ಇತಿಹಾಸವೆಂಬುದು ಸತ್ಯಘಟನೆಗಳ ಮೇಲೆ ಕಟ್ಟಿರುವ ಸಮಾಧಿ. ಆಂಗ್ಲರು, ಯುರೋಪಿಯನ್ನರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ತಮಗಿಷ್ಟ ಬಂದಂತೆ ತಮಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿರುಚಿಕೊಂಡಿದ್ದಾರೆ. ಈ ಸಂಗತಿ ಹಾಗೂ ಭಾವನೆ ಆವರಣವನ್ನು ಓದುತ್ತಾ ನಮಗೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೇವಲ ಇತಿಹಾಸ ಅಧ್ಯಯನಕಾರರನ್ನಲ್ಲದೇ, ಎಲ್ಲ ವರ್ಗದ, ಎಲ್ಲ ಕ್ಷೇತ್ರದ ಜನರ ಗಮನ, ಆಸಕ್ತಿ ಬೆಳೆಸಿಕೊಂಡು ಹೋಗುವಲ್ಲಿ ಈ ಕೃತಿ ಸಫಲವಾಗಿದೆ.
ಈ ಕೃತಿ ಓದಿದ ಮೇಲೆ ಮುಸ್ಲಿಂರನ್ನು ದ್ವೇಷಿಸಬೇಕಾಗಿಲ್ಲ. ಏಕೆಂದರೆ, ಇತಿಹಾಸದಲ್ಲಿ ತುರ್ಕರಿಂದ ನಡೆದ ಯಾವುದೇ ದುಷ್ಕೃತ್ಯಕ್ಕೆ ಈಗಿನ ನಮ್ಮ ಮುಸ್ಲಿಂರು ಭಾಜನರಲ್ಲ. ಹಾಗೇ ನೋಡಿದರೆ ಬಹುತೇಕ ಮುಸ್ಲಿಂರ ಪೂರ್ವಜರು ಹಿಂದೂ ಅಥವಾ ಇತರ ಧರ್ಮದವರಾಗಿದ್ದು, ಆಗಿನ ತುರ್ಕರ ಆಡಳಿತದಲ್ಲಿ ಕಾರಣಾಂತರಗಳಿಂದ ಮತಾಂತರ ಹೊಂದಿದವರು. ಡಾ|| ಎಸ್.ಎಲ್.ಭೈರಪ್ಪನವರು ಕೂಡ ಈ ಮಾತನ್ನು ಅನುಮೋದಿಸುತ್ತಾರೆ.
ಈಗಲೂ ಭಾರತ, ಭಾರತೀಯರಿಗಾಗಿ ಹಾಗೂ ಭಾರತೀಯರಾಗಿ ಶ್ರಮಿಸುವ, ಪ್ರಾರ್ಥನೆ ಸಲ್ಲಿಸುವ ಬಹುಸಂಖ್ಯಾತ ಮುಸ್ಲಿಂರು ನಮ್ಮ ನಡುವೆ ಇದ್ದಾರೆ. (ಕೆಲವರು ಇದಕ್ಕೆ ಅಪವಾದ ಇರಬಹುದು.) ಏನೇ ಆಗಲಿ ನಾವೆಲ್ಲ ಒಂದೇ. ಯಾವ ಧರ್ಮವೂ ಶ್ರೇಷ್ಠವಲ್ಲ, ಯಾವ ಧರ್ಮವೂ ಕನಿಷ್ಠವಲ್ಲ. ಅಲ್ಲವೇ...?
ಚಕ್ರವರ್ತಿ ಸೂಲಿಬೆಲೆ ಅವರು 'ಆವರಣ' ಪುಸ್ತಕದ ಕುರಿತು ಬರೆದ ಬರಹ ಇಲ್ಲಿದೆ.
‘ಭೈರಪ್ಪನವರು
ಮತ್ತೊಂದು ಕಾದಂಬರಿ ಬರೆಯುತ್ತಿದ್ದಾರಂತೆ’ ಎಂಟು ತಿಂಗಳ ಹಿಂದೆ ಕೇಳಿದ ಮಾತು.
’ಭೈರಪ್ಪನವರ ಹೊಸ ಕಾದಂಬರಿ ಸಾಹಿತ್ಯವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಲಿದೆಯಂತೆ’
ನಾಲ್ಕು ತಿಂಗಳ ಹಿಂದೆ ಯಾರೋ ಪಿಸುಗುಡುತ್ತಿದ್ದರು. ’ಭೈರಪ್ಪನವರ ’ಆವರಣ’
ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಖಾಲಿಯಂತೆ’ ನಾಲ್ಕಾರು ದಿನಗಳ ಹಿಂದೆ
ಪತ್ರಿಕೆಯಲ್ಲಿ ಸುದ್ದಿಬಂತು.
ಅದಾಗಲೇ
ಆವರಣದ ಪುಟಗಳಲ್ಲಿ ನಾನು ಹುದುಗಿ ಹೋಗಿದ್ದೆ. ’ಸಾರ್ಥ’ದ ನಂತರ ಭೈರಪ್ಪನವರು
ಬರೆದಿರುವ ಈ ಐತಿಹಾಸಿಕ ವಸ್ತುವಿನ ಕಾದಂಬರಿ ಇದೇ. ಮಧ್ಯಯುಗೀನ ಭಾರತೀಯ
ಇತಿಹಾಸವನ್ನು ನಯವಾಗಿ ಕಡೆಯುತ್ತ, ಸತ್ಯದರ್ಶನ ಮಾಡಿಸುತ್ತ, ನಮಗೆ ಗೊತ್ತಿರುವ
ವಿಚಾರಗಳಲ್ಲಿ ಇನ್ನೂ ಆಳಕ್ಕೆ ಇಳಿಯುತ್ತ ಒಂದು ಹೊಸ ಲೋಕಕ್ಕೆ ಭೈರಪ್ಪನವರು
ನಮ್ಮನ್ನು ಕರೆದೊಯ್ಯುತ್ತಾರೆಂದರೆ ಅಚ್ಚರಿಯಲ್ಲ.
ಎಲ್ಲಕ್ಕೂ
ಮುಖ್ಯವೆಂದರೆ ಬುದ್ಧಿಜೀವಿಗಳ ಸೋಗು ಹಾಕಿಕೊಂಡ ಸೋಕಾಲ್ಡ್ ಚಿಂತಕರನ್ನು
ಬಯಲಿಗೆಳೆದು ತಂದಿರುವುದು ಈ ಕೃತಿಯ ಗಮನಾರ್ಹ ಅಂಶ. ಬಹುಶಃ ಬೇರಾವ ಕಾದಂಬರಿಕಾರನೂ
ಇಂತಹುದೊಂದು ’ಪ್ರಯತ್ನ’ ಕ್ಕೂ ಕೈಹಾಕಲಾರ!
ಆಧುನಿಕ
ಶಿಕ್ಷಣ ಪಡೆದ ಹಳ್ಳಿಯ ಮನೆಯ ಲಕ್ಷಿ ಗಾಂಧಿವಾದಿ ತಂದೆಯ ಮಾತನ್ನು ಧಿಕ್ಕರಿಸಿ
ಮಿತ್ರ, ಪ್ರಿಯಕರ ಅಮೀರನನ್ನು ಮದುವೆಯಾಗುವುದು ಕಾದಂಬರಿಯ ಮುಖ್ಯ ಅಂಶ.
ಪ್ರತಿಯೊಂದು ಪಾತ್ರಗಳು ಆಡುವ ಮಾತೂ ಅತ್ಯಂತ ಮಾರ್ಮಿಕ. ಮದುವೆಯಾಗಹೊರಟ ಮಗಳಿಗೆ
ಸದಾ ಸಮಾಜದಲ್ಲಿಯೇ ಇರುವ ತಂದೆ ಬುದ್ಧಿವಾದ ಹೇಳುತ್ತಾನೆ, ’ನಾಳೆ ನಿನ್ನ
ಹೊಟ್ಟೆಯಲ್ಲಿ ಹುಟ್ಟುವ ಮಗ ದೇವಸ್ಥಾನಗಳನ್ನು ನಾಶ ಮಾಡುವವನಾಗುತ್ತಾನೆ’.
ತಂದೆಯನ್ನು ಧಿಕ್ಕರಿಸಿದ ಮಗಳು ಧರ್ಮತೊರೆದು ಮತಾಂತರಗೊಂಡು ರಜಿಯಾ ಆಗಿ ಅಮೀರನ
ತೋಳು ಸೇರುತ್ತಾಳೆ. ಆಕೆಯ ಇಸ್ಲಾಂ ಪ್ರೀತಿ, ಬುರ್ಕಾದ ಬಗೆಗಿನ ಗೌರವ, ಹಿಂದೂ
ದ್ವೇಷವೆಲ್ಲ ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸಲಾರಂಭಿಸುತ್ತದೆ. ಕೆಲವು ವರ್ಷಗಳ
ಹಿಂದೆ ಇಂತಹುದೇ ಘಟನೆಯೊಂದು ಕೇರಳದಲ್ಲಿ ನಡೆದಿತ್ತು. ಕಮಲಾದಾಸ್
ಎಂಬಾಕೆ
ಹಿಂದೂ ಧರ್ಮದಿಂದ ಮತಾಂತರಿತಳಾಗಿ ಇಸ್ಲಾಂ ಸ್ವೀಕರಿಸಿದ್ದಳು. ಆಕೆ ಇಸ್ಲಾಂನ್ನು
ಹೊಗಳಿದ ಒಂದೊಂದು ಪದವೂ ಪತ್ರಿಕೆಗಳಲ್ಲಿ ಅದರಲ್ಲೂ ವಿಶೇಷವಾಗಿ ಇಂಗ್ಲೀಷ್
ಪತ್ರಿಕೆಗಳಲ್ಲಿ ರಾರಾಜಿಸುತ್ತಿದ್ದವು. ಅದೇನು ಯೋಗಾಯೋಗವೋ ದೇವರೇ ಬಲ್ಲ. ’ಆವರಣ’
ಹೊರಬರುವ ವೇಳೆಗೆ, ಕಮಲಾದಾಸ್ ಇಸ್ಲಾಂ ’ಆವರಣ’ದಿಂದ ಹೊರಬಂದ ಸುದ್ದಿ ಬಂದಿದೆ.
ಇಸ್ಲಾಂನ ಆಂತರಿಕ ನಡಾವಳಿಗಳಿಂದ ಬೇಸತ್ತ ಕಮಲಾದಾಸ್ ಈಗ ಎಲ್ಲವನ್ನೂ ತೊರೆದು
ಪ್ರತ್ಯೇಕವಾಗಿ ಮಗನ ಬಳಿ ಇರಲಾರಂಭಿಸಿದ್ದಾಳೆ. ಹೀಗೇಕಾಗಿರಬಹುದು ಎಂಬುದಕ್ಕೆ ಆವರಣ
ಸ್ಪಷ್ಟ ಉತ್ತರ. ನಮ್ಮ ನಡುವೆ ಮತಗಳ ತಾಕಲಾಟ ಇರದು ಎನ್ನುತ್ತಲೇ ಮದುವೆಯಾದ ಅಮೀರ್
ಅಪ್ಪ-ಅಮ್ಮನನ್ನು ಮೆಚ್ಚಿಸಲೋಸುಗ ಹೆಂಡತಿಗೆ ಒಂದಷ್ಟು ಕಟ್ಟಳೆ ವಿಧಿಸುತ್ತಾನೆ.
ಕಾಫಿರರು ಧರಿಸುವ ಕುಂಕುಮ ಇಡಬೇಡ ಎನ್ನುತ್ತಾನೆ. ಕೊನೆಗೆ ಕುರಿ-ಕೋಳಿ ತಿಂದವನಿಗೂ
ಒಗ್ಗದ ದನದ ಮಾಂಸವನ್ನೂ ಆಕೆಗೆ ತಿನ್ನಿಸಿಬಿಡುತ್ತಾನೆ!
ಧಾರ್ಮಿಕ
ನೆಲೆಗಟ್ಟಿನಲ್ಲಿ ಬಿರುಕುಬಿಟ್ಟ ದಾಂಪತ್ಯ ವೈಚಾರಿಕ ಹಿನ್ನೆಲೆಯಲ್ಲಿ ಕಂದಕವೇ
ಆಗಿಬಿಡುತ್ತದೆ. ಈ ಘಟನೆಗಳನ್ನು ಮುಂದಿಟ್ಟುಕೊಂಡೇ ಭೈರಪ್ಪನವರು ಇಸ್ಲಾಂನ್ನು
ವಿವೇಚಿಸುವ ರೀತಿ ಮನೋಜ್ಞವಾದುದು. ಮೂರು ಬಾರಿ ತಲಾಕ್ ಹೇಳಿದರೆ ಹೆಂಡತಿಯನ್ನು
ಬಿಟ್ಟಂತೆ ಎಂಬುದನ್ನು ಅಮೀರನ ಮೂಲಕ ಸ್ಪಷ್ಟಪಡಿಸುತ್ತಾರೆ. ಮುಸಲ್ಮಾನ ಹುಡುಗರು
ಹಿಂದೂ ಹುಡುಗಿಯರನ್ನು ಮದುವೆಯಾಗಬೇಕಾದರೆ ಇಲ್ಲಿಯ ಕಾನೂನಿನಂತೆ ರಿಜಿಸ್ಟರ್
ಮದುವೆಯಾಗದೇ, ನಿಕಾಹ್ ಆಗುವುದೇಕೆಂಬುದು ಕೂಡ ಕಾದಂಬರಿಯ ಸಾಲುಗಳಲ್ಲಿ
ಸ್ಪಷ್ಟವಾಗುತ್ತದೆ. ರಿಜಿಸ್ಟರ್ ಮದುವೆಯಾದರೆ ಅದು ಶರೀಯತ್‌ನ್ನು ಮೀರಿಬಿಡುತ್ತದೆ,
ಆಮೇಲೆ ಇಷ್ಟ ಬಂದಾಗಲೆಲ್ಲ ತಲಾಕ್ ಹೇಳುವುದು ಸಾಧ್ಯವಾಗಲಾರದು ಎಂಬ ಹೆದರಿಕೆ.
ಬುದ್ಧಿಜೀವಿ ಶಾಸ್ತ್ರಿ ಲಕ್ಷಿ ಯ ಮದುವೆಯ ಸಂದರ್ಭದಲ್ಲಿ ವಹಿಸದ ಈ ಎಚ್ಚರಿಕೆ ತನ್ನ
ಮಗಳು ಮುಸ್ಲೀಂ ಹುಡುಗನನ್ನು ಮದುವೆಯಾಗುವಾಗ ವಹಿಸುವುದರಲ್ಲಿಯೇ ಈ ಅಂಶ
ದೃಢಪಡುತ್ತದೆ. ಇರಲಿ, ಕಥೆಯ ಮುಖ್ಯ ತಿರುವು ಹಂಪಿ. ಹಂಪಿಯಲ್ಲಿನ ವಿನಾಶಕ್ಕೆ ಕಾರಣ
ಮುಸಲ್ಮಾನರಲ್ಲ, ಶೈವ-ವೈಷ್ಣವರ ಕಾದಾಟ ಎಂಬುದನ್ನು ತೋರಿಸುವ ಹಪಾಪಿತನ
ಸರ್ಕಾರಕ್ಕೆ. ಆ ಕುರಿತಂತೆ ಸಾಕ್ಷ ಚಿತ್ರ ಮಾಡಿ ಮುಸಲ್ಮಾನರನ್ನು ಓಲೈಸಬೇಕೆಂಬ
ತವಕ ಬೇರೆ. ಸಾಕ್ಷ ಚಿತ್ರ ಮಾಡುವ ಕಾಂಟ್ರಾಕ್ಟು ನಿರ್ದೇಶಕ ಅಮೀರನಿಗೇ!. ಲಕ್ಷಿ
ಅಲಿಯಾಸ್ ರಜಿಯಾಳದೇ ಸ್ಕ್ರಿಪ್ಟು. ಹಂಪಿಯ ಸರ್ಕಾರಿ ಬಂಗಲೆಯಲ್ಲಿ ನಿಂತು
ಕಣ್ಣಾಡಿಸಿದ ಲಕ್ಷಿ ಗೆ ಯಾಕೋ ಈ ವಿಚಾರ ರುಚಿಸಲಿಲ್ಲ. ಶೈವ-ವೈಷ್ಣವರು ತಮ್ಮ
ನಡುವಿನ ಕಿತ್ತಾಟಕ್ಕಾಗಿ ತಾವೇ ಕಟ್ಟಿದ ಮಂದಿರಗಳನ್ನು ಒಡೆಯುತ್ತಾರೆಂಬುದನ್ನು
ಆಕೆಗೆ ಊಹಿಸಲೂ ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಅಕ್ಕಪಕ್ಕದವರು ಕಾದಾಡುತ್ತಲೇ
ಇರುತ್ತಾರೆ, ಹಾಗಂತ ಅವಕಾಶ ಸಿಕ್ಕರೂ ಮಂದಿರವನ್ನು ಒಡೆಯದೇ ಕೈಮುಗಿದು ಆಶೀರ್ವಾದ
ಪಡೆಯುತ್ತಾರೆ. ಅಂತಹುದರಲ್ಲಿ ವಿರೂಪಾಕ್ಷನನ್ನೇ ವಿರೂಪಗೊಳಿಸುವ ಕೆಲಸ ಅವರು
ಮಾಡಿರಲಾರರು, ಇದು ಮುಸಲ್ಮಾನ ದ್ರೋಹಿಗಳದೇ ಕೆಲಸ ಎಂಬುದು ಆಕೆಗಂತೂ
ಸ್ಪಷ್ಟವಾಗಿತ್ತು. ಈ ಸತ್ಯವನ್ನು ಸ್ವೀಕರಿಸುವ ಮನಸ್ಥಿತಿ ಅಮೀರನಿಗಂತೂ ಖಂಡಿತ
ಇರಲಿಲ್ಲ. ಅಮೀರ ಮುಖವಾಡ ಅಷ್ಟೇ. ಅವನ ನೆಪದಲ್ಲಿ ಬೀದಿಗೆ ಬಿದ್ದಿರುವರು ಅನೇಕ
ನಾಟಕಕಾರರು, ಬುದ್ಧಿಜೀವಿಯ ಸೋಗಿನಲ್ಲಿ ಅರೆಗಡ್ಡ ಬಿಟ್ಟು ಮೆರೆದಾಡುತ್ತಿರುವವರು.
ಇತಿಹಾಸದಲ್ಲಿ ಹುದುಗಿರುವ ಅನೇಕ ಸತ್ಯಗಳನ್ನು ಅವರು ಒಪ್ಪಿಕೊಳ್ಳಲು ಸಿದ್ಧರಿಲ್ಲ.
ಹಾಗೆ ಒಪ್ಪಿಕೊಂಡುಬಿಟ್ಟರೆ ಅವರ ಅಸ್ತಿತ್ವವೇ ಕೊನೆಯಾಗಿಬಿಡುತ್ತದೆ.
ಮೂರು ವರ್ಗದ ಜನರಿರುತ್ತಾರೆ. ಪಟ್ಟ ಭದ್ರ ಹಿತಾಸಕ್ತಿಗಳ ಚಿಂತನೆಗೆ ತಕ್ಕಂತೆ ವಾದ
ಮಂಡಿಸುವವರು ಕೆಲವು ಜನ. ಆ ವಾದವನ್ನು ಯಾವ ಕಾರಣಕ್ಕೂ ವಿರೋಧಿಸದೇ ವಿರೋಧಿಗಳನ್ನು
ಜರಿದು ಬಾಯ್ಮುಚ್ಚುವಂತೆ ಮಾಡುವವರು ಮತ್ತೊಂದಷ್ಟು ಜನ. ಇನ್ನೂ ಒಂದು ವರ್ಗ. ಆ
ವರ್ಗಕ್ಕೆ ಈ ಜನರ ವಾದ-ಚಿಂತನೆ ಎಳ್ಳಷ್ಟೂ ಇಷ್ಟವಾಗದು, ಆದರೆ ಇವರೊಡನಿದ್ದರೆ
ಕೀರ್ತಿ ಪ್ರಾಪ್ತಿಯಾಗುವುದೆಂಬ ಲೋಭಿತನ. ಇವರುಗಳೇ ಸೇರಿ ಭಾರತೀಯ ಇತಿಹಾಸವನ್ನು
ಮಸುಕು ಮಸುಕಾಗಿಸಿಬಿಟ್ಟಿದ್ದಾರೆ. ಆಕ್ರಮಣ ಮಾಡಿ ನಮ್ಮ ಹೆಣ್ಣು ಮಕ್ಕಳನ್ನು
ಜನಾನಾಕ್ಕೆ ಸೇರಿಸಿಕೊಂಡ, ಗಂಡಸರನ್ನು ಷಂಡರನ್ನಾಗಿಸಿದ ಜನಾಂಗವನ್ನು ಕಂಡರೆ ಇವರಿಗೆ
ಅದೇಕೋ ಪ್ರೀತಿ. ಭಾರತೀಯ ಮುಸಲ್ಮಾನರನ್ನು ’ನೀವು ಭಾರತೀಯರು’ ಎಂದು ಕರೆದರೆ
ಅವರಿಗೆ ಇರಿಸು-ಮುರುಸು! ಇಲ್ಲಿನ ಮುಸಲ್ಮಾನರ ಮೂಲಪುರುಷರೂ, ಹಿಂದೂಗಳ ಮೂಲ
ಪುರುಷರೂ ಅದೇ ಋಷಿಗಳು ಎಂಬುದನ್ನು ಅವರಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದರೆ ಇಂದಿನ
ಸಮಸ್ಯೆಗಳೇ ಇರುತ್ತಿರಲಿಲ್ಲ. ಅಲ್ಲದೇ ಮತ್ತೇನು? ’ಮಧ್ಯಯುಗದಲ್ಲಿ
ಹಿಂದೂಧರ್ಮದಿಂದ ಮತಾಂತರಗೊಂಡ ಜನರಲ್ಲವೇ ಇವರು! ಘೋರಿ-ಘಜ್ನಿಯರು ಇವರ ಮೂಲ
ಪುರುಷರಲ್ಲವೇ ಅಲ್ಲ. ಇವರ ತಾಯ್ನಾಡು ಭಾರತ, ದೂರದ ಅರಬ್ಬೀ ರಾಷ್ಟ್ರಗಳಲ್ಲ’. ಈ
ಮಾತುಗಳನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದೇಕೆ? ಮಾತನಾಡುವಾಗ ಭೈರಪ್ಪನವರು
ಹೇಳಿದ್ದರು, ’ಇತಿಹಾಸವನ್ನು ಬಳಸಿಕೊಳ್ಳಬೇಕು, ತಿರುಚಬಾರದು’. ಸಾಕ್ಷ ಚಿತ್ರ
ಮಾಡುವ ಮೂಲಕ, ದೊಡ್ಡ ಮಟ್ಟದ ಸೆಮಿನಾರ್ ಗಳನ್ನು ಆಯೋಜಿಸುವ ಮೂಲಕ ಶತ-ಶತಮಾನಗಳ
ಇತಿಹಾಸ ತಿರುಚುತ್ತಲೇ ಬಂದಿದ್ದೇವೆ.ಆದರೆ ಲಕ್ಷಿ ಸೆಟೆದು ನಿಂತಳು. ಆಗಲೇ ಆಕೆಗೆ
ತಂದೆ ತೀರಿಕೊಂಡ ಸುದ್ದಿ ಸಿಕ್ಕಿತು. ಹಳ್ಳಿಗೆ ಓಡಿದಳು. ಅಂತ್ಯ ಸಂಸ್ಕಾರಕ್ಕೆ
ಸಜ್ಜಾದಳು. ಗೋಮಾಂಸ ಭಕ್ಷಣೆಗೆ ಪ್ರಾಯಶ್ಚಿತ್ತ ಮಾಡಿಕೊಂಡು ಶ್ರದ್ಧೆಯಿಂದ
ಅಂತ್ಯಸಂಸ್ಕಾರ ನಡೆಸಿದಳು. ತಂದೆಯ ಕೋಣೆ ಹೊಕ್ಕರೆ ರಾಶಿಯಾಗಿ ಬಿದ್ದ ಇತಿಹಾಸದ
ಪುಸ್ತಕಗಳು. ಕಾದಂಬರಿ ಬರೆಯಲು ಕುಳಿತಳು. ಅಪ್ಪನ ಟಿಪ್ಪಣಿಗಳ ಆಧಾರದ ಮೇಲೆ ಅವಳ
ಬರವಣಿಗೆ ಶುರುವಾಯ್ತು. ಸೋತ ರಜಪೂತರ ೧೭ರ ಪ್ರಾಯದ ರಾಜಕುವರನನ್ನು
ಮನಸಬ್‌ದಾರಿಗಳು ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುವುದು, ಅವನ ಬೀಜಗಳನ್ನು
ಒಡೆಸಿ ಜನಾನಾದಲ್ಲಿ ಸೇವೆಗೆ ಹಾಕುವುದು, ಸುಂದರ ಹೆಣ್ಣು ಮಕ್ಕಳನ್ನು ಸೇನಾಪತಿಗಳು
ಬಯಸಿದಾಗ ಬಳಸುವ ವಸ್ತುಗಳಂತೆ ನೋಡಿಕೊಳ್ಳುವುದು ಎಲ್ಲವೂ ರೇಜಿಗೆ ಹುಟ್ಟಿಸುವಂತಹ
ಆಚರಣೆಗಳೇ.
ಈ
ಆಚರಣೆಗಳಾವುವೂ ಹೊಸತಲ್ಲ. ಎಲ್ಲವೂ ಇಸ್ಲಾಂನ ಹುಟ್ಟಿನೊಂದಿಗೇ ಬಂದದ್ದು.
ಅರೇಬಿಯಾಲ್ಲಿ ಬನಿಕುರೈಝ ಎಂಬ ಯಹೂದಿ ಪಂಗಡ ಪ್ರವಾದಿ ಅಲಂಕಾರಕ್ಕೆ
ಜೋಡಿಸಿಟ್ಟವಲ್ಲ. ಪ್ರತಿ ಪುಸ್ತಕದ ಪುಟ-ಪುಟಗಳಲ್ಲಿಯೂ ಅಪ್ಪನೇ ಕೈಯಾರ ಬರೆದ
ಟಿಪ್ಪಣಿ. ಆ ಟಿಪ್ಪಣಿಗಳ ಮೇಲೆ ಕಣ್ಣಾಡಿಸಿದಾಗಲೇ ಆಕೆಗೆ ಗೊತ್ತಾದುದು,
’ಭಾರತದಲ್ಲಿ ಮುಸಲ್ಮಾನರ ಆಳ್ವಿಕೆ ಅತ್ಯಂತ ಕ್ರೂರ ಘಟ್ಟ!’.
ಲಕ್ಷಿ
ಆ ಕೋಣೆಯ ಹೊರಗೆ ಇಣುಕಲಿಲ್ಲ. ತಿಂಗಳುಗಳು ಕಳೆದವು, ವರುಷಗಳು ಉರುಳಿದವು. ಆಗಾಗ
ಅಮೀರನ ಬಳಿ ಹೋಗಿ ದಾಂಪತ್ಯ ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಬರುತ್ತಿದ್ದಳು. ತಾನೇ
ರಬ್ಬರಿನ ಹಾಳೆಯಂತೆ ಅಮೀರನ ಮೈಮೇಲೆ ಬಿದ್ದರೂ ಆತ ಅವಳನ್ನು ಪಕ್ಕಕ್ಕೆ ತಳ್ಳಿ
ಎದ್ದು ಹೋಗುತ್ತಿದ್ದ. ಸ್ವಾಭಿಮಾನ ಎಷ್ಟು ಸಹಿಸೀತು. ಅಮೀರ್ ಮತ್ತೊಬ್ಬ ಅಚ್ಚ
ಮುಸ್ಲೀಂ ಹುಡುಗಿಯನ್ನು ಮದುವೆಯಾದ ಸುದ್ದಿ ಕೇಳಿದ ಮೇಲಂತೂ ಲಲ್ಲೆಗರೆಯುವ ಮನಸ್ಸೂ
ಮುರಿಯಿತು. ಇನ್ನೊಂದು ಮದುವೆಯೇಕೆ? ಎಂದಿದ್ದಕ್ಕೆ ಅಮೀರ್ ಉತ್ತರಿಸಿದ್ದ,
’ನಿನಗಿನ್ನೂ ತಲಾಖ್ ಕೊಟ್ಟಿಲ್ಲ!’. ಇಸ್ಲಾಂ ಪ್ರಕಾರ ತಲಾಖ್ ಕೊಡದೇ ನಾಲ್ವರು
ಹೆಂಡಿರನ್ನು ಒಟ್ಟಿಗೇ ನಿಭಾಯಿಸಬಹುದು.ಐದನೆಯವಳು ಬೇಕಾದಾಗ ಮಾತ್ರ ನಾಲ್ಕರಲ್ಲಿ
ಒಬ್ಬರಿಗೆ ತಲಾಖ್! ಐದನೆಯವಳನ್ನು ರಖೇಲ್ ಆಗಿ ಬಳಸಿದರೆ ತಪ್ಪಿಲ್ಲ. ಇದೆಲ್ಲಾ
ಅವರಿಗೆ
ಶಾಸ್ತ್ರ ಸಮ್ಮತ . ಸ್ವತಃ ಪ್ರವಾದಿಗಳೇ ನಡೆದು ತೋರಿದ ಹಾದಿ. ಲಕ್ಷಿ
ಐತಿಹಾಸಿಕ ವಿಶ್ಲೇಷಣೆಗಳೊಂದಿಗೆ ಕಾದಂಬರಿ ಬರೆಯಲು ಕುಳಿತಳು. ಅಪ್ಪನ ಟಿಪ್ಪಣಿಗಳ
ಆಧಾರದ ಮೇಲೆ ಅವಳ ಬರವಣಿಗೆ ಶುರುವಾಯ್ತು.
ಅರೇಬಿಯಾಲ್ಲಿ
ಬನಿಕುರೈಝ ಎಂಬ ಯಹೂದಿ ಪಂಗಡ ಪ್ರವಾದಿ ಮಹಮ್ಮದ ರನ್ನು ಒಪ್ಪಿಕೊಳ್ಳಲು
ನಿರಾಕರಿಸಿದಾಗ, ಇಸ್ಲಾಂ ಧರ್ಮೀಯರು ಅವರ ಕೋಟೆಗೆ ಲಗ್ಗೆ ಹಾಕಿದರು. ಶರಣಾದ ಆ
ಯಹೂದಿಗಳು ಪ್ರವಾದಿಯಿಂದ ಕರುಣೆ ಬೇಡಿದರು. ಪ್ರವಾದಿಗಳ ಸೈನಿಕರು ಒಳಗಿದ್ದ
ಏಳುನೂರು ಜನ ಗಂಡಸರ ಕೈಗಳನ್ನು ಬೆನ್ನಿಗೆ ಕಟ್ಟಿಕೊಂಡು ಹೊರತಂದರು. ಒಂದು ಸಾವಿರದ
ಇನ್ನೂರು ಜನ ಹೆಂಗಸರು ಮಕ್ಕಳನ್ನು ಪ್ರತ್ಯೇಕವಾಗಿ ದನದ ಹಿಂಡಿನಂತೆ ಹೊರದಬ್ಬಿ
ತಂದರು. ಶಾಂತಿಯ ರೂಪ ಮಹಮ್ಮದರು ಯಾರೊಬ್ಬರನ್ನೂ ಕ್ಷಮಿಸಲಿಲ್ಲ. ಅವರಿಗೆ ಶಿಕ್ಷೆ
ವಿಧಿಸುವಂತೆ ಒಬ್ಬನನ್ನು ಕೇಳಿಕೊಂಡರು. ಆತ ’ಗಂಡಸರಿಗೆಲ್ಲ ಶಿರಚ್ಛೇದನ, ಅವರ
ಆಸ್ತಿ ಹಂಚಿಕೆಯಾಗಬೇಕು. ಹೆಂಗಸರು ಮಕ್ಕಳು ಗುಲಾಮರಾಗಬೇಕು’ ಎಂದು ಬಿಟ್ಟ.
ಪ್ರವಾದಿಗಳು ಅದನ್ನು ಸಮ್ಮತಿಸಿ ಈ ತೀರ್ಪು ಕೊಟ್ಟ ಸಾದನಿಗೆ ಸ್ವರ್ಗದಲ್ಲಿ
ಅತ್ಯುತ್ತಮ ಸ್ಥಾನ ದೊರಕಲೆಂದು ಪ್ರಾರ್ಥಿಸಿದರು. ಆನಂತರ ಗಂಡಸರ ಶಿರಚ್ಛೇದನ ವಾಯ್ತು.
ಹೆಂಗಸರು, ಮಕ್ಕಳನ್ನು ಸೈನಿಕರು ಹಂಚಿಕೊಂಡರು. ಅತ್ಯಂತ
ಸುಂದರಿಯಾದ
ಇಪ್ಪತ್ತೆರಡು ವರ್ಷದ ರಹೆನಾ ಎಂಬುವಳನ್ನು ಪ್ರವಾದಿಗಳು ಆಯ್ದುಕೊಂಡರು. ಅವಳನ್ನು
ಮದುವೆಯಾಗಲು ಪ್ರವಾದಿಗಳೇನೋ ಆಹ್ವಾನಿಸಿದರು. ಆದರೆ ತನ್ನ ಧರ್ಮ ತ್ಯಾಗ ಮಾಡಲು
ಅವಳು ಒಪ್ಪಲಿಲ್ಲ. ಆದ್ದರಿಂದ ಅವಳನ್ನು ಹಾಗೆಯೇ ಬೆಲೆವೆಣ್ಣಾಗಿ ಇಟ್ಟುಕೊಂಡರು
(ಪುಟ-೨೦೪).
ಇಡಿಯ
ಆವರಣದಲ್ಲಿ ಅನಾವರಣವಾಗದ ವ್ಯಕ್ತಿತ್ವ ಎಂದರೆ ಅಕ್ಬರ್, ಭೈರಪ್ಪನವರು ಮುಲ್ಲಾನ
ಕೈಲಿ ಅಕ್ಬರನನ್ನು ತೆಗಳುವ ಮೂಲಕ ಅವನು ಶ್ರೇಷ್ಠನಾಗಿದ್ದ ಎಂಬ ಕಲ್ಪನೆ
ಕಟ್ಟಿಕೊಡುವ ಪ್ರಯತ್ನ ಮಾಡಿಬಿಟ್ಟಿದ್ದಾರೆನಿಸುತ್ತದೆ. ತನ್ನ ಹದಿನಾಲ್ಕನೆಯ
ವಯಸ್ಸಿಗೆ ಕಾಫಿರನನ್ನು ಕೊಂದು ಶಸ್ತ್ರಾಭ್ಯಾಸಕ್ಕೆ ವೇಗ ಪಡೆದುಕೊಂಡವನು ಅವನು.
ಜೆಸಿಯಾ ತಲೆಗಂದಾಯ ಹೇರಿ ಹಿಂದೂಗಳನ್ನು ಹೊಸಕಿ ಹಾಕುವ ಪ್ರಯತ್ನ ಅವನದಿತ್ತು.
ಬಹುಶಃ ಈಗಿನ ಸೆಕ್ಯುಲರ್ ಬುದ್ಧಿ ಜೀವಿಗಳಿದ್ದಾರಲ್ಲ, ಅವರೆಲ್ಲರ ನಾಯಕನಾಗಿ
ಅವನನ್ನು ಕಾಣಬಹುದೇನೋ? ನವರತ್ನ ರಾಜಾರಾಂರ ಕೃತಿಗಳಲ್ಲಿ ಕಂಡು ಬರುವ ಅಕ್ಬರ್
ಆವರಣದಲ್ಲಿ ಮಾಯವಾಗಿರುವುದು ಅಚ್ಚರಿ.
ಎಲ್ಲ
ಸರಿ, ಇಂತಹುದೊಂದು ಕೃತಿ ಈಗ ಬೇಕಿತ್ತೇ? ತುಂಬಾ ಜನ ಪ್ರಶ್ನೆ ಕೇಳ್ತಾರೆ.
’ಈಗಲ್ಲದೇ ಮತ್ಯಾವಾಗ?’ ಎಂಬ ಪ್ರಶ್ನೆಯೇ ಅವರಿಗೆ ಉತ್ತರವಾಗಬಹುದು. ಇತಿಹಾಸವನ್ನು
ಕತ್ತಲಿಗೆ ದೂಡುವ ಪ್ರಯತ್ನವನ್ನು ನಾವು ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದೇವೆ.
ಸ್ವಾತ್ರಂತ್ರ ಬಂದ ಹೊಸತರಲ್ಲಿ ಹಿಂದೂ-ಮುಸಲ್ಮಾನರು ಒಟ್ಟೊಟ್ಟಾಗಿ ಇರುವುದರಿಂದ
ಅವರು ಹಿಂದೆ ಮಾಡಿದ ಕುಕೃತ್ಯಗಳ ಬಗ್ಗೆ ಮಾತನಾಡುವುದು ಬೇಡ ಎಂಬ ಅಘೋಷಿತ
ನಿಯಮವನ್ನು ನಮ್ಮ ಇತಿಹಾಸಕಾರರು ಆರೋಪಿಸಿಕೊಂಡು ಬಿಟ್ಟರು. ಬರು-ಬರುತ್ತಾ
ಅಪದ್ಧಗಳನ್ನು ಸಮರ್ಥಿಸಿಕೊಳ್ಳುವ, ಸತ್ಕರ್ಮಗಳನ್ನುಆರೋಪಿಸುವ ಕೆಲಸ ಜೋರಾಗಿ
ಸಾಗಿತು. ಟಿಪ್ಪೂ ಕೆಟ್ಟವನಲ್ಲ ಎಂದು ಸಾಬೀತು ಪಡಿಸಲಿಕ್ಕೆ ಆತನು ಜೀವನದಲ್ಲೇ
ಮಾಡದ ಒಳ್ಳೆಯ ಕೆಲಸಗಳನ್ನೆಲ್ಲ ಅವನಿಗೆ ಆರೋಪಿಸಿ ಹೀರೋ ಮಾಡಲಾಯ್ತು. ಜಹಾಂಗೀರ,
ಅಕ್ಬರ್ ಕೊನೆಗೆ ಔರಂಗಜೇಬನನ್ನೂ ಈ ಇತಿಹಾಸಕೋರರು ಬಿಡಲಿಲ್ಲ. ಇತಿಹಾಸ
ಮುಚ್ಚಿಡಬೇಕಾದ್ದಲ್ಲ, ಬಿಚ್ಚಿಡಬೇಕಾದ್ದು. ಹಿಟ್ಲರ್ ಮಾಡಿದ ಕೆಲಸ ಅತ್ಯಂತ ಹೇಯ
ಎಂಬುದು ಅರಿವಾಗಿಯೇ ಪಶ್ಚಾತ್ತಾಪದ ಬುದ್ಧಿ ಬಂದಿದ್ದು. ಅದನ್ನು ಬಿಟ್ಟು ಕೆಲವರಿಗೆ
ನೋವಾದೀತು ಎಂಬ ಕಾರಣಕ್ಕೆ ಅವನನ್ನು ಬಾಯ್ತುಂಬಾ ಹೊಗಳಿದರೆ ಅದು ಹೇಯವಲ್ಲವೇನು?
ನಮ್ಮ ಇತಿಹಾಸ ಈಗ ಬೆಳಕಿಗೆ ಬರಬೇಕಿದೆ. ಅಥವಾ ಕತ್ತಲ ಪುಟಗಳ ಮೇಲೆ ನಾವೇ ಬೆಳಕು
ಚೆಲ್ಲಬೇಕಿದೆ. ಭೈರಪ್ಪನವರು ಆವರಣದ ಮೂಲಕ ಮಾಡಿದ್ದು ಅದೇ ಕೆಲಸ. ಇಷ್ಟಕ್ಕೂ
ಔರಂಗಜೇಬನ ಸಾಚಾತನ ಹೇಳುವುದರಿಂದ ಯಾರ ಮನಸ್ಸಾದರೂ ಯಾಕೆ ನೋಯಬೇಕು ಹೇಳಿ? ಇಲ್ಲಿರು
ಯಾರಿಗೂ ಔರಂಗಜೇಬ ಪೂರ್ವಜನಲ್ಲ. ಬಾಬರ್ ಮೂಲ ಪುರುಷನಲ್ಲ. ಹಾಗೇನಾದರೂ ಅವರನ್ನೇ
ಪೂರ್ವಜರೆಂದು ಭಾವಿಸುವುದಾದರೆ ಅಂಥವರು ಭಾರತೀಯರೇ ಅಲ್ಲ. ಭಾರತೀಯರಲ್ಲದವರಿಗೆ
ನೋವಾಗುತ್ತದೆಂಬ ಮಾತ್ರಕ್ಕೆ ಇತಿಹಾಸವನ್ನು ಮುಚ್ಚಿಡುವುದು ಸರಿಯೂ ಅಲ್ಲ ಬಿಡಿ.
ಇಷ್ಟಕ್ಕೂ ’ಅಸ್ಪೃಶ್ಯತೆ ಪಾಪ, ನಮ್ಮ ಹಿಂದಿನ ಪೀಳಿಗೆಯವರು ಅಂತಹ ಹೀನ ಕಾರ್ಯ
ಮಾಡಿದ್ದರು. ಹಿಂದೂ ಸಮಾಜಕ್ಕೆ ಅಂಟಿದ ಅಭಿಶಾಪ ಅದು’ ಎಂಬುದನ್ನು ಒಪ್ಪಿ ಇಡೀ ಸಮಾಜ
ಇತಿಹಾಸದ ಆ ಮಗ್ಗಲುಗಳನ್ನು ಸ್ವೀಕರಿಸಿಲ್ಲವೇ? ಹೌದು. ಸ್ವೀಕಾರ ಬೇಕು.
ತೆರೆದೆದೆಯಿಂದ ಸ್ವೀಕರಿಸಬೇಕು. ಭೈರಪ್ಪನವರು ಅತ್ಯಂತ ಸೂಕ್ತ ಸಮಯದಲ್ಲಿಯೇ ಈ
ಕೃತಿ ಬರೆದು ಭಾರತೀಯ ಇತಿಹಾಸಕ್ಕೆ ಕೊಡುಗೆ ನೀಡಿದ್ದಾರೆ.ಇತಿಹಾಸವನ್ನು ಕಾದಂಬರಿಯ
ಶೈಲಿಯಲ್ಲಿ ಕಡೆದಿಟ್ಟು ಸಾಹಿತ್ಯ ಲೋಕಕ್ಕೂ ಸೇವೆಗೈದಿದ್ದಾರೆ.