Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday, 22 September 2016

ಪಿ.ಎಸ್.ಐ. ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ?

PSI essay writing information

      ಪ್ರಬಂಧ ಎಂದರೆ 'ಚೆನ್ನಾಗಿ ಕಟ್ಟುವುದು' ಎಂದರ್ಥ. ಪ್ರಸ್ತುತ ಪಿ.ಎಸ್.ಐ. ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪಿ.ಎಸ್.ಐ. ಪರೀಕ್ಷೆಯಲ್ಲಿ 20 ಅಂಕಗಳಿಗೆ ಪ್ರಬಂಧ ಬರೆಯಬೇಕಿದ್ದು ಒಟ್ಟು 600 ಪದಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ಕೆ.ಎ.ಎಸ್. ಪರೀಕ್ಷೆಗೆ 1000 ಪದಗಳು ಹಾಗೂ ಐ.ಎ.ಎಸ್. ಪರೀಕ್ಷೆಗೆ 1200 ಪದಗಳಲ್ಲಿ ಪ್ರಬಂಧ ಬರೆಯಬೇಕಿರುತ್ತದೆ.

 ಪಿ.ಎಸ್.ಐ. ಪರೀಕ್ಷೆ ಬರೆಯುವವರಲ್ಲಿ ಬಹಳಷ್ಟು ಜನ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುತ್ತಾರೆ. ಇದು ಅಷ್ಟೇನೂ ಸೂಕ್ತವಲ್ಲ. ಯಾವುದೇ ರೀತಿಯ ಅಧ್ಯಯನವನ್ನು ನಡೆಸಿದಾಗ ವಿಷಯದ `ಥೀಮ್' ಏನು ಎಂಬುದನ್ನು ಅರ್ಥ ಮಾಡಿಕೊಂಡು ಆ ಥೀಮ್^ನ್ನು ಆಧಾರವಾಗಿಟ್ಟುಕೊಂಡು ನಮ್ಮದೇ ಆದ ಸ್ವಂತ ಆಲೋಚನಾ ಕ್ರಮದಲ್ಲಿ ಬರೆಯುವುದೇ ಸೂಕ್ತ. ಈ ರೀತಿ ಬರೆಯುವವರೇ ಪರೀಕ್ಷೆಯಲ್ಲಿ ಗೆಲ್ಲುತ್ತಿದ್ದಾರೆ.

* ಮಾದರಿ ಪ್ರಬಂಧಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಿ. ಇವು ನಮ್ಮಲ್ಲಿ ಆಲೋಚನಾ ಕ್ರಮವನ್ನು ಹುಟ್ಟು ಹಾಕಿ ವಿಮರ್ಶಾತ್ಮಕವಾಗಿ ಬರೆಯುವ ಸಾಮರ್ಥ್ಯ ಬೆಳೆಸುತ್ತವೆ. ವಿಮರ್ಶೆ ಎಂಬುದು ವಿರೋಧವಲ್ಲ. ಕೊಟ್ಟಂತಹ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿಮರ್ಶಿಸಬೇಕು.

* ಸಿ.ಇ.ಟಿ. ಅಭ್ಯರ್ಥಿಗಳು ಯವುದೇ ಪಕ್ಷ, ವ್ಯಕ್ತಿ ಬಗ್ಗೆ ನಿರ್ಲಕ್ಷ್ಯ, ಉಡಾಫೆ ಅಥವಾ ಪೂರ್ವಗ್ರಹ ಇಟ್ಟುಕೊಳ್ಳಬಾರದು. ಹಾಗೇನಾದರೂ ಇಟ್ಟುಕೊಂಡರೆ, ವಿಮರ್ಶೆಗೆ ವೈಚಾರಿಕ ಸಮರ್ಥನೆ ಇಲ್ಲದಂತಾಗುತ್ತದೆ. ಭಾವನಾತ್ಮಕ ಉದ್ವೇಗದಿಂದ ಪ್ರಬಂಧ ಬರೆಯುವಂತಾಗುತ್ತದೆ.

ಉದಾ: ಟಿಪ್ಪುವಿನ ಸಾಧನೆಗಳು.  ಪರ ವಿರೋಧವನ್ನು ಸಮಾನದೃಷ್ಟಿಯಿಂದ ನೋಡಿ ವಿಚಾರ ಕೇಂದ್ರಿತವಾಗಿ ವಿಷಯ ನಿರೂಪಿಸಬೇಕು.

* ಮಾದರಿ ಪ್ರಬಂಧಗಳನ್ನು ಓದುವಾಗ ಯಾವುದಾದರೂ ಪರಿಕಲ್ಪನೆ ಅರ್ಥವಾಗದಿದ್ದರೆ, ಅದನ್ನು ಬಿಟ್ಟು ಮುಂದಕ್ಕೆ ಹೋಗಬಾರದು, ಅರ್ಥ ಮಾಡಿಕೊಂಡೇ ಮುಂದಕ್ಕೆ ಹೋಗಬೇಕು. ಒಂದು ವೇಳೆ ಆಗದಿದ್ದರೆ, ಅದರ ಹಿಂದಿನ ಮತ್ತು ಮುಂದಿನ ವಿಷಯಗಳ ತನಕ ಓದಬೇಕು.

* ಅಂಕಿ-ಅಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವು ಸೂಚಿಸುವ ಅರ್ಥ ಏನು ಎಂದು ತಿಳಿದುಕೊಂಡರೆ ಸಾಕು.
ಉದಾ: ಈ ಹಿಂದೆ ಜನಸಂಖ್ಯೆ 100 ಕೋಟಿ ಇತ್ತು. 2011 ರ ಪ್ರಕಾರ 120ಕೋಟಿ ಆಗಿದೆ ಎಂದು ಅರ್ಥೈಸಿಕೊಂಡರೆ ಸಾಕು. ಅದನ್ನು ಬಿಟ್ಟು 120,84,63,700 ಅಂತ ಚಿಂತಿಸುತ್ತಾ ಸಮಯ ಹಾಳುಮಾಡಬಾರದು.

* ಪ್ರಬಂಧಗಳನ್ನು ಅಧ್ಯಯನ ಮಾಡುವಾಗ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಾಗೆ ಹೇಗೆ ಸಂಬಂಧ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕು.

* ಶಾಲಾ-ಕಾಲೇಜುಗಳಲ್ಲಿ ಬರೆದ ಹಾಗೆ ಪ್ರಬಂಧ ಬರೆಯಬಾರದು. ಶಾಲೆಯಲ್ಲಿನ ಪ್ರಬಂಧಗಳು ವಿವರಣಾತ್ಮಕ ರೀತಿಯದ್ದಾಗಿರುತ್ತವೆ. ಆದರೆ ನಾವು ಬರೆಯುವ ಪ್ರಬಂಧಗಳು ವಿಷಯ/ವಿಚಾರದ ಬಗ್ಗೆ ನಮ್ಮ ಧೋರಣೆ ಏನು ಎಂಬುದನ್ನು ನಿರೀಕ್ಷಿಸುತ್ತವೆ. ಆದ್ದರಿಂದ ಪದಗಳು ವಿಮರ್ಶಾತ್ಮಕ ರೀತಿಯಲ್ಲಿ ಇರಬೇಕಾಗುತ್ತದೆ.

