Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 23 June 2011

ಅನಿರೀಕ್ಷಿತ ಲಾಭ

                       ಸಕ್ಕರೆ ಕಾಯಿಲೆಯ ಬಗ್ಗೆ ಪ್ರಾಚೀನ ಹಿಂದೂ ಬರಹಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ಮೂತ್ರದಲ್ಲಿ ಸಕ್ಕರೆ ಹೋಗುವದರಿಂದ ಅದನ್ನು `ಮಧುಮೇಹನ' ಎಂದು ಕರೆದರು. (ಮೇಹನ = ಮೂತ್ರ). ನಂತರ ಅದನ್ನು `ಮಧುಮೇಹ' ಎಂದು ಗುರುತಿಸಲ್ಪಟ್ಟಿತು. ಕ್ರಿಸ್ತಪೂರ್ವ ೨೫೦ ರಲ್ಲಿ ಗ್ರೀಕರು ಈ ರೋಗವನ್ನು `ಡಯಾಬಿಟಿಸ್' ಎಂದು ಕರೆದರು. ಗ್ರೀಕ್ ಭಾಷೆಯಲ್ಲಿ ಡಯಾಬಿಟಿಸ್ ಎಂದರೆ `ಹೊರಗೆ ಎಳೆಯುವದು' ಎಂದರ್ಥ. ದೇಹದಿಂದ ಸಕ್ಕರೆಯನ್ನು ಹೊರಗೆಳೆಯುವದರಿಂದ ಈ ಹೆಸರು ಬಂದಿತು. ಮೂತ್ರದಲ್ಲಿ ಸಕ್ಕರೆಯ ಅಂಶವನ್ನು ಗುರುತಿಸಿ ವ್ಯಕ್ತಿಗೆ ಮಧುಮೇಹವಿದೆ ಎಂದು ಗುರುತಿಸಬಹುದಾಗಿದ್ದರೂ ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದವರೆಗೆ ಈ ರೋಗಕ್ಕೆ ಕಾರಣವೇನು ಎಂದು ತಿಳಿದಿರಲಿಲ್ಲ.

   ಆಗಿನ ವೈದ್ಯರು ಈ ರೋಗವನ್ನು ತಡೆಯಲು ವಿಧವಿಧವಾದ ಪಥ್ಯಗಳನ್ನು ಹೇಳುತ್ತಿದ್ದರು. ಕೆಲವರು ಉಪವಾಸ ಮಾಡಲು ಹೇಳಿದರೆ, ಇನ್ನು ಕೆಲವರು ಗಾಂಜಾ ಸೇವನೆ ಮೇಲು ಎಂದು ವಿಧಿಸಿದರು. ಕೆಲವರಂತೂ ದೇಹದಲ್ಲಿಯ ರಕ್ತವನ್ನು ಹೊರತೆಗೆದು ಸಕ್ಕರೆಯ ಅಂಶವನ್ನು ಕಡಿಮೆಮಾಡಲು ಪ್ರಯತ್ನಿಸಿದರು. ಒಂದು ತೀರ ಕುತೂಹಲಕಾರಿಯಾದ ಪ್ರಸಂಗದಿಂದ ಮಧುಮೇಹದ ಕಾರಣ ಪತ್ತೆಯಾಯಿತು.

                 ೧೮೮೯ರಲ್ಲಿ ಜರ್ಮನಿಯ ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಜೊಸೆಪ್ ವಾನ್ ಮೆರಿಂಗ್ ಮತ್ತು ಆಸ್ಕರ್ ವಿಂಕೋವಸ್ಕಿ ಎಂಬ ಇಬ್ಬರು ವಿಜ್ಞಾನಿಗಳು ಪ್ರಾಣಿಗಳ ದೇಹದಲ್ಲಿ ಪಚನಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಯಾವ ಯಾವ ಅಂಗಗಳ ಕಾರ್ಯ ಈ ಪ್ರಕ್ರಿಯೆಯಲ್ಲಿ ಏನು ಎಂಬುದನ್ನು ಪರೀಕ್ಷಿಸುತ್ತಿದ್ದರು. ಕೆಲವು ನಾಯಿಗಳನ್ನು ಹಿಡಿದು ಅವುಗಳ ಮೇಲೆ ಶಸ್ತ್ರಕ್ರಿಯೆ ಮಾಡಿ ಬೇರೆ ಬೇರೆ ಅಂಗಗಳನ್ನು ಕತ್ತರಿಸಿ ಅದರ ಪ್ರಭಾವವನ್ನು ಗಮನಿಸುತ್ತಿದ್ದರು. ಕೆಲವು ದಿನಗಳ ನಂತರ ಪ್ರಯೋಗಶಾಲೆಯಲ್ಲಿ ನೊಣಗಳ, ಇರುವೆಗಳ ಕಾಟ ಹೆಚ್ಚಾಯಿತು. ಒಂದೇ ಸಲ ಹೀಗೆ ಎಂದು ಹೀಗಾಗಿರಲಿಲ್ಲ. ಬಹುಶಃ ಕೆಲಸಗಾರರು ಪ್ರಯೋಗಶಾಲೆಯನ್ನು ಸರಿಯಾಗಿ ಸ್ವಚ್ಚಗೊಳಿಸುತ್ತಿದ್ದರೂ ಈ ಇರುವೆ ಮತ್ತು ನೊಣಗಳ ಹಾವಳಿ ಅವರಿಗೂ ಆಶ್ಚರ್ಯ ತಂದಿತ್ತು. ಆರು ಪ್ರತಿದಿನಕ್ಕಿಂತ ಹೆಚ್ಚು ಶುದ್ಧಗೊಳಿಸಲು ಪ್ರಯತ್ನಿಸಿದರು. ಆದರೆ ಈ ಕೀಟಗಳ ಸಮಸ್ಯೆ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ.
                    ಕೆಲಸಗಾರರು ಬೇಸತ್ತು ಪ್ರತಿಯೊಂದು ಪ್ರಯೋಗದ ನಾಯಿಯನ್ನು ಬೇರೆ ಬೇರೆ ಕಡೆಗೆ ಇಟ್ಟು ಗಮನಿಸಿದರು. ಆಗ ಸಿಕ್ಕಿತು ಅವರಿಗೆ ಕಾರಣ. ಒಂದು ಪಂಜರದಲ್ಲಿನ  ನಾಯಿಯ ಮೂತ್ರಕ್ಕೆ ಮುತ್ತಿಕೊಂಡು ಬರುತ್ತಿದ್ದವು ಕೀಟಗಳು. ಉಳಿದ ನಾಯಿಗಳ ಪಂಜರದಲ್ಲಿ ಈ ಸಮಸ್ಯೆ ಇರಲಿಲ್ಲ. ಕೆಲಸಗಾರರು ಈ ವಿಷಯವನ್ನು ವಿಜ್ಞಾನಿಗಳಿಗೆ ತಿಳಿಸಿದರು. ಅವರು ಈ ನಾಯಿಯ ದಾಖಲೆ ನೋಡಿದಾಗ ಅದರ ಪ್ಯಾನ್‍ಕ್ರಿಯಾಸ್ (ಮೇದೋಜೀರಕ ಗ್ರಂಥಿ) ತೆಗೆದು ಹಾಕಿದ್ದು ಗೊತ್ತಾಯಿತು. ಅದರ ಮೂತ್ರ ಪರೀಕ್ಷೆ ಮಾಡಿದಾಗ ವಿಪರೀತ ಪ್ರಮಾಣದ ಸಕ್ಕರೆ ಇದ್ದದ್ದು ಕಂಡುಬಂತು. ಆಗ ಡಾ||ಮೆರಿಂಗ್ ಹಾಗೂ ಡಾ||ಮಿಂಕೋವಸ್ಕಿಯವರಿಗೆ ಮೇದೋಜೀರಕ ಗ್ರಂಥಿಯ ಪ್ರಯೋಜನ ಅರ್ಥವಾಯಿತು. ಯಾವ ಮನುಷ್ಯನ ದೇಹದಲ್ಲಿ ಈ ಗ್ರಂಥಿ ಸರಿಯಾಗಿ ಕೆಲಸ ಮಾಡುವದಿಲ್ಲವೋ ಅಲ್ಲಿ ಸಕ್ಕರೆ ದೇಹದಲ್ಲಿ ಕರಗದೇ ಹಾಗೆಯೇ ಮೂತ್ರದಲ್ಲಿ ಹೋಗಿಬಿಡೂತ್ತದೆ. ಮುಂದೆ ಇದೇ ಪ್ರಯೋಗವನ್ನು ಮುಂದುವರೆಸಿ ಬ್ಯಾಂತಿಂಗ್ ಮತ್ತು ಮ್ಯಾಕ್‍ಲಿಯೋಡ್ ಎಂಬ ವಿಜ್ಞಾನಿಗಳು ಇನ್‍ಸುಲಿನ್‍ನನ್ನು ಕಂದು ಹಿಡಿದು ೧೯೨೩ರಲ್ಲಿ ನೊಬೆಲ್ ಪುರಸ್ಕಾರ ಪಡೆದರು.

       ಈ ಸಾಧನೆಗೆ ವಿಜ್ಞಾನಿಗಳ ಕೊಡುಗೆ ಎಷ್ಟು ಮುಖ್ಯವೋ, ಕೆಲಸಗಾರರ ಸೂಕ್ಷ್ಮ ನಿರೀಕ್ಷಣೆಯೂ ಅಷ್ಟೇ ಮುಖ್ಯವಾಗಿತ್ತು. ಮಹಾನ್ ಸಾಧನೆಯಲ್ಲಿ ಯಾರ ಕೊಡುಗೆಯನ್ನು ನಿರ್ಲಕ್ಷಿಸುವದು ಸಾಧ್ಯವಿಲ್ಲ. ಅತ್ಯಂತ ಅನಿರೀಕ್ಷಿತವಾದ ಮೂಲೆಯಿಂದ ಅಸಾಧಾರಣ ಫಲ ಬರುವದು ಅಪರೂಪವೇನಲ್ಲ.

ಕೃಪೆ: ಡಾ|| ಗುರುರಾಜ್ ಕರಜಗಿ ಅವರ `ಕರುಣಾಳು ಬಾ ಬೆಳಕೆ' ಗ್ರಂಥ

No comments: