Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday, 8 April 2016

ಸಾಮಾನ್ಯ ವಿಜ್ಞಾನ 1

May 2015
ಸಾಮಾನ್ಯ ವಿಜ್ಞಾನ

ಲೇಖನ: ಗುರುಪ್ರಸಾದ್ ಎಸ್ ಹತ್ತಿಗೌಡರ
         ಮೊ: ೯೯೪೫೪೭೯೨೯೨
         ಜ್ಞಾನಮುಖಿ

೧. ಬಾಹ್ಯಾಕಾಶ ನೌಕೆಯಲ್ಲಿ ಮೇಣದ ಬತ್ತಿಯ ಜ್ವಾಲೆಯು ವೃತ್ತಾಕಾರ ಪಡೆಯುವುದು ಏಕೆ?
       ಭೂಮಿಯ ಮೇಲೆ ಮೇಣದ ಬತ್ತಿಗೆ ಬೆಂಕಿ ಹೊತ್ತಿಸಿದಾಗ ಜ್ವಾಲೆಯು ಮೇಲೆರಿದಂತೆ ತೋರುತ್ತದೆ. ಇದಕ್ಕೆ ಕಾರಣ ಗುರುತ್ವಾಕರ್ಷಣ ಶಕ್ತಿ. ಆದರೆ, ಬಾಹ್ಯಾಕಾಶ ನೌಕೆಯಲ್ಲಿ ಗುರುತ್ವಾಕರ್ಷಣ ಶಕ್ತಿ ಇರುವುದಿಲ್ಲ. ಹಾಗಾಗಿ ಜ್ವಾಲೆ ಮೇಲೆರದೆ, ಸುತ್ತಲೂ ಹರಡಿದಂತೆ ಕಾಣುತ್ತದೆ. ಲಭ್ಯವಿರುವ ಆಮ್ಲಜನಕ ಬಳಸಿಕೊಂಡು ನಂತರ ಜ್ವಾಲೆ ನಂದುವುದು. ಇಲ್ಲಿ ಜ್ವಾಲೆ ಮೇಲೆರಲು ಗುರುತ್ವಾಕರ್ಷಣ ಶಕ್ತಿ ಹೇಗೆ ಕಾರಣ ಎಂಬ ಪ್ರಶ್ನೆಯು ಮೂಡುತ್ತದೆ. ಉತ್ತರ ಬಹಳ ಸರಳ. ಮೇಣದ ಬತ್ತಿ ಉರಿದಂತೆ ಬಿಸಿ ಅನಿಲವನ್ನು ತಂಪಾದ ಗಾಳಿ ಮೇಲಕ್ಕೆ ದಬ್ಬುವುದು. ಇದರಿಂದಾಗ ಉಬ್ಬಾದ ಗಾಳಿಯ ಪ್ರವಾಹ ಉಂಟಾಗಿ ಲಂಬವಾಗಿ ಎಳೆದಂತೆ ಜ್ವಾಲೆಯ ಆಕಾರ ಉಂಟಾಗುವುದು.


೨. ಮೇದೋಜೀರಕ ಗ್ರಂಥಿ ಎಂದರೇನು?
        ಹೊಟ್ಟೆಯ ಹಿಂಭಾಗ ಮತ್ತು ಬೆನ್ನುಮೂಳೆಯ ಮುಂಭಾಗದ ಭಾಗದಲ್ಲಿರುವ ಗ್ರಂಥಿ ಇದು. ಈ ಗ್ರಂಥಿ ಆಹಾರವನ್ನು ಜೀರ್ಣ ಮಾಡುವ ಮೇದೋಜೀರಕ ರಸವನ್ನು ಉತ್ಪತ್ತಿ ಮಾಡುತ್ತದೆ ಮತ್ತು ದೇಹದ ಸಕ್ಕರೆ ಅಂಶವನ್ನು ಹಿಡಿತದಲ್ಲಿಡುವ ಇನ್ಸುಲಿನ್‍ನ್ನು ಉತ್ಪತ್ತಿ ಮಾಡುತ್ತದೆ. ಮೇದೋಜೀರಕ ಗ್ರಂಥಿ ಊದಿಕೊಳ್ಳಬಹುದು. ಹೀಗಾದಾಗ ವ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ಕಾರಣವಾಗಬಹುದು. ಮಧುಮೇಹವು ಮೇದೋಜೀರಕ ಸಂಬಂಧಿ ಮತ್ತೊಂದು ಪ್ರಮುಖ ಕಾಯಿಲೆ. ಇದರಲ್ಲಿ ಟೈಪ್-೧ ಮತ್ತು ಟೈಪ್-೨ ಎಂಬ ಎರಡು ವಿಧಗಳಿವೆ. ಟೈಪ್-೧ರಲ್ಲಿ ಮೇದೋಜೀರಕ ಗ್ರಂಥಿ ಇನ್ಸುಲಿನ್‍ನ್ನು ಉತ್ಪಾದಿಸುವುದಿಲ್ಲ. ಟೈಪ್-೨ರಲ್ಲಿ ಇನ್ಸುಲಿನ್ ಉತ್ಪಾದನೆಯಾದರೂ ಅದರ ಸೂಕ್ತ ಬಳಕೆಯಾಗುವುದಿಲ್ಲ.


೩. ಬ್ರೆಡ್ ತಯಾರಿಕೆಯಲ್ಲಿ ಯೀಸ್ಟ್ (ಹುದುಗು) ಬಳಕೆ ಬೇಕೆ ಬೇಕು. ಏಕೆ?
        ಯೀಸ್ಟ್ ಎಂಬುದು ಕಣ್ಣಿಗೆ ಕಾಣದ ಫಂಗಸ್. ಬ್ರೆಡ್ ತಯಾರಿಸಲು ಯೀಸ್ಟ್ ಬಳಸದಿದ್ದರೆ ಬ್ರೆಡ್ ಊದಿಕೊಂಡು ಮೆತ್ತಗೆ ಇರುವುದಿಲ್ಲ. ಬದಲಿಗೆ ಚಪಾತಿಯಂತಾಗುವುದು. ಯೀಸ್ಟನ್ ಕೆಲಸವನ್ನು ಅರಿಯಲು ಹೀಗೊಂದು ಪ್ರಯೋಗ ಮಾಡಬಹುದು. ಮೂರು ಚಮಚದಷ್ಟು ಯೀಸ್ಟನ್ನು ಗಾಜಿನ ಬಾಟಲಿಗೆ ಹಾಕಿ. ನಂತರ ಎರಡು ಚಮಚದಷ್ಟು ಸಕ್ಕರೆ ಹಾಕಿ. ನಿಧಾನವಾಗಿ ಅರ್ಧ ಬಾಟಲಿಯಷ್ಟು ಬೆಚ್ಚನೆ ನೀರು ತುಂಬಿ ಬಲೂನಿನ ಬಾಯಿಯನ್ನು ಬಾಟಲಿಯ ತುದಿಗೆ ಭದ್ರಪಡಿಸಿ. ಇದಾದ ಒಂದು ಗಂತೆಯ ನಂತರ ನೀರಿನಲ್ಲಿ ಗುಳ್ಳೆಗಳು ಉಂಟಾಗಿ ಬಲೂನಿಗೆ ಗಾಳಿ ತುಂಬಿಕೊಳ್ಳುವುದು. ಯೀಸ್ಟ್ ಸಕ್ಕರೆಯನ್ನು ಭಕ್ಷಿಸುವುದರಿಂದ ಹೀಗಾಗುವುದು. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗುವುದು. ಈ ಅನಿಲ ನೀರಿನ ಮೂಲಕ ಹಾದು ಬಲೂನಿನೊಳಗೆ ಸೇರುವುದು. ಬ್ರೆಡ್ ತಯಾರಿಕೆಯಲ್ಲಿ ಯೀಸ್ಟ್ ಬಳಸಿದಾಗ ಹಿಟ್ಟಿನಲ್ಲಿರುವ ನೈಸರ್ಗಿಕ ಸಕ್ಕರೆಯನ್ನು ಯೀಸ್ಟ್ ಭಕ್ಷಿಸಿ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ ಮಾಡುವುದು. ಬ್ರೆಡ್ ಸುಡುವಾಗ ಈ ಅನಿಲ ಹೊರ ಹೋಗಲು ಬ್ರೆಡ್ ಊದಿಕೊಳ್ಳುವುದು.


೪) ನಿತ್ಯವೂ ತನ್ನ ಬಣ್ಣ ಬದಲಿಸುವ ಪರ್ವತ ಯಾವುದು? ಇದಕ್ಕೆ ಕಾರಣವೇನು?
    ಪ್ರತಿದಿನ ಬಣ್ಣ ಬದಲಿಸುವ ಪರ್ವತ ದಕ್ಷಿಣ ಆಸ್ಟ್ರೇಲಿಯಾದ ಆಯರ್ಸ್ ರಾಕ್. ಈ ಬೆಟ್ಟದ ಬಂಡೆಗಳ ರಚನೆಯೇ ಇದಕ್ಕೆ ಕಾರಣವಾಗಿದೆ. ಸೂರ್ಯ ಕಿರಣದ ಕೋನಕ್ಕೆ ಹಾಗೂ ಹವಾಮಾನಕ್ಕೆ ತಕ್ಕಂತೆ ಬಣ್ಣಗಳು ಬದಲಾಗುವ ರೀತಿಯಲ್ಲಿ ಇಲ್ಲಿ ಬಂಡೆಗಳಿವೆ. ಆಯರ್ಸ್ ರಾಕ್ ಮರಳುಗಲ್ಲಿನಿಂದ ರಚನೆಯಾಗಿದೆ. ನಮಗೆಲ್ಲ ಗೊತ್ತಿರುವಂತೆ ಸೂರ್ಯ ಹುಟ್ಟುವ ಮತ್ತು ಮುಳುಗುವ ಸಮಯದಲ್ಲಿ ಸೂರ್ಯನ ಕಿರಣಗಳಲ್ಲಿ ಕಿತ್ತಳೆ ಮತ್ತು ಕೆಂಪು ಬಣ್ಣಗಳೇ ಹೆಚ್ಚಾಗಿರುತ್ತವೆ. ಆಗ ಇತರ ಬಣ್ಣಗಳನ್ನು ವಾತಾವರಣದಲ್ಲಿನ ಧೂಳಿನ ಕಣಗಳು ಎಲ್ಲೆಡೆಗೆ ಹರಡಿರುತ್ತವೆ. ಮಧ್ಯಾಹ್ನದ ಹೊತ್ತಿಗೆ ಸೂರ್ಯನ ಕಿರಣಗಳಲ್ಲಿ ಇತರ ಬಣ್ಣಗಳೂ ಇರುತ್ತವೆ. ಆದ್ದರಿಂದ ಆ ವೇಳೆಯಲ್ಲಿ ಬೆಟ್ಟದ ಬಣ್ಣ ಬದಲಾಗುತ್ತದೆ.


೫) ನಕ್ಷತ್ರಗಳ ಬಣ್ಣ ಬೇರೆ ಬೇರೆ. ಏಕೆ?
        ಬರಿಗಣ್ಣಿನಿಂದ ನೋಡಿದಾಗ ಎಲ್ಲ ನಕ್ಷತ್ರಗಳು ಒಂದೇ ಬಣ್ಣದಲ್ಲಿ ಗೋಚರಿಸುತ್ತವೆ. ಅಸಲಿಗೆ ನಕ್ಷತ್ರಗಳು ಬೇರೆ ಬೇರೆ ಬಣ್ಣವನ್ನು ಹೊಂದಿವೆ. ಅವುಗಳ ಮೇಲ್ಮೈ ಉಷ್ಣತೆ ಹೀಗಾಗಲು ಕಾರಣ. ಅತಿ ತಣ್ಣಗಿರುವ ನಕ್ಷತ್ರಗಳ ಬಣ್ಣ ಕೆಂಪಾಗಿರುತ್ತದೆ. ಶಾಖ ಹೆಚ್ಚಾಗಿರುವ ತಾರೆಗಳು ತಾಪಮಾನಕ್ಕೆ ಅನುಗುಣವಾಗಿ ಹಳದಿ ಅಥವಾ ಬಿಳೀಯಾಗಿರುತ್ತವೆ. ಅತ್ಯಂತ ಹೆಚ್ಚು ಉಷ್ಣತೆ ಹೊಂದಿರುವ ನಕ್ಷತ್ರಗಳು ನೀಲಿ ಮಿಶ್ರಿತ ಬಿಳಿ ಬಣ್ಣದ್ದಾಗಿ ಗೋಚರಿಸುತ್ತವೆ.

