Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday, 22 September 2016

ಪಿ.ಎಸ್.ಐ. ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ?

PSI essay writing information

      ಪ್ರಬಂಧ ಎಂದರೆ 'ಚೆನ್ನಾಗಿ ಕಟ್ಟುವುದು' ಎಂದರ್ಥ. ಪ್ರಸ್ತುತ ಪಿ.ಎಸ್.ಐ. ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪಿ.ಎಸ್.ಐ. ಪರೀಕ್ಷೆಯಲ್ಲಿ 20 ಅಂಕಗಳಿಗೆ ಪ್ರಬಂಧ ಬರೆಯಬೇಕಿದ್ದು ಒಟ್ಟು 600 ಪದಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ಕೆ.ಎ.ಎಸ್. ಪರೀಕ್ಷೆಗೆ 1000 ಪದಗಳು ಹಾಗೂ ಐ.ಎ.ಎಸ್. ಪರೀಕ್ಷೆಗೆ 1200 ಪದಗಳಲ್ಲಿ ಪ್ರಬಂಧ ಬರೆಯಬೇಕಿರುತ್ತದೆ.

 ಪಿ.ಎಸ್.ಐ. ಪರೀಕ್ಷೆ ಬರೆಯುವವರಲ್ಲಿ ಬಹಳಷ್ಟು ಜನ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುತ್ತಾರೆ. ಇದು ಅಷ್ಟೇನೂ ಸೂಕ್ತವಲ್ಲ. ಯಾವುದೇ ರೀತಿಯ ಅಧ್ಯಯನವನ್ನು ನಡೆಸಿದಾಗ ವಿಷಯದ `ಥೀಮ್' ಏನು ಎಂಬುದನ್ನು ಅರ್ಥ ಮಾಡಿಕೊಂಡು ಆ ಥೀಮ್^ನ್ನು ಆಧಾರವಾಗಿಟ್ಟುಕೊಂಡು ನಮ್ಮದೇ ಆದ ಸ್ವಂತ ಆಲೋಚನಾ ಕ್ರಮದಲ್ಲಿ ಬರೆಯುವುದೇ ಸೂಕ್ತ. ಈ ರೀತಿ ಬರೆಯುವವರೇ ಪರೀಕ್ಷೆಯಲ್ಲಿ ಗೆಲ್ಲುತ್ತಿದ್ದಾರೆ.

* ಮಾದರಿ ಪ್ರಬಂಧಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಿ. ಇವು ನಮ್ಮಲ್ಲಿ ಆಲೋಚನಾ ಕ್ರಮವನ್ನು ಹುಟ್ಟು ಹಾಕಿ ವಿಮರ್ಶಾತ್ಮಕವಾಗಿ ಬರೆಯುವ ಸಾಮರ್ಥ್ಯ ಬೆಳೆಸುತ್ತವೆ. ವಿಮರ್ಶೆ ಎಂಬುದು ವಿರೋಧವಲ್ಲ. ಕೊಟ್ಟಂತಹ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿಮರ್ಶಿಸಬೇಕು.

* ಸಿ.ಇ.ಟಿ. ಅಭ್ಯರ್ಥಿಗಳು ಯವುದೇ ಪಕ್ಷ, ವ್ಯಕ್ತಿ ಬಗ್ಗೆ ನಿರ್ಲಕ್ಷ್ಯ, ಉಡಾಫೆ ಅಥವಾ ಪೂರ್ವಗ್ರಹ ಇಟ್ಟುಕೊಳ್ಳಬಾರದು. ಹಾಗೇನಾದರೂ ಇಟ್ಟುಕೊಂಡರೆ, ವಿಮರ್ಶೆಗೆ ವೈಚಾರಿಕ ಸಮರ್ಥನೆ ಇಲ್ಲದಂತಾಗುತ್ತದೆ. ಭಾವನಾತ್ಮಕ ಉದ್ವೇಗದಿಂದ ಪ್ರಬಂಧ ಬರೆಯುವಂತಾಗುತ್ತದೆ.

ಉದಾ: ಟಿಪ್ಪುವಿನ ಸಾಧನೆಗಳು.  ಪರ ವಿರೋಧವನ್ನು ಸಮಾನದೃಷ್ಟಿಯಿಂದ ನೋಡಿ ವಿಚಾರ ಕೇಂದ್ರಿತವಾಗಿ ವಿಷಯ ನಿರೂಪಿಸಬೇಕು.

* ಮಾದರಿ ಪ್ರಬಂಧಗಳನ್ನು ಓದುವಾಗ ಯಾವುದಾದರೂ ಪರಿಕಲ್ಪನೆ ಅರ್ಥವಾಗದಿದ್ದರೆ, ಅದನ್ನು ಬಿಟ್ಟು ಮುಂದಕ್ಕೆ ಹೋಗಬಾರದು, ಅರ್ಥ ಮಾಡಿಕೊಂಡೇ ಮುಂದಕ್ಕೆ ಹೋಗಬೇಕು. ಒಂದು ವೇಳೆ ಆಗದಿದ್ದರೆ, ಅದರ ಹಿಂದಿನ ಮತ್ತು ಮುಂದಿನ ವಿಷಯಗಳ ತನಕ ಓದಬೇಕು.

* ಅಂಕಿ-ಅಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವು ಸೂಚಿಸುವ ಅರ್ಥ ಏನು ಎಂದು ತಿಳಿದುಕೊಂಡರೆ ಸಾಕು.
ಉದಾ: ಈ ಹಿಂದೆ ಜನಸಂಖ್ಯೆ 100 ಕೋಟಿ ಇತ್ತು. 2011 ರ ಪ್ರಕಾರ 120ಕೋಟಿ ಆಗಿದೆ ಎಂದು ಅರ್ಥೈಸಿಕೊಂಡರೆ ಸಾಕು. ಅದನ್ನು ಬಿಟ್ಟು 120,84,63,700 ಅಂತ ಚಿಂತಿಸುತ್ತಾ ಸಮಯ ಹಾಳುಮಾಡಬಾರದು.

* ಪ್ರಬಂಧಗಳನ್ನು ಅಧ್ಯಯನ ಮಾಡುವಾಗ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಾಗೆ ಹೇಗೆ ಸಂಬಂಧ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕು.

* ಶಾಲಾ-ಕಾಲೇಜುಗಳಲ್ಲಿ ಬರೆದ ಹಾಗೆ ಪ್ರಬಂಧ ಬರೆಯಬಾರದು. ಶಾಲೆಯಲ್ಲಿನ ಪ್ರಬಂಧಗಳು ವಿವರಣಾತ್ಮಕ ರೀತಿಯದ್ದಾಗಿರುತ್ತವೆ. ಆದರೆ ನಾವು ಬರೆಯುವ ಪ್ರಬಂಧಗಳು ವಿಷಯ/ವಿಚಾರದ ಬಗ್ಗೆ ನಮ್ಮ ಧೋರಣೆ ಏನು ಎಂಬುದನ್ನು ನಿರೀಕ್ಷಿಸುತ್ತವೆ. ಆದ್ದರಿಂದ ಪದಗಳು ವಿಮರ್ಶಾತ್ಮಕ ರೀತಿಯಲ್ಲಿ ಇರಬೇಕಾಗುತ್ತದೆ.

* ವಿಷಯವೊಂದರ ಕುರಿತಾಗಿ ಎಲ್ಲರೂ ಯೋಚಿಸುವಂತೆ ಯೋಚಿಸಿ ಬರೆಯುವುದು ಜಾಣತನವಲ್ಲ. ಬದಲಾಗಿ ವಿಷಯವೊಂದನ್ನು ವಿಭಿನ್ನವಾಗಿ, ಬಹುಮುಖವಾಗಿ ಚಿಂತಿಸಿ ಬರೆಯುವುದು ಸೂಕ್ತ.
  ಉದಾ: `ಪ್ರತಿಭಾ ಪಲಾಯನ'ದ ಬಗ್ಗೆ ಬರೆಯುವಾಗ ಅದಕ್ಕೆ ಸಮರ್ಥನೀಯ ಕಾರಣಗಳನ್ನು ನೀಡಲು ಪ್ರಯತ್ನಿಸಬೇಕು ಆದರೆ ಸಂಪೂರ್ಣವಾಗಿ ಪೋಷಿಸಿ ಬರೆಯಬಾರದು.