* ವಿಷಯವೊಂದರ ಕುರಿತಾಗಿ ಎಲ್ಲರೂ ಯೋಚಿಸುವಂತೆ ಯೋಚಿಸಿ ಬರೆಯುವುದು ಜಾಣತನವಲ್ಲ. ಬದಲಾಗಿ ವಿಷಯವೊಂದನ್ನು ವಿಭಿನ್ನವಾಗಿ, ಬಹುಮುಖವಾಗಿ ಚಿಂತಿಸಿ ಬರೆಯುವುದು ಸೂಕ್ತ.
  ಉದಾ: `ಪ್ರತಿಭಾ ಪಲಾಯನ'ದ ಬಗ್ಗೆ ಬರೆಯುವಾಗ ಅದಕ್ಕೆ ಸಮರ್ಥನೀಯ ಕಾರಣಗಳನ್ನು ನೀಡಲು ಪ್ರಯತ್ನಿಸಬೇಕು ಆದರೆ ಸಂಪೂರ್ಣವಾಗಿ ಪೋಷಿಸಿ ಬರೆಯಬಾರದು.

* ಪ್ರಬಂಧವು ವ್ಯಕ್ತಿನಿಷ್ಠವಾಗಿರಬಾರದು, ವಸ್ತುನಿಷ್ಠವಾಗಿರಬೇಕು.

* ವಿಶ್ಲೇಷಣೆ ಒಳಗೊಂಡಿರಬೇಕು. ಅಂದರೆ ಒಂದು ವಿಚಾರವನ್ನು ವಿಮರ್ಶಿಸುವಾಗ ಲಭ್ಯವಾಗುವ ಸಣ್ಣಪುಟ್ಟ ವಿವರಗಳನ್ನು ಬಿಡಿಸಿ ಅರ್ಥೈಸಬೇಕು.

* ವಿಷಯವನ್ನು ಸಂಕುಚಿತ ಮತ್ತು ಸ್ವಾರ್ಥ ಮನೋಭಾವದಿಂದ ಮಂಡಿಸದೇ ವ್ಯಾಪಕ ಪರಿಣಾಮಗಳ ಹಿನ್ನೆಲೆಯಲ್ಲಿ ಮಂಡಿಸಬೇಕು.

* ಪ್ರಬಂಧದಲ್ಲಿ ಬರೆಯುವ ಪೀಠಿಕೆಯು ಶೀರ್ಷಿಕೆಯ ಹಿನ್ನೆಲೆಯನ್ನು ಬಳಸಿ, ಶೀರ್ಷಿಕೆಯ ಬಗ್ಗೆ ಏನು, ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತಿರಬೇಕು.

* ಪ್ರಬಂಧ ನಿರೂಪಿಸುವಾಗ ಕೊಡುವ ಹೇಳಿಕೆಗಳು ವೈಚಾರಿಕ ಸ್ಪಷ್ಟತೆಯಿಂದ ಕೂಡಿರಬೇಕು ಮತ್ತು ಸರಿಯಾದ ಆಧಾರಗಳನ್ನು ಹೊಂದಿರಬೇಕು.
ಉದಾ: ದೇಶದಲ್ಲಿ ವರದಕ್ಷಿಣೆ ಸಮಸ್ಯೆ ಇದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವಂಥದ್ದು. ಆದರೆ ನಿರ್ದಿಷ್ಟ ವ್ಯಕ್ತಿ/ಸಮುದಾಯದ ಬಗ್ಗೆ ಹೇಳುವಾಗ ಆಧಾರವಿರಲೇಬೇಕು.

* ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಗಾದೆಮಾತು, ನಾಣ್ಣುಡಿ, ಹೇಳಿಕೆಗಳನ್ನು ಬರೆಯುವುದು ಅಷ್ಟೇನೂ ಪರಿಣಾಮಕಾರಿಯಲ್ಲ. ಒಂದು ವೇಳೆ ಬರೆಯಬೇಕಿದ್ದರೆ ಏನಾದರೂ ವಿಶೇಷ ಅರ್ಥ ನಿರೂಪಿಸಬೇಕು. ಸಾಧ್ಯವಾದಷ್ಟು ಗಮನ ಸೆಳೆಯುವ, ವಿಭಿನ್ನ ಹಾಗೂ ಸಾಕಷ್ಟು ಪ್ರಚಾರದಲ್ಲಿ ಇಲ್ಲದ ಗಾದೆ ಮಾತು, ನಾಣ್ಣುಡಿಗಳನ್ನು ಬರೆಯುವುದೊಳಿತು.

