ಒಂದೇ ದಿನದಲ್ಲಿ ವಿಭಿನ್ನ ಮುಖಗಳ ಅನಾವರಣ...
ಮೊನ್ನೆಯಷ್ಟೇ ಎರಡು ಘಟನೆಗಳು ನಡೆದವು. ವಿಜಯಪುರದಿಂದ ನನ್ನ ಪರಿಚಯಸ್ಥರೊಬ್ಬರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿಗೆ ಬಂದಿದ್ದರು. ವಿಜಯಪುರದ ವೈದ್ಯರೊಬ್ಬರ ಸಲಹೆಯ ಮೇರೆಗೆ ಅವರ ಮಗನಿಗೆ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ನಿಮ್ಹಾನ್ಸ್‍ಗೆ ಹೋಗಬೇಕಾಗಿತ್ತು. ಅವರು ಬೆಂಗಳೂರಿಗೆ ಹೊಸಬರು; ಆದ್ದರಿಂದ ಅವರ ಸಹಾಯ, ಮಾರ್ಗದರ್ಶನಕ್ಕೆಂದು ನಾನು ಅವರೊಂದಿಗೆ ತೆರಳಿದ್ದೆ. ಮೆಜೆಸ್ಟಿಕ್‍ನಿಂದ ಬಿ.ಎಂ.ಟಿ.ಸಿ. ಬಸ್‍ನಲ್ಲಿ ನಿಮ್ಹಾನ್ಸ್‍ಗೆ ಹೋಗುತ್ತಿದ್ದೆವು. ನಮಗೆ ಕುಳಿತುಕೊಳ್ಳಲು ಆಸನ (ಸೀಟ್) ಸಿಗದೇ ಇದ್ದರೂ ಇದ್ದ ಒಂದು ಆಸನದಲ್ಲಿ ನಮ್ಮೊಂದಿಗಿದ್ದ ಅವರ ಮಗನಿಗೆ ಕುಳ್ಳಿರಿಸಿದೆವು. ವಾಸ್ತವವಾಗಿ ಆ ಆಸನ ಪುರುಷ ಹಿರಿಯ ನಾಗರಿಕರಿಗೆ ಮೀಸಲಿತ್ತು. ಕೆಲ ಸಮಯದಲ್ಲಿ ಓರ್ವ ಧಡೂತಿ ಕಾಯದ ಹಿರಿಯ ವ್ಯಕ್ತಿಯೊಬ್ಬರು ಬಂದು ತಾನು ಸೀನಿಯರ್ ಸಿಟಿಜೆನ್ ಎಂದು ಹೇಳಿಕೊಂಡು ನಮ್ಮ ಹುಡುಗನನ್ನು ಎಬ್ಬಿಸಿ ತಾವು ಕುಳಿತರು. ಹುಡುಗ ಪೇಷೆಂಟ್ ಆಗಿದ್ದು ನಿಲ್ಲಲು ಆತನಿಗೆ ತ್ರಾಣವಿಲ್ಲ; ದಯವಿಟ್ಟು ಅವನನ್ನು ಎಬ್ಬಿಸಬೇಡಿ ಎಂದು ವಿನಂತಿಸಿದೆವು. ವೈದ್ಯಕೀಯ ಸರ್ಟಿಫಿಕೇಟ್‍ಗಳನ್ನು ತೋರಿಸಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಲು ಯತ್ನಿಸಿದೆವು. ಊಂಹೂ.. ಆ ಹಿರಿಯ ವ್ಯಕ್ತಿಯ ಮನಸ್ಸು ಕರಗಲಿಲ್ಲ ಬದಲಾಗಿ ತಮ್ಮದೇ ಧಾಟಿಯಲ್ಲಿ ಸಿದ್ಧಾಂತ ಮಂಡಿಸಲು ಶುರು ಮಾಡಿದರು. ಸರ್ಕಾರದಿಂದ ಕೊಟ್ಟಿರುವ ಸೌಲಭ್ಯ ನಾನೇಕೆ ಬಿಡಲಿ ಎಂಬುದು ಅವರ ನಿಲುವಾಗಿತ್ತು. ನಮ್ಮ ಸುತ್ತಲಿನ ಸಹಪ್ರಯಾಣಿಕರು ಆ ಹಿರಿಯ ವ್ಯಕ್ತಿಗೆ ಆಕ್ಷೇಪಿಸಿದರೂ ಕೂಡ ಅವರು ತಮ್ಮ ಧೋರಣೆ ಬದಲಿಸಲಿಲ್ಲ. ಮಾನವೀಯತೆಗಿಂತ ನಿಯಮ ಪಾಲನೆಯೇ ಹೆಚ್ಚಾಯಿತೇ..? ಎಂದುಕೊಂಡು ಸುಮ್ಮನಾದೆವು. ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಿಮ್ಹಾನ್‍ಗೆ ಇಳಿದುಕೊಂಡೆವು.
ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆ ಪಡೆದುಕೊಂಡು ಮರಳಿ ಮೆಜೆಸ್ಟಿಕ್ ಹೋಗುವಾಗ ಈ ಬಸ್‍ನ ಗೊಡವೆ ಬೇಡ ಎಂದು ಅಟೋದಲ್ಲಿ ಹೋಗಬೇಕೆಂದು ನಿರ್ಧರಿಸಿ ಅಟೋರಿಕ್ಷಾವೊಂದನ್ನು ನಿಲ್ಲಿಸಿದ್ದಾಯಿತು. ಅಟೋ ಚಾಲಕ ನಿಮ್ಹಾನ್ಸ್‍ನಿಂದ ಮೆಜೆಸ್ಟಿಕ್‍ಗೆ ಹೋಗಲು 130ರೂ. ಕೇಳಿದ. ತಕ್ಷಣ ನನ್ನ ಚೌಕಾಶಿ ಬುದ್ಧಿ ಎಚ್ಚರವಾಯಿತು. ಹಾಗೂ ಹೀಗೂ ಚೌಕಾಶಿ ಮಾಡಿ 120ರೂ.ಗೆ ಒಪ್ಪಿಸಿ ಅಟೋ ಹತ್ತಿದ್ದಾಯಿತು. ದಾರಿಯುದ್ದಕ್ಕೂ ನಮ್ಮೊಂದಿಗೆ ಮಾತಿಗಿಳಿದ ಅಟೋಚಾಲಕ ನಮ್ಮ ಬಗ್ಗೆ ತಿಳಿದುಕೊಂಡ. ಕೊನೆಗೆ ಮೆಜೆಸ್ಟಿಕ್ ಬಂದಾಗ ನಾವು 120 ರೂ.ಕೊಡಲು ಮುಂದಾದೆವು. ಆತ ದುಡ್ಡನ್ನು ತೆಗೆದುಕೊಳ್ಳಲು ನಯವಾಗಿಯೇ ನಿರಾಕರಿಸಿ ಹೇಳಿದ, "ಸರ್ ನೀವು ಬಡವರು ದೂರದ ಊರಿನಿಂದ ಬಂದಿದ್ದೀರಿ, ಮೇಲಾಗಿ ಆಸ್ಪತ್ರೆ ಖರ್ಚಿಗೆ ಎಷ್ಟು ದುಡ್ಡಿದ್ದರೂ ಸಾಲುವುದಿಲ್ಲ, ನಿಮ್ಮಂಥವರಿಂದ ದುಡ್ಡು ತೆಗೆದುಕೊಳ್ಳುವುದು ಸರಿಯಲ್ಲ. ತಗೊಳ್ಳಿ, ನನ್ನ ಪರವಾಗಿ 100 ರೂ. ಇಟ್ಟುಕೊಳ್ಳಿ" ಎಂದು ಒತ್ತಾಯ ಮಾಡಿ ಕೊಟ್ಟು ಹೋದ. ದಿನಗೂಲಿ ಲೆಕ್ಕದಲ್ಲಿ ದುಡಿಯುವ ಅಟೋ ಚಾಲಕನ ಹೃದಯವೈಶಾಲ್ಯತೆ ಕಂಡು ನಾವು ಮೂಕವಿಸ್ಮಿತರಾದೆವು. ಮಾನವೀಯತೆಯ ಗುಣ ಆತನಲ್ಲಿ ರಾರಾಜಿಸುತ್ತಿತ್ತು.
ಒಂದೆಡೆ ಪರಿಪರಿಯಾಗಿ ಬೇಡಿಕೊಂಡರೂ ಕಿಂಚಿತ್ ಮಾನವೀಯತೆ ಪ್ರದರ್ಶಿಸದ ಆ ಹಿರಿಯ ನಾಗರಿಕನೆಲ್ಲಿ..? ಬೇಡವೆಂದರೂ ದುಡ್ಡು ಕೊಟ್ಟು ಚೆನ್ನಾಗಿರಿ ಎಂದು ಹಾರೈಸಿದ ಈ ಅಟೋ ಚಾಲಕನೆಲ್ಲಿ..? ಬೆಂಗಳೂರೆಂಬ ಈ ಮಹಾನಗರದಲ್ಲಿ ಮಾನವೀಯತೆಯ ಪರಸ್ಪರ ವೈರುಧ್ಯ ಮುಖಗಳು ನಮ್ಮನ್ನು ಚಕಿತಗೊಳಿಸಿದವು.