Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Tuesday, 30 October 2012
ವಚನಗಳು
ಎನಿಸುಕಾಲ ಕಲ್ಲು ನೀರೊಳಗಿದ್ದರೇನು
ನೆನ್ದು ಮೃದುವಾಗಬಲ್ಲುದೇ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ಧೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿದ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲಸಂಗಮದೇವಾ|
ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ ಅದು ಜಗಕಿಕ್ಕಿದ ವಿಧಿ
ನಿನ್ನೊಡವೆ ಎಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡೆಗೊಡದೆ
ಆ ರತ್ನವ ನೀನಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ
ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೇ!
ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,
ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,
ಆವ ವಿದ್ಯೆಯ ಕಲಿತಡೇನು?
ಸಾವ ವಿದ್ಯೆಯ ಬೆನ್ನ ಬಿಡದು
ಆಶನವ ತೊರೆದಡೇನು ವ್ಯಸನವ ಮರೆದಡೇನು?
ಉಸಿರ ಹಿಡಿದಡೇನು ಬಸುರ ಕಟ್ಟಿದಡೇನು?
ಚೆನ್ನಮಲ್ಲಿಕಾರ್ಜುನದೇವಯ್ಯಾ
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?
`ಹರ ಬಸವಾಯ ನಮಃ' ಎಂದು ಪಾಪ ದೂರ್‍ಅನಾದೆ,
`ಗುರು ಬಸವಾಯ ನಮಃ' ಎಂದು ಭವದೂರ್‍ಅನಾದೆ,
`ಲಿಂಗ ಬಸವಾಯ ನಮಃ' ಎಂದು ಲಿಂಗಾಂಕಿತನಾದೆ
`ಜಂಗಮ ಬಸವಾಯ ನಮಃ' ಎಂದು ನಿಮ್ಮ
ಪಾದಕಮಲದಲ್ಲಿ ಭ್ರಮರನಾದೆ
ಏಳು ಸಂಗನಬಸವ ಗುರು, ಕಪಿಲ ಸಿದ್ಧ ಮಲ್ಲಿಕಾರ್ಜುನ ಸ್ವಾಮಿಯೇ.
- ಸಿದ್ಧರಾಮ
ಬಡತನಕ್ಕೆ ಉಂಬುವ ಚಿಂತೆ,
ಉಣಲಾದರೆ ಉಡುವ ಚಿಂತೆ,
ಉಣಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ
ಕೇಡಾದರೆ ಮರಣದ ಚಿಂತೆ
ಇಂತೀ ಹಲವು ಚಿಂತೆಗಳಲಿಪ್ಪವರನ್ನು ಕಂಡೆನು
ಶಿವಚಿಂತೆಯಲ್ಲಿದ್ದವರನೊಬ್ಬರನೂ ಕಾಣನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
- ಅಂಬಿಗರ ಚೌಡಯ್ಯ
ಕೆರೆ ಹಳ್ಳ ಬಾವಿಗಳು ಮೈದೆಗೆದರೆ ಗುಳ್ಳೆ ಗೊರಚೆ
ಚಿಪ್ಪುಗಳ ಕಾಣಬಹುದು
ವಾರಿಧ್ ಮೈದೆಗೆದರೆ ರತ್ನಂಗಳ ಕಾಣಬಹ್ದು
ಕೂಡಲ ಸಂಗನ ಶರಣರು ಮನದೆರೆದು ಮಾತನಾಡಿದರೆ
ಲಿಂಗವೆ ಕಾಣಬಹುದು.
- ಬಸವಣ್ಣ
ಕ್ರಿಯೆಯೇ ಜ್ಞಾನ, ಜ್ಞಾನವೇ ಕ್ರಿಯೆ
ಜ್ಞಾನವೆಂದರೆ ತಿಳಿಯುವುದು, ಕ್ರಿಯೆ ಎಂದರೆ
ತಿಳಿದಂತೆ ಅಚರಿಸುವುದು
ಪರಸ್ತ್ರೀ ಭೋಗಿಸಬಾರದೆಂಬುದೇ ಜ್ಞಾನ
ಅದರಂತೆ ಆಚರಿಸುವದೇ ಕ್ರಿಯೆ
ಅಂತು ಆಚರಿಸದಿದ್ದರೆ ಅದೇ ಅಜ್ಞನ
ನೋಡಾ ಕೂಡಲ ಚೆನ್ನ ಸಂಗಮದೇವಾ!
- ಬಸವಣ್ಣ
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲ ಸಂಗನ ಶರಣರ ಅನುಭಾವದಿಂದ
ಎನ್ನ ಮನದ ಕೇಡು ನೋಡಯ್ಯಾ
- ಬಸವಣ್ಣ
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಂಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೆರೆ ತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ?
ಚನ್ನಮಲ್ಲಿಕಾರ್ಜುನ ದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕೆ ಸ್ತುತಿ ನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
- ಅಕ್ಕಮಹಾದೇವಿ
ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ
ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯಾ
- ಪ್ರಭುದೇವ
ಹೆದರದಿರು ಮನವೆ, ಬೆದರದಿರು ತನುವೆ,
ನಿಜವನಿರಿತು ನಿಶ್ಚಿಂತನಾಗಿರು, ಎಲೆ ಮನವೆ!
ಫಲವಾದ ಮರನ ಕಲ್ಲಲ್ಲಿ ಇಡುವುದೊಂದು ಕೋಟಿ
ಎಲವದ ಮರನ ಇಡುವರೊಬ್ಬ್ರ ಕಣೆ
ಭಕ್ತಿಯುಳ್ಳವರ ಬೈವರೊಂದು ಕೋಟಿ
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ ಗತಿ
ಸೋಪಾನ, ಚೆನ್ನಮಲ್ಲಿಕಾರ್ಜುನ
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ
ಜ್ಞಾನದಲ್ಲಿ ಪರಮನಂದವೆಡಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೊ!
ಆಂಡಯ್ಯ
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ
- ಬಸವಣ್ಣ
ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದರೆ ಕರವಿಡಿದೆತ್ತಿಕೊಂಬ
ನಮ್ಮ ರಾಮನಾಥ
- ಜೇಡರ ದಾಸಿಮಯ್ಯ.
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ಉತ್ತು ನಿಮ್ಮ ದಾನ, ಬಿತ್ತು ನಿಮ್ಮ ದಾನ
ನಿಮ್ಮದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ!
- ಜೇಡರ ದಾಸಿಮಯ್ಯ
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕ ಮಾಡುವ ಸದ್ಭಕ್ತಂಗೆ
ಎತ್ತ ನೋಡಿದತ್ತ ಲಕ್ಷ್ಮೀ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನಕ್ಕರ
- ಆಯ್ದಕ್ಕಿ ಲಕ್ಕಮ್ಮ
ಬಸವನ ನಡೆ ಪರುಷ, ನುಡಿಪರುಷ, ದೃಷ್ಟಿಪರುಷ
ಹಸ್ತ ಪರುಷ, ಮನಪರುಷ
ತನು, ಮನ, ಧನವ ಗುರುಲಿಂಗ ಜಂಗಮಕ್ಕೆ
ನಿವೇದಿಸುವಾತ ಬಸವನು
ಬಸವಣ್ಣನ ನೆನೆವುದೇ ಲಿಂಗಾರ್ಚನೆಯೆನೆಗೆ
ಬಸವಣ್ಣನ ನೆನೆವುದೇ ಪರತತ್ತ್ವವೆನೆಗೆ
ಪರಮ ಕಲ್ಯಾಣವೆನಗೆ
ಕಲಿದೇವಯ್ಯಾ ನಿಮ್ಮ ಶರಣ ಬಸವಣ್ಣನು ಇಂತಹ
ಘನ ಮಹಿಮ ನೋಡಯ್ಯ
- ಮಡಿವಾಳ ಮಾಚಿದೇವರು.
ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ ಅಣ್ಣಾ!
ಸತ್ಯದ ನಿಲವನರಿಯದೇ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತಿ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲ ಸಂಗಮ ದೇವರನರಿಯದೆ
ನರಕಕ್ಕೆ ಭಾಜನವಾದಿರಲ್ಲಾ
- ಬಸವಣ್ಣ
ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ
ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ
ಕೂಡಲ ಚೆನ್ನಸಂಗಮದೇವಾ
- ಚೆನ್ನಬಸವಣ್ಣ
ಅರೇನೆಂದರೂ ಓರಂತಿಪ್ಪುದೇ ಸಮತೆ
ಆರು ಜನ್ರಿದರೂ ಅವರೆನ್ನಮನದ ಕಾಳಿಕೆಯ
ಕಳೆದರೆಂಬುದೇ ಸಮತೆ
ಇಂತಿದು ಗುರು ಕಾರುಣ್ಯ ಮನ ವಚನ ಕಾಯದಲ್ಲಿ
ಅಹಿತವಲ್ಲದೆ ಕಪಿಲಸಿದ್ಧ ಮಲ್ಲಿಕಾರ್ಜುನಾ
ನಿಮ್ಮವರ ನೀನೆಂಬುದೇ ಸಮತೆ
- ಸಿದ್ಧರಾಮ
ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ
ಅಂಬರಕ್ಕೆ ಗದ್ದುಗೆ ಬೋದುಗೆ ಇಲ್ಲದಂತಿರಿಸಿದೆ
ಎಲೆ ಮೃಡನೇ, ನೀನಲ್ಲದೆ ಉಳಿದ ದೈವಂಗಳಿಗಹುದೇ ರಾಮನಾಥಾ
- ಜೇಡರ ದಾಸಿಮಯ್ಯ
ದೇವನೊಬ್ಬ ನಾಮ ಹಲವು
ಪರಮ ಪತಿವೃತೆಗೆ ಗಂಡನೊಬ್ಬ
ಮತ್ತೊಂದಕ್ಕೆ ರಗಿದರೆ ಕಿವಿ ಮೂಗ ಕೊಯ್ವನು|
ಹಲವು ದೈವದ ಎಂಜಲ
ತಿಂಬವರನೇನೆಂಬೆ ಕೂಡಲ ಸಂಗಮದೇವಾ?
- ಬಸವಣ್ಣ
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ
ಗುಹೇಶ್ವರಾ, ನಿಮಗಾಗಿ ಸತ್ತವರನಾರನೂ ಕಾಣೆ
- ಪ್ರಭುದೇವ
ಹೊನ್ನು ಮಾಯೆಮೆಂಬರು, ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯೆಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ
- ಪ್ರಭುದೇವ
Subscribe to:
Post Comments (Atom)
No comments:
Post a Comment