Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 9 August 2012

ಭಗವದ್ಗೀತೆ




ಇಂದು ಗೋಕುಲಾಷ್ಟಮಿ. ಕಿಶೋರ ಭಾರತ ಎಂಬ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಭಗವದ್ಗೀತೆ ಎಂಬ ಅಧ್ಯಾಯ ಬರುತ್ತದೆ. ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ರಣರಂಗದಲ್ಲಿ ಬೋಧಿಸಿದ ತತ್ವಗಳೇ ಭಗವದ್ಗೀತೆ ಎಂಬ ಸ್ವರೂಪ ಪಡೆದು ಹಿಂದೂಗಳ ಪವಿತ್ರ ಗ್ರಂಥವಾಯಿತು.
                                           *******************
                  ಖಾಂಡವದಹನ ಕಾಲದಲ್ಲಿ ಅಗ್ನಿಯು ಅರ್ಜುನನಿಗೆ ಅನುಗ್ರಹಿಸಿದ ದಿವ್ಯ ರಥವನ್ನೇರಿ ಅರ್ಜುನನು ರಣರಂಗಕ್ಕೆ ಬಂದನು. ಪರಮವಂದ್ಯನಾದ ಶ್ರೀ ಕೃಷ್ಣನೇ ಆ ರಥದ ಸಾರಥಿ. ರಥದ ಕುದುರೆಗಳು ಬಿಳಿಯ ಬಣ್ಣದವು. ರಥಧ್ವಜವು ಅರುಣವರ್ಣವನ್ನು ಹೊಂದಿದ್ದಿತು. ಆ ಧ್ವಜದಲ್ಲಿ ಗದಾಧಾರಿಯಾಗಿದ್ದ ಆಂಜನೇಯನು ಉಪಸ್ಥಿತನಿದ್ದನು.

        ಎರಡೂ ಸೈನ್ಯಗಳೂ ಸಜ್ಜಾದ ನಂತರ ಯುದ್ಧ ಪ್ರಾರಂಭಕ್ಕೆ ಮುಂಚೆ ಭೀಷ್ಮನು ಗಟ್ಟಿಯಾಗಿ ಸಿಂಹನಾದ ಮಾಡಿ ಶಂಖವನ್ನೂದಿದನು. ಅದನ್ನು ಕೇಳಿದ ಕೂಡಲೇ ಕೌರವ ಸೇನೆಯಿಂದ ಸಾವಿರಾರು ಶಂಖಗಳೂ, ರಣಭೇರಿಗಳು, ಪಣವ, ಅನಕ, ಗೋಮುಖಗಳೆಂಬ ರಣವಾದ್ಯಗಳು ಮೊಳಗಿಸಲ್ಪಟ್ಟವು.
                                                     
              ಅನಂತರ ಪಾಂಡವ ಸೇನೆಯವರೂ ತಮ್ಮ ಶಂಖಗಳನ್ನು ಊದಿದರು. ಶ್ರೀ ಕೃಷ್ಣನು ಪಾಂಚಜನ್ಯವನ್ನೂ, ಅರ್ಜುನನು ದೇವದತ್ತವನ್ನೂ, ಯುಧಿಷ್ಠಿರನು ಅನಂತವಿಜಯವನ್ನೂ, ಭೀಮನು ಪ್ರೌಂಢ್ರವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಮಣಿಪುಷ್ಪಕವನ್ನೂ ಊದಿದರು. ಧೃಷ್ಟದ್ಯುಮ್ನನೂ, ಸಾತ್ಯಕಿಯೂ, ಚೇಕಿತಾನನೂ, ದ್ರುಪದನೂ, ವಿರಾಟನೂ, ಅಭಿಮನ್ಯುವೂ, ಉಪಪಾಂಡವರೂ ತಮ್ಮ ತಮ್ಮ ಶಂಖಗಳನ್ನು ಊದಿದರು. ಯುದ್ಧ ಮಾಡಲು ಸಿದ್ಧರಾಗಿ ನಿಂತಿರುವ ತನ್ನ ಶತ್ರುಪಕ್ಷದ ಪ್ರಮುಖರನ್ನೊಮ್ಮೆ ನೋಡಬಯಸಿ ಅರ್ಜುನನು ತನ್ನ ರಥವನ್ನು ಯುದ್ಧರಂಗದ ಮಧ್ಯದಲ್ಲಿ ನಿಲ್ಲಿಸುವಂತೆ ಶ್ರೀಕೃಷ್ಣನಿಗೆ ಹೇಳಿದನು. ಶ್ರೀ ಕೃಷ್ಣನು ರಥವನ್ನು ನಿಲ್ಲಿಸಿದನು.

        ಅರ್ಜುನನು ಸುತ್ತಲೂ ಕಣ್ಣು ಹಾಯಿಸಿದನು. ನೋಡುತ್ತಾನೆ! ಅಲ್ಲಿ ಕಾಣುವವರಾದರೂ ಯಾರು? ತನ್ನ ಅಣ್ಣ ತಮ್ಮಂದಿರಾದ ದುರ್ಯೋಧನ ದುಶ್ಯಾಸನಾದಿಗಳು; ತಾತನಾದ ಭೀಷ್ಮ, ಗುರುಗಳಾದ ಕೃಪ-ದ್ರೋಣರು, ಒಡನಾಡಿಯಾದ ಅಶ್ವತ್ಥಾಮಾ, ಮಾವನಾದ ಶಲ್ಯ! ಅಬ್ಬಬ್ಬ! ಇವರನ್ನು ಎದುರಿಸಬೇಕೆ! ಇವರನ್ನು ಕೊಂದು ಗಳಿಸಿದ ರಾಜ್ಯವನ್ನು ತಾವು ಆಳಬೇಕೆ! ಅಯ್ಯೋ! ಎಂತಹ ಅನ್ಯಾಯ ಮಾಡುತ್ತಿದ್ದೇವೆ! ಎಂದು ಸಂಕಟಪಟ್ಟನು. ಅನಂತರ ಶ್ರೀ ಕೃಷ್ಣನಿಗೆ ತನ್ನ ಮನದ ಅಳಲನ್ನು ತಿಳಿಸಿ, "ಶ್ರೀ ಕೃಷ್ಣ! ನಾನು ಯುದ್ಧ ಮಾಡುವುದಿಲ್ಲ" ಎಂದು ಹೇಳಿ, ಗಾಂಢೀವವನ್ನು ಕೆಳಗೆ ಹಾಕಿ ಸುಮ್ಮನೆ ಕುಳಿತುಬಿಟ್ಟನು.

               ಅರ್ಜುನನ ಮಾತು ಕೇಳಿ ಶ್ರೀಕೃಷ್ಣನಿಗೆ ನಗು ಬಂತು. "ಎಂತಹ ಪರಾಕ್ರಮಿಗಳೂ ಸಹ ಕೆಲವು ಸಮಯದಲ್ಲಿ ಎಷ್ಟು ವಿಚಿತ್ರವಾಗಿ ವರ್ತಿಸುತ್ತಾರಲ್ಲ! ಅರ್ಜುನನು ಹಿಂದೆ ವಿರಾಟನಗರದಲ್ಲಿ ಇದೇ ಕುರುಸೇನೆಯನ್ನು ಎದುರಿಸಲಿಲ್ಲವೇ? ಈಗೇಕೆ ಈ ವ್ಯಾಮೋಹ ಅವನನ್ನು ಆವರಿಸಿದೆ?" ಎಂದುಕೊಂಡ. ಅನಂತರ ಅರ್ಜುನನನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದ.

     "ಅರ್ಜುನ! ನಿನ್ನ ಮಾತನ್ನು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಉತ್ತಮರಿಗೆ ಅಪಕೀರ್ತಿಯನ್ನು ತರುವ ಇಂಥ ವ್ಯಾಮೋಹ ನಿನಗೇಕೆ ಹುಟ್ಟಿತು? ಧೀರನಾದವನಿಗೆ ಯುದ್ಧದಲ್ಲಿ ಹೋರಾಡುವುದೇ ಭೂಷಣ. ಗೆದ್ದರೆ ರಾಜ್ಯ ವೈಭವ ಪ್ರಾಪ್ತವಾಗುತ್ತದೆ; ಸೋತು ಮಡಿದರೆ ವೀರಸ್ವರ್ಗ ದೊರಕುತ್ತದೆ.

               ಈಗೊಂದು ವೇಳೆ ನೀನು ಯುದ್ಧದಿಂದ ವಿಮುಖನಾಗಿ ಕುರುಸೇನೆಯನ್ನು ಕೊಲ್ಲದೆ ಬಿಡುತ್ತೀಯೇ ಎಂದುಕೊಳ್ಳೋಣ. ಆಗ ಇವರೆಲ್ಲ ಶಾಶ್ವತವಾಗಿ ಜೀವಿಸಿರುತ್ತಾರೆಯೇ? ಅಥವಾ ನಿನ್ನ ಉದಾರತೆಯಿಂದಾಗಿ ನೀನಾದರೂ ಚಿರಂಜೀವಿಯಾಗಿರುತ್ತೀಯಾ? ಉಹೂಂ, ಖಂಡಿತ ಇಲ್ಲ. ಹುಟ್ಟಿದವನಿಗೆ ಸಾವು ತಪ್ಪದು. ಆದ್ದರಿಂದ ಸಾವಿಗಾಗಿ ಶೋಕಿಸುವುದು ಸರಿಯಲ್ಲ.

        ಅರ್ಜುನ! ಸಾವು ಬರುವುದು ನಮ್ಮ ಹೊರ ದೇಹವಾದ ಶರೀರಕ್ಕೆ ಮಾತ್ರ. ಆದರೆ ಶರೀರದೊಳಗಿನ ಆತ್ಮ ಸಾಯುವುದಿಲ್ಲ. ಅದು ಅಮರವಾದುದು. ನಾವು ಹಳೆಯ ಬಟ್ಟೆಯನ್ನು ಬಿಟ್ಟು ಹೊಸದನ್ನು ಉಟ್ಟುಕೊಳ್ಳುವಂತೆ, ಆತ್ಮವು ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಸೇರಿಕೊಳ್ಳುತ್ತದೆ. ಈ ಯುದ್ಧದಲ್ಲಿ ನಿನ್ನ ಬಾಣಗಳಿಂದ ಕೌರವರ ದೇಹಗಳು ಮಾತ್ರ ಅವಸಾನ ಹೊಂದುತ್ತವೆಯೇ ಹೊರತು ಅವರ ಆತ್ಮಗಳಲ್ಲ. ಅವರ ಆತ್ಮಗಳು ಇನ್ನಾವುದೋ ದೇಹವನ್ನು ಸೇರಿಕೊಂಡು ಅದಕ್ಕೆ ಚೇತನವಾಗುತ್ತವೆ. ಆದುದರಿಂದಲೇ ದುಃಖದಲ್ಲಿ ಉದ್ವಿಗ್ನರಾಗದ, ಸುಖದಲ್ಲಿ ಆಸಕ್ತಿಯಿಲ್ಲದ, ಕಾಮ-ಕ್ರೋಧ-ಲೋಭಗಳನ್ನು ಹೊಂದಿಲ್ಲದ ಸ್ಥಿತಪ್ರಜ್ಞರೆನಿಸಿಕೊಂಡವರು ಹುಟ್ಟು ಸಾವುಗಳಿಗಾಗಿ ಈಗ ಸಂತೋಷಿಸುವುದಾಗಲಿ, ಶೋಕಿಸುವುದಾಗಲೀ ಇಲ್ಲ. ಯುದ್ಧರಂಗದಲ್ಲಿ ನೀನು ಸಹ ಸ್ಥಿತಪ್ರಜ್ಞನಂತೆಯೇ ವರ್ತಿಸು.

             ಅರ್ಜುನ! ಕರ್ಮ - ಎಂದರೆ ಕೆಲಸ. ಅದು ಬಾಳಿಗೆ ಅಂಟಿಕೊಂಡಿರುವುದು. ಅದನ್ನು ಬಿಡುವಂತಿಲ್ಲ. ಉಸಿರಾಡುವುದು, ಆಹಾರ ಸೇವಿಸುವುದು, ಮಿತ್ರರೊಂದಿಗೆ ಬೆರೆಯುವುದು, ಇವೆಲ್ಲವೂ ಸಹಜವಾದ ಕ್ರಿಯೆಗಳಲ್ಲವೇ? ಇದೇ ರೀತಿಯಲ್ಲೇ ನಿನ್ನ ಕರ್ತವ್ಯವನ್ನೂ ನೀನು ಸಹಜವಾಗಿಯೇ ಮಾಡು. ದುಷ್ಟರ ದಮನವೇ ಕ್ಷತ್ರಿಯನಾದ ನಿನ್ನ ಕರ್ತವ್ಯ. ಅವರು ಹಿರಿಯರೆಂದೂ, ಬಂಧುಗಳೆಂದೂ ಹಿಂಜರಿದರೆ ನೀನು ಕರ್ತವ್ಯಚ್ಯುತನಾಗುತ್ತೀಯೆ. ಆದ್ದರಿಂದ ಯುದ್ಧ ಮಾಡುವುದೇ ನಿನ್ನ ಕರ್ತವ್ಯ. ಅದೇ ನೀನು ಮಾಡಬೇಕಾದ ಕರ್ಮ.

                      ಆದರೆ ಕರ್ಮ ಮಾಡುವವನು ಯಾವುದೇ ಫಲಾಪೇಕ್ಷೆ ಹೊಂದಿರಬಾರದು. ಹಾಗೆ ಫಲ ನಿರೀಕ್ಷೆ ಹೊಂದಿದ್ದರೆ ನೀನು ಮಾಡಿದ ಕರ್ಮ ದೋಷಪೂರಿತವಾಗುತ್ತದೆ. ಆದ್ದರಿಂದ ಫಲಾಪೇಕ್ಷೆ ಇಲ್ಲದೆ ನಿನ್ನ ಕರ್ಮಗಳನ್ನು ಆಚರಿಸು. ಕರ್ಮವನ್ನು ಮಾಡಲು ಮಾತ್ರ ನಿನಗೆ ಅಧಿಕಾರ. ಅದರ ಫಲವನ್ನು ಬೇಡಲು ನಿನಗೆ ಅಧಿಕಾರವಿಲ್ಲ. ಫಲದ ಆಸೆಯಿಂದ ಕರ್ಮ ಮಾಡಬೇಡ. ಅಥವಾ ಫಲ ದೊರೆಯುವುದಿಲ್ಲವೆಂದು ಕರ್ಮವನ್ನು ಬಿಡಲೂ ಬೇಡ.

              ಆತ್ಮಯೋಗಕ್ಕೂ ಕರ್ಮವೇ ಸಾಧನ. ಭಕ್ತಿ, ಜ್ಞಾನ, ಸಂನ್ಯಾಸ, ಇವೆಲ್ಲವೂ ಕರ್ಮದಲ್ಲೇ ಸೇರಿವೆ. ತಾನು ಮಾಡಿದ ಕರ್ಮದ ಫಲವನ್ನು ಚಿಂತಿಸದೇ ಸದಾ ಕರ್ಮನಿರತನಾಗಿರುವವನೇ ವಿರಾಗಿ ಅಥವಾ ಕರ್ಮಯೋಗಿ. ಈ ಯೋಗಿಯು ತಪಸ್ವಿಗಳಿಗಿಂತಲೂ, ವೇದಪಾರಂಗತರಿಗಿಂತಲೂ ಶ್ರೇಷ್ಠನಾದವನು.

               ಅರ್ಜುನ! ನೀನಾಗಲಿ, ನಾನಾಗಲಿ ಅಥವಾ ನಮ್ಮ ಸುತ್ತಲೂ ಇರುವ ಬಂಧುಮಿತ್ರರಾಗಲೀ, ಈ ಹಿಂದೆ ಇರಲಿಲ್ಲವೆಂದೆಲ್ಲ ಅಥವಾ ಮುಂದೆ ಮತ್ತೆ ಹುಟ್ಟುವುದಿಲ್ಲವೆಂದೂ ಅಲ್ಲ. ಆದರೆ ನಿನಗೆ ಹಿಂದಿನ ನೆನಪಿಲ್ಲ; ಅಷ್ಟೇ. ಹಾಗೆಯೇ ಮುಂದಿನ ಅರಿವೂ ಇಲ್ಲ. ಹುಟ್ಟಿದವನು ಸಾಯುವುದು ಖಂಡಿತ. ಅದೇ ರೀತಿ, ಸತ್ತವನು ಮತ್ತೆ ಹುಟ್ಟುವುದೂ ನಿಶ್ಚಿತ. ಆದ್ದರಿಂದ ಯಾರ ಸಾವಿಗೂ ದುಃಖಪಡಬೇಡ.

                     ಅರ್ಜುನ! ಈ ಯುದ್ಧದಲ್ಲಿ ನೀನು ಕೌರವಾದಿ ದುಷ್ಟರನ್ನು ನಿಗ್ರಹಿಸಬೇಕೆಂದು ನಾನು ಆಗ್ರಹಪಡಿಸುತ್ತಿದ್ದೇನೆ. ಏಕೆಂದರೆ ದುಷ್ಟರನ್ನು ಶಿಕ್ಷಿಸುವುದು ನನ್ನ ಕರ್ತವ್ಯವೇ ಆಗಿದೆ. ಕಂಸ, ಶಿಶುಪಾಲ, ದಂತವಕ್ರ ಮೊದಲಾದ ಅಧರ್ಮಿಗಳನ್ನು ಕೊಲ್ಲುವ ಸಲುವಾಗಿ ನಾನು ಈ ಜನ್ಮ ತಾಳಿದ್ದೇನೆ. ಅದೇ ರೀತಿ ಅನ್ಯಾಯದ ಹಾದಿ ಹಿಡಿದಿರುವ ಕೌರವಾಗಿಗಳನ್ನು ನಾಶಪಡಿಸುವುದೂ ನನ್ನ ಕರ್ತವ್ಯವಾಗಿದೆ. ಅದನ್ನು ನಾನು ನಿಮ್ಮ ಮೂಲಕ ಮಾಡಿಸುತ್ತಿದ್ದೇನೆ ಅಷ್ಟೇ. ಆದ್ದರಿಂದ ಅವರ ಸಾವಿಗೆ ನೀವಾರು ಕಾರಣರಲ್ಲ. ಅವರು ತಮ್ಮ ವಿನಾಶವನ್ನು ತಾವೇ ತಂದುಕೊಳ್ಳುತ್ತಿದ್ದಾರೆ. ನೀನು ಖಂಡಿತ ದುಃಖಿಸಬೇಡ. ಈ ಹಿಂದೆ ನಾನು ಅನೇಕ ಅವತಾರಗಳನ್ನು ಎತ್ತಿದ್ದೆ. ಮುಂದೆಯೂ ಸಹ ಬೇರೆ ಬೇರೆ ರೂಪಗಳನ್ನು ತಾಳುತ್ತೇನೆ. ಪ್ರಪಂಚದಲ್ಲಿ ಧರ್ಮವು ಕ್ಷೀಣವಾದಾಗಲೆಲ್ಲಾ ನಾನು ಅವತರಿಸಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪರಿಪಾಲಿಸಿ, ಧರ್ಮದ ಪ್ರತಿಷ್ಠಾಪನೆಯನ್ನು ಮಾಡುತ್ತೇನೆ.

         ಪಾರ್ಥ! ಧರ್ಮಸಂಸ್ಥಾಪನೆಗಾಗಿ ನಾನು ಜನ್ಮ ತಾಳಿದ್ದೇನೆಂದರೆ ನಿನಗೆ ಆಶ್ಚರ್ಯವಾಗುತ್ತಿದೆಯೇ? ನಾನು ಯಾರೆಂಬ ಕುತೂಹಲವುಂಟಾಗುತ್ತಿರಬಹುದಲ್ಲವೇ? ಅರ್ಜುನ! ಸ್ಥಿತಿಕರ್ತನಾದ ವಿಷ್ಣುವು ನಾನೇ. ಸೃಷ್ಟಿಕರ್ತ ಬ್ರಹ್ಮನೂ, ಲಯಕರ್ತನಾದ ಈಶ್ವರನೂ ನನ್ನ ಅಂಶಗಳೇ. ದ್ವಾದಶಾದಿತ್ಯರೂ ಏಕಾದಶ ರುದ್ರರೂ, ಅಷ್ಟವಸುಗಳೂ, ಯಕ್ಷ-ಗಂಧರ್ವ-ಕಿನ್ನರರೂ, ಮರುದ್ಗುಣಗಳೂ, ದೇವತೆಗಳೂ, ನಕ್ಷತ್ರಗಳೂ, ಚಂದ್ರ-ಸೂರ್ಯರೂ ನನ್ನಲ್ಲಿಯೇ ಇದ್ದಾರೆ. ದೇವತೆಗಳ ಗುರು ಬೃಹಸ್ಪತಿ, ಸೇನಾಪತಿ ಸ್ಕಂದ, ಭೃಗುಮಹರ್ಷಿ, ದೇವರ್ಷಿ ನಾರದ, ಪ್ರಣವವಾದ `ಓಂ'ಕಾರ - ಎಲ್ಲವೂ ನಾನೇ. ಸಮಸ್ತ ಪ್ರಾಣಿಗಳ ಅಂಶವೂ ನನ್ನಲ್ಲಿದೆ. ಪಾಂಡವ-ಕೌರವರಾದ ನಿಮ್ಮನ್ನೂ ಮೊದಲುಗೊಂಡಂತೆ ನನ್ನಲ್ಲಿಲ್ಲದ ಚರಾಚರ ವಸ್ತುಗಳೇ ಇಲ್ಲ." ಎಂದು ಹೇಳಿ ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ತೋರಿದನು.

          ಭೂಮಿ-ಆಕಾಶಗಳು ತಾಗುವಷ್ಟು ದೊಡ್ಡದಾಗಿ ಬೆಳೆದ ಶ್ರೀಕೃಷ್ಣನ ಶರೀರದಲ್ಲಿ ಸೂರ್ಯ-ಚಂದ್ರರಾದಿಯಾಗಿ ಸಮಸ್ತ ದೇವತೆಗಳೂ, ರಾಕ್ಷಸರೂ, ಮನುಷ್ಯರೂ, ಪ್ರಾಣಿಗಳೂ, ಲೋಕಗಳೂ, ನಕ್ಷತ್ರಗಳೂ, ಪರ್ವತ-ಸಮುದ್ರ-ನದಿಗಳೂ ಅಡಗಿರುವುದನ್ನು ಅರ್ಜುನನು ಕಂಡನು.

          ಅನಂತರ ಶ್ರೀಕೃಷ್ಣನು "ಅರ್ಜುನ! ಮೋಹವನ್ನು ಬಿಡು; ಯುದ್ಧ ಮಾಡು. ನಿನ್ನ ಕರ್ತವ್ಯವನ್ನು ನೆರವೇರಿಸಿ ಸತ್ಕೀರ್ತಿಯನ್ನು ಪಡೆ, ಏಳು" - ಎಂದನು.

           ಶ್ರೀಕೃಷ್ಣನು ಮಾಡಿದ ಉಪದೇಶದಿಂದಲೂ, ಅವನು ತೋರಿಸಿದ ವಿಶ್ವರೂಪದಿಂದಲೂ ಅರ್ಜುನನು ರೋಮಾಂಚನಗೊಂಡನು. ಅವನು ಶ್ರೀಕೃಷ್ಣನಿಗೆ ನಮಸ್ಕರಿಸಿ "ಸ್ವಾಮಿ! ನನ್ನನ್ನು ಆವರಿಸಿದ್ದ ಮೋಹವು ದೂರವಾಯಿತು. ನೀನು ಹೇಳಿದಂತೆಯೇ ಯುದ್ಧ ಮಾಡುತ್ತೇನೆ" ಎಂದು ಹೇಳಿ ಯುದ್ಧ ಸನ್ನದ್ಧನಾದನು.

         ಹೀಗೆ ಭಗವಂತನಾದ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ಧ ಭೂಮಿಯಲ್ಲಿ ನೀಡಿದ ಉಪದೇಶಾಮೃತವೇ ಭಗವದ್ಗೀತೆ.

No comments: