Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Saturday, 11 June 2016
ಸಮ್ಮೋಹನ ಅಂದರೇನು ?
Posted by
Guruprasad Hattigoudar
Mob: 9945479292
ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು.
ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ ಎನ್ನುವಂತೆ ಬಿಂಬಿಸುತ್ತಾನೋ, ಅದೇ ರೀತಿ ಸಮ್ಮೋಹನ ಕಲಿತವರೂ ಸಹ ತಮ್ಮ ಮೇಲರಿಮೆಯಿಂದಾಗಿ, ಅಥವಾ ತಮ್ಮ ವಿದ್ಯೆಗೆ ಇನ್ನಿಲ್ಲದ ಮಹತ್ವ ಸಿಕ್ಕು ತಮಗೆ ಹೆಚ್ಚಿನ ಗೌರವ ಸಿಗಲಿ ಎಂಬ ಕಾರಣಕ್ಕೆ ಸಮ್ಮೋಹನದ ಬಗ್ಗೆ ಇಲ್ಲ ಸಲ್ಲದ ಕಥೆ ಕಟ್ಟುವುದೂ ಇದೆ. ಇದರಿಂದಾಗಿ ಅದರ ಬಗ್ಗೆ ಅಷ್ಟೊಂದು ಅರಿವಿಲ್ಲದ ಸಾಮಾನ್ಯರು ಸಮ್ಮೋಹನವೆಂದರೆ ಭಯ ಬೀಳುವ, ಅದನ್ನು ಕಲಿತ ವ್ಯಕ್ತಿಗಳು ಏನು ಬೇಕಾದರೂ ಮಾಡಬಲ್ಲರು ಎಂದು ಆತಂಕ ಪಡುವಂತಾಗಿದೆ.
ಇದಕ್ಕೆಲ್ಲಾ ಕಾರಣ ಇದೊಂದು ವಿಶಿಷ್ಟ ಕಲೆಯಾಗಿದ್ದು ಎಲ್ಲರಿಂದಲೂ ಇದನ್ನು ಸುಲಭವಾಗಿ ಕಲಿಯಲು ಸಾಧ್ಯವಿಲ್ಲದಿರುವುದೇ ಆಗಿದೆ. ಆದರೆ ಎಲ್ಲಾ ಕಲೆಗಳೂ ಎಲ್ಲರಿಗೂ ಕಲಿಯಲು ಸಾಧ್ಯವಿಲ್ಲ ಅನ್ನುವ ವಾಸ್ತವವನ್ನು ಅರಿತುಕೊಂಡರೆ ಸಮ್ಮೋಹನದ ಬಗ್ಗೆ ಇರುವ ಮೂಢನಂಬಿಕೆ ಕಡಿಮೆಯಾಗುತ್ತದೆ. ಉದಾ : ನಾವು ಎಷ್ಟೇ ಜಾದೂ ಕಲಿತರೂ ಅದರಲ್ಲಿ ಕರಗತವಾದ ಜಾದೂಗಾರರಂತೆ ಜಾದೂ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ಕ್ರಿಕೆಟ್‌ನಲ್ಲಿ ಮಿಂಚಲು, ಹಾಕಿಯಲ್ಲಿ ವಿಜ್ರಂಭಿಸಲು ಸಾಧ್ಯವಿಲ್ಲ. ಎಷ್ಟೋ ಜನರಿಗೆ ವಾಹನ ಚಾಲನೆ ಕರಗತವಾಗುವುದೇ ಇಲ್ಲ. ಚಿತ್ರಕಲೆ ಕೆಲವರಿಗೆ ಮಾತ್ರ ಸಿದ್ದಿಸುವುದು. ಅಷ್ಟೇಕೆ ನುರಿತ ಕುಂಬಾರನಂತೆ ನಾವು ಮಡಿಕೆ ಮಾಡಲು ಸಾಧ್ಯವೇ ? ಅವರವರ ಸಾಮರ್ಥ್ಯ ಅವರವರಿಗೆ ತಾನೆ ? ಅದೇ ರೀತಿ ಸಮ್ಮೋಹನವೂ ಒಂದು ಕಲೆಯಾಗಿದ್ದು ಅದು ಎಲ್ಲರಿಗೂ ಕಲಿಯಲು ಸಾಧ್ಯವಿಲ್ಲ ಅಂದಾಕ್ಷಣ ಅದೇನೂ ಬ್ರಹ್ಮವಿದ್ಯೆ ಆಗಲು ಸಾಧ್ಯವೇ ಇಲ್ಲ. ನಿಶ್ಚಿತವಾಗಿ ಅದೊಂದು ವೈಜ್ಞಾನಿಕ ವಿಷಯ. ಯಾವುದೇ ಶಕ್ತಿಯ, ಭೂತ - ಪ್ರೇತದ ಪ್ರಭಾವದಿಂದ ಸಮ್ಮೋಹನ ಕಲಿಯುವಂತಹುದೇನೂ ಅಲ್ಲ. ಮನಸ್ಸಿನ ಹತೋಟಿಯಿಂದ ದಕ್ಕಿಸಿಕೊಳ್ಳಬೇಕಾದ ಕಲೆ ಅಷ್ಟೇ.
ವೈಜ್ಞಾನಿಕವಾಗಿ ಸಮ್ಮೋಹನ ಹೇಗೆ ನಡೆಯುತ್ತದೆ ?
ಪ್ರತಿಯೊಬ್ಬರಲ್ಲೂ ಎರಡು ಮನಸ್ಸುಗಳಿರುತ್ತವೆ. 1. ಬಾಹ್ಯ ಮನಸ್ಸು, 2. ಸುಪ್ತ ಮನಸ್ಸು.
1. ಬಾಹ್ಯ ಮನಸ್ಸು : ಇದು ನಮಗೆಲ್ಲಾ ಅರಿವಿಗೆ ಬರುವ ನಮ್ಮ ಮನಸ್ಸು. ನಾವು ಯೋಚಿಸುವುದು ಇದರಲ್ಲೇ. ಕೋಪ, ತಾಪ, ದುಃಖ, ದುಮ್ಮಾನಗಳೆಲ್ಲಾ ಇದರಲ್ಲೇ ಮಾಡುತ್ತೇವೆ. ಸುಖ, ಸಂತೋಷಗಳೆಲ್ಲಾ ಈ ಮನಸ್ಸಿಗೇ ಬೇಕಾಗಿರುವುದು. ವಾಸ್ತವವಾಗಿ ನಾವು ನಿದ್ರಿಸುವುದು ಎಂದರೆ ಈ ಬಾಹ್ಯ ಮನಸ್ಸೇ ನಿದ್ರಿಸುವುದು.
2. ಸುಪ್ತ ಮನಸ್ಸು : ಇದು ನಮ್ಮ ಅನುಭವಕ್ಕೆ ಅಷ್ಟಾಗಿ ನಿಲುಕಲಾರದು. ಆದರೆ ನಮ್ಮ ಬಾಹ್ಯ ಮನಸ್ಸನ್ನು ಮತ್ತು ದೇಹವನ್ನು ನಮ್ಮ ಅನುಭವಕ್ಕೆ ಬಾರದೇನೇ, ಅನುಮತಿಯನ್ನೂ ಪಡೆಯದೇನೇ ನಿಯಂತ್ರಿಸುತ್ತಿರುತ್ತದೆ. ಉದಾ : ನಾವು ಏನೋ ಕೆಲಸ ಮಾಡುತ್ತಿರುವಾಗ ನಿಮ್ಮ ಮುಂಗೈಗೆ ಚೂರು ಬಿಸಿ ತಾಗಿತು ಅಂದುಕೊಳ್ಳಿ. ಆಗ ತಟ್ಟನೆ ಕೈ ಹಿಂತೆಗೆದುಕೊಳ್ಳುತ್ತೇವೆ. ಆ ಸಮಯದಲ್ಲಿ ಕಂಡಿತವಾಗಿ ನನ್ನ ಮುಂಗೈಗೆ ಬಿಸಿ ತಾಗುತ್ತಿದೆ, ಅದು ಸುಡುತ್ತದೇನೋ, ಕೈ ಹಿಂತೆಗೆದುಕೊಳ್ಳೋಣ ಎಂದು ಯಾರಾದರೂ ಯೋಚಿಸಿರುತ್ತಾರಾ? ಇಲ್ಲ. ನಾವು ಯೋಚಿಸುವ ಮುನ್ನವೇ ನಮ್ಮ ಸುಪ್ತ ಮನಸ್ಸು ಆ ಕೆಲಸವನ್ನು ಮಾಡಿಸಿರುತ್ತದೆ. ಅದೇ ಅದರ ಕೆಲಸ.
ಅದೇ ರೀತಿ ನಾವೊಂದು ತಪ್ಪಾದ ಕೆಲಸವನ್ನು ಮಾಡಲು ಹೊರಟಾಗಲೂ ಸಹ ಬೇಡ, ಸಿಕ್ಕಿ ಹಾಕಿಕೊಳ್ತೀಯ ಎಂದು ಎಚ್ಚರಿಸುವುದು ಇದೇ ಸುಪ್ತ ಮನಸ್ಸು. ಆದರೆ ಅದರ ಮಾತನ್ನು ಕೇಳದೇನೇ ನಾವು ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ರಾತ್ರಿ ಕಾಣುವ ಕನಸುಗಳು ಸುಪ್ತ ಮನಸ್ಸಿಗೆ ಉತ್ತಮ ಉದಾಹರಣೆ. ಬಾಹ್ಯ ಮನಸ್ಸು ಮಲಗಿರುವಾಗ ಸುಪ್ತ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಆದರೆ ಯಾವಾಗಲೂ ಅದು ನಿದ್ರಿಸುವುದಿಲ್ಲ. ಸದಾ ಬಾಹ್ಯ ಮನಸ್ಸಿನಿಂದ ಅದು ಸಂದೇಶಗಳನ್ನು ಸ್ವೀಕರಿಸುತ್ತಲೆ ಇರುತ್ತದೆ. ಹಾಗೆ ಸ್ವೀಕರಿಸಿದ ಸಂದೇಶಗಳ ಪ್ರತಿಫಲನವೇ ಕನಸುಗಳು. ನಾವು ದಿನವಿಡೀ ಸುಪ್ತ ಮನಸ್ಸಿಗೆ ಏನೇನು ಸಂದೇಶಗಳನ್ನು ನೀಡುತ್ತಾ ಹೋಗಿರುತ್ತವೋ ಅದೆಲ್ಲಾ ಕನಸಿನ ರೂಪದಲ್ಲಿ ಅದು ಮನನ ಮಾಡುತ್ತದೆ. ನಾವು ಸಂಕಷ್ಟದಲ್ಲಿದ್ದಾಗ ಕೆಟ್ಟ ಕನಸುಗಳು ಬೀಳುವುದು ಇದೇ ಕಾರಣಕ್ಕೇ.
ಆದರೆ ಬಾಹ್ಯ ಮನಸ್ಸಿನಂತೆ ಸುಪ್ತ ಮನಸ್ಸಿಗೆ ತರ್ಕ ಮಾಡುವ, ಪ್ರಶ್ನಿಸುವ ಗುಣವಿಲ್ಲ. ಬಾಹ್ಯ ಮನಸ್ಸು ನೀಡುವ ಆಜ್ಞೆಗಳನ್ನು ಪಾಲಿಸುತ್ತಾ ಹೋಗುತ್ತದೆ. ಇದನ್ನೇ ಸಮ್ಮೋಹನದಲ್ಲಿ ನಾವು ಉಪಯೋಗಿಸಿಕೊಳ್ಳುವುದು. ನಿಜವಾಗಿ ಸಮ್ಮೋಹನ ಏನೆಂದರೆ ಎದುರಿನ ವ್ಯಕ್ತಿಯ ಬಾಹ್ಯ ಮನಸ್ಸನ್ನು ನಿದ್ರೆಗೆ ಜಾರಿಸಿ ಆತನ ಸುಪ್ತ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಳ್ಳುವುದು. ಆ ಮೂಲಕ ಆತನು ಆ ಸಮಯದಲ್ಲಿ ನಾವು ಏನು ಹೇಳಿದರೂ ಕೇಳುವಂತೆ ಮಾಡುವುದು. ಸುಪ್ತ ಮನಸ್ಸಿಗೆ ತರ್ಕ, ಅಥವಾ ಪ್ರಶ್ನಿಸುವ ಗುಣವಿಲ್ಲವಾದ್ದರಿಂದ ನಮ್ಮ ಆಜ್ಞೆಯನ್ನು ಅದು ಪಾಲಿಸುತ್ತದೆ. ಇದು ಒಂದು ರೀತಿಯ ಸನ್ನಿ ಎಂದರೆ ತಪ್ಪಾಗಲಾರದು. ಬೇರೆಯವರು ಹೇಳಿದ್ದನ್ನೆ ನಂಬುವುದು. ತರ್ಕ ಮಾಡದಿರುವುದು ಅಂದರೆ ಇದೇನೇ. ಉದಾ : ಒಬ್ಬ ಸಮ್ಮೋಹನಗೊಂಡ ವ್ಯಕ್ತಿಗೆ ಈಗ ನಿನ್ನ ತಂದೆಯ ಕಪಾಳಕ್ಕೆ ಜೋರಾಗಿ ಬಾರಿಸುತ್ತೀಯ. ಎಂದು ಹೇಳಿದರೆ ಅವನು ಹಾಗೆಯೇ ಮಾಡುತ್ತಾನೆ. ಅದನ್ನು ಸಮ್ಮೋಹನಗೊಳ್ಳದ ವೇಳೆ ಮಾಡಿಸಲು ಸಾಧ್ಯವಿಲ್ಲ. ಏಕೆಂದರೆ ಬಾಹ್ಯ ಮನಸ್ಸು ತರ್ಕ ಮತ್ತು ಪ್ರಶ್ನಿಸುವ ಗುಣ ಹೊಂದಿದೆ. ಏನೇ ಇದ್ದರೂ ಅದರ ಸಾಧಕ ಬಾದಕಗಳನ್ನು ಅದು ವಿವೇಚಿಸುತ್ತದೆ. ಆದುದರಿಂದಲೇ ಸಮ್ಮೋಹಕರು ಅದನ್ನು ನಿದ್ರೆಗೆ ಜಾರುವಂತೆ ಮಾಡುತ್ತಾರೆ. ಸಮ್ಮೋಹನ ಎಂದರೆ ಇದೇನೆ.
ಎದುರಿನವರ ಸುಪ್ತ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ನಮಗೆ ಬೇಕಾದಂತಹ ಕೆಲಸಗಳನ್ನು ಮಾಡಿಸುತ್ತೇವೆಂಬುದೇನೋ ಸರಿ. ಆದರೆ ಆ ಸುಪ್ತ ಮನಸ್ಸಿನಲ್ಲೂ ಬೇರೂರಿರುವ ನಂಬಿಕೆಗಳಿಗೆ ಹೊಡೆತ ಕೊಟ್ಟು ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಉದಾ : ಎಂದೂ ಮಾಂಸಾಹಾರ ಮಾಡದ, ಅದರತ್ತ ಆಸಕ್ತಿಯನ್ನೇ ಹೊಂದಿರದ ವ್ಯಕ್ತಿಯನ್ನು ಸಮ್ಮೋಹನಗೊಳಿಸಿದರೂ ಮಾಂಸ ತಿನ್ನಿಸಲು ಸಾಧ್ಯವಿಲ್ಲ. ಏಕೆಂದರೆ ಅವನ ಸುಪ್ತ ಮನಸ್ಸಿನಲ್ಲೂ ಸಹ ಮಾಂಸಾಹರ ನಿಶಿದ್ಧ ಎಂಬ ನಂಬಿಕೆ ಬೇರೂರಿರುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಒತ್ತಾಯ ಮಾಡಿದರೆ ಸಮ್ಮೋಹನ ನಿದ್ರೆಯಿಂದ ಅವರು ಹೊರ ಬಂದು ಬಿಡುತ್ತಾರೆ.
ಸಮ್ಮೋಹನದಿಂದ ಏನು ಸಾಧ್ಯ ?
* ರಸ್ತೆಯಲ್ಲಿ ನಡೆದು ಹೋಗುತ್ತಿರುವ ವ್ಯಕ್ತಿಯ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ನಾವು ಯೋಚಿಸಿದಂತೆ ಒಂದು ಕೊಲೆಯನ್ನು ಬೇಕಾದರೂ ಮಾಡಿಸಬಹುದು.
* ಯಾವುದೋ ಹುಡುಗಿಯ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ಅವಳೇ ನಮ್ಮ ಬಳಿ ಬಂದು ಮುತ್ತು ಕೊಡುವಂತೆ ಮಾಡಬಹುದು.
* ಹೆಂಗಸೊಬ್ಬಳು ಅವಳು ಧರಿಸಿರುವ ಆಭರಣಗಳನ್ನೆಲ್ಲಾ ತಾನಾಗೆ ಕಳಚಿ ತಂದು ನಮಗೆ ಕೊಡುವಂತೆ ಮಾಡಬಹುದು.
- ಹೀಗೆಲ್ಲಾ ನೀವು ತಿಳಿದುಕೊಂಡಿದ್ದರೆ ಅದು ಕಂಡಿತಾ ತಪ್ಪು. ಇದೆಲ್ಲಾ ನಿಜವಾಗುವಂತಿದ್ದರೆ ಕಳ್ಳರು, ದರೋಡೆಗಾರರು, ರೇಪಿಸ್ಟ್‌ಗಳೆಲ್ಲಾ ಎಂದೋ ಸಮ್ಮೋಹನವನ್ನು ಕಲಿತುಕೊಂಡು ತಮ್ಮ ಕೆಲಸವನ್ನು ಸುಲಲಿತವನ್ನಾಗಿಸಿಕೊಂಡಿರುತ್ತಿದ್ದರು. ನಾನು ಸ್ವತಃ ಇದನ್ನು ಕಲಿತು ಸಾಕಷ್ಟು ಪ್ರಯೋಗ ನಡೆಸಿರುವೆನಾದ್ದರಿಂದ ಇದರ ಪರಿಮಿತಿಯ ಬಗ್ಗೆ ಅರಿವಿದೆ. ಎಲ್ಲೋ ಕಥೆ/ಕಾದಂಬರಿಗಳಲ್ಲಿ ಬರೆದಿರುವಂತೆ, ಅಥವಾ ಸಿನೆಮಾಗಳಲ್ಲಿ ತೋರಿಸಿರುವಂತೆ ಅಮೋಘ ಶಕ್ತಿಯೇನೂ ಸಮ್ಮೋಹನಕ್ಕೆ ಇಲ್ಲ. ಆದರೆ ಸಾಧಾರಣ ಬದುಕಿನಲ್ಲಿ ನಾವು ಊಹಿಸುವುದಕ್ಕಿಂತಲೂ ಅದ್ಬುತ ಶಕ್ತಿ ಮಾತ್ರ ಇದಕ್ಕೆ ಇರುವುದು ನಿಜ. ಆದರೆ ಅದನ್ನು ನಾವು ಅಂದುಕೊಂಡಂತೆಲ್ಲಾ ಬಳಸಲು ಸಾಧ್ಯವಿಲ್ಲ.
ವಾಸ್ತವವಾಗಿ ಏನೆಲ್ಲಾ ಸಾಧ್ಯ ?
ನಾನು ನಾಲ್ಕಾರು ವರ್ಷ ಸತತವಾಗಿ ಅಭ್ಯಾಸ ಮಾಡಿದ್ದರಿಂದ ಹಾಗೂ ಈ ವಿದ್ಯೆಯಲ್ಲಿ ನಿಷ್ಣಾತರಾದವರನ್ನು ಸಂಧಿಸಿದ್ದರಿಂದ ತಿಳಿದು ಬಂದ ವಿಷಯಗಳು ಹಲವಾರು.
* ಸಮ್ಮೋಹನದಿಂದ ಕೆಟ್ಟ ಚಟಗಳನ್ನು ಬಿಡಿಸಬಹುದು. ಆದರೆ ನಿರಂತರವಾಗಿ ಸಮ್ಮೋಹನಗೊಳಿಸುತ್ತಾ ಅವರಿಗೆ ನಿರ್ದೇಶನ ನೀಡಬೇಕಾಗುತ್ತದೆ. ಅದಕ್ಕೂ ಮೊದಲು ಅವರು ಸಮ್ಮೋಹನಕ್ಕೊಳಗಾಗಬೇಕು. ಸಾಧಾರಣವಾಗಿ ಕೆಟ್ಟ ಚಟಕ್ಕೆ ಬಲಿಯಾಗುವವರು ದುರ್ಭಲ ಮನಃಸ್ಥಿತಿಯವರೇ. ಇಂತವರನ್ನು ಸಮ್ಮೋಹನಗೊಳಿಸುವುದು ಕಷ್ಟಸಾಧ್ಯ. ಮನೋಬಲ ಧೃಡವಾಗಿರುವ , ಏಕಾಗ್ರತೆ ಇರುವವರೇ ಸಮ್ಮೋಹನಕ್ಕೆ ಯೋಗ್ಯರು.
* ಓದಿನಲ್ಲಿ ಆಸಕ್ತಿ ಇಲ್ಲದ ವಿದ್ಯಾರ್ಥಿಗೆ ಆಸಕ್ತಿ ಬರುವಂತೆ ಮಾಡಬಹುದು. ಇದಕ್ಕೂ ನಿರಂತರ ಸಮ್ಮೋಹನದ ಅಗತ್ಯ ಇದೆ.
* ಒಮ್ಮೆ ನಮಗೆ ಸಮ್ಮೋಹನಗೊಂಡ ವ್ಯಕ್ತಿ ಕಂಡಿತಾ ನಮ್ಮ ಹಿಡಿತದಲ್ಲಿ ಇರುತ್ತಾನೆ. ಆದರೆ ಅವನಿಂದ ಎಲ್ಲಾ ಕೆಲಸಗಳನ್ನೂ ಮಾಡಿಸಲು ಸಾಧ್ಯವಿಲ್ಲ. ಸಮ್ಮೋಹನಗೊಂಡಾಗಲೂ ಆತನ ಒಳ ಮನಸ್ಸು ಎಚ್ಚರವಾಗಿಯೇ ಇರುತ್ತದೆಯಾದ್ದರಿಂದ ಅವನ ಆಂತರ್ಯಕ್ಕೆ ಒಪ್ಪದ ಕೆಲಸವನ್ನು ಮಾಡಿಸಲು ಸಾಧ್ಯವಿಲ್ಲ. ಸಮ್ಮೋಹನಗೊಳಿಸಿದಾಗ ಹುಡುಗನಿಗೆ ನಿನ್ನ ಬಟ್ಟೆಗಳನ್ನು ತೆಗೆದು ಹಾಕು ಅಂದಾಗ ಅವನು ಹಾಗೆಯೇ ಮಾಡಬಹುದು. ಆದರೆ ಹುಡುಗಿಗೆ ಹಾಗೆ ಹೇಳಿದಾಗ ಅವಳು ಅದನ್ನು ತಿರಸ್ಕರಿಸುತ್ತಾಳೆ.
* ಸಮ್ಮೋಹನಗೊಂಡ ವ್ಯಕ್ತಿಯ ಪಂಚೇಂದ್ರಿಯಗಳು ಅವರ ಒಳ ಮನಸ್ಸಿನ ಸಂಪರ್ಕದಲ್ಲಿ ಇರುವುದಿಲ್ಲ. ಉದಾ : ಟಿ.ವಿ.ಯಲ್ಲಿ ಸಿನೆಮಾ ಬರುತ್ತಿದೆ, ಆದರೆ ಮ್ಯೂಟ್ ಮಾಡಲಾಗಿದೆ ಎಂದು ಆಜ್ಞಾಪಿಸಿದರೆ ಆತನಿಗೆ ಟಿವಿ ವ್ಯಾಲ್ಯೂಮ್ ಎಷ್ಟೇ ಇದ್ದರೂ ಯಾವ ಶಬ್ದವೂ ಕೇಳಿಸುವುದಿಲ್ಲ. ಅದೇ ರೀತಿ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದನ್ನು ತೋರಿಸಿ ನೋಡು ರಾಜ್‌ಕುಮಾರ್ ಅವರ ಮಯೂರ ಚಿತ್ರ ಬರುತ್ತಿದೆ ಎಂದರೆ, ಆತ ಹೌದು ಎಂದು ಕಣ್ಣರಳಿಸಿ ನೋಡುತ್ತಾನೆ. ಎಚ್ಚರಾದ ನಂತರ ನೀನು ಯಾವ ಚಿತ್ರ ನೋಡಿದೆ? ಎಂದು ಕೇಳಿದರೆ ಕಂಡಿತಾ ಅವನು ನಾನು ನೋಡಿದ್ದು ಮಯೂರ ಎಂದೇ ಹೇಳುತ್ತಾನೆ. ಈ ರೀತಿಯ ಎಷ್ಟು ಪ್ರಯೋಗಗಳನ್ನು ಬೇಕಾದರೂ ಮಾಡಬಹುದು.
* ಸಮ್ಮೋಹನಗೊಂಡಾಗ ಯಾರನ್ನೂ ಗುರುತು ಹಿಡಿಯಲು ಸಾಧ್ಯವಿಲ್ಲ ಎಂದು ನಿರ್ದೇಶಿಸಿದರೆ, ಆತನ ಎಷ್ಟೇ ಹತ್ತಿರದ ಸ್ನೇಹಿತರಂತಿರಲಿ, ತಂದೆ ತಾಯಿಯರನ್ನೂ ಗುರುತು ಹಿಡಿಯಲಾರ.
* ಸಮ್ಮೋಹನಗೊಳಿಸಿದಾಗ ನಿನಗೆ ಚಳಿಯಾಗುತ್ತದೆ ಎಂದರೆ ಎಷ್ಟೇ ಸೆಖೆ ಇದ್ದರೂ ನಡುಗಲಾರಂಬಿಸುತ್ತಾರೆ. ಹಾಗೆಯೇ ಸೆಖೆಯಾಗುತ್ತಿದೆ ಎಂದರೆ ಎಷ್ಟೇ ಚಳಿ ಇದ್ದರೂ ಸೆಖೆಯ ಅನುಭವ ಪಡೆಯುತ್ತಾರೆ.
* ನಾನೀಗ ಎಚ್ಚರಗೊಳಿಸುತ್ತೇನೆ, ಎಚ್ಚರಾದ ನಂತರ ನಿನಗೆ ಎದ್ದು ನಡೆದಾಡಲು ಸಾಧ್ಯವಿಲ್ಲ ಎಂದು ಹೇಳಿ ಸಮ್ಮೋಹನದಿಂದ ಎಬ್ಬಿಸಿದರೆ, ಎದ್ದ ನಂತರವೂ ಆತನಿಂದ ನಡೆದಾಡಲು ಸಾಧ್ಯವಾಗುವುದಿಲ್ಲ. ಕುಳಿತುಕೊಂಡೇ ಇರುತ್ತಾನೆ.
* ಖಾಲಿ ಹಾಳೆಯ ಪುಸ್ತಕದಲ್ಲಿ ಬಣ್ಣಬಣ್ಣದ ಚಿತ್ರಗಳಿವೆ ಎಂದು ಸಮ್ಮೋಹನದಲ್ಲಿ ತೋರಿಸಿದರೆ ನಂತರ ಎಚ್ಚರಾದ ನಂತರವೂ ಆತನಿಗೆ ಬಿಳಿ ಹಾಳೆಯಲ್ಲೂ ಬಣ್ಣಬಣ್ಣದ ಚಿತ್ರಗಳು ಕಾಣಿಸುತ್ತವೆ.
* ಸಮ್ಮೋಹನಗೊಂಡವರ ಮನಸ್ಸಿಗೆ ನೋವಾಗದಂತಹ, ಕೀಳಾಗಿ ನಡೆಸಿಕೊಳ್ಳದಂತಹ ಏನೇ ಕೆಲಸಗಳನ್ನಾದರೂ, ಹಾವ ಭಾವಗಳನ್ನಾದರೂ ಅವರಿಂದ ಮಾಡಿಸಬಹುದು. ಹಾಡು ಹೇಳಿಸಬಹುದು, ನೃತ್ಯ ಮಾಡಿಸಬಹುದು.
* ನಾನು ಮಾಡಿದ ಕುತೂಹಲಕಾರಿ ಪ್ರಯೋಗವೆಂದರೆ ಒಬ್ಬ ಹುಡುಗನನ್ನು ಸಮ್ಮೋಹನಗೊಳಿಸಿ ನೀನು ಈಗ ಎಚ್ಚರಾಗುತ್ತೀಯ, ಎಚ್ಚರಾದ ನಂತರ ನಿನಗೆ ಟೇಬಲ್ ಮೇಲಿರುವ ಪುಸ್ತಕ ಕಾಣಿಸುವುದಿಲ್ಲ. ಎಂದು ಹೇಳಿ ಎಬ್ಬಿಸಿದ್ದೆ. ಟೇಬಲ್ ಮೇಲೆ ಬೇರೇನೂ ವಸ್ತುಗಳಿಲ್ಲದೇ ಬರೇ ಒಂದು ಪುಸ್ತಕವನ್ನು ಮಾತ್ರ ಇಡಲಾಗಿತ್ತು. ಎಚ್ಚರಾದ ನಂತರ ಟೇಬಲ್ ಮೇಲಿರುವ ಪುಸ್ತಕ ಕೊಡು ಅಂದಾಗ ಅವನು ಟೇಬಲ್ ನೋಡಿ ಅಲ್ಲಿ ಏನೂ ಇಲ್ಲ ಅಂದ! ಇನ್ನೊಮ್ಮೆ ಸಮ್ಮೋಹನಗೊಳಿಸಿ ನಿನಗೆ ಎಚ್ಚರಾದ ನಂತರ ನಾವ್ಯಾರೂ ನಿನ್ನ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಹೇಳಿ ಎಬ್ಬಿಸಿದೆ. ಆಶ್ಚರ್ಯವೆಂದರೆ ಆ ಕೋಣೆಯಲ್ಲಿ ಮೂರ್ನಲ್ಕು ಜನರಿದ್ದರೂ ಸಹ ಅವನು ಯಾರನ್ನೂ ಕಂಡು ಹಿಡಿಯಲಾಗದೇ ಹುಡುಕತೊಡಗಿದ್ದ. ಎದುರಲ್ಲೇ ಹೋದರೂ ಸಹ ಅವನು ಗಮನಿಸಲಿಲ್ಲ. ಇಂತಹವನ್ನು ಮನೋರಂಜನೆಗಾಗಿ ಮಾತ್ರವೇ ಮಾಡಬೇಕು.
ಕಲಿಯುವುದು ಹೇಗೆ ?
ಕಂಡಿತಾ ಇದು ಸುಲಭವಲ್ಲ. ಹಾಗಂತ ಸಾಧ್ಯವೇ ಇಲ್ಲ ಎಂದೇನಲ್ಲ. ಆದರೆ ಕಲಿಯಲು ಅಪರಿಮಿತವಾದ ಸಹನೆ ಮತ್ತು ಸಮಯ, ಶ್ರದ್ಧೆ ಬೇಕಾಗುತ್ತದೆ. ಒಂದೆರಡು ದಿನಕ್ಕೆ, ತಿಂಗಳಿಗೆ ಕರಗತವಾಗುವ ಕಲೆಯಲ್ಲ ಇದು. ಮುಖ್ಯವಾಗಿ ಚೆನ್ನಾಗಿ ತಿಳಿದಿರುವ ವ್ಯಕ್ತಿಯ ಮಾರ್ಗದರ್ಶನ ಬೇಕೆ ಬೇಕಾಗುತ್ತದೆ. ಇಲ್ಲವೆಂದರೆ ನಾವು ಕಷ್ಟಕ್ಕೆ ಸಿಲುಕುವುದಲ್ಲದೇ ನಮ್ಮಿಂದ ಪ್ರಯೋಗಕ್ಕೊಳಗಾಗಿ ಬೇರೆಯವರಿಗೂ ತೊಂದರೆ ಆಗಬಹುದು.
ಏಕಾಗ್ರತೆಯೇ ಇದರ ಮುಖ್ಯ ಬಂಡವಾಳ. ಅದನ್ನು ಸಾಧಿಸಲು ಅನೇಕ ಕ್ರಮಗಳಿವೆ. ಅವುಗಳನ್ನು ಇಲ್ಲಿ ಸವಿವರವಾಗಿ ನೀಡಲು ಸ್ಥಳಾಭಾವ. ಹಾಗೂ ಹಾಗೆ ನೀಡಬೇಕೆಂದರೆ ದೊಡ್ಡದೊಂದು ಪುಸ್ತಕವನ್ನೇ ಬರೆಯಬೇಕಾದೀತು. ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಏಕಾಗ್ರತೆ ಗಳಿಸಲು ಕೆಲವೊಂದು ಪರಿಕರಗಳನ್ನು ಮಾಡಿಕೊಳ್ಳಬೇಕು. ಬಿಳಿಯ ಹಾಳೆಯ ಮಧ್ಯೆ ಚಿಕ್ಕದೊಂದು ಕಪ್ಪು ಚುಕ್ಕೆ ಇಟ್ಟು ಅದರ ಮೇಲೆ ಗಮನ ಇರಿಸಿ ಮನಸ್ಸಿನಲ್ಲಿ ಏನೂ ಯೋಚನೆ ಬಾರದಂತೆ ಬರೇ ಆ ಚುಕ್ಕೆ ಮಾತ್ರ ಇರುವಂತೆ ಮಾಡುವುದು ಒಂದು ವಿಧಾನ. ಇಂತಹ ಸಂದರ್ಭದಲ್ಲಿ ಕೆಲವು ದಿನಗಳು ಕಳೆದಂತೆ ನಮ್ಮ ದೇಹವನ್ನು ಏನೋ ಶಕ್ತಿ ಆವರಿಸಿಕೊಂಡಂತೆ ಭಾಸವಾಗುತ್ತದೆ. ಅದು ಬೇರೇನಲ್ಲ, ನಮ್ಮ ಸುಪ್ತ ಮನಸ್ಸು ಪ್ರಚೋದನೆಗೊಳಗಾಗಿ ನಮ್ಮ ಬಾಹ್ಯ ಮನಸ್ಸಿನೊಂದಿಗೆ ಬೆರೆಯುತ್ತಿರುವುದರ ಸಂಕೇತ.
ಇಂತಹ ಅಭ್ಯಾಸಗಳನ್ನು ಮುಂದುವರಿಸಿದಂತೆ 15-20 ನಿಮಿಷಗಳ ನಂತರ ಕಣ್ಣು ಮುಚ್ಚಿಕೊಳ್ಳಬೇಕು. ಆಗ ಏನೇನೋ ದೃಶ್ಯಗಳು ಗೋಚರಿಸುತ್ತವೆ. ಹಾಗೂ ಒಂದು ಸುಪ್ತ ನಿದ್ರೆಗೆ ಜಾರುತ್ತೇವೆ. ಪ್ರಾರಂಭದಲ್ಲಿ ಏನೇನೋ ಮಾತುಗಳು, ಧ್ವನಿಗಳು ಕೇಳಲಾರಂಭಿಸುತ್ತವೆ. ನಿದ್ರೆಯಿಂದ ಎಚ್ಚರಾದ ನಂತರ ನಮ್ಮ ದೇಹದ ಹಿಡಿತವೇ ಇರದಂತೆ ಭಾಸವಾಗುತ್ತದೆ. ಇದೆಲ್ಲಾ ನಾವು ಸರಿಯಾದ ಕ್ರಮದಲ್ಲಿ ಏಕಾಗ್ರತೆ ಪಡೆಯುತ್ತಿದ್ದೇವೆ ಎಂಬುದರ ಸಂಕೇತಗಳಾಗಿವೆ.
ಸ್ವ-ಸಮ್ಮೋಹನ
ಮೇಲೆ ತಿಳಿಸಿದ ಅಭ್ಯಾಸಗಳನ್ನು ಕನಿಷ್ಟ ಒಂದು ವರ್ಷವಾದರು ಮಾಡಿದ ನಂತರ ಸ್ವ-ಸಮ್ಮೋಹನಕ್ಕೆ ಇಳಿಯಬೇಕು. ಏಕಾಂತ ಸ್ಥಳದಲ್ಲಿ ಅಂಗಾತ ಮಲಗಿಕೊಂಡು ಕಣ್ಣು ಮುಚ್ಚಿ ನಿಮ್ಮ ಒಳ ಮನಸ್ಸಿಗೆ ಏನಾದರು ಆದೇಶ ನೀಡುತ್ತಾ ಹೋಗಿರಿ. ಉದಾ : ನನ್ನ ಬಲಗೈ ಎದೆಯ ಮೇಲೆ ಬರಬೇಕು ಎಂದಾಗಿರಬಹುದು. ಆದರೆ ನೀವಾಗೇ ಅದನ್ನು ಮಾಡಬಾರದು. ನೀವು ಸತತವಾಗಿ ನಿಮ್ಮ ಸುಪ್ತ ಮನಸ್ಸಿಗೆ ಆದೇಶ ನೀಡುತ್ತಾ ಹೋದಂತೆ, ಸುಪ್ತ ಮನಸ್ಸು ಪ್ರಚೋದನೆಗೊಂಡು ನಿಮ್ಮ ಬಲಗೈಯನ್ನು ತಾನಾಗೇ ಎದೆಯ ಮೇಲೆ ಬರುವಂತೆ ಮಾಡುತ್ತದೆ. ಆಗ ನಿಮ್ಮ ಸುಪ್ತ ಮನಸ್ಸು ಹತೋಟಿಗೆ ಬಂದಿದೆ ಎಂದೇ ಅರ್ಥ.
ಇಂತಹ ಪ್ರಯೋಗಗಳನ್ನೂ ಸಹ ವರ್ಷಗಟ್ಟಲೇ ಬಿಡದೇ ಮಾಡುತ್ತಿರಬೇಕು. ತಣ್ಣೀರನ್ನು ಇದು ಬಿಸಿಯಾಗಿದೆ ಎಂದು ಮನಸ್ಸಿನಲ್ಲಿ ಅಂದುಕೊಂಡು ನಿವು ಮುಟ್ಟಿದರೆ ಅದು ಬಿಸಿಯ ಅನುಭವ ನೀಡಬೇಕು. ಅಂಗೈಯಲ್ಲಿ ಒಂದು ನಾಣ್ಯವನ್ನು ಇರಿಸಿಕೊಂಡು ಅದು ಬಿಸಿಯಾಗುತ್ತಿದೆ ಅಂದುಕೊಳ್ಳುತ್ತಾ ಹೋದರೆ, ಸ್ವಲ್ಪ ಸಮಯದಲ್ಲೆ ಅದು ಬಿಸಿಯಾದಂತೆ ಭಾಸವಾಗಿ ಕೈ ಸುಡುವಂತಗಬೇಕು. ಅಲ್ಲಿಯವರೆಗೂ ನಿಮ್ಮ ಅಭ್ಯಾಸ ನೆಡೆಯುತ್ತಿರಬೇಕು.
ಇಷ್ಟಾದ ನಂತರ ಬೇರೆ ವ್ಯಕ್ತಿಗಳನ್ನು ಸಮ್ಮೋಹನಕ್ಕೆ ಒಳಪಡಿಸಲು ಸಾಧ್ಯ. ಇದಕ್ಕೆ ಸೂಕ್ತ ವ್ಯಕ್ತಿಯ ಮಾರ್ಗದರ್ಶನ ಬೇಕೇ ಬೇಕು. ಮತ್ತು ಸಮ್ಮೋಹನದ ಬಗ್ಗೆ ಇರುವ ಪುಸ್ತಕಗಳನ್ನೆಲ್ಲಾ ಒಂದೂ ಬಿಡದೇ ಓದಬೇಕು.
ಸಮ್ಮೋಹನ ಬೇಡ !
ನನ್ನ ಅನಿಸಿಕೆಯೆಂದರೆ ಬೇರೆ ವ್ಯಕ್ತಿಗಳನ್ನು ಸಮ್ಮೋಹನಗೊಳಿಸಲು ಪ್ರಯತ್ನ ಪಡದಿರುವುದೇ ಉತ್ತಮ. ನೀವೊಬ್ಬ ಮನೋವಿಜ್ಞಾನಿ ಅಥವಾ ಮನೋರಂಜನೆ ನೀಡುವ ಸ್ಟೇಜ್ ಜಾದೂಗಾರ ಆಗಿರದ ಹೊರತೂ ಅದರ ಅಗತ್ಯ ಯಾರಿಗೂ ಇರುವುದಿಲ್ಲ. ಬದಲಿಗೆ ಸಮ್ಮೋಹನ ಎಂದರೇನೆಂದು ತಿಳಿದುಕೊಂಡು, ಸ್ವ-ಸಮ್ಮೋಹನದಿಂದ ಲಾಭ ಪಡೆಯುವುದೇ ಜಾಣತನ. ಸ್ವ- ಸಮ್ಮೋಹನದಿಂದ ನಮ್ಮ ಬದುಕನ್ನು ಆದಷ್ಟು ಉತ್ತಮ ಪಡಿಸಿಕೊಳ್ಳಬಹುದು. ನೆಮ್ಮದಿಯಿಂದ ಇರಬಹುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಹುದು. ನಮಗೆ ಬೇಕಾದ ಕೆಲಸಗಳೆಡೆಗೆ ಮನಸ್ಸನ್ನು ಹರಿಯುವಂತೆ ಮಾಡಬಹುದು. ಸಂಕಷ್ಟಗಳು ಎದುರಾದಾಗ ಕೂಡಾ ನಿಶ್ಚಿಂತೆಯಿಂದ ಇರಲು ಸಾಧ್ಯ.
Author: Shripati
Subscribe to:
Post Comments (Atom)
No comments:
Post a Comment