ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಲೇಖನ
"ಭಾರತವು ಹಬ್ಬಗಳ ತವರೂರು. ಇಲ್ಲಿ ಎಲ್ಲ ಹಬ್ಬಗಳನ್ನು ಆಯಾ ಧರ್ಮ, ಪ್ರಾದೇಶಿಕತೆ, ಸಂಸ್ಕೃತಿಗೆ ಅನುಗುಣವಾಗಿ ಆಚರಿಸುತ್ತಾರೆ. ಈ ಎಲ್ಲ ಹಬ್ಬಗಳಲ್ಲಿ ಪ್ರಮುಖವಾದ ಹಬ್ಬವೆಂದರೆ, ದೀಪಾವಳಿ." ಭಾರತದ ಎಲ್ಲ ಭಾಗಗಳಲ್ಲೂ ಸಂಭ್ರಮವಾಗಿ ಆಚರಿಸಲ್ಪಡುವ ದೀಪಾವಳಿಯನ್ನು ದಕ್ಷಿಣ ಭಾರತದಲ್ಲಿ ಮೂರು ದಿನ ಆಚರಿಸಿದರೆ, ಉತ್ತರ ಭಾರತದಲ್ಲಿ ಐದು ದಿನಗಳ ಕಾಲ ಆಚರಿಸುವರು.
ಅಸತೋಮಾ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋಮಾ ಅಮೃತಂಗಮಯ ||
ಅರ್ಥ: ಅಸತ್ಯದಿಂದ ಸತ್ಯದೆಡೆಗೂ, ಕತ್ತಲೆಯಿಂದ ಬೆಳಕಿನೆಡೆಗೂ, ಮೃತ್ಯುವಿನಿಂದ ಅಮೃತತ್ವದೆಡೆಗೂ ನಮ್ಮನ್ನು ಕರೆದೊಯ್ಯುವ ಜ್ಞಾನದ ಬೆಳಕಿನ ಸಂಕೇತವಾಗಿದೆ. "ಅಜ್ಞಾನವೆಂಬ ಅಂಧಕಾರವನ್ನು ಜ್ಞಾನವೆಂಬ ಬೆಳಕಿನಿಂದ ಹೊಡೆದೋಡಿಸಿ, ಮನುಷ್ಯನ ಬದುಕಿನಲ್ಲಿ ಜ್ಞಾನವನ್ನು ತುಂಬುವಂತೆ ಮಾಡುವ ಸಂಕೇತವೇ ದೀಪಾವಳಿ." ಒಂದು ದೀಪದಿಂದ ನೂರಾರು ದೀಪಗಳನ್ನು ಹೇಗೆ ಹಚ್ಚಬಹುದೋ ಹಾಗೆಯೇ ಒಬ್ಬ ಜ್ಞಾನಿಯು ತನ್ನಲ್ಲಿರುವ ಜ್ಞಾನದಿಂದ ನೂರಾರು ಅಜ್ಞಾನಿಗಳನ್ನು ಜ್ಞಾನಿಯನ್ನಾಗಿ ಪರಿವರ್ತಿಸಬಹುದು.
ದೀಪ+ಅವಳಿ ಎಂದರೆ `ಜೋಡಿ ದೀಪ' ಹಾಗೂ ಸಾಲು ಸಾಲುಗಳ ದೀಪಗಳ ಹಬ್ಬಕ್ಕೆ ದೀಪಾವಳಿ ಎಂಬ ಹೆಸರು ಬಂದಿದೆ.
ಹಬ್ಬದ ಪೂರ್ವದಲ್ಲಿ ಮನೆ ಸ್ವಚ್ಚಗೊಳಿಸಿ, ಸಾರಿಸಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಈ ಹಬ್ಬದಲ್ಲಿ ಫಳಾರದ್ದೇ ಜೋರು. ಉಂಡಿ, ಚಕ್ಕುಲಿ, ಕರ್ಚಿಕಾಯಿ, ಶಂಕರಪಾಳಿ, ಚೂಡಾ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತದೆ.
ಅಶ್ವೀಜ ಮಾಸ ಬಹುಳ ತ್ರಯೋದಶಿಯಂದು ದೀಪಾವಳಿ ಪ್ರಾರಂಭವಾಗುತ್ತದೆ. ಇದಕ್ಕೆ `ಜಲಪೂರ್ಣ ತ್ರಯೋದಶಿ' ಎಂತಲೂ ಕರೆಯುತ್ತಾರೆ. ಅಂದು ಸಂಜೆ ಸ್ನಾನದ ಕೋಣೆಯನ್ನು ಚೆನ್ನಾಗಿ ಶುದ್ಧಮಾಡಿ ಹಂಡೆಗೆ, ನೀರಿನ ತೊಟ್ಟಿ(ಇಂದು ಗೀಜರ್, ಬಾಯ್ಲರ್) ಚೆನ್ನಾಗಿ ಉಜ್ಜಿ ತೊಳೆದು, ಶುದ್ಧವಾದ ನೀರನ್ನು ತುಂಬಿ ಪಾತ್ರೆಗಳಿಗೆ ಸುಣ್ಣದಲ್ಲಿ ಪಟ್ಟೆಯನ್ನು ಬಳಿದು, ಗೆಜ್ಜೆ ವಸ್ತ್ರಗಳನ್ನೇರಿಸಿ ಅರಿಶಿಣ, ಕುಂಕುಮಗಳಿಂದ ನೇವೈದ್ಯದಲ್ಲಿ ವಿಶೇಷವಾಗಿ ಶಾವಿಗೆ ಪಾಯಸ ಮಾಡಿ ನೇವೈದ್ಯ ಊಟ ಮಾಡುತ್ತಾರೆ. ಇದನ್ನು `ನೀರು ತುಂಬುವ ಹಬ್ಬ' ಎಂದು ಕರೆಯುತ್ತಾರೆ.
ನರಕ ಚತುರ್ದಶಿ : ಮನೆಯವರೆಲ್ಲರೂ ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುತ್ತಾರೆ. ಕೇದಾರೇಶ್ವರ ವ್ರತ ಹಾಗೂ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಧನಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಅರುಣೋದಯದಲ್ಲಿ ಮನೆಯಂಗಳ ಸಾರಿಸಿ, ರಂಗೋಲಿ ಹಾಕಿ ದೀಪಗಳನ್ನು ಬೆಳಗಿಸಲಾಗುತ್ತದೆ. ಅಂದ ಚೆಂದದ ಆಕಾಶಬುಟ್ಟಿಗಳನ್ನು ಮನೆಯ ಮುಂಬಾಗಿಲಿಗೆ ಇಳಿಬಿಟ್ಟ ದೃಶ್ಯ ಕಾಣಸಿಗುತ್ತದೆ. ಈ ದಿನದ ಸ್ನಾನಕ್ಕೆ ಬಹಳ ಮಹತ್ವವಿದೆ. ಸ್ತ್ರೀಯರು, ಪುರುಷರು, ಮಕ್ಕಳು, ವೃದ್ಧರು, ರೋಗಿಗಳನ್ನೊಳಗೊಂಡಂತೆ ಸನ್ಯಾಸಿಗಳು ಸಹ ಇಂದು ಎಣ್ಣೆಸ್ನಾನ ಮಾಡಲೇಬೇಕು ಎಂದು ಧರ್ಮಶಾಸ್ತ್ರ ಹೇಳುತ್ತದೆ. ಎಣ್ಣೆಯಲ್ಲಿ ಲಕ್ಷ್ಮೀಯು, ನೀರಿನಲ್ಲಿ ಗಂಗೆಯೂ ಇರುವದರಿಂದ ಲಕ್ಷ್ಮೀ, ಗಂಗೆಯರ ಕೃಪೆ, ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿಂದ ಎಣ್ಣೆಸ್ನಾನ ಮಾಡುತ್ತಾರೆ.
`ನರಕ' ಎಂಬುದಕ್ಕೆ ಅಜ್ಞಾನ ಎಂಬ ಅರ್ಥವಿದೆ. ಈ ಅಜ್ಞಾನವು ಚತುರ್ದಶಿಯ ದಿನದಿಂದಲೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ `ಚತುರ್ದಶಿ' ಎಂದರೆ ಹದಿನಾಲ್ಕು ವಿದ್ಯೆ ಎಂದರ್ಥ. ಜ್ಞಾನವನ್ನು ಪಡೆಯಲು ೧೪ ವಿದ್ಯೆಗಳನ್ನು ಸಂಪಾದಿಸಬೇಕೆಂದು ಎಂದು ವೇದೋಪನಿಷತ್ತುಗಳು ಹೇಳುತ್ತವೆ. ಆ ಹದಿನಾಲ್ಕು ವಿದ್ಯೆಗಳು ಹೀಗಿವೆ -
೧. ಯಜುರ್ವೇದ
೨. ಸಾಮವೇದ
೩. ಋಗ್ವೇದ
೪. ಅಥರ್ವಣವೇದ
೫. ಕಲ್ಪ
೬. ಸಂಹಿತೆ
೭. ಜ್ಯೋತಿಷ್ಯ
೮. ಪುರಾಣ
೯. ಸ್ಮೃತಿ
೧೦. ವ್ಯಾಕರಣ
೧೧. ಶೀಕ್ಷಾ
೧೨. ನ್ಯಾಯ
೧೩. ಛಂದಸ್ಸು
೧೪. ಮೀಮಾಂಸೆ
ದೀಪಾವಳಿ ಅಮವಾಸ್ಯೆ ಲಕ್ಷ್ಮೀ ಪೂಜೆಗೆ ಅತ್ಯಂತ ಪ್ರಶಸ್ತವಾದ ಶುಭದಿನ. ಸಾಮಾನ್ಯವಾಗಿ ಹಿಂದೂ ಪಂಚಾಂಗದ ಪ್ರಕಾರ ಅಮವಾಸ್ಯೆಯನ್ನು ಅಶುಭದಿನ ಎಂದು ಪರಿಗಣಿಸಲಾಗುತ್ತದೆ. ಅಂದು ಯಾವುದೇ ಹೊಸ ಕಾರ್ಯವಾಗಲೀ, ಖರೀದಿಯಾಗಲಿ, ಮಂಗಳಕರ ಪೂಜೆಯನ್ನಾಗಲೀ ಮಾಡುವದಿಲ್ಲ. ಆದರೆ, ಈ ದೀಪಾವಳಿ ಅಮವಾಸ್ಯೆಯು ಇದಕ್ಕೆ ಹೊರತಾಗಿದೆ. ಏಕೆಂದರೆ, ಪುರಾಣದ ಕಾಲದಲ್ಲಿ ಸಮುದ್ರಮಂಥನ ಮಾಡುವಾಗ ಮಹಾಲಕ್ಷ್ಮಿಯು ಜನಿಸಿದಳು ಎಂಬ ಪ್ರತೀತಿಯಿಂದ ಇಂದು ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳಲ್ಲಿ, ಕಛೇರಿಗಳಲ್ಲಿ ಧನಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿ, "ವರುಷವೆಲ್ಲಾ ಹರುಷ ನೀಡಿ, ಸಿರಿ-ಸಂಪತ್ತು ನೀಡೆಂದು" ಪ್ರಾರ್ಥಿಸುತ್ತಾರೆ. ಎಲ್ಲರಿಗೂ ಸಿಹಿ ಹಂಚಿ ಖುಷಿಪಡುತ್ತಾರೆ. ಅಂದು ಇರುಳೆಲ್ಲ ಅಂಗಡಿ ಬಾಗಿಲು ತೆಗೆದಿರಿಸಿ ಜಾಗರಣೆ ಮಾಡುತ್ತಾರೆ. ಈ ದಿನದಂದು ಯಾವುದೇ ಶುಭಕಾರ್ಯವನ್ನು ತಿಥಿ, ನಕ್ಷತ್ರ ಕಾಲವನ್ನು ನೋಡದೇ ಆರಂಭಿಸಬಹುದೆಂದು ಹೇಳುತ್ತಾರೆ. ಸಂಜೆ ಹಾಡು, ಕುಣಿತ, ಬಂಧು-ಬಾಂಧವರೊಡನೆ ಜೂಜಾಡುತ್ತಾ ರಾತ್ರಿ ಸಮಯವನ್ನು ಕಳೆಯುತ್ತಾರೆ. ವಿಶೇಷವೆಂದರೆ, ಅಂದು ಮನೆ, ಬೀದಿ, ದೇವಸ್ಥಾನ ಅಲ್ಲದೇ ಸ್ಮಶಾನದಲ್ಲಿಯೂ ದೀಪವನ್ನು ಬೆಳಗಿಸಲಾಗುತ್ತದೆ.
ಈ ನರಕ ಚತುರ್ದಶಿಯ ಪೌರಾಣಿಕ ಹಿನ್ನೆಲೆ ಕಥೆಯೊಂದು ಹೀಗಿದೆ -
ದ್ವಾಪರಯುಗದಲ್ಲಿ ನರಕಾಸುರ ಎಂಬ ರಾಕ್ಷಸನು ಲೋಕಕಂಟಕನಾಗಿದ್ದ. ಆತ ೧೬ ಸಾವಿರ ರಾಜಪುತ್ರಿಯರನ್ನು ಸೆರೆಯಲ್ಲಿಟ್ಟಿದ್ದನು. ಇವನ ಉಪಟಳ ತಾಳಲಾರದೆ ಇಂದ್ರಾದಿಯಾಗಿ ಎಲ್ಲ ದೇವತೆಗಳು ಶ್ರೀ ಕೃಷ್ಣನಲ್ಲಿ ಮೊರೆ ಹೋದರು.ನಂತರ ಶ್ರೀ ಕೃಷ್ಣನು ಅಶ್ವೀಜ ಮಾಸದ ಬಹುಳ ಕೃಷ್ಣಪಕ್ಷ ಚತುರ್ದಶಿಯಂದು ಸಂಹಾರ ಮಾಡಿದನು. ನಂತರ ಸೆರೆಯಲ್ಲಿಟ್ಟಿದ್ದ ೧೬ಸಾವಿರ ರಾಜಪುತ್ರಿಯರನ್ನು ಬಿಡುಗಡೆ ಮಾಡಿದನು. ಅವರೆಲ್ಲರೂ ಸೆರೆಯಾಳುಗಳಾಗಿದ್ದ ತಮ್ಮನ್ನು ಯಾರೂ ವಿವಾಹವಾಗುವದಿಲ್ಲವೆಂದು ಬಗೆದು ಶ್ರೀ ಕೃಷ್ಣನನ್ನು ವರಿಸಿದರು. ನರಕಾಸುರನನ್ನು ವಧಿಸಿದ ರಕ್ತದ ಕೊಳೆಯನ್ನು ತೊಳೆಯಲು ರುಕ್ಮಿಣಿಯು ಶ್ರೀ ಕೃಷ್ಣನಿಗೆ ಎಣ್ಣೆನೀರು ಹಚ್ಚಿ ಅಭ್ಯಂಗ ಸ್ನಾನ ಮಾಡಿಸಿದಳೆಂದು, ಅದರ ಪ್ರತೀಕವಾಗಿ ಎಣ್ಣೆನೀರು ಸ್ನಾನ ಮಾಡಲಾಗುತ್ತದೆ.
ಈ ದಿನದ ಜೈನರ ೨೪ನೇ ತೀರ್ಥಂಕರನಾದ ಮಹಾವೀರನು ನಿರ್ವಾಣವಾಗಿರುವದರಿಂದ ಗುಜರಾತಿನ ಮಂದಿ ಇದನ್ನು ಹೊಸ ವರ್ಷವೆಂದು ಕರೆಯುತ್ತಾರೆ.
ಬಲಪಾಡ್ಯಮಿ : ಇಂದಿನಿಂದ ಕಾರ್ತಿಕಮಾಸದಾರಂಭ. ಈ ಹಬ್ಬದ ಪೌರಾಣಿಕ ಕಥೆಯ ಪ್ರಕಾರ- ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಯು ಮಹಾದಾನಿ; ಹಾಗೆಯೇ ಮಹಾಗರ್ವಿ. ಇಂದ್ರನನ್ನು ಸೋಲಿಸಿ ಸ್ವರ್ಗವನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದ. ಇವನ ಗರ್ವವನ್ನು ಮುರಿಯಬೇಕೆಂದು ಭಗವಾನ್ ವಿಷ್ಣುವು ವಾಮನ ಅವತಾರ ತಾಳಿ ಬಲಿಚಕ್ರವರ್ತಿಗೆ ಮೂರಡಿ ಜಾಗ ಕೇಳಿದಾಗ, ಬಲಿಯು ಅಹಂನಿಂದ "ಕೇವಲ ಮೂರಡಿ ಜಾಗವೇ, ವಿಶಾಲವಾದ ನನ್ನ ಸಾಮ್ರಾಜ್ಯದಲ್ಲಿ ನಿನಗೆ ಮೂರಡಿ ಜಾಗ ಕೊಡಬಲ್ಲೆ." ಎಂದು ಗರ್ವದಿಂದ ಹೇಳುತ್ತಾನೆ. ಕೂಡಲೇ ವಿಷ್ಣುವು ಆಕಾಶದೆತ್ತರಕ್ಕೆ ಬೆಳೆದು, ಒಂದು ಹೆಜ್ಜೆ ಭೂಮಿಯ ಮೇಲೆ ಇನ್ನೊಂದು ಹೆಜ್ಜೆ ಆಕಾಶದಲ್ಲಿ ಇಟ್ಟು, ಇನ್ನೊಂದು ಹೆಜ್ಜೆ ಎಲ್ಲಿ ಇಡಲಿ ಎಂದು ಕೇಳಿದಾಗ, ಬಲಿಯು ತನ್ನ ಗರ್ವವನ್ನು ಮುರಿದು ತನ್ನ ಶಿರಸ್ಸಿನ ಮೇಲೆ ಇಡು ಎಂದಾಗ ಅದರಂತೆ ವಿಷ್ಣುವು ಅವನನ್ನು ಪಾತಾಳಕ್ಕೆ ತಳ್ಳುತ್ತಾನೆ. ನಂತರ ಪಾತಾಳದ ದ್ವಾರವನ್ನು ತಾನೇ ಕಾಯುವದಾಗಿ ನಾರಾಯಣ ಹೇಳುತ್ತಾನೆ.
ಬಲಿ ಚಕ್ರವರ್ತಿಯು ವಿಷ್ಣುವಿನಲ್ಲಿ ವರುಷದಲ್ಲಿ ಮೂರುದಿನ ನನ್ನ ರಾಜ್ಯವನ್ನು ನೋಡುವ ಅವಕಾಶ ಎಂದು ಕೇಳಿದನಲ್ಲದೇ, "ಈ ಮೂರು ದಿನ ಮನೆಯಲ್ಲಿ ಯಾರು ಅವರ ಮನೆಯಲ್ಲಿ ದೀಪವನ್ನು ಬೆಳಗುತ್ತಾರೋ ಅವರ ಮನೆಯಲ್ಲಿ ನಿನ್ನ ಧರ್ಮಪತ್ನಿ ಮಹಾಲಕ್ಷ್ಮಿಯು ಸ್ಥಿರವಾಗಿ ನೆಲೆಸುವಂತೆ ಮಾಡು" ಎಂದು ವರ ಬೇಡಿದ. ಅದಕ್ಕೆ ವಿಷ್ಣುವು "ತಥಾಸ್ತು" ಎಂದ. ಹೀಗೆ ಪ್ರಜೆಗಳ ಹಿತವನ್ನೇ ಸದಾ ಬಯಸುತಿದ್ದ ಬಲಿ ತನ್ನ ಪ್ರಾಣತ್ಯಾಗ ಮಾಡಿದರೂ ಜನರ ಮನೆಗಳಲ್ಲಿ ಲಕ್ಷ್ಮೀ ಸದಾ ಸಾನಿಧ್ಯವಿರುವಂತೆ ಮಾಡಿದ ಮಹಾವ್ಯಕ್ತಿ. ತಾನೂ ಉರಿದರೂ, ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ, ಮನುಷ್ಯ ಸ್ವಾರ್ಥವನ್ನು ತಾನೂ ಜ್ಯೋತಿಯಂತೆ ಇತರರಿಗೆ ಬೆಳಕಾದ ಬಲಿಯ ನೆನಪಾಗಿ ಬಲಿಪಾಡ್ಯಮಿ ಆಚರಿಸಲಾಗುತ್ತದೆ.
ಅದೂ ಅಲ್ಲದೇ, ಇಂದು ಸಗಣಿಯಲ್ಲಿ ಕೋಟೆ ಕಟ್ಟಿ, ಅದಕ್ಕೆ ಸಮೃದ್ಧಿಯ ಸಂಕೇತವಾಗಿ ತೆನೆ, ಹುಚ್ಚೆಳ್ಳು, ಹೂವು ಸೇರಿಸಿ ಹೊಸಲಿನ ಬಳಿ ಇಡುತ್ತಾರೆ. ಈ ಪದ್ಧತಿ ಪಾಂಡವರಿಂದ ನಡೆದು ಬಂದಿದ್ದರಿಂದ ಇದನ್ನು `ಪಾಂಡವ'ಗಳು ಎಂದು ಕರೆಯಲಾಗುತ್ತದೆ. ಇನ್ನೂ ಬಲಿಪಾಡ್ಯಮಿ ಶ್ರೀರಾಮನಿಗೆ ಪಟ್ಟಾಭಿಷೇಕವಾದ ದಿನ. ಪಾಂಡವರು ಅಜ್ಞಾತವಾಸ ಮುಗಿಸಿದ ದಿನ. ಉತ್ತರಪ್ರದೇಶದ ಮಥುರೆಯ ಜನ ಈ ದಿನವನ್ನು `ಗೋವರ್ಧನ ಪೂಜೆ' ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಇಂದ್ರನು ತನ್ನ ಪೂಜೆಯನ್ನು ತಪ್ಪಿಸಿದ ಮಥುರೆಯ ಜನರ ಮೇಲೆ ಏಳು ದಿನಗಳ ಕಾಲ ಧಾರಾಕಾರ ಮಳೆ ಸುರಿಸುತ್ತಾನೆ. ಇಂದ್ರನ ಅಹಂಕಾರವನ್ನು ಅಡಗಿಸಲು ಕೃಷ್ಣನು ಗೋವರ್ಧನ ಗಿರಿಯನ್ನೇ ಮೇಲಕ್ಕೆತ್ತಿ ಅದರ ಕೆಳಗೆ ಎಲ್ಲಾ ಗೋಪಾಲಕರಿಗೆ ಆಶ್ರಯ ನೀಡುತ್ತಾನೆ. ಹಾಗಾಗಿ ಈ ದಿನವನ್ನು ಕೃಷ್ಣನ ಹೆಸರಿನಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದಂದು ಜನರ ಸಂಭ್ರಮಕ್ಕೆ ಕಳೆ ಕಟ್ಟಿರುತ್ತದೆ. ಇಂದು ಯಾರು, ಯಾವ ರೀತಿಯ ಮನಸ್ಸಿನಲ್ಲಿ ಇರುತ್ತಾರೋ, ಅದೇ ರೀತಿಯ ಮನಸ್ಥಿತಿಯಲ್ಲಿ (ಸಂತೋಷ, ದುಃಖ, ಅತೃಪ್ತಿ) ಆ ವರುಷವೆಲ್ಲಾ ಇರುತ್ತದೆಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಬಲಿಪಾಡ್ಯಮಿಯ ದಿನ ಹಿರಿಯರಿಗೆ ಸಂತೋಷದಿಂದ ನಮಸ್ಕರಿಸಿ ಆಶೀರ್ವಾದ ಪಡೆಯುವ ಪದ್ಧತಿ ಇದೆ.
ಬಲಿ ಚಕ್ರವರ್ತಿ ಮನೆಗೆ ಬಂದ ಮೂರು ದಿನವೂ ಮನೆ ತುಂಬ ಸಂಭ್ರಮ, ಸಂತೋಷದ ಬೆಳಕು ತುಂಬಿರುತ್ತದೆ. ಬಲಿಯು ಕೂಡ ಪಾತಾಳದಿಂದ ಮೇಲೆದ್ದು ಬಂದು ಭೂಮಿಯ ಜನ ಸಂತೋಷಪಡುತ್ತಿರುವದನ್ನು ಕಂಡು ತಾನೂ ಸಂತೋಷಪಡುತ್ತಾನೆ.
ಈ ಹಬ್ಬದ ವೇಳೆಗೆ ರೈತರಿಗೆ ಮುಂಗಾರು ಬೆಳೆಯ ಧನಲಕ್ಷ್ಮೀ ಕೈ ಸೇರಿರುತ್ತದೆ. (ಪ್ರಸ್ತುತ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿರುವದು ವಿಷಾದಕರ ಸಂಗತಿ.) ಇಂತಹ ಸಂದರ್ಭದಲ್ಲಿ ಬಲಿಯು ಹಚ್ಚ ಹಸಿರು ಬಣ್ಣ ಹೊದ್ದು ಮಧುಮಗಳಂತೆ ಸಿಂಗರಿಸಿಕೊಂಡಿರುವ ಭೂಮಾತೆಯನ್ನು ನೋಡಲು ಹಂಬಲಿಸುತ್ತಾನೆ. ತಾನು ಬರುತ್ತಿರುವದರಿಂದ ಜನರೆಲ್ಲ ಸಂತೋಷಪಡುತ್ತಿರುವದನ್ನು ಕಂಡು, ತಾನು ಸಂತೋಷ, ಸಂತೃಪ್ತಿಯನ್ನು ಪಡೆಯುತ್ತಾನೆ. ತನ್ನ ರಾಜ್ಯದ ಬಗ್ಗೆ, ಅಲ್ಲಿಯ ಜನರ ಬಗೆ ಅದೆಷ್ಟು ಕಾಳಜಿ, ಪ್ರೀತಿ ಆತನಲ್ಲಿ ತುಂಬಿದೆ ಎಂಬುದು ಈ ಜಾನಪದ ಗೀತೆಯಿಂದ ತಿಳಿದುಬರುತ್ತದೆ.
"ದನ ಕಾಯ್ವ ಮಕ್ಕಳಿರಾಽಽಽ
ಕೊಡಿರಯ್ಯಾ ಬೀಜವಽಽ
ಬಿತ್ತುತ ಹೋಗುವೆ ಹೊಲದಲಿಽಽ
ಮುತ್ತು, ಮಾಣಿಕ್ಯವ ಬೆಳೆಯಲಿ." ಎಂದು ಬಲೀಂದ್ರ ಹಾರೈಸುತ್ತಾನೆಂದಾಗ ಆತನದು ಎಂತಹ ಉದಾತ್ತ ಆಶಯವೆನ್ನುವದು ತಿಳಿಯುತ್ತದೆ. ಹೀಗೆ ಬಂದ್ ಬಲಿಯು ಮರಳುವಾಗ ಜನರ ಹೃದಯ, ಮನ ಭಾರವಾಗುತ್ತದೆ. ಅದಕ್ಕೆ ಅವರು ಮನದಾಳದಿಂದ -
"ಇಂದೋದ ಬಲೀಯಂದ್ರಽಽ
ಮತ್ತೆಂದು ಬಪ್ಪೆಯೋಽಽ
ಮುಂದಕ್ಕೆ ಈ ದಿನಕ್ಕೆ
ಬಪ್ಪೆಯಾಽಽ..." ಎಂದು ಹಾಡುವದನ್ನು ಕೇಳಿದಾಗ ಹಳ್ಳಿಯ ಜನರ ಮನದಲ್ಲಿ ಅದೆಷ್ಟು ಆಳವಾಗಿ, ಆತ್ಮೀಯವಾಗಿ ವಾಸವಾಗಿದ್ದಾನೆ ಎನ್ನುವದು ತಿಳಿಯುತ್ತದೆ.