* ಪ್ರಬಂಧವು ವ್ಯಕ್ತಿನಿಷ್ಠವಾಗಿರಬಾರದು, ವಸ್ತುನಿಷ್ಠವಾಗಿರಬೇಕು.

* ವಿಶ್ಲೇಷಣೆ ಒಳಗೊಂಡಿರಬೇಕು. ಅಂದರೆ ಒಂದು ವಿಚಾರವನ್ನು ವಿಮರ್ಶಿಸುವಾಗ ಲಭ್ಯವಾಗುವ ಸಣ್ಣಪುಟ್ಟ ವಿವರಗಳನ್ನು ಬಿಡಿಸಿ ಅರ್ಥೈಸಬೇಕು.

* ವಿಷಯವನ್ನು ಸಂಕುಚಿತ ಮತ್ತು ಸ್ವಾರ್ಥ ಮನೋಭಾವದಿಂದ ಮಂಡಿಸದೇ ವ್ಯಾಪಕ ಪರಿಣಾಮಗಳ ಹಿನ್ನೆಲೆಯಲ್ಲಿ ಮಂಡಿಸಬೇಕು.

* ಪ್ರಬಂಧದಲ್ಲಿ ಬರೆಯುವ ಪೀಠಿಕೆಯು ಶೀರ್ಷಿಕೆಯ ಹಿನ್ನೆಲೆಯನ್ನು ಬಳಸಿ, ಶೀರ್ಷಿಕೆಯ ಬಗ್ಗೆ ಏನು, ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತಿರಬೇಕು.

* ಪ್ರಬಂಧ ನಿರೂಪಿಸುವಾಗ ಕೊಡುವ ಹೇಳಿಕೆಗಳು ವೈಚಾರಿಕ ಸ್ಪಷ್ಟತೆಯಿಂದ ಕೂಡಿರಬೇಕು ಮತ್ತು ಸರಿಯಾದ ಆಧಾರಗಳನ್ನು ಹೊಂದಿರಬೇಕು.
ಉದಾ: ದೇಶದಲ್ಲಿ ವರದಕ್ಷಿಣೆ ಸಮಸ್ಯೆ ಇದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವಂಥದ್ದು. ಆದರೆ ನಿರ್ದಿಷ್ಟ ವ್ಯಕ್ತಿ/ಸಮುದಾಯದ ಬಗ್ಗೆ ಹೇಳುವಾಗ ಆಧಾರವಿರಲೇಬೇಕು.

* ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಗಾದೆಮಾತು, ನಾಣ್ಣುಡಿ, ಹೇಳಿಕೆಗಳನ್ನು ಬರೆಯುವುದು ಅಷ್ಟೇನೂ ಪರಿಣಾಮಕಾರಿಯಲ್ಲ. ಒಂದು ವೇಳೆ ಬರೆಯಬೇಕಿದ್ದರೆ ಏನಾದರೂ ವಿಶೇಷ ಅರ್ಥ ನಿರೂಪಿಸಬೇಕು. ಸಾಧ್ಯವಾದಷ್ಟು ಗಮನ ಸೆಳೆಯುವ, ವಿಭಿನ್ನ ಹಾಗೂ ಸಾಕಷ್ಟು ಪ್ರಚಾರದಲ್ಲಿ ಇಲ್ಲದ ಗಾದೆ ಮಾತು, ನಾಣ್ಣುಡಿಗಳನ್ನು ಬರೆಯುವುದೊಳಿತು.

* ಒಂದು ಪ್ಯಾರಾ ಆದ ಮೇಲೆ ಮತ್ತೊಂದು ಪ್ಯಾರಾ ಆರಂಭಿಸುವಾಗ ಅಲ್ಲಲ್ಲಿ ಉಪಶೀರ್ಷಿಕೆಗಳನ್ನು ಬರೆಯಬೇಕು.

* ಪ್ರಬಂಧದಲ್ಲಿ ಮುಖ್ಯಾಂಶಗಳಿಗೆ ಅಂಡರ್^^ಲೈನ್ ಅಥವಾ ಬೋಲ್ಡ್ ಮಾಡಬಹುದು. ಆದರೆ ಅಂಡರ್^^ಲೈನ್ ಮಾಡಲು ಬೇರೆ ಯಾವುದೇ ಪೆನ್ ಅಥವಾ ಹೈಲೈಟರ್ ಬಳಸಬಾರದು.

* ಬರವಣಿಗೆ ಸ್ಪಷ್ಟವಾಗಿರಬೇಕು, ಲೇಖನ ಚಿಹ್ನೆಗಳನ್ನು ಬಳಸಬೇಕು.

* ವಾಕ್ಯರಚನೆ ಉತ್ತಮವಾಗಿರಬೇಕು ಹಾಗೂ ಜೋಡಣೆ ಕ್ರಮವಾಗಿರಬೇಕು.

* ಪ್ರಬಂಧ ವಿಷಯದ ಎಲ್ಲೆಯನ್ನು ಮೀರಬಾರದು, ಅನಾವಶ್ಯಕವಾಗಿ ಅಪ್ರಸ್ತುತ ವಾಕ್ಯಗಳನ್ನು ಪ್ರಬಂಧಕ್ಕೆ ಎಳೆದು ತರಬಾರದು.

* ವಾಕ್ಯಗಳು ಮತ್ತು ಅಂಶಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು.

* ನಿಗದಿತ ವೇಳೆಯೊಳಗೆ ಪ್ರಬಂಧ ಬರೆದು ಮುಗಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಿ.

ಪ್ರಬಂಧ ಬರೆಯುವ ಹಂತಗಳು:
     ಪ್ರಬಂಧ ಬರೆಯುವ ಕಲೆ ಒಂದೇ ದಿನದಲ್ಲಿ ಸಿದ್ಧಿಸುವಂತಹದಲ್ಲ. ಅದಕ್ಕಾಗಿ ದಿನನಿತ್ಯದ ಅಭ್ಯಾಸ ಅಗತ್ಯ.
1) ಪ್ರಬಂಧದ ವಿಷಯ ಆಯ್ಕೆ ಮಾಡಿಕೊಳ್ಳಿ.
2) ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಏನೆಲ್ಲ ಬರೆಯಬಹುದು ಎಂಬುದನ್ನು ಚಿಂತಿಸಿ.
3) ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ವಿವರವನ್ನು ಸಂಗ್ರಹಿಸಿ.
4) ಪ್ರಬಂಧ ಬರೆಯುವ ನಿಯಮಗಳನ್ನು ಅನುಸರಿಸಿ, ವಿಷಯವನ್ನು ನಿರೂಪಿಸಿ, ವಿಶ್ಲೇಷಿಸಿ, ವಿಮರ್ಶಿಸಿ ವ್ಯವಸ್ಥಿತವಾಗಿ ಬರೆಯಿರಿ.
5) ಪ್ರಬಂಧ ಬರೆದು ಮುಗಿಸಿದ ಮೇಲೆ ಕೆಲಹೊತ್ತು ಬಿಟ್ಟು ಮತ್ತೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಯಾವುದಾದರೂ ವಾಕ್ಯಗಳು, ಶಬ್ದಗಳು ಇಲ್ಲದಿದ್ದರೂ ಪ್ರಬಂಧದ ಅರ್ಥಕ್ಕೆ ಅಥವಾ ತೂಕಕ್ಕೆ ತೊಂದರೆಯಾಗುವುದಿಲ್ಲ ಎನಿಸಿದರೆ ತೆಗೆದು ಹಾಕಿ. ಬಳಸಿದ ಶಬ್ದ/ವಾಕ್ಯಕ್ಕೆ ಬದಲಾಗಿ ಮತ್ತೆ ಯಾವ ಶಬ್ದ/ವಾಕ್ಯ ಬಳಸಿದರೆ, ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಚಿಂತಿಸಿ ಸೇರ್ಪಡೆಗೊಳಿಸಿ. ಹೀಗೆ ಒಂದು ಪ್ರಬಂಧವನ್ನು 2-3 ಬಾರಿ ಮತ್ತೆ ಮತ್ತೆ ಬರೆಯಿರಿ.
6) ಪ್ರಬಂಧದಲ್ಲಿ ಬಳಸುವ ಭಾಷೆಗ ಬಹಳ ಪ್ರಾಮುಖ್ಯತೆ ಇದೆ. ಕೆಳಮಟ್ಟದ ಪದಗಳು, ಅಶ್ಲೀಲ ಪದಗಳು, ದ್ವಂದಾರ್ಥ ಪದಗಳು, ಅಸಾಂವಿಧಾನಿಕ ಪದಗಳನ್ನು ಬಳಸುವಂತಿಲ್ಲ. ಭಾವತೀವ್ರತೆಯಿಂದ ಬರೆಯಬಾರದು. ಟೀಕೆ ಮಾಡುವುದಾದರೆ ಮೃದುವಾಗಿ ಮಾಡಬೇಕು.

       ಮಾದರಿ ಪ್ರಬಂಧಗಳ ಅಧ್ಯಯನಕ್ಕಾಗಿ ಗುಣಮಟ್ಟದ ಪುಸ್ತಕಗಳನ್ನು ಓದಿ. ಉದಾ: ಚಾಣಕ್ಯ ಪ್ರಕಾಶನದ ಅರವಿಂದ ಚೊಕ್ಕಾಡಿಯವರ ಪಿ.ಎಸ್.ಐ. ಪ್ರಬಂಧಗಳು, ಕ್ಲಾಸಿಕ್ ಸ್ಟಡಿ ಸರ್ಕಲ್^ನ ಪ್ರಬಂಧಗಳ ಪುಸ್ತಕ, ಸ್ಪರ್ಧಾ ವಿಜೇತ, ಸ್ಪರ್ಧಾ ಚೈತ್ರ ಹಾಗೂ ಇನ್ನಿತರ ಸಂಸ್ಥೆಗಳ ಪುಸ್ತಕಗಳನ್ನು ಪರಾಮರ್ಶಿಸಬಹುದು.

         ಎಲ್ಲಕ್ಕಿಂತ ಮುಖ್ಯವಾಗಿ ಉಳಿದವರೆಲ್ಲರಿಗಿಂತ ಪರಿಣಾಮಕಾರಿಯಾಗಿ ಪ್ರಬಂಧ ಬರೆಯಬಲ್ಲೆ, ವಿಷಯ ನಿರೂಪಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಇಂಥ ಆತ್ಮವಿಶ್ವಾಸಕ್ಕಾಗಿ ಗಳಿಸುವುದಕ್ಕಾಗಿ ಸತತ ವಿಷಯ ಸಂಗ್ರಹ, ಅಧ್ಯಯನ ಅವಶ್ಯ ಹಾಗೂ ನಿರಂತರವಾಗಿ ಜ್ಞಾನಮುಖಿಯಾಗಿರಬೇಕು.

Friday, 16 September 2016

ಅವರು ಬದುಕಿದ್ದರೆ ಇಂದಿಗೆ ನೂರು ವರ್ಷ ತುಂಬುತ್ತಿತ್ತು


                   "ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ.. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ..." ಬೆಳ್ಳಂಬೆಳ್ಳಿಗೆ ಇಂಥದೊಂದು ಸುಪ್ರಭಾತ ಎಲ್ಲ ಹಿಂದೂಗಳ ಪ್ರತಿ ಮನೆಮನೆಗಳಲ್ಲಿಯೂ ಮೊಳಗುತ್ತಿರುತ್ತದೆ. ಬಹುಶಃ ಈ ಶ್ಲೋಕಕ್ಕೆ ಗಾನಮಾಧುರ್ಯ ತುಂಬಿ ಭಾರತದಾದ್ಯಂತ ಪ್ರಸರಿಸುವಂತೆ ಮಾಡಿದ ಆ ಮಹಾನ್ ಗಾಯಕಿ  ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ. ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪಡೆದ ಮೊದಲ ಮಹಿಳೆ ಎಂ.ಎಸ್.ಎಸ್.

                1916ರ ಸೆಪ್ಟೆಂಬರ್ 16ರಂದು ಮಧುರೈನಲ್ಲಿ ಜನಿಸಿದ ಸುಬ್ಬುಲಕ್ಷ್ಮಿಯವರು ಸಂಗೀತದ ಮನೆತನದ ಹಿನ್ನೆಲೆಯಿಂದ ಬಂದವರು. ಕಾರ್ನಟಿಕ ಸಂಗೀತದಲ್ಲಿ ತಮ್ಮ ಸಂಗೀತಾಭ್ಯಾಸ ಆರಂಭಿಸಿದ ಅವರು ಬದುಕಿರುವಾಗಲೇ ದಂತಕಥೆಯಾದವರು. ಏಷ್ಯಾದ ನೊಬೆಲ್ ಎಂದೇ ಖ್ಯಾತವಾದ ‘ರಾಮನ್ ಮ್ಯಾಗ್ಸೆಸೆ’ ಪ್ರಶಸ್ತಿ ಪಡೆದ ಮೊದಲ ಸಂಗೀತ ವಿದುಷಿಯಾದ ಇವರು 2004ರ ಡಿಸೆಂಬರ್ 11 ರಂದು ತಮ್ಮ 88ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ತೆರಳಿದರು ಆದಾಗ್ಯೂ ಅವರು ಹಾಡಿದ ಸಾವಿರಾರು ಹಾಡುಗಳಿಂದ ಭಾರತೀಯರ ಹೃದಯ ನಿವಾಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಅವರು ಬದುಕಿದ್ದರೆ ಇಂದಿಗೆ 100 ವರ್ಷ ತುಂಬುತ್ತಿತ್ತು. ಸ್ವರ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಜನ್ಮಶತಮಾನೋತ್ಸವದ ಹಾರ್ದಿಕ ಶುಭಾಶಯಗಳು.

Thursday, 1 September 2016

ಸ್ತಬ್ಧವಾದ ಸೌಂಡ್ ಮಾಸ್ಟರ್

ಸ್ತಬ್ಧವಾದ ಸೌಂಡ್ ಮಾಸ್ಟರ್ 

(ಸಂಗ್ರಹ) ಗುರುಪ್ರಸಾದ್ ಎಚ್

                               1929ರ ನವೆಂಬರ್ ತಿಂಗಳ ಪ್ರಾರಂಭ. ಅಮೆರಿಕದ ಇತಿಹಾಸದಲ್ಲಿಯೇ ಕರಾಳವಾದ ಷೇರು ಕುಸಿತ ಎಂಬ ಎಂಟು ಕಾಲಮ್ಮಿನ ಸುದ್ದಿ ಬಂದಾಗ, ಗೋಪಾಲ್ ಬೋಸ್ ಭೂಮಿಗಿಳಿದು ಹೋದರು. ಒಂಬತ್ತು ವರ್ಷದ ಹಿಂದೆ, ಜೈಲಿಗೆ ತಳ್ಳಲು ಬಂದ ಬ್ರಿಟಿಷರ ಕೈಯಿಂದ ತಪ್ಪಿಸಿಕೊಂಡು ಕಲಕತ್ತೆಯಿಂದ ಹಡಗಿನಲ್ಲಿ ಅಡಗಿ ಕೂತು ಅಮೆರಿಕದ ಹೊಸ ನೆಲಕ್ಕೆ ಬಂದಿದ್ದ ಬೋಸ್, ಆ ಒಂದು ದಶಕದಲ್ಲಿ ಮಾಡಿದ ಬ್ಯುಸಿನೆಸ್ಸುಗಳೆಷ್ಟೋ ಪಟ್ಟ ಪಡಿಪಾಟಲೆಷ್ಟೋ! ಕೈಯಲ್ಲಿದ್ದ ಪುಡಿಗಾಸನ್ನೆಲ್ಲ ಷೇರು ಮಾರ್ಕೆಟ್ಟಿನಲ್ಲಿ ಅದೃಷ್ಟ ಪರೀಕ್ಷೆಗೆ ಹೂಡಿದ್ದ ಬೋಸ್‍ಗೆ, ದಿನ ಬೆಳಗಾಗುವದರೊಳಗೆ, ಇಡೀ ಷೇರು ಮಾರುಕಟ್ಟೆಯೇ ಕ್ರ್ಯಾಷ್ ಆಗಿ ಕಂಪೆನಿಗಳೆಲ್ಲ ಮಂಗಮಾಯವಾದಾಗ ಹೃದಯವೇ ಬಾಯಿಗೆ ಬಂತು. ಅದಾಗಷ್ಟೇ ಮಗನನ್ನು ಹೆತ್ತ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಮಲಗಿಸಿ ಬೋಸ್ ಸಾಲ ಎತ್ತಲು ಹೋದರು. ಕೊನೆಗೂ ಎಪ್ಪತ್ತೈದು ಡಾಲರನ್ನು ಹೇಗೋ ಸಂಪಾದಿಸಿ, ಆಸ್ಪತ್ರೆಗೆ ಕಟ್ಟಿದ ಮೇಲಷ್ಟೇ, ಮಗುವನ್ನೂ ಹೆಂಡತಿಯನ್ನೂ ಅಲ್ಲಿಂದ ಬಿಡಿಸಿ ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಾದದ್ದು! ಹುಟ್ಟಿದ ದಿನವೇ ಹೀಗೆ ಅಪ್ಪನನ್ನು ಇಷ್ಟೊಂದು ಓಡಾಡಿಸಿ ಸತಾಯಿಸಿದ ಕಿಲಾಡಿ ಹುಡುಗನೇ - ಜಗತ್ತಿಗೆಲ್ಲ ಹೊಸ ಬಗೆಯ ಸೌಂಡ್ ಸಿಸ್ಟಮನ್ನು ಪರಿಚಯಿಸಿ ಅಪ್ಪನ ನಾಮಾಂಕಿತವನ್ನು ಅಜರಾಮರವಾಗಿಸಿ ಬಿಲಿಯಾಧೀಶನಾಗಿ ತೀರಿಕೊಂಡ ಅಮರ ಗೋಪಾಲ ಬೋಸ್!

  ಕಲಕತ್ತಾ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಕಲಿಯುತ್ತಿದ್ದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗೋಪಾಲ್ ಬೋಸ್‍ಗೆ ಅಂತಿಮ ಪರೀಕ್ಷೆಗೆ ಎರಡು ವಾರ ಇರುವಾಗ ಬ್ರಿಟಿಷರು ತನ್ನನ್ನು ಯಾವ ಕ್ಷಣದಲ್ಲಾದರೂ ಬಂಧಿಸಿ ಹೊತ್ತೊಯ್ಯಲು ತಯಾರಾಗಿದ್ದಾರೆ ಎನ್ನುವ ಗುಪ್ತ ಮಾಹಿತಿ ಸಿಕ್ಕಿತು. ಕೈಯಲ್ಲಿ ಕೇವಲ ಐದು ರೂಪಾಯಿ ಹಿಡಿದುಕೊಂಡು ಬಾಂಗ್ಲಾ ಬಂದರನ್ನು ಬಿಟ್ಟ ಹಡಗಿನಲ್ಲಿ ನುಸುಳಿದಾಗ, ಅವರಿಗೆ ಅದೆಲ್ಲಿ ಹೋಗುತ್ತದೆಂದೂ ಗೊತ್ತಿರಲಿಲ್ಲ! ಹಡಗು ಹಲವಾರು ವಾರಗಳ ತರುವಾಯ ಅಮೆರಿಕ ತಲುಪಿದಾಗ, ಎಂತಹ ಪರಿಸ್ಥಿತಿಗೂ ಎದೆಯೊಡ್ಡಿ ನಿಲ್ಲುವ ಸ್ಥೈರ್ಯ ಬೆಳೆಸಿಕೊಂಡಿದ್ದ ಬೋಸ್, ಅಲ್ಲಿ ತನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಮುಂದಾದರು. ಅದಾಗಲೇ ಅಮೆರಿಕ ಸೇರಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಡಾ|| ತಾರಕನಾಥ ದಾಸರ ಕ್ರಾಂತಿಕಾರಿಗಳ ಗುಂಪು ಸೇರಿಕೊಂಡರು. ಭಗವದ್ಗೀತೆ, ವೇದಾಂತ, ಉಪನಿಷತ್ತುಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದ, ಭಾರತೀಯರಿಗಿಂತ ಹೆಚ್ಚು ಭಾರತೀಯರಾಗಿದ್ದ ಅಮೆರಿಕನ್ ಸ್ಕೂಲ್ ಟೀಚರ್ ಒಬ್ಬಳನ್ನು ಪ್ರೀತಿಸಿ ಮದುವೆಯಾದರು. ಇವರಿಬ್ಬರ ಪ್ರೇಮದ ಫಲವಾಗಿ ಹುಟ್ಟಿದ ಕೂಸೆ ಅಮರ್ ಬೋಸ್.


      ಗೋಪಾಲ ಬೋಸ್ ಅವರ ಮನೆ ಆ ಕಾಲಕ್ಕೆ ಕ್ರಾಂತಿಕಾರಿಗಳ ಕಾಶಿ. ಜಲಿಯನ್ ವಾಲಾಬಾಗ್‍ನ ಹತ್ಯಾಕಾಂಡದಲ್ಲಿ ಅದು ಹೇಗೋ ಪವಾಡಸದೃಶ್ಯರಾಗಿ ಪಾರಾಗಿ ಬಂದವರು, ಬೋಸರೆದುರು ಕೂತು ಅಲ್ಲಿನ ದುರಂತದ ಕಥೆಗಳನ್ನು ವಿವರಿಸುತ್ತಿದ್ದರೆ, ಹುಡುಗ ಅಮರ್, ಅವುಗಳನ್ನು ತನ್ಮಯನಾಗಿ ಕೇಳುತ್ತಿದ್ದ. ವಾರಕ್ಕೊಮ್ಮೆ ತಾಯಿ ಮಾಡುವ ವೇದಾಂತದ ಉಪನ್ಯಾಸಗಳನ್ನು ಧ್ಯಾನಸ್ಥನಾಗಿ ಕೇಳಿಸಿಕೊಳ್ಳುತ್ತಿದ್ದ. ಏಳನೆಯ ವಯಸ್ಸಿಗೆ ಪಿಟೀಲಿನ ಹುಚ್ಚು ಹತ್ತಿಕೊಂಡಿತು. ಹದಿಮೂರು ತುಂಬುವ ಹೊತ್ತಿಗೆ, ಯಾವುದೇ ಇಲೆಕ್ಟ್ರಾನಿಕ್ ಉಪಕರಣ ಸಿಕ್ಕರೂ ಅದನ್ನು ತಕ್ಷಣ ಬಿಚ್ಚಿ ಅಂಗಡಿ ಇಟ್ಟು ಮತ್ತೆ ಯಥಾಸ್ಥಿತಿಗೆ ಜೋಡಿಸುವ ಕೌಶಲ ಕೈಹಿಡಿಯಿತು. ಹದಿನೈದರ ಎಳೆವೆಯಲ್ಲೇ ಈ ಮರಿಬೋಸ್ ಓಣಿಓಣಿಗಳಲ್ಲಿ ಓಡಾಡಿ ಯಾರ್‍ಯಾರ ಮನೆಯಲ್ಲಿ ರೇಡಿಯೋ ಕೆಟ್ಟಿದೆಯೋ ಅವೆಲ್ಲವನ್ನೂ ಸರಿಮಾಡಿಕೊಟ್ಟು ಚಿಲ್ಲರೆ ಡಾಲರ್ ಸಂಪಾದಿಸಲು ಆರಂಭಿಸಿದ! "ಅಪ್ಪ, ನನಗೆ ಗೊಂಬೆ ತಂದುಕೊಡುವಷ್ಟು ಆರ್ಥಿಕ ಶಕ್ತಿ ನಿನಗಿಲ್ಲವೆಂದು ಬಲ್ಲೆ. ನನ್ನ ಆಟಿಕೆ ನಾನೇ ಮಾಡಿಕೊಳ್ಳುತ್ತೇನೆ!" ಎಂದು ತಂದೆಗೆ ಸಮಾಧಾನ ಹೇಳಿ, ಗರಾಜಿನಲ್ಲಿ ಮುರಿದುಬಿದ್ದ ಚಿಕ್ಕಪುಟ್ಟ ಸಾಮಾನುಗಳನ್ನೇ ಜೋಡಿಸಿ ಆಟಿಕೆಗಳನ್ನು ಮಾಡಿಕೊಂಡ! ಅವನ ಕೈಯಲ್ಲಿ ರೂಪುಗೊಂಡ ಆಟಿಕೆರೈಲು ಕೀಲಿಕೊಟ್ಟರೆ ಹತ್ತಡಿ ದೂರಕ್ಕೆ ಚಲಿಸುತ್ತಿತ್ತು!

   ಮಗನ ಪ್ರತಿಭೆ ಹೀಗೆ ಹದಿಹರೆಯದ ಶುರುವಾತಿನಲ್ಲೇ ಜ್ವಾಜಲ್ಯಮಾನವಾಗಿ ಉರಿಯುವುದನ್ನು ಕಂಡ ಅಪ್ಪನಿಗೆ, ಹೇಗಾದರೂ ಮಾಡಿ ಮಗನನ್ನು ದೊಡ್ಡ ಶಿಕ್ಷಣ ಸಂಸ್ಥೆಗೇ ಸೇರಿಸಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ಹತ್ತು ಸಾವಿರ ಡಾಲರುಗಳ ಸಾಲಸೋಲ ಮಾಡಿ, ಅಂತು ಮಗನನ್ನು ಆಗಿನ (ಮತ್ತು ಈಗಲೂ) ಪ್ರತಿಷ್ಠಿತ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆ (ಎಮ್‍ಐಟಿ)ಗೆ ಸೇರಿಸಿದರು. ಎರಡೇ ಎರಡು ವರ್ಷ ಕಲಿತು ಅಲ್ಲಿಂದ ಹೊರಬರುತ್ತೇನೆ ಎಂದುಕೊಂಡು ಹೋದ ಅಮರ್, ಅಲ್ಲಿ ಮುಂದೆ ಡಿಗ್ರಿಯ ಮೇಲೆ ಡಿಗ್ರಿ ಸಂಪಾದಿಸಿ ಬರೋಬ್ಬರಿ ನಲವತ್ತೈದು ವರ್ಷ ಪ್ರಾಧ್ಯಾಪಕರಾಗಿ ದುಡಿದು ತನ್ನ ಜೀವಿತದ ಮೂರನೇ ಎರಡರಷ್ಟನ್ನು ಅಲ್ಲೇ ಸಾರ್ಥಕವಾಗಿ ಕಳೆದದ್ದು ಮಾತ್ರ ಅವರ ಬದುಕಿನ ಬಹುದೊಡ್ಡ ಮಧುರ ಆಕಸ್ಮಿಕ. ಬಾಲ್ಯದಲ್ಲೇ ಬೆಳೆಸಿಕೊಂಡ ಎಲೆಕ್ಟ್ರಿಕಲ್ ಮತ್ತು ಶ್ರವ್ಯ ತಂತ್ರಜ್ಞಾನದ ಮೋಹ ಬೋಸರನ್ನು ಸಾಯುವ ಕೊನೆಗಳಿಗೆಯವರೆಗೂ ಬಿಟ್ಟು ಹೋಗಲಿಲ್ಲ.

         ಎಮ್‍ಐಟಿಯಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿದ ತಕ್ಷಣ ಬೋಸ್‍ಗೆ ಫುಲ್‍ಬ್ರೈಟ್ ಸ್ಕಾಲರಶಿಪ್ ಸಿಕ್ಕಿತು. ಬಾಲ್ಯದಿಂದಲೂ ಭಾರತದ ಬಗ್ಗೆ ಅಪರಿಮಿತ ಸೆಳೆತ ಹೊಂದಿದ್ದ ಬೋಸ್‍ಗೆ ತನ್ನ ಪೂರ್ವಿಕರ ನೆಲಕ್ಕೆ ಬರಲು ಸ್ಕಾಲರಶಿಪ್ ಒಂದು ಒಳ್ಳೆಯ ನೆಪ ಒದಗಿಸಿತು. ಬೋಸ್ ದೆಹಲಿಗೆ ಬಂದು ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಒಂದು ವರ್ಷ ಸಂಶೋಧನ ವಿದ್ಯಾರ್ಥಿಯಾಗಿ ಅಧ್ಯಯನ, ಕೆಲಸ ಮಾಡಿದರು. ದೆಹಲಿಗೆ ಬರುವುದಕ್ಕಿಂತ ಮುಂಚೆ ಒಂದು ತಿಂಗಳ ರಜೆಯ ಮಜಾ ಅನುಭವಿಸುತ್ತಿದ್ದಾಗ, ಬೋಸ್ ಮಾಡದ ಪ್ರಯೋಗವೇ ಇರಲಿಲ್ಲ. ಸ್ವತಃ ಒಳ್ಳೆಯ ವಯೊಲಿನ್ ವಾದಕರಾದ ಅವರು ತನ್ನ ಸಂಗೀತವನ್ನು ರೆಕಾರ್ಡ್ ಮಾಡಲು ಒಂದು ದುಬಾರಿ ರೆಕಾರ್ಡನ್ನು ಖರೀದಿಸಿದರು. ಆದರೆ, ಅದರಲ್ಲಿ ದಾಖಲಾದ ಶಬ್ದದ ಗುಣಮಟ್ಟ ಮಾತ್ರ ಅವರನ್ನು ತೀವ್ರ ನಿರಾಶೆಗೊಳಿಸಿತ್ತು. ತನ್ನ ನಿರೀಕ್ಷೆಗೆ ಹತ್ತನೇ ಒಂದರಷ್ಟೂ ಹತ್ತಿರವಿಲ್ಲದಿದ್ದ ಆ ರೆಕಾರ್ಡರನ್ನು ಕೋಪ ಮತ್ತು ಹತಾಶೆಯ ಭರದಲ್ಲಿ ಬೋಸ್ ಎಸೆದೇಬಿಟ್ಟಿದ್ದರು! ಆದರೆ, ಅಂತಹುದೇ - ಆದರೆ ಜಗತ್ತಿನಲ್ಲಿ ಇದುವರೆಗೆ ಯಾರೂ ಮಾಡಿರದಿದ್ದ ರೆಕಾರ್ಡಿಂಗ್ ವ್ಯವಸ್ಥೆಯನ್ನು ನಾನೇಕೆ ರಚಿಸಬಾರದು ಎಂಬ ಗುಂಗಿಹುಳ ಮಾತ್ರ ಮೆದುಳನ್ನು ಸದಾ ಕೊರೆಯುತ್ತಲೇ ಇತ್ತು. ದೆಹಲಿಯಲ್ಲಿರುವಾಗಲು ಈ ಚಿಂತನೆ ನಡೆದೇ ಇತ್ತು.

  ಕೆಲಸದೊತ್ತಡ ಮಧ್ಯೆ ಒಂದೆರಡು ವಾರ ಬ್ರೇಕ್ ತೆಗೆದುಕೊಂಡ ಬೋಸ್ ಸುತ್ತಾಡಲೆಂದು ಬೆಂಗಳೂರಿಗೆ ಬಂದರು. ಬಂಗಾಳಿಯಾದ್ದರಿಂದ ಸಹಜ ಕುತೂಹಲದಿಂದ ಇಲ್ಲಿನ ರಾಮಕೃಷ್ಣ ಮಠಕ್ಕೆ ಭೇಟಿ ಕೊಟ್ಟರು. ಆಗ, ಅಲ್ಲಿನ ಸ್ವಾಮೀಜಿಯೊಬ್ಬರ ಜೊತೆ ನಡೆದ ಅರ್ಧತಾಸಿನ ಮಾತುಕತೆ ಬೋಸರ ಜೀವನದ ಗತಿಯನ್ನೇ ಬದಲಿಸಿಬಿಟ್ಟಿತು! "ಎರಡು ಬಗೆಯ ಸಾಧಕರಿರುತ್ತಾರೆ. ತಾನು ಅಂದುಕೊಂಡದ್ದನ್ನು ತುಂಬ ಆಳವಾಗಿ ಯೋಚಿಸಿ, ನಿರಂತರ ಶೋಧಗಳನ್ನು ಮಾಡಿ ಕೊನೆಗೊಂದು ದಿನ ತನ್ನ ಸಾಧನೆಯನ್ನು ಜಗತ್ತಿಗೆ ತೋರಿಸುವವರು ಒಂದು ಬಗೆ. ಮಲಗಿದ್ದಾಗ, ನಡೆಯುವಾಗ, ಸ್ನಾನ ಮಾಡುವಾಗ - ಎಲ್ಲೆಂದರಲ್ಲಿ ಥಟ್ಟನೆ ಐಡಿಯಾ ಹೊಳೆದು, ಹಾಗೆ ಅಂತರ್ಬೋಧೆಯಿಂದ ಮಿಂಚಿ ಮಾಯವಾದ ಕನಸುಗಳನ್ನು ನನಸು ಮಾಡಲು ಮುನ್ನುಗ್ಗುವವರು ಇನ್ನೊಂದು ಬಗೆ. ಇವರಿಬ್ಬರೂ ಸಮಾನಶಕ್ತಿಯ ಸಾಧಕರೇ" ಎಂದು ಆ ಸ್ವಾಮೀಜಿ ಹೇಳಿದರಂತೆ. ನಿಂತಲ್ಲಿ ಕೂತಲ್ಲಿ ಹೊಸ ಐಡಿಯಾಗಳನ್ನು ಸೃಜಿಸುತ್ತಿದ್ದ, ಆದರೆ ಅಂತಹ ಐಡಿಯಾಗಳಿಗೆ ಆಯುಷ್ಯವಿಲ್ಲ ಎಂದೇ ಬಗೆದಿದ್ದ ಬೋಸರಿಗೆ ಸ್ವಾಮೀಜಿಯ ಮಾತಿನಿಂದ ಜ್ಞಾನೋದಯವಾಯಿತು. ತನ್ನ ಕನಸುಗಳನ್ನು ಬೆನ್ನಟ್ಟಿ ಸಾಕಾರಗೊಳಿಸಲು ಬೇಕಾದ ಸ್ಥೈರ್ಯ ಮತ್ತು ಚೈತನ್ಯ ಅವರಿಗಿಲ್ಲಿ ಸಿಕ್ಕಿತು. ಬೋಸ್ ಕಾರ್ಪೊರೇಷನ್ ಸ್ಥಾಪನೆಯಾಗಿಯೇಬಿಟ್ಟಿತು!

 ಯಾವುದೋ ಸಂಗತಿಯನ್ನು ವರ್ಷಾನುಗಟ್ಟಲೇ ಕೂತು ಯೋಚಿಸಿ ಫಲಿತಾಂಶ ಪಡೆಯುವುದು ಬೋಸ್ ಶೈಲಿಯಲ್ಲ. ಒಮ್ಮೆ ಫಿಲಡೆಲ್ಫಿಯಾದಿಂದ ಸ್ವಿಜರಲೆಂಡಿಗೆ ವಿಮಾನದಲ್ಲಿ ಹೋಗುತ್ತಿದ್ದಾಗ, ಅದರಲ್ಲಿ ಬಳಸುತ್ತಿದ್ದ ಹೆಡಫೋನ್ ಸಮರ್ಪಕವಾಗಿಲ್ಲ ಎಂದು ಅವರಿಗೆ ಅನ್ನಿಸಿತು. ವಿಮಾನದ ಹಾರಾಟದ  ಶಬ್ದವೆಲ್ಲ ಅಳಿಸಿ ಹೋಗಿ ಕೇವಲ ಸಂಗೀತವೊಂದೇ ತನ್ನ ಕಿವಿತುಂಬುವಂತಿದ್ದರೆ ಎಷ್ಟು ಚೆನ್ನಿತ್ತು! ಎಂದು ಯೋಚಿಸಿದ ಕ್ಷಣದಲ್ಲೇ Noise cancelling Headphone ಚಿಂತನೆ ಹುಟ್ಟಿತು. ಈ ಹೆಡ್‍ಫೋನ್‍ಗಳು ಹೊರಗಿನಿಂದ ಕಿವಿ ತೂರಲು ಯತ್ನಿಸುವ ಎಲ್ಲ ಇತರ ಗದ್ದಲವನ್ನೂ ಅಲ್ಲೇ ಕೊಂದುಹಾಕಿ ನಾವು ಕೇಳಬಯಸುವ ಸಂಗತಿಯನ್ನು ಮಾತ್ರವೇ ಕಿವಿಯೊಳಗೆ ಬಿಟ್ಟುಕೊಡುತ್ತವೆ! ಪ್ರಯಾಣ ಮುಗಿಸುತ್ತ ವಿಮಾನ ಭೂಸ್ಪರ್ಶ ಮಾಡುವ ಹೊತ್ತಿಗೆ, ಬೋಸ್ ಕೈಯಲ್ಲಿ ಆ ಉತ್ಪನ್ನದ ಡಿಸೈನ್ ತಯಾರಾಗಿಬಿಟ್ಟಿತು! 1994ರಲ್ಲಿ ಬೋಸರ ಕಂಪೆನಿ, ಅಡಿಷನರ್ ಎಂಬ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿತು. ಇನ್ನೂ ಕಟ್ಟಿಯೇ ಇಲ್ಲದ ಸಭಾಂಗಣದ ಮೂಲೆ ಮೂಲೆಗಳಲ್ಲಿ ಕೂತು, ಅಲ್ಲಿ ಕೇಳಿಸುವ ದನಿಯ ಮಟ್ಟ ಮತ್ತು ಗುಣಮಟ್ಟ ಯಾವ ಬಗೆಯದ್ದಾಗಿರುತ್ತದೆ ಎನ್ನುವದನ್ನು ಅತ್ಯಂತ ನಿಖರವಾಗಿ ಹೇಳುವ ತಂತ್ರಜ್ಞಾನ ಅದು! ಅಲ್ಲಿಂದೀಚೆಗೆ ಜಗತ್ತಿನಲ್ಲಿ ಕಟ್ಟಲ್ಪಟ್ಟ ಎಲ್ಲಾ ಸಭಾಂಗಣಗಳಲ್ಲೂ ‘ಆಡಿಷನರ್’ ಬಳಕೆಯಾಗಿದೆ.

     ಬೋಸರ ಹೆಸರನ್ನು ಶ್ರವ್ಯಪ್ರಪಂಚದಲ್ಲಿ ಚಿರಸ್ಥಾಯಿಗೊಳಿಸಿದ್ದು ಅವರು 1968ರಲ್ಲಿ ರೂಪಿಸಿದ 901 ಸ್ಪೀಕರ್. ಒಂದು ಸಂಗೀತ ಅಥವಾ ಭಾಷಣ ತುಂಬಾ ಚೆನ್ನಾಗಿ ಕೇಳಿಸಬೇಕು ಎಂದರೆ, ಅದನ್ನು ಧ್ವನಿವರ್ಧಕ ಆದಷ್ಟು ದೊಡ್ಡ ದನಿಯಲ್ಲಿ ಪ್ರೇಕ್ಷಕರಿಗೆ ತಲುಪಿಸಬೇಕು. ಹಾಗೆಯೇ, ಸ್ಪೀಕರ್ ಪೆಟ್ಟಿಗೆ ಕೇಳುಗನಿಗೆ ಆದಷ್ಟೂ ಹತ್ತಿರವಿರಬೇಕು ಎಂದೇ ಆಗಿನ ಕಂಪೆನಿಗಳು ತಿಳಿದಿದ್ದವು. ಒಂದು ಶಬ್ದವನ್ನು ಚೆನ್ನಾಗಿ ಕೇಳಲು ಸ್ಪೀಕರನ್ನು ನಿಮ್ಮಿಂದ ಆದಷ್ಟು ದೂರ ಹಿಡಿಯಿರಿ! - ಎಂದು ಹೇಳಿದ ಬೋಸರ ಬಗ್ಗೆ, ಆ ಕ್ಷೇತ್ರದಲ್ಲಿ ಇಡೀ ಪ್ರಪಂಚದಲ್ಲೇ ಪಾರುಪತ್ಯ ಸಾಧಿಸಿದ್ದ ಜಪಾನಿನ ಕಂಪೆನಿ, "ಇದೊಂದು ತಲೆಕೆಟ್ಟವನ ಪ್ರಲಾಪ" ಎಂದು ಪ್ರಚಾರ ಮಾಡಿತು! ಬೋಸ್ ವಿನ್ಯಾಸಗೊಳಿಸಿದ ಸ್ಪೀಕರ್‌ನಲ್ಲಿ ಕೇಳುಗನತ್ತ ಬರುತ್ತಿದ್ದ ಧ್ವನಿ ಕೇವಲ ಹತ್ತು ಶೇಕಡಾ ತೊಂಬತ್ತು! ಹೀಗೆ ಗೋಡೆಗೆ ಬಡಿದ ಧ್ವನಿತರಂಗಗಳು ಇನ್ನಷ್ಟು ಹೆಚ್ಚು ಶಕ್ತಿಯನ್ನು ಗಳಿಸಿಕೊಂಡು ಪ್ರಸಾರವಾಗುತ್ತವೆ ಎನ್ನುವುದನ್ನು ಬೋಸ್ ಶೋಧಿಸಿದ್ದರು! ಹಾಗಾಗಿ, ಬೋಸರ ಸ್ಪೀಕರ್, ಗುಣಮಟ್ಟದ ವಿಷಯದಲ್ಲಿ ಆಗ ಜಗತ್ತಿನ ನಂಬರ್ ಒಂದು ಆಗಿ ಮೆರೆಯುತ್ತಿದ್ದ ಉತ್ಪನ್ನಗಳನ್ನು ಸಾರಾಸಗಟಾಗಿ ಮೂಲೆಗೆ ತಳ್ಳಿತು! ಇಂದಿಗೂ ಧ್ವನಿವರ್ಧಕಗಳ ವಿಷಯದಲ್ಲಿ ಏಕಮೇವಾದ್ವಿತೀಯವಾಗಿ ಮೆರೆಯುತ್ತಿರುವ ಈ "ಪ್ರತಿಧ್ವನಿ ತಂತ್ರಜ್ಞಾನ"ಕ್ಕೆ ಸರಿಸಾಟಿಯಾಗಿ ಪೈಪೋಟಿ ಕೊಡಬಲ್ಲ ಬೇರೆ ಉತ್ಪನ್ನ ಬಂದಿಲ್ಲ!

    ವ್ಯಾಟಿಕನ್ನಿನ ಚರ್ಚಿನಲ್ಲಿ ಪೋಪರ ಸಂದೇಶವನ್ನು ಜಗತ್ತಿಗೆ ಕೇಳಿಸಲು, ಮೆಕ್ಕಾದ ಮಸೀದಿಯಲ್ಲಿ ಮುಲ್ಲಾರ ಪ್ರಾರ್ಥನೆಯನ್ನು ನೆರೆದ ಸಾವಿರಾರು ಜನರ ಕಿವಿಗೆ ತಲುಪಿಸಲು ಬಳಕೆಯಾಗುತ್ತಿರುವುದು ಬೋಸ್ ಕಂಪೆನಿಯ ಸ್ಪೀಕರ್‍ಏ ಜಗತ್ತಿನ ಅಷ್ಟೂ ಮರ್ಸಿಡಿಸ್ ಬೆಂಜ್, ಅಕ್ಯುರಾ, ಜಿಎಮ್‍ಸಿ, ನಿಸ್ಸಾನ್, ಮಾಜ್ದಾ, ಆಡಿ, ಕ್ಯಾಡಿಲಾಕ್, ಪೋರ್ಶ್, ಇನ್ಫಿನಿಟಿ ಕಾರುಗಳಲ್ಲಿ ಬಳಕೆಯಾಗುವ ಆಡಿಯೋ ಸಿಸ್ಟಮ್‍ಅನ್ನು ಅಭಿವೃದ್ಧಿಪಡಿಸಿದ್ದು ಬೋಸ್ ಸಾಹೇಬರೇ. ಆದರೆ, ಒಂದಾನೊಂದು ಕಾಲದಲ್ಲಿ ಜನರಲ್ ಮೋಟರ್ಸ್ ಕಂಪೆನಿಗೆ ಮೊತ್ತಮೊದಲ ಕಾರ್ ಸ್ಟಿರೀಯೋ ಮಾರುವ ಮುನ್ನ ಅಂತಹದೊಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಬೋಸ್ ಹದಿಮೂರು ಮಿಲಿಯ ಡಾಲರುಗಳನ್ನು ಖರ್ಚುಮಾಡಿದ್ದರು ಎನ್ನುವುದು ಯಾರಿಗೂ ತಿಳಿದಿರಲಿಕ್ಕಿಲ್ಲ. ಹಾಗೆಯೇ, ಗಗನಯಾತ್ರಿಗಳಿಗೆಂದು ಬೋಸ್ ವಿಶೇಷ ವಿನ್ಯಾಸದ ಹೆಡ್‍ಫೋನ್ ಅಭಿವೃದ್ಧಿಪಡಿಸದಿದ್ದರೆ, ಗಗನನೌಕೆಗಳಲ್ಲಿ ಪ್ರಯಾಣ ಮಾಡುವ ಅಷ್ಟೂ ಜನ, ಶಾಶ್ವತವಾಗಿ ಕಿವುಡರಾಗುವ ತೊಂದರೆಗೆ ಈಡಾಗಬೇಕಾಗಿತ್ತು! ಒಲಿಂಪಿಕ್ ಕ್ರೀಡೆಗಳಿಂದ ಹಿಡಿದು ಜಗದ್ವಿಖ್ಯಾತ ರಾಕ್ ಸಂಗೀತ ಪ್ರದರ್ಶನಗಳವರೆಗೆ, ಮೆಜೆಸ್ಟಿಕ್ ಥಿಯೇಟರುಗಳಿಂದ ಹಿಡಿದು ಹಾಲಿವುಡ್ಡಿನ ಅತ್ಯಾಧುನಿಕ ತಂತ್ರಜ್ಞಾನಗಳವರೆಗೆ, ನಾವು-ನೀವು ಬಳಸುವ ಪುಟ್ಟ ಸ್ಪೀಕರುಗಳಿಂದ ಹಿಡಿದು ಸಾವಿರಾರು ಜನ ಕೂರುವ ಆಡಿಟೋರಿಯಮ್ಮುಗಳ ಧ್ವನಿವ್ಯವಸ್ಥೆಯವರೆಗೆ - ಜಗತ್ತಿನಲ್ಲಿ "ಸೌಂಡ್" ಎಂದಾಗ ಕಣ್ಣೆದುರು ಬರುವ ಹೆಸರು - "ಬೋಸ್" ಒಂದೇ.

    ಇಷ್ಟೆಲ್ಲ ಆದರೂ ಬೋಸ್ ಧನದಾಹಿಯಾಗಿರಲಿಲ್ಲ. ಇಂದಿಗೂ ಪ್ರೈವೆಟ್ ಕಂಪೆನಿಯಾಗಿಯೇ ಉಳಿದಿರುವ ಬೋಸ್ ಕಂಪೆನಿಯ ಲಾಭವೆಲ್ಲವೂ ಸೌಂಡ್ ಇಂಜಿನಿಯರಿಂಗಿನಲ್ಲಿ ನಡೆಯುತ್ತಿರುವ ಸಾವಿರಾರು ಸಂಶೋಧನೆಗಳಿಗೆ ಹರಿದುಹೋಗುತ್ತದೆ. "ನಾವು ಷೇರು ಮಾರುಕಟ್ಟೆ ಪ್ರವೇಶಿಸಿಲ್ಲ. ಒಂದು ವೇಳೆ ಈ ಕಂಪೆನಿ ಪಬ್ಲಿಕ್ ಸೆಕ್ಟರ್ ಆದರೆ, ನಾವು ಯಾವ ಕ್ಷೇತ್ರದಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವುದನ್ನು ನಿರ್ದೇಶಿಸುವ ಹತ್ತಾರು ತಲೆಗಳು ಹುಟ್ಟಿಕೊಳ್ಳುತ್ತವೆ. ಸಂಶೋಧನೆಯ ಓನಾಮ ಗೊತ್ತಿಲ್ಲದವರೆಲ್ಲ ಬಂದು ನಮ್ಮ ಕೈಹಿಡಿದು ಸಿಕ್ಕ ಸಿಕ್ಕ ದಿಕ್ಕುಗಳಲ್ಲಿ ಎಳೆದಾಡತೊಡಗುತ್ತಾರೆ" ಎನ್ನುತ್ತಿದ್ದ ಬೋಸ್, ತನ್ನ ಕಂಪೆನಿಯ ಲಾಭದ ಬಹುದೊಡ್ಡ ಪಾಲನ್ನು ತನ್ನ ಮಾತೃಸಂಸ್ಥೆ ಎಮ್‍ಟಿಐಗೆ ದೇಣಿಗೆಯಾಗಿ ನೀಡಿದ್ದಾರೆ. "ನನಗಿರುವುದು ಒಂದೇ ಮನೆ, ಒಂದೇ ಕಾರು. ಅಷ್ಟರಲ್ಲಿ ನಾನು ತೃಪ್ತ. ಹೆಚ್ಚಿಗೆ ಏನನ್ನೂ ಅಪೇಕ್ಷಿಸಲಾರೆ" ಎನ್ನುತ್ತಿದ್ದ ಈ ಬಿಲಿಯಾಧೀಶ, ಹಲವಾರು ಸಲ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಸಂಗತಿಯನ್ನು ಅವರ ಜೊತೆ ವ್ಯವಹರಿಸಿದವರಿಗೂ ನಂಬುವುದಕ್ಕೆ ಕಷ್ಟವಾಗುತ್ತಿತ್ತು.

               ಬೋಸ್ - ತಾನೇ ಪ್ರಾರಂಭಿಸಿದ ’ಮನೋ-ಶ್ರವಣ ತಂತ್ರಜ್ಞಾನ" (Psycho Acoustics) ಎಂಬ ಹೊಸ ಜ್ಞಾನಶಾಖೆಯನ್ನು ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಎಮ್‍ಐಟಿಯಲ್ಲಿ ಬೋಧಿಸಿದರು. ಇಂದು ಆ ಸಂಸ್ಥೆಯ ಅತಿ ಜನಪ್ರಿಯ ಕೋರ್ಸುಗಳಲ್ಲಿ ಇದು ಕೂಡ ಒಂದು. "ಮುನ್ನೂರೈವತ್ತು ಜನ ಕೂತ ಸಭಾಂಗಣಕ್ಕೆ ಬಂದು ಬೋಸ್ ಶಬ್ದದ ಬಗ್ಗೆ ಪಾಥ ಮಾಡಲು ಶುರು ಮಾಡಿದರೆಂದರೆ, ಇಡೀ ಸಭಾಂಗಣ ಸ್ತಬ್ಧವಾಗಿ ಬಿಡುತ್ತಿತ್ತು!" ಎಂದು ಅವರ ಸಹೋದ್ಯೋಗಿಯಾಗಿದ್ದ ವಿಲಿಯಮ್ ಬ್ರಾಡಿ ನೆನಪಿಸಿಕೊಳ್ಳುತ್ತಾರೆ. ಅವರು ತನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಯದ ಮಿತಿ ಇಡುತ್ತಿರಲಿಲ್ಲ. ಸಾಮಾನ್ಯವಾಗಿ ಸಂಜೆ ಏಳುಗಂಟೆಗೆ ಶುರುವಾದ ಪರೀಕ್ಷೆ ಕೆಲವು ಸಲ ಮುಂಜಾನೆ ಐದು ಗಂಟೆಯವರೆಗೂ ಹೋಗುತ್ತಿತ್ತು! ಅಷ್ಟೂ ಹೊತ್ತು ಎಚ್ಚರವಿದ್ದು ಕೂತು ಬೋಸ್, ಪರೀಕ್ಷೆ ಬರೆಯುವವರಿಗೆ ಐಸಕ್ರೀಮ್ ಸಪ್ಲೈ ಮಾಡುತ್ತಿದ್ದರು!


  ಕೇವಲ ಶ್ರವಣ ಮಾತ್ರದಿಂದಲೇ ಶತ್ರುವನ್ನು ಪತ್ತೆಹಿಡಿದು ಬಾಣ ಹೊಡೆಯುತ್ತಿದ್ದ ಅರ್ಜುನನಂತೆ, ಶಬ್ದದ ಅನಂತ ಸಾಧ್ಯತೆಗಳನ್ನು ತೆಗೆದು ಶೋಧಿಸಿ ಅದರಿಂದಲೇ ಒಂದು ಸಾಮ್ರಾಜ್ಯ ಕಟ್ಟಿದ ಸವ್ಯಸಾಚಿ ಬೋಸ್, ಶುಕ್ರವಾರ, 2013ರ ಜುಲೈ 12ರಂದು ಮೆಸಾಚುಸೆಟ್ಸ್‍ನಲ್ಲಿ ಕೊನೆಯುಸಿರೆಳೆದರು. ಕಂದುಬಣ್ಣದ ಭಾರತೀಯರಿಗೆ ಹೋಟೆಲುಗಳಲ್ಲಿ ಊಟ ಕೊಡದೆ ಸತಾಯಿಸುತ್ತಿದ್ದ ಅಮೆರಿಕದ ದ್ವಿಮುಖನೀತಿಯ ಕಹಿಯುಂಡೂ ಆ ನೆಲದಲ್ಲೇ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿ ಭಾರತೀಯ ಹೆಸರನ್ನು ಚಿರಸ್ಥಾಯಿಗೊಳಿಸಿದ ಅಮರ್ ಬೋಸ್ ಇನ್ನು ನಿಶ್ಯಬ್ಧ.


- ರೋಹಿತ್ ಚಕ್ರತೀರ್ಥ