ಲ' ಎಂದು ಷರಾ ಬರೆದು ವಾಪಸ್ ಕಳಿಸಿಬಿಟ್ಟಿದ್ದ! ಅಂಚೆ ಇಲಾಖೆ, ಮತ್ತೊಮ್ಮೆ ಹುಡುಕಿ ಎಂದು ಆ ಪತ್ರವನ್ನೇ ವಾಪಸ್ ಕಳುಹಿಸಿತು. ಕಡೆಗೊಮ್ಮೆ ಕೊಳೆಗೇರಿಯ ಒಂದು ಹಳೆ ಹಳೆ ಹಳೇ ಮನೆಯಲ್ಲಿ ಜೈಸ್ವಾಲ್ ಕುಟುಂಬವನ್ನು ಅಂಚೆಯವನು ಪತ್ತೆ ಮಾಡಿದ. ಕೆಲವೇ ದಿನಗಳಲ್ಲಿ ಪ್ರೊಬೇಷನರಿ ಅಫೀಸರ್ ಎಂದು ಗೋವಿಂದ ಜೈಸ್ವಾಲ್‌ನನ್ನು ನೇಮಕ ಮಾಡಿರುವ ಪತ್ರ ಕೂಡ ಆತನ ಕೈ ಸೇರಿತು. ಕೆಲವೇ ವರ್ಷಗಳ ಹಿಂದೆ ಅಟೆಂಡರ್ ಕೆಲಸಕ್ಕೆ ಅದೆಷ್ಟೋ ಲಕ್ಷ ಕೊಡಿ ಅನ್ನಿಸಿಕೊಂಡಿದ್ದ ಗೋವಿಂದ ಜೈಸ್ವಾಲ್ ಕಡೆಗೂ, ಒಂದೇ ಒಂದು ಪೈಸೆ ಲಂಚ ಕೊಡದೆ ಐಎಎಸ್ ಆಫೀಸರ್ ಆಗಿಯೇಬಿಟ್ಟ.
***
ತಿಂಗಳ ಹಿಂದಷ್ಟೇ ಗೋವಿಂದ ಜೈಸ್ವಾಲ್‌ನ ಪ್ರೊಬೇಷನ್ ಅವಧಿ ಮುಗಿದಿದೆ. ಆತನೀಗ ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ. ಮದುವೆ ಮಾರ್ಕೆಟ್‌ನಲ್ಲಿ ಅವನ ಹೆಸರು ತುಂಬ ಜೋರಾಗಿ ಓಡುತ್ತಿದೆ. ಕನ್ಯಾಪಿತೃಗಳು ಅವನ ಮುಂದೆ ಸಾಲಾಗಿ ನಿಂತಿದ್ದಾರೆ. ಜಾತಿ, ಧರ್ಮದ ಮಾತು ಬೇಡವೇ ಬೇಡ. ನೀವು 'ಯೆಸ್' ಅನ್ನಿ ಸಾಕು. ಮನೆ ಅಳಿಯನನ್ನಾಗಿ ಮಾಡ್ಕೋತೀವೆ ಅಂದಿದ್ದಾರೆ. ನಮ್ಮ ಮಗಳ ಹೆಸರಲ್ಲಿ ಮನೆ, ಜಮೀನು, ಒಡವೆ, ಬ್ಯಾಂಕ್ ಬ್ಯಾಲೆನ್ಸು ಎಲ್ಲವೂ ಇದೆ ಎಂದು ಲೆಕ್ಕ ತೋರಿಸಿದ್ದಾರೆ. ಮದುವೆಗೆ ಒಪ್ಪಿದ್ರೆ ಅದೆಷ್ಟೋ ಕೋಟಿ ವರದಕ್ಷಿಣೆ ಕೊಡುವ ಮಾತಾಡಿದ್ದಾರೆ.
ಒಂದೇ ಮಾತಲ್ಲಿ ಹೇಳುವುದಾದರೆ ಗೋವಿಂದನಿಗೆ ಈಗ ಊರ ತುಂಬಾ ನೆಂಟರು.ಆದರೆ, ಗೆಲುವಿನ ಹಮ್ಮಿನಲ್ಲಿ ಗೋವಿಂದ್ ಮೈಮರೆತಿಲ್ಲ. ತನ್ನ ಭವಿಷ್ಯ ರೂಪಿಸಲು ತಂದೆ ಪಟ್ಟ ಕಷ್ಟ ಎಂಥದೆಂದು ಅವನಿಗೆ ಗೊತ್ತಿದೆ. ಅಪ್ಪನನ್ನು ಚೆನ್ನಾಗಿ ನೋಡ್ಕೋಬೇಕು. ಅಕ್ಕಂದಿರ ಬದುಕಿಗೆ ನೆರವಾಗಬೇಕು. ತನ್ನಂಥದೇ ಹಿನ್ನೆಲೆಯಿಂದ ಬಂದ ಬಡವರ ಮನೆಯ ಮಕ್ಕಳಿಗೆ ನೆರವಾಗಬೇಕು. ಲಂಚ ಕೊಡದೇ ನೌಕರಿ ಪಡೆಯುವಂಥ ವಾತಾವರಣ ನಿರ್ಮಿಸಬೇಕು... ಇಂಥವೇ ನೂರೆಂಟು ಕನಸುಗಳು ಗೋವಿಂದ ಜೈಸ್ವಾಲ್‌ಗೆ ಇವೆ. ಈ ಪೈಕಿ ಒಂದಷ್ಟು ಕನಸುಗಳನ್ನು ನನಸು ಮಾಡಿಕೊಂಡ ನಂತರ ಬಡವರ ಮನೆಯ ಹೆಣ್ಣೊಬ್ಬಳನ್ನು ಮದುವೆಯಾಗುವುದೇ ನನ್ನ ಗುರಿ ಎಂದಾತ ದೃಢವಾಗಿ ಹೇಳಿದ್ದಾರೆ.
ಗೋವಿಂದ ಜೈಸ್ವಾಲ್‌ನ ಯಶೋಗಾಥೆಯನ್ನು ಓದಿದಿರಲ್ಲ, ಈಗ ಹೇಳಿ, ಸಾಧನೆಗೆ ಅಸಾಧ್ಯವಾದುದು ಯಾವುದಾದರೂ ಇದೆಯೇ? ಗೋವಿಂದ್ ನಮ್ಮ ನಡುವಿನ ರಿಯಲ್ ಹೀರೋ.
ಕೃಪೆ : ಎ.ಆರ್. ಮಣಿಕಾಂತ್
No comments:
Post a Comment