Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Sunday, 30 October 2011

ನಾನು ಓದಿದ ಪುಸ್ತಕ - ರಾಷ್ಟ್ರಪತಿ ಜತೆ ಹದಿನಾಲ್ಕು ದಿನ



ರಾಷ್ಟ್ರಪತಿ ಜತೆ ಹದಿನಾಲ್ಕು ದಿನ

  "ಮಾನ್ಯ ರಾಷ್ಟ್ರಪತಿಗಳು ಹದಿನಾಲ್ಕು ದಿನಗಳ ಕಾಲ ರಷ್ಯಾ, ಯುಕ್ರೇನ್, ಸ್ವಿಜರ್‌ಲ್ಯಾಂಡ್ ಹಾಗೂ ಐಸ್‍ಲ್ಯಾಂಡ್‍ಗೆ ಪ್ರವಾಸ ಹೋಗಲಿದ್ದಾರೆ. ಅವರ ನಿಯೋಗದಲ್ಲಿ ನಿಮ್ಮನ್ನು ಪತ್ರಿಕಾ ಪ್ರತಿನಿಧಿಯಾಗಿ ಸೇರಿಸಲು ಸೂಚಿಸಲಾಗಿದೆ. ನಿಮ್ಮ ಒಪ್ಪಿಗೆ ತಿಳಿಸಿದರೆ, ಮುಂದುವರಿಯಲು ಅನುಕೂಲವಾಗುತ್ತದೆ." ಡಾ||ಎ.ಪಿ.ಜೆ.ಅಬ್ದುಲ್ ಕಲಾಂರವರ ಪತ್ರಿಕಾ ಕಾರ್ಯದರ್ಶಿ ಎಸ್.ಎಂ.ಖಾನ್‍ರ ಈ ಕೋರಿಕೆಯೊಂದಿಗೆ ಆರಂಭವಾಗುತ್ತದೆ "ರಾಷ್ಟ್ರಪತಿ ಜತೆ ಹದಿನಾಲ್ಕು ದಿನ" ಪುಸ್ತಕ.

ಇಂಥ ಕೋರಿಕೆಯೊಂದು ಬಂದರೆ ಯಾವ ಪತ್ರಕರ್ತ ತಾನೇ ಇಲ್ಲ ಎಂದಾನು, ಅದೂ ರಾಷ್ಟ್ರಪತಿ ಡಾ|| ಅಬ್ದುಲ್ ಕಲಾಂರೊಂದಿಗೆ ಪ್ರವಾಸ ಮಾಡುವ ಅವಕಾಶ ಸಿಕ್ಕಾಗ...

     ಒಟ್ಟು ೩೩ ಭಾಗಗಳನ್ನು ಒಳಗೊಂಡಿರುವ ಶ್ರೀಯುತ ವಿಶ್ವೇಶ್ವರ ಭಟ್‍ರ `ರಾಷ್ಟ್ರಪತಿ ಜತೆ ಹದಿನಾಲ್ಕು ದಿನ' ಪುಸ್ತಕ ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡುವ ಮನಸ್ಸೇ ಆಗುವುದಿಲ್ಲ. ಹಾಗೆ ಓದಿಸಿಕೊಂಡು ಹೋಗುತ್ತದೆ.

           ೨೦೦೫ರ ಮೇ ೨೨ರಂದು ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್-ಇಂಡಿಯಾ `ತಂಜಾವೂರು' ವಿಮಾನ ಆಗಸಕ್ಕೆ ನೆಗೆಯುವುದರ ಮೂಲಕ ರಾಷ್ಟ್ರಪತಿಗಳ ವಿದೇಶ ಪ್ರಯಾಣ ಆರಂಭವಾಗುತ್ತದೆ. ಜೊತೆಗೆ ವಿಶ್ವೇಶ್ವರ ಭಟ್‍ರದೂ ಕೂಡ.

       ಶಿಷ್ಟಾಚಾರವನ್ನು ಅಷ್ಟಾಗಿ ಸಹಿಸದ ಡಾ||ಅಬ್ದುಲ್ ಕಲಾಂರು ಪ್ರವಾಸದುದ್ದಕ್ಕೂ ಎಲ್ಲರೊಂದಿಗೆ ಮುಕ್ತವಾಗಿ ಆತ್ಮೀಯವಾಗಿ ಬೆರೆಯುತ್ತಾರೆ. ರಾಷ್ಟ್ರಪತಿಗಳ ಗೌರವಾರ್ಥ ಅತಿಥೇಯ ರಾಷ್ಟ್ರಗಳು ಏರ್ಪಡಿಸುವ ಔತಣಕೂಟದಲ್ಲಿ ಡಾ|| ಅಬ್ದುಲ್ ಕಲಾಂರು ಸಸ್ಯಾಹಾರ ಸೇವನೆ, ಶಾಂಪೇನ್ ಬದಲಾಗಿ ಜ್ಯೂಸ ಸೇವನೆ ಅವರ ಸರಳತೆಯನ್ನು, ಆದರ್ಶತೆಯನ್ನು ಎತ್ತಿ ತೋರಿಸುತ್ತವೆ.

           ವಿದೇಶ ಪ್ರಯಾಣದಲ್ಲಿ ಷಾಪಿಂಗ್ ಮಾಡದ, ಕುಟುಂಬ ವರ್ಗದವರನ್ನು ಕರೆದೊಯ್ಯದ ಏಕೈಕ ರಾಷ್ಟ್ರಪತಿ ಡಾ||ಅಬ್ದುಲ್ ಕಲಾಂ.

    ಸ್ವಿಜರ್‌ಲ್ಯಾಂಡ್ ಸರ್ಕಾರ ಡಾ.ಕಲಾಂ ಆಗಮನದ ಸಂಕೇತವಾಗಿ ಮೇ ೨೬ ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದು ಹಾಗೂ ಆ ಗೌರವವನ್ನು ಡಾ||ಕಲಾಂ ನಮ್ಮ ಇಡೀ ದೇಶಕ್ಕೆ, ವಿಜ್ಞಾನಿಗಳಿಗೆ ಅರ್ಪಿಸಿದ್ದು ಅವರ ದೊಡ್ಡತನ.
                     ಚೆಸ್ ಲೋಕದ ಮಹಾನ್ ಸಾಮ್ರಾಟ್ ಬಾಬಿ ಫಿಷರ್‌ನ ಈಗಿನ ದುರವ್ಯಸ್ಥೆ, ಮೂಲತಃ ಕೊಡಗಿನವರಾದ ಈಗ ಐಸಲ್ಯಾಂಡಿನಲ್ಲಿ ನೆಲೆಸಿರುವ ಶ್ರೀಮತೆ ಚಂದ್ರಿಕಾ ಗುನ್ನರಸನ್ ಅವರ ಹೊಟೇಲ್ ಸವಿಯಡುಗೆ ಸವಿದ ಕಲಾಂ ಮತ್ತು ಪರಿವಾರದ ಸಂತಸಮಯ ಕ್ಷಣಗಳು. ರಷ್ಯಾದ ಅತ್ಯಂತ ಸುಂದರ ಹಾಗೂ ಪುರಾತನ ನಗರಗಳಲ್ಲಿ ಒಂದಾದ ನೆವಾ ನದಿ ದಡದ ಮೇಲಿರುವ ಸೇಂಟ್ ಪೀಟರ್ಸ್‍ಬರ್ಗ ನಗರದ ಬಗೆಗಿನ ಮಾಹಿತಿ, ಹರ್ಮಿಟಾಜ್ ಮ್ಯೂಜಿಯಂ, ಆಲ್ಬರ್ಟ್ ಐನಸ್ಟೀನ ಕೆಲವು ವರ್ಷಗಳ ಕಾಲ ವಾಸಿಸಿದ ಮನೆಗೆ ಡಾ||ಕಲಾಂ ಭೇಟಿಯಿತ್ತು ತಮ್ಮನ್ನೇ ತಾವು ಮರೆತು ಭಾವಪರವಶರಾಗಿ ಕಾಲ ಕಳೆದಿದ್ದು, `ಧರೆಯ ಮೇಲಿನ ಸ್ವರ್ಗ' ಎಂದೇ ಖ್ಯಾತವಾಗಿರುವ ಐಸೆಲ್ತ್‍ವಾಲ್ಡ್ ಊರಿಗೆ ಸ್ವಿಸ್ ಅಧ್ಯಕ್ಷರ ಜೊತೆಗೆ ಭೇಟಿ ಇತ್ತ ಸಂದರ್ಭವನ್ನು ವಿಶ್ವೇಶ್ವರ ಭಟ್‍ರು ಬಹು ಸೊಗಸಾಗಿ ವಿವರಿಸಿದ್ದಾರೆ.

 ವಿಶೇಷ ಹಸ್ತಾಕ್ಷರ ಪ್ರಸಂಗ: (ಪುಸ್ತಕದಿಂದ ಆಯ್ದ ಭಾಗ)
  ಡಾ.ಕಲಾಂ ಹಾಗು ಶಿಡ್ಮ್ ಜತೆಯಾಗಿ ಐಸೆಲ್ಟ್‍ವಾಲ್ಡ್ ಬೀದಿಗಳಲ್ಲಿ ಸುಮಾರು ಎರಡು ಕಿ.ಮೀ.ನಡೆದಾಡಿದರು. ಇಲ್ಲಿಗೆ ವಿಹಾರಕ್ಕೆ ಬಂದ ಹೈದರಾಬಾದಿನ ದಂಪತಿಗಳು ಹಾಗೂ ಅವರ ಪುತ್ರಿಯನ್ನು ಕರೆದು ಮಾತನಾಡಿಸಿದ ಡಾ.ಕಲಾಂ, ಪುಟ್ಟ ಬಾಲಕಿಯ ವಿನಂತಿಯ ಮೇರ್‍ಎಗೆ ಹಸ್ತಾಕ್ಷರ ನೀಡಿದರು ಆದರೆ ಬರೆಯಲು ಆಧಾರಕ್ಕೆ ಏನೂ ಇಲ್ಲದೇ ಡಾ.ಕಲಾಂ ಪರದಾಡಿದಾಗ, ಪಕ್ಕದಲ್ಲಿಯೇ ಇದ್ದ ಸ್ವಿಸ್ ಅಧ್ಯಕ್ಷ ಶ್ಮಿಡ್ ರಾಷ್ಟ್ರಪತಿಗಳ ಮುಂದೆ ಬಗ್ಗಿ ನಿಂತು ತಮ್ಮ ಬೆನ್ನನ್ನೇ ಆಧಾರವಾಗಿ ಬಳಸುವಂತೆ ಹೇಳಿದರು. ಶ್ಮಿಡ್ ಬೆನ್ನ ಮೇಲೆ ಕಾಗದವಿಟ್ಟು ಡಾ.ಕಲಾಂ ಪುಟ್ಟ ಕವನ ಬರೆದು ಹಸ್ತಾಕ್ಷರ ನೀಡಿದ್ದು ವಿಶೇಷವಾಗಿತ್ತು.


          ರಾಷ್ಟ್ರಪತಿಗಳ ವಿದೇಶ ಪ್ರಯಾಣ ವಿಮಾನವಾದ `ತಂಜಾವೂರು' ವಿಮಾನದ ಸೌಕರ್ಯ, ಭದ್ರತೆ, ಶಿಷ್ಟಾಚಾರಗಳ ತುಂಬಾ ಭಟ್‍ರು ತುಂಬಾ ಚೆನ್ನಾಗಿ ಬರೆದಿದ್ದಾರೆ. ನಿಸ್ತೇಜ ಮಂತ್ರಿವರ್ಯರ ಸೋಮಾರಿತನ, ಅದರ ಜೊತೆಗೆ ಉತ್ಸಾಹಿ ಚಟುವಟಿಕೆಯ ಮಿಲಿಂದ್ ದಿಯೋರಾ (ಮುಂಬೈ ದಕ್ಷಿಣ ಲೋಕಸಭೆ ಕ್ಷೇತ್ರದ ಸದಸ್ಯ) ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಕಲಾಂ ಎಲ್ಲೇ ಹೋದರೂ ಅಲ್ಲಿನ ಸಂಸದರ, ವಿದ್ಯಾರ್ಥಿಗಳ, ವಿಜ್ಞಾನಿಗಳ ಜೊತೆಗೆ ನಡೆಸುವ ಸಂವಾದ, ಐತಿಹಾಸಿಕ ಒಪ್ಪಂದಗಳು, ಮುಂತಾದವುಗಳ ಬಗ್ಗೆ ಭಟ್‍ರು ಬೆಳಕು ಚೆಲ್ಲಿದ್ದಾರೆ.

          ರಾಷ್ಟ್ರಪತಿ ಭವನದ ಇತಿಹಾಸ, ಮಹತ್ವವನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ. ಉತ್ತರ ಧ್ರುವದ ಬಳಿ ಇರುವ ಐಸಲ್ಯಾಂಡ್ ದೇಶದ ವಿಶಿಷ್ಟತೆ, ಮಾಹಿತಿಯನ್ನು ಕೂಡ ಪುಸ್ತಕ ಒಳಗೊಂಡಿದೆ. ಭಾರತ ಮತ್ತು ಅಮೆರಿಕ ರಾಷ್ಟ್ರಾಧ್ಯಕ್ಷರ ವಿಮಾನಗಳ ಬಗ್ಗೆ ಮಾಹಿತಿ, ವಿದೇಶದಲ್ಲಿದ್ದು ಅಲ್ಲಿನ ಸುದ್ದಿಯನ್ನು ವರದಿ ಮಾಡುವ ಪತ್ರಕರ್ತರ ಸುಖ-ದುಃಖ, ಗೋಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಪುಸ್ತಕದಲ್ಲಿ ಮೂಡಿ ಬಂದಿರುವ ಚಿತ್ರಗಳು ಅಷ್ಟೇನು ಸ್ಪಷ್ಟವಾಗಿಲ್ಲವಾದರೂ ಗಮನಸೆಳೆಯುವಂತಿವೆ.

           ಒಟ್ಟಿನಲ್ಲಿ ಇದೊಂದು ಅಪರೂಪದಲ್ಲೇ ಅಪರೂಪದ ಪುಸ್ತಕ. ಒಮ್ಮೆ ಓದಿ ನೋಡಿ. ನಿಮ್ಮ ಅನಿಸಿಕೆ ತಿಳಿಸಿ, ಹಾಂ, ನನಗಲ್ಲ ವಿಶ್ವೇಶ್ವರ ಭಟ್‍ರಿಗೆ.... Vishweshwar Bhat E-mail I.D.  vbhat@vhat.in

No comments: