Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Tuesday, 30 August 2016

ನುಡಿಗಟ್ಟುಗಳು

*ಕೆ.ಪಿ.ಎಸ್.ಸಿ. `ಸಿ' ಗ್ರುಪ್ ಹುದ್ದೆಗಳ ನೇಮಕಾತಿ ಪರೀಕ್ಷಾ ಕೆಲವು ನುಡಿಗಟ್ಟುಗಳು*

✍ ಜ್ಞಾನಮುಖಿ ( Jnanamukhi )
ಬ್ಲಾಗ್ (ವೆಬ್‍ಸೈಟ್): www.jnanamukhi.blogspot.in


🌻 ಅಂಕುರಾರ್ಪಣ ಮಾಡು - ಪ್ರಾರಂಭೋತ್ಸವ
🌻 ಅಲಾಲುಟೋಪಿ - ಮೋಸ ಮಾಡುವವನು
🌻 ಇಕ್ಕಳದಲ್ಲಿ ಸಿಕ್ಕಿಸು - ತೊಂದರೆಗೆ ಈಡು ಮಾಡು
🌻 ಉತ್ಸವ ಮೂರ್ತಿ - ಕೆಲಸ ಮಾಡದ ಆಲಸಿ
🌻 ಉಭಯ ಸಂಕಟ - ಎರಡರಲ್ಲಿ ಏನನ್ನೂ ಆರಿಸಿಕೊಳ್ಳಬೇಕೆಂಬ ಚಿಂತೆ
🌻 ಊದುವ ಶಂಖ ಊದಿಬಿಡು - ಹೇಳುವುದು ನಿಷ್ಪ್ರಯೋಜಕವಾದರೂ ಹೇಳಿಬಿಡು
🌻 ಊರತ್ತೆ - ವೇಶ್ಯೆಗೆ ಆಶ್ರಯ ಕೊಟ್ಟವಳು
🌻 ಒನಕೆ ಚಿಗುರು - ಅಸಾಧ್ಯವಾದುದು ಆಗು
🌻 ಒಬ್ಬರ ಕೈ ವೀಣೆಯಾಗಿರು - ಇತರರ ಇಚ್ಚೆಯಂತೆ ನಡೆ
🌻 ಕಣ್ಣಿಗೆ ಅಂಜನ ಹಾಕು - ಸ್ಪಷ್ಟವಾಗಿ ಅರಿವಾಗು
🌻 ಕಣ್ಣಿನಲ್ಲಿ ಗಂಗಾವತಾರವಾಗು - ಆನಂದಭಾಷ್ಪ
🌻 ಕಣ್ಣುರಿ - ಅಸೂಯೆ
🌻 ಕಣ್ಸವಿ - ಇಷ್ಟವಾದ ನೋಟ
🌻 ಕಲ್ಲುನೀರು ಕರಗುವ ಹೊತ್ತು - ಮಧ್ಯರಾತ್ರಿ
🌻 ಕಾಗೆ ಮುಳುಗು - ಸ್ನಾನದ ಶಾಸ್ತ್ರ ಮಾಡು
🌻 ಕಾಲಗುಣ - ಶಕುನ
🌻 ಕಾಲಲ್ಲಿ ಹಾವು ಬಿಡು - ಗೊಂದಲಪಡಿಸು
🌻 ಕಿವಿ ಸೋಲು - ಕೇಳು, ನಂಬು
🌻 ಕುಂತೀ ಮಕ್ಕಳ ಸಂಸಾರ - ಕಷ್ತದ ಜೀವನ
🌻 ಕೈ ಕಂಡ ಕೆಲಸ - ತನಗೆ ತಿಳಿದಿರುವ ಕೆಲಸ
🌻 ಕೈ ಹರಿತ ಆಗು - ಅನುಭವಿಯಾಗು
🌻 ಗಟ್ಟಿಕುಳ - ಶ್ರೀಮಂತ
🌻 ಗಾಳಿಗೆ ಗರಿ ಮೂಡು - ಶೀಘ್ರತೆ ಹೆಚ್ಚಾಗು
🌻 ಗುಡ್ಡಕ್ಕೆ ಕಲ್ಲುಹೊರು - ವ್ಯರ್ಥವಾದ ಕೆಲಸ ಮಾಡು
🌻 ಚಿದಂಬರ ರಹಸ್ಯ - ಅರ್ಥವಾಗದ ಗುಟ್ಟು
🌻 ತಲೆ ಕುಂಬಾರನ ಚಕ್ರವಾಗು - ಯೋಚನಾಕ್ರಾಂತವಾಗು
🌻 ತಲೆಯ ಮೇಲೆ ಕೈ ಇಡು - ವಂಚಿಸು
🌻 ನರಿಯ ಕಕ್ಕೆಕಾಯಿ ವ್ರತ - ಪಾಲಿಸಲಾಗದ ಪ್ರತಿಜ್ಞೆ
🌻 ನಾಯಿ ಮುಟ್ಟಿದ ಮಡಕೆ - ಅಪವಿತ್ರವಾದುದು
🌻ನೆತ್ತರು ಬಸಿ - ಶ್ರಮ ಪಡು
🌻 ಬಕಧ್ಯಾನ - ಬಹಳ ಕಪಟದಿಂದಿರು
🌻 ಬಲಗಣ್ಣು ಅದುರು - ಗಂಡಸರಿಗೆ ಶುಭ ಶಕುನವೆಂದು ನಂಬಿಕೆ
🌻 ಬಸವನ ಹಿಂದೆ ಬಾಲ - ಎಡೆಬಿಡದ ಸಂಗಾತಿ
🌻 ಬಾಯಿ ಬಂಧನ - ಉಪವಾಸ
🌻 ಬಾಯಿಗಳಿಗೆ ಬಾಯಿಕುಕ್ಕೆ - ನಿಯಂತ್ರಣ
🌻 ಬಾಯಿಬೆಲ್ಲ ಮರುಳಾಗುವ ಮಾತು
🌻 ಬಿಳಿಕುದುರೆ ಚಾಕರಿ - ಅತೀವ ಶಿಸ್ತು
🌻 ಬಿಳೀ ಮಜ್ಜಿಗೆ - ಹೆಂಡ
🌻 ಬೆನ್ನಿನ ಹೊಗೆಯೆಬ್ಬಿಸು - ಚೆನ್ನಾಗಿ ಹೊಡೆ
🌻 ಬೆನ್ನುಕಾಯಿ - ಕಾಪಾಡು
🌻 ಬೆಳ್ಳಿನಾಲಿಗೆ - ಅನುನಯದ ಮಾತು
🌻 ಭೂಮಿ ತೂಕದವ - ಭೂಮಿಯಂತೆ ಬಹುಶಾಂತ ಸ್ವಭಾವದವ
🌻 ಮುಂಗೈತಿಕ್ಕು - ವಿನಯ ತೋರಿಸು
🌻 ಮುಖಮುರಿ - ಅವಮಾನಗೊಳಿಸು
🌻 ಮುಖವೀಣೆ - ಮುಖಸ್ತುತಿ ಮಾಡುವವರು

Wednesday, 24 August 2016

ವಿದ್ಯಾರ್ಥಿಗಳ ಪತ್ರಿಕಾಗೋಷ್ಠಿ

ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ವಿದ್ಯಾನಿಕೇತನ ಶಾಲೆಯ 7ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿದ್ದರು..!

ವಿಷಯವೇನು ಗೊತ್ತೇ?
        ಸ್ಕೂಲ್ ಬ್ಯಾಗ್^ನ ಭಾರ ತಾಳದೇ ಅವರು ಅಕ್ಷರಶಃ ಸಿಡಿದೆದ್ದಿದ್ದರು. ಪ್ರತಿದಿನ 8 ವಿಷಯಗಳ 16 ಪುಸ್ತಕಗಳು (each subject textbook + notebook) ಮತ್ತು ಕೆಲವೊಮ್ಮೆ ಪುಸ್ತಕಗಳ ಸಂಖ್ಯೆ 20ಕ್ಕೂ ಅಧಿಕವಾಗಿರುತ್ತಿತ್ತು. ಅಷ್ಟು ಪುಸ್ತಕಗಳನ್ನು ಹಾಕಿಕೊಂಡು 6ರಿಂದ 7 ಕೆ.ಜಿ. ಭಾರದ ಬ್ಯಾಗ್ ಹೊತ್ತುಕೊಂಡು ಮೂರನೇ ಮಹಡಿಯಿರುವ ಕ್ಲಾಸ್^ಗೆ ಹೋಗುವುದು ಬಹಳ ಕಷ್ಟವಾಗ್ತಿದೆ. ದಯಮಾಡಿ ನಮ್ಮ ಶಾಲೆಯ ಆಡಳಿತ ಮಂಡಳಿಗೆ ನೀವಾದರೂ (ಪತ್ರಕರ್ತರು) ಹೇಳಿ ಬ್ಯಾಗ್ ಭಾರ ಕಡಿಮೆಗೊಳಿಸಿ ಎಂದು ಅಲವತ್ತುಕೊಂಡಿದ್ದರು.

              ಇದು ನಾವೆಲ್ಲಾ ಆಲೋಚಿಸಬೇಕಾದ ವಿಷಯ. ನಾನು ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದಾಗ ಅಲ್ಲಿ ಮಕ್ಕಳ ಬ್ಯಾಗ್ ಭಾರವನ್ನು ಕಡಿಮೆಗೊಳಿಸಲು ಒಂದು ಉಪಾಯ ಮಾಡಿದ್ದೆ. ನನ್ನ ಬೋಧನಾ ವಿಷಯದ ನೋಟ್ ಬುಕ್ (ಫೇರ್ ಬುಕ್) ನಕಾಶೆ ಪುಸ್ತಕ ಮತ್ತು ಪ್ರಾಜೆಕ್ಟ್ ಬುಕ್ ನ್ನು ಪ್ರತಿ ಶನಿವಾರ ಮಾತ್ರ ತರಲು ಹೇಳುತ್ತಿದ್ದೆ. ಅಂದು ಆ ವಾರದಲ್ಲಿ ಮುಗಿಸಿದ ಭೂಗೋಳದ ಅಧ್ಯಾಯದ ಮೇಲಿನ ನಕಾಶೆಯ ಅಭ್ಯಾಸವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಹೇಳಿ ಆ periodನಲ್ಲಿ ಸರದಿಯಂತೆ ವಿದ್ಯಾರ್ಥಿಯನ್ನು ಕರೆದು ಅವನ/ಳ ಮುಂದೆ ಫೇರ್ ಬುಕ್ ತಿದ್ದುತ್ತಿದ್ದೆ. ಇದರಿಂದ ವಿದ್ಯಾರ್ಥಿಯು ಬರವಣಿಗೆಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಅವನಿಗೆ ತಿಳಿಸಿ ಹೇಳಲು ಅನುಕೂಲವಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಶಾಲಾ ಅವಧಿ ಮುಗಿದ ಮೇಲೂ ಒಂದೆರಡು ಗಂಟೆ ಅಲ್ಲಿಯೇ ಸ್ಟಾಫ್ ರೂಮ್^ನಲ್ಲಿ ಕುಳಿತು ಫೇರ್ ಬುಕ್ ತಿದ್ದಿದಿದೆ. ನನ್ನ ವಿದ್ಯಾರ್ಥಿಗಳಿಗಾಗಿ ವಾರಕ್ಕೆ ಒಂದೆರಡು ಗಂಟೆ ಹೆಚ್ಚಿಗೆ ಮೀಸಲಿಟ್ಟರೆ ನನ್ನ ಗಂಟೇನೂ ಮುಳುಗಿ ಹೋಗುವುದಿಲ್ಲ. ಅಷ್ಟಕ್ಕೂ ನನ್ನ ಆ ಕ್ರಮದಿಂದ ವಿದ್ಯಾರ್ಥಿಗಳ ಬ್ಯಾಗ್ ಭಾರ ಕಡಿಮೆಯಾಗಿದ್ದಂತೂ ಸುಳ್ಳಲ್ಲ.

      ಕೊನೆಯದಾಗಿ ಹೇಳುವುದಾದರೆ, ಎಲ್ಲ ಶಾಲೆಗಳ ಪ್ರತಿಯೊಬ್ಬ ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳ ಬ್ಯಾಗ್ ಭಾರದ ಕಷ್ಟವನ್ನು ನಿವಾರಿಸಬಹುದು. ಅವು ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೆ ಏನಾಯಿತು? ಅವು ನಮ್ಮ ಮಕ್ಕಳಲ್ಲವೇ? ನಾವು ನಮ್ಮ ಸ್ವಂತ ಮಕ್ಕಳಿಗೆ ನೀಡುವಷ್ಟು ಗಮನವಾದರೂ ನಮ್ಮ ವಿದ್ಯಾರ್ಥಿಗಳಿಗೆ ನೀಡಬೇಕಲ್ಲವೇ? ದೂರದಲ್ಲೆಲ್ಲೋ ವಿದ್ಯಾರ್ಥಿಗಳ ಪಾಲಕರು ನಮ್ಮನ್ನು ನಂಬಿ ಮಕ್ಕಳನ್ನು ಕಳುಹಿಸಿರುತ್ತಾರೆ. ಅವರು ಶಾಲೆಯಲ್ಲಿ ಇರುವಷ್ಟು ಹೊತ್ತಾದರೂ ನಾವು ಅವರ ಪಾಲಿಗೆ ತಾಯಿ-ತಂದೆಯರಾಗಬೇಕಲ್ಲವೇ?

ಶಿಕ್ಷಕರ ಸಮುದಾಯ ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು.

ಓ.ಎಂ.ಆರ್. ಶೀಟ್ ( OMR sheet ) ಹೇಗೆ ತುಂಬಬೇಕು?


    ಇದು ಸ್ಪರ್ಧಾತ್ಮಕ ಯುಗ. ಇಂದು ಬಹುತೇಕ ಸರ್ಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲವೇ ಸಾವಿರ ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಪೈಪೋಟಿ ಒಡ್ಡಿರುತ್ತಾರೆ. ಶ್ರಮದಿಂದ ಓದಿ ಪರೀಕ್ಷೆಗೆ ತಯಾರಾಗಿ ಲವಲವಿಕೆಯಿಂದ ಪರೀಕ್ಷೆಗೇನೋ ಹೋಗಿರುತ್ತಾರೆ. ಆದರೆ ಅವರಲ್ಲಿ ಕೆಲವು ಅಭ್ಯರ್ಥಿಗಳು ಪರೀಕ್ಷಾ ವೇಳೆ ಓ.ಎಂ.ಆರ್. ಶೀಟ್‍ನ ಸೂಚನೆಗಳು ಸರಿಯಾಗಿ ತುಂಬುವಲ್ಲಿ ಎಡವಟ್ಟು ಮಾಡಿಕೊಂಡು ಕೈಕೈ ಹಿಸುಕಿಕೊಂಡು ಹೊರಬರುತ್ತಾರೆ. ಇದರಿಂದ ಶ್ರಮದಿಂದ ಓದಿದ ಪ್ರಯತ್ನವೆಲ್ಲ ನಷ್ಟವಾಗಿ ವ್ಯಾಕುಲರಾಗುತ್ತಾರೆ.

           ಹಾಗಾದರೆ, ತಪ್ಪಾಗದಂತೆ ಓ.ಎಂ.ಆರ್.ಶೀಟ್ (O.M.R Sheet ) ತುಂಬುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ.

* ಓ.ಎಂ.ಆರ್. ಶೀಟ್‍ನ್ನು ಬಬಲ್ ಶೀಟ್ ಎಂತಲೂ ಕರೆಯುತ್ತಾರೆ. ಬಬಲ್‍ಗಳ ಮೇಲೆ ಗುರುತು ಮಾಡುವಾಗ ಸಂಬಂಧಪಟ್ಟ ಪರೀಕ್ಷಾ ಮಂಡಳಿಯು ನಿಗದಿಪಡಿಸಿದ ನಿಯಮಾವಳಿಗಳಿಗೆ ಅನುಗುಣವಾಗಿ ಪೆನ್ ಅಥವಾ ಪೆನ್ಸಿಲ್‍ನಿಂದ ಗುರುತು ಮಾಡಬೇಕು. ಆದ್ದರಿಂದ ಭರ್ತಿ ಮಾಡುವದರ ಮೊದಲು ಶೀಟ್‍ನಲ್ಲಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು.

* ನೀಲಿ/ಕಪ್ಪು ಬಣ್ಣದ ಬಾಲ್‍ಪೆನ್ ತೆಗೆದುಕೊಂಡು ಹೋಗಿ. ಎಚ್.ಬಿ. ಪೆನ್ಸಿಲ್ ಜೊತೆಗಿರಲಿ. ಯಾವುದೇ ಕಾರಣಕ್ಕೂ ಇಂಕ್ ಪೆನ್ ಬಳಸಬೇಡಿ.

* ಓ.ಎಂ.ಆರ್. ವೃತ್ತದ ಗೆರೆಯೊಳಗಿರುವ ಜಾಗದಷ್ಟನ್ನು ಮಾತ್ರ ತುಂಬಿ. ಭಾಗಶಃ ಇಲ್ಲವೇ ಚೆಲ್ಲಾಪಿಲ್ಲಿಯಾಗುವಂತೆ ತುಂಬಬಾರದು.

* ಮೊದಲಿಗೆ ಓ.ಎಂ.ಆರ್. ಶೀಟ್‍ನಲ್ಲಿನ ಸರ್ಕಲ್ (ವೃತ್ತ) ಅಥವಾ ಬಾಕ್ಸ್‍ಗಳನ್ನು ತೆಳುವಾದ ರೀತಿಯಲ್ಲಿ ತುಂಬಿ ಅನಂತರ ಗಾಢವಾಗಿ ಕಾಣುವಂತೆ ಮಾಡಿ. ಆದರೆ ಓವರ್ ರೈಟ್ ಮಾಡಬೇಡಿ.

* ಓ.ಎಂ.ಆರ್. ಶೀಟ್‍ನಲ್ಲಿ ಕೆಲವೊಂದು ಭಾಗಗಳಲ್ಲಿ `ಇಲ್ಲಿ ಏನನ್ನೂ ಬರೆಯಬೇಡಿ' ಎಂದು ಸೂಚಿಸಲಾಗಿರುತ್ತದೆ. ಅಂತಹ ಜಾಗಗಳಲ್ಲಿ ಬರೆಯುವುದಾಗಲೀ, ಗೀಚುವುದಾಗಲೀ ಸಲ್ಲದು.
* ಓ.ಎಂ.ಆರ್. ಬಾರ್ ಕೋಡ್ ಮೇಲೆ ಏನನ್ನೂ ಮೂಡಿಸಬೇಡಿ.

* ಓ.ಎಂ.ಆರ್. ಇಂಡೆಕ್ಸ್ ಪಾಯಿಂಟ್ ಮೇಲೆ ಏನನ್ನೂ ಗುರುತು ಹಾಕಬೇಡಿ. ಇವುಗಳು ಕಾರ್ಯನಿರ್ವಹಣೆಗೆ ಅಗತ್ಯವಾಗಿರುತ್ತವೆ. ಓ.ಎಂ.ಆರ್. ಶೀಟ್ ಐಡೆಂಟಿಫಿಕೇಷನ್‍ ಬ್ಲಾಕ್‍ನಲ್ಲಿ ಏನಾದರೂ ಬದಲಾವಣೆಯಾದರೆ ಆ ಶೀಟ್‍ನ್ನು ತಿರಸ್ಕರಿಸಲಾಗುತ್ತದೆ.

* ಓ.ಎಂ.ಆರ್. ಶೀಟ್‍ನ್ನು ಮಡಚಬೇಡಿ. ಪಿನ್ ಅಥವಾ ಸ್ಟ್ಯಾಪಲ್ ಹಾಕುವುದನ್ನು ಮಾಡಬೇಡಿ.

* ಪರೀಕ್ಷಾ ಅವಧಿ ಮುಗಿಯಲು ಇನ್ನೇನು ೫ ನಿಮಿಷ ಇದೆ ಎನ್ನುವಾಗಲೇ ಓ.ಎಂ.ಆರ್. ಮೂಲ ಪ್ರತಿಯೊಂದಿಗಿರುವ ನಕಲು ಪ್ರತಿಯನ್ನು ತುಂಬ ಎಚ್ಚರಿಕೆಯಿಂದ ಬೇರ್ಪಡಿಸಿ. ಅದಕ್ಕಾಗಿ ಗೆರೆ ಎಳೆದು `ಕತ್ತರಿ' ಮಾರ್ಕ್ ಕೊಟ್ಟಿರುತ್ತಾರೆ. ಆ ಗೆರೆ ಭಾಗವಷ್ಟೆ ಮಡಚಿ ನಂತರ ಬೇರ್ಪಡಿಸಿ ಮೂಲಪ್ರತಿಯನ್ನು ಪರೀಕ್ಷಾ ವೀಕ್ಷಕರಿಗೆ ನೀಡಿ ನಕಲು ಪ್ರತಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನೆನಪಿರಲಿ, ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ನಕಲು ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

* ಓ.ಎಂ.ಆರ್‌ನಲ್ಲಿ ಗುರುತು ಮಾಡುವುದಕ್ಕಿಂತ ಮೊದಲು ಮುಖಪುಟದಲ್ಲಿರುವ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಿ.

* ಕೊನೆಯದಾಗಿ ಬಹಳ ಮುಖ್ಯವಾದ ಅಂಶವೆಂದರೆ ನಿಮ್ಮ ಪರೀಕ್ಷೆಯ ನೋಂದಣಿ ಸಂಖ್ಯೆ (ರೆಜಿಸ್ಟ್ರೇಶನ್ ನಂಬರ್)ಯನ್ನು ತುಂಬ ಎಚ್ಚರದಿಂದ ತುಂಬಿ. ಅತ್ತ ಇತ್ತ ನೋಡುತ್ತ ತುಂಬುವುದು ಮಾಡಬಾರದು.

ಜ್ಞಾನಮುಖಿ
ಮೊ: 9945479292
ಬ್ಲಾಗ್ : www.jnanamukhi.blogspot.in