        ನಮ್ಮ ಸೂರ್‍ಯ ಕೂಡ ಒಂದು ನಕ್ಷತ್ರ. ಅದರ ಮೇಲ್ಮೈ ಉಷ್ಣಾಂಶ ೫೦೦೦ ಡಿಗ್ರಿ ಸೆಲ್ಸಿಯಸ್. ಈ ಪ್ರಮಾಣದ ತಾಪಮಾನ ಹೊಂದಿವ ತಾರೆಗಳು ಹಳದಿ ಬಣ್ಣದ್ದಾಗಿ ಅಂದರೆ ನಮ್ಮ ಸೂರ್ಯನಂತೆ ಗೋಚರಿಸುತ್ತವೆ. ನಕ್ಷತ್ರಗಳ ಬಣ್ಣವು ಅವರ ಮೇಲ್ಮೈ ಉಷ್ಣಾಂಶವನ್ನು ನಿರ್ಧರಿಸುವಲ್ಲಿ ವಿಜ್ಞಾನಿಗಳೀಗೆ ನೆರವಾಗುತ್ತವೆ. ಸಿರಿಯಸ್‍ನಂತಹ ಉಜ್ವಲ ನಕ್ಷತ್ರವು ದಿಗಂತದಲ್ಲಿರುವಾಗ ಅನೇಕ ಬಣ್ಣಗಳಲ್ಲಿ ಗೋಚರಿಸುತ್ತದೆ. ವಾಸ್ತವವಾಗಿ ಸಿರಿಯಸ್‍ನ ಬಣ್ಣ ನೀಲಿ ಮಿಶ್ರಿತ ಬಿಳಿ.



೬) ಮೇಜಿನ ಮೇಲಿರುವ ಪುಸ್ತಕಗಳನ್ನು ಕಿರುಬೆರಳನಿಂದ ಎತ್ತಲು ಪ್ರಯತ್ನಿಸಿದರೆ ಹೆಚ್ಚಿನ ಬಲ ಪ್ರಯೋಗಿಸಬೇಕಾಗುತ್ತದೆ. ಆದರೆ, ಪೆನ್ಸಿಲ್‍ನ್ನು ಸನ್ನೆಗೋಲನ್ನಾಗಿ ಬಳಸಿ ಸುಲಭವಾಗಿ ಎತ್ತಬಹುದು. ಹೇಗೆ?
        ಸನ್ನೆಗೋಲಿನ ವಿಶೇಷತೆಯೇ ಅದು. ನಾಲ್ಕೈದು ಪುಸ್ತಕಗಳ ಕೆಳಗೆ ಪೆನ್ಸಿಲ್‍ನ್ನು ಮೀಟುವುದು. ನಮ್ಟರ ಮೀಟಿದ ಪೆನ್ಸಿಲಿನ ತುದಿಗೆ ಸಮೀಪದಲಿ ಮತ್ತೊಂದು ಪೆನ್ಸಿಲ್‍ನು ಅದರ ಕೆಳಗೆ ಇಟ್ಟು ಅದುಮಿದರೆ ಪುಸ್ತಕ ಸುಲಭವಾಗಿ ಮೇಲೆರುವುದು. ಕೆಳಗೆ ಬಳಸಿದ ಪೆನ್ಸಿಲ್ ಸನ್ನೆಕೇಂದ್ರವಾಗಿ ವರ್ತಿಸುವುದು. ಸನ್ನೆಗೋಲು ಸರಳಯಂತ್ರವಾಗಿದ್ದು ಅದರ ಮೇಲೆ ಹಾಕಿದ ಬಲವನು ದ್ವಿಗುಣಗೊಳಿಸುವುದ್. ಇದರಿಂದ ದೊಡ್ಡ ವಸ್ತುಗಳನ್ನು ಸುಲಭವಾಗಿ ಎತ್ತಬಹುದು ಹಾಗೂ ತಳ್ಳಬಹುದು. "ನನಗೆ ನಿಲ್ಲಲು ಸ್ವಲ್ಪ ಜಾಗ ಕೊಡಿ, ನಾ ಇಡೀ ಭೂಮಿಯನ್ನೇ ಎತ್ತುತ್ತೇನೆ." ಎಂದು ಆರ್ಕಿಮೀಡಿಸ್ ಹೇಳಿದ್ದು ಈ ತತ್ವದ ಆಧಾರದ ಮೇಲೆಯೇ.

೭) ಚಹಾ ಕುಡಿಕೆ (ಟೀ ಪಾಟ್)ಯಲ್ಲಿ ಸಣ್ಣ ರಂಧ್ರ ಮಾಡಿರುತ್ತಾರೆ. ಏಕೆ?
        ನೀರಿನಿಂದ ತುಂಬಿದ ಚಹಾ ಕುಡಿಕೆಯನ್ನು ಭದ್ರಪಡಿಸಿದಾಗ ಅದರೊಳಗಿನ ಹಬೆ ಕ್ರಮೇಣ ತಣ್ಣಗಾಗಿ ನಿರ್ವಾತ ಪ್ರದೇಶ ಸೃಷ್ಟಿಯಾಗುವುದು. ಕುಡಿಕೆಯಲ್ಲಿ ರಂಧ್ರವಿದ್ದರೆ ಹೊರಗಿನ ಗಾಳಿ ಕುಡಿಕೆಯೊಳಗೆ ನುಸುಳಿ ಒಳಗೆ ಮತ್ತು ಹೊರಗೆ ಏಕರೂಪದ ಒತ್ತಡ ನಿರ್ಮಾಣವಾಗುವುದು. ಒಂದು ವೇಳೆ ಕುಡಿಕೆಯೊಳಗೆ ನಿರ್ವಾತವೇ ಇದ್ದರೆ ವಾಯುಮಂಡಲದ ಒತ್ತಡ ಕುಡಿಕೆಯ ಮುಚ್ಚಳವನ್ನು ಅದುಮುವುದು. ಇದರಿಂದಾಗಿ ಚಹಾ ಕುಡಿಕೆ ತೆರೆಯಲು ಕಷ್ಟವಾಗುವುದು.


೮) ವಿಷಾಹಾರ ಸೇವಿಸಿದಾಗ ಕಂಡುಬರುವ ಮೊದಲ ಲಕ್ಷಣಗಳಾವುವು?
        ರೋಗಕಾರಕ ಸೂಕ್ಷ್ಮಜೀವಿಗಳಿಂದ ಕಲುಷಿತವಾಗಿರುವ ಆಹಾರವನ್ನು ವಿಷಾಹಾರ ಎನ್ನಲಾಗುತ್ತದೆ. ಇಂಥ ಆಹಾರ ಸೇವಿಸಿದಾಗ ಉಂಟಾಗುವ ಮೊದಲ ಲಕ್ಷಣ - ಅತಿಭೇದಿ, ವಾಂತಿ ಬಂದ ಹಾಗೆ ಅಥವಾ ಹೊಟ್ಟೆ ಕಚ್ಚಿದ ಹಾಗೆ ಆಗುತ್ತದೆ. ಈ ಲಕ್ಷಣಗಳು ಗಂಭೀರ ಸ್ವರೂಪದಲ್ಲಿದ್ದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಬಾಯಿ ಒಣಗುವುದು, ತುಂಬಾ ಸುಸ್ತಾಗುವುದು, ಕಾಲುಗಳ ಸ್ನಾಯುಸೆಳೆತ, ತಲೆ ಸುತ್ತುವುದು ಹಾಗೂ ಅಲ್ಪ ಪ್ರಮಾಣದ ಕಡುಬಣ್ಣದ ಮೂತ್ರವಿಸರ್ಜನೆ ಕಂಡು ಬರುತ್ತದೆ.

No comments: