Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday 23 January 2012

ಗಾಂಧೀಜಿಯವರ ಅಂತಿಮ ಕ್ಷಣಗಳು

         

                       ೧೯೪೮ ಜನೆವರಿ ೩೦ರಂದು ಮಹಾತ್ಮಾ ಗಾಂಧಿ ಎಂದಿನಂತೆ ಆ ದಿನವೂ ನಸುಕಿನ ೩-೩೦ ಗಂಟೆಗೆ ಎದ್ದಿದ್ದರು. ವಿಪರೀತ ಚಳಿ ಇತ್ತು. ಆದರೂ, ಕಳೆದ ನಾಲ್ಕು ತಿಂಗಳಿನಿಂದ ತಂಗಿದ್ದ ಹೊಸ ದಿಲ್ಲಿಯ ಬಿರ್ಲಾಹೌಸ್‍ನಲ್ಲಿ ಎಂದಿನಂತೆ ತಮ್ಮ ಪರಿವಾರದೊಡನೆ ಬೆಳಗಿನ ಪ್ರಾರ್ಥನೆಯನ್ನು ಪೂರೈಸಿದರು.
                                ಕೆಲ ಸಮಯದ ನಂತರ ಗಾಂಧೀಜಿ ತಮ್ಮ ಪ್ರಶ್ನೋತ್ತರಗಳ ಕಡತ ತರಿಸಿಕೊಂಡು ಕುಳಿತರು. ಆ ದಿನ ಬರೆಯಬೇಕಾಗಿದ್ದ ಪತ್ರಗಳಲ್ಲಿ ಇತ್ತೀಚೆಗೆ ಮಗಳನ್ನು ಕಳೆದುಕೊಂಡಿದ್ದ ಸಹೋದ್ಯೋಗಿಯೊಬ್ಬರನ್ನು ಸಂತೈಸುವದು ಒಂದಾಗಿತ್ತು. ಅವರು ಬರೆದರು-"ನಾನು ಹೇಗೆ ನಿನ್ನನ್ನು ಸಂತೈಸಲಿ; ಸಾವು ಮಾನವನ ನಿಜವಾದ ಮಿತ್ರ; ನಮ್ಮನ್ನು ದುಃಖಿಸುವಂತೆ ಮಾಡುವದು ನಮ್ಮ ಅಜ್ಞಾನವೇ. ಸುಲೋಚನಳ ಆತ್ಮಚೇತನ ನಿನ್ನೆಯೂ ಇತ್ತು. ಇಂದೂ ಇದೆ. ನಾಳೆಯೂ ಇರುತ್ತದೆ."
                     ತೈಲದ ಮಸಾಜ್ ಹಾಗೂ ಸ್ನಾನದ ನಂತರ, ಗಾಂಧೀಜಿ ತಮ್ಮ ಪರಿವಾರದಲ್ಲಿದ್ದ ಚಿಕ್ಕವರನ್ನು ಯುವತಿಯರನ್ನು ಕೀಟಲೆ ಮಾಡುತ್ತಿದ್ದರು- ದುರ್ಬಲ, ಕೃಶ ಶರೀರಗಳೆಂದು. ಅದೇ ದಿನ ಬೆಳಗಿನ ರೈಲುಗಾಡಿಯಿಂದ ಊರಿಗೆ ಹೋಗಬೇಕಿದ್ದ ಒಬ್ಬಳು ನಿಲ್ದಾಣಕ್ಕೆ ಹೋಗಲು ವಾಹನ ಸಿಗದ ಕಾರಣ ರೈಲು ತಪ್ಪಿಸಿಕೊಂಡಿದ್ದನ್ನು ತಿಳಿದ ಗಾಂಧೀಜಿ ಅವಳೇಕೆ ರೈಲು ನಿಲ್ದಾಣಕ್ಕೆ ನಡೆದು ಹೋಗಲಿಲ್ಲ ಎಂದು ಕೇಳಿದರು. ಅದು ಅವರ ತಮಾಷೆ-ಹಾಸ್ಯವಾಗಿರಲಿಲ್ಲ. ತಮ್ಮಂತೆಯೆಏ ತಮ್ಮ ಸಹಚರರೂ ಸಹ ಸಮಸ್ಯೆಗಳನ್ನು ಯಾವ ಕಿರಿಕಿರಿ ಇಲ್ಲದೇ ಎದುರಿಸಬೇಕೆಂದೇ ಗಾಂಧಿಯವರು ನಿರೀಕ್ಷಿಸುತ್ತಿದ್ದರು. ಒಮ್ಮೆ ದಕ್ಷಿಣ ಭಾರತದಲ್ಲಿ ಪ್ರವಾಸದಲ್ಲಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನ ಇಂಧನ ತೀರಿ ನಿಂತುಬಿಟ್ಟಾಗ ಸಮೀಪದ ರೈಲು ನಿಲ್ದಾಣವರೆಗೆ ಅಂದರೆ ಇಪ್ಪತ್ತೊಂದು ಕಿಲೋಮೀಟರ್ ದೂರವನ್ನು ಸಂತೋಷದಿಂದಲೇ ನಡೆದಿದ್ದರು.
                     ಬೆಳಗಿನ ಜಾವ ೯-೩೦ ಘಂಟೆಗೆ ಗಾಂಧೀಜಿ ತಮ್ಮ ಅಂದಿನ ಮೊದಲ ಭೋಜನ ಸ್ವೀಕರಿಸಿದರು. ಬೇಯಿಸಿದ ತರಕಾರಿ, ಹನ್ನೆರಡು ಔಂಸುಗಳಷ್ಟು ಆಡಿನ ಹಾಲು, ನಾಲ್ಕು ಟೊಮೆಟೋ ಹಣ್ಣು, ನಾಲ್ಕು ಕಿತ್ತಳೆ, ಗಜ್ಜರಿ ರಸ, ಶುಂಠಿಯ ಡಿಕಾಕ್ಷನ್ ನಿಂಬೆ ಹಾಗೂ ಲೋಳೆಸರ-ಅವರ ಆಹಾರ. ಇದು ಇಷ್ಟೆಯೇ ಎನ್ನುವದಾದಲ್ಲಿ ಅದಕ್ಕೆ ಕಾರಣವೂ ಇತ್ತು. ಇತ್ತೀಚಿನ ಉಪವಾಸದಿಂದ ಅವರಿನ್ನೂ ನಿಶ್ಯಕ್ತರಾಗಿಯೇ ಇದ್ದರು. ಜನೆವರಿ ೧೨ರಂದು ಗಾಂಧೀಜಿಯವರ ನಿಕಟ ಸಹಾಯಕಿ ಸುಶೀಲಾ ನಾಯರ ಸಂಜೆಯ ಪ್ರಾರ್ಥನೆಯಲ್ಲಿ ಗಾಂಧೀಜಿಯವರ ಉಪವಾಸದ ಪ್ರಕಟಣೆ ಮಾಡಿದ್ದರು. ಅಂದು ಸೋಮವಾರ ಗಾಂಧೀಜಿಯವರದು ಮೌನವ್ರತ; ಮಾತನಾಡುವಂತಿರಲಿಲ್ಲ. ಎಲ್ಲ ಸಮುದಾಯಗಳ ಜನರು ಹುತ್ಪೂರ್ವಕವಾಗಿ ಒಂದಾಗುಗುವರೆಗೂ ಗಾಂಧೀಜಿ ನಿರಶನ ನಡೆಸುವರೆಂದು ನಾಯರ ಪ್ರಕಟಿಸಿದ್ದರು.
                              ನಿರಶದ ನಿರ್ಣಯ ಕ್ಲೇಶಪೂರ್ಣವಾಗಿತ್ತು. ಭಾರತದ ವಿಭಜನೆಯನ್ನು ತಡೆಯಲಾಗದ ಗಾಂಧೀಜಿ, ವಿಭಜನೆ ನಂತರ ಸ್ಫೋಟಗೊಂಡ ಕೋಮು ಗಲಭೆ ಸಾವು ನೋವುಗಳನ್ನು ಅಸಹಾಯಕರಾಗಿ ನೋಡುತ್ತಿರಬೇಕಾಗಿತ್ತು. ಪಾಕಿಸ್ತಾನದಿಂದ ಬಂದಿದ್ದ ಕ್ರೋಧಿತ, ಹತಾಶ ಸಿಖ್ ಹಾಗೂ ಹಿಂದೂ ನಿರಾಶ್ರಿತರಿಂದ ಬಿರಿದು ತುಂಬಿದ್ದ ದೆಹಲಿ ಸಹ ಮತೀಯ ಸಂಘರ್ಷದಿಂದ ತತ್ತರಿಸಿತ್ತು. ರಾಷ್ಟ್ರದ ರಾಜಧಾನಿಯಲ್ಲೇ ತಾವೆಷ್ಟು ಅಸುರಕ್ಷಿತ ಭಾವದಲ್ಲಿದ್ದೇವೆಂದು ಪ್ರತಿದಿನ ಮುಸಲ್ಮಾನರ ನಿಯೋಗಗಳು ಗಾಂಧಿಯವರೆದುರು ಹೇಳಿಕೊಳ್ಳುತ್ತಲೇ ಇದ್ದವು.
                                        ಇತರ ಹಲವು ವಿಷಯಗಳೂ ಗಾಂಧಿಯವರನ್ನು ಕಷ್ಟಕ್ಕೀಡು ಮಾಡಿದ್ದವು. ಅಖಂಡ ಭಾರತದ ವಿದೇಶಿ ವಿನಿಮಯದಲ್ಲಿನ ಪಾಲು ಎಂದು ಪಾಕಿಸ್ತಾನಕ್ಕೆ ೫೫ಕೋಟಿ ರೂಪಾಯಿಗಳನ್ನು ಭಾರತವು ಕೊಡಬೇಕಾಗಿತ್ತು. ಆದರೆ ಕಾಶ್ಮೀರದಲ್ಲಿ ಭಾರತ-ಪಾಕ್ ಯುದ್ಧ ಆರಂಭಗೊಂಡ ಕಾರಣ ಈ ಹಣವನ್ನು ಕೊಡುವದಿಲ್ಲವೆಂದು ಭಾರತ ಸರ್ಕಾರ ನಿರ್ಧರಿಸಿತು. ಪಾಕಿಸ್ತಾನವು ಈ ಹಣವನ್ನು ನಮ್ಮ ವಿರುದ್ಧವೇ ಹಾರಿಸುವ ಗುಂಡುಗಳ ತಯಾರಿಕೆಗೆ ಬಳಸುತ್ತಿದೆಂದು ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕಾರಣ ನೀಡಿದ್ದರು. ಆದರೆ ಹಣ ಕೊಡದಿರುವದು ನೈತಿಕವಾಗಿ ತಪ್ಪು ಎಂದೇ ಗಾಂಧಿಯವರು ಸಾಧಿಸಿದರು.
                       ಕಾಂಗ್ರೆಸ್ಸಿಗರ ಭ್ರಷ್ಟಾಚಾರ
                  ಗಾಂಧಿಯವರ ಮಟ್ಟಿಗೆ ನೋವಿನ ಮತ್ತೊಂದು ಸಮಸ್ಯೆಯೆಂದರೆ ಕಾಂಗ್ರೆಸ್ಸಿಗರಲ್ಲಿ ಹೆಚ್ಚುತ್ತಿದ್ದ ಭ್ರಷ್ಟಾಚಾರ. ಕಾಂಗ್ರೆಸ್ ಶಾಸಕರು ಅಪರಾಧಿಗಳನ್ನು ರಕ್ಷಿಸುತ್ತ ಹಣ ಗಳಿಸುವ ಮಟ್ಟಕ್ಕೂ ಹೋಗಿದ್ದಾರೆಂದು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಗಾಂಧಿಯವರಿಗೆ ಪತ್ರ ಬರೆದು ತಿಳಿಸಿದ್ದರು. ಬ್ರಿಟಿಷ್ ಸರ್ಕಾರವೇ ಹೆಚ್ಚು ಒಳ್ಳೆಯದಿತ್ತೆಂದು ಜನ ಹೇಳಲಾರಂಭಿಸಿದರೆಂದೂ ಪತ್ರದಲ್ಲಿ ಅವರು ಬರೆದಿದ್ದರು. ನಿಜವೆಂದರೆ ಸ್ವಾತಂತ್ರ್ಯ ಪ್ರಾಪ್ತಿಯೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಸ್ತುತಿ ಪೂರ್ಣವಾಗಿದ್ದು ಅದು ವಿಸರ್ಜನೆಗೊಂಡು ರಾಷ್ಟ್ರದ ಹಳ್ಳಿಗಳ ಸಾಮಾಜಿಕ, ನೈತಿಕ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕಾಗಿ "ಲೋಕಸೇವಕ ಸಂಘ"ವಾಗಿ ಹೊರಹೊಮ್ಮಬೇಕೆಂದು ಗಾಂಧೀಜಿ ಬಯಸಿದ್ದರು.
                     ಕೊನೆಯ ಉಪವಾಸ
               ಜನೆವರಿ ೧೩ರಂದು ಪೂರ್ವಾಹ್ನ ೧೧-೩೫ ಗಂಟೆಗೆ ಗಾಂಧಿಯವರ ಹದಿನೇಳನೆಯ ಹಾಗೂ ಕೊನೆಯ ಉಪವಾಸ ಆರಂಭವಾಯಿತು. ಇಪ್ಪತ್ನಾಲ್ಕು ಘಂಟೆಗಳೊಳಗಾಗಿಯೇ ಭಾರತದ ಸಚಿವ ಸಂಪುಟ ಸಭೆ ಸೇರಿ ಪಾಕಿಸ್ತಾನದ ಬಾಕಿ ಹಣದ ಬಗೆಗಿನ ತನ್ನ ನಿರ್ಣಯದ ಮರುಪರಿಶೀಲನೆ ನಡೆಸಿತು. ಅದೇ ಕಾಲಕ್ಕೆ ಈ ಉಪವಾಸ ಇನ್ನೊಂದು ಪರಿಣಾಮವನ್ನೂ ಮಾಡಿತ್ತು. ಮಹಾತ್ಮರು ಮುಸ್ಲಿಮರ ಪಕ್ಷಪಾತಿ ಆಗಿದ್ದಾರೆಂದು ಆಗಲೇ ಭಾವಿಸುತ್ತಿದ್ದ ಜನರ ಮುನಿಸನ್ನೂ ಇದು ಹೆಚ್ಚಿಸಿತು. ಅಂದು ಸಂಜೆ ಸಿಖ್ ನಿರಾಶ್ರಿತರ ಗುಂಪೊಂದು ಬಿರ್ಲಾ ಹೌಸ್ ಎದುರು ನಿಂತು ಅವರ ವಿರುದ್ಧ ಘೋಷಣೆ ಕೂಗಿದರು. "ಗಾಂಧಿ ಸತ್ತರೆ ಸಾಯಲಿ, ನಮಗೆ ಪ್ರತಿಕಾರ ಬೇಕು, ರಕ್ತಕ್ಕೆ ರಕ್ತ..."
                          ಗಾಂಧಿಯವರನ್ನು ಭೇಟಿಯಗಿ ಅದೇ ಬಿರ್ಲಾ ಭವನದಿಂದ ಹೊರನಡೆದಿದ್ದ ಜವಾಹರಲಾಲ ನೆಹರೂ ಈ ಕೂಗು ಕೇಳಿದವರೇ ಕೋಪೋದ್ರಿಕ್ತರಾಗಿ ತಮ್ಮ ಕಾರಿನಿಂದ ಜಿಗಿದು ಪ್ರದರ್ಶನಕಾರರ ಕಡೆಗೇ ಧಾವಿಸಿದರು. "ಯಾರದು, ಧೈರ್ಯವಿದ್ದವರು ಪುನಃ ಈ ಮಾತುಗಳನ್ನು ನನ್ನೆದುರು ಹೇಳಲಿ, ಅವರು ನನ್ನನ್ನು ಮೊದಲು ಕೊಲ್ಲಬೇಕಾಗುತ್ತದೆ..." ಎಂದು ಗುಡುಗಿದರು. ಮತ ಪ್ರದರ್ಶನಕಾರರೆಲ್ಲ ಚದುರಿ ಹೋದರು.
                     ಉಪವಾಸದ ಮೂರನೇ ದಿನ; ೭೮ ವರ್ಷದ ಮಹಾತ್ಮಾ ಗಾಂಧಿ ಬಹಳಷ್ಟು ಅಶಕ್ತರಾಗಿದ್ದರು. ಪ್ರಾರ್ಥನಾ ಸಭೆಯಲ್ಲಿ ಅವರು ಮಾಡುತ್ತಿದ್ದ ಉಪದೇಶಗಳು ಜನರಿಗೆ ಕೇಳಿಸದಷ್ಟು ಅವರ ಧ್ವನಿ ಮಂದವಾಯಿತು. ಕೆಲವೊಮ್ಮೆ ಅವರು ಬರೆದು ಕೊಟ್ಟಿದ್ದನ್ನು ಬೇರೆಯವರು ಓದಿ ಹೇಳುತ್ತಿದ್ದರು. ಉಪವಾಸ ಹಾಗೇ ಮುಂದುವರೆಯಿತು. ಮಹಾತ್ಮರ ಪ್ರಕೃತಿ ದಿನದಿನಕ್ಕೆ ಕ್ರಮೇಣ ಕ್ಷೀಣಿಸಿತು. ಕುರ್ಚಿಯಲ್ಲಿ ಕೂಡಿಸಿ ಬಾತ್‍ರೂಮ್‍ಗೆ ಕರೆದೊಯ್ಯಬೇಕಾಯಿತು. ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದ ವೈದ್ಯರು ಅವರ ಕಿಡ್ನಿ ವಿಫಲಗೊಳ್ಳುತ್ತಿವೆ ಎಂದರು. ನಿರಶನ ಕೊನೆಗೊಳ್ಳುವಂತೆ ಮನವೊಲಿಸುವ ಯತ್ನಗಳು ತೀವ್ರಗೊಂಡವು. ಮಹಾತ್ಮರು ಒಪ್ಪಲಿಲ್ಲ. ಮಹಾತ್ಮರು ಹಿಂದೂಸ್ಥಾನದಲ್ಲಿ ಶಾಂತಿಯನ್ನು ನೆಲೆಸುವ ಸಲುವಾಗಿ ತಮ್ಮ ಮನಸ್ಸಿನಲ್ಲಿ ಮೂಡಿದ ಏಳು ಕರಾರುಗಳನ್ನು ಎಲ್ಲರೂ ನಡೆಸಿಕೊಟ್ಟರೆ ತಾವು ಉಪವಾಸವನ್ನು ಕೈ ಬಿಡುವೆನೆಂದು ತಿಳಿಸಿದರು. ಆಗ ದಿಲ್ಲಿಯ ಶಾಂತಿ ಸಮಿತಿಯ ಸದಸ್ಯರು, ಹಿಂದೂ ಮುಸಲ್ಮಾನ, ಸಿಖ್ ಧುರೀಣರು ಮಹಾತ್ಮರ ಪ್ರಾಣ ಉಳಿಸಲು ಅವರ ಏಳು ಕರಾರುಗಳನ್ನು ನಡೆಸಿ ಕೊಡುವದಾಗಿ ಆಶ್ವಾಸನೆ ಕೊಟ್ಟರು. ದಿಲ್ಲಿಯ ಗಲಭೆಯ ಪರಿಣಾಮವಾಗಿ ೧೧೭ ಮಸೀದೆಗಳು ಹಿಂದೂ ದೇವಾಲಯಗಳಾಗಿ ಹಾಗೂ ವಾಸಸ್ಥಳಗಳಾಗಿ ಪರಿವರ್ತಿಸಲ್ಪಟ್ಟಿವೆ. ಅವೆಲ್ಲವುಗಳನ್ನು ಪುನಃ ಮಸೀದೆಗಳನ್ನಾಗಿ ನಿರ್ಮಿಸಬೇಕು. ದಿಲ್ಲಿಯ ಕರೋಲ್ ಭಾಗ, ಸಬಜಿಮಂಡಿ ಮತ್ತು ಪಹಾರಗಂಜ ಭಾಗಗಳಲ್ಲಿ ಮುಸಲ್ಮಾನರು ಯಾವುದೇ ಹೆದರಿಕೆ ಇಲ್ಲದೇ ಸ್ವತಂತ್ರವಾಗಿ ತಿರುಗಾಡುವಂತಾಗಬೇಕು. ಪಾಕಿಸ್ತಾನದಿಂದ ಒತ್ತಾಯದಿಂದ ಗುಳೇ ಕಟ್ಟಿಕೊಂಡು ಹೋದ ಮುಸಲ್ಮಾನರು ಹಿಂದಿರುಗಿ ಬಂದರೆ ಹಿಂದುಗಳು ಅವರಿಗೆ ಆಶ್ರಯ ಕೊಡಬೇಕು ಎಂದು ಮುಂತಾಗಿ ಏಳು ಕರಾರುಗಳನ್ನು ಹಾಕಿದ್ದರು. ಕೋಮು ಸೌಹಾರ್ದತೆ ವೃದ್ಧಿಸಲು ತಾವು ಕಟಿಬದ್ಧ ಎಂದು ಹಿಂದೂ ಮತ್ತು ಮುಸ್ಲಿಮರ ನಿಯೋಗಗಳು ಭರವಸೆ ನೀಡಿದವು. ಪಾಕಿಸ್ತಾನವೂ ಸೇರಿ ಉಪಖಂಡದಾದ್ಯಂತ ಮಹಾತ್ಮರ ಸುರಕ್ಷೆಗಾಗಿ ಪ್ರಾರ್ಥನೆಗಳು ನಡೆದವು. ಈ ಉಪವಾಸ ಮುಖಂಡರ ಮನಸ್ಸನ್ನು ಪರಿವರ್ತನೆ ಮಾಡಿತು. ಜನರ ಹೃದಯ ಪರಿವರ್ತನೆ ಆಯಿತು. ಆದರೂ ಮಹಾತ್ಮರು ಹಿಂದೂ ಧರ್ಮದ ದ್ರೋಹಿಗಳೆಂದು ಕೆಲವು ಹಿಂದೂವಾದಿಗಳ ತಿಳಿವಳಿಕೆಯಾಗಿತ್ತು. ಅವರನ್ನು ರಾಜಕೀಯ ರಂಗದಿಂದ ಪೂರ್ಣವಾಗಿ ಇಲ್ಲದಂತೆ ಮಾಡುವ ಪ್ರಯತ್ನಗಳು ನಡೆದವು. 
                           ಜನೆವರಿ ೧೮ ರಂದು ೧೨-೪೫ ಘಂಟೆಗೆ ಮಹಾತ್ಮಾ ತಮ್ಮ ಉಪವಾಸ ಕೊನೆಗೊಳಿಸಿದರು. ಆರ್.ಎಸ್.ಎಸ್. ಹಾಗೂ ಹಿಂದೂ ಮಹಾಸಭಾ ಸೇರಿ ಎಲ್ಲ ಸಮುದಾಯಗಳ ೧೩೦ ಸದಸ್ಯರಿದ್ದ ಸಮಿತಿ ಗಾಂಧಿಯವರ ಎದುರು ಶಾಂತಿ ಕಾಪಾಡುವ ವಚನ ನೀಡಿತು. ಗ್ಲುಕೋಸ್ ಸೇರಿಸಿದ್ದ ಕಿತ್ತಳೆ ಹಣ್ಣಿನ ರಸ ಸೇವಿಸಿ ಅವರು ಉಪವಾಸ ಬಿಟ್ಟರು.

                                   ಕೊನೆಯ ದಿನ
                                ಜನೆವರಿ ೩೦ ರಂದು ಭೋಜನಾನಂತರ ಗಾಂಧಿಯವರು ತಮ್ಮ ಆಪ್ತ ಸಹಾಯಕ ಪ್ಯಾರೇಲಾಲ ನಾಯಕ ಜೊತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಒಂದು ಸಣ್ಣ ನಿದ್ದೆಯನ್ನೂ ಮಾಡಿದರು. ಆಮೇಲೆ ನಿಸರ್ಗ ಚಿಕಿತ್ಸಾ ಕ್ರಮದಂತೆ ತಮ್ಮ ಹೊಟ್ಟೆಯ ಮೇಲೆ ಮಣ್ಣಿನ ಲೇಪನ ಮಾಡಿಕೊಂಡರು. ನಿಸರ್ಗ ಚಿಕಿತ್ಸೆಯಲ್ಲಿ ದೃಢ ವಿಶ್ವಾಸವಿದ್ದ ಅವರು ಇಂಥ ಮಣ್ಣಿನ ಲೇಪನ ದೇಹದಲ್ಲಿನ ವಿಷಾಂಶಗಳನ್ನು ತೆಗೆದು ಶುದ್ಧಗೊಳಿಸುವದೆಂದು ನಂಬಿದ್ದರು.
                      ಆ ದಿನ ಸಂಜೆ ಅನೇಕರು ಗಾಂಧೀಜಿಯವರ ಸಂದರ್ಶನಕ್ಕಾಗಿ ಬಂದಿದ್ದರು. ಅವರಲ್ಲಿ ಪ್ರಮುಖರಾದವರು ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ತಮ್ಮ ಮಗಳು ಮಣಿಬೇನ್ ಜೊತೆಗೆ ಅವರು ಸಂಜೆ ೪ ಗಂಟೆಗೆ ಆಗಮಿಸಿದರು. ಸರ್ದಾರ್ ಪಟೇಲರಿಗೂ ಜವಾಹರಲಾಲ ನೆಹರು ಅವರಿಗೂ ಅನೇಕ ವಿಷಯಗಳಲ್ಲಿ ಪರಸ್ಪರ ಆಗುತ್ತಿರಲಿಲ್ಲವೆಂದೂ ಬಹಿರಂಗ ಸತ್ಯವೇ. ಅಷ್ಟೇ ಅಲ್ಲದೆ, ನಿಮ್ಮಲ್ಲಿ ಒಬ್ಬರು ಮಂತ್ರಿಮಂಡಳಕ್ಕೆ ರಾಜೀನಾಮೆ ನೀಡಬೇಕೆಂದೂ ಗಾಂಧೀಜಿ ಮೊದಲೊಮ್ಮೆ ಸೂಚಿಸಿದ್ದು ಉಂಟು. ಆದರೆ ಇಬ್ಬರೂ ಅನಿವಾರ್ಯ ಎಂದು ತಾವು ಭಾವಿಸುವದಾಗಿಯೂ ಅವರು ಹೇಳಿದ್ದರು.
                        ಸಂಜೆ ೪-೩೦ಕ್ಕೆ ಗಾಂಧಿಯವರ ಮೊಮ್ಮಗಳು ಅಭಾ ಸಂಜೆ ಭೋಜನಕ್ಕೆ ಸಜ್ಜು ಮಾಡಿಕೊಂಡು ಬರುವವರೆಗೂ ಮಾತಾಡುತ್ತಲೇ ಇದ್ದರು. ಆಹಾರ ಬೆಳಗಿನ ಊಟದಂತೆಯೇ ಇತ್ತು. ಅದು ಪ್ರತಿದಿನದ ಪ್ರಾರ್ಥನಾ ಸಭೆಗೆ ಹೊರಡುವ ಸಮಯ ಸಭೆಗೆ ಹೊರಡುವ ಸಮಯ ಸಭೆಗೆ ತಡವಾಗುವದನ್ನು ಗಾಂಧಿಯವರು ಸಹಿಸುವವರಲ್ಲ ಎಂಬುದನ್ನು ತಿಳಿದಿದ್ದ ಅಭಾ ಚಡಪಡಿಸಿದರು. ಮಧ್ಯ ಪ್ರವೇಶಿಸುವ ಧೈರ್ಯಮಾಡಲಿಲ್ಲ. ಕೊನೆಗೆ ಹತಾಶಳಾಗಿ ಗಾಂಧಿಯವರ ಪಾಕೆಟ್ ಗಡಿಯಾರವನ್ನೇ ತೆಗೆದು ಅವರ ಮುಖದೆದುರು ಹಿಡಿದರೂ ಆಕೆ ಹಿಡಿದಳು. ಅದೂ ಕೆಲಸ ಮಾಡಲಿಲ್ಲ. ೫-೧೦ ಗಂಟೆಗೆ ಪಟೇಲರ ಪುತ್ರಿ ಮಣಿಬೇನ್ ಮಧ್ಯ ಪ್ರವೇಶಿಸಿದಾಗಲೇ ಗಾಂಧಿಯವರು ಮೇಲೆದ್ದರು. ಅವರು ಹೊರಡುತ್ತಿದ್ದಂತೆಯೇ ಸೇವಕನೊಬ್ಬ ಬಂದು ಕಾಠೇವಾಡದಿಂದ ಇಬ್ಬರು ಕಾರ್ಯಕರ್ತರು ಬಂದಿದ್ದು ನಿಮ್ಮನ್ನು ಕಾಣಬಯಸಿದ್ದಾರೆಂದು ತಿಳಿಸಿದ. "ಪ್ರಾರ್ಥನೆ ನಂತರ ಬರುವಂತೆ ಹೇಳು, ಆವಾಗ ಅವರನ್ನು ನಾನು ನೋಡುತ್ತೇನೆ. ನಾನು ಜೀವಿಸಿದ್ದರೆ..." ಎಂದು ಗಾಂಧಿಯವರು ಅವನಿಗೆ ತಿಳಿಸಿದರು.
                                ಕೇಡಿನ ಸೂಚನೆ

                             ಕಳೆದ ಕೆಲ ವಾರಗಳಲ್ಲಿ ಗಾಂಧಿಯವರು ಹಲವಾರು ಬಾರಿ ಸಾವಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹತ್ತು ದಿನಗಳ ಹಿಂದೆ ಅವರ ಪ್ರಾರ್ಥನಾ ಸಭೆಯಲ್ಲಿ ಸುಮಾರು ೨೫ ಮೀಟರ್ ಅಂತರದಲ್ಲಿ ಮದನಲಾಲ ಎಂಬ ತರುಣನು ಬಾಂಬ್ ಎಸೆದನು. ಅದು ಸ್ಫೋಟಗೊಂಡಿತು. ಪುಣ್ಯವಶಾತ್ ಯಾರಿಗೂ ಅಪಾಯವಾಗಲಿಲ್ಲ. ಅವರಿಗೆ ಅದರ ಬಗ್ಗೆ ತಿಳಿಯದೇ ಅವರು ಉಳಿದದ್ದು ದೈವೇಚ್ಛೆಯೇ ಸರಿ. ಸ್ಫೋಟವು ಸಭಿಕರಲ್ಲಿ ಭೀತಿ ಉಂಟು ಮಾಡಿತ್ತು. ಗಾಂಧಿಯವರು ಉದ್ವಸ್ಥಗೊಳ್ಳಲಿಲ್ಲ. ಒಬ್ಬ ವ್ಯಕ್ತಿಯನ್ನು ಈ ಸಂಬಂಧ ಬಂಧಿಸಲಾಗಿತ್ತು. ಶಾಂತರಾಗಿಯೇ ಇದ್ದ ಗಾಂಧಿಯವರು ಅನೇಕ ಪ್ರಶಂಸಾ ಸಂದೇಶಗಳೂ ಬಂದವು. ಆದರೆ ಮರುದಿನದ ಪ್ರಾರ್ಥನಾ ಸಭೆಯಲ್ಲಿ ಅವುಗಳನ್ನು ನಿರಾಕರಿಸಿ ಮಾತನಾಡಿದ ಅವರು ಆ ಸ್ಫೋಟವು ಸೈನ್ಯದವರು ನಡೆಸುವ ಎಂದಿನ ಅಭ್ಯಾಸ ಕ್ರಮಗಳಿಂದಾದದ್ದೆಂದು ತಾವು ತಿಳಿದಿದ್ದೆನೆಂದರು.
                                "ಪೊಲೀಸರು ಬಂಧಿಸಿರುವ ವ್ಯಕ್ತಿ ನನ್ನನ್ನು ಹಿಂದೂಧರ್ಮದ ಶತ್ರುವೆಂದು ಭಾವಿಸಿದ್ದಾನೆ. ಈ ಘಟನೆಗೆ ಕಾರಣನಾದ ವ್ಯಕ್ತಿಯ ಬಗ್ಗೆ ನೀವು ಯಾವುದೇ ದ್ವೇಷ ತಾಳಬಾರದು." ಎಂದು ಸಭೆಯಲ್ಲಿ ಗಾಂಧಿಯವರು ತಿಳಿಸಿದರು. ನನ್ನನ್ನು ಕೊಲ್ಲಲು ದೇವರೇ ತನ್ನನ್ನು ಕಳಿಸಿರುವನೆಂದೇ ಈ ವ್ಯಕ್ತಿ ತಿಳಿದಂತಿದೆ. ಆದರೆ ಇಂಥ ಕೃತಿಗಳು ಹಿಂದೂ ಧರ್ಮವನ್ನು ರಕ್ಷಿಸುವದಿಲ್ಲ ಎಂಬುದನ್ನು ಈ ವ್ಯಕ್ತಿಯ ಹಿಂದಿರುವವರು ಅಥವಾ ಯಾರ ಕೈಗೊಂಬೆ ಈತನಾಗಿದ್ದಾನೋ ಅವರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು. ಬಾಂಬ್ ಸ್ಫೋಟದ ನಂತರ ಬಿರ್ಲಾ ಭವನಕ್ಕೆ ಬರುವ ಜನರನ್ನು ಶೋಧ ಮಾಡುವದು ಅವಶ್ಯವೆಂದು ಪೊಲೀಸರ ಅಭಿಪ್ರಾಯವಾಗಿತ್ತು. ಪೊಲೀಸ್ ಮೇಲಾಧಿಕಾರಿಯೊಬ್ಬರು ಸ್ವತಃ ಗಾಂಧೀಜಿಯವರನ್ನು ಭೇಟಿ ಮಾಡಿ ಅವರ ಪ್ರಾಣಕ್ಕೆ ಗಂಡಾಂತರವಿದೆಯಂದು, ಪೊಲೀಸರಿಗೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಸಮ್ಮತಿಯನ್ನು ನೀಡಬೇಕೆಂದು ವಿನಂತಿಸಿಕೊಂಡನು. ಅದಕ್ಕೆ ಮಹಾತ್ಮರು, "ನನ್ನ ಪ್ರಾಣ ಪರಮಾತ್ಮನ ಕೈಯಲ್ಲಿದೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ನಾನು ಸಾಯಬೇಕೆಂದು ಅವನ ಇಚ್ಚೆ ಇದ್ದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಪ್ರಾರ್ಥನಾ ಸಭೆಗೆ ಬರುವ ಜನರನ್ನು ತಡೆಯುವದು. ಅವರಿಗೆ ಅಡ್ಡಿಯನ್ನುಂಟು ಮಾಡುವದನ್ನು ನಾನು ಸಹಿಸುವದಿಲ್ಲ." ಎಂದು ಹೇಳಿದರು.
                                     ರಾಮ... ರಾಮ
                                    ಜನೆವರಿ ೩೦ ರಂದು ಸಂಜೆ; `ವಾಕಿಂಗ್ ಸ್ಟಿಕ್' ಎಂದೇ ಭಾವಿಸಿದ್ದ ಮೊಮ್ಮಕ್ಕಳು ಅಭಾ ಮತ್ತು ಮನು ಇವರ ಭುಜಗಳ ಮೇಲೆ ಕೈ ಇರಿಸಿ ಗಾಂಧಿಯವರು ಪ್ರಾರ್ಥನಾ ಮೈದಾನದತ್ತ ನಡೆದರು. ಅಂದು ತಮಗೆ ನೀಡಿದ್ದ ಗಜ...ರಿ ಕಸುವಾಗಿದ್ದುದನ್ನು ಪ್ರಸ್ತಾಪಿಸುತ್ತಾ "ಓ ನೀನಿಂದು ನನಗೆ ಪಶು ಆಹಾರ ನೀಡಿರುವಿ" ಎಂದು ಛೇಡಿಸಿದರು. ಕಸ್ತೂರಬಾ ಅವರು ಇದಕ್ಕೆ ಕುದುರೆಯ ಆಹಾರ ಎನ್ನುತ್ತಿದ್ದರೆಂದು ಅಭಾ ಪ್ರತಿಯಾಗಿ ನಗುತ್ತಲೇ ಉತ್ತರಿದಳು.
             "ಬಾಪು ನಿಮ್ಮ ಗಡಿಯಾರವನ್ನು ನಿರ್ಲಕ್ಷಿಸುತ್ತಿದ್ದೀರಿ. ಅದರ ಕಡೆ ನೀವು ನೋಡುತ್ತಲೇ ಇಲ್ಲ" ಅಭಾ ಆಕ್ಷೇಪಿಸಿದಳು. "ನಾನೇಕೆ ನೋಡಬೇಕು; ನೀವೇ ನನ್ನ ಸಮಯಪಾಲಕರಲ್ಲವೇ" ಗಾಂಧಿಯವರು ನುಡಿದರು. ಆದರೆ ಸಮಯಪಾಲಕರನ್ನೂ ನೀವು ನೋಡುತ್ತಿಲ್ಲವಲ್ಲ, ಅಭಾ ಮಾರುತ್ತರ ನೀಡಿದಳು. ಗಾಂಧಿ ನಕ್ಕರಷ್ಟೆ.
              ಪ್ರಾರ್ಥನಾ ಮೈದಾನಕ್ಕೆ ತೆರಳುವ ಪಾವಟಿಗಳ ಮೇಲೆ ಬರುತ್ತಾ ಗಾಂಧೀಜಿ ನುಡಿದರು. "ನಾನು ಹತ್ತು ನಿಮಿಷ ತಡಮಾಡಿದೆ, ಸರಿಯಾಗಿ ಐದು ಘಂಟೆಗೆ ನಾನಿಲ್ಲಿರಬೇಕು."
                     ಖಾದಿ ಬಟ್ಟೆಯಿಂದ ಅಲಂಕೃತ ವೇದಿಕೆಯೆಡೆಗೆ ಅವರು ನಡೆದು ಹೋಗುತ್ತಿದ್ದಂತೆ ಅವರ ಹಿಂದೆ ಸೂರ್ಯ ಮುಳುಗುತ್ತಿದ್ದ; ಸೇರಿದ್ದ ಜನ ಸರಿದು ದಾರಿ ಬಿಡುತ್ತಿದ್ದರು. ನಮಸ್ತೆ ಎಂದು ಹೇಳುತ್ತ ಜನರ ಅಭಿನಂದನೆಗಳನ್ನು ಅವರು ಸ್ವೀಕರಿಸುತ್ತಿದ್ದರು. ಮಹಾತ್ಮರು ವ್ಯಾಸ ಪೀಠದಿಂದ ೩೦ ಫೂಟ್ ದೂರದಲ್ಲಿರುವಾಗಲೇ, ಜನರನ್ನು ಸರಿಸುತ್ತ ಖಾದಿಧಾರಿ ಯುವಕನೊಬ್ಬ ಗಾಂಧಿಯವರತ್ತ ಧಾವಿಸಿದ. ಮಹಾತ್ಮರ ಚರಣ ಸ್ಪರ್ಷಿಸಲು ಹೊರಟವನಂತೆ ಕಂಡ ಅವನನ್ನು "ಬೇಡ ಈಗಾಗಲೇ ತಡವಾಗಿದೆ" ಎಂದು ಮನು ಹೇಳಿ ಆತನ ಕೈ ಹಿಡಿದು ತಡೆಯಲೆತ್ನಿಸಿದಳು. ಆದರೆ ಅವಳನ್ನು ತಳ್ಳಿದ ಆ ವ್ಯಕ್ತಿ ಗಾಂಧಿಯವರೆದುರು ಬಾಗಿ ಕೈ ಜೋಡಿಸಿ ಪಿಸ್ತೂಲಿನಿಂದ ಮೂರು ಗುಂಡುಗಳನ್ನು ಹಾರಿಸಿದ. ಒಂದು ಮಹಾತ್ಮರ ಹೊಟ್ಟೆಯಲ್ಲಿ, ಎರಡು ಅವರ ಎದೆಯಲ್ಲಿ ಹೊಕ್ಕವು. ರಾಮ... ರಾಮ.. ಎನ್ನುತ್ತ ಮಹಾತ್ಮ ಕುಸಿದರು. ಅವರನ್ನು ತಕ್ಷಣ ಬಿರ್ಲಾ ಭವನಕ್ಕೆ ಒಯ್ಯಲಾಯಿತು. ವೈದ್ಯರು ಬಂದು ನೋಡುವದರೊಳಗಾಗಿ ಸಂಪೂರ್ಣ ಸ್ಮೃತಿ ತಪ್ಪಿತ್ತು. ಗುಂಡು ಹಾರಿಸಿದ ಮುಂದಿನ ೩೫ ನಿಮಿಷಗಳಲ್ಲಿ ಅವರ ಪ್ರಾಣಜ್ಯೋತಿ ನಂದಿ ಹೋಗಿತ್ತು. ಎಲ್ಲೆಡೆಯಲ್ಲಿಯೂ ಕತ್ತಲೆ ಕವಿದಂತಾಯಿತು. ಮೂರನೇಯ ದಿವಸ ಅವರ ಪಾರ್ಥಿವ ಶರೀರಕ್ಕೆ ಮಹಾತ್ಮಾ ಗಾಂಧೀಜೀ ಕಿ ಜೈ, ಮಹಾತ್ಮಾ ಅಮರ ಹೈ ಎಂಬ ದುಃಖತಪ್ತ ಜನ, ಜೈ ಘೋಷಣೆಗಳೊಂದಿಗೆ ಯಮುನಾನದಿ ದಂಡೆಯ ರಾಜಘಾಟದಲ್ಲಿ ಅಗ್ನಿಸ್ಪರ್ಶ ಮಾಡಿತು. ಗಾಂಧೀಜಿಯವರನ್ನು ಕೊಲೆ ಮಾಡಿದ ನಾಥೂರಾಮ ಗೋಡ್ಸೆ ಎಂಬ ಬ್ರಾಹ್ಮಣ ಯುವಕ ಕಟ್ಟಾ ಹಿಂದೂವಾದಿ. ಅವನನ್ನು ೫ನೇ ನವ್ಹೆಂಬರ್ ೧೯೪೯ ರಂದು ಅಂಬಾಲಾ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಮಹಾತ್ಮಾ ಗಾಂಧಿ ತಮ್ಮ ನೈಜ ಮಿತ್ರ(ಸಾವು)ನನ್ನು ಸಂಧಿಸಿದ್ದರು. ಆದರೆ ಅವರ ಆತ್ಮಚೇತನ ನಿನ್ನೆಯೂ ಇತ್ತು. ಇಂದೂ ಇದೆ. ನಾಳೆಯೂ ಇರುತ್ತದೆ.

No comments: