Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Friday, 11 November 2016
ಆಂಟೋನಿಯ ಕಥೆ - ನಮ್ಮ ಕಥೆ
ರೋಮ್ ಇತಿಹಾಸದ ಪುಟಗಳಲ್ಲಿ ಕಾಣುವ ಈ ಕಥೆ ಒಂದು ಬಹುದೊಡ್ಡ ಆಧ್ಯಾತ್ಮಿಕ ಸತ್ಯವನ್ನು ಸಾರುತ್ತದೆ.
ರೋಮ್ ಸಾಮ್ರಾಜ್ಯದ ಸರ್ವಾಧಿಕಾರಿಯಾಗಿದ್ದ ಜೂಲಿಯಸ್ ಸೀಜರ್ ತನ್ನ ವಿಶ್ವಾಸಿಕನಾದ, ನಂಬಿಕೆಗೆ ಅರ್ಹವಾಗಿದ್ದ ಮಾರ್ಕ್ ಅಂಟೋನಿಯನ್ನು ಕರೆಸಿ ಈಜಿಪ್ಟ್ ದೇಶವನ್ನು ಗೆದ್ದು ಬರುವುದಕ್ಕೆ ಕಳುಹಿಸುತ್ತಾನೆ. ಅತ್ಯಂತ ಕಡಿಮೆಯ ಅವಧಿಯಲ್ಲಿ ಧೀರ ಮಾರ್ಕ್ ಆಂಟೋನಿ ಈಜಿಪ್ಟನ್ನು ಗೆದ್ದು ಅಲ್ಲಿಯ ಅಪಾರ ಸಂಪತ್ತನು ಹೊತ್ತು ತರುತ್ತಾನೆಂಬ ನಂಬಿಕೆ ಸೀಜರ್‌ನಿಗೆ. ಹಾಗೆ ಸಾಧಿಸಿಯೇ ತೀರುತ್ತೇನೆಂದು ಪಣತೊಟ್ಟ ಆಂಟೋನಿ ಸರ್ವಾಧಿಕಾರಿಗೆ ಮಾತು ಕೊಟ್ಟು ಹೊರಡುತ್ತಾನೆ.
ಆಗ ಈಜಿಪ್ಟ್ ದೇಶದ ರಾಣಿ ಕ್ಲಿಯೋಪಾತ್ರಾ ಅದು ಮಾದಕ ಸೌಂದರ್ಯಕ್ಕೆ ಮತ್ತೊಂದು ಹೆಸರು. ಆಂಟೋನಿ ತನ್ನ ದೇಶವನ್ನು ಗೆಲ್ಲಲು ಬರುತ್ತಿದ್ದಾನೆಂಬ ವಿಷಯ ಆಕೆಗೆ ತಿಳಿಯುತ್ತದೆ. ಆಕೆ ಸುಂದರಿ ಮಾತ್ರವಲ್ಲ ಕಾರ್ಯ ಸಾಧನೆಯಲ್ಲಿ ಮಹಾ ಚತುರೆ. ಬರಲಿ, ಈ ಸೇನಾ ನಾಯಕ. ನಮ್ಮನ್ನು ಗೆಲ್ಲ ಬಂದವನನ್ನು ನಾನೇ ಗೆದ್ದು ಬಿಡುತ್ತೇನೆ ಎಂದು ತೀರ್ಮಾನ ಮಾಡಿ ಒಂದು ಯೋಜನೆಯನ್ನು ತಯಾರು ಮಾಡುತ್ತಾಳೆ. ತನ್ನ ಮಂತ್ರಿಗಳನ್ನು ಕರೆದು ಬರುತ್ತಿರುವ ರೋಮನ್ ಸೇನಾ ನಾಯಕನಿಗೆ ಅಭೂತಪೂರ್ವ ಸ್ವಾಗತವನ್ನು ಏರ್ಪಡಿಸಲು ಆಜ್ಞೆ ಮಾಡುತ್ತಾಳೆ. ಈಜಿಪ್ಟ್ ದೇಶದ ಸಕಲ ಸಂಪತ್ತು, ಸಂಭ್ರಮಗಳನ್ನು ಬೆರೆಸಿ ಆಂಟೋನಿ ಬೆರಗುಗೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಿರುತ್ತಾಳೆ.
ತನ್ನ ಜೊತೆಗಿದ್ದ ಅತ್ಯಂತ ಸುಂದರಿಯರಾದ ಸೇವಕಿಯರಿಗೆ ವಿವಿಧ ವೇಷ ಭೂಷಣಗಳನ್ನು ಸಿದ್ಧಪಡಿಸಿ ಅವರು ತಮ್ಮ ಸೌಂದರ್ಯದ ಹತ್ತುಪಟ್ಟು ಹೆಚ್ಚಾಗಿ ಕಾಣುವಂತೆ ಮಾಡಿಸುತ್ತಾಳೆ. ಅದ್ಭುತವಾಗಿ ಅಲಂಕೃತ ನಾವೆಗಳಲ್ಲಿ ಆ ಹುಡುಗಿಯರು ತಮ್ಮ ಮೈಮಾಟಗಳನ್ನು ಪ್ರದರ್ಶಿಸುತ್ತಾ ಆಂಟೋನಿಯ ಗಮನ ಸೆಳೆಯಬೇಕೆಂದು ಅವರ ಕರ್ತವ್ಯ. ಕ್ಲಿಯೋಪಾತ್ರಾ ತಾನೇ ಸ್ವತಃ ತನ್ನ ಮೈ ಮುಚ್ಚುವಷ್ಟು ಬಂಗಾರದ ಆಭರಣಗಳನ್ನು ಧರಿಸಿ ಮೊದಲೇ ಸುಂದರಳಾಗಿದ್ದ ತಾನು ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗುವಂತೆ ಮತ್ತೊಂದು ವಿಶೇಷ ನಾವೆಯಲ್ಲಿ ಕುಳಿತುಕೊಂಡು ಮುಂದೆ ಬರುತ್ತಾಳೆ. ಆಕೆಯ ನಿರ್ಧಾರ ಖಚಿತವಾಗಿತ್ತು. ತಾನು ರೋಮ್ ದೇಶದ ಸೇನಾಧಿಪತಿಯನ್ನು ಖಡ್ಗದಿಂದ ಗೆಲ್ಲದೇ, ಒಂದು ಹನಿ ರಕ್ತವನ್ನು ಕಳೆಯದೇ, ಕೇವಲ ತನ್ನ ಕಣ್ಣಂಚಿನ ಕುಡಿ ನೋಟದಿಂದ, ವೈಯಾರದಿಂದ ದೇಹದಿಂದ ಗೆಲ್ಲಬೇಕು.
ಆಂಟೋನಿ ಈಜಿಪ್ಟ್ ದೇಶದ ತೀರದಲ್ಲಿ ಇಳಿದೊಡನೆ ಅವನಿಗೆ ಆಶ್ಚರ್ಯವಾಗುತ್ತದೆ. ಸನ್ನದ್ಧ ಸೈನ್ಯದೊಡನೆ ಹೋರಾಟ ಮಾಡುವ ಸ್ಥಿತಿಯಲ್ಲಿದ್ದ ಆಂಟೋನಿ ಈ ಅಸಾಧಾರಣ ಸಂಭ್ರಮದ ಸ್ವಾಗತವನ್ನು ಕಂಡು ಬೆರಗಾಗುತ್ತಾನೆ. ಕಂಡಲ್ಲಿ ಹೊಳೆಯುವ ಸಂಪತ್ತು, ಸೌಂದರ್ಯ ಮತ್ತು ಮದ್ಯಗಳಲಿ ಕರಗಿ ಹೋಗುತ್ತಾನೆ. ಅವನನ್ನು ಸ್ವಾಗತಿಸುವ ಕಾರ್ಯಕ್ರಮ ಹಲವಾರು ದಿನಗಳವರೆಗೆ ನಡೆಯುತ್ತದೆ. ಪ್ರತಿದಿನವೂ ವಿಧವಿಧವಾದ ಅಲಂಕಾರ ಮಾಡಿಕೊಂಡ, ಮಾದಕ ಸೌಂದರ್ಯದ ಕ್ಲಿಯೋಪಾತ್ರಾಳ ಭೆಟ್ಟಿಯಾಗುತ್ತಲೆ ಇರುತ್ತದೆ. ಅವಳ ಮಾತಿನ ಮೋಡಿಯಲ್ಲಿ, ಸಾಂಗತ್ಯದಲ್ಲಿ ಆಂಟೋನಿ ತಾನು ಬಂದಿರುವ ಕೆಲಸವನ್ನೆಲ್ಲ ಮರೆತು ಬಿಡುತ್ತಾನೆ. ದಿನಗಳು ಕಳೆದಂತೆ ಆಂಟೋನಿ ಕ್ಲಿಯೋಪಾತ್ರಳ ದಾಸನಂತಾಗಿ ನೈತಿಕವಾಗಿ ಕುಸಿಯುತ್ತ, ಕುಸಿಯುತ್ತ ಆಕೆಯ ಕೈಗೊಂಬೆಯಗುತ್ತಾನೆ.