ದೀಪಾವಳಿ ಹಬ್ಬದ ಕೊನೆಯ ದಿನವೇ ಯಮದ್ವಿತೀಯಾ, ಅಂದು ಯಮಧರ್ಮರಾಯನು ತನ್ನ ತಂಗಿಯಾದ ಯಮುನಾದೇವಿಯ ಮನೆಗೆ ಹೋಗಿ, ಆದರೋಪಚಾರಗಳಿಂದ ಆತಿಥ್ಯ ಪಡೆದು, ತಂಗಿಯನ್ನು ಹರಸಿದ ದಿನವೆಂದು ಈ ದಿನ ಅಕ್ಕ-ತಂಗಿಯರು, ಸಹೋದರರನ್ನು ಮನೆಗೆ ಆಹ್ವಾನಿಸಿ, ಪ್ರೀತಿಯಿಂದ ತಮ್ಮ ಕೈಯಾರೆ ಅಡುಗೆ ಮಾಡಿ ಉಣಬಡಿಸುವರು. ಆರತಿ ಮಾಡಿ, ಉಡುಗೊರೆ ಪಡೆಯುವರು.
ದೀಪಾವಳಿಯಲ್ಲಿ ಇನ್ನೊಂದು ವಿಶೇಷತನವೆಂದರೆ, `ಅಳಿಯತನ'. ಮಗಳಿಗೆ ಮದುವೆಯಾದ ಮೊದಲ ವರ್ಷ ಮಗಳು, ಅಳಿಯ ಹಾಗೂ ಬೀಗರನ್ನು ಬರಮಾಡಿಕೊಂಡು ತರತರಹದ ಅಡುಗೆ ಮಾಡಿ, ಉಣಬಡಿಸಿ ಉಡುಗೊರೆಗಳನ್ನು ಕೊಡುವರು.
ದೀಪಾವಳಿ ಹಬ್ಬದ ಸಂಭ್ರಮವಂತೂ ಸಿಡಿಮದ್ದುಗಳ ಹೊಗೆಯ ಕಪ್ಪಿನಲ್ಲೇ ತುಂಬಿರುತ್ತದೆ. ಹಬ್ಬದ ದಿನ ಬೀದಿಗಳಲ್ಲಿ ನಡೆದಾಡುವರು. ವಾಹನಗಳಲ್ಲಿ ಹೋಗುವವರು ಎಲ್ಲಿ ಯಾರು ಪಟಾಕಿಯನ್ನು ಎಸೆಯುತ್ತಾರೋ ಎಂಬ ಅಳುಕಿನಿಂದಲೇ ಓಡಾಡಬೇಕಾಗುತ್ತದೆ. ಹಬ್ಬದ ಸಂಭ್ರಮ ಅನುಭವಿಸುವದಕ್ಕಿಂತ ಎಲ್ಲಿ ಏನು ಅನಾಹುತವಾಬಿಡುತ್ತದೆಯೋ ಎಂಬ ಮಾನಸಿಕ ಒತ್ತಡವೇ ಜಾಸ್ತಿಯಾಗಿರುತ್ತದೆ. ಸಂಜೆಯಾಗುತ್ತಲೇ ಮಕ್ಕಳು ಪಟಾಕಿ ಯಾವಾಗ ಹೊಡೆಯುತ್ತವೆಯೋ ಎಂಬ ಆತುರ, ನಿರೀಕ್ಷೆಯಲ್ಲಿರುತ್ತಾರೆ. ಪಟಾಕಿ ಹೊಡೆಯುವಾಗ ಅವರ ಸಂಭ್ರಮ ಹೇಳತೀರದು. ಆದರೆ, ಕೊಂಚ ಎಚ್ಚರ ತಪ್ಪಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಕ್ಷಣಿಕ ಸಡಗರ ಅರಸಿ ಹೋದವರು ಜೀವನ ಪೂರ್ತಿ ನೋವು ಅನುಭವಿಸಬೇಕಾದ ಸ್ಥಿತಿ ಬರಬಹುದು. ಎಷ್ಟೋ ಬಾರಿ ಜೀವಹಾನಿಯು ಆಗುತ್ತದೆ. ಮದ್ದು ಸಿಡಿಯುವ ರೀತಿ, ಅದರಿಂದ ಹೊರಹೊಮ್ಮುವ ಶಾಖ, ಅದರಲ್ಲಿನ ರಾಸಾಯನಿಕ ಇವು ಆಘಾತವನ್ನುಂಟು ಮಾಡುತ್ತವೆ. ಪಟಾಕಿಯಿಂದ ಕಣ್ಣಿನ ಕಾರ್ನಿಯಾ, ಕಂಜೈಕ್ಟೆವಾ, ಕಪ್ಪು ಗುಡ್ಡೆಗಳಿಗೆ ತೊಂದರೆಯಾಗುವ ಸಾಧ್ಯತೆ ಜಾಸ್ತಿ. ಕಣ್ಣು ತುಂಬಾ ಸೂಕ್ಷ್ಮವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು.
ಸಿಡಿಮದ್ದುಗಳನ್ನು ಮುಟ್ಟಿದ ಕೈಯಿಂದ ಕಣ್ಣು ಉಜ್ಜಿದರೆ, ಕಣ್ಣುರಿ, ಕಣ್ಣು ಕೆಂಪಾಗುವದು. ಕಣ್ಣಿನಲ್ಲಿ ನೀರು ಸೋರುವದು ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ದೀಪಾವಳಿಯು ಸುರಕ್ಷಿತ ಮತ್ತು ಮಂಗಳಮಯವಾಗಿರಬೇಕು. ಅದಕ್ಕಾಗಿ ಈ ಕೆಳಗೆ ಕಾಣಿಸಿದ ಎಚ್ಚರಿಕೆ, ಸಲಹೆಗಳಂತೆ ಪಟಾಕಿ ಹಾರಿಸಿರಿ -
೧. ಪಟಾಕಿ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ವಿಶಾಲವಾದ ಮೈದಾನದಲ್ಲಿ ಸಿಡಿಸಿರಿ.
೨. ರಾಕೆಟ್‍ನಂತಹ ಮೇಲಕ್ಕೆ ಹಾರುವ ಪಟಾಕಿಗಳನ್ನು ಮನೆಯ ಮಾಳಿಗೆಯ ಮೇಲೆ ಹಾರಿಸುವದು ಉತ್ತಮ. ಇಲ್ಲವೇ ನೀರ್‍ಇನ ಬಾಟಲಿಯಲ್ಲಿ ಮೇಲ್ಮುಖವಾಗಿ ನೇರವಾಗಿರುವಂತೆ ಸಿಕ್ಕಿಸಿ ಉಡಾಯಿಸಿರಿ.
೩. ಪಟಾಕಿ ಹಚ್ಚುವ ಸಮಯದಲ್ಲಿ ಕಾಟನ್ ಬಟ್ಟೆಗಳನ್ನು ಧರಿಸುವದು ಉತ್ತಮ.
೪. ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚುವದು ಒಳ್ಳೆಯದಲ್ಲ. ಮಕ್ಕಳು ಪಟಾಕಿ ಹಚ್ಚುವಾಗ ಹಿರಿಯರು ಅವರೊಂದಿಗೆ ಇರುವದು ಅವಶ್ಯ.
೫. ಮಕ್ಕಳು ಪಟಾಕಿಯನ್ನು ಜೇಬಿನಲ್ಲಿ, ಅಡುಗೆ ಮನೆಯಲ್ಲಿ ಇಡಲು ಅನುಮತಿ ಕೊಡಬೇಡಿ.
೬. ಪಟಾಕಿ ಹಚ್ಚುವ ಸ್ಥಳದ ಸುತ್ತಮುತ್ತ ಯಾವುದೇ ಜ್ವಲಿಸುವ ಪದಾರ್ಥ ಇರಬಾರದು.
೭. ದೊಡ್ಡ ಶಬ್ದ ಮಾಡುವ ಪಟಾಕಿಗಳನ್ನು ಹಚ್ಚುವಾಗ ಕಿವಿಗಳಿಗೆ ಹತ್ತಿ ಇಟ್ಟುಕೊಂಡರೆ ಒಳ್ಳೆಯದು. ಇಲ್ಲಾವಾದಲ್ಲಿ ಭಾರೀ ಶಬ್ದದಿಂದ ಕಿವಿಯ ತಮಟೆ ಹರಿಯುವದು.
೮. ಅರ್ಧ ಉರಿದು ಆರಿದ ಪಟಾಕಿಗಳನ್ನು ಮತ್ತೆ ಹಚ್ಚಲು ಹೋಗಬೇಡಿ.
೯. ಪಟಾಕಿಯ ಮದ್ದಿನ ತುದಿಯನ್ನು ಕಿತ್ತಿ, ಉದ್ದನೆಯ ಗಂಧದಕಡ್ಡಿಯಿಂದ ಹಚ್ಚುವದು ಕ್ಷೇಮ.
೧೦. ದೊಡ್ಡ ದೊಡ್ಡ ಪಟಾಕಿಗಳನ್ನು ಮಕ್ಕಳ ಕೈಗೆ ಕೊಡಬೇಡಿ.
೧೧. ನವಜಾತ ಮಗು, ಗರ್ಭಿಣಿ, ಹೃದಯರೋಗಿಗಳು, ಅಲರ್ಜಿ, ಅಸ್ತಮಾ ಇರುವವರ ಸಮೀಪ ಭಯಂಕರ ಶಬ್ದ ಮಾಡುವ ಪಟಾಕಿ ಹಚ್ಚಬೇಡಿ.
೧೨. ಸುಟ್ಟಗಾಯದ ಮುಲಾಮು, ಪ್ರಥಮಚಿಕಿತ್ಸಾ ಪೆಟ್ಟಿಗೆ, ನೀರು ಮುಂತಾದವು ತಕ್ಷಣ ಕೈಗೆ ಸಿಗುವಂತೆ ಇಡಬೇಕು.
