Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Thursday, 4 June 2015
ಸರ್ ಮಿರ್ಜಾ ಇಸ್ಮಾಯಿಲ್ ಮಾದರಿ
ಸರ್. ಮಿರ್ಜಾ ಇಸ್ಮಾಯಿಲ್ ಸಾಹೇಬರು ಮೈಸೂರು ರಾಜ್ಯದ ಹತ್ತನೇ ದಿವಾನರಾಗಿ ಹದಿನೈದು ವರ್ಷಗಳ ಕಾಲ (೧೯೨೬ರಿಂದ ೧೯೪೧) ಸಮರ್ಥವಾಗಿ ಕಾರ್ಯ ನಿರ್ವಹಿಸಿದವರು. ತಮ್ಮ ಪ್ರಾಮಾಣಿಕತೆಯಿಂದ, ಕಾರ್ಯನಿಷ್ಠೆಯಿಂದ ಬದುಕಿದಾಗಲೇ ದಂತ ಕಥೆಯಾದವರು.
ಮಿರ್ಜಾರವರು ನಿಧನರಾದ ದಿನ ನಡೆದ ಒಂದು ಘಟನೆ ಅವರ ಕಾರ್ಯ ವಿಚಕ್ಷತೆಯನ್ನು ತೋರುತ್ತದೆ. ಅವರ ಶವ ಸಂಸ್ಕಾರಕ್ಕೆ ಬಂದವರು ಸಹಸ್ರಾರು ಜನ. ತಮ್ಮ ಮನೆಯವರನ್ನು ಕಳೆದುಕೊಂಡವರಂತೆ ಜನ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸ್ಮಶಾನದ ಮುಖ್ಯದ್ವಾರದ ಹತ್ತಿರ ಒಬ್ಬ ಮನುಷ್ಯ ತುಂಬ ಅಳುತ್ತಿದ್ದ. ನೋಡಿದರೆ ಒಬ್ಬ ಹಿಂದೂವಿನಂತೆ ಕಾಣುತ್ತಿದ್ದ. ತನ್ನ ದುಃಖವನ್ನು ತೋಡಿಕೊಂಡ. ಅವನೊಬ್ಬ ಅಕ್ಕಸಾಲಿಗ. ಕಬ್ಬನಪೇಟೆಯಲ್ಲಿ ವಾಸವಾಗಿದ್ದ. ಒಂದು ದಿನ ಅವನ ಹೆಂಡತಿ ನೀಋ ತರಲೆಂದು ಬನ್ನಪ್ಪ ಪಾರ್ಕಿನ ಹತ್ತಿರದಲ್ಲಿದ್ದ ಕೊಳಾಯಿಗೆ ಹೋದವಳು ಬಹಳ ಹೊತ್ತಾದರೂ ಬರಲಿಲ್ಲ. ಯಾಕೆಂದರೆ ಇದ್ದದ್ದು ಒಂದು ಕೊಳಾಯಿ, ನೀರಿಗಾಗಿ ಬಂದವರು ನೂರ್‍ಆರು ಜನ. ಅವರ ನಡುವೆ ಜಗಳ, ಕಿತ್ತಾಟ, ಗಲಾಟೆಯೆಲ್ಲ ನಡೆಯಿತು. ಸುಮಾರು ಒಂದು ಗಂಟೆ ಕಾಯ್ದ ಮೇಲೆ ಅಕ್ಕಸಾಲಿಗನ ಹೆಂಡತಿಗೆ ಒಂದು ಕೊಡ ನೀರು ಸಿಕ್ಕಿತು. ಆಕೆ ತುಂಬು ಬಸುರಿ. ಮೊದಲೇ ಆಕೆಗೆ ಆಯಾಸ. ಮೈಕೈ ನೋವು ಎಲ್ಲ. ಅದರ ಮೇಲೆ ಈ ತಳ್ಳಾಟ, ಜಗಳಾಟ. ಜನ ಆಕೆಯನ್ನು ಬೈದೂ ಇರಬಹುದು. ಇದೆಲ್ಲದರಿಂದ ಆಕೆ ಪಾಪ! ಹೊರಲಾರದ ಭಾರವನ್ನು ಹೊತ್ತುಕೊಂಡು ಅಳುತ್ತಾ ಮನೆಗೆ ಬಂದಳು.
ಆಕೆ ಬಂದು ಮನೆ ಸೇರಿದ ಕೆಲಕ್ಷಣಗಳಲ್ಲೇ ಒಬ್ಬ ಸರಕಾರಿ ಜವಾನ ಬಂದು, "ಇದು ಯಾರ ಮನೆ?" ಎಂದು ಕೇಳಿದ. ಅಕ್ಕಸಾಲಿಗನಿಗೆ ಗಾಬರಿ. ತನ್ನ ಹೆಂಡತಿ ಮತ್ತೆ ಏನಾದರೂ ತಕರಾರು ಮಾಡಿಕೊಂಡಳೋ, ಏನು ತಪ್ಪು ಮಾಡಿದಳೋ ಎಂಬ ಆತಂಕ. ಜವಾನ ಹೇಳಿದ, "ದಿವಾನ ಸಾಹೇಬರು ಸೇಂಟ್ ಮಾರ್ಥಾ ಆಸ್ಪತ್ರೆಯ ಹತ್ತಿರ ನಿಂತಿದ್ದಾರೆ. ನೀವು ತಕ್ಷಣ ಬಂದು ಅವರನ್ನು ಕಾಣಬೇಕು. ಅವರೇ ನನಗೆ ಈ ಹೆಣ್ಣು ಮಗಳ ಹಿಂದೆ ಹೋಗಿ ಮನೆ ನೋಡಿಕೊಂಡು, ಯಾರಾದರೂ ಇದ್ದರೆ ಕರೆದುಕೊಂಡು ಬರಹೇಳಿದ್ದಾರೆ". ಅಕ್ಕಸಾಲಿಗ ಇನ್ನೂ ಗಾಬರಿಯಿಂದ ಉಸಿರು ಬಿಗಿಹಿಡಿದು ಆಸ್ಪತ್ರೆಯತ್ತ ಓಡಿದ. ಮಿರ್ಜಾ ಸಾಹೇಬರ ಮುಂದೆ ಕೈ ಮುಗಿದು ನಿಂತುಕೊಂಡ. ಅವರು ಇವನ ವೃತ್ತಿಯ ಬಗ್ಗೆ, ವಾಸದ ಬಗ್ಗೆ ವಿಚಾರಿಸಿದರು. "ನಿಮ್ಮ ಮನೆಯಲ್ಲಿ ನೀರಿನ ಕೊಳಾಯಿ ಇಲ್ಲವೋ?" ಎಂದು ಕೇಳಿದರು. ಆಗ ಆತ "ನಮಗೆಲಿ ಸಾಧ್ಯ ಸ್ವಾಮೀ? ನಾವು ಅರ್ಧ ಮೈಲಿ ದೂರದ ಕೊಳಾಯಿಯಿಂದಲೇ ತರಬೇಕು. ಅದೇ ನಮಗೆ ಹತ್ತಿರದ ಕೊಳಾಯಿ" ಎಂದ. ಆಗ ದಿವಾನ್ ಸಾಹೇಬರು ತಮ್ಮ ಜೊತೆಯಲ್ಲಿದ್ದ ಇಂಜಿನಿಯರ್‌ರನ್ನು ಕರೆದು "ಈತನ ಮನೆಯ ಹತ್ತಿರ ಕೊಳಾಯಿ ಹಾಕಿಸಿ" ಎಂದರು. ಆಗ ಇಂಜಿನಿಯರ್, "ಸ್ವಾಮಿ, ನಾನು ಅದರ ನಕ್ಷೆ ಮಾಡಿಸಿ, ಖರ್ಚಿನ ಲೆಕ್ಕ ಮಾಡಿಸಿ ಮಂಡಿಸುತ್ತೇನೆ. ತಾವು ಅದಕ್ಕೆ ಒಪ್ಪಿಗೆ ನೀಡಿದ ತಕ್ಷಣ ಕೊಳಾಯಿ ಹಾಕಿಸುತ್ತೇನೆ" ಎಂದರು. ಅದಕ್ಕೆ ದಿವಾನರು, "ನೋಡಿ, ನಾನು ಈಗಲೇ ಒಪ್ಪಿಗೆ ನೀಡಿದ್ದೇನೆ. ನಾಳೆ ಬೆಳಿಗ್ಗೆಯೊಳಗೆ ಈತನ ಮನೆಯ ಹತ್ತಿರ ಕೊಳಾಯಿಯಿಂದ ನೀರು ಬರಬೇಕು. ನಾನೇ ಬಂದು ನೋಡುತ್ತೇನೆ." ಎಂದು ಅಪ್ಪಣೆ ಕೊಟ್ಟು ನಡೆದರು. ಮರುದಿನ ಕೊಳಾಯಿಯಲ್ಲಿ ನೀರು ಬಂತು. ಅದನ್ನು ದಿವಾನರು ಬಂದು ನೋಡಿ ಹೋದರು.
ಒಬ್ಬ ಹೆಂಗಸು ಪಡುತ್ತಿರುವ ಕಷ್ಟವನ್ನು ನೋಡಿ ತಕ್ಷಣ ತೀರ್ಮಾನ ತೆಗೆದುಕೊಂಡು ಅದನ್ನು ಸ್ವತಃ ಗಮನವಿಟ್ಟು ನಡೆಸುವಷ್ಟು ಸಹೃದಯತೆ, ಕನಿಕರ ಸರ್ ಮಿರ್ಜಾ ಇಸ್ಮಾಯಿಲ್‍ರವರದು. ಅಧಿಕಾರದಲ್ಲಿದ್ದವರು ಸರ್ಕಾರದ ಸೇವಕರು. ಆದರೆ ಅವರು ಯಜಮಾನರಂತೆ ವರ್ತಿಸದೇ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸಿದರೆ ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಹಾಗೆ ಆದಾರೆಯೇ? ಮಿರ್ಜಾ ಮದರಿಯಾದಾರೆಯೇ?
ಕೃಪೆ: ಡಾ|| ಗುರುರಾಜ ಕರಜಗಿ
Subscribe to:
Post Comments (Atom)
No comments:
Post a Comment