ಇತ್ತ ತನ್ನ ನೆಚ್ಚಿನ ಸ್ನೇಹಿತ ಆಂಟೋನಿ ಯಾಕೆ ಮರಳಿ ಬರಲಿಲ್ಲ ಮತ್ತು ಯಾವ ವಿಷಯವನ್ನು ತಿಳಿಸಲಿಲ್ಲ ಎಂದು ಸೀಜರ್ ಕಳವಳಕ್ಕೊಳಗಾಗಿ ತನ್ನ ದೂತರನ್ನು ಕಳುಹಿಸುತ್ತಾನೆ. ಅವರು ಈಜಿಪ್ಟಿಗೆ ಬಂದು ಪರಿಪರಿಯಾಗಿ ಆಂಟೋನಿಗೆ ಹೇಳುತ್ತಾರೆ. ನೀನು ನಮ್ಮ ದೇಶದ ಧೀರನಾಯಕ. ದೇಶ ನಿನ್ನನ್ನು ಕರೆಯುತ್ತಿದೆ. ಟೈಬರ್ ನದಿಯ ರಣಕಹಳೆ ನಿನಗೆ ಕೇಳದೇ? ಬೇಗ ದೇಶವನ್ನು ಗೆದ್ದು ನಡೆ. ಕ್ಲಿಯೋಪಾತ್ರಾಳ ಬಲೆಗೆ ಪೂರ್ತಿಯಾಗಿ ಬಿದ್ದಿದ್ದ ಆಂಟೋನಿ ನಿರ್ವೀರ್ಯನಾಗಿ ಕುಡಿದ ಅಮಲಿನಲ್ಲಿ ಹೇಳುತ್ತಾನೆ. "ರೋಮ್ ಸಾಮ್ರಾಜ್ಯ ಟೈಬಲ್ ನದಿಯಲ್ಲಿ ಕರಗಿ ಹೋಗಲಿ. ಸಾಮ್ರಾಜ್ಯದ ಮಹಾಸೌಧ ಕುಸಿದು ಹೋಗಲಿ. ನನಗೆ ಕ್ಲಿಯೋಪಾತ್ರಳ ಪಾದವೇ ನಿಜಸ್ಥಾನ."
ಧೀರ ಆಂಟೋನಿಯ ನೈತಿಕತೆಯ ಶಿಥಿಲತೆ ಮನಸ್ಸನ್ನು ತಟ್ಟುತ್ತದೆ. ಆಧ್ಯಾತ್ಮಿಕತೆಯ ದೃಷ್ಟಿಯಿಂದ ನೋಡಿದರೆ, ಅದು ನಮ್ಮೆಲ್ಲರ ಕಥೆಯೂ ಹೌದು. ಏನನ್ನೋ ಮಹತ್ತಾದುದನ್ನು ಸಾಧಿಸಲೆಂದು ಭೂಮಿಗೆ ಮನುಷ್ಯ ದೇಹದಲ್ಲಿ ಬಂದ ನಾವು ಸಣ್ಣ ಸಣ್ಣ ಆಕರ್ಷಣೆಗಳಿಗೆ ನಮ್ಮನ್ನು ತೆತ್ತುಕೊಂಡು ಅದೇ ಮಹತ್ತಾದುದು ಎಂದು ಭ್ರಮೆಪಟ್ಟು ಮೂಲ ಆಶಯ ಮರೆತಾಗ ಆಂಟೋನಿಯ ಕಥೆ ತುಂಬ ಪ್ರಸ್ತುತವೆನಿಸುತ್ತದೆ.
ಕೃಪೆ: ಡಾ|| ಗುರುರಾಜ್ ಕರಜಗಿ
Subscribe to:
Post Comments (Atom)
No comments:
Post a Comment