Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday, 24 August 2016

ಓ.ಎಂ.ಆರ್. ಶೀಟ್ ( OMR sheet ) ಹೇಗೆ ತುಂಬಬೇಕು?


    ಇದು ಸ್ಪರ್ಧಾತ್ಮಕ ಯುಗ. ಇಂದು ಬಹುತೇಕ ಸರ್ಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲವೇ ಸಾವಿರ ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಪೈಪೋಟಿ ಒಡ್ಡಿರುತ್ತಾರೆ. ಶ್ರಮದಿಂದ ಓದಿ ಪರೀಕ್ಷೆಗೆ ತಯಾರಾಗಿ ಲವಲವಿಕೆಯಿಂದ ಪರೀಕ್ಷೆಗೇನೋ ಹೋಗಿರುತ್ತಾರೆ. ಆದರೆ ಅವರಲ್ಲಿ ಕೆಲವು ಅಭ್ಯರ್ಥಿಗಳು ಪರೀಕ್ಷಾ ವೇಳೆ ಓ.ಎಂ.ಆರ್. ಶೀಟ್‍ನ ಸೂಚನೆಗಳು ಸರಿಯಾಗಿ ತುಂಬುವಲ್ಲಿ ಎಡವಟ್ಟು ಮಾಡಿಕೊಂಡು ಕೈಕೈ ಹಿಸುಕಿಕೊಂಡು ಹೊರಬರುತ್ತಾರೆ. ಇದರಿಂದ ಶ್ರಮದಿಂದ ಓದಿದ ಪ್ರಯತ್ನವೆಲ್ಲ ನಷ್ಟವಾಗಿ ವ್ಯಾಕುಲರಾಗುತ್ತಾರೆ.

           ಹಾಗಾದರೆ, ತಪ್ಪಾಗದಂತೆ ಓ.ಎಂ.ಆರ್.ಶೀಟ್ (O.M.R Sheet ) ತುಂಬುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ.

* ಓ.ಎಂ.ಆರ್. ಶೀಟ್‍ನ್ನು ಬಬಲ್ ಶೀಟ್ ಎಂತಲೂ ಕರೆಯುತ್ತಾರೆ. ಬಬಲ್‍ಗಳ ಮೇಲೆ ಗುರುತು ಮಾಡುವಾಗ ಸಂಬಂಧಪಟ್ಟ ಪರೀಕ್ಷಾ ಮಂಡಳಿಯು ನಿಗದಿಪಡಿಸಿದ ನಿಯಮಾವಳಿಗಳಿಗೆ ಅನುಗುಣವಾಗಿ ಪೆನ್ ಅಥವಾ ಪೆನ್ಸಿಲ್‍ನಿಂದ ಗುರುತು ಮಾಡಬೇಕು. ಆದ್ದರಿಂದ ಭರ್ತಿ ಮಾಡುವದರ ಮೊದಲು ಶೀಟ್‍ನಲ್ಲಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು.

* ನೀಲಿ/ಕಪ್ಪು ಬಣ್ಣದ ಬಾಲ್‍ಪೆನ್ ತೆಗೆದುಕೊಂಡು ಹೋಗಿ. ಎಚ್.ಬಿ. ಪೆನ್ಸಿಲ್ ಜೊತೆಗಿರಲಿ. ಯಾವುದೇ ಕಾರಣಕ್ಕೂ ಇಂಕ್ ಪೆನ್ ಬಳಸಬೇಡಿ.

* ಓ.ಎಂ.ಆರ್. ವೃತ್ತದ ಗೆರೆಯೊಳಗಿರುವ ಜಾಗದಷ್ಟನ್ನು ಮಾತ್ರ ತುಂಬಿ. ಭಾಗಶಃ ಇಲ್ಲವೇ ಚೆಲ್ಲಾಪಿಲ್ಲಿಯಾಗುವಂತೆ ತುಂಬಬಾರದು.

* ಮೊದಲಿಗೆ ಓ.ಎಂ.ಆರ್. ಶೀಟ್‍ನಲ್ಲಿನ ಸರ್ಕಲ್ (ವೃತ್ತ) ಅಥವಾ ಬಾಕ್ಸ್‍ಗಳನ್ನು ತೆಳುವಾದ ರೀತಿಯಲ್ಲಿ ತುಂಬಿ ಅನಂತರ ಗಾಢವಾಗಿ ಕಾಣುವಂತೆ ಮಾಡಿ. ಆದರೆ ಓವರ್ ರೈಟ್ ಮಾಡಬೇಡಿ.

* ಓ.ಎಂ.ಆರ್. ಶೀಟ್‍ನಲ್ಲಿ ಕೆಲವೊಂದು ಭಾಗಗಳಲ್ಲಿ `ಇಲ್ಲಿ ಏನನ್ನೂ ಬರೆಯಬೇಡಿ' ಎಂದು ಸೂಚಿಸಲಾಗಿರುತ್ತದೆ. ಅಂತಹ ಜಾಗಗಳಲ್ಲಿ ಬರೆಯುವುದಾಗಲೀ, ಗೀಚುವುದಾಗಲೀ ಸಲ್ಲದು.
* ಓ.ಎಂ.ಆರ್. ಬಾರ್ ಕೋಡ್ ಮೇಲೆ ಏನನ್ನೂ ಮೂಡಿಸಬೇಡಿ.

* ಓ.ಎಂ.ಆರ್. ಇಂಡೆಕ್ಸ್ ಪಾಯಿಂಟ್ ಮೇಲೆ ಏನನ್ನೂ ಗುರುತು ಹಾಕಬೇಡಿ. ಇವುಗಳು ಕಾರ್ಯನಿರ್ವಹಣೆಗೆ ಅಗತ್ಯವಾಗಿರುತ್ತವೆ. ಓ.ಎಂ.ಆರ್. ಶೀಟ್ ಐಡೆಂಟಿಫಿಕೇಷನ್‍ ಬ್ಲಾಕ್‍ನಲ್ಲಿ ಏನಾದರೂ ಬದಲಾವಣೆಯಾದರೆ ಆ ಶೀಟ್‍ನ್ನು ತಿರಸ್ಕರಿಸಲಾಗುತ್ತದೆ.

* ಓ.ಎಂ.ಆರ್. ಶೀಟ್‍ನ್ನು ಮಡಚಬೇಡಿ. ಪಿನ್ ಅಥವಾ ಸ್ಟ್ಯಾಪಲ್ ಹಾಕುವುದನ್ನು ಮಾಡಬೇಡಿ.

* ಪರೀಕ್ಷಾ ಅವಧಿ ಮುಗಿಯಲು ಇನ್ನೇನು ೫ ನಿಮಿಷ ಇದೆ ಎನ್ನುವಾಗಲೇ ಓ.ಎಂ.ಆರ್. ಮೂಲ ಪ್ರತಿಯೊಂದಿಗಿರುವ ನಕಲು ಪ್ರತಿಯನ್ನು ತುಂಬ ಎಚ್ಚರಿಕೆಯಿಂದ ಬೇರ್ಪಡಿಸಿ. ಅದಕ್ಕಾಗಿ ಗೆರೆ ಎಳೆದು `ಕತ್ತರಿ' ಮಾರ್ಕ್ ಕೊಟ್ಟಿರುತ್ತಾರೆ. ಆ ಗೆರೆ ಭಾಗವಷ್ಟೆ ಮಡಚಿ ನಂತರ ಬೇರ್ಪಡಿಸಿ ಮೂಲಪ್ರತಿಯನ್ನು ಪರೀಕ್ಷಾ ವೀಕ್ಷಕರಿಗೆ ನೀಡಿ ನಕಲು ಪ್ರತಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನೆನಪಿರಲಿ, ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ನಕಲು ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

* ಓ.ಎಂ.ಆರ್‌ನಲ್ಲಿ ಗುರುತು ಮಾಡುವುದಕ್ಕಿಂತ ಮೊದಲು ಮುಖಪುಟದಲ್ಲಿರುವ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಿ.

* ಕೊನೆಯದಾಗಿ ಬಹಳ ಮುಖ್ಯವಾದ ಅಂಶವೆಂದರೆ ನಿಮ್ಮ ಪರೀಕ್ಷೆಯ ನೋಂದಣಿ ಸಂಖ್ಯೆ (ರೆಜಿಸ್ಟ್ರೇಶನ್ ನಂಬರ್)ಯನ್ನು ತುಂಬ ಎಚ್ಚರದಿಂದ ತುಂಬಿ. ಅತ್ತ ಇತ್ತ ನೋಡುತ್ತ ತುಂಬುವುದು ಮಾಡಬಾರದು.

ಜ್ಞಾನಮುಖಿ
ಮೊ: 9945479292
ಬ್ಲಾಗ್ : www.jnanamukhi.blogspot.in

No comments: