Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday, 5 June 2015

ಅಂಗವೈಕಲ್ಯ ಮೆಟ್ಟಿನಿಂತ ಸಾಧಕ ಮಂಜು ಗುಬ್ಬಿ

                 "ಕೈ-ಕಾಲು ಕಳೆದುಕೊಂಡವನು ಅಂಗವಿಕಲನಲ್ಲ; ಎಲ್ಲ ಇದ್ದು ಏನನ್ನೂ ಸಾಧಿಸದೇ ಇರುವ ವ್ಯಕ್ತಿಯೇ ನಿಜವಾದ ಅಂಗವಿಕಲ." ಎಂಬ ಮಹಾತ್ಮರೊಬ್ಬರ ಮಾತು ನನಗೀಗ ನೆನಪಾಗುತ್ತಿದೆ. ಕಾರಣವಿಷ್ಟೆ, ನಮ್ಮ ಸ್ನೇಹಿತರ ಬಳಗದವರಲ್ಲೊಬ್ಬರಾದ ಶ್ರೀ ಮಂಜು ಗುಬ್ಬಿ ಅವರು ನಿನ್ನೆ ಪಬ್ಲಿಕ್ ಟಿ.ವಿ.ಯ ‘ಪಬ್ಲಿಕ್ ಹಿರೋ’ ಆಗಿ ಹೊರಹೊಮ್ಮಿದ್ದಾರೆ. ಆ ಕುರಿತ ಚಿತ್ರೀಕರಣದ ದೃಶ್ಯ ಇಲ್ಲಿದೆ. ೫ ವರ್ಷದವರಿದ್ದಾಗಲೇ ಪೊಲಿಯೋದಿಂದ ಕಾಲಿನ ಸ್ವಾಧೀನ ಕಳೆದುಕೊಂಡ ಅವರು ಉಳಿದವರಿಗಿಂತ ತಾನೇನು ಕಮ್ಮಿ ಇಲ್ಲ ಎಂಬಂತೆ ಸಾಧಿಸಿ ಬದುಕುತ್ತಿದ್ದಾರೆ. ದೇಶದ ಭಾವಿ ಯೋಧರಿಗೆ ತರಬೇತಿ ನೀಡುವ ಕೇಂದ್ರವನ್ನು ಸ್ಥಾಪಿಸಿ ದೇಶಸೇವೆ ಮಾಡುತ್ತಿದ್ದಾರೆ. ಇದಕ್ಕೆ ಅವರ ಗೆಳೆಯರು ಕೂಡ ಬೆಂಬಲಿಸಿ ಸಹಕರಿಸುತ್ತಿದ್ದಾರೆ. ಪ್ರಸ್ತುತ ಇವರ ತರಬೇತಿಯಿಂದ ಹಲವಾರು ಜನ ದೇಶದ ಸೈನಿಕರಾಗಿ ಆಯ್ಕೆಯಾಗಿ ದೇಶಸೇವೆಯಲ್ಲಿ ನಿರತರಾಗಿರುವುದು ಗಮನಿಸಬೇಕಾದ ಸಂಗತಿ. ನನ್ನ ಬೆಂಗಳೂರಿನ ಸ್ನೇಹಿತರು ಕೂಡ ಮಂಜು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇವರು ಅವರಿಗೆ ಆಯು-ಆರೋಗ್ಯ ನೀಡಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ಅಂದ ಹಾಗೆ ಅವರಿಗೆ ಅಭಿನಂದನೆ ತಿಳಿಸಬೇಕೆ? ಇದೋ ಅವರ ಮೊಬೈಲ್ ನಂಬರ್ :  7090969002


Thursday, 4 June 2015

ಸರ್ ಮಿರ್ಜಾ ಇಸ್ಮಾಯಿಲ್ ಮಾದರಿ



    ಸರ್. ಮಿರ್ಜಾ ಇಸ್ಮಾಯಿಲ್ ಸಾಹೇಬರು ಮೈಸೂರು ರಾಜ್ಯದ ಹತ್ತನೇ ದಿವಾನರಾಗಿ ಹದಿನೈದು ವರ್ಷಗಳ ಕಾಲ (೧೯೨೬ರಿಂದ ೧೯೪೧) ಸಮರ್ಥವಾಗಿ ಕಾರ್ಯ ನಿರ್ವಹಿಸಿದವರು. ತಮ್ಮ ಪ್ರಾಮಾಣಿಕತೆಯಿಂದ, ಕಾರ್ಯನಿಷ್ಠೆಯಿಂದ ಬದುಕಿದಾಗಲೇ ದಂತ ಕಥೆಯಾದವರು.

        ಮಿರ್ಜಾರವರು ನಿಧನರಾದ ದಿನ ನಡೆದ ಒಂದು ಘಟನೆ ಅವರ ಕಾರ್ಯ ವಿಚಕ್ಷತೆಯನ್ನು ತೋರುತ್ತದೆ. ಅವರ ಶವ ಸಂಸ್ಕಾರಕ್ಕೆ ಬಂದವರು ಸಹಸ್ರಾರು ಜನ. ತಮ್ಮ ಮನೆಯವರನ್ನು ಕಳೆದುಕೊಂಡವರಂತೆ ಜನ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸ್ಮಶಾನದ ಮುಖ್ಯದ್ವಾರದ ಹತ್ತಿರ ಒಬ್ಬ ಮನುಷ್ಯ ತುಂಬ ಅಳುತ್ತಿದ್ದ. ನೋಡಿದರೆ ಒಬ್ಬ ಹಿಂದೂವಿನಂತೆ ಕಾಣುತ್ತಿದ್ದ. ತನ್ನ ದುಃಖವನ್ನು ತೋಡಿಕೊಂಡ. ಅವನೊಬ್ಬ ಅಕ್ಕಸಾಲಿಗ. ಕಬ್ಬನಪೇಟೆಯಲ್ಲಿ ವಾಸವಾಗಿದ್ದ. ಒಂದು ದಿನ ಅವನ ಹೆಂಡತಿ ನೀಋ ತರಲೆಂದು ಬನ್ನಪ್ಪ ಪಾರ್ಕಿನ ಹತ್ತಿರದಲ್ಲಿದ್ದ ಕೊಳಾಯಿಗೆ ಹೋದವಳು ಬಹಳ ಹೊತ್ತಾದರೂ ಬರಲಿಲ್ಲ. ಯಾಕೆಂದರೆ ಇದ್ದದ್ದು ಒಂದು ಕೊಳಾಯಿ, ನೀರಿಗಾಗಿ ಬಂದವರು ನೂರ್‍ಆರು ಜನ. ಅವರ ನಡುವೆ ಜಗಳ, ಕಿತ್ತಾಟ, ಗಲಾಟೆಯೆಲ್ಲ ನಡೆಯಿತು. ಸುಮಾರು ಒಂದು ಗಂಟೆ ಕಾಯ್ದ ಮೇಲೆ ಅಕ್ಕಸಾಲಿಗನ ಹೆಂಡತಿಗೆ ಒಂದು ಕೊಡ ನೀರು ಸಿಕ್ಕಿತು. ಆಕೆ ತುಂಬು ಬಸುರಿ. ಮೊದಲೇ ಆಕೆಗೆ ಆಯಾಸ. ಮೈಕೈ ನೋವು ಎಲ್ಲ. ಅದರ ಮೇಲೆ ಈ ತಳ್ಳಾಟ, ಜಗಳಾಟ. ಜನ ಆಕೆಯನ್ನು ಬೈದೂ ಇರಬಹುದು. ಇದೆಲ್ಲದರಿಂದ ಆಕೆ ಪಾಪ! ಹೊರಲಾರದ ಭಾರವನ್ನು ಹೊತ್ತುಕೊಂಡು ಅಳುತ್ತಾ ಮನೆಗೆ ಬಂದಳು.

        ಆಕೆ ಬಂದು ಮನೆ ಸೇರಿದ ಕೆಲಕ್ಷಣಗಳಲ್ಲೇ ಒಬ್ಬ ಸರಕಾರಿ ಜವಾನ ಬಂದು, "ಇದು ಯಾರ ಮನೆ?" ಎಂದು ಕೇಳಿದ. ಅಕ್ಕಸಾಲಿಗನಿಗೆ ಗಾಬರಿ. ತನ್ನ ಹೆಂಡತಿ ಮತ್ತೆ ಏನಾದರೂ ತಕರಾರು ಮಾಡಿಕೊಂಡಳೋ, ಏನು ತಪ್ಪು ಮಾಡಿದಳೋ ಎಂಬ ಆತಂಕ. ಜವಾನ ಹೇಳಿದ, "ದಿವಾನ ಸಾಹೇಬರು ಸೇಂಟ್ ಮಾರ್ಥಾ ಆಸ್ಪತ್ರೆಯ ಹತ್ತಿರ ನಿಂತಿದ್ದಾರೆ. ನೀವು ತಕ್ಷಣ ಬಂದು ಅವರನ್ನು ಕಾಣಬೇಕು. ಅವರೇ ನನಗೆ ಈ ಹೆಣ್ಣು ಮಗಳ ಹಿಂದೆ ಹೋಗಿ ಮನೆ ನೋಡಿಕೊಂಡು, ಯಾರಾದರೂ ಇದ್ದರೆ ಕರೆದುಕೊಂಡು ಬರಹೇಳಿದ್ದಾರೆ". ಅಕ್ಕಸಾಲಿಗ ಇನ್ನೂ ಗಾಬರಿಯಿಂದ ಉಸಿರು ಬಿಗಿಹಿಡಿದು ಆಸ್ಪತ್ರೆಯತ್ತ ಓಡಿದ. ಮಿರ್ಜಾ ಸಾಹೇಬರ ಮುಂದೆ ಕೈ ಮುಗಿದು ನಿಂತುಕೊಂಡ. ಅವರು ಇವನ ವೃತ್ತಿಯ ಬಗ್ಗೆ, ವಾಸದ ಬಗ್ಗೆ ವಿಚಾರಿಸಿದರು. "ನಿಮ್ಮ ಮನೆಯಲ್ಲಿ ನೀರಿನ ಕೊಳಾಯಿ ಇಲ್ಲವೋ?" ಎಂದು ಕೇಳಿದರು. ಆಗ ಆತ "ನಮಗೆಲಿ ಸಾಧ್ಯ ಸ್ವಾಮೀ? ನಾವು ಅರ್ಧ ಮೈಲಿ ದೂರದ ಕೊಳಾಯಿಯಿಂದಲೇ ತರಬೇಕು. ಅದೇ ನಮಗೆ ಹತ್ತಿರದ ಕೊಳಾಯಿ" ಎಂದ. ಆಗ ದಿವಾನ್ ಸಾಹೇಬರು ತಮ್ಮ ಜೊತೆಯಲ್ಲಿದ್ದ ಇಂಜಿನಿಯರ್‌ರನ್ನು ಕರೆದು "ಈತನ ಮನೆಯ ಹತ್ತಿರ ಕೊಳಾಯಿ ಹಾಕಿಸಿ" ಎಂದರು. ಆಗ ಇಂಜಿನಿಯರ್, "ಸ್ವಾಮಿ, ನಾನು ಅದರ ನಕ್ಷೆ ಮಾಡಿಸಿ, ಖರ್ಚಿನ ಲೆಕ್ಕ ಮಾಡಿಸಿ ಮಂಡಿಸುತ್ತೇನೆ. ತಾವು ಅದಕ್ಕೆ ಒಪ್ಪಿಗೆ ನೀಡಿದ ತಕ್ಷಣ ಕೊಳಾಯಿ ಹಾಕಿಸುತ್ತೇನೆ" ಎಂದರು. ಅದಕ್ಕೆ ದಿವಾನರು, "ನೋಡಿ, ನಾನು ಈಗಲೇ ಒಪ್ಪಿಗೆ ನೀಡಿದ್ದೇನೆ. ನಾಳೆ ಬೆಳಿಗ್ಗೆಯೊಳಗೆ ಈತನ ಮನೆಯ ಹತ್ತಿರ ಕೊಳಾಯಿಯಿಂದ ನೀರು ಬರಬೇಕು. ನಾನೇ ಬಂದು ನೋಡುತ್ತೇನೆ." ಎಂದು ಅಪ್ಪಣೆ ಕೊಟ್ಟು ನಡೆದರು. ಮರುದಿನ ಕೊಳಾಯಿಯಲ್ಲಿ ನೀರು ಬಂತು. ಅದನ್ನು ದಿವಾನರು ಬಂದು ನೋಡಿ ಹೋದರು.

        ಒಬ್ಬ ಹೆಂಗಸು ಪಡುತ್ತಿರುವ ಕಷ್ಟವನ್ನು ನೋಡಿ ತಕ್ಷಣ ತೀರ್ಮಾನ ತೆಗೆದುಕೊಂಡು ಅದನ್ನು ಸ್ವತಃ ಗಮನವಿಟ್ಟು ನಡೆಸುವಷ್ಟು ಸಹೃದಯತೆ, ಕನಿಕರ ಸರ್ ಮಿರ್ಜಾ ಇಸ್ಮಾಯಿಲ್‍ರವರದು. ಅಧಿಕಾರದಲ್ಲಿದ್ದವರು ಸರ್ಕಾರದ ಸೇವಕರು. ಆದರೆ ಅವರು ಯಜಮಾನರಂತೆ ವರ್ತಿಸದೇ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸಿದರೆ ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಹಾಗೆ ಆದಾರೆಯೇ? ಮಿರ್ಜಾ ಮದರಿಯಾದಾರೆಯೇ?


ಕೃಪೆ: ಡಾ|| ಗುರುರಾಜ ಕರಜಗಿ

ಕೆ.ಎ.ಎಸ್ ಅಧಿಕಾರಿಯಾದ ‘ಸಿಲ್ಲಿಲಲ್ಲಿ’ ಧಾರಾವಾಹಿಯ ಕಂಪೌಂಡರ್

ಡಾ. ರಾಜ್‌ಕುಮಾರ್ ನಟಿಸಿದ `ಮೇಯರ್ ಮುತ್ತಣ್ಣ’ ಸಿನಿಮಾ ನೆನಪಿದೆ ತಾನೆ? ಹಳ್ಳಿಯಿಂದ ಬಂದ ಮುಗ್ಧನೊಬ್ಬ ಬೆಂಗಳೂರಿನ ಮೇಯರ್ ಆಗುವ ಕಥೆ ಅದು. ಇಲ್ಲಿಯೂ ಒಬ್ಬ ಸಾಧಕನಿದ್ದಾನೆ. ಅವನೂ ಹಳ್ಳಿಯಿಂದ ಬಂದವನು ಎಂಬುದು ವಿಶೇಷ. `ಸಿಲ್ಲಿಲಲ್ಲಿ’ಯ ಕಾಂಪೌಂಡರ್ ಆಗಿದ್ದ ಈತ ನಡೆದು ಬಂದ ದಾರಿಯದ್ದೇ ಒಂದು ಸಾಹಸದ ಕಥೆ…


ಇದು, ಹಳ್ಳಿಗಾಡಿನ `ಮುತ್ತಣ್ಣ’ನೊಬ್ಬ ಬೆಂಗಳೂರಿನ `ಮೇಯರ್’ ಆದ ಕಥೆ! ಆಫ್‌ಕೋರ್ಸ್, ಈ `ಮುತ್ತಣ್ಣ’ ಮೇಯರ್ ಆಗಲಿಲ್ಲ ನಿಜ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಂಟ್ರೋಲರ್ ಆದ ರೋಮಾಂಚಕ ಅನುಭವದ ಕಥೆ.
ಇವರ ಹೆಸರು: ಸಂಗಮೇಶ ಉಪಾಸೆ. ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟಿನಲ್ಲಿ ಅವರ ಹೆಸರು ಸಂಗಪ್ಪ ಉಪಾಸೆ ಎಂದೇ ದಾಖಲಾಗಿರುವುದರಿಂದ ಅವರನ್ನೀಗ ಸಂಗಪ್ಪ ಉಪಾಸೆ ಎಂದೇ ಕರೆಯಲಾಗುತ್ತದೆ. ಬಿಬಿಎಂಪಿಯಲ್ಲಿ ಅಧಿಕಾರಿಯಾಗಿರುವ ಸಂಗಪ್ಪ ಉಪಾಸೆ ಅವರಿಗೆ ಅಂಜುಟಗಿಲು ಸಂಮಾರು ಎಂಬ ಕಾವ್ಯನಾಮವೂ ಇದೆ! ಕೆಎಎಸ್ ಮಾಡಿಕೊಂಡಿರುವ ಇವರು, ಮೂರು ವರ್ಷಗಳ ಹಿಂದೆ `ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಕಾಂಪೌಂಡರ್‌ನ ಪಾತ್ರ ಮಾಡಿಕೊಂಡಿದ್ದವರು ಅಂದರೆ ನಂಬುವುದು ಕಷ್ಟ. ಆದರೆ ಇದು ನಿಜ. ಹೊಟ್ಟೆಪಾಡಿಗಾಗಿ ಬಣ್ಣ ಹಚ್ಚಿ, ಕೋಡಂಗಿಯಂತೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದ ಸಂಗಮೇಶ, ಈಗ ಹೆಸರಘಟ್ಟ ರಸ್ತೆಯಲ್ಲಿರುವ ಬಿಬಿಎಂಪಿಯಲ್ಲಿ ಹಣಕಾಸು ವಿಭಾಗದ ಅಸಿಸ್ಟೆಂಟ್ ಕಂಟ್ರೋಲರ್! ಮೂರು ವರ್ಷಗಳ ಹಿಂದೆ ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಸಂಗಮೇಶ, ಈಗ ಸರಕಾರದ ಗೌರವಾನ್ವಿತ ಅಧಿಕಾರಿ. ಓಡಾಡಲು ಸರಕಾರಿ ಕಾರ್ ಇದೆ. ವಾಸಕ್ಕೆ ಸರಕಾರದ ಮನೆಯಿದೆ. ಕೆಲಸ ಮಾಡಲು ಸರಕಾರಿ ಕಚೇರಿಯಿದೆ. ಜತೆಗೆ ಏಳೆಂಟು ಮಂದಿ ಸಹಾಯಕರಿದ್ದಾರೆ. ಬಿಬಿಎಂಪಿಯ ರಸ್ತೆ ಕಾಮಗಾರಿ, ನೀರು ಪೂರೈಕೆ, ಪಾರ್ಕ್ ನಿರ್ಮಾಣ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಈ ಸಂಗಪ್ಪ ಉಪಾಸೆಯವರೇ ಬಜೆಟ್ ಪೂರೈಸಬೇಕು!
ಹೇಳಲೇಬೇಕಾದ ಮಾತೆಂದರೆ, ಈ ಒಂದು ಹಂತಕ್ಕೆ ಬಂದು ನಿಲ್ಲಬೇಕಾದೆ ಸಂಗಮೇಶ ವಿಪರೀತ ಸೈಕಲ್ ಹೊಡೆದಿದ್ದಾರೆ. ಹತ್ತು ಜನ್ಮಕ್ಕೆ ಆಗುವಷ್ಟು ಕಷ್ಟಪಟ್ಟಿದ್ದಾರೆ. ಒಂದು ದೊಡ್ಡ ಎತ್ತರಕ್ಕೆ ತಂದು ನಿಲ್ಲಿಸುವುದಕ್ಕೂ ಮೊದಲು ಬದುಕೆಂಬುದು ಅವರನ್ನು ಕ್ಷಣಕ್ಷಣವೂ ಹೆದರಿಸಿದೆ. ಆಟ ಆಡಿಸಿದೆ. ಕಷ್ಟ ಕೊಟ್ಟಿದೆ. ಪರೀಕ್ಷೆಗೆ ಒಡ್ಡಿದೆ. ಅಳಿಸಿದೆ. ಅವಮಾನಕ್ಕೆ ಈಡು ಮಾಡಿದೆ. ಹಂಗಿಸಿದೆ. ಅಪಹಾಸ್ಯ ಮಾಡಿದೆ. ಒಂದರ ಹಿಂದೊಂದು ಸಂಕಟಗಳನ್ನು ತಂದಿಟ್ಟು ಮಜಾ ತೆಗೆದುಕೊಂಡಿದೆ. ಒಂದು ಸಂತೋಷವೆಂದರೆ, ಸಂಗಪ್ಪ ಎಲ್ಲವನ್ನೂ cool ಆಗಿಯೇ ತೆಗೆದುಕೊಂಡಿದ್ದಾರೆ. ಒಂದೊಂದು ಅವಮಾನ ಕೈ ಹಿಡಿದಾಗಲೂ `ನಾಳೆ ಗೆಲ್ತೀನಿ’ ಎನ್ನುತ್ತಲೇ ನೋವು ಮರೆತಿದ್ದಾರೆ. ಮತ್ತು ಇದೀಗ ನೂರಲ್ಲ, ಸಾವಿರ ಮಂದಿಗೂ ಮಾದರಿಯಾಗಬಲ್ಲ ಸಾಹಸವನ್ನೂ ಮಾಡಿ ತೋರಿಸಿದ್ದಾರೆ. ಹೇಳಿದರೆ, ಅವರ ಹೋರಾಟದ ಬದುಕಿನದ್ದು ನಂಬಲು ಸಾಧ್ಯವೇ ಇಲ್ಲದಂಥ ಸಾಹಸದ ಕಥೆ.

ಸಂಗಮೇಶ ಮೂಲತಃ ಬಿಜಾಪುರ ಜಿಲ್ಲೆ, ಇಂಡಿ ತಾಲೂಕಿನ ಅಂಜುಟಗಿ ಗ್ರಾಮದವರು. ಅವರ ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆ ಅವರಿಗಿತ್ತು ನಿಜ. ಆದರೆ ಓದಿಸುವಷ್ಟು ಆರ್ಥಿಕ ಚೈತನ್ಯ ಖಂಡಿತ ಇರಲಿಲ್ಲ. ನೇಯ್ಗೆ ಕೆಲಸ ಮಾಡುತ್ತಿದ್ದ ಅಪ್ಪನ ದುಡಿಮೆ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಅನ್ನಿಸಿದಾಗ ತಾಯಿ, ತಂಗಿಯೊಂದಿಗೆ ಕೂಲಿ ಕೆಲಸಕ್ಕೆ ಹೆಗಲು ಕೊಟ್ಟರು ಸಂಗಮೇಶ. ಈ ಮಧ್ಯೆಯೇ ಅಂಜುಟಗಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿತ್ತು. ಹೀಗಿರುವಾಗ ಭೀಕರ ಬರ ಬಂತೆಂದು ಅಂಜುಟಗಿಯಿಂದ ಗುಲಬರ್ಗಾ ಜಿಲ್ಲೆಯ ಭೀಮರಾಯನ ಗುಡಿಗೆ ಸಂಗಮೇಶರ ಕುಟುಂಬ ಗುಳೇ ಹೋಯಿತು. ಅಲ್ಲಿ ಹತ್ತಿರದ ಬಂಧುವೊಬ್ಬರು ಹೋಟೆಲ್ ಚಾಕರಿಯ ಕೆಲಸವನ್ನು ಕುಟುಂಬದ ಎಲ್ಲರಿಗೂ ಕೊಟ್ಟರು. ಸದ್ಯ, ಬದುಕಿಗೆ ಒಂದು ನೆಲೆ ಆಯ್ತು ಎಂದು ಸಂಗಮೇಶರ ತಂದೆ-ತಾಯಿ ನಿಟ್ಟುಸಿರು ಬಿಡುವ ಹೊತ್ತಿಗೇ, ಅದೇ ಬಂಧು `ನಿಮ್ಮನ್ನು ಕೆಲಸದಿಂದ ತೆಗೆದಿದೀನಿ, ನಡೀರಿ ಇಲ್ಲಿಂದ!’ ಅಂದರಂತೆ. ಪರಿಣಾಮ, ಅಪರಿಚಿತ ಊರಲ್ಲಿ ಮತ್ತೆ ಬೀದಿಪಾಲು!
ಹೀಗೇ ಒಂದೆರಡು ದಿನ ಫುಟ್‌ಪಾತ್ ವಾಸದಲ್ಲೇ ಕಳೆದು ಹೋದ ಮೇಲೆ ಆಕಸ್ಮಿಕವಾಗಿ ಸಿಕ್ಕ ಇನ್ನೊಬ್ಬರು ಪರಿಚಿತರು, ಈ ಕುಟುಂಬದ ಕಥೆ ಕೇಳಿ ಕರಗಿದರು. ಭೀಮರಾಯನ ಗುಡಿಯಿಂದ ಇಪ್ಪತ್ತು ಕಿ.ಮೀ. ದೂರದ ಗೂಗಿ ಎಂಬಲ್ಲಿ ಒಂದು ಪುಟ್ಟ ಮನೆ ಕೊಟ್ಟು `ಇರುವಷ್ಟು ದಿನ ಇದ್ದು ಹೋಗಿ’ ಅಂದರು. ಮತ್ತೆ ನೇಯ್ಗೆ ಕೆಲಸ ಆರಂಭಿಸಿದ ಸಂಗಮೇಶರ ತಂದೆ, ಮಗನನ್ನು ಶಾಲೆಗೆ ಸೇರಿಸಲೆಂದು ಹೋದರೆ ಅಧ್ಯಾಪಕರು ಹೇಳಿದರಂತೆ: `ನಿನ್ನ ಮಗ ಹಿಂದೆ ಓದ್ತಾ ಇದ್ದನಲ್ಲ? ಅಲ್ಲಿಂದ ಟಿ.ಸಿ. ತಗೊಂಡು ಬಾ’.
ಅವತ್ತಿನ ಪರಿಸ್ಥಿತಿ ಎಷ್ಟು ದಾರುಣವಾಗಿತ್ತೆಂದರೆ, ತಮ್ಮ ಹುಟ್ಟೂರಿಗೆ ಹೋಗಿ ಮಗನ ಟಿ.ಸಿ. ತರುವ ತ್ರಾಣ ಕೂಡ ಸಂಗಮೇಶರ ತಂದೆಗಿರಲಿಲ್ಲ. ಪರಿಣಾಮ, ಶಾಲೆಗೆ ಒಂದಿಷ್ಟು ದಿನ ಗುಡ್‌ಬೈ ಹೇಳಿದ ಸಂಗಮೇಶ, ಕೂಲಿಗೆ ಹೋಗುವುದು, ಸ್ಮಶಾನದಿಂದ ಕಟ್ಟಿಗೆ ಕಡಿದು ತರುವುದು… ಇಂಥ ಕಾಯಕದಲ್ಲೇ ದಿನ ಕಳೆದರು. ಕಡೆಗೊಂದು ದಿನ ಚಿಕ್ಕಪ್ಪನ ನೆರವಿನಿಂದ ಸಂಗಮೇಶರ ಕುಟುಂಬ ಸ್ವಗ್ರಾಮಕ್ಕೆ ಮರಳಿತು. ತಕ್ಷಣದಿಂದಲೇ ಶಾಲೆಯ ಸಹವಾಸ ಆರಂಭಿಸಿದ ಸಂಗಮೇಶರನ್ನು ಅದೊಂದು ರಾತ್ರಿ ಪಕ್ಕ ಕೂರಿಸಿಕೊಂಡ ತಂದೆ-ತಾಯಿ ಇಬ್ಬರೂ ಏಕಕಾಲಕ್ಕೆ ಹೇಳಿದರಂತೆ: `ಕಂದಾ, ನೀನು ದೊಡ್ಡ ಆಫೀಸರ್ ಆಗಬೇಕು. ನಮಗೆ ಬಂದ ಕಷ್ಟ ನಿನಗೆ ಬರಬಾರದು…’
ಈ ಮಾತು ಕೇಳಿಸಿಕೊಂಡಾಗ ಸಂಗಮೇಶ ಇನ್ನು ಏಳನೇ ಕ್ಲಾಸು ದಾಟಿರಲಿಲ್ಲ. ಅವತ್ತಿನ ಸಂದರ್ಭದಲ್ಲಿ ಅವರಿಗೆ `ಭವಿಷ್ಯದ ದಿನ’ ಎಂಬ ಪದಕ್ಕೆ ಅರ್ಥವೇ ಗೊತ್ತಿರಲಿಲ್ಲ. ಆದರೂ ಭಂಡ ಧೈರ್ಯದಿಂದ ತಮಗೆ ತಾವೇ ಹೇಳಿಕೊಂಡಂತೆ: `ಮುಂದೊಂದು ದಿನ ನಾನೂ ಒಬ್ಬ ಆಫೀಸರ್ ಆಗೇ ಆಗ್ತೀನಿ!’ ಈ ಮಾತು ಮುಂದೊಂದು ದಿನ ನಿಜವಾಗಬಹುದೆಂಬುದಕ್ಕೆ ಹಿನ್ನೆಲೆಯಾಗಿ, ಅವತ್ತು ಗೋಡೆಯ ಮೇಲೆ ಹಲ್ಲಿ ಲೊಚಗುಡಲಿಲ್ಲ. ದೇವರ ಪಟದ ಮೇಲಿಂದ ಹೂವೂ ಬೀಳಲಿಲ್ಲ.
ಹೀಗಿದ್ದಾಗಲೇ ಅಂಜುಟಗಿಯಿಂದ ಭರ್ತಿ ಹನ್ನೆರಡು ಕಿ.ಮೀ. ದೂರವಿದ್ದ ಬಳ್ಳೊಳ್ಳಿಯಲ್ಲಿ ಪ್ರೌಢಶಾಲೆಗೆ ಸೇರಿದ ಸಂಗಮೇಶ ನಂತರದ ಎರಡು ವರ್ಷ ಕಾಲ ದಿನಕ್ಕೆ ಇಪ್ಪತ್ನಾಲ್ಕು ಕಿ.ಮೀ. ನಡೆದು ಒಂಭತ್ತನೇ ತರಗತಿ ಮುಗಿಸಿದರು. ಈ ಸಂದರ್ಭದಲ್ಲಿ ನೆರವಿಗೆ ಬಂದವರು ಸಂಗಮೇಶರರ ಚಿಕ್ಕಪ್ಪ ಡಾ. ಪ್ರಭು ಉಪಾಸೆ. ಅವರು ಸಂಗಮೇಶನನ್ನು ಧಾರವಾಡಕ್ಕೆ ಕರೆತಂದು ಅಲ್ಲಿನ ಕರ್ನಾಟಕ ಹೈಸ್ಕೂಲ್‌ನಲ್ಲಿ ಹತ್ತನೇ ತರಗತಿಗೆ ಸೇರಿಸಿದರು. ಉಳಿಯಲಿಕ್ಕೆ ಒಂದು ಹಾಸ್ಟೆಲ್ ತೋರಿಸಿಕೊಟ್ಟರು. ಹಾಸ್ಟೆಲ್‌ನಲ್ಲಿ ಬೆಳಗ್ಗೆ, ರಾತ್ರಿ ಊಟದ ವ್ಯವಸ್ಥೆಯಿತ್ತು. ಅದಕ್ಕೆ ಮಾಸಿಕ ನೂರೈವತ್ತು ರೂ. ಶುಲ್ಕ! ಈ ಹಣವನ್ನು ಅಪ್ಪ-ಅಮ್ಮ ಕೂಲಿ ಮಾಡಿ ಕಳಿಸಬೇಕಿತ್ತು. ಒಂದು ವೇಳೆ ಹೆಚ್ಚು ಕಮ್ಮಿಯಾದರೆ ಹಾಸ್ಟೆಲ್‌ನಿಂದಲೇ ಗೇಟ್‌ಪಾಸ್ ಸಿಗಬಹುದು ಅನ್ನಿಸಿದಾಗ ಬೆಳಗ್ಗೆ ಹಾಗೂ ಸಂಜೆಯ ವೇಳೆ ಲಾಟರಿ ಟಿಕೆಟ್ ಮಾರಲು ನಿಂತರು ಸಂಗಮೇಶ. ಹೀಗೆ ಲಾಟರಿ ಟಿಕೆಟ್ ಮಾರಿದ್ದಕ್ಕೆ ಕಮಿಷನ್ ಹಣ ಸಿಗುತ್ತಿತ್ತಲ್ಲ? ಅದು ಹಾಸ್ಟೆಲಿನ ಫೀ ಆಗುತ್ತಿತ್ತು. ಹೇಳಿ ಕೇಳಿ ಅದು ಹರೆಯದ ವಯಸ್ಸು. ಆಗ ಮಧ್ಯಾಹ್ನದ ವೇಳೆ ಹಸಿವಾಗ್ತಾ ಇರಲಿಲ್ವ ಎಂದರೆ ಸಂಗಮೇಶ ಹೇಳುತ್ತಾರೆ: `ಹಸಿವಾಗ್ದೇ ಇರುತ್ತಾ ಸಾರ್? ಆಗ್ತಿತ್ತು. ಆಗೆಲ್ಲ ಚಿಲ್ಲರೆ ಕಾಸಿಗೆ ಕಡ್ಲೆಬೀಜ ಖರೀದಿಸಿ ತಿಂದು ಹೊಟ್ಟೆ ತುಂಬ ನೀರು ಕುಡೀತಿದ್ದೆ. ಹತ್ತನೇ ತರಗತಿಯಿಂದ ಬಿ.ಎ. ಕಡೆಯ ವರ್ಷದವರೆಗೂ ಎರಡು ಹೊತ್ತು ಊಟ ಹಾಗೂ ಕಡಲೇಬೀಜವೇ ನನ್ನ ಕಾಪಾಡಿತು…’
ಹೇಳಿ ಕೇಳಿ ಅದು ಧಾರವಾಡದ ಪರಿಸರ. ಅದೇ ಕಾರಣದಿಂದ ಪಿಯೂಸಿ ದಾಟುವುದರೊಳಗೆ ಸಂಗಮೇಶರಲ್ಲಿ ಒಬ್ಬ ಕವಿ ಹುಟ್ಟಿಕೊಂಡಿದ್ದ. ನಾಟಕಕಾರ ಜತೆಯಾಗಿದ್ದ. ಲೇಖಕ ಕೈ ಹಿಡಿದಿದ್ದ. ಪರಿಣಾಮ, ಒಂದೊಂದೇ ವೈಚಾರಿಕ ಬರಹಗಳು ಹೊರಬಂದವು. ಅದನ್ನು ಕಂಡದ್ದೇ, ಒಂದು ಸಮುದಾಯಕ್ಕೆ ಮೀಸಲಾಗಿದ್ದ ಹಾಸ್ಟೆಲಿನ ಆಡಳಿತ ಮಂಡಳಿ ಸಿಟ್ಟಾಯಿತು. `ಜಾತಿಯೇ ಬೇಡ ಅಂತ ಬರೀತೀಯೇನೋ ಹುಡುಗಾ’ ಎಂದು ಗದರಿಸಿ ಸಂಗಮೇಶನನ್ನು ಹಾಸ್ಟೆಲಿನಿಂದ ಹೊರಹಾಕಿತು! ಉಹುಂ, ಆಗಲೂ ಸಂಗಮೇಶ ಜಗ್ಗಲಿಲ್ಲ. ಬದಲಿಗೆ, ಪುಟ್ಟ ಲಗ್ಗೇಜಿನೊಂದಿಗೆ ಧಾರವಾಡದ ವಿದ್ಯಾವರ್ಧಕ ಸಂಘಕ್ಕೆ ಬಂದ. ಸಂಘದ ಅಧ್ಯಕ್ಷರ ಒಪ್ಪಿಗೆ ಪಡೆದು ಒಂದಿಷ್ಟು ದಿನ ಅಲ್ಲೇ ಕಳೆದ. ಹಾಸ್ಟೆಲಿನ ಆಶ್ರಯ ಕೈ ತಪ್ಪಿದ್ದರಿಂದ ಊಟಕ್ಕೂ ಸಂಚಕಾರ ಬಂದಿತ್ತು. ಆಗ ಮತ್ತೆ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಳ್ಳುತ್ತಾ, ಸಂಕಟ ಅನ್ನಿಸಿದಾಗೆಲ್ಲ ತನಗೆ ತಾನೇ ಹೇಳಿಕೊಳ್ಳುತ್ತಿದ್ದ: `ಮುಂದೊಂದು ದಿನ ನಾನು ಆಫೀಸರ್ ಆಗ್ತೀನಲ್ಲ, ಆಗ ಈ ಸಂಕಟಗಳ ಮೇಲೆ ಸೇಡು ತೀರಿಸಿಕೊಳ್ತೇನೆ!’
ಹೀಗಿದ್ದಾಗಲೇ ಪರಿಚಿತರೊಬ್ಬರು ಉಳಿಯಲಿಕ್ಕೆ ಒಂದು ರೂಂ ಕೊಡಿಸ್ತೀನಿ ಬನ್ನಿ ಎಂದು ಕರೆದೊಯ್ದು ಒಂದು ಗೌಡಾನ್‌ಗೆ ತಲುಪಿಸಿದರಂತೆ. ಅದನ್ನು ಈಗಲೂ ಭಯದಿಂದಲೇ ನೆನಪು ಮಾಡಿಕೊಳ್ಳುವ ಸಂಗಮೇಶ ಹೇಳುತ್ತಾರೆ: `ಅವರೇನೋ ಸದಾಶಯದಿಂದಲೇ ನನಗೆ ಉಳಿಯಲೊಂದು ಜಾಗ ತೋರಿಸಿದರು ನಿಜ. ಆದರೆ ಅದು ಥೇಟ್ ತಿಪ್ಪೆಗುಂಡಿ ಇದ್ದಂತಿತ್ತು. ಆ ಕಸದ ರಾಶಿಯ ಮಧ್ಯೆಯೇ ಪುಸ್ತಕಗಳೊಂದಿಗೆ, ಕನಸುಗಳೊಂದಿಗೆ ನಾನೂ ಉಳಿದುಕೊಂಡೆ. ರಾತ್ರಿಯ ವೇಳೆ ಇದ್ದಕ್ಕಿದ್ದಂತೆ ಗೋಡೆಯ ಮೇಲೆ ನಾಗರಹಾವು ಪ್ರತ್ಯಕ್ಷವಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಬುಸ್‌ಬುಸ್ ಎಂದು ಪೂತ್ಕರಿಸಿ ಹೆದರಿಸುತ್ತಿತ್ತು. ಈ ಸಂಕಟದ ಮಧ್ಯೆಯೇ ಓದಿದೆ. ಧಾರವಾಡದಲ್ಲೇ ಇದ್ದರೆ ಬದುಕೋದು ಕಷ್ಟವಾಗುತ್ತದೆ. ಅದರ ಬದಲು ಬೆಂಗಳೂರಿಗೆ ಹೋದರೆ ಟಿವಿ ಸೀರಿಯಲ್‌ಗಳಲ್ಲಿ ನಟಿಸಿಕೊಂಡಾದರೂ ಬದುಕಬಹುದು ಅನ್ನಿಸಿದಾಗ, ಎರಡನೇ ಯೊಚನೆ ಮಾಡದೆ ಒಂದು ಟ್ರಂಕಿಗೆ ಲಗೇಜು ತುಂಬಿಕೊಂಡು ಬೆಂಗಳೂರಿಗೆ ಬಂದೇಬಿಟ್ಟೆ…’
ಒಂದು ಭಂಡ ಧೈರ್ಯದೊಂದಿಗೆ ಈ ಸಂಗಮೇಶ ಅಲಿಯಾಸ್ ಸಂಗಪ್ಪ ಬೆಂಗಳೂರಿಗೆ ಬಂದದ್ದು 1998ರಲ್ಲಿ. ಅವತ್ತಿಗೆ ಯಾರೆಂದರೆ ಯಾರೂ ಇಲ್ಲದ ಬೆಂಗಳೂರಿನಲ್ಲಿ ಅವರದು ಫುಟ್‌ಪಾತ್ ಬದುಕು. ನಿಲ್ಲಲು ನೆಲೆಯಿಲ್ಲ, ಮಲಗಲು ಮನೆಯಿಲ್ಲ, ಹಸಿವು ಹಿಂಗಿಸಲು ಆಹಾರವಿಲ್ಲದ ಸಂದರ್ಭದಲ್ಲಿ ಅವರಿಗೆ ಕಾಣಿಸಿದ್ದು ಸಾಗರ್ ಚಿತ್ರಮಂದಿರದ ಪಕ್ಕವಿರುವ ಬ್ರಹ್ಮವಿದ್ಯಾಶ್ರಮದ ಕಟ್ಟಡ. ಒಂದು ಬೆರಗಿನಿಂದಲೇ ಅಲ್ಲಿಗೆ ಹೋದ ಸಂಗಮೇಶ, ಅಲ್ಲಿನ ಸ್ವಾಮೀಜಿಯ ಬಳಿ ಆಶ್ರಯ ಕೇಳಿದರು. ಅವರು ವಿಸಿದ ಎಲ್ಲ ಕಂಡೀಷನ್‌ಗಳಿಗೂ ಒಪ್ಪಿಕೊಂಡರು. ಆಶ್ರಮದಲ್ಲಿ ಕಸ ಗುಡಿಸಿದರು. ಮುಸುರೆ ತಿಕ್ಕಿದರು. ಈ ಸಂದರ್ಭದಲ್ಲೇ ಸಿನಿಮಾ ಡೈರೆಕ್ಟರಿಯೊಂದು ಸಿಕ್ಕಾಗ ಅದರಲ್ಲಿದ್ದ ನಟರು, ನಿರ್ದೇಶಕರ ಮನೆಗೆ ಹೊರಗಿನಿಂದ ಫೋನ್ ಮಾಡಿ- `ಸರ್, ನನಗೊಂದು ಪಾತ್ರ ಕೊಡ್ರಿ’ ಎಂದು ಕೇಳಲು ಆರಂಭಿಸಿದರು. ಹೀಗಿದ್ದಾಗಲೇ ಇವರ ಫೋನ್ ಕರೆಗೆ ಉತ್ತರಿಸುತ್ತಾ ನಟ ಕಾಶೀನಾಥ್ ಹೇಳಿದರಂತೆ: `ಮಾರಾಯ, ನನಗೇ ಕೆಲ್ಸ ಇಲ್ಲ. ನಿನಗೆ ಹೇಗಪ್ಪಾ ಪಾತ್ರ ಕೊಡಲಿ?’
ಈ ಸಂದರ್ಭದಲ್ಲಿಯೇ ಸಂಗಮೇಶನ ಬದುಕು ಬ್ರಹ್ಮ ವಿದ್ಯಾಶ್ರಮದಿಂದ ಗುಬ್ಬಿ ತೋಟದಪ್ಪ ಹಾಸ್ಟೆಲ್‌ಗೆ ಶಿಫ್ಟಾಯಿತು. ಅಲ್ಲಿದ್ದುಕೊಂಡೇ ಎಂ.ಎ. ಮುಗಿಸಿದರು. ಹಿಂದೆಯೇ ಯುಜಿಸಿ ಪರೀಕ್ಷೆ ಬರೆದ ಸಂಗಮೇಶ, ಅದೇ ವೇಳೆಗೆ ಕೆಎಎಸ್ ಪರೀಕ್ಷೆಯನ್ನೂ ಬರೆದರು. ಈ ಮಧ್ಯೆ ಧಾರವಾಡದ ಆನಂದ ಪಾಟೀಲ ಎಂಬುವರ ಕಡೆಯಿಂದ ಪರಿಚಯವಾದ ಮೈಸೂರ್ ಬ್ಯಾಂಕ್ ಉದ್ಯೋಗಿ ಅಶ್ವತ್ಥ ಕುಲಕರ್ಣಿ, ತಕ್ಷಣವೇ ಈ ಹುಡುಗನನ್ನು ಕಿರುತೆರೆ ನಿರ್ದೇಶಕ ಬ.ಲ. ಸುರೇಶ್‌ಗೆ ಪರಿಚಯಿಸಿದರು. ಅವತ್ತು ಸುರೇಶ್ ಅವರು `ಮನೆತನ’ ಎಂಬ ಧಾರಾವಾಹಿಯ ಕಥೆ-ಚಿತ್ರಕಥೆ-ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದರು. ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ `ಮನೆತನ’ ಧಾರಾವಾಹಿಗೆ ಸಂಭಾಷಣೆ ಬರೆಯಲು ನಿಂತ ಸಂಗಮೇಶ ನಂತರ ತಿರುಗಿ ನೋಡಲಿಲ್ಲ.
`ಇಂಥದೊಂದು ಭರವಸೆಯ ಪ್ರಯಾಣದಲ್ಲಿ ಸಿಕ್ಕ ಸ್ಟೇಷನ್ನೇ- ಸಿಲ್ಲಿಲಲ್ಲಿ! ಸಿಹಿಕಹಿ ಚಂದ್ರು ನಿರ್ದೇಶನದ ಈ ಧಾರಾವಾಹಿಯಲ್ಲಿ ಸಂಗಮೇಶ್‌ಗೆ ದಕ್ಕಿದ್ದು ಕಾಂಪೌಂಡರ್ ಪಾತ್ರ. ಆರಂಭದಲ್ಲಿ ತಿಂಗಳಿಗೆ ಒಂದು ದಿನ ಮಾತ್ರ ನಿಂಗೆ ಕೆಲಸ ಅಂದಿದ್ದರಂತೆ ಚಂದ್ರು. ಆದರೆ ಮುಂದೆ ಈ ಸಂಗಮೇಶ ಅದೆಷ್ಟು ಖ್ಯಾತಿ ಪಡೆದರೆಂದರೆ, ತಿಂಗಳಿಡೀ ಅವರ ಪಾತ್ರ ಬೆಳೆಸಲೇಬೇಕಾದ ಅನಿವಾರ್‍ಯತೆ `ಸಿಲ್ಲಿ ಲಲ್ಲಿ’ ತಂಡಕ್ಕೆ ಬಂತು! ಈ ಮಧ್ಯೆ ಸಂಗಮೇಶರ ಕೆಎಎಸ್ ಪರೀಕ್ಷೆಯ ಫಲಿತಾಂಶ ಬಂದಿತ್ತು. ಇಂಗ್ಲಿಷಿನಲ್ಲಿ ಫೇಲ್ ಎಂದಿದ್ದ ಫಲಿತಾಂಶ ಕಂಡು ಸಂಗಮೇಶ್‌ಗೆ ಆಶ್ಚರ್ಯ. ಎಂ.ಎ. ಪಾಸಾಗಿರುವ ತಾನು ಕೆಎಎಸ್‌ನ ಇಂಗ್ಲಿಷ್‌ನಲ್ಲಿ ಫೇಲಾಗಲು ಸಾಧ್ಯವೇ ಇಲ್ಲ ಎಂಬುದು ಅಚ್ಚರಿಗೆ ಕಾರಣ. ತಕ್ಷಣವೇ ಅವರು ಕೋರ್ಟಿನ ಮೊರೆ ಹೋದರು. ಸ್ವಾರಸ್ಯವೆಂದರೆ, ಅವರಲ್ಲಿ ಲಾಯರ್‌ಗೆ ಕೊಡುವುದಕ್ಕೂ ಕಾಸಿರಲಿಲ್ಲವಂತೆ. ಅದನ್ನೂ ಗೆಳೆಯರಿಂದ ಸಾಲ ಮಾಡಿ ಪೂರೈಸಿದರಂತೆ. (ಅಷ್ಟೇ ಅಲ್ಲ, 5000 ರೂ. ಕೇಳಿದ ಲಾಯರ್‌ಗೆ 1500 ರೂ. ನೀಡಿ ನನ್ನಲ್ಲಿ ಇರೋದೇ ಇಷ್ಟು. ತಪ್ಪು ತಿಳೀಬೇಡಿ ಪ್ಲೀಸ್ ಅಂದರಂತೆ!) ಮುಂದೆ, ಸಂಗಪ್ಪನ ಉತ್ತರ ಪತ್ರಿಕೆ ನ್ಯಾಯಾಲಯದ ಮುಂದೆ ಬಂತು. ಪತ್ರಿಕೆಯ ಮರು ಪರಿಶೀಲನೆ ನಡೆದಾಗ, ಫೇಲಾಗಿದ್ದ ಸಂಗಪ್ಪ, ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದರು! ನಂತರದ ಕೆಲವೇ ದಿನಗಳಲ್ಲಿ ಬಿಬಿಎಂಪಿಯ ಅಸಿಸ್ಟೆಂಟ್ ಕಂಟ್ರೋಲರ್ ಹುದ್ದೆಗೆ ಪೋಸ್ಟಿಂಗೂ ಆಯಿತು. ಈಗ ಹೇಗಿದ್ದಾರೆ ಈ ಸರಕಾರಿ ಅಧಿಕಾರಿ?
ಈ ಪ್ರಶ್ನೆಗೆ ಅವರಿಂದಲೇ ಉತ್ತರ ಕೇಳೋಣ. ಓವರ್ ಟು ಸಂಗಪ್ಪ ಉಪಾಸೆ: `ಬದುಕು ಇಷ್ಟೊಂದು ಸುಂದರ ಅಂದ್ಕೊಂಡಿರಲಿಲ್ಲ. ಧಾರವಾಡದಿಂದ ಬೆಂಗಳೂರಿಗೆ ಬಂದಾಗ ಕಣ್ಣಿಗೆ ಬಟ್ಟೆ ಕತ್ತಲಲ್ಲಿ ಬಿಟ್ಟಂತಾಗಿತ್ತು. ಆ ದಿನಗಳಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದೆ, ಕಸ, ಕುಸುರೆ ತಿಕ್ಕಿದೆ. ಒಂದೇ ಹೊತ್ತು ಊಟ ಮಾಡಿದೆ. ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡೆ. ಇದೆಲ್ಲವೂ ನಡೆದದ್ದು ಇದೇ ಬೃಹತ್ ಬೆಂಗಳೂರಿನ ಮಡಿಲಲ್ಲಿ. ಈಗ, ಅದೇ ಬೆಂಗಳೂರು ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಂಟ್ರೋಲರ್ ನಾನು. ನನ್ನದು ಅಹಂಕಾರದ ಮಾತಲ್ಲ, ಹೆಮ್ಮೆಯ ಮಾತು. ನಾನೀಗ ಏನಾಗಿದ್ದೀನೋ ಅದಕ್ಕೆ ಈ ಬೃಹತ್ ಬೆಂಗಳೂರೇ ಕಾರಣ. ಆಫೀಸರ್ ಆಗಬೇಕು ಎಂಬ ಕನಸಿತ್ತು. ಅದು ನನಸಾಗಿದೆ. ನಾನು ಅನುಭವಿಸಿದ ಕಷ್ಟ ನನ್ನ ಕಿರಿಯರಿಗೆ ಬರಬಾರದು ಅನ್ನೋದು ನನ್ನಾಸೆ. ಅದಕ್ಕಾಗಿ ನನ್ನಿಂದ ಸಾಧ್ಯವಾದ ಎಲ್ಲ ಸಹಾಯ ಮಾಡಲು ನಾನು ಯಾವತ್ತೂ ಸಿದ್ಧ. ನನ್ನ ಯಶಸ್ಸಿನ ಹಾದಿಯಲ್ಲಿ ನನಗೆ ಮೆಟ್ಟಿಲಾದ ಎಲ್ಲರಿಗೂ ನಾನು ಬದುಕಿಡೀ ಋಣಿ….’
ಅಂದಹಾಗೆ, ಸಂಗಮೇಶ ಉಪಾಸೆಯವರನ್ನು ಮಾತಾಡಿಸಬೇಕೆ? 9845471514 ನಂಬರಿಗೆ ಕರೆ ಮಾಡಿ.

ಕೃಪೆ: ಇ-ಲೋಕ ಕನ್ನಡ ಲೋಕ

Wednesday, 3 June 2015

ವಿಜ್ಞಾನಕ್ಕೆ ಸಂಬಂಧಿಸಿದ ಸಂಗತಿಗಳು - 1

ವಿಜ್ಞಾನಕ್ಕೆ ಸಂಬಂಧಿಸಿದ ಸಂಗತಿಗಳು


೧. ಬಾಹ್ಯಾಕಾಶ ನೌಕೆಯಲ್ಲಿ ಮೇಣದ ಬತ್ತಿಯ ಜ್ವಾಲೆಯು ವೃತ್ತಾಕಾರ ಪಡೆಯುವುದು ಏಕೆ?
       ಭೂಮಿಯ ಮೇಲೆ ಮೇಣದ ಬತ್ತಿಗೆ ಬೆಂಕಿ ಹೊತ್ತಿಸಿದಾಗ ಜ್ವಾಲೆಯು ಮೇಲೆರಿದಂತೆ ತೋರುತ್ತದೆ. ಇದಕ್ಕೆ ಕಾರಣ ಗುರುತ್ವಾಕರ್ಷಣ ಶಕ್ತಿ. ಆದರೆ, ಬಾಹ್ಯಾಕಾಶ ನೌಕೆಯಲ್ಲಿ ಗುರುತ್ವಾಕರ್ಷಣ ಶಕ್ತಿ ಇರುವುದಿಲ್ಲ. ಹಾಗಾಗಿ ಜ್ವಾಲೆ ಮೇಲೆರದೆ, ಸುತ್ತಲೂ ಹರಡಿದಂತೆ ಕಾಣುತ್ತದೆ. ಲಭ್ಯವಿರುವ ಆಮ್ಲಜನಕ ಬಳಸಿಕೊಂಡು ನಂತರ ಜ್ವಾಲೆ ನಂದುವುದು. ಇಲ್ಲಿ ಜ್ವಾಲೆ ಮೇಲೆರಲು ಗುರುತ್ವಾಕರ್ಷಣ ಶಕ್ತಿ ಹೇಗೆ ಕಾರಣ ಎಂಬ ಪ್ರಶ್ನೆಯು ಮೂಡುತ್ತದೆ. ಉತ್ತರ ಬಹಳ ಸರಳ. ಮೇಣದ ಬತ್ತಿ ಉರಿದಂತೆ ಬಿಸಿ ಅನಿಲವನ್ನು ತಂಪಾದ ಗಾಳಿ ಮೇಲಕ್ಕೆ ದಬ್ಬುವುದು. ಇದರಿಂದಾಗ ಉಬ್ಬಾದ ಗಾಳಿಯ ಪ್ರವಾಹ ಉಂಟಾಗಿ ಲಂಬವಾಗಿ ಎಳೆದಂತೆ ಜ್ವಾಲೆಯ ಆಕಾರ ಉಂಟಾಗುವುದು.


೨. ಮೇದೋಜೀರಕ ಗ್ರಂಥಿ ಎಂದರೇನು?
        ಹೊಟ್ಟೆಯ ಹಿಂಭಾಗ ಮತ್ತು ಬೆನ್ನುಮೂಳೆಯ ಮುಂಭಾಗದ ಭಾಗದಲ್ಲಿರುವ ಗ್ರಂಥಿ ಇದು. ಈ ಗ್ರಂಥಿ ಆಹಾರವನ್ನು ಜೀರ್ಣ ಮಾಡುವ ಮೇದೋಜೀರಕ ರಸವನ್ನು ಉತ್ಪತ್ತಿ ಮಾಡುತ್ತದೆ ಮತ್ತು ದೇಹದ ಸಕ್ಕರೆ ಅಂಶವನ್ನು ಹಿಡಿತದಲ್ಲಿಡುವ ಇನ್ಸುಲಿನ್‍ನ್ನು ಉತ್ಪತ್ತಿ ಮಾಡುತ್ತದೆ. ಮೇದೋಜೀರಕ ಗ್ರಂಥಿ ಊದಿಕೊಳ್ಳಬಹುದು. ಹೀಗಾದಾಗ ವ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ಕಾರಣವಾಗಬಹುದು. ಮಧುಮೇಹವು ಮೇದೋಜೀರಕ ಸಂಬಂಧಿ ಮತ್ತೊಂದು ಪ್ರಮುಖ ಕಾಯಿಲೆ. ಇದರಲ್ಲಿ ಟೈಪ್-೧ ಮತ್ತು ಟೈಪ್-೨ ಎಂಬ ಎರಡು ವಿಧಗಳಿವೆ. ಟೈಪ್-೧ರಲ್ಲಿ ಮೇದೋಜೀರಕ ಗ್ರಂಥಿ ಇನ್ಸುಲಿನ್‍ನ್ನು ಉತ್ಪಾದಿಸುವುದಿಲ್ಲ. ಟೈಪ್-೨ರಲ್ಲಿ ಇನ್ಸುಲಿನ್ ಉತ್ಪಾದನೆಯಾದರೂ ಅದರ ಸೂಕ್ತ ಬಳಕೆಯಾಗುವುದಿಲ್ಲ.


೩. ಬ್ರೆಡ್ ತಯಾರಿಕೆಯಲ್ಲಿ ಯೀಸ್ಟ್ (ಹುದುಗು) ಬಳಕೆ ಬೇಕೆ ಬೇಕು. ಏಕೆ?
        ಯೀಸ್ಟ್ ಎಂಬುದು ಕಣ್ಣಿಗೆ ಕಾಣದ ಫಂಗಸ್. ಬ್ರೆಡ್ ತಯಾರಿಸಲು ಯೀಸ್ಟ್ ಬಳಸದಿದ್ದರೆ ಬ್ರೆಡ್ ಊದಿಕೊಂಡು ಮೆತ್ತಗೆ ಇರುವುದಿಲ್ಲ. ಬದಲಿಗೆ ಚಪಾತಿಯಂತಾಗುವುದು. ಯೀಸ್ಟನ್ ಕೆಲಸವನ್ನು ಅರಿಯಲು ಹೀಗೊಂದು ಪ್ರಯೋಗ ಮಾಡಬಹುದು. ಮೂರು ಚಮಚದಷ್ಟು ಯೀಸ್ಟನ್ನು ಗಾಜಿನ ಬಾಟಲಿಗೆ ಹಾಕಿ. ನಂತರ ಎರಡು ಚಮಚದಷ್ಟು ಸಕ್ಕರೆ ಹಾಕಿ. ನಿಧಾನವಾಗಿ ಅರ್ಧ ಬಾಟಲಿಯಷ್ಟು ಬೆಚ್ಚನೆ ನೀರು ತುಂಬಿ ಬಲೂನಿನ ಬಾಯಿಯನ್ನು ಬಾಟಲಿಯ ತುದಿಗೆ ಭದ್ರಪಡಿಸಿ. ಇದಾದ ಒಂದು ಗಂತೆಯ ನಂತರ ನೀರಿನಲ್ಲಿ ಗುಳ್ಳೆಗಳು ಉಂಟಾಗಿ ಬಲೂನಿಗೆ ಗಾಳಿ ತುಂಬಿಕೊಳ್ಳುವುದು. ಯೀಸ್ಟ್ ಸಕ್ಕರೆಯನ್ನು ಭಕ್ಷಿಸುವುದರಿಂದ ಹೀಗಾಗುವುದು. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗುವುದು. ಈ ಅನಿಲ ನೀರಿನ ಮೂಲಕ ಹಾದು ಬಲೂನಿನೊಳಗೆ ಸೇರುವುದು. ಬ್ರೆಡ್ ತಯಾರಿಕೆಯಲ್ಲಿ ಯೀಸ್ಟ್ ಬಳಸಿದಾಗ ಹಿಟ್ಟಿನಲ್ಲಿರುವ ನೈಸರ್ಗಿಕ ಸಕ್ಕರೆಯನ್ನು ಯೀಸ್ಟ್ ಭಕ್ಷಿಸಿ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ ಮಾಡುವುದು. ಬ್ರೆಡ್ ಸುಡುವಾಗ ಈ ಅನಿಲ ಹೊರ ಹೋಗಲು ಬ್ರೆಡ್ ಊದಿಕೊಳ್ಳುವುದು.


೪) ನಿತ್ಯವೂ ತನ್ನ ಬಣ್ಣ ಬದಲಿಸುವ ಪರ್ವತ ಯಾವುದು? ಇದಕ್ಕೆ ಕಾರಣವೇನು?
    ಪ್ರತಿದಿನ ಬಣ್ಣ ಬದಲಿಸುವ ಪರ್ವತ ದಕ್ಷಿಣ ಆಸ್ಟ್ರೇಲಿಯಾದ ಆಯರ್ಸ್ ರಾಕ್. ಈ ಬೆಟ್ಟದ ಬಂಡೆಗಳ ರಚನೆಯೇ ಇದಕ್ಕೆ ಕಾರಣವಾಗಿದೆ. ಸೂರ್ಯ ಕಿರಣದ ಕೋನಕ್ಕೆ ಹಾಗೂ ಹವಾಮಾನಕ್ಕೆ ತಕ್ಕಂತೆ ಬಣ್ಣಗಳು ಬದಲಾಗುವ ರೀತಿಯಲ್ಲಿ ಇಲ್ಲಿ ಬಂಡೆಗಳಿವೆ. ಆಯರ್ಸ್ ರಾಕ್ ಮರಳುಗಲ್ಲಿನಿಂದ ರಚನೆಯಾಗಿದೆ. ನಮಗೆಲ್ಲ ಗೊತ್ತಿರುವಂತೆ ಸೂರ್ಯ ಹುಟ್ಟುವ ಮತ್ತು ಮುಳುಗುವ ಸಮಯದಲ್ಲಿ ಸೂರ್ಯನ ಕಿರಣಗಳಲ್ಲಿ ಕಿತ್ತಳೆ ಮತ್ತು ಕೆಂಪು ಬಣ್ಣಗಳೇ ಹೆಚ್ಚಾಗಿರುತ್ತವೆ. ಆಗ ಇತರ ಬಣ್ಣಗಳನ್ನು ವಾತಾವರಣದಲ್ಲಿನ ಧೂಳಿನ ಕಣಗಳು ಎಲ್ಲೆಡೆಗೆ ಹರಡಿರುತ್ತವೆ. ಮಧ್ಯಾಹ್ನದ ಹೊತ್ತಿಗೆ ಸೂರ್ಯನ ಕಿರಣಗಳಲ್ಲಿ ಇತರ ಬಣ್ಣಗಳೂ ಇರುತ್ತವೆ. ಆದ್ದರಿಂದ ಆ ವೇಳೆಯಲ್ಲಿ ಬೆಟ್ಟದ ಬಣ್ಣ ಬದಲಾಗುತ್ತದೆ.


೫) ನಕ್ಷತ್ರಗಳ ಬಣ್ಣ ಬೇರೆ ಬೇರೆ. ಏಕೆ?
        ಬರಿಗಣ್ಣಿನಿಂದ ನೋಡಿದಾಗ ಎಲ್ಲ ನಕ್ಷತ್ರಗಳು ಒಂದೇ ಬಣ್ಣದಲ್ಲಿ ಗೋಚರಿಸುತ್ತವೆ. ಅಸಲಿಗೆ ನಕ್ಷತ್ರಗಳು ಬೇರೆ ಬೇರೆ ಬಣ್ಣವನ್ನು ಹೊಂದಿವೆ. ಅವುಗಳ ಮೇಲ್ಮೈ ಉಷ್ಣತೆ ಹೀಗಾಗಲು ಕಾರಣ. ಅತಿ ತಣ್ಣಗಿರುವ ನಕ್ಷತ್ರಗಳ ಬಣ್ಣ ಕೆಂಪಾಗಿರುತ್ತದೆ. ಶಾಖ ಹೆಚ್ಚಾಗಿರುವ ತಾರೆಗಳು ತಾಪಮಾನಕ್ಕೆ ಅನುಗುಣವಾಗಿ ಹಳದಿ ಅಥವಾ ಬಿಳೀಯಾಗಿರುತ್ತವೆ. ಅತ್ಯಂತ ಹೆಚ್ಚು ಉಷ್ಣತೆ ಹೊಂದಿರುವ ನಕ್ಷತ್ರಗಳು ನೀಲಿ ಮಿಶ್ರಿತ ಬಿಳಿ ಬಣ್ಣದ್ದಾಗಿ ಗೋಚರಿಸುತ್ತವೆ.

        ನಮ್ಮ ಸೂರ್‍ಯ ಕೂಡ ಒಂದು ನಕ್ಷತ್ರ. ಅದರ ಮೇಲ್ಮೈ ಉಷ್ಣಾಂಶ ೫೦೦೦ ಡಿಗ್ರಿ ಸೆಲ್ಸಿಯಸ್. ಈ ಪ್ರಮಾಣದ ತಾಪಮಾನ ಹೊಂದಿವ ತಾರೆಗಳು ಹಳದಿ ಬಣ್ಣದ್ದಾಗಿ ಅಂದರೆ ನಮ್ಮ ಸೂರ್ಯನಂತೆ ಗೋಚರಿಸುತ್ತವೆ. ನಕ್ಷತ್ರಗಳ ಬಣ್ಣವು ಅವರ ಮೇಲ್ಮೈ ಉಷ್ಣಾಂಶವನ್ನು ನಿರ್ಧರಿಸುವಲ್ಲಿ ವಿಜ್ಞಾನಿಗಳೀಗೆ ನೆರವಾಗುತ್ತವೆ. ಸಿರಿಯಸ್‍ನಂತಹ ಉಜ್ವಲ ನಕ್ಷತ್ರವು ದಿಗಂತದಲ್ಲಿರುವಾಗ ಅನೇಕ ಬಣ್ಣಗಳಲ್ಲಿ ಗೋಚರಿಸುತ್ತದೆ. ವಾಸ್ತವವಾಗಿ ಸಿರಿಯಸ್‍ನ ಬಣ್ಣ ನೀಲಿ ಮಿಶ್ರಿತ ಬಿಳಿ.



೬) ಮೇಜಿನ ಮೇಲಿರುವ ಪುಸ್ತಕಗಳನ್ನು ಕಿರುಬೆರಳನಿಂದ ಎತ್ತಲು ಪ್ರಯತ್ನಿಸಿದರೆ ಹೆಚ್ಚಿನ ಬಲ ಪ್ರಯೋಗಿಸಬೇಕಾಗುತ್ತದೆ. ಆದರೆ, ಪೆನ್ಸಿಲ್‍ನ್ನು ಸನ್ನೆಗೋಲನ್ನಾಗಿ ಬಳಸಿ ಸುಲಭವಾಗಿ ಎತ್ತಬಹುದು. ಹೇಗೆ?
        ಸನ್ನೆಗೋಲಿನ ವಿಶೇಷತೆಯೇ ಅದು. ನಾಲ್ಕೈದು ಪುಸ್ತಕಗಳ ಕೆಳಗೆ ಪೆನ್ಸಿಲ್‍ನ್ನು ಮೀಟುವುದು. ನಮ್ಟರ ಮೀಟಿದ ಪೆನ್ಸಿಲಿನ ತುದಿಗೆ ಸಮೀಪದಲಿ ಮತ್ತೊಂದು ಪೆನ್ಸಿಲ್‍ನು ಅದರ ಕೆಳಗೆ ಇಟ್ಟು ಅದುಮಿದರೆ ಪುಸ್ತಕ ಸುಲಭವಾಗಿ ಮೇಲೆರುವುದು. ಕೆಳಗೆ ಬಳಸಿದ ಪೆನ್ಸಿಲ್ ಸನ್ನೆಕೇಂದ್ರವಾಗಿ ವರ್ತಿಸುವುದು. ಸನ್ನೆಗೋಲು ಸರಳಯಂತ್ರವಾಗಿದ್ದು ಅದರ ಮೇಲೆ ಹಾಕಿದ ಬಲವನು ದ್ವಿಗುಣಗೊಳಿಸುವುದ್. ಇದರಿಂದ ದೊಡ್ಡ ವಸ್ತುಗಳನ್ನು ಸುಲಭವಾಗಿ ಎತ್ತಬಹುದು ಹಾಗೂ ತಳ್ಳಬಹುದು. "ನನಗೆ ನಿಲ್ಲಲು ಸ್ವಲ್ಪ ಜಾಗ ಕೊಡಿ, ನಾ ಇಡೀ ಭೂಮಿಯನ್ನೇ ಎತ್ತುತ್ತೇನೆ." ಎಂದು ಆರ್ಕಿಮೀಡಿಸ್ ಹೇಳಿದ್ದು ಈ ತತ್ವದ ಆಧಾರದ ಮೇಲೆಯೇ.

೭) ಚಹಾ ಕುಡಿಕೆ (ಟೀ ಪಾಟ್)ಯಲ್ಲಿ ಸಣ್ಣ ರಂಧ್ರ ಮಾಡಿರುತ್ತಾರೆ. ಏಕೆ?
        ನೀರಿನಿಂದ ತುಂಬಿದ ಚಹಾ ಕುಡಿಕೆಯನ್ನು ಭದ್ರಪಡಿಸಿದಾಗ ಅದರೊಳಗಿನ ಹಬೆ ಕ್ರಮೇಣ ತಣ್ಣಗಾಗಿ ನಿರ್ವಾತ ಪ್ರದೇಶ ಸೃಷ್ಟಿಯಾಗುವುದು. ಕುಡಿಕೆಯಲ್ಲಿ ರಂಧ್ರವಿದ್ದರೆ ಹೊರಗಿನ ಗಾಳಿ ಕುಡಿಕೆಯೊಳಗೆ ನುಸುಳಿ ಒಳಗೆ ಮತ್ತು ಹೊರಗೆ ಏಕರೂಪದ ಒತ್ತಡ ನಿರ್ಮಾಣವಾಗುವುದು. ಒಂದು ವೇಳೆ ಕುಡಿಕೆಯೊಳಗೆ ನಿರ್ವಾತವೇ ಇದ್ದರೆ ವಾಯುಮಂಡಲದ ಒತ್ತಡ ಕುಡಿಕೆಯ ಮುಚ್ಚಳವನ್ನು ಅದುಮುವುದು. ಇದರಿಂದಾಗಿ ಚಹಾ ಕುಡಿಕೆ ತೆರೆಯಲು ಕಷ್ಟವಾಗುವುದು.


೮) ವಿಷಾಹಾರ ಸೇವಿಸಿದಾಗ ಕಂಡುಬರುವ ಮೊದಲ ಲಕ್ಷಣಗಳಾವುವು?
        ರೋಗಕಾರಕ ಸೂಕ್ಷ್ಮಜೀವಿಗಳಿಂದ ಕಲುಷಿತವಾಗಿರುವ ಆಹಾರವನ್ನು ವಿಷಾಹಾರ ಎನ್ನಲಾಗುತ್ತದೆ. ಇಂಥ ಆಹಾರ ಸೇವಿಸಿದಾಗ ಉಂಟಾಗುವ ಮೊದಲ ಲಕ್ಷಣ - ಅತಿಭೇದಿ, ವಾಂತಿ ಬಂದ ಹಾಗೆ ಅಥವಾ ಹೊಟ್ಟೆ ಕಚ್ಚಿದ ಹಾಗೆ ಆಗುತ್ತದೆ. ಈ ಲಕ್ಷಣಗಳು ಗಂಭೀರ ಸ್ವರೂಪದಲ್ಲಿದ್ದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಬಾಯಿ ಒಣಗುವುದು, ತುಂಬಾ ಸುಸ್ತಾಗುವುದು, ಕಾಲುಗಳ ಸ್ನಾಯುಸೆಳೆತ, ತಲೆ ಸುತ್ತುವುದು ಹಾಗೂ ಅಲ್ಪ ಪ್ರಮಾಣದ ಕಡುಬಣ್ಣದ ಮೂತ್ರವಿಸರ್ಜನೆ ಕಂಡು ಬರುತ್ತದೆ.

ಲೇಖನ: ಗುರುಪ್ರಸಾದ್ ಎಸ್ ಹತ್ತಿಗೌಡರ