* ಒಂದು ಪ್ಯಾರಾ ಆದ ಮೇಲೆ ಮತ್ತೊಂದು ಪ್ಯಾರಾ ಆರಂಭಿಸುವಾಗ ಅಲ್ಲಲ್ಲಿ ಉಪಶೀರ್ಷಿಕೆಗಳನ್ನು ಬರೆಯಬೇಕು.

* ಪ್ರಬಂಧದಲ್ಲಿ ಮುಖ್ಯಾಂಶಗಳಿಗೆ ಅಂಡರ್^^ಲೈನ್ ಅಥವಾ ಬೋಲ್ಡ್ ಮಾಡಬಹುದು. ಆದರೆ ಅಂಡರ್^^ಲೈನ್ ಮಾಡಲು ಬೇರೆ ಯಾವುದೇ ಪೆನ್ ಅಥವಾ ಹೈಲೈಟರ್ ಬಳಸಬಾರದು.

* ಬರವಣಿಗೆ ಸ್ಪಷ್ಟವಾಗಿರಬೇಕು, ಲೇಖನ ಚಿಹ್ನೆಗಳನ್ನು ಬಳಸಬೇಕು.

* ವಾಕ್ಯರಚನೆ ಉತ್ತಮವಾಗಿರಬೇಕು ಹಾಗೂ ಜೋಡಣೆ ಕ್ರಮವಾಗಿರಬೇಕು.

* ಪ್ರಬಂಧ ವಿಷಯದ ಎಲ್ಲೆಯನ್ನು ಮೀರಬಾರದು, ಅನಾವಶ್ಯಕವಾಗಿ ಅಪ್ರಸ್ತುತ ವಾಕ್ಯಗಳನ್ನು ಪ್ರಬಂಧಕ್ಕೆ ಎಳೆದು ತರಬಾರದು.

* ವಾಕ್ಯಗಳು ಮತ್ತು ಅಂಶಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು.

* ನಿಗದಿತ ವೇಳೆಯೊಳಗೆ ಪ್ರಬಂಧ ಬರೆದು ಮುಗಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಿ.

ಪ್ರಬಂಧ ಬರೆಯುವ ಹಂತಗಳು:
     ಪ್ರಬಂಧ ಬರೆಯುವ ಕಲೆ ಒಂದೇ ದಿನದಲ್ಲಿ ಸಿದ್ಧಿಸುವಂತಹದಲ್ಲ. ಅದಕ್ಕಾಗಿ ದಿನನಿತ್ಯದ ಅಭ್ಯಾಸ ಅಗತ್ಯ.
1) ಪ್ರಬಂಧದ ವಿಷಯ ಆಯ್ಕೆ ಮಾಡಿಕೊಳ್ಳಿ.
2) ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಏನೆಲ್ಲ ಬರೆಯಬಹುದು ಎಂಬುದನ್ನು ಚಿಂತಿಸಿ.
3) ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ವಿವರವನ್ನು ಸಂಗ್ರಹಿಸಿ.
4) ಪ್ರಬಂಧ ಬರೆಯುವ ನಿಯಮಗಳನ್ನು ಅನುಸರಿಸಿ, ವಿಷಯವನ್ನು ನಿರೂಪಿಸಿ, ವಿಶ್ಲೇಷಿಸಿ, ವಿಮರ್ಶಿಸಿ ವ್ಯವಸ್ಥಿತವಾಗಿ ಬರೆಯಿರಿ.
5) ಪ್ರಬಂಧ ಬರೆದು ಮುಗಿಸಿದ ಮೇಲೆ ಕೆಲಹೊತ್ತು ಬಿಟ್ಟು ಮತ್ತೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಯಾವುದಾದರೂ ವಾಕ್ಯಗಳು, ಶಬ್ದಗಳು ಇಲ್ಲದಿದ್ದರೂ ಪ್ರಬಂಧದ ಅರ್ಥಕ್ಕೆ ಅಥವಾ ತೂಕಕ್ಕೆ ತೊಂದರೆಯಾಗುವುದಿಲ್ಲ ಎನಿಸಿದರೆ ತೆಗೆದು ಹಾಕಿ. ಬಳಸಿದ ಶಬ್ದ/ವಾಕ್ಯಕ್ಕೆ ಬದಲಾಗಿ ಮತ್ತೆ ಯಾವ ಶಬ್ದ/ವಾಕ್ಯ ಬಳಸಿದರೆ, ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಚಿಂತಿಸಿ ಸೇರ್ಪಡೆಗೊಳಿಸಿ. ಹೀಗೆ ಒಂದು ಪ್ರಬಂಧವನ್ನು 2-3 ಬಾರಿ ಮತ್ತೆ ಮತ್ತೆ ಬರೆಯಿರಿ.
6) ಪ್ರಬಂಧದಲ್ಲಿ ಬಳಸುವ ಭಾಷೆಗ ಬಹಳ ಪ್ರಾಮುಖ್ಯತೆ ಇದೆ. ಕೆಳಮಟ್ಟದ ಪದಗಳು, ಅಶ್ಲೀಲ ಪದಗಳು, ದ್ವಂದಾರ್ಥ ಪದಗಳು, ಅಸಾಂವಿಧಾನಿಕ ಪದಗಳನ್ನು ಬಳಸುವಂತಿಲ್ಲ. ಭಾವತೀವ್ರತೆಯಿಂದ ಬರೆಯಬಾರದು. ಟೀಕೆ ಮಾಡುವುದಾದರೆ ಮೃದುವಾಗಿ ಮಾಡಬೇಕು.

       ಮಾದರಿ ಪ್ರಬಂಧಗಳ ಅಧ್ಯಯನಕ್ಕಾಗಿ ಗುಣಮಟ್ಟದ ಪುಸ್ತಕಗಳನ್ನು ಓದಿ. ಉದಾ: ಚಾಣಕ್ಯ ಪ್ರಕಾಶನದ ಅರವಿಂದ ಚೊಕ್ಕಾಡಿಯವರ ಪಿ.ಎಸ್.ಐ. ಪ್ರಬಂಧಗಳು, ಕ್ಲಾಸಿಕ್ ಸ್ಟಡಿ ಸರ್ಕಲ್^ನ ಪ್ರಬಂಧಗಳ ಪುಸ್ತಕ, ಸ್ಪರ್ಧಾ ವಿಜೇತ, ಸ್ಪರ್ಧಾ ಚೈತ್ರ ಹಾಗೂ ಇನ್ನಿತರ ಸಂಸ್ಥೆಗಳ ಪುಸ್ತಕಗಳನ್ನು ಪರಾಮರ್ಶಿಸಬಹುದು.

         ಎಲ್ಲಕ್ಕಿಂತ ಮುಖ್ಯವಾಗಿ ಉಳಿದವರೆಲ್ಲರಿಗಿಂತ ಪರಿಣಾಮಕಾರಿಯಾಗಿ ಪ್ರಬಂಧ ಬರೆಯಬಲ್ಲೆ, ವಿಷಯ ನಿರೂಪಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಇಂಥ ಆತ್ಮವಿಶ್ವಾಸಕ್ಕಾಗಿ ಗಳಿಸುವುದಕ್ಕಾಗಿ ಸತತ ವಿಷಯ ಸಂಗ್ರಹ, ಅಧ್ಯಯನ ಅವಶ್ಯ ಹಾಗೂ ನಿರಂತರವಾಗಿ ಜ್ಞಾನಮುಖಿಯಾಗಿರಬೇಕು.

No comments: