ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ವಿದ್ಯಾನಿಕೇತನ ಶಾಲೆಯ 7ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿದ್ದರು..!
ವಿಷಯವೇನು ಗೊತ್ತೇ?
ಸ್ಕೂಲ್ ಬ್ಯಾಗ್^ನ ಭಾರ ತಾಳದೇ ಅವರು ಅಕ್ಷರಶಃ ಸಿಡಿದೆದ್ದಿದ್ದರು. ಪ್ರತಿದಿನ 8 ವಿಷಯಗಳ 16 ಪುಸ್ತಕಗಳು (each subject textbook + notebook) ಮತ್ತು ಕೆಲವೊಮ್ಮೆ ಪುಸ್ತಕಗಳ ಸಂಖ್ಯೆ 20ಕ್ಕೂ ಅಧಿಕವಾಗಿರುತ್ತಿತ್ತು. ಅಷ್ಟು ಪುಸ್ತಕಗಳನ್ನು ಹಾಕಿಕೊಂಡು 6ರಿಂದ 7 ಕೆ.ಜಿ. ಭಾರದ ಬ್ಯಾಗ್ ಹೊತ್ತುಕೊಂಡು ಮೂರನೇ ಮಹಡಿಯಿರುವ ಕ್ಲಾಸ್^ಗೆ ಹೋಗುವುದು ಬಹಳ ಕಷ್ಟವಾಗ್ತಿದೆ. ದಯಮಾಡಿ ನಮ್ಮ ಶಾಲೆಯ ಆಡಳಿತ ಮಂಡಳಿಗೆ ನೀವಾದರೂ (ಪತ್ರಕರ್ತರು) ಹೇಳಿ ಬ್ಯಾಗ್ ಭಾರ ಕಡಿಮೆಗೊಳಿಸಿ ಎಂದು ಅಲವತ್ತುಕೊಂಡಿದ್ದರು.
ಇದು ನಾವೆಲ್ಲಾ ಆಲೋಚಿಸಬೇಕಾದ ವಿಷಯ. ನಾನು ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದಾಗ ಅಲ್ಲಿ ಮಕ್ಕಳ ಬ್ಯಾಗ್ ಭಾರವನ್ನು ಕಡಿಮೆಗೊಳಿಸಲು ಒಂದು ಉಪಾಯ ಮಾಡಿದ್ದೆ. ನನ್ನ ಬೋಧನಾ ವಿಷಯದ ನೋಟ್ ಬುಕ್ (ಫೇರ್ ಬುಕ್) ನಕಾಶೆ ಪುಸ್ತಕ ಮತ್ತು ಪ್ರಾಜೆಕ್ಟ್ ಬುಕ್ ನ್ನು ಪ್ರತಿ ಶನಿವಾರ ಮಾತ್ರ ತರಲು ಹೇಳುತ್ತಿದ್ದೆ. ಅಂದು ಆ ವಾರದಲ್ಲಿ ಮುಗಿಸಿದ ಭೂಗೋಳದ ಅಧ್ಯಾಯದ ಮೇಲಿನ ನಕಾಶೆಯ ಅಭ್ಯಾಸವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಹೇಳಿ ಆ periodನಲ್ಲಿ ಸರದಿಯಂತೆ ವಿದ್ಯಾರ್ಥಿಯನ್ನು ಕರೆದು ಅವನ/ಳ ಮುಂದೆ ಫೇರ್ ಬುಕ್ ತಿದ್ದುತ್ತಿದ್ದೆ. ಇದರಿಂದ ವಿದ್ಯಾರ್ಥಿಯು ಬರವಣಿಗೆಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಅವನಿಗೆ ತಿಳಿಸಿ ಹೇಳಲು ಅನುಕೂಲವಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಶಾಲಾ ಅವಧಿ ಮುಗಿದ ಮೇಲೂ ಒಂದೆರಡು ಗಂಟೆ ಅಲ್ಲಿಯೇ ಸ್ಟಾಫ್ ರೂಮ್^ನಲ್ಲಿ ಕುಳಿತು ಫೇರ್ ಬುಕ್ ತಿದ್ದಿದಿದೆ. ನನ್ನ ವಿದ್ಯಾರ್ಥಿಗಳಿಗಾಗಿ ವಾರಕ್ಕೆ ಒಂದೆರಡು ಗಂಟೆ ಹೆಚ್ಚಿಗೆ ಮೀಸಲಿಟ್ಟರೆ ನನ್ನ ಗಂಟೇನೂ ಮುಳುಗಿ ಹೋಗುವುದಿಲ್ಲ. ಅಷ್ಟಕ್ಕೂ ನನ್ನ ಆ ಕ್ರಮದಿಂದ ವಿದ್ಯಾರ್ಥಿಗಳ ಬ್ಯಾಗ್ ಭಾರ ಕಡಿಮೆಯಾಗಿದ್ದಂತೂ ಸುಳ್ಳಲ್ಲ.
ಕೊನೆಯದಾಗಿ ಹೇಳುವುದಾದರೆ, ಎಲ್ಲ ಶಾಲೆಗಳ ಪ್ರತಿಯೊಬ್ಬ ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳ ಬ್ಯಾಗ್ ಭಾರದ ಕಷ್ಟವನ್ನು ನಿವಾರಿಸಬಹುದು. ಅವು ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೆ ಏನಾಯಿತು? ಅವು ನಮ್ಮ ಮಕ್ಕಳಲ್ಲವೇ? ನಾವು ನಮ್ಮ ಸ್ವಂತ ಮಕ್ಕಳಿಗೆ ನೀಡುವಷ್ಟು ಗಮನವಾದರೂ ನಮ್ಮ ವಿದ್ಯಾರ್ಥಿಗಳಿಗೆ ನೀಡಬೇಕಲ್ಲವೇ? ದೂರದಲ್ಲೆಲ್ಲೋ ವಿದ್ಯಾರ್ಥಿಗಳ ಪಾಲಕರು ನಮ್ಮನ್ನು ನಂಬಿ ಮಕ್ಕಳನ್ನು ಕಳುಹಿಸಿರುತ್ತಾರೆ. ಅವರು ಶಾಲೆಯಲ್ಲಿ ಇರುವಷ್ಟು ಹೊತ್ತಾದರೂ ನಾವು ಅವರ ಪಾಲಿಗೆ ತಾಯಿ-ತಂದೆಯರಾಗಬೇಕಲ್ಲವೇ?
ಶಿಕ್ಷಕರ ಸಮುದಾಯ ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು.
No comments:
Post a Comment