ಸಿಡಿಮದ್ದಿನಿಂದ ತ್ವಜೆಯ ಯಾವುದೇ ಭಾಗಕ್ಕೆ ಗಾಯವಾದರೂ ಮೊದಲು ಶುದ್ಧನೀರಿನಿಂದ ತೊಳೆಯಿರಿ. ಚಿಕ್ಕಪುಟ್ಟ ಗಾಯಗಳಾದರೆ ಮನೆಯಲ್ಲಿನ ಔಷಧಿಗಳನ್ನು ಹಚ್ಚಬಹುದು. ಆಘಾತ ದೊಡ್ಡ ಪ್ರಮಾಣದಲ್ಲಾಗಿದ್ದರೆ ಸಮೀಪದ ಡಾಕ್ಟರ್‌ರನ್ನು ಸಂಪರ್ಕಿಸುವದು ಒಳಿತು.
ದೀಪಾವಳಿಯಲ್ಲಿ ಪಟಾಕಿ ಸುಡುವ ಸಂಪ್ರದಾಯದ ಹಿಂದೆ ಒಂದು ಒಳ್ಳೆಯ ಉದ್ದೇಶವಿತ್ತೆಂದು ಹೇಳಲಾಗುತ್ತದೆ. ಪಟಾಕಿಯ ಹೊಗೆಯಿಂದ ಮಳೆಗಾಲದಲ್ಲಿ ಹುಟ್ಟಿಕೊಂಡ ಹುಳ-ಹುಪ್ಪಡಿಗಳು ನಾಶವಾಗಲಿ ಮತ್ತು ಪಟಾಕಿಯ ಜೋರು ಸದ್ದಿನಿಂದ ವಿಷಜಂತುಗಳು ದೂರ್‍ಅ ಹೋಗಲಿ ಎಂಬ ಉದ್ದೇಶವಿತ್ತು.
ಇನ್ನೂ ಈ ದೀಪಾವಳಿ ಹಬ್ಬವು ಸಂತೋಷ, ಸಂಭ್ರಮ ನೀಡುವದಷ್ಟೇ ಅಲ್ಲದೇ ಮುರಿದು ಹೋದ ಸಂಬಂಧಗಳನ್ನು ಪುನಃ ಬೆಸೆಯಲಿಕ್ಕಾಗಿ ಒಳ್ಳೆಯ ಅವಕಾಶ ಕಲ್ಪಿಸುತ್ತದೆ. ಅದುವರೆಗೂ ಮಾತು-ಕತೆ, ಒಡನಾಟ ಬಿಟ್ಟ ಬೀಗರನ್ನಾಗಲಿ, ತಂದೆ-ತಾಯಿ, ಪತ್ನಿ, ಮಕ್ಕಳು ಹೀಗೆ ಅಂದು ಎಲ್ಲರೂ ಒಂದುಗೂಡಿ ಪರಸ್ಪರ ಮನಸ್ಸಿನ ಮಾತುಗಳನ್ನು ಹೇಳಿಕೊಂಡಾಗ ಮನಸ್ಸು ಹಗುರವಾಗುತ್ತದೆ.
ಪ್ರೇಮಿಗಳಿಗೆ ಈ ಹಬ್ಬವೇನು ಹೊರತಲ್ಲ. ಅಂದು ಪರಸ್ಪರ ಉಡುಗೊರೆಗಳನ್ನು ಕೊಟ್ಟು ಶುಭಾಶಯ ಕೋರುತ್ತಾರೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಸಂಧಿಸಿ, ಪರಸ್ಪರ ಪ್ರೀತಿ-ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.
ನೀವು ಕೊಡುವ ಉಡುಗೊರೆಗಳು ದುಬಾರಿಯೇ ಆಗಿರಲಿ ಅಥವಾ ಅಗ್ಗವಾಗಿಯೇ ಇರಲಿ ಆದರೆ, ಅದು ನಿಮ್ಮ ಭಾವನೆ, ಪ್ರೀತಿ ಅವರಿಗೆ ತಲುಪಿಸುವಂತಿರಬೇಕು. ನಿಸ್ವಾರ್ಥ ಮತ್ತು ನಿಷ್ಕಲ್ಮಶ ಸ್ನೇಹ ಸಿಂಚನಗೈಯುವ ಪ್ರೀತಿಯಿಂದ ಕೂಡಿರಬೇಕು; ಬದಲಾಗಿ ನಿಮ್ಮ ಶ್ರೀಮಂತಿಕೆ, ಅಹಂ ಇದರಲ್ಲಿ ಕೂಡಿರಬಾರದು ಅಂದಾಗ ಮಾತ್ರ ಅದು ನಿಜವಾದ ಉಡುಗೊರೆಯಾಗುವದು. ಉಡುಗೊರೆ ಕೊಡಲು ಸಾಧ್ಯವಾಗದಿದ್ದರೂ ತುಂಬು ಮನಸ್ಸಿನಿಂದ, ಹೃದಯಾಂತರಾಳದಿಂದ ಶುಭಾಶಯ ತಿಳಿಸಬೇಕು.
"ವರುಷಕ್ಕೊಮ್ಮೆ ಬರುವದು ದೀಪಾವಳಿ
ಇನ್ನಾದರೂ ಅಳಿಯಲಿ, ದ್ವೇಷ, ಅಸೂಯೆ
ಎಂಬ ಹಾವಳಿ;
ಬದುಕಲ್ಲಿ ಅಜ್ಞಾನವೆಂಬ ಕತ್ತಲು
ಕಳೆದು, ಸುಜ್ಞಾನವೆಂಬ ಬೆಳಕು ಮೂಡಲಿ
ಎಲ್ಲರೂ ಒಟ್ಟಿಗೆ ಇರೋಣ
ನೂರುಕಾಲ ಬಾಳಿ..."
ಲೇಖಕರು : - ಜಿ.ಎಸ್.ಹತ್ತಿಗೌಡರ
No comments:
Post a Comment